ಚಾಣಕ್ಯಪುರಿ | ಬಣ ರಾಜಕೀಯ ಬಿರುಸು, ಸಿದ್ದು ಸ್ಥಾನ ತಪ್ಪಿಸಲು ನಡೆದಿದೆ ಸಂಚು!

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮುನ್ನೆಲೆಗೆ ಬಂದಿದೆ ಎನ್ನಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒಂದು ಕಡೆ; ಡಿಸಿಎಂ ಜಿ ಪರಮೇಶ್ವರ್, ಸಚಿವ ಡಿ ಕೆ ಶಿವಕುಮಾರ್ ಇನ್ನೊಂದು ಬಣವಂತೆ. ಸದ್ಯ ಮೇಲುಗೈ ಸಾಧಿಸುವ ಪ್ರಯತ್ನ ನಡೆದಿದೆಯಂತೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು. ಆದರೂ ಕಾಂಗ್ರೆಸ್ ಹೈಕಮಾಂಡ್‌ಗೆ ಸಿದ್ದರಾಮಯ್ಯ ಬಗೆಗಿನ‌ ವಿಶ್ವಾಸ ಕಡಿಮೆ ಆಗಿಲ್ಲ. ಹಾಗಾಗಿಯೇ ಶಾಸಕಾಂಗ ಪಕ್ಷದ ನಾಯಕ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷತೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಎಐಸಿಸಿ ಕಾರ್ಯಕಾರಿಣಿಯ ಸದಸ್ಯತ್ವ ನೀಡಿದೆ. ಇದೆಲ್ಲಕ್ಕೂ ಮಿಗಿಲಾಗಿ, ಲೋಕಸಭಾ ಚುನಾವಣೆಯ ನೇತೃತ್ವವನ್ನು ಸಂಪೂರ್ಣವಾಗಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ಇಷ್ಟು ಸಾಲದೆಂಬಂತೆ, ದಿನೇಶ್ ಗುಂಡೂರಾವ್ ನಾಮಕಾವಸ್ತೆಯ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯ ಪಕ್ಷದ ಮೇಲೆ ಅಧಿಪತ್ಯ ಸ್ಥಾಪಿಸಿದ್ದಾರೆ. ಉದಾಹರಣೆಗೆ, ಚುನಾವಣೆ ಸೋತ ಬಳಿಕ ತಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ‌ ಸ್ಪೀಕರ್ ಕೆ ಬಿ ಕೋಳಿವಾಡ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದೆ ಅವರ ನಿಷ್ಠರನ್ನೇ ಲೋಕಸಭಾ ‌ಚುನಾವಣೆಯ ಅಭ್ಯರ್ಥಿಗಳನ್ನಾಗಿ ಮಾಡುತ್ತಾರೆ ಎಂಬ ಅಂಶಗಳು ಪರಮೇಶ್ವರ್ ಮತ್ತು ಡಿ ಕೆ ಶಿವಕುಮಾರ್ ಜೋಡಿಯ ನಿದ್ದೆಗೆಡಿಸಿದೆಯಂತೆ.

ಸಿದ್ದರಾಮಯ್ಯ ಪ್ರಾಬಲ್ಯ ಕಡಿಮೆ ಮಾಡಲು ಪರಮೇಶ್ವರ್ ಮತ್ತು ಡಿ ಕೆ ಶಿವಕುಮಾರ್ ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಮೊದಲಿಗೆ, ಹೇಗಾದರೂ ಮಾಡಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ತಪ್ಪಿಸಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ. ಅದೇ ಕಾರಣಕ್ಕೆ, “ಸಿದ್ದರಾಮಯ್ಯ ಲೋಕಸಭಾ ಚುನಾವಣೆಗೆ ನಿಲ್ಲಲಿ. ಅವರು ಸ್ಪರ್ಧಿಸುವುದರಿಂದ ಪಕ್ಷಕ್ಕೆ ಹೆಚ್ಚಿನ ಅನುಕೂಲ ಆಗುತ್ತದೆ. ಕುರುಬರು ಮತ್ತು ಅಲ್ಪಸಂಖ್ಯಾತರು ಇಡಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆ,” ಎಂಬ‌‌ ಮಾಹಿತಿಯನ್ನು ಹೈಕಮಾಂಡಿಗೆ ರವಾನಿಸಿದ್ದಾರಂತೆ. ಈ ಮಾಹಿತಿ ಆಧರಿಸಿ ಹೈಕಮಾಂಡ್ ಒತ್ತಡ ಹೇರಿದರೆ ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರ ನೋಡಿಕೊಂಡು ಸ್ಪರ್ಧೆ ಮಾಡಿ, ಗೆಲ್ಲುತ್ತಾರೆ, ಗೆದ್ದು ಸಂಸದರಾದ ಬಳಿಕ ಸಹಜವಾಗಿ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಬಿಟ್ಟುಕೊಡುತ್ತಾರೆ ಎಂಬುದು ಪರಮೇಶ್ವರ್, ಡಿ ಕೆ ಶಿವಕುಮಾರ್ ಜೋಡಿಯ ಯೋಜನೆಯಂತೆ.

ಮಲ್ಲಿಕಾರ್ಜುನ ಖರ್ಗೆ ಪ್ರಮಾದ, ಸಿದ್ದರಾಮಯ್ಯಗೆ ಪ್ರಸಾದ

ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಐದು ವರ್ಷ ಮುಖ್ಯಮಂತ್ರಿ ಆಗಲು ಮತ್ತೀಗ ಇಡೀ ಪಕ್ಷವನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ ಆಗಿದ್ದು ಮಲ್ಲಿಕಾರ್ಜುನ ಖರ್ಗೆ ಮಾಡಿದ ಅದೊಂದು ಪ್ರಮಾದದಿಂದ- ಸಿದ್ದರಾಮಯ್ಯ ವಿರೋಧಿ ಮತ್ತು ಪರಮೇಶ್ವರ್ ಆಪ್ತರೊಬ್ಬರು ಹೀಗೆನ್ನುತ್ತಾರೆ. “ಮಲ್ಲಿಕಾರ್ಜುನ ಖರ್ಗೆ ಅವರು ಪುತ್ರ ಪ್ರಿಯಾಂಕ್‌ ಖರ್ಗೆಯನ್ನು ಕಳೆದ ಸರ್ಕಾರದಲ್ಲಿ ಮಂತ್ರಿ ಮಾಡಬಾರದಿತ್ತು. ಬದಲಿಗೆ, ಅವಕಾಶ ಸಿಕ್ಕಿದ್ದಾಗ ಹೈಕಮಾಂಡ್ ಎದುರು ತನಗೇ ಮುಖ್ಯಮಂತ್ರಿ ಸ್ಥಾನ ಕೊಡಿ ಅಂತ ಹಕ್ಕೊತ್ತಾಯ ಮಾಡಬೇಕಿತ್ತು. ಖರ್ಗೆ ನಾಲ್ಕೈದು ಸಲ ಕೇಳಿದ್ದಿದ್ದರೆ ಒಮ್ಮೆಯಾದರೂ ಸಿಎಂ ಸ್ಥಾನ ದಕ್ಕುತ್ತಿತ್ತು. ಪಕ್ಷದಲ್ಲಿ ಸಿದ್ದರಾಮಯ್ಯ ಪಾರುಪತ್ಯ ಕೊನೆಯಾಗುತ್ತಿತ್ತು. ಆದರೆ, ಮಲ್ಲಿಕಾರ್ಜುನ ಖರ್ಗೆ ಮಗನಿಗೋಸ್ಕರ ತಮ್ಮ ನಲವತ್ತು ವರ್ಷದ ರಾಜಕೀಯ ಜೀವನವನ್ನೇ ಹಾಳುಮಾಡುಕೊಂಡುಬಿಟ್ಟರು,” ಎಂಬ ನೋವು ತೋಡಿಕೊಂಡರು.‌

ಈ ಹಳೆಯ ವಿಷಯದೊಂದಿಗೆ‌ ಹೊಸ ಬೆಳವಣಿಗೆಗಳನ್ನೂ ಉಲ್ಲೇಖಿಸಿದರು: “ಪಕ್ಷದಲ್ಲಿ ಸಿದ್ದರಾಮಯ್ಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಪರಮೇಶ್ವರ್ ಬಳಿ ಅಧಿಕಾರ ಇದ್ದರೂ ನಾಯಕರು, ಶಾಸಕರು ಮತ್ತು ಕಾರ್ಯಕರ್ತರು ಇವರ ಬಳಿ‌ ಬರಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಹತ್ತಿರ ಇರುವುದರಿಂದ ಸದ್ಯಕ್ಕೆ ಯಾರೊಬ್ಬರೂ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಳ್ಳಲು ಸಿದ್ಧರಿಲ್ಲ.‌ ಸಿದ್ದರಾಮಯ್ಯ ಬಳಿ ಮತವರ್ಗವಿದೆ ಎನ್ನುವ ಕಾರಣಕ್ಕೆ ಹೈಕಮಾಂಡ್ ಕೂಡ ಅವರನ್ನು ಉಪೇಕ್ಷೆ ಮಾಡಲು ತಯಾರಿಲ್ಲ. ಈ ಪರಿಸ್ಥಿತಿಯನ್ನು ಸಿದ್ದರಾಮಯ್ಯ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ತಮ್ಮದನ್ನೇ ನಡೆಸುತ್ತಿದ್ದಾರೆ. ಇದರಿಂದ ಪಕ್ಷ ಸಂಘಟನೆಗೆ ಮಾರಕವಾಗಲಿದೆ. ಜೊತೆಗೆ ಸಿದ್ದರಾಮಯ್ಯ ನಡೆ ಮುಂದೆ ಸರ್ಕಾರಕ್ಕೂ ಕಂಟಕವಾಗಬಹುದು. ಅವತ್ತು‌ ಮಲ್ಲಿಕಾರ್ಜುನ ಖರ್ಗೆ ಪುತ್ರ ವ್ಯಾಮೋಹಕ್ಕೆ ಬಲಿಯಾಗದಿದ್ದರೆ ಇಂದು ಪಕ್ಷ ಸಿದ್ದರಾಮಯ್ಯ ಅವರಿಗೆ ಬಲಿಯಾಗುವುದನ್ನು ತಪ್ಪಿಸಬಹುದಿತ್ತು. ಖರ್ಗೆ ಮುಖ್ಯಮಂತ್ರಿಯೂ ಆಗಿರುತ್ತಿದ್ದರು‌ ಮತ್ತು ಇವತ್ತು ಸಿದ್ದರಾಮಯ್ಯ ಇರುವ ನಿರ್ಣಾಯಕ ಜಾಗದಲ್ಲೂ ಇರುತ್ತಿದ್ದರು,” ಎಂದು ಪರಮೇಶ್ವರ್ ಆಪ್ತರು ಅಲವತ್ತುಕೊಂಡರು.

ದಿನೇಶ್ ಕೆಪಿಸಿಸಿ ಅಧ್ಯಕ್ಷಗಾದಿ ಲೋಕಸಭಾ ಚುನಾವಣೆವರೆಗೆ ಮಾತ್ರ?

ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷಗಾದಿಯ ಅವಧಿ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆವರೆಗೆ ಮಾತ್ರವಂತೆ. “ಸದ್ಯಕ್ಕೆ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಈ ಸಂದರ್ಭದಲ್ಲಿ ಅಧ್ಯಕ್ಷರಾಗಲು ತಯಾರಿಲ್ಲ. ಸಿದ್ದರಾಮಯ್ಯ ಅವರೂ ಸಿದ್ಧರಿಲ್ಲ. ಬೇರೆ ಹಿರಿಯರಿಗೆ ಜವಾಬ್ದಾರಿ ನೀಡಲು ಹೈಕಮಾಂಡಿಗೆ ಮನಸ್ಸಿಲ್ಲ. ಎರಡನೇ ಸಾಲಿನ ಪೈಕಿ ಡಿ ಕೆ ಶಿವಕುಮಾರ್ ಮತ್ತು ಎಂ ಬಿ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಎಚ್ ಕೆ ಪಾಟೀಲ್ ಅವರಂಥವರಿಗೆ ಕೊಟ್ಟರೆ ಪಕ್ಷ ಸತ್ತೇ ಹೋಗುತ್ತದೆ. ಇದ್ದುದರಲ್ಲಿ 'ಮ್ಯಾನೇಜ್' ಮಾಡುತ್ತಾರೆ ಅಂತಲೇ ದಿನೇಶ್ ಗುಂಡೂರಾವ್ ಅವರಿಗೆ ಜವಾಬ್ದಾರಿ ಕೊಡಲಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಅಧ್ಯಕ್ಷಗಾದಿ ಬದಲಾಗುತ್ತದೆ. ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಅದು ನಿರ್ಧಾರವಾಗುತ್ತದೆ,” ಎಂಬುದು ರಾಜ್ಯದ ಕಾಂಗ್ರೆಸ್ ನಾಯಕರೊಬ್ಬರ ಅಭಿಪ್ರಾಯ. ದಿನೇಶ್ ಗುಂಡೂರಾವ್ ಬದಲಾಗಲಿ ಎಂಬುದು ಅವರ ಮನದಾಸೆ ಕೂಡ. ಸಾಧ್ಯವಾದರೆ ತನ್ನನ್ನೇ ಪರಿಗಣಿಸಲಿ ಎಂಬ ಇನ್ನೊಂದು ಆಸೆಯೂ ಅವರ ಬಳಿ ಉಂಟು!

ಇದನ್ನೂ ಓದಿ : ಚಾಣಕ್ಯಪುರಿ | ಖರ್ಗೆಗೆ ತಪ್ಪದ ಕುರ್ಚಿ ಕಾಟ, ಡಿಸಿಎಂ ಪರಮೇಶ್ವರಗೆ ಗೃಹ ಕಾಟ!

ಉ.ಕ ಪ್ರತ್ಯೇಕ ರಾಜ್ಯದ ಕೂಗನ್ನು ಕಾಪಿಟ್ಟುಕೊಳ್ಳಲು ಬಿಜೆಪಿ ಸೂಚನೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕೂಗನ್ನು ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆವರೆಗೆ ಕಾದಿಟ್ಟುಕೊಳ್ಳಿ ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದೆಯಂತೆ. ವಿಷಯ ಹಸಿಹಸಿ ಆಗಿರಬೇಕೆಂದರೆ ಉರಿಯುವ ಬೆಂಕಿಗೆ ಆಗಾಗ ತುಪ್ಪ ಸುರಿಯಬೇಕಾಗುತ್ತದೆ ಎಂದೇ ಶಾಸಕ ಶ್ರೀರಾಮುಲು ಅವರನ್ನು ಹುರಿದುಂಬಿಸಿದೆಯಂತೆ. 'ನೀನು ಸತ್ತಂತೆ ಮಾಡು, ನಾನು ಅತ್ತಂತೆ ಮಾಡುವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ಅಖಂಡ ಕರ್ನಾಟಕದ ಜಪ ಮಾಡುತ್ತಿದ್ದಾರಂತೆ. ಹೇಗೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ‌ ಹೆಚ್ಚಿನ ಸೀಟು ಗೆಲ್ಲುವುದಿಲ್ಲ. ಉತ್ತರ ಕರ್ನಾಟಕದಲ್ಲಾದರೂ ಈ ಭಾವನಾತ್ಮಕ ವಿಷಯದ ಬೆಂಕಿ ಹಾಕಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಹುದು ಎಂಬ ಯೋಜನೆ ಬಿಜೆಪಿಗಿದೆಯಂತೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಿದರೆ ಬಿಜೆಪಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಲಿದೆ. ಕಳೆದ ಭಾರಿ ೧೭ ಸೀಟು ಗಳಿಸಿದ್ದ ಬಿಜೆಪಿ ಈ ಭಾರಿ ಎರಡಂಕಿ ದಾಟಲೂ ಪರದಾಡಬೇಕಾಗುತ್ತದೆ. ಕಳೆದ ಭಾರಿ ಕೆಲ ಕ್ಷೇತ್ರಗಳಲ್ಲಿ ಮೋದಿ ಅಲೆ ಕೆಲಸ ಮಾಡಿತ್ತು. ಈ ಬಾರಿ ಕೇಂದ್ರ ಸರ್ಕಾರದ ಮೇಲೆ ಆಡಳಿತ ವಿರೋಧಿ ಅಲೆ ಕೆಲಸ ಮಾಡುವ ಸಂಭವ ಇದೆ. ಇದು ಕೂಡ ಸೀಟು ಕಡಿಮೆ ಆಗಲು ಕಾರಣವಾಗಲಿದೆ. ಆದರೆ, ಬಿಜೆಪಿ ಹೈಕಮಾಂಡ್ ಕರ್ನಾಟಕದಿಂದ ಕಳೆದ ಭಾರಿಗಿಂತ ಹೆಚ್ಚಿನ ಸೀಟನ್ನು ಗೆಲ್ಲಬೇಕು ಎಂದುಕೊಂಡಿದೆ. ಅದಕ್ಕೊಂದು ಹಿನ್ನೆಲೆ‌ ಇದೆ. 'ಹಿಂದಿ‌ ಬೆಲ್ಟ್'ನಲ್ಲಿ ಈಗಾಗಲೇ ಗರಿಷ್ಠ ಸಂಖ್ಯೆಯಲ್ಲಿ ಗೆದ್ದಿದೆ. ಈ ಭಾರಿ ಅಲ್ಲಿ ಕಡಿಮೆ ಆಗುತ್ತದೆಯೇ ವಿನಾ, ಏನೇ ಮಾಡಿದರೂ ಹೆಚ್ಚಿನ ಸೀಟು ಗೆಲ್ಲಲು ಸಾಧ್ಯವಿಲ್ಲ.

ಉಳಿದಂತೆ ದಕ್ಷಿಣದಲ್ಲಿ ಈ ಭಾರಿ ಕೂಡ ತಮಿಳುನಾಡು, ಕೇರಳ, ಆಂಧ್ರ ಮತ್ತು ತೆಲಂಗಾಣದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಹಾಗಾಗಿ ಹಿಂದಿ ಬೆಲ್ಟ್‌ನಲ್ಲಿ ಆಗುವ ನಷ್ಟವನ್ನು ಸರಿದೂಗಿಸಿಕೊಳ್ಳಬೇಕೆಂದರೆ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಒಡಿಶಾದೊಂದಿಗೆ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಪರಿಸ್ಥಿತಿ ಹೀಗೆ ಇರುವುದರಿಂದ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗು ನೆರವಾಗಲಿದೆ ಎಂದುಕೊಂಡಿದೆ ಬಿಜೆಪಿ. ಏನೂ ಪ್ರಮುಖ ವಿಷಯ ಇಲ್ಲದ ಆಪತ್ಕಾಲದಲ್ಲಿ ಪ್ರತ್ಯೇಕ ರಾಜ್ಯದಂತಹ ಸೂಕ್ಷ್ಮ ವಿಷಯ ಸಿಕ್ಕಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ವತಃ ಖೆಡ್ಡಾಕ್ಕೆ ಬಿದ್ದಿದ್ದಾರೆ. ಈ ವಿಷಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ನಿರ್ಧರಿಸಲಾಗಿದೆಯಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More