ದೇವೇಗೌಡರ ಪತ್ರ ರಾಜಕಾರಣದ ಅಸ್ತ್ರ ಪ್ರಯೋಗಿಸುತ್ತಿದ್ದಾರೆಯೇ ಸಿದ್ದರಾಮಯ್ಯ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಪತ್ರದ ಮೂಲಕ ಸಂಹವನ ಸಾಧಿಸುವುದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಿಷ್ಣಾತರು. ಇದು ಒಂದು ಮಾದರಿಯ ರಾಜಕಾರಣವೇ. ಈಗ ಇದೇ ಅಸ್ತ್ರವನ್ನು ಸಮ್ಮಿಶ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯೋಗಿಸುತ್ತಿದ್ದಾರೆಯೇ?

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಅವರ ಸಂಪುಟದ ವಿವಿಧ ಸಚಿವರಿಗೆ ತಾವು ಆರಿಸಿಬಂದಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಎಂಟು ಪತ್ರಗಳನ್ನು ಬರೆದಿದ್ದಾರೆ. ಬಜೆಟ್‌ನಲ್ಲಿ ಅನ್ನಭಾಗ್ಯದ ಅಡಿ ನೀಡಲಾಗುವ ಏಳು ಕೆಜಿ ಅಕ್ಕಿಯ ಪೈಕಿ ಎರಡು ಕೆಜಿ ಅಕ್ಕಿ ಕಡಿತಗೊಳಿಸಿದ್ದು ಹಾಗೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸಿದ್ದನ್ನು ಹಿಂಪಡೆಯುವಂತೆ ಕುಮಾರಸ್ವಾಮಿ ಅವರಿಗೆ ಮತ್ತೊಂದು ಪ್ರತ್ಯೇಕ ಪತ್ರವನ್ನೂ ಸಿದ್ದರಾಮಯ್ಯ ಬರೆದಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅವರು ಪತ್ರ ರಾಜಕಾರಣ ಆರಂಭಿಸಿದ್ದಾರೆಯೇ ಎಂಬ ಚರ್ಚೆ ಆರಂಭವಾಗಿದೆ.

ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಗರಡಿಯಲ್ಲಿ ಪಳಗಿದ ಸಿದ್ದರಾಮಯ್ಯ ಅವರು, ತಮ್ಮ ರಾಜಕೀಯ ಗುರುವಿನ ಹಾದಿಯಲ್ಲಿಯೇ ಹೆಜ್ಜೆ ಇಡುತ್ತಿರುವುದು ಕುತೂಹಲ ಸೃಷ್ಟಿಸಿದೆ. ದೇವೇಗೌಡರು ಇಂದಿಗೂ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಗಮನ ಸೆಳೆಯುವುದಿದ್ದರೆ ಪತ್ರ ಮುಖೇನ ವ್ಯವಹರಿಸುತ್ತಾರೆ. ೨೦೦೪ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ದೇವೇಗೌಡರು ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ಗಮನ ಸೆಳೆಯಲು ಪತ್ರ ಬರೆಯುತ್ತಿದ್ದರು. ಈ ರೀತಿ ಪತ್ರ ಬರೆಯುವುದರಿಂದ ಅಧಿಕಾರಸ್ಥರಿಗೆ ಒತ್ತಡ ಉಂಟುಮಾಡುವುದು, ಎಲ್ಲರ ಕೇಂದ್ರಬಿಂದುವಾಗುವುದರ ಜೊತೆಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಅಡಗಿದೆ. ಇದರ ಜೊತೆಗೆ ಪತ್ರಗಳು ದಾಖಲೆಯಾಗಿ ಉಳಿಯುವುದರಿಂದ ಅಗತ್ಯ ಸಂದರ್ಭದಲ್ಲಿ ಸಮರ್ಥನೆಗೂ ಅನುಕೂಲಕಾರಿ. ಈ ನೆಲೆಯಲ್ಲಿ ಯಾವ ಕುಟುಂಬವು ಪತ್ರ ರಾಜಕಾರಣದ ಮೂಲಕ ರಾಜಕೀಯ ಕಥಾನಕವನ್ನು ಕಟ್ಟಿಕೊಳ್ಳಲಾರಂಭಿಸಿತೋ ಅದೇ ತಂತ್ರವನ್ನು ಸಿದ್ದರಾಮಯ್ಯ ಅನುಸರಿಸುತ್ತಿರುವಂತೆ ಕಾಣುತ್ತಿದೆ.

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಮಾರ್ಗದರ್ಶನ ಮಾಡುವಂಥ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು, ಸುಲಲಿತವಾಗಿ ಸಮ್ಮಿಶ್ರ ಸರ್ಕಾರ ನಡೆಸಲು ಹಾಗೂ ಉಭಯ ಪಕ್ಷಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಸಮನ್ವಯ ಸಮಿತಿ ರಚಿಸಲಾಗಿದೆ. ಇದರ ನೇತೃತ್ವವನ್ನೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಯಾವುದೇ ವಿಚಾರಗಳ ಬಗ್ಗೆ ಗಮನ ಸೆಳೆಯುವುದು ಅಥವಾ ಚರ್ಚೆ ನಡೆಸುವ ಅಗತ್ಯವಿದ್ದರೆ ಅದನ್ನು ಅವರು ಸಮನ್ವಯ ಸಮಿತಿಯಲ್ಲಿ ಪ್ರಸ್ತಾಪಿಸಬಹುದು. ಆದರೆ, ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಬದಲಿಗೆ ಪತ್ರವನ್ನೇ ತಮ್ಮ ಸಂವಹನಕ್ಕೆ ಬಳಸುತ್ತಿರುವುದರ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಹೊಂದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಅನ್ನಭಾಗ್ಯದ ಅಕ್ಕಿ ಪ್ರಮಾಣ ಕಡಿತ ಸಂಬಂಧ ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಬರೆದ ಪತ್ರದ ಪ್ರತಿ
ಅನ್ನಭಾಗ್ಯದ ಅಕ್ಕಿ ಪ್ರಮಾಣ ಕಡಿತ ಸಂಬಂಧ ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ಬರೆದ ಪತ್ರದ ಪ್ರತಿ

ಸಿದ್ದರಾಮಯ್ಯ ಆರು ಪತ್ರಗಳನ್ನು ಕುಮಾರಸ್ವಾಮಿ ಅವರಿಗೆ, ಪ್ರವಾಸೋದ್ಯಮ, ಬೃಹತ್ ಕೈಗಾರಿಕೆ ಹಾಗೂ ಕಾರ್ಮಿಕ ಸಚಿವರಿಗೆ ಒಂದೊಂದು ಪತ್ರ ಬರೆದಿದ್ದಾರೆ. ತಮಗೆ ಉಲ್ಲೇಖಿಸಿ ಬರೆದ ಆರು ಪತ್ರಗಳ ಪೈಕಿ ಎರಡು ಪತ್ರಗಳ ಸಂಬಂಧ ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡುವಿಕೆಯಲ್ಲಿ ಕಡಿತ ಮಾಡುವುದಿಲ್ಲ ಎಂದು ಸದನದಲ್ಲೇ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ, ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ ಇಳಿಕೆ ಮಾಡಲು ಆಸಕ್ತಿ ತೋರಿಲ್ಲ.

ರಾಜಕೀಯವಾಗಿಯೂ ಸೂಕ್ಷ್ಮವಾದ ಸಿದ್ದರಾಮಯ್ಯ ಅವರ ಪತ್ರಗಳನ್ನು ಸರ್ಕಾರವು ಲಘುವಾಗಿ ಪರಿಗಣಿಸುವಂತಿಲ್ಲ. ಒಂದೊಮ್ಮೆ ಸರ್ಕಾರ ಮೈಮರೆತರೂ ಮಾಧ್ಯಮಗಳು ಹಾಗೂ ವಿರೋಧ ಪಕ್ಷ ಇದನ್ನು ರಾಜಕೀಯ ದಾಳವಾಗಿ ಬಳಸುವ ಸಾಧ್ಯತೆ ಇರುತ್ತದೆ. ಸರ್ಕಾರದ ಗಮನ ಸೆಳೆಯುವುದರ ಜೊತೆಗೆ ಅಧಿಕಾರದಲ್ಲಿರದ ಹೊರತಾಗಿಯೂ ರಾಜಕೀಯವಾಗಿ ಪ್ರಸ್ತುತತೆ ಕಾಯ್ದುಕೊಳ್ಳಲು ಸಿದ್ದರಾಮಯ್ಯ ಅವರು ಪತ್ರ ರಾಜಕಾರಣದ ಹಾದಿಯನ್ನು ಅನುಸರಿಸುತ್ತಿರುವಂತಿದೆ.

ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಬರೆದ ೯ ಪತ್ರಗಳ ಸಾರಾಂಶ

ಜೂನ್‌ ೨೦: ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ವಿವಿಧ ಕೆರೆಗಳನ್ನು ತುಂಬಿಸಲು ೧೨ ಕೋಟಿ ರುಪಾಯಿ ಮಂಜೂರಾತಿಗೆ ಸಿಎಂ ಕುಮಾರಸ್ವಾಮಿ ಅವರಿಗೆ ಕೋರಿಕೆ ಸಲ್ಲಿಸಿದ್ದಾರೆ. ಇದಕ್ಕೆ ತಕ್ಷಣ ಸ್ಪಂದಿಸುವಂತೆ ಜುಲೈ ೨ರಂದು ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಅವರಿಗೆ ಕುಮಾರಸ್ವಾಮಿ ಸೂಚಿಸಿದ್ದಾರೆ.

ಜೂನ್‌ ೨೫: ನೇಕಾರ ಸಮುದಾಯದ ಅನುಕೂಲಕ್ಕಾಗಿ ಜವಳಿ ಪಾರ್ಕ್‌, ಪವರ್‌ಲೂಮ್‌ ಪಾರ್ಕ್‌ ಮತ್ತು ಗಾರ್ಮೆಂಟ್‌ ಸ್ಥಾಪಿಸುವ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಈ ಪ್ರಸ್ತಾವವನ್ನು ಕೂಡಲೇ ವಿವರಗಳೊಂದಿಗೆ ಮಂಡಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಜುಲೈ ೨ರಂದು ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ.

ಜುಲೈ ೨: ಬಾದಾಮಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗುಳೇದಗುಡ್ಡ ಪಟ್ಟಣದ ಜೋನ್‌ ೧ಕ್ಕೆ ೨೪/೭ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ೧೪.೯೭ ಲಕ್ಷ ಅನುದಾನಕ್ಕೆ ಕುಮಾರಸ್ವಾಮಿ ಅವರಿಗೆ ಕೋರಿಕೆ.

ಜುಲೈ ೩: ಬಾದಾಮಿ ಮತಕ್ಷೇತ್ರದಲ್ಲಿ ಬೃಹತ್‌ ಕೈಗಾರಿಕೆ ಆರಂಭಿಸುವ ಸಂಬಂಧ ವಿಶೇಷ ಸಭೆ ಕರೆಯುವಂತೆ ಬೃಹತ್‌ ಕೈಗಾರಿಕೆ ಸಚಿವ ಕೆ ಜೆ ಜಾರ್ಜ್‌ ಅವರಿಗೆ ಪತ್ರ.

ಜುಲೈ ೩: ಬಾದಾಮಿಯಲ್ಲಿರುವ ಪ್ರವಾಸಿ ತಾಣಗಳಾದ ಪಟ್ಟದಕಲ್ಲು, ಬನಶಂಕರಿ, ಮಹಾಕೂಟಕ್ಕೆ ಬರುವ ದೇಶ-ವಿದೇಶಗಳ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತು ಚರ್ಚಿಸಲು ವಿಶೇಷ ಸಭೆ ಕರೆಯುವಂತೆ ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್‌ ಅವರಿಗೆ ಪತ್ರ.

ಜುಲೈ ೯: ಗುಳೇದಗುಡ್ಡಕ್ಕೆ ಪಶು ವೈದ್ಯಕೀಯ ಕಾಲೇಜು ಅಗತ್ಯವಿದೆ; ಕಾಲೇಜು ನಿರ್ಮಾಣಕ್ಕೆ ಅಗತ್ಯವಾದ ಭೂಮಿಯು ಗುಳೇದಗುಡ್ಡ ಸಮೀಪದ ಮುರುಡಿ ಗ್ರಾಮದಲ್ಲಿದೆ ಎಂದು ಉಲ್ಲೇಖಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ರವಾನೆ.

ಜುಲೈ ೯: ಕೆರೂರಿನಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಮಂಜೂರು ಮಾಡುವಂತೆ ಕೋರಿ ಕಾರ್ಮಿಕ ಸಚಿವ ವೆಂಕರಮಣಪ್ಪ ಅವರಿಗೆ ಮನವಿ ಪತ್ರ.

ಜುಲೈ ೯: ಬಾದಾಮಿಯಲ್ಲಿ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಆರಂಭಿಸಲು ಮಂಜೂರಾತಿ ನೀಡುವಂತೆ ಕುಮಾರಸ್ವಾಮಿ ಅವರಿಗೆ ಪತ್ರ.

ಜುಲೈ ೯: ಅನ್ನಭಾಗ್ಯದಡಿ ಅಕ್ಕಿ ಕಡಿತಗೊಳಿಸುವ ಸಿಎಂ ಕುಮಾರಸ್ವಾಮಿ ಪ್ರಸ್ತಾವವನ್ನು ಹಿಂಪಡೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದ ಸಿದ್ದರಾಮಯ್ಯ ಅವರು, ಅನ್ನಭಾಗ್ಯದ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. ಇನ್ನು ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡುತ್ತಿದೆ. ಇಂಥ ಸನ್ನಿವೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಿಸುವುದರು ಸರಿಯಲ್ಲ. ಇದನ್ನು ಹಿಂಪಡೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More