ಕುಟುಂಬ, ಜಾತಿ ಹೊರತಾದ ವಿವಾದಾತೀತ ದಳಪತಿಗಾಗಿ ಜೆಡಿಎಸ್‌ ಹುಡುಕಾಟ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಎ ಎಚ್‌ ವಿಶ್ವನಾಥ್‌ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಹೆಸರು ಪ್ರಬಲವಾಗಿ ಕೇಳಿಬಂದಿವೆ. ವಿಶ್ವನಾಥ್‌ ಅವರ ಅನಾರೋಗ್ಯ, ಮಧು ಬಂಗಾರಪ್ಪ ಅವರ ಅನನುಭವ ಇದಕ್ಕೆ ತಡೆಯಾಗಿದ್ದು, ಜೆಡಿಎಸ್‌ ಮುಂದಿನ ನಡೆ ಕುತೂಹಲ ಮೂಡಿಸಿದೆ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿಯ ಹುಡುಕಾಟ ಆರಂಭವಾಗಿದೆ. ಎಚ್‌ ಡಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದು, ಹಣಕಾಸು, ಇಂಧನ ಸೇರಿದಂತೆ ಸುಮಾರು ೧೧ ಖಾತೆಗಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕಾರ್ಯಭಾರದ ಒತ್ತಡ ಹೆಚ್ಚಿರುವುದರಿಂದ ಪಕ್ಷವನ್ನು ಮುನ್ನಡೆಸುವುದು ಕಷ್ಟವಾಗಲಿದೆ ಎಂದು ಕುಮಾರಸ್ವಾಮಿ ಅವರೇ ಈಚೆಗೆ ಪಕ್ಷದ ವೇದಿಕೆಯಲ್ಲಿ ವಿವರಿಸಿರುವುದರಿಂದ ಪಕ್ಷದ ಚುಕ್ಕಾಣಿಯನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಲೋಕಸಭಾ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು, ಸಮ್ಮಿಶ್ರ ಸರ್ಕಾರವನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬಲ್ಲ, ವಿವಾದಾತೀತ, ದೇವೇಗೌಡರ ಕುಟುಂಬ ಮತ್ತು ಒಕ್ಕಲಿಗ ಸಮುದಾಯದ ಹೊರತಾದ ಸಮರ್ಥ ನಾಯಕನನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಜೆಡಿಎಸ್‌ ವರಿಷ್ಠರಿಗೆ ಎದುರಾಗಿದೆ.

ಪಕ್ಷದ ಸಾರಥಿಯ ಬದಲಾವಣೆಯ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಕೆಲವರ ಹೆಸರುಗಳು ಮುಂಚೂಣಿಗೆ ಬಂದಿವೆ. ಮೈಸೂರು ಜಿಲ್ಲೆಯ ಹುಣಸೂರು ಶಾಸಕ, ಹಿರಿಯ ರಾಜಕಾರಣಿ ಎ ಎಚ್‌ ವಿಶ್ವನಾಥ್‌, ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿಜಿಆರ್‌ ಸಿಂಧ್ಯಾ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಮಧು ಬಂಗಾರಪ್ಪ, ಬಿ ಬಿ ನಿಂಗಯ್ಯ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದು, ದೇವೇಗೌಡರ ಮಾನಸ ಪುತ್ರ ಎಂದೇ ಬಿಂಬಿತವಾಗಿದ್ದ ವೈಎಸ್‌ವಿ ದತ್ತಾ ಅವರ ಹೆಸರೂ ಹರಿದಾಡುತ್ತಿದೆ. ಇದೆಲ್ಲದರ ಮಧ್ಯೆ, ಯಾರೇ ಅಧ್ಯಕ್ಷರಾದರೂ ಪಕ್ಷದ ಕೀಲಿಕೈ ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೈಯಲ್ಲೇ ಇರುವುದರಿಂದ ಅಧ್ಯಕ್ಷರಾಗುವುದು ವಿಶೇಷವಲ್ಲ ಎಂಬ ಮಾತುಗಳು ಬಲವಾಗಿ ಕೇಳಿಬಂದಿವೆ.

ಒಕ್ಕಲಿಗ ಬಾಹುಳ್ಯ ಪ್ರದೇಶವಾದ ಹಳೆಯ ಮೈಸೂರು ಭಾಗದಲ್ಲಿ ಪ್ರಭಾವ ಹೊಂದಿರುವ ಜೆಡಿಎಸ್‌ ಮೇಲೆ ಕೌಟುಂಬಿಕ ರಾಜಕಾರಣ ಮತ್ತು ಒಕ್ಕಲಿಗ ಸಮುದಾಯ ಕೇಂದ್ರಿತ ಪಕ್ಷ ಎಂಬ ಸಾಮಾನ್ಯ ಆರೋಪವಿದೆ. ಈ ಆರೋಪದಿಂದ ಹೊರಬರಲು ಜೆಡಿಎಸ್‌ ಪ್ರಯತ್ನಿಸಿದ್ದರೂ ಅದನ್ನು ಅಳಿಸಿಹಾಕುವುದು ಪಕ್ಷಕ್ಕೆ ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ಸಂಪುಟದಲ್ಲಿ ಜೆಡಿಎಸ್ ಪಾಲಿನಿಂದ ಮುಖ್ಯಮಂತ್ರಿ ಸೇರಿದಂತೆ ಏಳು ಮಂದಿ ಒಕ್ಕಲಿಗ ಸಮುದಾಯದವರೇ ಸಚಿವರಾಗಿರುವುದು ಈ ಆರೋಪವನ್ನು ಮತ್ತೊಮ್ಮೆ ದೃಢಪಡಿಸಿದೆ. ಇದನ್ನು ಸ್ವಲ್ಪಮಟ್ಟಿಗೆ ತೊಡೆದುಕೊಳ್ಳಲು ಪಕ್ಷವು ಅನಿವಾರ್ಯವಾಗಿ ದೇವೇಗೌಡರ ಕುಟುಂಬ ಹೊರತಾದ, ಒಕ್ಕಲಿಗೇತರ ಸಮುದಾಯದ ನಾಯಕನನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಿದೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿರುವ ಹೆಸರುಗಳಲ್ಲಿ ಕುರುಬ ಸಮುದಾಯದ ವಿಶ್ವನಾಥ್ ಮಾತ್ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರಿಸಿಬಂದಿದ್ದಾರೆ. ಉಳಿದಂತೆ ಮರಾಠಾ ಸಮುದಾಯದ ಪಿಜಿಆರ್‌ ಸಿಂಧ್ಯಾ, ಈಡಿಗ ಸಮುದಾಯದ ಮಧು ಬಂಗಾರಪ್ಪ, ಪರಿಶಿಷ್ಟ ಜಾತಿಯ ಬಲಗೈ ಪಂಗಡದ ನಿಂಗಯ್ಯ‌ ಹಾಗೂ ಬ್ರಾಹ್ಮಣ ಸಮುದಾಯದ ವೈಎಸ್‌ವಿ ದತ್ತಾ ಅವರು ಸೋತಿದ್ದಾರೆ. ಆದರೆ, ವಯೋಸಹಜವಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಿಶ್ವನಾಥ್ ಅವರಿಗೆ ರಾಜ್ಯಾದ್ಯಂತ ಓಡಾಡಿಕೊಂಡು ಪಕ್ಷ ಸಂಘಟನೆ ಮಾಡುವುದು ಕಷ್ಟಸಾಧ್ಯ ಎನ್ನುವ ಅಭಿಪ್ರಾಯವಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವರಾದ ವಿಶ್ವನಾಥ್‌ ಅವರು, "ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಆದರೆ, ವರಿಷ್ಠರು ಜವಾಬ್ದಾರಿ ವಹಿಸಿದರೆ ವಿಶಿಷ್ಟವಾಗಿ ನಿರ್ವಹಿಸುತ್ತೇನೆ. ಆರೋಗ್ಯ ಸಮಸ್ಯೆಯಿಂದ ರಾಜ್ಯಾದ್ಯಂತ ಸುತ್ತಾಡುವುದು ಕಷ್ಟ,” ಎಂದು ಒಪ್ಪಿಕೊಂಡಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ ಪಾಲುದಾರ ಪಕ್ಷವಾಗಿದ್ದು, ವಿಶ್ವನಾಥ್‌ ಹೆಸರು ತೇಲಿಬಿಟ್ಟಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರಗಳಿವೆ ಎನ್ನಲಾಗುತ್ತಿದೆ. ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರ ನಂತರ ಕುರುಬ ಸಮುದಾಯದವಿದೆ. ಕಳೆದ ಚುನಾವಣೆಯಲ್ಲಿ ಒಕ್ಕಲಿಗರು ಮತ್ತು ಕುರುಬರು ಸಂಪೂರ್ಣವಾಗಿ ತಮ್ಮ ಜಾತಿಯ ನಾಯಕರ ಪರವಾಗಿ ನಿಂತಿದ್ದರು. ಇದನ್ನು ಸಾಧ್ಯವಾದಷ್ಟು ಸರಿದೂಗಿಸಲು ಹಾಗೂ ಜೆಡಿಎಸ್‌ ಕುರುಬ ವಿರೋಧಿಯಲ್ಲ ಎಂಬ ಸಂದೇಶ ರವಾನಿಸಲು ಹಾಗೂ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ವಿರುದ್ಧ ವಿರಸ ಹೊಂದಿರುವ ವಿಶ್ವನಾಥ್‌ ಅವರನ್ನು ಆಯ್ಕೆಮಾಡುವ ರಾಜಕೀಯ ದಾಳ ಉರುಳಿಸುವ ತಂತ್ರವಿದೆ ಎನ್ನಲಾಗುತ್ತಿದೆ. ಇದರಾಚೆಗೆ ಕಾಂಗ್ರೆಸ್‌ನಲ್ಲಿ ಬಹುತೇಕ ರಾಜಕೀಯ ಜೀವನ ಮುಗಿಸಿರುವ ವಿಶ್ವನಾಥ್‌ ಅವರು ಮೈಸೂರು ಭಾಗದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದು, ಸರ್ಕಾರದಲ್ಲಿ ಸಚಿವ ಸ್ಥಾನ ಕಲ್ಪಿಸದೇ ಇರುವುದನ್ನು ಸರಿದೂಗಿಸಲು ಅವರಿಗೆ ರಾಜ್ಯ ಘಟಕದ ಸ್ಥಾನ ನೀಡಲು ಜೆಡಿಎಸ್‌ ನಾಯಕರು ನಿರ್ಧರಿಸಿರುವ ಸಾಧ್ಯತೆ ಇದೆ. ದೇವೇಗೌಡರ ಜೊತೆ ಉತ್ತಮ ಸಂಬಂಧ ಹೊಂದಿರುವುದು ವಿಶ್ವನಾಥ್ ಅವರ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ.

ಇನ್ನು ಕುಮಾರಸ್ವಾಮಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಯುವ ನಾಯಕ ಮಧು ಬಂಗಾರಪ್ಪ ಅವರ ಹೆಸರೂ ಜೆಡಿಎಸ್‌ ಅಧ್ಯಕ್ಷ ಸ್ಥಾನಕ್ಕೆ ಪ್ರಮುಖವಾಗಿ ಕೇಳಿಬಂದಿದೆ. ಹಿಂದುಳಿದ ವರ್ಗಗಳಲ್ಲಿ ಪ್ರಮುಖವಾದ ಈಡಿಗ ಸಮುದಾಯಕ್ಕೆ ಸೇರಿದ ಮಧು ಬಂಗಾರಪ್ಪ ಕಳೆದ ಚುನಾವಣೆಯಲ್ಲಿ ಸೊರಬ ಕ್ಷೇತ್ರದಲ್ಲಿ ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಪರಾಭವಗೊಂಡಿದ್ದರು. ಕಾಂಗ್ರೆಸ್‌ನಲ್ಲಿ ಈಡಿಗ ಸಮುದಾಯದ ಜಯಮಾಲಾ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯನ್ನಾಗಿ ಮಾಡಲಾಗಿದೆ. ಬಿಜೆಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕನ ಸ್ಥಾನ ಕಲ್ಪಿಸಲಾಗಿದೆ. ಜೆಡಿಎಸ್‌ನಲ್ಲಿ ಮಧು ಬಂಗಾರಪ್ಪ ಅವರಿಗೆ ಗುರುತರ ಜವಾಬ್ದಾರಿ ನೀಡಿದರೆ ದೀರ್ಘಾವಧಿಯಲ್ಲಿ ಪಕ್ಷಕ್ಕೆ ಅನುಕೂಲವಾಗಬಹುದು ಎಂಬುದು ಜೆಡಿಎಸ್‌ ನಾಯಕರ ಲೆಕ್ಕಾಚಾರ ಎನ್ನಲಾಗುತ್ತಿದೆ. ಆದರೆ, ರಾಜಕೀಯ ಸೂಕ್ಷ್ಮಗಳನ್ನು ಅರಿಯುವ ಕಲೆ ಸಿದ್ಧಿಸಿಕೊಂಡಿರದ ಮಧು ಬಂಗಾರಪ್ಪ ಅವರಿಗೆ ಸಮ್ಮಿಶ್ರ ಸರ್ಕಾರವಿರುವ ಸಂದರ್ಭದಲ್ಲಿ ಪಕ್ಷವನ್ನು ಜೋಪಾನವಾಗಿ ಮುನ್ನಡೆಸುವ ಚಾಣಾಕ್ಷತೆ ಇದೆಯೇ? ಸಮುದಾಯದ ಒಳಗೂ ಅವರು ಜನನಾಯಕರಾಗಿ ಗುರುತಿಸಿಕೊಂಡಿಲ್ಲದಿರುವುದು ಅವರ ವಿರುದ್ಧವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಮೀಸಲು ಕ್ಷೇತ್ರವಾದ ಮೂಡಿಗೆರೆಯಲ್ಲಿ ಪರಾಭವಗೊಂಡಿರುವ ಬಿ ಬಿ ನಿಂಗಯ್ಯ ಅವರ ಹೆಸರೂ ಜೆಡಿಎಸ್‌ ಸಾರಥಿ ಸ್ಥಾನಕ್ಕೆ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಮಾತನಾಡಿರುವ ೫೯ ವರ್ಷದ ನಿಂಗಯ್ಯ ಅವರು, "ಪಕ್ಷವು ಜವಾಬ್ದಾರಿ ನೀಡಿದರೆ ನಿಭಾಯಿಸಲು ಸಿದ್ಧನಿದ್ದೇನೆ. ಅಧ್ಯಕ್ಷರ ಆಯ್ಕೆಗೆ ಸಮಿತಿ ರಚಿಸಲಾಗುತ್ತದೆ. ಸಮಿತಿ ನೀಡುವ ವರದಿ ಆಧರಿಸಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ,” ಎಂದು ಅವರು ‘ದಿ ಸ್ಟೇಟ್‌’ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌-ಜೆಡಿಎಸ್‌ ಮೇಲಾಟಕ್ಕೆ ದಾಳ ಆಗಲಿದ್ದಾರೆಯೇ ಬಸವರಾಜ ಹೊರಟ್ಟಿ?

ದೇವೇಗೌಡರ ಆಪ್ತ ವಲಯದಲ್ಲಿರುವ ವೈಎಸ್‌ವಿ ದತ್ತಾ ಅವರ ಹೆಸರೂ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದೆ. ಆದರೆ, ದೇವೇಗೌಡರ ಕುಟುಂಬದೊಂದಿಗೆ ದತ್ತಾ ಅವರು ಮೊದಲಿನ ಬಾಂಧವ್ಯ ಉಳಿಸಿಕೊಂಡಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೂ ಜಾಣ್ಮೆಯಿಂದ ಕೆಲಸ ಮಾಡಬಲ್ಲ, ಕಾಂಗ್ರೆಸ್‌ನ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವ ದತ್ತಾ ಅವರನ್ನು ಆಯ್ಕೆ ಮಾಡುವುದರಿಂದ ಸಮ್ಮಿಶ್ರ ಸರ್ಕಾರದ ಕಾರ್ಯನಿರ್ವಹಣೆ ಮತ್ತಷ್ಟು ಸುಲಭ ಎನ್ನಲಾಗಿದೆ. ಉತ್ತಮ ವಾಗ್ಮಿಯಾದ ದತ್ತಾ ಅವರು ತಂತ್ರಗಾರಿಕೆ ರೂಪಿಸುವ ಛಾತಿಯನ್ನೂ ಹೊಂದಿದ್ದಾರೆ. ಆದರೆ, ಸಮುದಾಯದ ಬಲವಿಲ್ಲದ ದತ್ತಾ ಅವರಿಗೆ ಜೆಡಿಎಸ್‌ ಮಣೆಹಾಕುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಇದೆಲ್ಲದರ ನಡುವೆ ಅಧ್ಯಕ್ಷರ ನೇಮಕವೂ ಆಷಾಢ ಮಾಸ ಮುಗಿದ ಮೇಲೆ ನಡೆಯಲಿದೆ. ಬಹುತೇಕ ನಾಯಕರು ಅಧ್ಯಕ್ಷ ಸ್ಥಾನಕ್ಕೇರಲು ಆಸಕ್ತರಾಗಿಲ್ಲ ಎನ್ನುವ ವಿಚಾರವನ್ನು ಆಪ್ತರ ಜೊತೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದವರು ಒಂದಿಲ್ಲೊಂದು ಸಂಕಟಗಳಿಗೆ ಸಿಲುಕಿರುವ ಉದಾಹರಣೆಗಳೇ ಹೆಚ್ಚು. ಮಿರಾಜುದ್ದೀನ್‌ ಪಟೇಲ್‌ ಹಾಗೂ ಕೃಷ್ಣಪ್ಪ ಅವರು ವಿಧಿವಶರಾಗಿದ್ದು, ಕುಮಾರಸ್ವಾಮಿ ಅವರೂ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಕಾರ್ಯಕರ್ತರಲ್ಲಿ ಆತಂಕದ ಮಾತುಗಳಿಗೆ ಕಾರಣವಾಗಿದೆ. ಇದೆಲ್ಲ ಮೌಢ್ಯದ ವಿಚಾರವೆ ಆದರೂ ಪಕ್ಷದ ವರಿಷ್ಠರೇ ಕಾಲ, ಧರ್ಮ, ಜ್ಯೋತಿಷದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುವ ಸಂದರ್ಭದಲ್ಲಿ ಉಳಿದ ನಾಯಕರು, ಕಾರ್ಯಕರ್ತರಿಂದ ಇದಕ್ಕೆ ವಿರುದ್ಧವಾದ ನಿಲುವು ನಿರೀಕ್ಷಿಸುವುದು ತಪ್ಪಾಗಬಹುದೇನೋ!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More