ಅನಂತ ಕುಮಾರ್ ಹೆಗಡೆಯನ್ನು ಕಂಡಲ್ಲಿ ಅಪ್ಪಿಕೊಳ್ಳುವ ಚಳವಳಿ ನಡೆಸಿದರೆ ಹೇಗೆ?

ದ್ವೇಷಭಾಷಣದಲ್ಲಿ ಮುಂಚೂಣಿ ಕಾಯ್ದುಕೊಂಡಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯವರ ಜಿಹ್ವ್ಯಾಸ್ತ್ರ ಗಾಂಧೀಜಿಯತ್ತ ತಿರುಗಿದೆ. ಅಳಿದುಳಿದ ಗಾಂಧಿಯನ್ನು ಅಪ್ರಸ್ತುತಗೊಳಿಸಲು ಮುಂದಾಗಿದ್ದಾರೆ ಹೆಗಡೆ. ಅವರ ಇಂತಹ ಹೇಳಿಕೆಗಳ ಹಿಂದಿನ ಹುನ್ನಾರಗಳೇನು?

ಬಿಜೆಪಿ ಕ್ಯಾಂಪಿನ ಫೈರ್‌ ಬ್ರ್ಯಾಂಡ್ ಮಾತುಗಾರ ಎನ್ನಿಸಿಕೊಂಡಿರುವ ಕೇಂದ್ರದ ಕೌಶಲಾಭಿವೃದ್ಧಿ ಸಚಿವ ಅನಂತ ಕುಮಾರ ಹೆಗಡೆ ಮತ್ತೊಮ್ಮೆ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ನೆಹರು ಕುಟುಂಬ, ಮುಸ್ಲಿಂ ಸಮುದಾಯ, ಸಂವಿಧಾನ, ಬುದ್ಧಿಜೀವಿಗಳು, ಜಾತ್ಯತೀತತೆ ಮುಂತಾದ ಹಲವು ವಿಷಯಗಳ ಕುರಿತಂತೆ ಸೈದ್ಧಾಂತಿಕ ವಿರೋಧದ ಗೌರವಯುತ ಇತಿಮಿತಿಗಳನ್ನು ಮೀರಿ ಜಿಹ್ವ್ಯಾಸ್ತ್ರ ಪ್ರಯೋಗಿಸಿದ್ದ ಹೆಗಡೆ, ಈಗದನ್ನು ಗಾಂಧೀಜಿಯತ್ತ ತಿರುಗಿಸಿದ್ದಾರೆ. “ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಪುಕ್ಕಟೆ ಉಪವಾಸ ಕುಳಿತವರಿಂದ ಅಲ್ಲ. ಅದಕ್ಕಾಗಿ ದೇಶದ ಜನ ನೀರಿನಂತೆ ರಕ್ತ ಚೆಲ್ಲಿದ್ದಾರೆ. ಬ್ರಿಟಿಷರಿಗೆ ತಾವು ಜ್ವಾಲಾಮುಖಿ ಮೇಲೆ ನಿಂತಿದ್ದೇವೆ ಅನಿಸಿತು. ಅದರ ಪರಿಣಾಮ ಹೆದರಿ ಓಡಿಹೋಗಬೇಕಾಯಿತೇ ಹೊರತು, ಸ್ವಾತಂತ್ರ್ಯ ಅವರು ಕೊಟ್ಟ ದಾನವಲ್ಲ,’’ಎನ್ನುವುದು ಅವರ ಹೊಸ ಪ್ರತಿಪಾದನೆ. ಗಾಂಧಿ ಹೆಸರು ಪ್ರಸ್ತಾಪಿಸಲಿಲ್ಲವಾದರೂ, ರಾಷ್ಟ್ರಪಿತನೇ ಅವರ ಮಾತಿನ ಪ್ರಹಾರದ ನೇರ ಗುರಿಯಾಗಿದ್ದರು.

ಅಷ್ಟಕ್ಕೂ, ಸ್ವಾತಂತ್ರ್ಯ ದಿನಾಚರಣೆಗೆ ಇನ್ನೂ ಒಂದು ತಿಂಗಳಿರುವಾಗ ಸಚಿವ ಹೆಗಡೆ ಸ್ವಾತಂತ್ರ್ಯದ ‘ಅಕಾಲಿಕ ಜಪ’ ಯಾಕೆ ಮಾಡಿದರೆನ್ನುವ ಕುತೂಹಲ ಸಹಜವೇ. ದಾವಣಗೆರೆಯಲ್ಲಿ ‘ನಮೋ ಭಾರತ’ ಸಂಘಟನೆಯನ್ನು ಉದ್ಘಾಟಿಸಿದ ಸಂದರ್ಭವದು. ದೇಶವಾಸಿಗಳೆಲ್ಲರೂ ಭಾವಿಸಿರುವ ‘ನಮ್ಮಭಾರತ’ವನ್ನು ‘ನಮೋ ಭಾರತ’ವಾಗಿ ರೂಪಾಂತರಗೊಳಿಸಲು ಟೊಂಕ ಕಟ್ಟಿರುವವರ ಮುಂದೆ ಅನಂತ ಕುಮಾರ ಹೆಗಡೆ ‘ಸ್ವಾತಂತ್ರ್ಯ’ದ ಕುರಿತ ತಮ್ಮ ಅಭಿಪ್ರಾಯವನ್ನು, ಗಾಂಧೀಜಿ ಕುರಿತ ದಟ್ಟ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಪ್ರಮಾದಗಳಿಂದ ಪಾಠ ಕಲಿಯದೆ, ಹೊಸ ಪ್ರಮಾದ ಸೃಷ್ಟಿಸಿ ಮನಸ್ಸುಗಳನ್ನು ಒಡೆದು, ಅದರಲ್ಲಿ ಲಾಭ ಹುಡುಕುವ ದುರುಳತನ ದೇಶಕ್ಕೆ ಒಳಿತಲ್ಲವಾದರೂ, ಈ ಕೆಲವರ ವಿಷಯದಲ್ಲಿ ಅದು ಮರುಕಳಿಸುತ್ತಲೇ ಇದೆ.

ನಿಜ, ಭಾರತ ಸ್ವತಂತ್ರಗೊಳ್ಳಲು ಹೋರಾಡಿದವರು ಒಬ್ಬಿಬ್ಬರಲ್ಲ ಹಾಗೂ ಗಾಂಧೀಜಿ ಮಾತ್ರವೇ ಅಲ್ಲ. ಬ್ರಿಟಿಷ್‌ ಆಡಳಿತದ ವಿರುದ್ಧ ಪ್ರಾಂತೀಯ ಮಟ್ಟದಲ್ಲಿ ಅಸಂಖ್ಯಾತ ಚಳವಳಿಗಳು ನಡೆದಿದ್ದವು. ಅಲ್ಲಲ್ಲಿನ ಸ್ವಾಭಿಮಾನಿ ರಾಜ, ಮಹಾರಾಜರು ಖಡ್ಗ ಝಳಪಿಸಿದ್ದರು. ಕೆಲವರು ಬ್ರಿಟಿಷರ ಅಡಿಯಾಳುಗಳಾಗಿ ಕುಯುಕ್ತಿ ಮೆರೆದು ನಮ್ಮವರ ಪರಾಜಯಕ್ಕೆ ಕಾರಣವಾಗಿದ್ದಕ್ಕೂ ಅನೇಕ ನಿದರ್ಶನಗಳಿವೆ. ಇಂತಿರುವಾಗ, ದೇಶದ ಮಟ್ಟದಲ್ಲಿ ಸ್ವಾತಂತ್ರ್ಯ ಚಳವಳಿಯ ಕಾವೇರಿಸಿದ್ದು ೧೮೫೭ರ ಸಿಪಾಯಿ ದಂಗೆ. ಕಾಡತೂಸುಗಳಿಗೆ ದನ ಮತ್ತು ಹಂದಿಯ ಕೊಬ್ಬು ಲೇಪಿಸಲಾಗುತ್ತಿದೆ ಎನ್ನುವ ಕಾರಣಕ್ಕೆ ಹುಟ್ಟಿದ ಪ್ರತಿರೋಧ ಪ್ರಬಲ ಸೇನಾದಂಗೆಗೆ ಕಾರಣವಾಯಿತು. ವ್ಯವಸ್ಥಿತ ಕಾರ್ಯತಂತ್ರಗಳಿಲ್ಲದ ಕಾರಣಕ್ಕೆ ಬ್ರಿಟಿಷ್ ಪಡೆ ಅದನ್ನೂ ಹತ್ತಿಕ್ಕಿತು. ನಂತರ, ಸಶಸ್ತ್ರ ಸೆಣಸು, ಹಿಂಸೆ, ಪ್ರತಿಹಿಂಸೆ, ಬಲಿದಾನ, ಅಸಹಕಾರ ಚಳವಳಿ, ನಿರಶನ ಸಹಿತ ಹಲವು ಬಗೆಯ ಹೋರಾಟಗಳು ೧೯೪೭ರವರೆಗೆ ನಿರಂತರ ನಡೆದಿವೆ. ಸಾಮಾನ್ಯ ಜನರಿಂದ ರಾಜಕೀಯ ನೇತಾರರವರೆಗೆ ಲಕ್ಷೋಪಲಕ್ಷ ಜನರ ತ್ಯಾಗ, ಬಲಿದಾನಗಳು ಇದರಲ್ಲಿ ಅಡಕಗೊಂಡಿವೆ. ಅನಂತ ಹೆಗಡೆ ಹೇಳುವಂತೆ ಸಾವಿರಾರು ಜನ ರಕ್ತವನ್ನು ಚೆಲ್ಲಿದ್ದಾರೆ ಕೂಡ. ಆದರೆ, ಚೆಲ್ಲಿದ ರಕ್ತದ ಜ್ವಾಲಾಮುಖಿಗೆ ಹೆದರಿಯೇ ಬ್ರಿಟಿಷರು ಇಲ್ಲಿಂದ ಕಾಲ್ಕಿತ್ತರೆನ್ನುವುದು ಅವರ ಹೊಸ ಶೋಧನೆಯಷ್ಟೆ!

ಜಲಿಯನ್‌ ವಾಲಾಬಾಗಿನಲ್ಲಿ ಬ್ರಿಟಿಷ್ ಪಡೆಗಳು ನಡೆಸಿದ ಹತ್ಯಾಕಾಂಡದಿಂದ ಸಿಡಿದೆದ್ದ ಭಾರತೀಯರು ವ್ಯಾಪಕ ಹಿಂಸಾಚಾರ ನಡೆಸಿದರು. ಗಾಂಧೀಜಿ ಈ ಎರಡೂ ಹಿಂಸೆಗಳನ್ನು ಖಂಡಿಸಿದ್ದರು. ಗಾಂಧಿ ನೇತೃತ್ವದಲ್ಲಿ ಅಹಿಂಸಾತ್ಮಕ, ಅಸಹಕಾರ ಚಳವಳಿ ಆರಂಭವಾಯಿತು. ಸಣಕಲು ಶರೀರದ, ಬರಿಮೈ ಫಕೀರನ ಕರೆಗೆ ದೇಶಾದ್ಯಂತ ಲಕ್ಷೋಪಲಕ್ಷ ಜನ ಕಿವಿಯಾದರು. ಎಲ್ಲೆಡೆ ಅಹಿಂಸಾತ್ಮಕ ಚಳವಳಿ ವಿಸ್ತರಿಸುತ್ತಿದ್ದ ಸಂದರ್ಭ ೧೯೨೨ರಲ್ಲಿ ಉತ್ತರ ಪ್ರದೇಶದ ಚೌರಿಚಾರಾದಲ್ಲಿ ಹಿಂಸಾತ್ಮಕ ಘರ್ಷಣೆ ನಡೆದುಹೋಯಿತು. ಮಾತ್ರವಲ್ಲ, ಸ್ವಾತಂತ್ರ್ಯಪೂರ್ವದಲ್ಲಾದ ದೇಶ ವಿಭಜನೆ ವಿದ್ಯಮಾನ ವ್ಯಾಪಕ ಹಿಂಸೆಗಳಿಗೂ ಕಾರಣವಾಗಿತ್ತು. ಇದಕ್ಕೆಲ್ಲ ಏನು, ಯಾರು ಕಾರಣ ಎನ್ನುವುದೆಲ್ಲ ಈಗ ತೆರೆದ ಪುಸ್ತಕದಷ್ಟೇ ಸ್ಪಷ್ಟ. ಈ ಮಧ್ಯೆ ನಡೆದ ಹಲವು ಹತ್ಯೆ ಯತ್ನಗಳಿಂದ ಬಚಾವಾಗಿದ್ದ ಅಹಿಂಸೆಯ ಪ್ರಬಲ ಪ್ರತಿಪಾದಕ ಗಾಂಧೀಜಿ, ಹಿಂದೂ ಕಟ್ಟಾಳು ನಾಥೂರಾಂ ಗೋಡ್ಸೆಯ ಗುಂಡಿಗೆ ಬಲಿಯಾದರು. ಇಂಥ ವಿಪರ್ಯಾಸಗಳ ಮಧ್ಯೆಯೂ, “ಅಹಿಂಸಾತ್ಮಕ, ಅಸಹಕಾರ ಚಳವಳಿ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ನೀಡಿತು,’’ ಎಂದೇ ಬಹುತೇಕ ಇತಿಹಾಸಕಾರರು ಗುರುತಿಸಿದ್ದಾರೆ.

“ಹಿಂಸಾತ್ಮಕ ಹೋರಾಟ ಬಲದಿಂದಲೇ ಸ್ವಾತಂತ್ರ್ಯ ಪಡೆಯಲು ಮುಂದಾಗಿದ್ದರೆ, ಆ ಭರವಸೆ ಅರಳುತ್ತಲೇ ಇರಲಿಲ್ಲ. ಶಸ್ತ್ರಾಸ್ತ್ರ, ಸೇನಾಬಲ,ಇಲ್ಲಿನವರನ್ನೇ ಒಡೆದು ಆಳುವ ನೀತಿ, ಚಾಣಾಕ್ಷ ರಾಜಕಾರಣ ಸಹಿತ ಎಲ್ಲ ವಿಷಯದಲ್ಲೂ ಪ್ರಬಲವಾಗಿದ್ದ ಬ್ರಿಟಿಷರನ್ನು ಆ ಬಲಗಳ ಮೂಲಕವೇ ಮಣಿಸುವುದು ಭಾರತೀಯರಿಗೆ ಸಾಧ್ಯವಿರುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಗಾಂಧಿ ದೇಶವಾಸಿಗಳಿಗೆ ನೀಡಿದ ಅಸಹಕಾರ, ಅಹಿಂಸಾತ್ಮಕ ಚಳವಳಿಯ ಅಸ್ತ್ರ ಆ ಎಲ್ಲವುಗಳಿಗಿಂತ ಶಕ್ತಿಶಾಲಿಯಾಗಿತ್ತು ಮತ್ತು ಬ್ರಿಟಿಷರು ಮಂಡಿಯೂರುವಂತೆ ಮಾಡಿತು,’’ ಎನ್ನುವುದನ್ನು ದೇಶದ ಬಹುಸಂಖ್ಯೆಯ ಜನ ನಂಬಿದ್ದಾರೆ. ಇತಿಹಾಸ ಪಠ್ಯಗಳೂ ಅದನ್ನೇ ಪ್ರಬಲವಾಗಿ ಸಾರುತ್ತವೆ. ಆದರೆ, ಗೋಡ್ಸೆಯ ಸಂತಾನ ಅದನ್ನೊಪ್ಪುವುದಿಲ್ಲ. ಅನೇಕ ಜಾಗತಿಕ ನಾಯಕರ ಹೋರಾಟಕ್ಕೆ ಪ್ರೇರಣೆಯಾದ ಗಾಂಧಿಯನ್ನು ಕೊಂದುರುಳಿಸಿದ ನಂತರವೂ, ಅವಕಾಶ ಸಿಕ್ಕಾಗಲೆಲ್ಲ ಅವರ ವಿಚಾರಗಳನ್ನು ಕೊಲ್ಲುವ, ಅಪ್ರಸ್ತುತಗೊಳಿಸುವ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಕೇಂದ್ರ ಮಂತ್ರಿ ಅನಂತ ಕುಮಾರ ಹೆಗಡೆಯವರು ಈಗ ಅದನ್ನೆಲ್ಲ ಸಾರ್ವಜನಿಕವಾಗಿ ಋಜು ಮಾಡಲು ಹೊರಟಂತಿದೆ.

ಇದನ್ನೂ ಓದಿ : ವಿವಾದಗಳ ಮೂಲಕವೇ ಸಿಎಂ ಆಗುವ ಕನಸು ಕಾಣುತ್ತಿದ್ದಾರೆಯೇ ಅನಂತ ಕುಮಾರ್ ಹೆಗಡೆ?

ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೊದಲು ವಿಪರೀತ ಮಾತನಾಡಿದ್ದ ಸಚಿವ ಹೆಗಡೆ, ಕೆಲವು ತಿಂಗಳ ವಿರಾಮದ ನಂತರ ಮತ್ತೆ ಕುಟುಕು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಿಜೆಪಿ ಸಂಸತ್ ಚುನಾವಣೆಗೆ ಮಾತಿನ ಆಖಾಡ ಸಜ್ಜುಗೊಳಿಸುತ್ತಿರುವುದರ ಸೂಚನೆ ಇದು. ಹಿಂದಿನ ಇಂಥ ಪ್ರಯತ್ನಗಳಲ್ಲಿ ಮತಫಲ ದಕ್ಕಿರುವುದು ಅವರಲ್ಲಿ ಸಮರೋತ್ಸಾಹ ಹೆಚ್ಚಿಸಿದಂತಿದೆ. ಆದರೆ, ಗಾಂಧಿಯನ್ನು ತಡವಿಕೊಂಡರೆ ಅವರಿಗೇನು ಪ್ರಯೋಜನ ಎನ್ನುವ ಪ್ರಶ್ನೆ ಮೂಡದಿರದು. ದೇಶದಲ್ಲೀಗ ಏನೇನೋ ಕಾರಣಕ್ಕೆ ಸಂಭವಿಸುತ್ತಿರುವ ಹಿಂಸೆ, ಅಮಾನವೀಯ ವರ್ತನೆಗಳು, ಅವೆಲವಕ್ಕೂ ಕಾರಣವಾದ ಅಂಶಗಳ ಹಿನ್ನೆಲೆಯಲ್ಲಿ ನೋಡಿದರೆ, ಅಹಿಂಸಾ ಪ್ರತಿಪಾದಕನನ್ನು ಅಪ್ರಸ್ತುತಗೊಳಿಸುವುದರ ಹಿಂದಿನ ಹುನ್ನಾರ ತಿಳಿದೀತು.

ಆಹಾರ, ಆಚಾರ, ವಿಚಾರ, ನಂಬಿಕೆಗಳ ವಿಷಯದಲ್ಲಿ ಏಕವಾದುದನ್ನು ಹೇರುವ, ಒಪ್ಪದವರನ್ನು ಹತ್ತಿಕ್ಕುವ ಮತ್ತು ಕೇವಲ ವದಂತಿಯ ಕಾರಣಕ್ಕೆ ಗುಂಪು ಹಲ್ಲೆ ನಡೆಸಿ ಕೊಂದೆಸೆಯುವ ಹಿಂಸಾವಿನೋಧಿಗಳು ದೇಶದಲ್ಲಿ ಹೆಚ್ಚುತ್ತಿದ್ದಾರೆ. ಇಂಥ ಪ್ರಕರಣ ಮೇಲ್ನೋಟಕ್ಕೆ ಅಲ್ಲಲ್ಲಿ ನಡೆದ ಒಂದೊಂದು ಘಟನೆಗಳಷ್ಟೆ ಎನ್ನಿಸಿದರೂ, ಒಟ್ಟು ಸ್ವರೂಪದಲ್ಲಿ ಭಯಾನಕ. ಭಯ, ಭೀತಿಯನ್ನು ಬಿತ್ತಿ, ಅದನ್ನು ಧರ್ಮ-ರಾಜಕೀಯದ ಲಾಭಕ್ಕೆ ಬಳಸುವವರೂ ಹೆಚ್ಚುತ್ತಿದ್ದಾರೆ. ‘ಗಾಂಧಿಯ ಭಾರತ’ ಮತ್ತಷ್ಟು ಅಪ್ರಸ್ತುತಗೊಂಡರೆ, ‘ನಮೋ ಭಾರತ’ವನ್ನು ಪ್ರಬಲವಾಗಿ ಕಟ್ಟಿನಿಲ್ಲಿಸುವುದು ಇಂಥವರಿಗೆ ಸರಳ. ದೇಶ-ಧರ್ಮ-ಕರ್ಮಕ್ಕಾಗಿ ಹಿಂದೆಯೂ ಹಲವು ಹಿಂಸಾಕೃತ್ಯಗಳು ನಡೆದಿದ್ದವೆಂದು ಪ್ರಚುರಪಡಿಸಿದರೆ ಈಗ ನಡೆಯುವ ಹಿಂಸಾಚಾರಗಳನ್ನು ಸಮರ್ಥಿಸುವುದು ಸುಲಭ. ಅದಕ್ಕೇ ಹೆಗಡೆ, “ಪುಕ್ಕಟೆ ಉಪವಾಸ ಕುಳಿತವರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ,’’ ಎನ್ನತೊಡಗಿದ್ದಾರೆ. ಆ ಮೂಲಕ, ಸ್ವತಂತ್ರ ಭಾರತಕ್ಕೆ ಅದರ ರಕ್ತ ಚರಿತ್ರೆಯನ್ನು ನೆನಪಿಸುತ್ತಿದ್ದಾರೆ.

ಇದೊಂದು ರೀತಿಯ ಟೆಸ್ಟ್ ಡೋಸ್‌ನಂತೆ. ವೈದ್ಯಲೋಕದಲ್ಲಿ ಕೆಲವು ಗಂಭೀರ ಪರಿಣಾಮದ ಔಷಧಗಳನ್ನು ನೀಡುವಾಗ, ಪಡೆಯುವ ವ್ಯಕ್ತಿಯ ದೇಹ ಔಷದಕ್ಕೆ ಹೇಗೆ ಪ್ರತಿಸ್ಪಂದಿಸುತ್ತದೆಂದು ನೋಡಲು ಪ್ರಮಾಣ ಪರೀಕ್ಷೆ‌ ಮಾಡಲಾಗುತ್ತದೆ. ತನ್ನ ಸಿದ್ಧಾಂತಗಳ ಹೇರಿಕೆ ವಿಷಯದಲ್ಲಿ ಸಂಘಪರಿವಾರವು ಅನಂತ ಕುಮಾರ ಹೆಗಡೆ ಮುಂತಾದವರ ನಾಲಗೆಗಳನ್ನು ಇಂಥ ಟೆಸ್ಟ್ ಡೋಸ್‌ಗಳಂತೆ ಬಳಸುತ್ತಿರುವಂತಿದೆ. ಈ ಕೆಲವರು ಕೆಲ ಗಹನ ವಿಷಯಗಳ ಕುರಿತು ಮತ್ತೆ-ಮತ್ತೆ ಮಾತನಾಡುತ್ತಾರೆ. ಅದು ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿ, ಒಟ್ಟು ಪರಿಣಾಮದಲ್ಲಿ ಲಾಭದಾಯಕ ಎನ್ನಿಸಿದರೆ ಅದನ್ನೇ ಪರಿವಾರದ ಎಲ್ಲರೂ ಪಠಿಸುತ್ತಾರೆ. ಕ್ರಮೇಣ ಅದನ್ನೇ ‘ನೈಜ, ಅಧಿಕೃತ ಇತಿಹಾಸ’ ಎಂದೂ ನಿರೂಪಿಸುತ್ತಾರೆ. ವಿವಾದ ತಾರಕ ಸ್ವರೂಪ ಪಡೆದರೆ, “ಅದು ಅವರ ವೈಯಕ್ತಿಕ ಹೇಳಿಕೆ. ಪಕ್ಷಕ್ಕೂ ಅವರ ಹೇಳಿಕೆಗೂ ಸಂಬಂಧವಿಲ್ಲ,’’ ಎಂದು ಕೈತೊಳೆದುಕೊಳ್ಳುತ್ತಾರೆ. ಈ ‘ನವ ಇತಿಹಾಸ’ ಕಟ್ಟುವ ಸರಣಿಯಲ್ಲೀಗ, ಬಹುಪಾಲು ಕಾಲದ ಮರೆಗೆ ಸರಿದುಹೋಗಿರುವ ಗಾಂಧಿಯ ಸೇರ್ಪಡೆಯಾಗಿದೆ. ಏಳೆಂಟು ತಿಂಗಳಲ್ಲಿ ಸಂಸತ್ ಚುನಾವಣೆ ಎದುರಿಸಲು ದೇಶ ಸಜ್ಜಾಗುತ್ತಿದೆ. ಅನಂತ ಹೆಗಡೆ ಹೇಳಿಕೆಯನ್ನು ಖಂಡಿಸಲು, ಪ್ರತಿಭಟಿಸಲು ಆರಂಭಿಸಿದರೆ ಅದನ್ನು ಪೂರಕ ಮಾಡಿಕೊಳ್ಳುವ ಕೌಶಲಗಳು ಅವರು ಮತ್ತವರ ಪರಿವಾರದ ಬಳಿ ಇದ್ದೇ ಇವೆ.

ಆದಾಗ್ಯೂ, ಇವರಿಗಿರುವ ಧೈರ್ಯ ಏನೆಂದರೆ, ಗಾಂಧೀಜಿ ಕುರಿತು ಯಾರು ಏನೇ ನುಡಿಯಲಿ, ಏನನ್ನೇ ಮಾಡಲಿ ಪ್ರತಿಭಟನೆಗೆ ತುತ್ತಾಗುವುದು ತೀರಾ ಕಡಿಮೆ. ಮೇಲೆ ಹೇಳಿದಂತೆ, ಪ್ರತಿಭಟನೆ ನಡೆದರೂ ಲಾಭ ಅವರ ಪಕ್ಷಪಾತಿಯಾಗುವ ಸಾಧ್ಯತೆಯೇ ಹೆಚ್ಚು. ಆದ್ದರಿಂದ, ಗಾಂಧಿವಾದಿಗಳು ಅಥವಾ ಗಾಂಧಿ ಭಕ್ತರು ಪ್ರತಿಭಟನೆ ನಡೆಸುವುದೇ ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊನ್ನೆ ಸಂಸತ್‌ ಒಳಗೇ ಅಪ್ಪಿಕೊಂಡ ‘ರಾಹುಲ್- ಗಾಂಧಿಮಾರ್ಗ’ವೇ ಸೂಕ್ತ ಎನ್ನಿಸುತ್ತದೆ. ಗಾಂಧಿವಾದಿಗಳು, ರಾಹುಲ್‌-ಗಾಂಧಿ ಅಭಿಮಾನಿಗಳು ಕಂಡಕಂಡಲ್ಲಿ ಅನಂತ‌ ಕುಮಾರ ಹೆಗಡೆಯನ್ನು ಅಪ್ಪಿಕೊಂಡರೆ, ‘ಕಲಬೆರಕೆ’ ರಕ್ತದವರೆಂದು ಜರಿಯಲ್ಪಟ್ಟಿರುವ ಜಾತ್ಯತೀತರು ‘ಪರಿಶುದ್ಧ’ ರಕ್ತದ ಅದೇ ಹೆಗಡೆಯವರನ್ನು ‘ಅಪ್ಪಿಕೋ’ ಚಳವಳಿಗೆ ಒಳಪಡಿಸಿದರೆ ಹೇಗಿದ್ದೀತು ? ದೇಶದಲ್ಲಿನ್ನೂ ಅಲ್ಪಸ್ವಲ್ಪ ಉಸಿರಾಡುತ್ತಿರುವ, ಅಳಿದುಳಿದ ಗಾಂಧಿಯನ್ನು ಮತ್ತಷ್ಟು ಮೂಲೆಗೆ ಸರಿಸಿ, ದ್ವೇಷ ಬಿತ್ತಿ, ದ್ವೇಷವನ್ನಷ್ಟೇ ಬೆಳೆಯಲು ಹವಣಿಸುವವರ ಎದೆಯಲ್ಲಿ ಪ್ರೀತಿ, ಕಾರುಣ್ಯ ಭಾವವನ್ನು ಅರಳಿಸಲು ಅವರನ್ನು ಬಿಗಿದಪ್ಪುವುದೊಂದೇ ಸರಿಮಾರ್ಗವೆಂದು ತೋರುತ್ತದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More