ರಾಜಕಾರಣದ ಅಚ್ಚರಿಯ ತಿರುವುಗಳಿಗೆ ಕಾರಣವಾದ ನ್ಯಾನೊ ಪಯಣ

ಕಳೆದ ಹತ್ತು ವರ್ಷದ ರಾಜಕೀಯ ಇತಿಹಾಸ ಗಮನಿಸಿದಾಗ ‘ನ್ಯಾನೊ’ ಕೆಲವು ಅಚ್ಚರಿಯ ತಿರುವುಗಳಿಗೆ ಕಾರಣವಾಗಿದ್ದು ಕುತೂಹಲ ಹುಟ್ಟಿಸುತ್ತದೆ. ಎಡಪಕ್ಷಗಳನ್ನು ಬದಿಗೆ ಸರಿಸಲು ಕಾರಣವಾದ ನ್ಯಾನೊ, ದೀದಿ ಹಾಗೂ ಮೋದಿಯವರ ರಾಜಕೀಯ ಜೀವನದಲ್ಲಿ ಅಚ್ಚರಿಯ ತಿರುವುಗಳನ್ನು ನೀಡಿತು

ಟಾಟಾ ನ್ಯಾನೊ ಕಾರು ಇತಿಹಾಸದ ಪುಟ ಸೇರಲು ದಿನಗಣನೆ ಮಾಡುತ್ತಿರುವ ಈ ಹೊತ್ತಿನಲ್ಲಿ ಅದಕ್ಕೊಂದು ಆತ್ಮೀಯ ವಿದಾಯ ಹೇಳಬೇಕಾದವರು ಮೂವರು. ಒಬ್ಬರು ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್‌ ಟಾಟಾ, ಮತ್ತೊಬ್ಬರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಗದೊಬ್ಬರು ಪ್ರಧಾನಿ ನರೇಂದ್ರ ಮೋದಿ. ರತನ್‌ ಟಾಟಾ ಅವರ ಪಾಲಿಗೆ ನ್ಯಾನೋದೊಂದಿಗಿನ ಅವರ ಪಯಣ ನೋವಿನಿಂದ ಕೂಡಿರುವಂತಹದ್ದಾದರೂ, ಅದು ಭಾರತದ ಸಾಮಾನ್ಯ ಜನತೆಯ ಮನಸ್ಸಿನಲ್ಲಿ ಅವರಿಗೊಂದು ವಿಶೇಷ ಸ್ಥಾನ ಕಲ್ಪಿಸಿಕೊಟ್ಟಿದ್ದು ನಿಜ. ನ್ಯಾನೊಗೂ ಮುನ್ನ ಟಾಟಾ ಸಂಸ್ಥೆಯಿಂದ ಎಷ್ಟೆಲ್ಲ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದರೂ, ನ್ಯಾನೊ ಸೃಷ್ಟಿಸಿದ ಸಂಚಲನ ಹಾಗೂ ರತನ್‌ ಟಾಟಾ ಅವರನ್ನು ಅದು ಭಾರತೀಯರಿಗೆ ಮರುಪರಿಚಯಿಸಿದ ರೀತಿಯನ್ನು ಟಾಟಾ ಸಮೂಹ ಯಾವತ್ತೂ ಮರೆಯುವಂತಿಲ್ಲ.

ನ್ಯಾನೊ ವಿಚಾರದಲ್ಲಿ ಗಮನಿಸಬೇಕಾದ ಅಂಶವೆಂದರೆ, ಅದು ವಾಹನವೊಂದರ ‘ಸೀಮಿತ ಉದ್ದೇಶ’ಗಳಾಚೆಗೆ ಸಾಗಿ ಈ ದೇಶದ ವರ್ಣರಂಜಿತ ರಾಜಕೀಯದ ಭಾಗವಾಗಿದ್ದು! ನ್ಯಾನೊ, ರತನ್‌ ಟಾಟಾ ಅವರ ಪಾಲಿಗೆ ಕೈಸುಟ್ಟ ದುಬಾರಿ ಕನಸಾದರೆ, ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನಕ್ಕೆ ಒದಗಿಬಂದ ಸಂಜೀವಿನಿ, ಮೋದಿಯವರ ರಾಜಕೀಯ ಮಹತ್ವಾಕಾಂಕ್ಷೆಗೆ ದಕ್ಕಿದ ಮೆರುಗು.

ಪಶ್ಚಿಮ ಬಂಗಾಳದಲ್ಲಿ ಸುಮಾರು ಮೂರೂವರೆ ದಶಕದ ಎಡಪಕ್ಷದ ಆಡಳಿತವನ್ನು ಕೊನೆಗಾಣಿಸಿ ೨೦೧೧ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರು ಅಧಿಕಾರ ಹಿಡಿಯುವಲ್ಲಿ ನ್ಯಾನೊದ ಪಾಲೂ ಇದೆ! ಪಶ್ಚಿಮ ಬಂಗಾಳದ ೨೯೪ ವಿಧಾನಸಭಾ ಕ್ಷೇತ್ರಗಳ ಪೈಕಿ ೨೦೦೬ರಲ್ಲಿ ಕೇವಲ ೩೦ ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ತೃಣಮೂಲ ಕಾಂಗ್ರೆಸ್‌, ೨೦೧೧ರ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ೧೮೭ಕ್ಕೆ ಏರಿಸಿಕೊಂಡು ಅಧಿಕಾರ ಹಿಡಿಯಿತು. ಇದಕ್ಕೆ ಕಾರಣವಾಗಿದ್ದು, ರೈತರ ಫಲವತ್ತಾದ ಜಮೀನನ್ನು ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ನೀಡಲು ಮುಂದಾದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ಬೃಹತ್‌ ಪ್ರತಿಭಟನೆಗಳು.

ಪಶ್ಚಿಮ ಬಂಗಾಳದ ನಂದಿಗ್ರಾಮ ಹಾಗೂ ಸಿಂಗೂರು ಬಳಿ ಅಂದಿನ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ಎಡರಂಗದ ಸರ್ಕಾರ ಎಸ್‌ಇಝಡ್‌ಗಳ ನಿರ್ಮಾಣಕ್ಕೆ ಮುಂದಾಗಿತ್ತು. ಅಭಿವೃದ್ದಿ ವಿರೋಧಿ ಹಣೆಪಟ್ಟಿ ಹೊತ್ತಿಕೊಂಡಿದ್ದ ಪಶ್ಚಿಮ ಬಂಗಾಳದ ಎಡರಂಗದ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳವನ್ನು, ಕೈಗಾರಿಕೆಗಳನ್ನು ಆಕರ್ಷಿಸುವ ಅಗತ್ಯವಿತ್ತು. ಇದೇ ವೇಳೆ, ದೇಶದ ಆಟೊಮೊಬೈಲ್‌ ಕ್ಷೇತ್ರದಲ್ಲಿ ರತನ್ ಟಾಟಾ ಅವರು ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ಕಾರನ್ನು ತಯಾರಿಸುವ ಕನಸನ್ನು ಹೊತ್ತಿದ್ದರು. ಜನಸಾಮಾನ್ಯರಿಗೆ ಕೈಗೆಟುಕಲಿರುವ ಈ ಕಾರನ್ನು ತನ್ನದೇ ನೆಲದಲ್ಲಿ ಸ್ಥಾಪಿಸಲು ಅನುವು ಮಾಡಿಕೊಡುವ ಮೂಲಕ ಜನಪರ ಕೈಗಾರಿಕೆಗಳ ಶ್ರೇಯವನ್ನು ತನ್ನದಾಗಿಸಿಕೊಳ್ಳುವ ಹಾಗೂ ದೇಶವಿದೇಶಗಳ ಗಮನ ಸೆಳೆದಿದ್ದ ಈ ಯೋಜನೆಗೆ ತಾಣ ನೀಡುವ ಮೂಲಕ ಬಂಡವಾಳ ಆಕರ್ಷಣೆಯ ಪ್ರಚಾರಕ್ಕೆ ಇದನ್ನು ಬಳಸಿಕೊಳ್ಳುವ ಉದ್ದೇಶ ಎಡರಂಗದ ಸರ್ಕಾರದ್ದಾಗಿತ್ತು.

ಆದರೆ, ಬ್ರಿಟಿಷರ ಕಾಲದ ಭೂಸ್ವಾಧೀನ ಕಾನೂನುಗಳ ಮೂಲಕ ನಂದಿಗ್ರಾಮ, ಸಿಂಗೂರು ಎರಡೂ ಕಡೆಗಳಲ್ಲಿ ಫಲವತ್ತಾದ ಭೂಮಿಯನ್ನು ರೈತರ ಒಡೆತನದಿಂದ ದೂರಾಗಿಸುವ ಹುನ್ನಾರದಂತೆ ಸರ್ಕಾರದ ನಡೆಗಳು ಕಂಡವು. ಎರಡೂ ಕಡೆ ಸ್ಥಳೀಯರಿಂದ ಪ್ರತಿಭಟನೆಗಳು ಜೋರಾದವು. ಮಮತಾ ಬ್ಯಾನರ್ಜಿ ಹೋರಾಟಕ್ಕೆ ಧುಮುಕುವುದರೊಂದಿಗೆ ಇದು ತೃಣಮೂಲ ಕಾಂಗ್ರೆಸ್ ಹಾಗೂ ಎಡರಂಗಗಳ ನಡುವಿನ ಹೋರಾಟವಾಗಿ ಮಾರ್ಪಟ್ಟಿತು. ಒಂದೆಡೆ, ಎಡಪಕ್ಷಗಳ ಕಾರ್ಯಕರ್ತರು ಭೂಸ್ವಾಧೀನ ವಿರೋಧಿಸುತ್ತಿದ್ದ ರೈತರು, ಚಳವಳಿಗಾರರನ್ನು ಹತ್ತಿಕ್ಕಲು ಸರ್ಕಾರದ ಪರೋಕ್ಷ ಬೆಂಬಲದೊಂದಿಗೆ ಮುಂದಾದರೆ; ಮತ್ತೊಂದೆಡೆ ಸ್ಥಳೀಯರು, ಖ್ಯಾತನಾಮರು, ಎಡಪಂಥೀಯ ಚಿಂತಕರು, ಮಾವೊವಾದಿಗಳು ಮಮತಾ ಅವರ ಬೆನ್ನಿಗೆ ನಿಂತರು. ಪ್ರತಿಭಟನೆಗಳು ಕಾವು ಪಡೆದವು.

ಅತ್ತ, ಸಿಂಗೂರಿನಲ್ಲಿ ನ್ಯಾನೊ ತಯಾರಿಕಾ ಘಟಕದ ಸ್ಥಾಪನೆಗಾಗಿ ೯೯೭ ಎಕರೆ ಕೃಷಿಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲು ಸರ್ಕಾರ ಮುಂದಾಯಿತು. ಇದಕ್ಕಾಗಿ ಗುರುತಿಸಲಾದ ಜಾಗವನ್ನು ೨೦೦೬ರಂದು ಸ್ವಾಧೀನಕ್ಕೆ ಪಡೆದ ಸರ್ಕಾರ, ಆ ಜಾಗಕ್ಕೆ ಬೇಲಿಯನ್ನು ಹಾಕುವ ಮೂಲಕ ಸ್ಥಳೀಯರು ಅಲ್ಲಿ ಪ್ರವೇಶಿಸದಂತೆ ನಿರ್ಬಂದಿಸಿತು. ಇದು ಹೋರಾಟಗಳು ತೀವ್ರಗೊಂಡು ಮುಂದೆ ಮಮತಾ ಬ್ಯಾನರ್ಜಿ ೨೫ ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹದಲ್ಲಿ ತೊಡಗಲು ಕಾರಣವಾಯಿತು. ೨೦೦೬ರ ಡಿ.೧೮ರಂದು ಭೂಸ್ವಾಧೀನದ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ತಪಸಿ ಮಲಿಕ್‌ ಎನ್ನುವ ಹೈಸ್ಕೂಲ್‌ ಬಾಲಕಿಯನ್ನು ಸ್ವಾಧೀನಪಡಿಸಿಕೊಂಡಿದ್ದ ಸ್ಥಳದಲ್ಲಿ ಅತ್ಯಾಚಾರಗೈದು, ಬೆಂಕಿ ಹಚ್ಚಿ ಕೊಲ್ಲಲಾಗಿತ್ತು. ಇದರ ಹಿಂದೆ ಸಿಪಿಐಎಂ ಕಾರ್ಯಕರ್ತರ ಕೈವಾಡವಿದೆ ಎನ್ನುವ ಆರೋಪ ಕೇಳಿಬಂದು, ಇಬ್ಬರು ಕಾರ್ಯಕರ್ತರ ಬಂಧನಕ್ಕೆ ಕಾರಣವಾಯಿತು. ಭೂಮಿಯನ್ನು ಕಳೆದುಕೊಂಡ ಕೆಲ ರೈತರು ಸಹ ಪ್ರತಿರೋಧದ ಹತಾಶೆಯ ಕ್ರಮವಾಗಿ ಆತ್ಮಹತ್ಯೆಯನ್ನೂ ಮಾಡಿಕೊಂಡರು. ಈ ನಡುವೆ, ಗೋಲಿಬಾರ್‌ನಲ್ಲಿ ಓರ್ವ ಪ್ರತಿಭಟನಾನಿರತ ಸಾವಿಗೀಡಾದದ್ದೂ ವರದಿಯಾಯಿತು. ಈ ಎಲ್ಲದರ ನಡುವೆಯೇ ಜ.೨೧ರಂದು ೨೦೦೭ರಲ್ಲಿ ಟಾಟಾ ಸಮೂಹವು ಕೈಗಾರಿಕೆಯನ್ನು ನಿರ್ಮಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಿತು. ಇದು ಮುಂದೆ ಪೊಲೀಸ್ ಹಾಗೂ ಪ್ರತಿಭಟನಾನಿರತರ ನಡುವೆ ಸಂಘರ್ಷಗಳಿಗೆ ಕಾರಣವಾಯಿತು. ದಿನೇದಿನೇ ಹೋರಾಟಗಳು ತೀವ್ರಗೊಂಡಿದ್ದರ ಪರಿಣಾಮ ಅಂತಿಮವಾಗಿ ರತನ್ ಟಾಟಾ ಅವರು ೨೦೦೮ರ ಅ.೮ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ನ್ಯಾನೊ ಯೋಜನೆಯನ್ನು ರಾಜ್ಯದಿಂದ ಹೊರಗೆ ಒಯ್ಯುವ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿದರು.

ಅದಾಗಲೇ ನ್ಯಾನೊ ತಯಾರಿಕಾ ಘಟಕದ ನಿರ್ಮಾಣಕ್ಕೆ ತಮ್ಮ ರಾಜ್ಯದಲ್ಲಿ ಸಕಲ ಸವಲತ್ತು ಒದಗಿಸಲು ಇಚ್ಛೆ ಹೊಂದಿರುವುದಾಗಿ ಹೇಳಿದ್ದ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಈ ಅವಕಾಶವನ್ನು ತಮ್ಮ ಉದ್ಯಮಸ್ನೇಹಿ ಆಡಳಿತಕ್ಕೆ ಪೂರಕವಾಗಿ ಬಿಂಬಿಸಿಕೊಳ್ಳಲು ಬಳಸಿಕೊಂಡರು. ಪರಿಣಾಮ, ಗುಜರಾತ್‌ನ ಸಾನಂದ್ ಬಳಿ ಮುಂದಿನ ೧೪ ತಿಂಗಳಲ್ಲಿ ನ್ಯಾನೊ ತಯಾರಿಕಾ ಘಟಕ ತಲೆ ಎತ್ತಿತು. ಇದು ಮೋದಿಯವರು ತಮ್ಮ ಉದ್ಯಮಸ್ನೇಹಿ, ಕಾರ್ಪೊರೆಟ್‌ ಸ್ನೇಹಿ ಪ್ರಭಾವಳಿಯನ್ನು ವಿಸ್ತರಿಸಿಕೊಳ್ಳಲು ಕಾರಣವಾಯಿತು. ಖುದ್ದು ರತನ್‌ ಟಾಟಾ ಅವರೇ ಈ ಬಗ್ಗೆ ಮೆಚ್ಚುಗೆ ಸೂಚಿಸಿದರು. ಇದೆಲ್ಲವೂ ಮೋದಿಯವರು ತಮ್ಮನ್ನು ತಾವು ‘ವಿಕಾಸ ಪುರುಷ’ ಎಂದು ಬಿಂಬಿಸಿಕೊಳ್ಳಲು, ‘ಇಂಡಿಯಾ ಇಂಕ್‌’ ಎಂದು ಕರೆಸಿಕೊಳ್ಳುವ ದೇಶದ ಕಾರ್ಪೊರೆಟ್‌ ವಲಯವನ್ನು ಅಕರ್ಷಿಸಲು ಬಹುವಾಗಿ ನೆರವಾಯಿತು. ಮುಂದೆ ಅವರು ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಲು, ಕಾರ್ಪೊರೆಟ್‌ ಹಾಗೂ ಕೈಗಾರಿಕಾ ವಲಯದ ವಿಶೇಷ ಬೆಂಬಲಕ್ಕೆ ಪಾತ್ರರಾಗಲು ಸಹಾಯಕವಾಯಿತು.

ಇದನ್ನೂ ಓದಿ : ವಿಶ್ವದ ಅತಿ ಕಡಿಮೆ ಬೆಲೆಯ ನ್ಯಾನೊ ಕಾರಿಗೆ ಟಾಟಾ ಹೇಳಿದ ಟಾಟಾ ಕಂಪನಿ

ಅತ್ತ ಮಮತಾ ಬ್ಯಾನರ್ಜಿ ಕೂಡ ಸಿಂಗೂರು, ನಂದಿಗ್ರಾಮದ ಯಶಸ್ವಿ ಹೋರಾಟಗಳ ನಂತರ ‘ಮಾ, ಮಾಟಿ, ಮಾನುಷ್‌’ (ತಾಯಿ, ತಾಯಿನಾಡು ಹಾಗೂ ಜನ) ಎನ್ನುವ ಘೋಷವಾಕ್ಯದೊಂದಿಗೆ ಮೂರೂವರೆ ದಶಕದ ಎಡಪಕ್ಷದ ಸರ್ಕಾರವನ್ನು ಮಣಿಸಿ ಅಧಿಕಾರಕ್ಕೇರಲು ಸಫಲರಾದರು. ಈಗ ಮಮತಾ ಅವರು ಸಹ ತಮ್ಮ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ವಿಶೇಷ ಕಸರತ್ತು ನಡೆಸುತ್ತಿದ್ದಾರೆ. ಫೋರ್ಡ್‌ ಆಟೊಮೊಬೈಲ್‌ ಕಂಪನಿಯನ್ನು ತಮ್ಮ ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸುವಂತೆ ಮನವೊಲಿಸುತ್ತಿದ್ದಾರೆ!

ಈ ಕಾರಣಕ್ಕೆ ಕಳೆದ ಹತ್ತು ವರ್ಷದ ದೇಶದ ರಾಜಕೀಯ ಇತಿಹಾಸ ಗಮನಿಸಿದಾಗ ‘ನ್ಯಾನೊ’ ಈ ದೇಶದ ಅಚ್ಚರಿಯ ರಾಜಕೀಯ ತಿರುವುಗಳಿಗೆ ಕಾರಣವಾಗಿದ್ದು ಕುತೂಹಲ ಹುಟ್ಟಿಸುತ್ತದೆ. ಎಡಪಕ್ಷಗಳು ತಮ್ಮ ಆರ್ಥಿಕ ನೀತಿಯಲ್ಲಿ ಆಗಿರುವ ಬದಲಾವಣೆಯನ್ನು ಘೋಷಿಸುವ ಸಲುವಾಗಿ ಅಪ್ಪಿಕೊಳ್ಳಲು ಮುಂದಾದ ನ್ಯಾನೊ ಅವರು ಅಧಿಕಾರದಿಂದ ಕೆಳಗೆ ಜಾರಲು ಕಾರಣವಾಯಿತು! ರಾಜಕೀಯವಾಗಿ ದಿಕ್ಕುತೋಚದ ಅತಂತ್ರ ಸ್ಥಿತಿಯಲ್ಲಿದ್ದ ಮಮತಾ ಬ್ಯಾನರ್ಜಿಯವರಿಗೆ ರಾಜಕೀಯ ಮರುಜನ್ಮ ನೀಡಿ ಹೊಸ ಎತ್ತರಕ್ಕೇರಲು ಕಾರಣವಾಯಿತು. ಗುಜರಾತ್‌ ನರಮೇಧದ ಕಳಂಕ ಹೊತ್ತಿದ್ದ ನರೇಂದ್ರ ಮೋದಿಯವರಿಗೆ ವಿಕಾಸ ಪುರುಷನ ಉಡುಗೆ ತೊಡಿಸಿ ಪ್ರಧಾನಿ ಹುದ್ದೆಗೇರಿಸಲು ನೆರವಾಯಿತು. ನ್ಯಾನೊ ಚಕ್ರಗಳು ಭಾರತದ ರಸ್ತೆಯ ಮೇಲೆ ಗುರುತು ಮೂಡಿಸಿದ್ದಕ್ಕಿಂತ, ದೇಶದ ರಾಜಕಾರಣದಲ್ಲಿ ಗುರುತು ಮೂಡಿಸಿದ್ದು ವಿಪರ್ಯಾಸವೇ ಸರಿ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More