ಬೆಂಗಳೂರು ಬಿಟ್ಟು ಮತ್ತೆ ಕರಾವಳಿಯತ್ತ ಹೊರಟರೇ ಕೇಂದ್ರ ಸಚಿವ ಸದಾನಂದಗೌಡ?

ಬೆಂಗಳೂರು ಉತ್ತರ ಸಂಸದ, ಕೇಂದ್ರ ಸಚಿವ ಸದಾನಂದಗೌಡ ಸ್ಪರ್ಧಾಕಣ ಬದಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಗೆಲುವು ಖಾತ್ರಿ ಎಂದು ಅವರು ದೃಢವಾಗಿ ನಂಬಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡೆಗೆ ಕಾರಣವೇನು?

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮತ್ತು ಆನಂತರದ ರಾಜಕೀಯ ಬೆಳವಣಿಗೆಗಳು ಬಿಜೆಪಿಯ ಲೋಕಸಭಾ ಚುನಾವಣೆಯ ಲೆಕ್ಕಾಚಾರಕ್ಕೆ ಹೊಡೆತ ನೀಡಿದಂತಿದೆ. ಬೆಂಗಳೂರಿನಲ್ಲಿ ಚುನಾವಣೆಯಿಂದ ಚುನಾವಣೆಗೆ ಕಮಲ ಪಾಳೆಯ ಕೆಟ್ಟ ಪ್ರದರ್ಶನ ನೀಡುವುದನ್ನು ಮುಂದುವರಿಸಿದ್ದು, ಬಿಜೆಪಿಯ ಲೋಕಸಭಾ ಸದಸ್ಯರ ನಿದ್ದೆಗೆ ಭಂಗ ತಂದಿದೆ. ಇದರ ಬಿಸಿ ಮೊದಲಿಗೆ ತಾಕಿರುವುದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರ ಸರ್ಕಾರದಲ್ಲಿ ಯೋಜನಾ ಮತ್ತು ಸಾಂಖ್ಯಿಕ ಸಚಿವರಾಗಿರುವ ಡಿ ವಿ ಸದಾನಂದಗೌಡ ಅವರಿಗೆ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಲೆಯ ಮೇಲೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ೨,೨೯,೭೬೪ ಮತಗಳ ಭಾರಿ ಗೆಲುವು ದಾಖಲಿಸಿದ್ದ ಸದಾನಂದಗೌಡ, ಈಗ ಕರಾವಳಿ ಭಾಗದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ತಮ್ಮ ಸ್ಥಾನ ಬದಲಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದಕ್ಕೆ ಪೂರಕವಾಗಿ, ಹಾಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣಕ್ಕೆ ಮರಳಲು ತುದಿಗಾಲಲ್ಲಿ ನಿಂತಿದ್ದಾರೆ. ವಿಧಾನ ಪರಿಷತ್‌ನಲ್ಲಿ ಅವರಿಗೆ ಸ್ಥಾನ ಕಲ್ಪಿಸಲು ಪಕ್ಷದ ವರಿ‍ಷ್ಠರು ಸಮ್ಮತಿ ನೀಡಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವ ಸದಾನಂದಗೌಡ, ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕರಾವಳಿ ಭಾಗಕ್ಕೆ ಜಿಗಿಯಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಹಾಗೆ ನೋಡಿದರೆ, ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ೧೧ ತಿಂಗಳ ಚುಟುಕು ಅವಧಿಯಲ್ಲಿ ಕೆಲಸ ಮಾಡಿರುವ ಸದಾನಂದಗೌಡ, ಪಕ್ಷದ ಮತಬುಟ್ಟಿ ತುಂಬಿಸಬಲ್ಲ ಮಾಸ್‌ ಲೀಡರ್‌ ಅಲ್ಲ. ರಾಜಕೀಯ ಸ್ಥಿತ್ಯಂತರಗಳು ಅವರನ್ನು ಅಧಿಕಾರದ ತುತ್ತತುದಿಗೇರಿಸಿವೆ ಎಂಬುದನ್ನು ಅವರ ರಾಜಕೀಯ ಗ್ರಾಫ್‌ನತ್ತ ಒಮ್ಮೆ ಕಣ್ಣೊರಳಿಸಿದರೆ ಸುಲಭವಾಗಿ ಅರ್ಥವಾಗಿಬಿಡುತ್ತದೆ. ೧೯೯೪ರಲ್ಲಿ ಮೊದಲ ಬಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಅವರು, ಎರಡನೇ ಬಾರಿಗೆ ಗೆದ್ದು ವಿಧಾನಸಭೆಯಲ್ಲಿ ಪಕ್ಷದ ಉಪನಾಯಕರಾಗಿದ್ದರು. ೨೦೦೪ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದರು. ಆನಂತರ ೨೦೦೯ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜಯ ಸಾಧಿಸಿದ್ದ ಸದಾನಂದಗೌಡರಿಗೆ ೨೦೧೧ರಲ್ಲಿ ಮುಖ್ಯಮಂತ್ರಿಯಾಗುವ ಅಪೂರ್ವ ಅವಕಾಶ ಒದಗಿಬಂದುಬಿಟ್ಟಿತು.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಪಾಲಾಗುವ ಸನ್ನಿವೇಶ ನಿರ್ಮಾಣವಾದ್ದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್‌ ಯಡಿಯೂರಪ್ಪ ರಾಜಿನಾಮೆ ನೀಡಿದ್ದರು. ಈ ಸಂದರ್ಭದಲ್ಲಿ ಬಣ ರಾಜಕೀಯದಿಂದ ಕಂಗಾಲಾಗಿದ್ದ ಪಕ್ಷವನ್ನು ಸರಿದಾಗಿಸಿಕೊಂಡು ಹೋಗಲು ಸದಾನಂದಗೌಡರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಪಕ್ಷದಲ್ಲಿನ ಭಿನ್ನಮತ ಸರಿದೂಗಿಸುವಲ್ಲಿ ಹಿನ್ನಡೆ ಅನುಭವಿಸಿದ ಗೌಡರನ್ನು ಬದಲಿಸಿ ಜಗದೀಶ್‌ ಶೆಟ್ಟರ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಇದಕ್ಕೂ ಮುನ್ನ, ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸದಾನಂದಗೌಡ, ೨೦೧೩ರಲ್ಲಿ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ೨೦೧೪ರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು, ಮೋದಿ ಸರ್ಕಾರದಲ್ಲಿ ರೈಲ್ವೆ, ಕಾನೂನು ಸಚಿವರಾಗಿಯೂ ಅವರು ಕೆಲಸ ಮಾಡಿದ್ದಾರೆ.

ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರೇ ಅಭ್ಯರ್ಥಿ. ಮೋದಿ ಅವರನ್ನು ನೋಡಿ ಜನರು ವೋಟು ಹಾಕುತ್ತಾರೆ. ಬೆಂಗಳೂರು ಉತ್ತರದಲ್ಲೇ ಸದಾನಂದಗೌಡರು ಸ್ಪರ್ಧೆ ಮಾಡಲಿದ್ದು, ಏನೇ ಆದರೂ ಅವರ ಗೆಲುವು ನಿಶ್ಚಿತ. ವಿರೋಧ ಪಕ್ಷಗಳು ಅಲ್ಪಸಂಖ್ಯಾತರನ್ನು ಒಲೈಸುವುದು ಸೇರಿದಂತೆ ಕೆಲವು ಪಕ್ಷಗಳನ್ನು ಒಗ್ಗೂಡಿಸಿಕೊಂಡು ಏನೇ ಮಾಡಿದರೂ ನಮ್ಮನ್ನು ಸೋಲಿಸಲಾಗದು.
ಸಿ ಎನ್‌ ಅಶ್ವಥ್‌ ನಾರಾಯಣ್‌, ಮಲ್ಲೇಶ್ವರಂ ಬಿಜೆಪಿ ಶಾಸಕ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿನ ೨೮ ಸ್ಥಾನಗಳ ಪೈಕಿ ಕಾಂಗ್ರೆಸ್‌ ೧೫ ಸ್ಥಾನ ಗೆದ್ದಿದ್ದು, ಬಿಜೆಪಿ ೧೧ಕ್ಕೆ ಕುಸಿದಿದೆ. ಜೆಡಿಎಸ್‌ ತನ್ನ ಎರಡು ಸ್ಥಾನ ಉಳಿಸಿಕೊಂಡಿದೆ. ಬಹುಮುಖ್ಯವಾಗಿ, ಸದಾನಂದಗೌಡರು ಪ್ರತಿನಿಧಿಸುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬರುವ ಎಂಟು ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ ಗೆದ್ದಿರುವುದು ಕೇವಲ ಒಂದು ಸ್ಥಾನ. ಇಲ್ಲಿ ಕಾಂಗ್ರೆಸ್‌ ಗಮನಾರ್ಹ ಸಾಧನೆ ಮಾಡಿದ್ದು, ೫ ಸ್ಥಾನ ಗೆದ್ದಿದೆ. ಜೆಡಿಎಸ್‌ ಹಿಂದೆ ಗೆದ್ದಿದ್ದ ಎರಡು ಸ್ಥಾನಗಳನ್ನು ಕಾಪಾಡಿಕೊಂಡಿದೆ. ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ಮೂವರು ಶಾಸಕರನ್ನು ಗೆಲ್ಲಿಸಿಕೊಂಡಿದ್ದವು. ‘ಬಿಜೆಪಿ ನಗರಮುಖಿ’ ಪಕ್ಷ ಎಂಬ ಸಾಂಪ್ರದಾಯಿಕ ನಂಬಿಕೆಗೆ ಹೊಡೆತ ಬಿದ್ದಿರುವುದು ಸದಾನಂದಗೌಡರನ್ನು ಚಿಂತಾಕ್ರಾಂತವಾಗಿಸಿದ್ದು, ಅವರಿಗೆ ಸೋಲಿನ ಭಯ ಕಾಡುವಂತೆ ಮಾಡಿರುವ ಸಾಧ್ಯತೆ ಇದೆ.

ಕಾಲಿಗೆ ಏಟಾಗಿದ್ದು, ಸುಧಾರಿಸಿಕೊಳ್ಳಲು ಇನ್ನೂ ನಾಲ್ಕೈದು ವಾರದ ವಿಶ್ರಾಂತಿ ಅಗತ್ಯವಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ಪರ್ಧೆ ಸೇರಿದಂತೆ ಯಾವುದೇ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಸ್ಥಾನಮಾನ ಕೇಳುವ ಸ್ಥಿತಿಯಲ್ಲೂ ನಾನಿಲ್ಲ.
ಜಯಪ್ರಕಾಶ್‌ ಹೆಗ್ಡೆ, ಬಿಜೆಪಿ ಮುಖಂಡ

೨೦೧೪ರ ಲೋಕಸಭಾ ಚುನಾವಣೆಯಲ್ಲಿ ಸದಾನಂದಗೌಡ ಶೇ.೫೨.೯೧ ಮತ ಪಡೆದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ನಾರಾಯಣಸ್ವಾಮಿ ಶೇ.೩೫.೯೯ ಹಾಗೂ ಜೆಡಿಎಸ್‌ ಶೇ.೬.೮೫ ಮತ್ತು ಬಿಎಸ್‌ಪಿ ಅಭ್ಯರ್ಥಿಗಳು ಶೇ.೦.೪೧ ಮತ ಪಡೆದಿದ್ದರು. ಸದಾನಂದಗೌಡರ ವಿರುದ್ಧ ಸ್ಪರ್ಧಿಸಿದ್ದ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಮತಗಳನ್ನು ಒಗ್ಗೂಡಿಸಿದರೂ ಶೇ.೪೨ ದಾಟುವುದಿಲ್ಲ. ಇದಕ್ಕೆ ಹೋಲಿಕೆ ಮಾಡಿದರೆ ಶೇ.೧೦ರಷ್ಟು ಹೆಚ್ಚು ಮತ ಪಡೆದಿದ್ದ ಸದಾನಂದಗೌಡರಿಗೆ ಈ ಬಾರಿಯ ರಾಜಕೀಯ ಸ್ಥಿತಿಯ ಅರಿವಿದೆ. ಮುಂದಿನ ವರ್ಷ ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿರುವುದು ಹಾಗೂ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರದ ಬಗ್ಗೆ ಜನರಲ್ಲಿ ಅಸಮಾಧಾನ ಹೊಗೆಯಾಡಲು ಆರಂಭವಾಗಿರುವ ಸುಳಿವನ್ನು ಅವರು ಗ್ರಹಿಸಿದಂತಿದೆ. ಬೆಂಗಳೂರು ಉತ್ತರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಒಮ್ಮತದಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿದ ಯುವಮುಖವನ್ನು ಕಣಕ್ಕಿಳಿಸುವ ಸುಳಿವು ಸದಾನಂದಗೌಡರಿಗೆ ಸಿಕ್ಕಂತಿದೆ. ಲೆಕ್ಕಾಚಾರದಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದಿರುವ ತುಳುನಾಡಿನ ಸದಾನಂದಗೌಡರು, ರಾಜಕೀಯ ಭವಿಷ್ಯವನ್ನು ಜೀವಂತವಾಗಿಟ್ಟುಕೊಳ್ಳಲು ಸರ್ಕಸ್‌ ಆರಂಭಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಪ್ರಶಸ್ತ ಸ್ಥಳ

ಹಿಂದುತ್ವದ ಪ್ರಯೋಗ ಶಾಲೆ, ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಕರಾವಳಿ ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಡಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ೭ ಸ್ಥಾನ ಗೆದ್ದಿದ್ದು, ಕಾಂಗ್ರೆಸ್‌ ೧ಕ್ಕೆ ಸೀಮಿತವಾಗಿದೆ. ಜೆಡಿಎಸ್‌ ಅಸ್ತಿತ್ವವೇ ಇಲ್ಲವಾಗಿದೆ. ಇಲ್ಲಿ ಅಭ್ಯರ್ಥಿಗಿಂತ ಪಕ್ಷವೇ ಮುಖ್ಯವಾಗುವುದರಿಂದ ಸದಾನಂದಗೌಡರಿಗೆ ಯಾವುದೇ ಪ್ರತಿರೋಧ ಇರುವುದಿಲ್ಲ. ಆದರೂ ಪಕ್ಷದ ಇಬ್ಬರು ಪ್ರಮುಖರು ಅವರಿಗೆ ವಿರುದ್ಧವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ‘ಬಿಜೆಪಿ ರೀತಿ ಅಲ್ಲ’ ಎನ್ನುವ ಕಾಂಗ್ರೆಸ್ ಸಂಸತ್ ಚುನಾವಣೆಗೆ ಹೇಗೆ ತಯಾರಾಗುತ್ತಿದೆ?

ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರೂ ಯಡಿಯೂರಪ್ಪ ಅವರಿಗೆ ದ್ರೋಹ ಬಗೆದರು ಎಂಬುದನ್ನು ಅಂತರಾಳದಲ್ಲಿ ಹುದುಗಿಸಿಕೊಂಡಿರುವ ಶೋಭಾ ಕರಂದ್ಲಾಜೆ ಹಾಗೂ ರಾಜಕೀಯ ಅಸ್ತಿತ್ವಕ್ಕಾಗಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಹಿರಿಯ ರಾಜಕಾರಣಿ ಜಯಪ್ರಕಾಶ್‌ ಹೆಗ್ಡೆ ಸವಾಲು ಗೌಡರಿಗಿದೆ. ಸದಾನಂದಗೌಡರ ವಿರುದ್ಧ ರಾಜಕೀಯ ಸೇಡು ಹೊಂದಿರುವ ಶೋಭಾ ಅವರು ತೆರೆಮರೆಯಲ್ಲಿ ಅವರ ಸೋಲಿಗೆ ಪ್ರಯತ್ನಿಸುವುದನ್ನು ತಳ್ಳಿಹಾಕಲಾಗದು. ಇನ್ನು, ಕಳೆದ ಚುನಾವಣೆಯಲ್ಲಿ ಶೋಭಾ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ೧.೮೧ ಲಕ್ಷ ಮತಗಳಿಂದ ಸೋತಿದ್ದ ಜಯಪ್ರಕಾಶ್‌ ಹೆಗ್ಡೆ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ. ಆದರೂ, ಸಂಭಾವಿತರಾದ ಜಯಪ್ರಕಾಶ್‌ ಹೆಗ್ಡೆ ಅವರ ಪ್ರತಿರೋಧವು ಸದಾನಂದಗೌಡರಿಗೆ ಅಡ್ಡಿ ಆಗದು. ಇದೇ ಮಾತನ್ನು ಶೋಭಾ ಅವರಿಗೆ ಹೇಳಲಾಗದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More