ಮೊಮ್ಮಗನ ರಾಜಕೀಯ ಪ್ರವೇಶಕ್ಕೆ ಮೊದಲೇ ದೇವೇಗೌಡರಿಗೆ ಮತ್ತೊಮ್ಮೆ ಕೂಡಿಬಂತು ಕಾಲ

ದೇವೇಗೌಡರ ಮೊಮ್ಮಗ ಪ್ರಜ್ವಲ್, 5 ವರ್ಷದಿಂದಲೂ ರಾಜಕೀಯ ರಂಗಕ್ಕೆ ಧುಮುಕಲು ನಡೆಸುತ್ತಿರುವ ಪ್ರಯತ್ನಗಳು ಒಂದಲ್ಲ ಒಂದು ಕಾರಣಗಳಿಂದ ವಿಫಲವಾಗುತ್ತಲೇ ಇವೆ. ಈ ಮಧ್ಯೆ, 2019ರ ಲೋಕಸಭಾ ಚುನಾವಣೆ ದೇವೇಗೌಡರಿಗೆ ಮತ್ತೊಮ್ಮೆ ಕಣಕ್ಕಿಳಿಯುವ ದಾರಿ ತೋರಿದೆ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶಕ್ಕೆ ಯಾಕೋ ಇನ್ನೂ ಕಾಲ ಕೂಡಿಬಂದಂತೆ ಕಾಣುತ್ತಿಲ್ಲ. ಕಳೆದ ಐದು ವರ್ಷಗಳಿಂದಲೂ ರಾಜಕೀಯ ರಂಗಕ್ಕೆ ಧುಮುಕಲು ಪ್ರಜ್ವಲ್ ನಡೆಸುತ್ತಿರುವ ಪ್ರಯತ್ನಗಳು ಒಂದಲ್ಲ ಒಂದು ಕಾರಣಗಳಿಂದ ವಿಫಲವಾಗುತ್ತಿವೆ. ಈ ಎಲ್ಲ ಪ್ರಯತ್ನಗಳು ವಿಫಲಗೊಳ್ಳುತ್ತಿರುವುದು ಅವರ ಕುಟುಂಬದ ಸದಸ್ಯರಿಂದಲೇ ಎಂಬುದು ವಿಶೇಷ.

ಮುಂಬರುವ ಲೋಕಸಭಾ ಚುನಾವಣೆಗೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ‘ಆರಂಗೇಟ್ರಂ’ ನಡೆಯುತ್ತದೆ ಎಂಬ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಅವರ ಅಜ್ಜ, ಮಾಜಿ ಪ್ರಧಾನಿ, ಹಾಲಿ ಸಂಸದ ಎಚ್ ಡಿ ದೇವೇಗೌಡರು ಮತ್ತೆ ಹಾಸನ ಕ್ಷೇತ್ರದಿಂದ ಕಣಕ್ಕಿಳಿಯುವ ಇಚ್ಛೆ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಆದರೆ, ದೇವೇಗೌಡರ ನಡೆಯನ್ನು ಮೊದಲಿನಿಂದಲೂ ಬಲ್ಲ ಜಿಲ್ಲೆಯ ಮತದಾರರಲ್ಲಿ ಮಾಜಿ ಪ್ರಧಾನಿಯ ನಿರ್ಧಾರ ಆಶ್ಚರ್ಯವನ್ನೇನೂ ಉಂಟುಮಾಡಿಲ್ಲ. ಏಕೆಂದರೆ, 2009ರಲ್ಲಿ ನಡೆದ 15ನೇ ಲೋಕಸಭಾ ಚುನಾವಣೆಯಲ್ಲೂ ಅವರು ‘ಇದು ನನ್ನ ಕೊನೆಯ ಚುನಾವಣೆ’ ಎಂದು ಹೇಳಿಕೊಂಡೇ ಕಣಕ್ಕಿಳಿದು ಹೆಚ್ಚೂಕಡಿಮೆ 3 ಲಕ್ಷ ಮತಗಳ ಭಾರಿ ಅಂತರದಿಂದ ಜಯ ಗಳಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ ಎಚ್ ಹನುಮೇಗೌಡ ಮತ್ತು ಕಾಂಗ್ರೆಸ್‌ನ ಬಿ ಶಿವರಾಂ, ತಲಾ 2 ಲಕ್ಷ ಚಿಲ್ಲರೆ ಮತ ಗಳಿಸಿದ್ದರು. ಆಗ ದೇವೇಗೌಡರ ವಯಸ್ಸು 76. ನಂತರ 2014ರಲ್ಲಿ ನಡೆದ 16ನೇ ಸಾರ್ವತ್ರಿಕ ಚುನಾವಣೆಯಲ್ಲೂ ದೇವೇಗೌಡರು ಮತ್ತೆ ತಮ್ಮ ‘ಕೊನೆಯ ಚುನಾವಣೆ’ ಮಂತ್ರ ಜಪಿಸಿ ಕಣಕ್ಕಿಳಿದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎ ಮಂಜು ವಿರುದ್ಧ ಒಂದು ಲಕ್ಷ ಮತಗಳ ಅಂತರದ ಜಯ ಸಾಧಿಸಿದ್ದರು. ಈಗ ಮತ್ತೊಂದು ಚುನಾವಣೆ ಎದುರಾಗಿದೆ. 86 ವರ್ಷ ವಯಸ್ಸಿನ ಗೌಡರು ಮತ್ತೊಮ್ಮೆ ತೊಡೆ ತಟ್ಟಲು ಸಜ್ಜಾಗುತ್ತಿದ್ದಾರೆ. ಕ್ಷೇತ್ರದ ಮತದಾರರಿಗೆ ಇದು ನಿರೀಕ್ಷಿತ ಬೆಳವಣಿಗೆ.

ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ಮೊದಲು ಚರ್ಚೆ ಹುಟ್ಟುಹಾಕಿದ್ದೇ ದೇವೇಗೌಡರು. ಮೊದಲು ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಅಧಿಕೃತ ರಾಜಕೀಯ ಪ್ರವೇಶದ ಸಿದ್ಧತೆ ನಡೆಸಿದ್ದ ಪ್ರಜ್ವಲ್ ಅವರು ಅವಕಾಶ ಸಿಗದೆ ಸತತ ಮುಖಭಂಗ ಅನುಭವಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲೂ ಮೊದಲು ಹುಣಸೂರು ಕ್ಷೇತ್ರದಿಂದ ಸ್ಪರ್ಧೆ ಬಯಸಿ, ನಂತರ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಕಣಕ್ಕಿಳಿಯಲು ಮುಂದಾಗಿ, ಅಜ್ಜ ದೇವೇಗೌಡ ಮತ್ತು ಚಿಕ್ಕಪ್ಪ ಕುಮಾರಸ್ವಾಮಿ ಅವರಿಂದ ಅನುಮತಿ ದೊರೆಯದೆ ನಿರಾಶರಾಗಿದ್ದ ಪ್ರಜ್ವಲ್ ಅವರನ್ನು ಸಮಾಧಾನಪಡಿಸಲೆಂದೇ ದೇವೇಗೌಡರು, ಹಾಸನ ಲೋಕಸಭಾ ಕ್ಷೇತ್ರಕ್ಕೆ ಮೊಮ್ಮಗನ ಹೆಸರು ತೇಲಿಬಿಟ್ಟಿರಬಹುದು ಎಂದು ಈಗ ವಿಶ್ಲೇಷಿಸಲಾಗುತ್ತಿದೆ.

ಜಾತಕ ಕೂಡಿ ಬರುತ್ತಿಲ್ಲವೇ?

ಪೂಜೆ, ಹೋಮ, ಹವನ, ಜಾತಕ ಇತ್ಯಾದಿಗಳಲ್ಲೆಲ್ಲ ಅಪರಿಮಿತ ನಂಬಿಕೆ ಹೊಂದಿರುವ ದೇವೇಗೌಡರು, ಯಾವುದೇ ವ್ಯಕ್ತಿಯ ಕುರಿತ ನಿರ್ಧಾರವನ್ನು ಆತನ ಜಾತಕವನ್ನು ತಾವು ನಂಬಿರುವ ಜ್ಯೋತಿಷಿಗೆ ತೋರಿಸದೆ ಕೈಗೊಳ್ಳುವುದಿಲ್ಲ ಎಂಬುದು ಗೌಡರನ್ನು ಖಾಸಗಿಯಾಗಿ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜಕೀಯ ವಲಯದಲ್ಲೀಗ ಅದೇನೂ ರಹಸ್ಯವಾಗಿ ಉಳಿದಿಲ್ಲ. ಪ್ರಜ್ವಲ್ ರೇವಣ್ಣ ಅವರ ಪ್ರತಿ ಪ್ರಯತ್ನವೂ ವಿಫಲವಾಗುತ್ತಿರುವ ಹಿಂದೆ ಅವರ ‘ಜಾತಕ’ದ ಕಾರಣ ಇರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ಅಲ್ಲದೆ, ದೇವೇಗೌಡರ ಜಾತಕದಲ್ಲಿ ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುವ ಯೋಗ ಇದೆ ಎಂಬುದಾಗಿ ಜ್ಯೋತಿಷಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗೇ, ಗೌಡರು ಅತ್ಯಂತ ಸುರಕ್ಷಿತ ಕ್ಷೇತ್ರವಾದ ಹಾಸನದಿಂದಲೇ ಮತ್ತೆ ಲೋಕಸಭೆ ಪ್ರವೇಶಿಸಲು ಮುಂದಾಗುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರಲಾರಂಭಿಸಿವೆ.

ಭವಾನಿ ರೇವಣ್ಣ ಅಸಮಾಧಾನ

ಅದೇನೇ ಇದ್ದರೂ, ಪ್ರಜ್ವಲ್ ರಾಜಕೀಯ ಪ್ರವೇಶ ಸಾಧ್ಯತೆಗಳು ಮಸುಕಾಗತೊಡಗಿರುವುದರಿಂದ ಪ್ರಜ್ವಲ್ ತಾಯಿ, ಸಚಿವ ಎಚ್ ಡಿ ರೇವಣ್ಣ ಪತ್ನಿ ಭವಾನಿ ಅವರು ತೀವ್ರ ಅಸಮಾಧಾನ ಆಗಿದ್ದಾರೆಂದು ಹೇಳಲಾಗುತ್ತಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲೇ ಶತಾಯಗತಾಯ ಮಗನನ್ನು ವಿಧಾನಸಭೆಗೆ ಕಳುಹಿಸಲೇಬೇಕು ಎಂಬ ಸರ್ವಪ್ರಯತ್ನ ನಡೆಸಿ ಸೋತು, ಲೋಕಸಭಾ ಚುನಾವಣೆಯಲ್ಲಾದರೂ ತಮ್ಮ ಪ್ರಯತ್ನ ಕೈಗೂಡಬಹುದು, ಪ್ರಜ್ವಲ್ ಲೋಕಸಭೆ ಪ್ರವೇಶಿಸಬಹುದು ಎಂಬ ಕನಸು ಕಂಡಿದ್ದ ಭವಾನಿ ರೇವಣ್ಣ ಅವರಿಗೆ ದೇವೇಗೌಡರ ನಿರ್ಧಾರ ಆಘಾತ ತಂದಿದೆ ಎನ್ನಲಾಗುತ್ತಿದೆ.

ಮುಗಿಯದ ಮುಸುಕಿನ ಗುದ್ದಾಟ

ಇದನ್ನೂ ಓದಿ : ಚುನಾವಣಾ ಕಣ | ಜೆಡಿಎಸ್ ಮಡಿಲಿನ ಕೆಂಡವಾಗಿದ್ದಾರೆಯೇ ಪ್ರಜ್ವಲ್?

ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶದ ವಿಷಯಕ್ಕೇ ದೊಡ್ಡಗೌಡರ ಕುಟುಂಬದ ಎಚ್ ಡಿ ರೇವಣ್ಣ ಮತ್ತು ಎಚ್ ಡಿ ಕುಮಾರಸ್ವಾಮಿ ಸಂಸಾರಗಳ ನಡುವೆ ಮೊದಲಿನಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಸುಳ್ಳಲ್ಲ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅದು ತೀರ್ವ ಸ್ವರೂಪ ಪಡೆದುಕೊಂಡಿತ್ತು. ಪ್ರಜ್ವಲ್‌ಗೆ ಟಿಕೆಟ್ ಕೊಡದಿದ್ದರೆ ಅನಿತಾ ಕುಮಾರಸ್ವಾಮಿಗೂ ಟಿಕೆಟ್ ಬೇಡ ಎಂಬುದಾಗಿ ಭವಾನಿ ರೇವಣ್ಣ ಅವರು ಪಟ್ಟು ಹಿಡಿದ ಕಾರಣ, ಕೊನೆಗೆ ಎಚ್ ಡಿ ಕುಮಾರಸ್ವಾಮಿಯವರು ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಿಂದ ಕಣಕ್ಕಿಳಿದು ಎರಡರಲ್ಲೂ ಜಯ ಗಳಿಸಿದ್ದು, ರಾಮನಗರ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ರಾಮನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಮತ್ತು ಲೋಕಸಭಾ ಚುನಾವಣಾ ವೇಳೆಗೆ ದೇವೇಗೌಡರ ಕುಟುಂಬದಲ್ಲಿ ಮತ್ತೊಂದು ಸುತ್ತಿನ ಮುಸುಕಿನ ಗುದ್ದಾಟ ಆರಂಭವಾಗುವ ಎಲ್ಲ ಲಕ್ಷಣಗಳು ಕಾಣಲಾರಂಭಿಸಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More