ಬಿಜೆಪಿ ಪ್ರತಿಪಾದಿಸುವ ಹಿಂದುತ್ವವೇ ನಕಲಿ ಎಂದ ಶಿವಸೇನೆಯ ಉದ್ದವ್‌ ಠಾಕ್ರೆ

ಬಿಜೆಪಿ ಜೊತೆಗಿನ ಮೈತ್ರಿಯನ್ನು ಸಂಪೂರ್ಣವಾಗಿ ಕಡಿದುಕೊಳ್ಳುವ ನಿಟ್ಟಿನಲ್ಲಿ ಶಿವಸೇನೆ ಮುಂದುವರಿದಿದೆ ಎನ್ನಲಾಗುತ್ತಿದೆ. ಇಷ್ಟು ದಿನ ಮೋದಿಯವರ ಕಾರ್ಯವೈಖರಿಯನ್ನಷ್ಟೇ ಟೀಕಿಸುತ್ತಿದ್ದ ಉದ್ದವ್‌, ಇದೀಗ ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ನಕಲಿ ಎಂದಿರುವುದು ಇದಕ್ಕೆ ಇಂಬು ನೀಡಿದೆ

ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ಪರಿಕಲ್ಪನೆಯು ನಕಲಿಯಾಗಿದ್ದು, ಅದನ್ನು ನಾನು ಒಪ್ಪುವುದಿಲ್ಲ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ತಿಳಿಸಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ಶಿವಸೇನೆಯ ಮುಖವಾಣಿ 'ಸಾಮ್ನಾ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, “ಭಾರತದಲ್ಲಿ ಮಾತೆಗಿಂತ ಗೋಮಾತೆ ಸುರಕ್ಷಿತವಾಗಿದ್ದಾಳೆ. ಇಂದು ದೇಶದಲ್ಲಿ ಅನುಸರಿಸಲಾಗುತ್ತಿರುವ ಹಿಂದುತ್ವ ನಕಲಿಯಾಗಿದ್ದು, ಅದನ್ನು ನಾನು ಒಪ್ಪುವುದಿಲ್ಲ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದವರು ರಾಷ್ಟ್ರದ್ರೋಹಿಗಳಲ್ಲ. ಸರ್ಕಾರದ ಜನವಿರೋಧಿ ನಡೆಗಳನ್ನು ಟೀಕಿಸುವ ಸಂಸದರು ಜನರಿಂದ ಆಯ್ಕೆಯಾಗಿದ್ದಾರೆ. ಅವರಿಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದೆ,” ಎಂದು ಪ್ರತಿಪಾದಿಸಿದ್ದಾರೆ.

ಬಿಜೆಪಿ ಜೊತೆಗಿನ ಮೈತ್ರಿಯನ್ನು ಸಂಪೂರ್ಣ ಕಡಿದುಕೊಳ್ಳುವ ನಿಟ್ಟಿನಲ್ಲಿ ಶಿವಸೇನೆ ಮುಂದುವರಿದಿದೆ ಎನ್ನಲಾಗುತ್ತಿದೆ. ಇಷ್ಟು ದಿನ ಪ್ರಧಾನಿ ಮೋದಿಯವರ ಕಾರ್ಯವೈಖರಿಯನ್ನಷ್ಟೇ ಟೀಕಿಸುತ್ತಿದ್ದ ಉದ್ದವ್‌ ಠಾಕ್ರೆ ಅವರು ಈಗ ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ಹಾಗೂ ಹಿಂದೂ ರಾಷ್ಟ್ರವಾದವೇ ನಕಲಿಯಾಗಿದೆ ಎಂಬ ಹೇಳಿಕೆ ನೀಡಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಪಕ್ಷವು ಪ್ರಧಾನಿ ಮೋದಿಯವರ ಒಳಿತಿಗಾಗಿ ಕೆಲಸ ಮಾಡುವುದಿಲ್ಲ. ಅದು ಭಾರತದ ಜನತೆಯ ಪರ ಕೆಲಸ ಮಾಡುತ್ತದೆ. ಬಡವರ ವಿರೋಧಿ ನಿಲುವು ಹೊಂದಿರುವ ಕೇಂದ್ರ ಸರ್ಕಾರದ ನಿರ್ಣಯಗಳನ್ನು ಶಿವಸೇನೆ ವಿರೋಧಿಸುತ್ತದೆ ಎಂದು ತಿಳಿಸಿರುವ ಉದ್ದವ್‌ ಠಾಕ್ರೆ ಅವರು, “ತಪ್ಪು ನಿರ್ಧಾರ ತಳೆಯುವ ಸರ್ಕಾರವನ್ನು ನಾನು ಟೀಕಿಸುತ್ತೇನೆ. ಕಳೆದ ಯುಪಿಎ ಸರ್ಕಾರದ ನಡೆಗಳಿಂದ ಬೇಸತ್ತಿದ್ದ ಭಾರತದ ಜನತೆ ಹಲವು ಭರವಸೆಗಳಿಂದ ಮೋದಿಯವರನ್ನು ಪ್ರಧಾನಿಯನ್ನಾಗಿಸಿದರು. ಆದರೆ, ಈಗಿನ ಕೇಂದ್ರ ಸರ್ಕಾರವೂ ಹಳೆಯ ಸರ್ಕಾರದಂತೆ ದೇಶದ ಜನತೆಗೆ ವಂಚಿಸಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂದಿನ ಲೋಕಸಭಾ ಚುನಾವಣೆಯನ್ನು ಬಿಜೆಪಿ ಏಕಾಂಗಿಯಾಗಿ ಎದುರಿಸಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಸೂಚಿಸಿರುವ ಬಗ್ಗೆ ವರದಿಯಾದ ಬೆನ್ನಲ್ಲೇ ಉದ್ದವ್‌ ಠಾಕ್ರೆ ಮಾತನಾಡಿದ್ದು, “ನಾವು ಭಾರತೀಯ ಜನತೆ ಪರವಾಗಿದ್ದೇವೆಯೇ ಹೊರತು ಭಾರತೀಯ ಜನತಾ ಪಕ್ಷದ ಪರವಾಗಿಲ್ಲ,” ಎಂದು ಕುಟುಕಿದ್ದಾರೆ.

ಸುದೀರ್ಘ ಕಾಲದಿಂದ ಮೈತ್ರಿಯಲ್ಲಿದ್ದ ಶಿವಸೇನೆ ಹಾಗೂ ಬಿಜೆಪಿ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳು ಕಳೆದೆರಡು ವರ್ಷಗಳಿಂದ ಸ್ಪೋಟಗೊಳ್ಳುತ್ತಲೇ ಇವೆ. ಪ್ರಧಾನಿ ಮೋದಿಯವರು ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಶಿವಸೇನೆ ನಾಯಕ ಉದ್ದವ್‌ ಠಾಕ್ರೆ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಉಗ್ರ ಹಿಂದೂ ರಾಷ್ಟ್ರವಾದವನ್ನು ಪ್ರತಿಪಾದಿಸುತ್ತಿದ್ದ ಶಿವಸೇನೆಯು, ಇತ್ತೀಚಿನ ದಿನಗಳಲ್ಲಿ ಮೃದು ಧೋರಣೆ ತಳೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮೋದಿಯವರ ಸರ್ವಾಧಿಕಾರಿ ನಿಲುವು ಹಾಗೂ ಬಿಜೆಪಿ ಮುಖಂಡರ ಏಕಪಕ್ಷೀಯ ನಡೆ ಶಿವಸೇನೆ ಮುಖಂಡರನ್ನು ಕೆರಳಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಲ ೧೦೦-೧೧೦ಕ್ಕೆ ಕುಸಿಯಲಿದೆ ಎಂದ ಶಿವಸೇನಾ

ಟಿಡಿಪಿ ಹಾಗೂ ಶಿವಸೇನೆ ಪಕ್ಷಗಳು ಎನ್‌ಡಿಎ ಮೈತ್ರಿಕೂಟದ ಎರಡು ದೊಡ್ಡ ಪಕ್ಷಗಳಾಗಿದ್ದು, ಈಗಾಗಲೇ ಟಿಡಿಪಿಯು ಬಿಜೆಪಿಯ ಜೊತೆಗಿನ ಮೈತ್ರಿಯನ್ನು ಸಂಪೂರ್ಣವಾಗಿ ಕಡಿದುಕೊಂಡಿದೆ. ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆಯು, ಬಿಜೆಪಿಯೊಂದಿಗೆ ಮಾನಸಿಕವಾಗಿ ದೂರವಾಗಿದ್ದು, ಅಧಿಕೃತ ಘೋಷಣೆ ಹೊರಬೀಳಬೇಕಿದೆ.

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 122 ಸ್ಥಾನ ಹೊಂದಿದ್ದರೆ, ಶಿವಸೇನೆಯು 63 ಸ್ಥಾನ ಪಡೆದುಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 48 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ್ದು, ಶಿವಸೇನೆಗೆ 18 ಸ್ಥಾನ ದೊರೆತಿತ್ತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More