ತನ್ನದೇ ಮಾಧ್ಯಮಗಳಿಗೆ ೧,೬೪೬ ಕೋಟಿ ರು. ಸರ್ಕಾರಿ ಜಾಹಿರಾತು ನೀಡಿದ ಕೆಸಿಆರ್!

ತೆಲಂಗಾಣ ಸಿಎಂ ಕೆಸಿಆರ್ ಕುಟುಂಬದ ‘ನಮಸ್ತೆ ತೆಲಂಗಾಣ’, ‘ತೆಲಂಗಾಣ ಟುಡೇ’ ಪತ್ರಿಕೆ, ‘ಟಿ ನ್ಯೂಸ್’ ಚಾನೆಲ್‌ಗೆ ಬರೋಬ್ಬರಿ ೧,೬೪೬ ಕೋಟಿ ಮೊತ್ತದ ಸರ್ಕಾರಿ ಜಾಹಿರಾತು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಕುರಿತು ‘ದಿ ವೈರ್’ ವರದಿ ಮಾಡಿದ್ದು, ಅದರ ಭಾವಾನುವಾದ ಇಲ್ಲಿದೆ

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಕುಟುಂಬ ಮುನ್ನಡೆಸುತ್ತಿರುವ ‘ನಮಸ್ತೆ ತೆಲಂಗಾಣ’, ‘ತೆಲಂಗಾಣ ಟುಡೇ’ ಪತ್ರಿಕೆ ಹಾಗೂ ‘ಟಿ ನ್ಯೂಸ್’ ಚಾನೆಲ್‌ಗೆ ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷದ ಸರ್ಕಾರ ಬರೋಬ್ಬರಿ ೧,೬೪೬.೬೯ ಕೋಟಿ ರು. ಮೊತ್ತದ ಮೊತ್ತದ ಸರ್ಕಾರಿ ಜಾಹಿರಾತು ನೀಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ, ಇದರ ಹಿಂದೆ ಸಿಎಂ ಕೆಸಿಆರ್ ಅವರ ಸ್ವಹಿತಾಸಕ್ತಿ, ಭ್ರಷ್ಟಾಚಾರ ಹಾಗೂ ಅಧಿಕಾರದ ದುರುಪಯೋಗ ಅಡಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ತೆಲಂಗಾಣಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕಾಗಿ ನಡೆಯುತ್ತಿದ್ದ ಚಳವಳಿ ಸಂದರ್ಭದಲ್ಲಿ ಕೆಸಿಆರ್ ಅವರು ೨೦೧೧ರ ಜೂನ್‌ನಲ್ಲಿ ‘ನಮಸ್ತೆ ತೆಲಂಗಾಣ’ ಪತ್ರಿಕೆಗೆ ಚಾಲನೆ ನೀಡಿದ್ದರು. ‘ತೆಲಂಗಾಣ ಪಬ್ಲಿಕೇಶನ್ ಪ್ರೈವೇಟ್ ಲಿಮಿಟೆಡ್’ ಈ ಪತ್ರಿಕೆಯನ್ನು ಪ್ರಕಟಿಸುತ್ತಿತ್ತು. ಈ ಪಬ್ಲಿಕೇಶನ್ ಮಂಡಳಿಯಲ್ಲಿ ಕೆಸಿಆರ್ ಮಗ ಕೆ ಟಿ ರಾಮ್ ರಾವ್ ಇದ್ದರು. ಕೆಸಿಆರ್ ಅವರು ತೆಲಂಗಾಣದ ಮುಖ್ಯಮಂತ್ರಿ ಆಗುತ್ತಿದ್ದಂತೆ ಅವರ ಮಗ ರಾಮ್ ರಾವ್ ಕೂಡ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅವರು ತೆಲಂಗಾಣ ಪಬ್ಲಿಕೇಶನ್ ಪ್ರೈವೇಟ್ ಲಿಮಿಟೆಡ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಈಗ ಆ ಮಂಡಳಿಯಲ್ಲಿ ರಾಮ್ ರಾವ್ ಅವರ ಪತ್ನಿ ಶೈಲಿನಿ ಕಲ್ವಾಕುಂಟ್ಲಾ ಹಾಗೂ ದಾಮೋದರ್ ರಾವ್ ದಿವಕೊಂಡ ಇದ್ದಾರೆ. ಇದೇ ಪಬ್ಲಿಕೇಶನ್ ಮತ್ತೊಂದು ಹೊಸ ಪತ್ರಿಕೆ ‘ತೆಲಂಗಾಣ ಟುಡೇ’ ಅನ್ನು ೨೦೧೬ರಲ್ಲಿ ಪ್ರಾರಂಭಿಸಿದೆ.

ತೆಲಂಗಾಣ ಪಬ್ಲಿಕೇಶನ್ ಪ್ರೈವೇಟ್ ಲಿಮಿಟೆಡ್‌ನಿಂದಲೇ ಕೆಸಿಆರ್ ಅವರು ದಾಮೋದರ ರಾವ್ ದಿವಕೊಂಡ, ಗಾಂಧ್ರಾ ಮೋಹನ್ ರಾವ್ ಹಾಗೂ ಸಂತೋಷ್ ಕುಮಾರ್ ಜೋಗಿನ್ಪಲ್ಲಿ ಅವರ ಸಹಭಾಗಿತ್ವದಲ್ಲಿ ‘ಟಿ ನ್ಯೂಸ್’ ಟಿವಿ ವಾಹಿನಿಯನ್ನು ೨೦೧೦ರ ಜನವರಿ ೧೨ರಂದು ಪ್ರಾರಂಭಿಸಿದ್ದರು. ತೆಲಂಗಾಣದ ಮುಖ್ಯಮಂತ್ರಿ ಆಗುತ್ತಿದ್ದಂತೆ ಕೆಸಿಆರ್ ಆ ಮಂಡಳಿಯ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ, ದಾಮೋದರ ರಾವ್ ದಿವಕೊಂಡ, ಗಾಂಧ್ರಾ ಮೋಹನ್ ರಾವ್ ಹಾಗೂ ಸಂತೋಷ್ ಕುಮಾರ್ ಜೋಗಿನ್ಪಲ್ಲಿ ಈ ಮಂಡಳಿಯಲ್ಲೇ ಮುಂದುವರಿದಿದ್ದಾರೆ. ಸಾರ್ವಜನಿಕ ದೃಷ್ಟಿಯಲ್ಲಿ ಈಗಲೂ ‘ಟಿ ನ್ಯೂಸ್’ ಕೆ ಚಂದ್ರಶೇಖರ್ ರಾವ್ ಅವರ ಮಾಧ್ಯಮವೆಂದೇ ಬಿಂಬಿಸಲ್ಪಟ್ಟಿದೆ.

ತೆಲಂಗಾಣ ಸರ್ಕಾರದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಡಿ ಆರ್‌ಟಿಐ ಮೂಲಕ ಈ ಮಾಹಿತಿ ಬಹಿರಂಗವಾಗಿದೆ. ಗಮನಾರ್ಹ ಸಂಗತಿ ಎಂದರೆ, ಕೆಸಿಆರ್ ನೇತೃತ್ವದ ಟಿಆರ್‌ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಸರ್ಕಾರವು ಮಾಧ್ಯಮಗಳಿಗೆ ನೀಡಿದ ಜಾಹಿರಾತು ವಿಚಾರದಲ್ಲಿ ಕುತೂಹಲಕರ ಸಂಗತಿಗಳು ಬೆಳಕಿಗೆ ಬಂದಿವೆ.

ಆರ್‌ಟಿಐ ಮಾಹಿತಿ ಪ್ರಕಾರ, ಸಿಎಂ ಕೆಸಿಆರ್ ಕುಟುಂಬ ಒಡೆತನದ ‘ನಮಸ್ತೆ ತೆಲಂಗಾಣ’ ಪತ್ರಿಕೆಗೆ ತೆಲಂಗಾಣ ಸರ್ಕಾರ ೨೦೧೬ರ ಏಪ್ರಿಲ್‌ನಿಂದ ೨೦೧೭ರ ಮಾರ್ಚ್‌ವರೆಗೂ ೨೬೨.೯ ಕೋಟಿ ರು. ಮೊತ್ತದ ಜಾಹಿರಾತು ನೀಡಿದೆ. ಈ ಪ್ರಮಾಣ ಮುಂದಿನ ವರ್ಷದಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚಾಗಿದ್ದು, ೨೦೧೭ರ ಏಪ್ರಿಲ್‌ನಿಂದ ೨೦೧೮ರ ಫೆಬ್ರವರಿವರೆಗೂ ೧,೨೮೧.೫ ಕೋಟಿ ರು. ಮೊತ್ತದ ಜಾಹಿರಾತನ್ನು ಇದೇ ಪತ್ರಿಕೆಗೆ ನೀಡಲಾಗಿದೆ. ೨೦೧೬-೧೭ಕ್ಕೆ ಹೋಲಿಸಿದರೆ ೨೦೧೭-೧೮ರಲ್ಲಿ ೧,೦೧೮.೫ ಕೋಟಿ ರು. ಮೊತ್ತದ ಜಾಹಿರಾತು ಹೆಚ್ಚಳವಾಗಿರುವುದನ್ನು ಗಮನಿಸಬಹುದು.

೨೦೧೬ರಲ್ಲಿ ಸ್ಥಾಪನೆಯಾದ ಕೆಸಿಆರ್ ಕುಟುಂಬ ಒಡೆತನದ ‘ತೆಲಂಗಾಣ ಟುಡೇ’ ಪತ್ರಿಕೆಗೆ ೨೦೧೬ರ ಏಪ್ರಿಲ್‌ನಿಂದ ೨೦೧೭ರ ಮಾರ್ಚ್‌ವರೆಗೂ ೪.೭ ಕೋಟಿ ರು. ಮೊತ್ತದ ಜಾಹಿರಾತು ನೀಡಲಾಗಿದೆ. ಇಲ್ಲಿಯೂ ಕೂಡ ಮುಂದಿನ ವರ್ಷದಲ್ಲಿ ಜಾಹಿರಾತು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ೨೦೧೭ರ ಏಪ್ರಿಲ್‌ನಿಂದ ೨೦೧೮ರ ಫೆಬ್ರವರಿವರೆಗೂ ೮೭.೩ ಕೋಟಿ ರು. ಮೊತ್ತದ ಜಾಹಿರಾತನ್ನು ತೆಲಂಗಾಣ ಸರ್ಕಾರ ನೀಡಿದೆ. ೨೦೧೬-೧೭ಕ್ಕೆ ಹೋಲಿಸಿದರೆ ೨೦೧೭-೧೮ರಲ್ಲಿ ೮೨.೬ ಕೋಟಿ ರು. ಮೊತ್ತದ ಜಾಹಿರಾತು ಹೆಚ್ಚಾಗಿದೆ. ಆದರೆ, ಇತರ ಪತ್ರಿಕೆಗಳಿಗೆ ಹೋಲಿಸಿದರೆ ಈ ಎರಡು ಪತ್ರಿಕೆಗಳಿಗೆ ತೆಲಂಗಾಣ ಸರ್ಕಾರ ಜಾಹಿರಾತು ನೀಡುವಲ್ಲಿ ವಿಶೇಷ ಆಸಕ್ತಿ ತೋರಿಸಿರುವುದು ಎದ್ದುಕಾಣುತ್ತದೆ.

ಇನ್ನುಳಿದ ತೆಲುಗು ಪತ್ರಿಕೆಗಳ ಪೈಕಿ ‘ಆಂಧ್ರಜ್ಯೋತಿ’ ಪತ್ರಿಕೆಗೆ ತೆಲಂಗಾಣ ಸರ್ಕಾರದಿಂದ ೨೦೧೬-೧೭ರಲ್ಲಿ ೪೫.೬ ಕೋಟಿ ರು. ಜಾಹಿರಾತು ಹೋಗಿದೆ. ೨೦೧೭-೧೮ರಲ್ಲಿ ಇದೇ ಪತ್ರಿಕೆಗೆ ಜಾಹಿರಾತು ಪ್ರಮಾಣವನ್ನು ಹೆಚ್ಚಿಸಿದ್ದು, ೨೦೭ ಕೋಟಿ ಮೊತ್ತದ ಜಾಹಿರಾತು ನೀಡಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ‘ಆಂಧ್ರಜ್ಯೋತಿ’ ಪತ್ರಿಕೆ ವೆಮುರಿ ರಾಧಾ ಕೃಷ್ಣ ಒಡೆತನದಲ್ಲಿದ್ದು, ಇವರು ಕೆಸಿಆರ್ ಅವರೊಂದಿಗೆ ದೀರ್ಘಾವಧಿಯ ಸಂಬಂಧ ಹೊಂದಿದ್ದಾರೆ. ಸಾರ್ವಜನಿಕ ವಲಯದಲ್ಲಿ ‘ಆಂಧ್ರಜ್ಯೋತಿ’ ಪತ್ರಿಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ (ತೆಲಗು ದೇಶಂ ಪಕ್ಷದ) ಪರವಾಗಿದೆ ಎಂಬ ಅಭಿಪ್ರಾಯ ಗುಟ್ಟಾಗಿ ಉಳಿದಿಲ್ಲ.

ಇನ್ನು ‘ಆಂಧ್ರಭೂಮಿ’ ಪತ್ರಿಕೆಗೆ ೨೦೧೬-೧೭ರಲ್ಲಿ ೯ ಕೋಟಿ ರು. ಜಾಹಿರಾತು ನೀಡಿದ್ದರೆ, ೨೦೧೭-೧೮ರಲ್ಲಿ ೧೧ ಕೋಟಿ ರು. ಮೊತ್ತದ ಜಾಹಿರಾತು ನೀಡಲಾಗಿದೆ. ಹಾಗೆಯೇ, ‘ಡೆಕ್ಕನ್ ಕ್ರಾನಿಕಲ್’ ಪತ್ರಿಕೆಗೆ ೨೦೧೬-೧೭ರಲ್ಲಿ ೨೪೬.೭ ಕೋಟಿ ರು. ಜಾಹಿರಾತು ನೀಡಿದ್ದರೆ, ೨೦೧೭-೧೮ರಲ್ಲಿ ೧೭೧.೮ ಕೋಟಿ ರು. ಜಾಹಿರಾತು ನೀಡಿದೆ. ೨೦೧೬-೧೭ಕ್ಕೆ ಹೋಲಿಸಿದರೆ ೨೦೧೭-೧೮ರಲ್ಲಿ ೭೪.೯ ಕೋಟಿ ರು. ಮೊತ್ತದ ಕಡಿಮೆ ಜಾಹಿರಾತು ನೀಡಲಾಗಿದೆ. ಈ ಎರಡು ಪತ್ರಿಕೆಗಳು ‘ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್’ ಅಡಿ ಪ್ರಸಾರವಾಗುತ್ತಿದೆ. ಈ ಪತ್ರಿಕೆಗಳ ಮಾಲೀಕ ಟಿಕ್ಕವರಪುಂ ವೆಂಕಟರಾಮ್ ರೆಡ್ಡಿ ಆಗಿದ್ದು, ಅವರು ಕಾಂಗ್ರೆಸ್ ಸಂಸದರಾಗಿದ್ದಾರೆ. ಸದ್ಯ ‘ಡೆಕ್ಕನ್ ಕ್ರಾನಿಕಲ್ ಗ್ರೂಪ್’ ಮಾರುಕಟ್ಟೆಯಲ್ಲಿ ಆರ್ಥಿಕ ಸವಾಲನ್ನು ಎದುರಿಸುತ್ತಿದೆ ಎನ್ನಲಾಗಿದೆ. ಇದಕ್ಕೆ ಕೆಸಿಆರ್ ಅವರ ಜಾಹಿರಾತು ತಾರತಮ್ಯ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಅಲ್ಲದೆ, ಸಿಪಿಐ (ಮಾರ್ಕ್ಸ್‌ವಾದಿ) ಮುನ್ನಡೆಸುತ್ತಿರುವ ‘ನವ ತೆಲಂಗಾಣ’ ಪತ್ರಿಕೆ ಕೂಡ ಕೆಸಿಆರ್ ಸರ್ಕಾರದ ಕೆಂಗೆಣ್ಣಿಗೆ ಗುರಿಯಾಗಿರುವುದನ್ನು ಕಾಣಬಹುದು. ೨೦೧೬-೧೭ರಲ್ಲಿ ಈ ಪತ್ರಿಕೆಗೆ ೧೭.೯ ಕೋಟಿ ಮೊತ್ತದ ಜಾಹಿರಾತು ಬಂದಿದ್ದರೆ, ೨೦೧೭-೧೮ರಲ್ಲಿ ಅದು ೫.೮ ಕೋಟಿ ರು.ಗೆ ಸೀಮಿತವಾಗಿದೆ. ಸಿಪಿಐ ಮುನ್ನಡೆಸುತ್ತಿರುವ ‘ಮನ ತೆಲಂಗಾಣ’ ಪತ್ರಿಕೆ ಕೂಡ ತೆಲಂಗಾಣ ಸರ್ಕಾರದ ಜಾಹಿರಾತು ತಾರತಮ್ಯ ನೀತಿಗೆ ಒಳಗಾಗಿದೆ. ಈ ಪತ್ರಿಕೆಗೆ ೨೦೧೬-೧೭ರಲ್ಲಿ ೪೭.೮ ಕೋಟಿ ಮೊತ್ತದ ಜಾಹಿರಾತು ನೀಡಿದ್ದರೆ, ೨೦೧೭-೧೮ರಲ್ಲಿ ಕೇವಲ ೫.೭ ಕೋಟಿ ರು. ಮೊತ್ತದ ಜಾಹಿರಾತು ಕೊಡಲಾಗಿದೆ. ಪರಿಣಾಮ, ಪತ್ರಿಕೆ ಸಂಪಾದಕ ಶ್ರೀನಿವಾಸ ರೆಡ್ಡಿ ಸಂಪಾದಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಇದನ್ನೂ ಓದಿ : ತೆಲಂಗಾಣ ಸಿಎಂ ಕೆಸಿಆರ್ ಕೇಂದ್ರದ ವಿರುದ್ಧ ದಿಢೀರನೆ ಸಿಡಿದೇಳಲು ಏನು ಕಾರಣ?

ತೆಲಂಗಾಣ ಸರ್ಕಾರದ ಜಾಹಿರಾತು ಹಂಚಿಕೆಯ ತಾರತಮ್ಯ ನೀತಿಯಿಂದ ಬಹುತೇಕ ಪತ್ರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಇಂಗ್ಲಿಷ್ ಭಾಷೆಯ ಪತ್ರಿಕೆಗಳನ್ನು ಹೊರತುಪಡಿಸಿದರೆ ಹಿಂದಿ, ಉರ್ದು ಭಾಷೆಯ ಪತ್ರಿಕೆಗಳು ಭಾಷಾ ತಾರತಮ್ಯಕ್ಕೆ ಒಳಗಾಗಿವೆ. ‘ಬಿಸ್ನೆಸ್ ಸ್ಟಾಂಡರ್ಡ್’, ‘ಟೆಲಿಗ್ರಾಫ್’ ಹಾಗೂ ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಗಳಿಗಂತೂ ೨೦೧೭-೧೮ರಲ್ಲಿ ತೆಲಂಗಾಣ ಸರ್ಕಾರ ಜಾಹಿರಾತುಗಳನ್ನೇ ನೀಡಿಲ್ಲ! ಆದರೆ, ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಗೆ ಮಾತ್ರ ಕೇವಲ ೩.೬ ಲಕ್ಷ ರು. ಮೊತ್ತದ ಜಾಹಿರಾತು ನೀಡಲಾಗಿದೆ.

ದೃಶ್ಯಮಾಧ್ಯಮಗಳ ವಿಚಾರದಲ್ಲೂ ತೆಲಂಗಾಣ ಸರ್ಕಾರದ ಜಾಹಿರಾತು ಹಂಚಿಕೆ ತಾರತಮ್ಯ ಕಣ್ಣಿಗೆ ರಾಚುತ್ತದೆ. ಕೆಸಿಆರ್ ಒಡೆತನದಲ್ಲಿ ಮೊದಲಿಗೆ ಆರಂಭಿಸಲ್ಪಟ್ಟಿದ್ದ ‘ಟಿ ನ್ಯೂಸ್’ ಚಾನಲ್‌ಗೆ ೨೦೧೭ರ ಜ.೧ರಿಂದ ೨೦೧೮ರ ಮೇ ೧೦ರವರೆಗೂ ಒಟ್ಟು ೨೧೯.೫ ಲಕ್ಷ ರು. ಜಾಹಿರಾತು ನೀಡಲಾಗಿದೆ. ಉಳಿದ ಚಾನೆಲ್‌ಗಳಿಗೆ ಹೋಲಿಸಿದರೆ, ‘ಟಿ ನ್ಯೂಸ್’ ಚಾನೆಲ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಜಾಹಿರಾತು ನೀಡಲಾಗಿದೆ. ಒಟ್ಟಾರೆ, ಕೆಸಿಆರ್ ನೇತೃತ್ವದ ಸರ್ಕಾರವು ಕುಟುಂಬ ಹಾಗೂ ತನ್ನ ಒಡನಾಡಿ ಉದ್ಯಮಿಗಳ ಮಾಧ್ಯಮ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ ತೆರಿಗೆ ಹಣವನ್ನು ಜಾಹಿರಾತು ರೂಪದಲ್ಲಿ ಹರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೆ, ಕೆಸಿಆರ್ ಅವರ ಸ್ವಜನ ಪಕ್ಷಪಾತ ಎದ್ದುಕಾಣುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More