ರಾಹುಲ್ ಮುಂದಿದೆ ಕಾರ್ಯಕಾರಿಣಿ ಒಡ್ಡಿದ ಪರೀಕ್ಷೆ ಗೆಲ್ಲುವ ಸವಾಲು

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಜಕೀಯ ಆರೋಪ-ಪ್ರತ್ಯಾರೋಪ, ಅವರ ಭಕ್ತರ ಪಡೆಯ ಅಪಪ್ರಚಾರಗಳನ್ನು ಮಣಿಸಿ ದೇಶದ ಜನರ ಮುಂದೆ ಭರವಸೆಯ ಪರ್ಯಾಯ ಆಯ್ಕೆಯನ್ನು ಪ್ರಬಲವಾಗಿ ಮುಂದಿಡುವ ಕಠಿಣ ಸವಾಲು ಈಗ ರಾಹುಲ್ ಗಾಂಧಿಯವರ ಮುಂದಿದೆ

ಮೊನ್ನೆ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಕಲಾಪದಲ್ಲಿನ ತನ್ನ ನಾಯಕನ ಮಾತು, ಅಪ್ಪುಗೆ ಹಾಗೂ ಆ ಬಳಿಕದ ರಾಷ್ಟ್ರವ್ಯಾಪಿ ಚರ್ಚೆಗಳಿಂದ ಸ್ಫೂರ್ತಿ ಪಡೆದಂತಿರುವ ಕಾಂಗ್ರೆಸ್, ಮುಂದಿನ ಚುನಾವಣೆಗೆ ರಾಹುಲ್ ಗಾಂಧಿಯವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ತೀರ್ಮಾನಿಸಿದೆ. ಜೊತೆಗೆ, ಮಂದಿನ ಚುನಾವಣೆಯ ಮೈತ್ರಿ ಕುರಿತ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಕೂಡ ಪಕ್ಷದ ಅಧ್ಯಕ್ಷರಿಗೇ ನೀಡಿದೆ.

ಭಾನುವಾರ ನಡೆದ ಪಕ್ಷದ ವಿಶೇಷ ಕಾರ್ಯಕಾರಿಣಿಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಎಐಸಿಸಿ ಪುನರ್‌ ರಚನೆಯ ಬಳಿಕ ನಡೆದ ಐದು ತಾಸುಗಳ ಈ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಮತ್ತು ಪಕ್ಷದ ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಪಕ್ಷದ ಭವಿಷ್ಯದ ಚುನಾವಣಾ ತಂತ್ರಗಾರಿಕೆ ಮತ್ತು ಬಲವರ್ಧನೆಯ ನಿಟ್ಟಿನಲ್ಲಿ ಪ್ರಮುಖವಾಗಿ ಈ ಕಾರ್ಯಕಾರಣಿಯಲ್ಲಿ ಚರ್ಚಿಸಲಾಗಿದ್ದು, ೨೦೧೯ರ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರ್ಯಾಯವಾಗಿ ಕಾಂಗ್ರೆಸ್ಸಿನ ಮುಖವಾಗಿ ರಾಹುಲ್ ಅವರನ್ನೇ ಬಿಂಬಿಸಲು ತೀರ್ಮಾನಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಮಟ್ಟಿಗೆ ಸದ್ಯಕ್ಕೆ ಇರುವ ಆಯ್ಕೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಈ ನಿರ್ಧಾರದ ಹೊರತು ಹೆಚ್ಚಿನ ಆಯ್ಕೆಗಳು ಇರಲಿಲ್ಲ. ಆದರೆ, ಬಿಜೆಪಿ ವಿರೋಧಿ ಮೈತ್ರಿಕೂಟದ ವಿಷಯದಲ್ಲಿ ಕಾಂಗ್ರೆಸ್ ಕಡೆಯಿಂದ ಸಂಪೂರ್ಣ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಇಡಿಯಾಗಿ ರಾಹುಲ್ ಅವರಿಗೆ ವಹಿಸಿರುವುದು ಮಾತ್ರ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ.

ರಾಷ್ಟ್ರಮಟ್ಟದಲ್ಲಿ ಮೋದಿ ಪಡೆಯ ದಂಡಯಾತ್ರೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್ಪಿ ನಾಯಕಿ ಮಾಯಾವತಿ, ಜೆಡಿಎಸ್ ನಾಯಕ ಎಚ್ ಡಿ ದೇವೇಗೌಡ ಸೇರಿದಂತೆ ಕಾಂಗ್ರೆಸ್ ನೇತೃತ್ವದ ಯುಪಿಎ ಹೊರಗಿನ ಪ್ರಭಾವಿ ಪಕ್ಷಗಳ ನಾಯಕರ ನಡುವೆ ಬಿರುಸಿನ ರಾಜಕೀಯ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ, ಸ್ಟಾಲಿನ್ ಅವರ ಡಿಎಂಕೆ, ತೇಜಸ್ವಿ ಯಾದವ್ ಅವರ ಆರ್‌ಜೆಡಿ, ಅಖಿಲೇಶ್ ಯಾದವ್ ಅವರ ಎಸ್ಪಿ ಮತ್ತಿತರ ಪಕ್ಷಗಳು ಕೂಡ ಅಂತಹ ಪರ್ಯಾಯ ರಂಗಕ್ಕೆ ತಿದಿಯೊತ್ತುತ್ತಿವೆ.

ಇಂತಹ ಘಟಾನುಘಟಿ ನಾಯಕರ ಗುರಿ ಒಂದೇ ಆಗಿದ್ದರೂ, ಅವರೆಲ್ಲರ ಸದ್ಯದ ಸಮಾನ ರಾಜಕೀಯ ವೈರಿ ಒಬ್ಬರೇ ಎಂಬುದನ್ನು ಹೊರತುಪಡಿಸಿ, ಉಳಿದಂತೆ ತತ್ವ, ಸಿದ್ಧಾಂತ, ಪ್ರಾದೇಶಿಕತೆ, ರಾಜಕೀಯ ಗುರಿ ಮತ್ತು ಉದ್ದೇಶ ಸೇರಿದಂತೆ ಯಾವ ವಿಷಯದಲ್ಲಿಯೂ ಪರಸ್ಪರರ ನಡುವೆ ಸಮಾನ ರಾಜಕೀಯ ಹಿತಾಸ್ತಕಿಗಳು ಕಾಣುತ್ತಿಲ್ಲ. ಮೋದಿ ಎಂಬ ಬೆದರುಬೊಂಬೆಯೊಂದನ್ನೇ ಇಟ್ಟುಕೊಂಡು ಈ ಎಲ್ಲ ನಾಯಕರನ್ನು ಒಗ್ಗೂಡಿಸಿ, ಪ್ರಬಲ ಪರ್ಯಾಯ ರಂಗವನ್ನು ಕಟ್ಟಲು ಅಗತ್ಯವಾದ ರಾಜಕೀಯ ಅನುಭವ ಮತ್ತು ಹಿರಿತನಗಳೆರಡೂ ರಾಹುಲ್ ಅವರಲ್ಲಿ ಸದ್ಯಕ್ಕಂತೂ ಕಾಣುತ್ತಿಲ್ಲ. ಅವರ ಹೊಂದಾಣಿಕೆಯ ಗುಣ ಮತ್ತು ಪ್ರಾಮಾಣಿಕತೆಯ ಬಲದ ಮೇಲೆಯೇ ಇಂತದ್ದೊಂದು ಮಹತ್ಕಾರ್ಯ ಸಾಧ್ಯವಾಗಲಿದೆ ಎಂಬ ಬಗ್ಗೆ ಭರವಸೆ ಇಲ್ಲ. ಹಾಗಾಗಿ, ಪಕ್ಷದ ಮಟ್ಟಿಗೆ ಅವರಿಗೆ ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಮೈತ್ರಿಯ ನಿರ್ಧಾರದ ಅಧಿಕಾರ ಸಮಂಜವೆನಿಸಿದರೂ, ಸದ್ಯದ ರಾಷ್ಟ್ರ ರಾಜಕೀಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಪರ್ಯಾಯವಾಗಿ ರಾಜಕೀಯ ರಂಗವೊಂದನ್ನು ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ರಾಹುಲ್ ಎಷ್ಟರಮಟ್ಟಿಗೆ ಮುಂಚೂಣಿಯಲ್ಲಿರಬಲ್ಲರು ಎಂಬುದು ಪ್ರಶ್ನಾರ್ಹವೇ.

ಇದನ್ನೂ ಓದಿ : ಅಳೆದು ತೂಗಿ ರಚಿಸಿದ ರಾಹುಲ್ ನೇತೃತ್ವದ ಸಿಡಬ್ಲ್ಯುಸಿ ಸಾರಿರುವ ಸಂದೇಶವೇನು?

ದೇಶದ ಪ್ರಜಾಪ್ರಭುತ್ವ ಮತ್ತು ನಾಗರಿಕರ ಸಂವಿಧಾನಿಕ ಹಕ್ಕುಗಳಿಗೆ ಅಪಾಯ ಬಂದೊಗಿದೆ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಹುಲ್ ಅವರೊಂದಿಗೆ ಹೆಗಲು ಕೊಡುವುದಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕಾರ್ಯಕಾರಣಿಯಲ್ಲಿ ಭರವಸೆ ನೀಡಿದ್ದಾರೆ. ಆದರೆ, ಆ ಬೆಂಬಲ ಪಕ್ಷದ ಆಂತರಿಕ ವಿದ್ಯಮಾನಗಳ ಆಚೆಗೆ ರಾಷ್ಟ್ರದ ಇತರ ಬಿಜೆಪಿಯೇತರ ಪ್ರಭಾವಿ ನಾಯಕರನ್ನು ಒಗ್ಗೂಡಿಸುವ ವಿಷಯದಲ್ಲಿ ಎಷ್ಟರಮಟ್ಟಿಗೆ ರಾಹುಲ್ ಅವರಿಗೆ ಒದಗಿಬರಲಿದೆ ಎಂಬುದು ಕೂಡ ಕಾದುನೋಡಬೇಕಾದ ಸಂಗತಿ.

ಈ ನಡುವೆ, ಬಿಜೆಪಿಯಂತೆಯೇ ಕಾಂಗ್ರೆಸ್ಸನ್ನೂ ಸಮಾನ ಅಂತರದಲ್ಲಿಟ್ಟು ಪರ್ಯಾಯ ರಾಜಕೀಯ ರಂಗ ಕಟ್ಟಬೇಕೆಂಬ ಪ್ರಯತ್ನಗಳು ಕೂಡ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ನೇತೃತ್ವದಲ್ಲಿ ಆರಂಭಗೊಂಡಿವೆ. ಇಂತಹ ಬೆಳವಣಿಗೆ, ಬಿಜೆಪಿ ಮತ್ತು ಮೋದಿಯ ಓಟಕ್ಕೆ ಕಡಿವಾಣ ಹಾಕುವ ಕಾಂಗ್ರೆಸ್ ಮತ್ತಿತರ ಮಿತ್ರಪಕ್ಷಗಳ ಉದ್ದೇಶಕ್ಕೆ ನಿಜವಾಗಿಯೂ ಹಿನ್ನೆಡೆ ತರಲಿದೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಪಡೆಯ ಮುಂದಿರುವ ಮೊದಲ ಸವಾಲು ಮೂರನೇ ಬಣದ ಉದ್ದೇಶದಲ್ಲಿರುವ ನಾಯಕರನ್ನು ಹೇಗೆ ಮನವೊಲಿಸಲಿದ್ದಾರೆ? ಅಂತಹ ಪ್ರಯತ್ನದಲ್ಲಿ ಯಶಸ್ವಿಯಾಗುವರೇ? ಎಂಬುದು.

ಒಂದು ವೇಳೆ, ಸಮಾನ ಮನಸ್ಕ ಪಕ್ಷಗಳು ಒಂದಾಗದೇ ಇದ್ದಲ್ಲಿ, ಕಾಂಗ್ರೆಸ್ ನೇತೃತ್ವದ ಬಣದೊಂದಿಗೆ, ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ಮೂರನೇ ಬಣವೊಂದು ಅಸ್ತಿತ್ವಕ್ಕೆ ಬಂದಲ್ಲಿ; ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅದು ಬಿಜೆಪಿ ಮತ್ತು ಮೋದಿಗೆ ವರವಾಗುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡಿನಂತಹ ಕಾಂಗ್ರೆಸ್ ಪ್ರಾಬಲ್ಯವಿರದ ರಾಜ್ಯಗಳಲ್ಲಿ ಖಂಡಿತವಾಗಿಯೂ ಅದು ಬಿಜೆಪಿ ಪಾಲಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ ಪರಸ್ಪರ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾಗಿರುವ, ಕೆಲವು ಕಡೆ ತೀರಾ ಸೇಡಿನ ರಾಜಕಾರಣದ ಮೂಲಕವೇ ಅಸ್ತಿತ್ವ ಉಳಿಸಿಕೊಂಡಿರುವ ಈ ನಾಯಕರನ್ನು ಒಗ್ಗೂಡಿಸಿ, ಮನವೊಲಿಸಿ ಒಂದೇ ವೇದಿಕೆಯಡಿ ತರುವುದು ರಾಜಕೀಯವಾಗಿ ಸರಳ ಸವಾಲೇನಲ್ಲ.

ಇದು ರಾಹುಲ್ ಗಾಂಧಿಗೆ ಸದ್ಯಕ್ಕೆ ಇರುವ ಪಕ್ಷದ ಆಚೆಯ ರಾಷ್ಟ್ರ ರಾಜಕಾರಣದ ಸವಾಲು. ಜೊತೆಗೆ, ಪಕ್ಷದಲ್ಲಿಯೂ ಆಂತರಿಕವಾಗಿ ಅವರ ಎದುರು ದೊಡ್ಡ ಸವಾಲುಗಳ ಸರಮಾಲೆಯೇ ಇದೆ ಎಂಬುದನ್ನು ಕೂಡ ಅವರು ಮರೆಯುವಂತಿಲ್ಲ. ಬಿಜೆಪಿಯ ಚುನಾವಣಾ ತಂತ್ರಗಾರಿಕೆ, ತಳಮಟ್ಟದ ಪ್ರಬಲ ಕಾರ್ಯಕರ್ತರ ಪಡೆಗಳಿಗೆ ಪರ್ಯಾಯವಾಗಿ ಕಾಂಗ್ರೆಸ್‌ ಸದ್ಯಕ್ಕೆ ದುರ್ಬಲ ತಂತ್ರಗಾರಿಕೆ ಮತ್ತು ಉತ್ಸಾಹಿ ಕಾರ್ಯಕರ್ತರ ಕೊರತೆಯ ನಡುವೆ ಬಸವಳಿದಿದೆ. ಗುಜರಾತ್ ವಿಧಾನಸಭಾ ಚುನಾವಣೆಯ ಬಳಿಕ ರಾ‍‍ಷ್ಟ್ರಮಟ್ಟದಲ್ಲಿ ಒಂದಿಷ್ಟು ಉತ್ಸಾಹ ಕಂಡುಬಂದಿತ್ತು. ಆದರೆ, ಕರ್ನಾಟಕದಲ್ಲಿ ಉತ್ತಮ ಆಡಳಿತ ಮತ್ತು ಹಗರಣರಹಿತ ಸರ್ಕಾರದ ಹೊರತಾಗಿಯೂ ಅದು ನಿರೀಕ್ಷಿತ ಸ್ಥಾನ ಗಳಿಕೆಯಲ್ಲಿ ಸೋತಿತು. ಹಾಗಾಗಿ, ಮತ್ತೆ ರಾಷ್ಟ್ರಮಟ್ಟದಲ್ಲಿ ಅದರ ವರ್ಚಸ್ಸು ಸೊರಗಿದೆ. ಪರಿಣಾಮವಾಗಿ ಕಾರ್ಯಕರ್ತರ ನಡುವೆಯೂ ಅಷ್ಟೇನೂ ಉತ್ಸಾಹ ಕಾಣುತ್ತಿಲ್ಲ.

ಆ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬುವ ನಿಟ್ಟಿನಲ್ಲಿ ರಾಹುಲ್ ಏನು ಮಾಡಲಿದ್ದಾರೆ? ಯಾವ ಸಂಘಟನಾ ಚಾತುರ್ಯ ಮೆರೆಯಲಿದ್ದಾರೆ ಎಂಬುದು ಕೂಡ ಕುತೂಹಲ ಹುಟ್ಟಿಸಿದೆ. ಏಕೆಂದರೆ, ಪ್ರತಿ ಬೂತ್ ಮಟ್ಟದಲ್ಲೂ ಚುನಾವಣೆಯನ್ನು ಸಾಕ್ಷಾತ್ ಸಮರದಂತೆ ಸೆಣೆಸುವ ಪ್ರಬಲ ಪಡೆಯನ್ನು ಬಿಜೆಪಿ ಹೊಂದಿದ್ದು, ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅದರ ಉತ್ತಮ ಪ್ರದರ್ಶನಕ್ಕೆ ಪ್ರಬಲ ಕಾರಣವೇ ಆ ಕಾರ್ಯಕರ್ತರ ಪಡೆ ಎಂಬುದು ಈಗ ಗುಟ್ಟೇನು ಅಲ್ಲ. ಪ್ರತಿ ೨೫-೩೦ ಮತದಾರರಿಗೆ ಒಬ್ಬೊಬ್ಬ ಕಾರ್ಯಕರ್ತರನ್ನು ಉಸ್ತುವಾರಿಗೆ ನೇಮಕ ಮಾಡಿ ಆರು ತಿಂಗಳಿನಿಂದ ನಿರಂತರ ಸಂಪರ್ಕದ ಮೂಲಕ ಬಿಜೆಪಿ ಭಾರತೀಯ ಚುನಾವಣಾ ಇತಿಹಾಸದಲ್ಲೇ ಕಂಡುಕೇಳರಿಯದ ಮಟ್ಟಿಗಿನ ತಳಮಟ್ಟದ ತಂತ್ರಗಾರಿಕೆ ರೂಪಿಸಿತ್ತು.

ಅಂತಹ ತಂತ್ರಗಾರಿಕೆಯ ಪರಿಣತರ ಎದುರು ರಾಹುಲ್ ಗಾಂಧಿಯವರ ನೇತೃತ್ವದ ಹೊಸ ಕಾಂಗ್ರೆಸ್, ನಿಜವಾಗಿಯೂ ತನ್ನ ಚುನಾವಣಾ ತಂತ್ರಗಾರಿಕೆಯಲ್ಲಿ, ಪಕ್ಷದ ತಳಮಟ್ಟದ ಸಂಘಟನೆಯಲ್ಲಿ ಹೊಸತನ ಮೆರೆಯಲಿದೆಯೇ? ಮೋದಿ ಮತ್ತು ಅಮಿತ್ ಶಾ ಜೋಡಿಗೆ ಪರ್ಯಾಯವಾಗಿ ಹೊಸ ಹವಾ ಎಬ್ಬಿಸುವ ಚಾಣಾಕ್ಷತೆಯನ್ನು ರಾಹುಲ್ ತೋರಲಿದ್ದಾರೆಯೇ ಎಂಬುದು ಕೂಡ ಇನ್ನೂ ಸ್ಪಷ್ಟ ಉತ್ತರ ಕಾಣದ ಪ್ರಶ್ನೆಯಾಗಿಯೇ ಇದೆ.

ಜೊತೆಗೆ, ಮುಂದಿನ ಆರು ತಿಂಗಳ ಅವಧಿಯಲ್ಲಿ ರಾಷ್ಟ್ರರಾಜಕಾರಣದ ಮೋದಿಯವರಿಗೆ ಪರ್ಯಾಯ ಸಮರ್ಥ ನಾಯಕರಾಗಿ ಪೂರ್ಣಪ್ರಮಾಣದಲ್ಲಿ ರಾಹುಲ್ ಹೊರಹೊಮ್ಮುವರೇ? ಅಥವಾ ಒಂದು ವೇಳೆ ಕಾಂಗ್ರೆಸ್ ಬಹುಮತ ಪಡೆಯದೇ ಹೋದರೆ, ಬಿಜೆಪಿಯೇತರ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಒಮ್ಮತದ ಅಭ್ಯರ್ಥಿಯನ್ನು ನಿರ್ಧರಿಸುವ ನಿಟ್ಟಿನಲ್ಲಿ ಅವರು ಪ್ರಧಾನ ಪಾತ್ರ ವಹಿಸಲಿದ್ದಾರೆಯೇ? ಆಗ ಎದುರಾಗಬಹುದಾದ ಪೈಪೋಟಿ ಮತ್ತು ಪರಸ್ಪರ ರಾಜಕೀಯ ಗುದ್ದಾಟವನ್ನು ನಿಭಾಯಿಸುವ ಮಟ್ಟಿನ ರಾಜಕೀಯ ಚಾಣಾಕ್ಷತೆ ಮೆರೆಯಲು ರಾಹುಲ್ ಶಕ್ತರೇ?

ಹೀಗೆ ಸಾಲುಸಾಲು ಪ್ರಶ್ನೆಗಳ ನಡುವೆ, ಕಾಂಗ್ರೆಸ್ ಕಾರ್ಯಕಾರಿಣಿ ವಹಿಸಿರುವ ಹೊಸ ಹೊಣೆಗಾರಿಕೆಗೆ ಹೆಗಲು ಕೊಟ್ಟಿದ್ದಾರೆ. ಮೋದಿ ಮತ್ತು ಬಿಜೆಪಿಯ ರಾಜಕೀಯ ಆರೋಪ-ಪ್ರತ್ಯಾರೋಪಗಳು, ಅವರ ಭಕ್ತರ ಪಡೆಯ ಟ್ರೋಲ್, ಅಪಪ್ರಚಾರ, ಫೇಕ್‌ ನ್ಯೂಸ್‌ಗಳ ತಂತ್ರಗಳನ್ನು ಮಣಿಸಿ ಪಕ್ಷವನ್ನು ಚುನಾವಣೆಯಲ್ಲಿ ಸಮರ್ಥವಾಗಿ ಮುನ್ನಡೆಸಿ, ಬಹುಮತದ ಹೊಸ್ತಿಲು ಮುಟ್ಟಿಸುವ ಅಥವಾ ಮೈತ್ರಿಕೂಟದ ಮೂಲಕ ದೇಶದ ಜನರ ಮುಂದೆ ಭರವಸೆಯ ಪರ್ಯಾಯ ಆಯ್ಕೆಯನ್ನು ಪ್ರಬಲವಾಗಿ ಮುಂದಿಡುವ ಆ ಕಠಿಣ ಸವಾಲು ಬಹುಶಃ ಅವರ ರಾಜಕೀಯ ಜೀವನದ ಬಹುದೊಡ್ಡ ಪರೀಕ್ಷೆ. ಅದನ್ನು ಹೇಗೆ ಎದುರಿಸುತ್ತಾರೆ ಎಂಬುದಷ್ಟೇ ಸದ್ಯಕ್ಕೆ ಉಳಿದಿರುವ ಕುತೂಹಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More