ಉದ್ಯಮಿಗಳ ಒಡನಾಟ ಸಮರ್ಥಿಸಿಕೊಂಡ ಪ್ರಧಾನಿ, ರಫೇಲ್ ಬಗ್ಗೆ ಏಕೆ ತುಟಿಬಿಚ್ಚುತ್ತಿಲ್ಲ?

ಉದ್ಯಮಿಗಳೊಂದಿಗೆ ಪ್ರಧಾನಿ ಮೋದಿಯವರ ಒಡನಾಟದ ಬಗ್ಗೆ ಪ್ರತಿಪಕ್ಷಗಳು ಪ್ರಶ್ನಿಸುತ್ತಲೇ ಇವೆ. ಇದೀಗ ಉದ್ಯಮಿಗಳ ಸಮಾವೇಶವೊಂದರಲ್ಲಿ ಈ ಬಗ್ಗೆ ಮೋದಿ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಬೆಳವಣಿಗೆಯ ಕುರಿತ ‘ನ್ಯೂಸ್ ಸೆಂಟ್ರಲ್’ ಜಾಲತಾಣದ ವರದಿಯ ಭಾವಾನುವಾದ ಇಲ್ಲಿದೆ

ಅನಿಲ್ ಅಂಬಾನಿ, ನೀರವ್ ಮೋದಿ, ಮೆಹುಲ್ ಚೋಸ್ಕಿ ಮತ್ತಿತರ ವಿವಾದಿತ ಉದ್ಯಮಿಗಳ ಜೊತೆ ಗುರುತಿಸಿಕೊಂಡಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆಗಳು ಹೆಚ್ಚಿವೆ. ಜುಲೈ 29ರಂದು ಉತ್ತರ ಪ್ರದೇಶದಲ್ಲಿ ನಡೆದ ಬಿರ್ಲಾ, ಅದಾನಿ, ಅಂಬಾನಿ ಕಂಪನಿಗಳ ಪ್ರಮುಖರ ಸಹಿತ 80ಕ್ಕೂ ಹೆಚ್ಚು ಉದ್ಯಮಿಗಳನ್ನು ಒಳಗೊಂಡಿದ್ದ ಸಮಾವೇಶವೊಂದರಲ್ಲಿ, ಸರ್ಕಾರದ ಕೆಲವು ಯೋಜನೆಗಳಿಗೆ ಚಾಲನೆ ನೀಡುತ್ತ, ಉದ್ಯಮಿಗಳೊಂದಿಗಿನ ತಮ್ಮ ಸಂಬಂಧದ ನಗೆಯುಕ್ಕಿಸುವಂತಹ ಸಮರ್ಥನೆಯೊಂದನ್ನು ನೀಡುವ ಧೈರ್ಯ ಪ್ರದರ್ಶಿಸಿದರು ಮೋದಿ.

“ಬೇರೆ ಪಕ್ಷದ ಮುಖಂಡರು ಕೂಡ ಉದ್ಯಮಿಗಳನ್ನು ಭೇಟಿ ಮಾಡುತ್ತಾರೆ, ಆದರೆ ಅವರು ಅದನ್ನು ಕದ್ದುಮುಚ್ಚಿ ಮಾಡುತ್ತಾರೆ,” ಎಂದು, ಸಮೀಪದಲ್ಲಿಯೇ ಕುಳಿತಿದ್ದ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಅವರತ್ತ ಬೊಟ್ಟು ಮಾಡಿದ ಮೋದಿ, “ಹಿಂಬಾಗಿಲಿನ ಮೂಲಕ ಉದ್ಯಮಿಗಳ ಸಖ್ಯ ಬೆಳೆಸುವ ರಾಜಕಾರಣಿಗಳ ಬಗ್ಗೆ ಬೇರೆಯವರಿಗಿಂತಲೂ ಅಮರ್ ಸಿಂಗ್ ಚೆನ್ನಾಗಿ ಬಲ್ಲರು,” ಎಂದರು. ಅಮರ್ ಸಿಂಗ್ ನಗುಮುಖದೊಂದಿಗೆ ಒಪ್ಪಿಕೊಂಡರು.

ಹೀಗೆ ಮಾಡುವುದು ತಪ್ಪು ಎಂಬುದು ಅಮರ್ ಸಿಂಗ್ ಅಥವಾ ಸ್ವತಃ ತಮಗೆ ತಿಳಿದಿದೆಯೇ ಎಂಬ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಲಿಲ್ಲ. ಅಮರ್ ಸಿಂಗ್ ಬಿಟ್ಟು ಬೇರೆಯವರು ಈ ಬಗ್ಗೆ ಏನು ತಿಳಿದುಕೊಂಡಾರು ಎಂಬುದರ ಬಗ್ಗೆಯೂ ಅವರು ಉತ್ತರಿಸಲಿಲ್ಲ. ಬದಲಿಗೆ, ತಮ್ಮ ಸಮರ್ಥನೆ ಬಗ್ಗೆ ಮರುಕ ಹುಟ್ಟಿಸುವಂತಹ ವಾತಾವರಣವೊಂದನ್ನು ಸೃಷ್ಟಿಸಿದರು. ಅಲ್ಲದೆ, ಯಾವುದು ಮುಜಗರಕ್ಕೆ ಈಡುಮಾಡುವಂತಹ ವಿಚಾರವೋ ಅದರ ಬಗ್ಗೆ ತಾನು ಮುಗ್ಧ ಎಂಬಂತೆ ಬಿಂಬಿಸಿಕೊಂಡರು. “ನಿಮ್ಮ ಮನಃಸಾಕ್ಷಿ ಸರಿಯಾಗಿದ್ದರೆ (ಪ್ರಧಾನಿ ತಮ್ಮ ಭಾಷಣದಲ್ಲಿ ಸಾಫ್ ನಿಯತ್ತು ಎಂಬ ಪದಬಳಸಿದ್ದಾರೆ) ಸಾಕು, ನೀವು ಯಾರೊಂದಿಗೆ ಇರುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ,” ಎಂಬಂತಹ ಹೇಳಿಕೆ ನೀಡಿದ ಅವರು, “ಮಹಾತ್ಮ ಗಾಂಧಿ ಯಾವುದೇ ಹಿಂಜರಿಕೆ ಇಲ್ಲದೆ ಬಿರ್ಲಾ ಜೊತೆಗೆ ಗುರುತಿಸಿಕೊಂಡಿದ್ದರು,” ಎಂದರು.

ದೇಶದ ಅಭಿವೃದ್ಧಿಯಲ್ಲಿ ಉದ್ಯಮಿಗಳ ಪಾತ್ರ ದೊಡ್ಡದು ಎಂದ ಪ್ರಧಾನಿ, “ಅವರೂ ಗಣನೀಯ ಪಾತ್ರ ಹೊಂದಿದ್ದಾರೆ. ಅವರನ್ನೇಕೆ ಅವಮಾನಿಸುತ್ತೀರಿ? ಇದು ನಡೆದುಕೊಳ್ಳುವ ರೀತಿಯೇ? ಯಾರು ತಪ್ಪೆಸಗಿದ್ದಾರೋ ಅವರು ದೇಶ ಬಿಟ್ಟು ಓಡಿಹೋಗಿದ್ದಾರೆ,” ಎಂದರು.

ಇದನ್ನೂ ಓದಿ : ಕರಣ್‌ ಥಾಪರ್‌ ಸಂದರ್ಶನದಿಂದ ಮೋದಿ ಏಕಾಏಕಿ ಎದ್ದುಹೋಗಿದ್ದೇಕೆ ಗೊತ್ತೇ? | ಭಾಗ 2

2018ರ ದಾವೋಸ್ ಶೃಂಗಸಭೆಯಲ್ಲಿ ನೀರವ್ ಮೋದಿ ಅವರೊಂದಿಗೆ ಮೋದಿ ಇರುವ ಚಿತ್ರ ಬಹಿರಂಗಗೊಂಡಿತ್ತು. ನಂತರ ನೀರವ್ ಮೋದಿಯವರ ಅಪರಾಧಗಳಲ್ಲಿ ಭಾಗಿಯಾಗಿದ್ದ ಮೆಹುಲ್ ಚೋಕ್ಸಿ ಅವರನ್ನು ಸ್ವತಃ ಪ್ರಧಾನಿ “ಮೆಹುಲ್ ಭಾಯ್,” ಎಂದು ಸಂಬೋಧಿಸಿದ್ದರು. ಚೋಕ್ಸಿ ಅವರು ಆಂಟಿಗುವಾ ಪೌರತ್ವ ಮತ್ತು ಪಾಸ್‌ಪೋರ್ಟ್ ಪಡೆದಿದ್ದಾರೆ. ಕುತೂಹಲದ ಸಂಗತಿ ಎಂದರೆ, ಅಲ್ಲಿನ ಪ್ರಧಾನಿಯನ್ನು ಮೋದಿ ಅವರು ಕಳೆದ ಏಪ್ರಿಲ್‌ನಲ್ಲಿ ಭೇಟಿಯಾಗಿದ್ದರು.

ಅನಿಲ್ ಅಂಬಾನಿ ಅವರಿಗೆ ಅನುಕೂಲ ಕಲ್ಪಿಸಲೆಂದೇ ರಫೇಲ್ ಯುದ್ಧವಿಮಾನದ ಒಪ್ಪಂದದ ನಿಯಮಗಳನ್ನು ಬದಲಿಸಿದ ತಾಜಾ ಆರೋಪ ಪ್ರಧಾನಿ ಮೋದಿ ಅವರ ಮೇಲಿದೆ. ಫ್ರಾನ್ಸ್‌ನಿಂದ 36 ಯುದ್ಧ ವಿಮಾನಗಳನ್ನು ಖರೀದಿಸುವ ಈ ಒಪ್ಪಂದದ ಸುತ್ತ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಕೇಂದ್ರ ಸರ್ಕಾರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.

ವಿಮಾನ ಖರೀದಿಗೆ ಮಾಡಿದ ವೆಚ್ಚವೆಷ್ಟು ಎಂಬುದನ್ನಾಗಲೀ ಕೇವಲ 5,00,000 ರು. ಬಂಡವಾಳ ಹೊಂದಿದ್ದ ಹಾಗೂ ಹತ್ತು ದಿನಗಳ ಹಿಂದಷ್ಟೇ ಉದ್ಭವವಾಗಿದ್ದ ಅನಿಲ್ ಅಂಬಾನಿ ಅವರ ರಿಲಯನ್ಸ್ ರಕ್ಷಣಾ ಲಿಮಿಟೆಡ್‌ಗೆ ಒಪ್ಪಂದವನ್ನು ನೀಡಿದ್ದು ಹೇಗೆ ಎಂಬುದನ್ನಾಗಲೀ ಸರ್ಕಾರ ಬಹಿರಂಗಪಡಿಸುತ್ತಿಲ್ಲ. ಪ್ರಧಾನಿ ಮೋದಿ ಅವರಿಗೆ ಮರೆಮಾಚುವಂತಹ ಸಂಗತಿಯಾಗಿರದೆ ಇದ್ದರೆ ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳು ಎತ್ತಿರುವ ಕಾನೂನುಬದ್ಧ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಏಕೆ ನಿರಾಕರಿಸುತ್ತಿದೆ? ಇದುವರೆಗೆ ಚೋಕ್ಸಿಯನ್ನು ಗಡಿಪಾರು ಮಾಡುವಂತೆ ಆಂಟಿಗುವಾ ಸರ್ಕಾರದ ಸಹಾಯವನ್ನು ಕೇಂದ್ರ ಸರ್ಕಾರ ಕೇಳಿಲ್ಲ ಎಂಬುದು ಕೂಡ ಗಮನಾರ್ಹ ಸಂಗತಿ.

ಈ ಕೊರತೆಗಳ ಬಗ್ಗೆ ಪ್ರಧಾನಿಯವರು ವಿವರಣೆ ನೀಡಿದಾಗಲಷ್ಟೇ ಅವರ ‘ಸಾಫ್ ನಿಯತ್ತನ್ನು’ ಒಪ್ಪಬಹುದು!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More