ಎನ್‌ಆರ್‌ಸಿ ಕರಡು | ಬಿಜೆಪಿ ವಿರುದ್ಧ ನೇರ ಸಂಘರ್ಷಕ್ಕಿಳಿದ ಮಮತಾ ಬ್ಯಾನರ್ಜಿ

ಎನ್‌ಆರ್‌ಸಿ ಕರಡನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮಮತಾ ಬ್ಯಾನರ್ಜಿ ಬಿಜೆಪಿಯ ಸೈದ್ದಾಂತಿಕ ನಿಲುವಿನ ವಿರುದ್ಧ ಸಮರ ಸಾರಿದ್ದಾರೆ. ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಮೂಲಕ ದೊಡ್ಡದೊಂದು ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ

ಬಾಂಗ್ಲಾ ಹಾಗೂ ಪಶ್ಚಿಮ ಬಂಗಾಳ ಕೇವಲ ಸೀಮಾರೇಖೆಯನ್ನಷ್ಟೇ ಹಂಚಿಕೊಳ್ಳುವುದಿಲ್ಲ. ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಹಂಚಿಕೊಳ್ಳುತ್ತವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ ವಿ‍ಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ನೇರ ಸಂಘರ್ಷಕ್ಕಿಳಿದಿರುವ ಅವರು, “ಬಾಂಗ್ಲಾ ದೇಶದ ವಲಸಿಗರನ್ನು ಕೇಂದ್ರಿಕರಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಯಾಚರಣೆಗೆ ಇಳಿದಿದೆ. ನೇಪಾಳ ಹಾಗೂ ಪಾಕಿಸ್ತಾನಿ ವಲಸಿಗರನ್ನು ಯಾಕೆ ಕಡೆಗಣಿಸಿದೆ?,” ಎಂದು ಪ್ರಶ್ನಿಸುವ ಮೂಲಕ ದೊಡ್ಡದೊಂದು ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ.

ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ನೋಂದಣಿ ವಿಚಾರವಾಗಿ ಚಾರಿತ್ರಿಕ ಹಿನ್ನೆಲೆಯಲ್ಲಿ ಮಾತನಾಡಿರುವ ಮಮತಾ ಬ್ಯಾನರ್ಜಿ ಅವರು, “ಉಪಖಂಡದ ವಿಭಜನೆಗೂ ಮುನ್ನ ಪಾಕಿಸ್ತಾನದಿಂದ ಕೋಟ್ಯಾಂತರ ಜನ ಭಾರತಕ್ಕೆ ವಲಸೆ ಬಂದರು. ನೇಪಾಳವು ಸಹ ಹಿಂದುಸ್ಥಾನದ ನೆರೆಯ ರಾಷ್ಟ್ರ. ಅಲ್ಲಿಂದಲೂ ಜನರು ವಲಸೆ ಬಂದಿದ್ದಾರೆ. ಗಡಿಗಳು ರಾಜ್ಯ ಸರ್ಕಾರದ ಅಧೀನದಲ್ಲಿ ಇಲ್ಲ. ಅವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತವೆ. ಈ ಸೂಕ್ಷ್ಮ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವುದು ಕೇಂದ್ರದ ಕರ್ತವ್ಯ. ಗಡಿಯೊಳಗಿರುವ ಭೂಪ್ರದೇಶಗಳನ್ನು ಭದ್ರವಾಗಿರಿಸಿಕೊಳ್ಳುವ ನಿಟ್ಟಿನಿಲ್ಲಿ ಕೇಂದ್ರ ಸರ್ಕಾರ ಯೋಚಿಸಲಿ,” ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ.

ಮಮತಾರ ಬಿರುಸಿನ ಹೇಳಿಕೆ ಹಿನ್ನೆಲೆಯಲ್ಲಿ ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಪ್ರಕ್ರಿಯೆ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದು, ಬಿಜೆಪಿ ಹಾಗೂ ಟಿಎಂಸಿ ಸಂಘರ್ಷಕ್ಕೆ ಕಾರಣವಾಗಿದೆ. ಎನ್‌ಆರ್‌ಸಿ ಕರಡನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಸೈದ್ದಾಂತಿಕ ನಿಲುವಿನ ವಿರುದ್ಧ ಸಮರವನ್ನೇ ಸಾರಿದ್ದಾರೆ. “ಬಿಜೆಪಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯಿಂದ ಮುಂದಿನ ದಿನಗಳಲ್ಲಿ ರಕ್ತಪಾತ ಹಾಗೂ ಆಂತರಿಕ ಯುದ್ಧ ನಡೆಯಬಹುದು,” ಎಂದು ಮಂಗಳವಾರವಷ್ಟೇ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಮಮತಾ ಬ್ಯಾನರ್ಜಿ ಅವರ ಆಂತರಿಕ ಯುದ್ಧದ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರಾದ ಅಮಿತ್ ಶಾ, ರಾಜನಾಥ ಸಿಂಗ್‌ ಹಾಗೂ ಜಾವಡೇಕರ್‌ ಅವರು, ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್‌ ಜೊತೆಗೂಡಿ ಸ್ವಾರ್ಥ ರಾಜಕಾರಣದಲ್ಲಿ ನಿರತರಾಗಿದ್ದಾರೆಂದು ಹರಿಹಾಯ್ದಿದ್ದರು.

ಬುಧವಾರ ನಡೆದ ಸಂಸತ್‌ ಅಧಿವೇಶನದಲ್ಲಿ ಎನ್‌ಆರ್‌ಸಿ ವಿಚಾರ ಪ್ರತಿಧ್ವನಿಸಿ, ಪ್ರತಿಭಟನೆಗಳು ನಡೆದ ಕಾರಣ ಕಲಾಪ ಸ್ಥಗಿತಗೊಂಡಿದೆ. ಎನ್‌ಆರ್‌ಸಿ ವಿಚಾರವಾಗಿ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದ್ದು, ತಮಗೆ ಮತಚಲಾಯಿಸದವರನ್ನು ಬಿಜೆಪಿ ಹೊರಹಾಕುವ ಸಂಚು ರೂಪಿಸಿದೆ. ಇದು ಪ್ರಜಾತಾಂತ್ರಿಕ ನಡೆಯಲ್ಲವೆಂದು ಆರೋಪಿಸಿದ ಟಿಡಿಪಿ ಹಾಗೂ ಕಾಂಗ್ರೆಸ್‌ ನಾಯಕರು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ಟಿಎಂಸಿ ಹಾಗೂ ಕಾಂಗ್ರೆಸ್‌ ನಾಯಕರ ಕ್ರಮವನ್ನು ಖಂಡಿಸಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು “ಕಾಂಗ್ರೆಸ್‌ ಹಾಗೂ ಟಿಎಂಸಿ ಪಕ್ಷಗಳ ನಾಯಕರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪ್ರಯತ್ನದಲ್ಲಿದ್ದಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅಸ್ಸಾಂನಲ್ಲಿ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿಯಲ್ಲಿ ಅರ್ಹತೆ ಕಳೆದುಕೊಂಡ 40 ಲಕ್ಷ ಜನರಲ್ಲಿ ಅಧಿಕವಾಗಿ ಬಂಗಾಳಿ ಭಾಷಿಗರಿದ್ದು, ಅದರಲ್ಲೂ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೂ ಮತಬ್ಯಾಂಕ್‌ ಅನ್ನು ಗುರಿಯಾಗಿಸಿ ರಾಜಕಾರಣ ಮಾಡುತ್ತಿದೆ ಎಂಬ ಚರ್ಚೆಗಳು ಪಶ್ಚಿಮ ಬಂಗಾಳದಲ್ಲಿ ಮುನ್ನೆಲೆಗೆ ಬಂದಿವೆ. ಇದೇ ವೇಳೆ ಪಶ್ಚಿಮ ಬಂಗಾಳದ ಸ್ಥಳೀಯ ಬಿಜೆಪಿ ಮುಖಂಡರು ಮುಂದಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿಯೂ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂಬ ಮಾತುಗಳನ್ನಾಡಿದ್ದು, ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ ಎಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ಆ.11 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕೊಲ್ಕಾತ್ತಾದಲ್ಲಿ ನಡೆಸಲು ಉದ್ದೇಶಿಸಲಾಗಿರುವ ರ್ಯಾಲಿಗೆ ಪಶ್ಚಿಮ ಬಂಗಾಳ ಪೊಲೀಸರು ಅವಕಾಶ ನಿರಾಕರಿಸಲಿದ್ದಾರೆ ಎಂಬ ವರದಿಗಳಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್‌ ಶಾ ಅವರು, “ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೈರ್ಯವಿದ್ದರೆ ನನ್ನನ್ನು ಬಂಧಿಸಲಿ,” ಎಂದು ಸವಾಲು ಹಾಕಿದ್ದಾರೆ.

ನವದೆಹಲಿಯಲ್ಲಿ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿರುವ ಮಮತಾ ಬ್ಯಾನರ್ಜಿ ಅವರು ಈ ವಿಷಯವನ್ನು ಕೇಂದ್ರ ಸರ್ಕಾರ ಕೂಲಂಕಷವಾಗಿ ಪರಿಶೀಲಿಸಿ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜನಾಥ್‌ ಸಿಂಗ್‌ ಅವರು, “ಪೌರತ್ವ ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ತಪ್ಪುಗಳಾಗದಂತೆ ನೋಡುಕೊಳ್ಳಲಾಗುತ್ತದೆ. ಪ್ರಕ್ರಿಯೆ ಪ್ರಾಮಾಣಿಕವಾಗಿ ನಡೆಯುತ್ತದೆ,” ಎಂದು ಮಮತಾ ಬ್ಯಾನರ್ಜಿ ಅವರಿಗೆ ಭರವಸೆ ನೀಡಿದ್ದಾರೆ.

ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ನವದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರನ್ನು ಮಮತಾ ಬ್ಯಾನರ್ಜಿ ಅವರು ಭೇಟಿಯಾಗಿ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೇವೇಗೌಡರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾಗಿ ತಿಳಿಸಿದ ಬ್ಯಾನರ್ಜಿ ಅವರು ಮುಂದಿನ ರಾಜಕೀಯ ನಡೆ ಹಾಗೂ ಮಹಾಮೈತ್ರಿಯ ಕುರಿತು ಚರ್ಚಿಸಿದ್ದಾಗಿ ಹೇಳಿದ್ದಾರೆ. ಮಮತಾ ಬ್ಯಾನರ್ಜಿ-ದೇವೇಗೌಡರ ಬೇಟಿಯ ಹಿಂದೆ ಪೌರತ್ವ ನೋಂದಣಿಯ ವಿಚಾರವೇ ಮಹತ್ವದ ಸ್ಥಾನ ಪಡೆದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

ಇದನ್ನೂ ಓದಿ : ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ರಾಷ್ಟ್ರೀಯ ಪೌರತ್ವ ನೋಂದಣಿ ಕರಡು

ಇದೇ ವೇಳೆ ರಕ್ತಪಾತ ಹಾಗೂ ಆಂತರಿಕ ಯುದ್ಧದ ಬಗ್ಗೆ ಮಾತನಾಡಿದ್ದ ಮಮತಾ ಬ್ಯಾನರ್ಜಿ ಅವರ ವಿರುದ್ಧ ಅಸ್ಸಾಂ ರಾಜಧಾನಿ ಗುಹಾಹಟಿಯಲ್ಲಿ ಎಫ್‌‌ಐಆರ್ ದಾಖಲಾಗಿದೆ. ಮಮತಾ ಬ್ಯಾನರ್ಜಿ ಅವರು ದೇಶದ ಭದ್ರತೆಯ ವಿಚಾರದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆಂದು ಆರೋಪಿಸಿ ಅಸ್ಸಾಂ ಬಿಜೆಪಿ ಯುವ ಮೋರ್ಚಾ ಎಫ್‌ಐಆರ್ ದಾಖಲಿಸಿದೆ.

ಬಿಜೆಪಿ ಉದ್ದೇಶಿತ ಕಾರ್ಯಸೂಚಿ ಜನಾಂಗೀಯ ಗಲಭೆಗೆ ಕಾರಣವಾಗಬಹುದು ಎಂಬ ಅಭಿಪ್ರಾಯಗಳು ಕೇಳಿಬಂದಿದ್ದು, ಅಸ್ಸಾಂನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಜನಾಂಗೀಯ ಗಲಭೆಗಳು ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ರಾಜಕೀಯ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದಿಂದ ವಲಸೆ ಬಂದಿರುವ ಅಕ್ರಮ ವಲಸೆಗಾರರಿಗೆ ಮತ ಚಲಾಯಿಸುವ ಹಕ್ಕು ನೀಡಲಾಗಿದೆ ಎಂದು ಆರೋಪಿಸಿ 1983 ರಲ್ಲಿ ಅಸ್ಸಾಂನಾದ್ಯಂತ ಭುಗಿಲೆದ್ದ ಹಿಂಸಾಚಾರ ಸರಿಸುಮಾರು 2, 500 ಜನ ವಲಸಿಗರ ಹತ್ಯೆಗೆ ಕಾರಣವಾಗಿತ್ತು. ‘ನೆಲ್ಲಿ ಹತ್ಯಾಕಾಂಡ’ವೆಂದೇ ಕುಖ್ಯಾತಿ ಪಡೆದಿರುವ ಆ ಗಲಭೆಯನ್ನು ಅಸ್ಸಾಂನ ಸ್ಥಳೀಯ ಬುಡುಕಟ್ಟು ಜನಾಂಗದವರು ಆಯೋಜಿಸಿದ್ದರು ಎನ್ನಲಾಗಿದೆ. ಆ ಘಟನೆಯನ್ನೇ ನೆನಪಿನಲ್ಲಿಟ್ಟುಕೊಂಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಕ್ತಪಾತ ಹಾಗೂ ಆಂತರಿಕ ಯುದ್ಧದ ಬಗ್ಗೆ ಮಾತನಾಡಿರಬಹುದು ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More