ಪ್ರಜಾಪ್ರಭುತ್ವದಲ್ಲಿ ಎದುರಾಳಿ ಇರುತ್ತಾರೆ, ವೈರಿಯಲ್ಲ ಎಂಬ ತತ್ವಕ್ಕೆ ಮೋದಿ ಮಸಿ

ಪ್ರಜಾಪ್ರಭುತ್ವದಲ್ಲಿ ನಮಗೆ ಎದುರಾಳಿಗಳಿರುತ್ತಾರೆಯೇ ಹೊರತು ವೈರಿಗಳಲ್ಲ ಎನ್ನುವ ಮೂಲತತ್ವಕ್ಕೇ ಮೋದಿ ಮಸಿ ಬಳಿಯುತ್ತಿದ್ದಾರೆ ಎಂದು ಮಾತಾಡಿದ ಮಣಿಶಂಕರ್ ಅಯ್ಯರ್ ಕುರಿತಾದ ಎನ್‌ಡಿಟಿವಿ ಪ್ರಕಟಿಸಿದ ಲೇಖನದ ಭಾವಾನುವಾದ ಇಲ್ಲಿದೆ

ಮೋದಿಯನ್ನು ಒಬ್ಬ ನಯವಿಲ್ಲದ ವ್ಯಕ್ತಿಯನ್ನಾಗಿ ಮಾಡಿರುವ ವಿಷಯ ಯಾವುದು? ಇದಕ್ಕೆ ನಿಸ್ಸಂದೇಹವಾದ ಉತ್ತರ ಎಂದರೆ ಅವರು ಆರ್‌ಎಸ್‍ಎಸ್ ಎಂಬ ಕೆಸರಿನಲ್ಲಿ ಹುಟ್ಟಿದ ಕಮಲ ಎಂಬ ವಾಸ್ತವ. ಆದರೆ, ಈ ‘ನಿಸ್ಸಂದೇಹವಾದ’ ಉತ್ತರ ನನಗೆ ಅಷ್ಟೊಂದು ತೃಪ್ತಿ ನೀಡುತ್ತಿಲ್ಲ. ಏಕೆಂದರೆ, ಆರ್‌ಎಸ್‍ಎಸ್ ಪ್ರಚಾರಕರಾಗಿದ್ದವರು ತದನಂತರದಲ್ಲಿ ರಾಜಕಾರಣಿಗಳಾಗಿ ಪರಿವರ್ತನೆಯಾಗಿರುವ ಅನೇಕ ಜನರನ್ನು ನಾನು ಬಲ್ಲೆ. ಆದರೆ, ಅವರೆಲ್ಲಾ ಉತ್ತಮ ನಡವಳಿಕೆಗಳ ಮೂರ್ತರೂಪದಂತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿಯವರಂತಹ ಉಜ್ವಲ ಉದಾಹರಣೆ ನೋಡಿ. ಇವರಿಬ್ಬರೂ ಆರ್‌ಎಸ್‍ಎಸ್ ಅಂಗಳದಲ್ಲೇ ಬೆಳೆದವರು, ಆರ್‌ಎಸ್‍ಎಸ್ ಶಾಖೆಗಳಲ್ಲಿ ನಿಷ್ಠೆಯಿಂದ ಪಾಲ್ಗೊಂಡವರು, ವಿ ಡಿ ಸಾವರ್ಕರ್ ಮತ್ತು ಎಂ ಎಸ್ ಗೋಳ್ವಾಲ್ಕರ್ ಅವರ ಅಪ್ಪಟ ಅಭಿಮಾನಿಗಳೂ ಹೌದು. ಆದರೂ ಅಪ್ಪಟ ಸಜ್ಜನರಾಗಿಯೇ ಉಳಿದವರು.

ಅದಕ್ಕೆ ಕಾರಣ ಅವರು ಜವಾಹರಲಾಲ್ ನೆಹರೂ ಅವರು ಸಾರ್ವಜನಿಕ ನಡವಳಿಕೆಯ ರೀತಿ ರಿವಾಜುಗಳಿಗೆ ಅಡಿಪಾಯ ಹಾಕಿದ ಸಂದರ್ಭದಲ್ಲಿ ಬೆಳೆಯುತ್ತಿದ್ದುದು ಎಂದು ನನಗನ್ನಿಸುತ್ತದೆ. ವಾಜಪೇಯಿಯವರು ಭಾರತೀಯ ಜನ ಸಂಘದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿಯವರ ಖಾಸಗಿ ಕಾರ್ಯದರ್ಶಿಯಂತಹ ಆಯಕಟ್ಟಿನ ಹುದ್ದೆಯನ್ನು ಅಲಂಕರಿಸಿದ್ದರು. ಆ ಕಾರಣಕ್ಕಾಗಿಯೇ, ಮುಖರ್ಜಿಯವರು ಕಾಶ್ಮೀರ ಜೈಲಿನಲ್ಲಿ ಹಠಾತ್ತನೆ ನಿಧನರಾದ ನಂತರ ಜನಸಂಘಿಯಾಗಿ ಅವರು ನೆಹರೂ ಅವರ ಕಟು ವಿಮರ್ಶಕರೂ ಆದರು. ಆಗ 32 ವರ್ಷದವರಾಗಿದ್ದ ಅವರು 1957ರಲ್ಲಿ ಲೋಕಸಭೆಗೆ ಆಯ್ಕೆಯಾದಾಗ ಹಿರಿಯರಾಗಿದ್ದ ನೆಹರೂ ಈ ಯುವ ಕುಶಲಮತಿಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಈಗ ರಾಹುಲ್ ಗಾಂಧಿಯ ವಿಚಾರದಲ್ಲಿ ಮೋದಿ ತೋರುತ್ತಿರುವ ನಡವಳಿಕೆಯಂತಲ್ಲದೇ, ಆಗ ಹಿರಿಯ ನೆಹರೂ ಅವರು ಯುವಕ ವಾಜಪೇಯಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಮುಂದೊಂದು ದಿನ ದೇಶದ ಪ್ರಧಾನಿಯಾಗುವ ಎಲ್ಲ ಲಕ್ಷಣಗಳು ಈ ಹುಡುಗನಲ್ಲಿ ಕಾಣುತ್ತಿವೆ ಎಂದು ತಮ್ಮ ಸಹೋದ್ಯೋಗಿಗಳ ಹತ್ತಿರ ಮಾತಾಡಿದ್ದ ನೆಹರೂ ಅವರು 1958ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಭಾರತದ ನಿಯೋಗವನ್ನು ಕಳಿಸುವಾಗ ವಾಜಪೇಯಿಯವರನ್ನೂ ಅದರಲ್ಲಿ ಸೇರಿಸಿದ್ದರು. ಮಾತ್ರವಲ್ಲ, ಅವರಿಗೆ ಸಾಧ್ಯವಾದಷ್ಟು ಎಲ್ಲಾ ವಿಶ್ವ ನಾಯಕರನ್ನು ಪರಿಚಯ ಮಾಡಿಸಿ ಎಂದು ಮುಂದೆ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಲಿದ್ದ ಅಂದಿನ ವಿಶ್ವಸಂಸ್ಥೆ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಕಿರಿಯ ಉತ್ಸಾಹಿ ಅಧಿಕಾರಿ ಮಹಾರಾಜ ಕೃಷ್ಣ ರಸಗೋತ್ರ ಅವರಿಗೆ ವೈಯಕ್ತಿಕವಾಗಿ ಸೂಚಿಸಿದ್ದರು. 50ರ ದಶಕದಲ್ಲಿ ನೆಹರೂ ಅವರಿಗಾದಷ್ಟೇ ವಯಸ್ಸು ಈಗ ಮೋದಿಯವರಿಗೆ ಆಗಿದೆ. ಅಂದು ನೆಹರೂ ಅವರು ವಾಜಪೇಯಿಯವರ ವಿಷಯದಲ್ಲಿ ನಡೆದುಕೊಂಡಂತೆಯೇ ಈಗ ಮೋದಿಯವರು ರಾಹುಲ್ ಗಾಂಧಿಯವರ ವಿಷಯದಲ್ಲಿ ನಡೆದುಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಲು ಸಾಧ್ಯವೆ?

ನಂತರ ರಾಜ್ಯಸಭಾ ಸದಸ್ಯರಾಗಿದ್ದ 36 ವರ್ಷ ವಯಸ್ಸಿನ ಅಂದಿನ ಅನನುಭವಿ ವಾಜಪೇಯಿಯವರು ತನ್ನ ನಾಲ್ಕು ಸಂಸತ್ ಸಹೋದ್ಯೋಗಿಗಳ ಜೊತೆಗೂಡಿ ಚೀನಾವು ಭಾರತದ ಮೇಲೆ ಆಕ್ರಮಣ ನಡೆಸುತ್ತಿದ್ದ ಸಂದರ್ಭದಲ್ಲಿಯೇ 1962ರ ಅಕ್ಟೋಬರ್ 26ರಂದು ನೆಹರೂ ಅವರನ್ನು ಭೇಟಿಯಾಗಿ ಯುದ್ಧಕ್ಕೆ ಕಾರಣವಾದ ರಾಜಕೀಯ ಸನ್ನಿವೇಶ ಮತ್ತು ಮುನ್ನಡೆಯುತ್ತಿದ್ದ ಯುದ್ಧದ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಲು ಸಂಸತ್ ಅಧಿವೇಶನ ಕರೆಯಬೇಕು ಎಂದು ಬೇಡಿಕೆಯಿಟ್ಟರು. ನೆಹರೂ ಅದನ್ನು ಕೂಡಲೇ ಒಪ್ಪಿಕೊಂಡರು. ಆದರೆ, ಇಂದಿನ ಪ್ರಧಾನಿಯವರನ್ನು ಅವಿಶ್ವಾಸ ಗೊತ್ತುವಳಿಯ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಲು ಒಪ್ಪಿಸುವುದಕ್ಕೆ, ಆ ಅವಿಶ್ವಾಸ ಗೊತ್ತುವಳಿಯ ವಿರುದ್ಧ ಗೆದ್ದೇ ಗೆಲ್ಲುತ್ತೇನೆಂಬ ಖಾತ್ರಿಯಿದ್ದಾಗಲೂ, ಹರಸಾಹಸ ಮಾಡಬೇಕಾಯಿತು; ಅದರಿಂದ ಇಡೀ ಬಜೆಟ್ ಅಧಿವೇಶನವೇ ಹಾಳಾಗಿ ಹೋಯಿತು.

ಇನ್ನೂ 25 ವರ್ಷ ಮುಂದೆ ನಡೆದು 80ರ ದಶಕದ ಮಧ್ಯಭಾಗಕ್ಕೆ ಬರೋಣ. ವಾಜಪೇಯಿಯವರಿಗೆ ಹೋಲಿಸಿದರೆ ತುಂಬಾ ಚಿಕ್ಕ ವಯಸ್ಸಿನ ರಾಜೀವ್ ಗಾಂಧಿ ಪ್ರಧಾನಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದರೆ 1984ರ ಚುನಾವಣೆಯಲ್ಲಿ ವಾಜಪೇಯಿಯವರು ತಮ್ಮ ಪಕ್ಷದ ಬಹುತೇಕರೊಂದಿಗೆ ಅಧಿಕಾರ ಕಳೆದುಕೊಂಡಿದ್ದರು. ಇತ್ತೀಚೆಗೆ ಪ್ರಕಟವಾಗಿರುವ ತಮ್ಮ ಆತ್ಮಕತೆಯಲ್ಲಿ ಕರಣ್ ಥಾಪರ್ ಅವರು ತಮಗೆ ವಾಜಪೇಯಿ ಹೇಳಿದ ಆ ಕಾಲಘಟ್ಟದ ಕೆಲವು ವಿಷಯಗಳನ್ನು ದಾಖಲಿಸಿದ್ದಾರೆ. ವಾಜಪೇಯಿಯವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆಂಬ ವಿಷಯ ರಾಜೀವ್ ಗಾಂಧಿಗೆ ಗೊತ್ತಾಗುತ್ತದೆ. ವಾಜಪೇಯಿ ಅವರಿಗೆ ವಿಶ್ವದ ಅತ್ಯುತ್ತಮ ವೈದ್ಯರಿಂದ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ರಾಜೀವ್ ಗಾಂಧಿಯವರು ಕೂಡಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗಾಗಿ ತೆರಳಲಿದ್ದ ಭಾರತೀಯ ನಿಯೋಗದಲ್ಲಿ ವಾಜಪೇಯಿಯವರನ್ನು ಸೇರಿಸುತ್ತಾರೆ. ಇವತ್ತು ವಾಜಪೇಯಿಯವರು ನಿಷ್ಕ್ರಿಯವಾಗಿದ್ದರೂ ಜೀವಂತವಾಗಿದ್ದಾರೆ ಎಂದರೆ ಅವರ ಮೇಲೆ ರಾಜೀವ್ ಗಾಂಧಿಯ ಋಣ ಇದೆ. ನ್ಯೂಯಾರ್ಕಿನಿಂದ ಬಂದ ಮೇಲೆ ರಾಜೀವ್ ಗಾಂಧಿಯನ್ನು ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ವಾಜಪೇಯಿರಯವರು ಮುಖ್ಯ ಪಾತ್ರ ನಿರ್ವಹಿಸಿದರು ಎಂಬುದು ಬೇರೆ ವಿಷಯ. ವಾಜಪೇಯಿಯವರು ಯಾರಿಗೂ ಶರಣಾಗದ ಕಡು ರಾಜಕೀಯ ಎದುರಾಳಿ ಎಂಬುದು ತಿಳಿದಿದ್ದರೂ ಅವರಿಗೆ ಸಹಾಯಹಸ್ತ ಚಾಚುವುದಕ್ಕೆ ರಾಜೀವ್ ಗಾಂಧಿ ಪ್ರಾಮಾಣಿಕವಾಗಿ ಪ್ರಯತ್ನಿಸಿದರು.

ನೆಹರೂ ಅವರ ಇನ್ನೊಬ್ಬ ಅನುಚರ ಪಿ ವಿ ನರಸಿಂಹರಾವ್ ಅವರ ಕಾಲದಲ್ಲೂ ಇದೇ ತೆರನಾದ ಕತೆ ಮುಂದುವರೆಯುತ್ತದೆ. ತಾನು ಪ್ರಧಾನಮಂತ್ರಿಯಾಗದಂತೆ ದ್ರೋಹಬಗೆದ ವಿ ಪಿ ಸಿಂಗ್ ಅವರಿಗೆ ಜೀವನಪರ್ಯಂತ ವಿಶ್ವದ ಅತ್ಯುತ್ತಮ ವೈದ್ಯರಿಂದ ಪುನರಾವರ್ತಿತ ಡಯಾಲಿಸ್ ಚಿಕಿತ್ಸೆ ಸಿಗುವಂತೆ ಪಿ ವಿ ನರಸಿಂಹರಾವ್ ನೋಡಿಕೊಂಡರು. ಮಾತ್ರವಲ್ಲ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಪ-ಆಯೋಗದಲ್ಲಿ ಪಾಕಿಸ್ತಾನದ ವಿರುದ್ಧ ಮಾತಾಡುವುದಕ್ಕೆ ಅಂದಿನ ರಾಜ್ಯಮಂತ್ರಿ ಸಲ್ಮಾನ್ ಖುರ್ಷಿದ್ ಜೊತೆ ಹೋಗಬೇಕೆಂದು ವಾಜಪೇಯಿಯವರನ್ನು ಕೇಳಿಕೊಂಡಿದ್ದರು. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಎದುರಾಳಿಗಳನ್ನು ನಡೆಸಿಕೊಳ್ಳುವ ರೀತಿ ಇದು; ಸದನದಲ್ಲಿ ಎಷ್ಟೇ ಕಠಿಣವಾಗಿ ಮಾತಾಡಿದರೂ ರಾಜಕೀಯ ವಿಮರ್ಶೆಗಳಲ್ಲಿ ವೈಯಕ್ತಿಕ ರಾಗದ್ವೇಷಗಳಿರುವುದಿಲ್ಲ.

ವಾಜಪೇಯಿಯವರ ವಿಷಯದಲ್ಲಿ ನನಗೂ ಇಂತಹದ್ದೇ ಅನುಭವಗಳಾಗಿವೆ. ರಾಷ್ಟ್ರಪತಿ ಭವನದಲ್ಲಿ ಯಾಸರ್ ಅರಾಫತ್ ಅವರಿಗೆ ಮೊದಲು ವಾಜಪೇಯಿಯವರು ಹಸ್ತಲಾಘವ ಮಾಡಲಿ, ಆಮೇಲೆ ನಾನು ಮಾಡುವುದೆಂದು ಯೋಚಿಸಿ ರಾಷ್ಟ್ರಪತಿ ಭವನದಲ್ಲಿ ನಾನು ವಾಜಪೇಯಿಯವರ ಬಲಗಡೆ ನಿಂತಿದ್ದೆ. ನಮ್ಮೆಲ್ಲರಿಗೆ ಇರುಸು-ಮುರುಸಾಗುವ ಹಾಗೆ ಅರಾಫತ್ ಅವರು ಅಶೋಕ ಹಾಲ್‍ನ ಇನ್ನೊಂದು ತುದಿಗೆ ಹೋಗಿ ನಿಂತುಬಿಟ್ಟರು. ಅಂದರೆ ನಾವು ವಿರುದ್ಧ ದಿಕ್ಕಿನಲ್ಲಿ ಸಾಲಾಗಿ ಹೋಗಿ ಮುಖ್ಯ ಅತಿಥಿಯನ್ನು ಪರಿಚಯಿಸಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದ್ದರಿಂದ ವಾಜಪೇಯಿಯವರು ನನ್ನ ಹಿಂದೆ ನಿಲ್ಲಬೇಕಾಯಿತು. ನಾನು ವಿಧೇಯತೆಯಿಂದ ಸಾಲಿನಿಂದ ಆಚೆ ಸರಿದು ನನಗಿಂತ ಹಿರಿಯರಾದ ವಾಜಪೇಯಿಯವರಿಗೆ ಮುಂದೆ ಹೋಗುವಂತೆ ಮನವಿ ಮಾಡಿದೆ. ಕೂಡಲೇ ಮುಗುಳ್ನಕ್ಕ ವಾಜಪೇಯಿಯವರು ನಾನು ಅಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಮುರಳಿ ಮನೋಹರ ಜೋಷಿಯವರನ್ನು ‘ಹಿಂದೂ ಜಿನ್ನಾ’ ಎಂದು ಕರೆದಿದ್ದನ್ನು ನೆನಪಿಸಿಕೊಂಡು "ಇಲ್ಲ ಇಲ್ಲ, ನೀವೆಲ್ಲಿದ್ದೀರೋ ಅಲ್ಲೇ ಇರಿ. ನಾನು ಎಷ್ಟಾಗಲೀ ಹಿಂದೂ ಜಿನ್ನಾನ ಹಿಂಬಾಲಕ ಅಷ್ಟೆ" ಎಂದು ಮುಗುಳ್ನಗುತ್ತಾ ನನ್ನನ್ನು ಮುಂದೆ ಬಿಟ್ಟರು. ಮೋದಿಗೆ ಆ ವಿನಯವಾಗಲಿ ಅಥವಾ ಹಾಸ್ಯಪ್ರಜ್ಞೆಯಾಗಲೀ ಇದೆಯೆ?

ಅಡ್ವಾಣಿಯವರ ವಿಷಯಕ್ಕೆ ಬರೋಣ. ಅವರ ರಥಯಾತ್ರೆಯನ್ನು ನಾನು ‘ಬೆಂಕಿಯಾತ್ರೆ’ ಎಂದು ಯಾವಾಗಲೂ ಜರಿಯುತ್ತಿರುತ್ತೇನೆ. 1991ರಲ್ಲಿ ನಾನು ಮೊಟ್ಟ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಕೆಲವೇ ತಿಂಗಳಲ್ಲಿ ನಾವಿಬ್ಬರೂ ಸ್ಟ್ರಾಸ್‍ಬರ್ಗ್‍ನ ಐರೋಪ್ಯ ಸಂಸತ್ತಿನಲ್ಲಿ ಏರ್ಪಾಡಾಗಿದ್ದ ಪ್ರಜಾಸತ್ತೆ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವುದಕ್ಕೆ ಹೋಗಬೇಕಾಯಿತು. ನನ್ನ ಹೆಂಡತಿಯೂ ಜೊತೆಗೆ ಬಂದಿದ್ದಳು. ಸಿನಿಮಾ ನೋಡುವುದಕ್ಕೆ ನಾನು ವಿಮಾನದ ಹಿಂಭಾಗಕ್ಕೆ ಹೋದಾಗ (ಆ ದಿನಗಳಲ್ಲಿ ಎಲ್ಲರೂ ಒಂದೇ ಕಡೆ ಸಿನಿಮಾ ನೋಡಬೇಕಿತ್ತು. ಈಗಿನಂತೆ ತಮಗೆ ಬೇಕಾಗಿದ್ದನ್ನು ನೋಡಿಕೊಳ್ಳುವ ವೈಯಕ್ತಿಕ ವೀಡಿಯೋ ಪರದೆಗಳ ವ್ಯವಸ್ಥೆ ಇರಲಿಲ್ಲ) ಅಡ್ವಾಣಿಯವರು ಎದ್ದು ಬಂದು ನನ್ನ ಹೆಂಡತಿಯ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ದೀರ್ಘವಾದ ಆ ಸಿನಿಮಾ ಮುಗಿಯುವ ತನಕ ಅವಳೊಂದಿಗೆ ಮಾತಾಡುತ್ತಿದ್ದರು. ನಾನು ಸಿನಿಮಾ ಮುಗಿಸಿಕೊಂಡು ವಾಪಾಸು ಬಂದ ಮೇಲೆ ನನ್ನ ಹೆಂಡತಿ ನನಗೆ ಕಿವಿಮಾತು ಹೇಳಿದಳು: "ಅವರು ಅದೆಷ್ಟು ಒಳ್ಳೆಯ ಮನುಷ್ಯ. ನೀವೇ ಅವರ ಬಗ್ಗೆ ಕೆಟ್ಟದಾಗಿ ಮಾತಾಡ್ತೀರಿ. ಇನ್ನು ಮುಂದಾದರೂ ಸ್ವಲ್ಪ ನೆಟ್ಟಗೆ ಇರಿ".

ನನಗೆ ಒಂದು ರೀತಿಯ ಬೇಸರವಾಗಿ ಅಂದಿನಿಂದ ನಾನು ಅಡ್ವಾಣಿಯವರನ್ನು ಭಿನ್ನವಾಗಿಯೇ ನೋಡಲಾರಂಭಿಸಿದೆ. ಅಡ್ವಾಣಿಯವರು ಫ್ರೆಂಚ್ ಭಾಷೆ ಅರಿಯದ ಶುದ್ಧ ಸಸ್ಯಹಾರಿ. ಫ್ರೆಂಚ್ ಭಾಷೆಯನ್ನು ಸಾಕಷ್ಟು ಬಲ್ಲವನಾದ ನಾನು ಅಡ್ವಾಣಿಯವರ ಕಟ್ಟುನಿಟ್ಟಿನ ಆಹಾರಾದ್ಯತೆಗಳ ವಿರುದ್ಧ ಫ್ರೆಂಚ್ ಮಾಣಿಗಳು ಮಾಡುತ್ತಿದ್ದ ಟೀಕೆಗಳಿಂದ ಅವರನ್ನು ರಕ್ಷಿಸುವ ಹೊಣೆಗಾರಿಕೆ ಹೊತ್ತುಕೊಂಡೆ. ನನ್ನ ಹೆಂಡತಿ ಹೇಳಿದ್ದು ಸರಿ ಎಂದು ಸ್ಟ್ರಾಸ್‍ಬರ್ಗ್ ಪ್ರವಾಸದ ಕೊನೆಯ ಹೊತ್ತಿಗೆ ನನಗೆ ಮನವರಿಕೆಯಾಯಿತು; ಅವರು ಬಾಬ್ರಿ ಮಸೀದಿ ಧ್ವಂಸ ಮಾಡುವುದಕ್ಕೆ ಮುನ್ನುಗ್ಗಿದ್ದನ್ನು ನೆನಪಿನಲ್ಲಿಟ್ಟುಕೊಂಡೂ ಹೇಳುವುದಾದರೆ ಅವರೊಬ್ಬ "ಉತ್ತಮ" ವ್ಯಕ್ತಿಯಾಗಿದ್ದರು.

ಬಾಬ್ರಿ ಮಸೀದಿಯ ಬರ್ಬರ ಧ್ವಂಸ ನಡೆದಾಗ ನಾನು ಅವರನ್ನೂ ಬಿಡದೆ ದೂಷಿಸಿದೆ. ನಾನು ಕನ್ನಾಟ್ ಪ್ಲೇಸ್ ಅನ್ನು ರಾಜೀವ್ ಚೌಕ್ ಎಂದು ಮರುನಾಮಕರಣ ಮಾಡಿದ್ದನ್ನು ರದ್ದುಗೊಳಿಸಿ ಮತ್ತೆ ಅದನ್ನು ಕನ್ನಾಟ್ ಪ್ಲೇಸ್ ಅಂತ ಮಾಡಬೇಕೆಂದು ಈ ದೇಶದ ಉಪ ಪ್ರಧಾನಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಅಡ್ವಾಣಿ ಯವರ ಮೇಲೆ ಕೆಲವರು ಒತ್ತಡ ತರುತ್ತಿದ್ದಾರೆಂಬ ಮಾಹಿತಿ ನನಗೆ ಬಂದಿತ್ತು. ಆದರೆ ಅಡ್ವಾಣಿಯವರು ಮಾತ್ರ ಅಂತಹ ಕ್ಷುಲ್ಲಕ ಹಗೆತನದ ಕೃತ್ಯಗಳಿಗೆ ತಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ನನಗೆ ಭರವಸೆ ಕೊಟ್ಟರು. ಇವತ್ತು ರಾಜೀವ್ ಚೌಕ್ ದೆಹಲಿಯ ಅತ್ಯಂತ ಜನನಿಬಿಡ ಮೆಟ್ರೋ ನಿಲ್ದಾಣವಾಗಿ ನಿಂತಿದ್ದರೆ ಅದಕ್ಕೆ ವೈಯಕ್ತಿಕ ಪೂರ್ವಗ್ರಹಗಳನ್ನು ಮೀರಿ ಆ ಹೆಸರನ್ನು ಉಳಿಸಿಕೊಂಡ ಅಡ್ವಾಣಿ ಕಾರಣ. ಪ್ರಾಯಶಃ, ಇದರ ಒಂದಿಷ್ಟು ಶ್ರೇಯಸ್ಸು ನೆಹರೂ ಅವರಿಗೂ ಹೋಗಬೇಕು. ಏಕೆಂದರೆ, ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಕ್ಷದ ವಿಭಜನೀಯ ರಾಜಕೀಯದ ಜೊತೆ ಸಭ್ಯ, ಗಂಭೀರ ನಡವಳಿಕೆಗಳನ್ನು ಹೇಗೆ ಮೇಳೈಸಬೇಕು ಎಂಬುದನ್ನು ಅವರು ತನ್ನ ಕಾಲದ ಹಿರಿಯ, ಕಿರಿಯ ಪೀಳಿಗೆಗೆ ಕಲಿಸಿಕೊಟ್ಟವರು. ಪಾಪ, ಮೋದಿವರು ಆ ನಂತರದ ಹಾಗೂ ಒರಟು ಪೀಳಿಗೆಗೆ ಸೇರಿದವರು.

ಇದನ್ನೂ ಓದಿ : ಮುದ್ದಿ ಕಿ ಬಾತ್ | ರಾಹುಲ್ ಅಪ್ಪುಗೆಯಿಂದ ದೇಶದಲ್ಲೀಗ ಒಪ್ಪಿಕೋ ಚಳವಳಿ ಆರಂಭ

ಹೀಗಾಗಿ, ವಾಜಪೇಯಿ ಮತ್ತು ಅಡ್ವಾಣಿಯಂತಹ ಕಟಿಬದ್ಧ ಕಾಂಗ್ರೆಸ್ ಎದುರಾಳಿಗಳ ನಾಗರಿಕ ನಡವಳಿಕೆಗಳಿಗಿಂತ ತೀರಾ ಭಿನ್ನವಾಗಿ ನಿಲ್ಲುವ ಮೋದಿಯ ಅವಿನಯ ಒರಟುತನಗಳಿಗೆ ಆರ್‌ಎಸ್‍ಎಸ್ ಹಿನ್ನೆಲೆಯೇ ಕಾರಣ ಎಂದು ಹೇಳಲು ಬರುವುದಿಲ್ಲ. ಮೋದಿ ಹಾಗೆ ವರ್ತಿಸುವುದಕ್ಕೆ ನನಗೆ ಕಾಣುವ ಒಂದೇ ಕಾರಣ ಎಂದರೆ ಅವರು ಸ್ವಾತಂತ್ರ್ಯೋತ್ತರ ಭಾರತದ ಕೂಸಾಗಿರುವುದು; ನೆಹರೂ ಅವರು ತೀರಿಕೊಂಡಾಗ ಕೇವಲ 14 ವರ್ಷದ ಬಾಲಕರಾಗಿದ್ದ ಮೋದಿ ನಾವು ಒಂದು ಪ್ರಜಾತಂತ್ರವಾಗಿ ಪರಿವರ್ತನೆಯಾದ ಆ ಅದ್ಭುತ ಕ್ಷಣವನ್ನು ತಪ್ಪಿಸಿಕೊಂಡರು. ಪ್ರಜಾಸತ್ತೆಯ ಸಂಸ್ಥೆಗಳು ಮತ್ತು ಅವುಗಳ ಮೌಲ್ಯಗಳಿಗೆ ಅವರು ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ. ಮೋದಿಯವರು ಲಾಲ್ ಬಹಾದ್ದೂರ್ ಶಾಸ್ತ್ರಿಯಿಂದ ಹಿಡಿದು ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಮತ್ತು ಇಂದಿರಾಗಾಂಧಿಯವರ ತನಕ ಹಾಗೂ ರಾಜೀವ್ ಗಾಂಧಿಯಿಂದ ಹಿಡಿದು ಚಂದ್ರಶೇಖರ್, ದೇವೇಗೌಡ, ಇಂದರ್ ಕುಮಾರ್ ಗುಜ್ರಾಲ್, ವಾಜಪೇಯಿ ಮತ್ತು ಮನಮೋಹನ್ ಸಿಂಗ್ ತನಕ ಹಿಂದಿನ ಪ್ರಧಾನಿಗಳು ಪರಿಪಾಲಿಸಿದ ಸಂಸದೀಯ ರಾಜನೀತಿಯ ಶಿಷ್ಟಾಚಾರಗಳನ್ನು ರೂಪಿಸಿದ ಸ್ಪರ್ಧಾತ್ಮಕ ರಾಜಕೀಯ ವಾತಾವರಣಕ್ಕೆ ತೆರೆದುಕೊಳ್ಳದೇ ಬೆಳೆದಿದ್ದರಾರೆ. ಮೋದಿಯವರನ್ನು ಬಿಟ್ಟು ಹಿಂದಿನ ಎಲ್ಲಾ ಪ್ರಧಾನಿಗಳೂ ಭಾರತದ ಅತ್ಯಂತ ಶ್ರೇಷ್ಠ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರ ಪ್ರಭಾವದಡಿಯಲ್ಲೇ ತಮ್ಮ ರಾಜಕೀಯ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡು ಉನ್ನತ ಅಧಿಕಾರಕ್ಕೆ ಏರಿದವರಾಗಿದ್ದಾರೆ.

ಹೀಗಾಗಿ, ಪ್ರಜಾಪ್ರಭುತ್ವದಲ್ಲಿ ನಮಗೆ ಎದುರಾಳಿಗಳಿರುತ್ತಾರೆಯೇ ಹೊರತು ವೈರಿಗಳಲ್ಲ ಎನ್ನುವ ಮೂಲತತ್ವಕ್ಕೇ ಮೋದಿ ಮಸಿ ಬಳಿಯುತ್ತಿದ್ದಾರೆ; ನಾವು ಒಪ್ಪದ ಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಜನರ ಬಗ್ಗೆ ನಮ್ಮ ಹೃದಯಗಳಲ್ಲಿ ದ್ವೇಷ ತುಂಬಿಕೊಳ್ಳಕೂಡದು ಎಂಬ ಧ್ಯೇಯಕ್ಕೆ ಅವರು ಕಳಂಕ ತರುತ್ತಿದ್ದಾರೆ. ಮೋದಿ ಮತ್ತು ಷಾ ಅವರಿಗೆ ಅದು ಅರ್ಥವಾಗುತ್ತಿಲ್ಲ. ಅವರು ಕಾರ್ಯಾಚರಿಸುತ್ತಿರುವುದು ದ್ವೇಷ ಮತ್ತು ಪ್ರತಿಕಾರಗಳ ನೆಲೆಯಲ್ಲಿ. ಇತ್ತೀಚಿನ ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಮೋದಿ ಪ್ರತಿಕ್ರಿಯಿಸಿದ ರೀತಿಯಲ್ಲಿ ಹಾಗೂ ಮರುದಿನ ಷಹಜಹಾನ್‍ಪುರದ ಜಾಥಾದಲ್ಲಿ ಅದು ಮತ್ತೊಮ್ಮೆ ನಗ್ನಪ್ರದರ್ಶನವಾಗಿದೆ. ಮೋದಿಯವರನ್ನು ‘ಕೀಳುದರ್ಜೆಯ ವ್ಯಕ್ತಿ’ ಎಂದು ಕರೆದುದಕ್ಕಾಗಿ ನನ್ನನ್ನು ಪಕ್ಷದಿಂದ ಅಮಾನತ್ತು ಮಾಡಿರುವುದು ಇನ್ನೂ ಮುಂದುವರೆಯುತ್ತಿ; ಆದರೆ ಅದರಿಂದ ಮೋದಿ ಏನೂ ಕಲಿತಂತೆ ಕಾಣುವುದಿಲ್ಲ.

(ಮಣಿಶಂಕರ್ ಅಯ್ಯರ್ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಮಾಜಿ ಕಾಂಗ್ರೆಸ್ ಸದಸ್ಯರು)

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More