ಎಲ್ಲಿಯೂ ನಿಷ್ಠವಾಗಿರದ ಯತ್ನಾಳರ ಬಗ್ಗೆ ಸ್ವತಃ ಬಿಜೆಪಿಯವರಿಗೇ ಇಲ್ಲ ನಂಬಿಕೆ!

ಜೆಡಿಎಸ್‌ನಲ್ಲಿದ್ದಾಗ ಜಾತ್ಯತೀತತೆ ಬಗ್ಗೆ ಭಾಷಣ ಮಾಡುತ್ತ, ಹಿಂದುತ್ವದ ವಿರುದ್ಧ ಹಾಗೂ ಹಿಂದೂ ಸಂಘಟನೆಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳರು, ಈಗ ಏಕಾಏಕಿ ಹಿಂದುತ್ವದ ಪರ ಈ ಪರಿ ಬ್ಯಾಟ್ ಬೀಸುವುದು ಕಂಡು ಸ್ವತಃ ಅವರ ಆಪ್ತ ಕಾರ್ಯಕರ್ತರೇ ಬೆಚ್ಚಿಬಿದ್ದಿದ್ದಾರೆ!

ಮಾಜಿ ಕೇಂದ್ರ ಸಚಿವ, ಹಾಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೂ ವಿವಾದಕ್ಕೂ ಬಿಡಲಾರದ ನಂಟು. ಪ್ರತಿಸಲ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ, ಮುಸ್ಲಿಮರ ವಿರುದ್ಧ ಹಾಗೂ ಪ್ರಗತಿಪರ ಸಾಹಿತಿಗಳ ವಿರುದ್ಧ ಯತ್ನಾಳ ಉಗ್ರವಾಗಿ ಭಾಷಣ ಮಾಡುತ್ತ ಕಾರ್ಯಕರ್ತರನ್ನು ಪ್ರಚೋದಿಸುತ್ತಾರೆ ಅನ್ನುವ ಆರೋಪ ಮೊದಲಿನಿಂದಲೂ ಇದೆ. ಈ ಹಿಂದೆ ವಿಧಾನಸಭಾ ಚುನಾವಣಾ ಪೂರ್ವದಲ್ಲಿ, “ನನಗೆ ಮುಸ್ಲಿಂ ಮತಗಳು ಬೇಡ,” ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿಗೆ ಮುಜುಗರ ತಂದಿದ್ದ ಯತ್ನಾಳ, ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ, “ಮುಸ್ಲಿಂ ಟೋಪಿ ಧರಿಸಿದವರು ಹಾಗೂ ಬುರ್ಕಾ ಹಾಕಿದರವರು ನನ್ನ ಕಚೇರಿ ಸುತ್ತಮುತ್ತ ಸುಳಿಯಬಾರದು,” ಅನ್ನುವ ಮೂಲಕ ಜನರ ವಿರೋಧಕ್ಕೆ ಕಾರಣರಾದರು.

ಇದೀಗ ಅದಕ್ಕಿಂತ ಮತ್ತೊಂದು ಹೆಜ್ಜೆ ಮುಂದೆ ಹೋಗಿ, “ನಾನು ಗೃಹ ಸಚಿವನಾಗಿದ್ದರೆ ಬುದ್ಧಿಜೀವಿಗಳು, ದೇಶದ್ರೋಹಿಗಳ ಮೇಲೆ ಗುಂಡು ಹಾರಿಸಿ ಕೊಲ್ಲಲು ಆದೇಶಿಸುತ್ತಿದ್ದೆ,” ಎನ್ನುವ ಮೂಲಕ ಮತ್ತೊಮ್ಮೆ ಜನರ ಆಕ್ರೋಶಕ್ಕೆ ಗುರಿಯಾಗಿದ್ದು, ಬಿಜೆಪಿ ನಾಯಕರಿಗೆ ಮುಜುಗರ ಉಂಟುಮಾಡಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸುವ ದಿನ ಯತ್ನಾಳರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸುವ ವೇಳೆ ವಿಜಯಪುರ ನಗರದಲ್ಲಿ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ಸಂಭವಿಸಿತ್ತು. ಈ ಘಟನೆ ಬಳಿಕ 8 ದಿನಗಳ ಕಾಲ ನಾಪತ್ತೆಯಾಗಿದ್ದ ಯತ್ನಾಳರನ್ನು ವಿಜಯಪುರ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿ, ಜೈಲಿಗಟ್ಟಿದ್ದರು. ಆ ಬಳಿಕ ಕೆಲವು ತಿಂಗಳ ಕಾಲ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದ ಯತ್ನಾಳ್, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ವೇಳೆ ಮತ್ತೆ ಪ್ರತ್ಯಕ್ಷರಾಗಿ, ಚುನಾವಣಾ ಆಖಾಡದಲ್ಲಿ ಗೆಲವು ಸಾಧಿಸಿದರು. ಅದಾದ ಬಳಿಕ ಆ ಸ್ಥಾನಕ್ಕೆ ರಾಜಿನಾಮೆ ನೀಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರದಿಂದ ಶಾಸಕರಾಗಿ ಆಯ್ಕೆಯಾಗಿ, ತಾನೊಬ್ಬ ಹಿಂದೂ ನಾಯಕ ಎಂದು ಹೇಳಿಕೊಂಡು ಸಂಚರಿಸುತ್ತಿದ್ದಾರೆ.

ಈ ಮೊದಲು ವಿಜಯಪುರ ಸಂಸದರಾಗಿದ್ದ ವೇಳೆ ಇದೇ ಯತ್ನಾಳ ವಿರುದ್ಧ ಆರೆಸ್ಸೆಸ್, ವಿಎಚ್‌ಪಿ ಸೇರಿದಂತೆ ಹಿಂದೂ ಸಂಘಟನೆಯ ನಾಯಕರು ಅಸಮಾಧಾನ ಹೊರಹಾಕಿದ್ದರು. ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಸಂಘದ ನಾಯಕರ ಹಾಗೂ ಕಾರ್ಯಕರ್ತರ ಪರವಾಗಿ ಯಾವತ್ತೂ ನಿಲ್ಲಲಿಲ್ಲ ಅನ್ನುವ ಕಾರಣದಿಂದ ಅವರ ವಿರೋಧ ಕಟ್ಟಿಕೊಂಡರು. ಈಗಲೂ ಯತ್ನಾಳ, ತಾನೊಬ್ಬ ಪ್ರಬಲ ಹಿಂದೂ ನಾಯಕ ಎಂದು ಪ್ರಚಾರ ಪಡೆಯುತ್ತಿದ್ದಾರೆ. ಆದರೆ, ಇದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಲವು ನಾಯಕರು ಯತ್ನಾಳ ವಿರುದ್ಧ ಆಕ್ರೋಶಗೊಂಡು ನಾಗಪುರ ಆರೆಸ್ಸೆಸ್ ಕಚೇರಿಗೂ ದೂರು ನೀಡಿದ್ದರು. “ಯತ್ನಾಳ ಒಬ್ಬ ಡೋಂಗಿ ಹಿಂದುತ್ವವಾದಿ, ಅವರನ್ನು ಪಕ್ಷಕ್ಕೆ ಕರೆದುಕೊಳ್ಳಬಾರದು,” ಎಂದು ದೂರಲಾಗಿತ್ತು. ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ ಜಾತ್ಯತೀತತೆ ಬಗ್ಗೆ ಭಾಷಣ ಮಾಡುತ್ತ, ಹಿಂದುತ್ವ ಅನ್ನುವವರ ವಿರುದ್ಧ ಹಾಗೂ ಹಿಂದೂ ಸಂಘಟನೆಗಳ ನಾಯಕರು ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳರು, ಈಗ ಏಕಾಏಕಿ ಹಿಂದುತ್ವದ ಬಗ್ಗೆ ಉಗ್ರವಾಗಿ ಮಾತನಾಡುವುದು, ಮುಸ್ಲಿಮರ ವಿರುದ್ಧ ಕೋಮು ಪ್ರಚೋದನೆಯ ಭಾಷಣ ಮಾಡುವುದನ್ನು ನೋಡಿ ಸ್ವತಃ ಅವರ ಆಪ್ತ ಕಾರ್ಯಕರ್ತರೇ ಆಶ್ಚರ್ಯಗೊಂಡಿದ್ದಾರೆ.

ಬಿಜೆಪಿ ನಾಯಕರ ವಿರುದ್ಧವೇ ಗರಂ

ಭಾರತಿಯ ಜನತಾ ಪಕ್ಷದ ನಾಯಕರಿಗೆ ಯತ್ನಾಳ ಬಗ್ಗೆ ಈಗಲೂ ಗೊಂದಲವಿದೆ. ಅವರು ಯಾವಾಗ ಪಕ್ಷ ಬಿಡುತ್ತಾರೆ, ಯಾರ ವಿರುದ್ಧ ಮಾತಾಡುತ್ತಾರೆ ಎನ್ನುವುದು ಸ್ವತಃ ಅವರ ಆಪ್ತ ಸಿಬ್ಬಂದಿಗೂ ಗೊತ್ತಿರುವುದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಯತ್ನಾಳ, ಅನಂತಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಸದಾನಂದ ಗೌಡ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿಯಿಂದ ಉಚ್ಚಾಟನೆಗೊಂಡರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣರಾದರು.

ಬಳಿಕ ಜೆಡಿಎಸ್ ಸೇರಿದ ಯತ್ನಾಳ, ದೇವೇಗೌಡರ ಮಾನಸಪುತ್ರನಂತೆ ಮಿಂಚಿದರು. ಸ್ವತಃ ಮಾಜಿ ಪ್ರಧಾನಿ ದೇವೇಗೌಡ, ವಿಜಯಪುರ ನಗರದ ಶಿವಾನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ, “ನನಗೆ ಯತ್ನಾಳ ಹಾಗೂ ಕುಮಾರಸ್ವಾಮಿ ಎರಡು ಕಣ್ಣುಗಳು ಇದ್ದಂತೆ,” ಅಂದಿದ್ದರು. ಆದರೆ, 2014ರಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ತಾಳಿಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್‌ನಲ್ಲಿದ್ದುಕೊಂಡೇ ಮೋದಿಯನ್ನು ಹಾಡಿ ಹೊಗಳಿದರು. ಆನಂತರ ಜೆಡಿಎಸ್‌ನಿಂದ ಹೊರಬಿದ್ದ ಯತ್ನಾಳ, ಮರಳಿ ಬಿಜೆಪಿಗೆ ಬಂದರು. ಆದರೆ, ಎಷ್ಟು ಬೇಗ ಬಿಜೆಪಿಗೆ ಬಂದರೋ ಅಷ್ಟೇ ಬೇಗ ಮತ್ತೆ ಬಿಜೆಪಿಯಿಂದ ಹೊರನಡೆದರು. ಪರಿಷತ್ ಚುನಾವಣೆ ವೇಳೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ಬಿಜೆಪಿ ನಾಯಕರು ಒಪ್ಪದ ಕಾರಣ ಅಂದಿನ ಬಿಜೆಪಿ ಅಭ್ಯರ್ಥಿ ಜಿ ಎಸ್ ನ್ಯಾಮಗೌಡ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಫರ್ಧಿಸಿ ಗೆಲುವು ಸಾಧಿಸಿ ಮತ್ತೆ ರಾಜಕೀಯದಲ್ಲಿ ಮೇಲಕ್ಕೇರಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹಾಗೂ ಇತರ ನಾಯಕರ ಸಹಾಯದಿಂದ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿ, ಪಕ್ಷದ ವಿರುದ್ಧವೇ ಸಡ್ಡು ಹೊಡೆದರು.

ಬಿಜೆಪಿಯಲ್ಲೇ ಯತ್ನಾಳ್‌ಗೆ ಪರ- ವಿರೋಧ

ಇದನ್ನೂ ಓದಿ : ವಿಡಿಯೋ | ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದರು. ಭ್ರಷ್ಟಾಚಾರದ ಆರೋಪದ ಮೇಲೆ ಬಿಎಸ್‌ವೈ ಜೈಲಿಗೆ ಹೋಗಿಬಂದ ಮೇಲಂತೂ, ಅವರ ವಿರುದ್ಧ ಸಾರ್ವಜನಿಕ ಸಮಾರಂಭಗಳಲ್ಲಿ ಏಕವಚನದಲ್ಲೇ ವಾಚಾಮಗೋಚರವಾಗಿ ಬೈಯುತ್ತಿದ್ದರು. ಆದರೆ, ಬಣ ರಾಜಕೀಯ ಬದಲಾದಂತೆ ಏಕಾಏಕಿ ಅನಂತಕುಮಾರ್ ಬಣದಿಂದ ಬಿಎಸ್‌ವೈ ಬಣಕ್ಕೆ ಜಿಗಿದು, “ಯಡಿಯೂರಪ್ಪವನರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಶ್ರಮಿಸುತ್ತೇನೆ,” ಎನ್ನುವ ಮೂಲಕ ಉಲ್ಟಾ ಹೊಡೆದರು. ಅದಕ್ಕೆ ಪೂರಕವಾಗಿ ಕೇಂದ್ರದಲ್ಲಿ ಅಟಲ್ ಸರ್ಕಾರದಲ್ಲಿ ಸಹೋದ್ಯೋಗಿಯಾಗಿದ್ದ ನಿತಿನ್ ಗಡ್ಕರಿ ಹಾಗೂ ಇತರ ನಾಯಕರ ಮೂಲಕ ಮತ್ತೆ ಬಿಜೆಪಿಗೆ ಬಂದು ಯಡಿಯೂರಪ್ಪನವರ ಆಪ್ತರಾದರು. ಆದರೆ, ಯತ್ನಾಳ ಅವರನ್ನು ಏಕಾಏಕಿ ಪಕ್ಷಕ್ಕೆ ಬರಮಾಡಿಕೊಂಡಿದ್ದು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಅರುಣ್ ಶಹಾಪುರ, ಅಪ್ಪಾಸಾಹೇಬ್ ಪಟ್ಟಣಶಟ್ಟಿ ಸೇರಿದಂತೆ ಬಹುತೇಕ ನಾಯಕರ ಆಕ್ರೋಶಕ್ಕೆ ಕಾರಣವಾಯಿತು. ಅದರಲ್ಲೂ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, “ಯತ್ನಾಳ ಅವರನ್ನು ಪಕ್ಷಕ್ಕೆ ಕರೆದುಕೊಂಡರೆ ನಾನು ರಾಜಿನಾಮೆ ನೀಡುವೆ,” ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಅಮಿತ್ ಶಾ ಅವರ ಆದೇಶದಿಂದ ತಣ್ಣಗಾದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More