ಬಿಜೆಪಿ ತೊರೆಯಲು ಮುಂದಾದ ಮಾಜಿ ರಾಜ್ಯಸಭಾ ಸದಸ್ಯ ಚಂದನ್ ಮಿತ್ರಾ

೨೦೦೩ ಮತ್ತು ೨೦೦೯ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಚಂದನ್ ಮಿತ್ರಾ ಬಿಜೆಪಿ ತೊರೆಯಲು ಮುಂದಾಗಿದ್ದಾರೆ. ಇತ್ತೀಚೆಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಮಿತ್ರಾ, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಂಭೀರ ಸವಾಲನ್ನು ಎದುರಿಸಲಿದೆ’ ಎಂದೂ ಹೇಳಿದ್ದರು

ಎರಡು ಬಾರಿ ರಾಜ್ಯಸಭಾ ಸಂಸದರಾಗಿರುವ ಪತ್ರಕರ್ತ ಚಂದನ್ ಮಿತ್ರಾ ಅವರು ಬಿಜೆಪಿ ತೊರೆಯಲು ಮುಂದಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ‘ದಿ ಪಯನೀರ್’ ಸಂಪಾದಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಚಂದನ್ ಮಿತ್ರಾ ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಚಂದನ್ ಮಿತ್ರಾ ರಾಜಿನಾಮೆಯನ್ನು ಸ್ವೀಕರಿಸಿದ್ದಾರೆಯೇ ಇಲ್ಲವೇ ಎನ್ನುವುದು ಇನ್ನೂ ಖಚಿತವಾಗಿಲ್ಲ.

೨೦೧೯ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ತೊರೆಯುವವರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಬಿಜೆಪಿಯಲ್ಲಿ ಸಕ್ರಿಯರಾಗಿರುವ ರಾಜಕಾರಣಿಗಳು ಮತ್ತು ತಂತ್ರಜ್ಞರು ಅಥವಾ ಮಾಧ್ಯಮ ತಂಡದ ಸದಸ್ಯರು ಅನೇಕರು ಇತ್ತೀಚೆಗೆ ಪಕ್ಷವನ್ನು ತೊರೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇವೆ. ಪಕ್ಷದೊಳಗೇ ಆಡ್ವಾಣಿ ಬಣ ಮತ್ತು ಮೋದಿ-ಶಾ ಬಣ ಎನ್ನುವ ವಿಭಜನೆಯಾಗಿರುವ ಬಗ್ಗೆಯೂ ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ, ಚಂದನ್ ಮಿತ್ರಾ ಅವರು ರಾಜಿನಾಮೆ ನೀಡಿದಾಗಲೂ, ಮೋದಿ-ಶಾ ಜೋಡಿ ಪಕ್ಷವನ್ನು ಹಿಡಿತದಲ್ಲಿಟ್ಟುಕೊಂಡಿರುವುದು ಬಹಳಷ್ಟು ಮಂದಿಯ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನುವ ಮಾತುಗಳು ಹೊರಬಿದ್ದಿವೆ.

“ಮೋದಿ-ಶಾ ಜೋಡಿಯಿಂದ ಅಲಕ್ಷ್ಯಕ್ಕೊಳಗಾದ ನೋವಿನಲ್ಲಿಯೇ ಚಂದನ್ ಮಿತ್ರಾ ರಾಜಿನಾಮೆ ನೀಡುತ್ತಿದ್ದಾರೆ,” ಎಂದು ಟ್ವಿಟರ್‌ನಲ್ಲಿಯೂ ಚರ್ಚೆಯಾಗಿದೆ. ಇನ್ನು ಕೆಲವರು, “ಬಿಜೆಪಿ ಮುಳುಗುವ ದೋಣಿ ಎಂದು ಅರಿವಾಗುತ್ತಲೇ ಅವಕಾಶವಾದಿಗಳು ಪಕ್ಷವನ್ನು ತೊರೆಯುತ್ತಿದ್ದಾರೆ,” ಎನ್ನುವ ವಿಶ್ಲೇಷಣೆಗೆ ಇಳಿದಿದ್ದಾರೆ.

ಇದನ್ನೂ ಓದಿ : ಬಿಜೆಪಿ ತೊರೆದು ರಾಜಕೀಯ ಸನ್ಯಾಸ ಸ್ವೀಕರಿಸಿದ ಯಶವಂತ್ ಸಿನ್ಹಾ

ಚಂದನ್ ಮಿತ್ರಾ ಅವರು ರಾಜಿನಾಮೆ ನೀಡಿರುವ ಬಗ್ಗೆ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದ್ದು, ಪಕ್ಷದ ಹಿರಿಯ ನಾಯಕರು ರಾಜಿನಾಮೆಯ ಬಗ್ಗೆ ದೃಢೀಕರಿಸಿದ್ದಾರೆ ಎಂದು ತಿಳಿಸಿದೆ. ಆದರೆ, ಈ ಬಗ್ಗೆ ಚಂದನ್ ಮಿತ್ರಾ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಚಂದನ್ ಯಾವ ಕಾರಣ ನೀಡಿ ರಾಜಿನಾಮೆ ನೀಡಿದ್ದಾರೆ ಎನ್ನುವ ಬಗ್ಗೆ ಇನ್ನೂ ನಿಖರವಾದ ವಿವರಗಳು ಲಭ್ಯವಾಗಿಲ್ಲ. ಎಲ್ ಕೆ ಆಡ್ವಾಣಿ ಅವರಿಗೆ ಬಹಳ ಆಪ್ತರಾಗಿದ್ದ ಚಂದನ್ ಮಿತ್ರಾ, ದೆಹಲಿ ವಲಯದಲ್ಲಿ ನಿರ್ಣಾಯಕ ವಿಚಾರಗಳಲ್ಲಿ ಬಿಜೆಪಿಯ ನಡೆಗಳನ್ನು ಸಮರ್ಥಿಸಿಕೊಳ್ಳುತ್ತಿದ್ದ ಪ್ರಮುಖ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದರು.

ಮೋದಿ-ಶಾ ನಾಯಕತ್ವವು ಚಂದನ್ ಮಿತ್ರಾ ಅವರನ್ನು ಆಡ್ವಾಣಿ ಬಣದವರೆಂದೇ ತಿಳಿದು ವ್ಯವಹರಿಸುತ್ತ ಬಂದಿದೆ. ಹೀಗಾಗಿ ೨೦೧೪ರಿಂದಲೇ ಅವರು ಅಲಕ್ಷ್ಯಕ್ಕೊಳಗಾದ ನಾಯಕರೊಳಗೆ ಸೇರಿದ್ದರು ಎನ್ನಲಾಗಿದೆ. ಆಡ್ವಾಣಿ ಬಣಕ್ಕೆ ಸೇರಿದ ಯಶವಂತ್ ಸಿನ್ಹಾ, ಶತ್ರುಘ್ನ ಸಿನ್ಹಾ, ಕೀರ್ತಿ ಆಜಾದ್ ಮೊದಲಾದವರು ಸಹ ಮೋದಿ-ಶಾ ಕಾರ್ಯವೈಖರಿಯನ್ನು ಹಿಂದಿನಿಂದಲೇ ವಿರೋಧಿಸುತ್ತ ಬಂದಿದ್ದರು. ಯಶವಂತ್ ಸಿನ್ಹಾ ಇತ್ತೀಚೆಗೆ ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ.

ಚಂದನ್ ಮಿತ್ರಾ ಕಳೆದ ಕೆಲವು ತಿಂಗಳಿಂದ ಬಿಜೆಪಿಯ ನಡೆಗಳನ್ನು ಟೀಕಿಸುತ್ತ ಬಂದಿದ್ದರು. ಹೀಗಾಗಿ ಅವರು ಬಿಜೆಪಿ ತೊರೆಯುವ ಸಾಧ್ಯತೆಯನ್ನು ಊಹಿಸಲಾಗಿತ್ತು. ಇದೇ ಮೇನಲ್ಲಿ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಸೋತ ಸಂದರ್ಭದಲ್ಲಿ, “ಕಬ್ಬು ಬೆಳೆಗಾರರ ಸಮಸ್ಯೆಗೆ ಪಕ್ಷ ಹೆಚ್ಚು ಗಮನ ನೀಡಿಲ್ಲ,” ಎಂದು ಟೀಕಿಸಿದ್ದರು. ಅಲ್ಲದೆ, ಈ ಸೋಲು ಪಕ್ಷಕ್ಕೆ ಗಂಭೀರ ಹಿನ್ನಡೆ ಎಂದು ವಿಮರ್ಶಿಸಿದ್ದರು. “೨೦೧೯ರ ಲೋಕಸಭಾ ಚುನಾವಣೆಗೆ ವಿಪಕ್ಷಗಳು ಒಗ್ಗೂಡಿದಲ್ಲಿ ಬಿಜೆಪಿ ಗಂಭೀರ ಸವಾಲನ್ನು ಎದುರಿಸಲಿದೆ,” ಎಂದು ಚಂದನ್ ಮಿತ್ರಾ ಅವರು ಮಾಧ್ಯಮಗಳಿಗೆ ಹೇಳಿಕೆಯನ್ನೂ ಕೊಟ್ಟಿದ್ದರು. ಮಾಧ್ಯಮಗಳು ಮತ್ತು ಸಾಮಾಜಿಕ ತಾಣಗಳಲ್ಲಿ ಬಿಜೆಪಿ ಪರವಾಗಿ ಸಮರ್ಥವಾಗಿ ವಾದವನ್ನು ಮಂಡಿಸುತ್ತಿದ್ದವರು ಚಂದನ್ ಮಿತ್ರಾ. ಹೀಗಾಗಿ, ಅವರು ಪಕ್ಷ ತೊರೆದರೆ ಬಿಜೆಪಿ ತನ್ನ ಪರವಾದ ಒಂದು ಪ್ರಭಾವಿ ಧ್ವನಿಯನ್ನು ಕಳೆದುಕೊಳ್ಳಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More