ಮೈಸೂರು ಸಂಸತ್ ಕ್ಷೇತ್ರದ ಟಿಕೆಟ್ ಬೇಡಿಕೆ ಹಿಂದಿರುವ ಜೆಡಿಎಸ್‌ನ ಹೊಂಚೇನು?

ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ಸಂಸತ್‌ ಚುನಾವಣೆಯಲ್ಲೂ ಮುಂದುವರಿದರೆ ಮೈಸೂರು -ಕೊಡಗು ಸಂಸತ್ ಕ್ಷೇತ್ರವನ್ನು ತಮಗೇ ಬಿಡಬೇಕೆಂದು ಜೆಡಿಎಸ್‌, ಕಾಂಗ್ರೆಸ್ ಪಕ್ಷಗಳು ಹಕ್ಕು ಮಂಡಿಸುತ್ತಿವೆ. ಚುನಾವಣೆಗೆ ೮ ತಿಂಗಳಿರುವಾಗಲೇ ಬೇಡಿಕೆ ಕೇಳುತ್ತಿರುವುದರ  ಹಿಂದಿರುವ ಹೊಂಚು, ಲೆಕ್ಕಾಚಾರಗಳೇನು? 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಮತ್ತೊಮ್ಮೆ ಎಚ್‌ ಡಿ ದೇವೇಗೌಡರೇ ಸ್ಪರ್ಧಿಸುತ್ತಾರೆನ್ನುವ ಸುದ್ದಿಯ ಬೆನ್ನಿಗೇ ಮೈಸೂರು-ಕೊಡಗು ಸಂಸತ್‌ ಕ್ಷೇತ್ರದ ಮೇಲೂ ಜೆಡಿಎಸ್‌ ಕಣ್ಣು ನೆಟ್ಟಿರುವ ಅಂಶ ಪ್ರಕಟವಾಗಿದೆ. ಸಂಸತ್ ಚುನಾವಣೆಯಲ್ಲೂ ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ಮುಂದುವರಿದರೆ ಮೈಸೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕೆಂಬ ಒತ್ತಾಯ ಕೇಳಿಬಂದಿದೆ. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಜೆಡಿಎಸ್‌ ಪ್ರಾಬಲ್ಯ ಮೆರೆದಿದ್ದು ಈ ಹಕ್ಕೊತ್ತಾಯಕ್ಕೆ ಕಾರಣ. ಮಾತ್ರವಲ್ಲ, ಹಾಸನದಲ್ಲಿ ಸ್ಪರ್ಧೆಗೆ ಅಣಿಯಾಗಿದ್ದ ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಬದಲಾದ ರಾಜಕೀಯದ ಸಂದರ್ಭದಲ್ಲಿ ಮೈಸೂರಿನಿಂದ ಕಣಕ್ಕಿಳಿಯುತ್ತಾರೆ; ಸಚಿವ ಜಿ ಟಿ ದೇವೇಗೌಡರು ತಮ್ಮ ಪುತ್ರ ಹರೀಶ್‌ ಗೌಡರನ್ನು ಕಣಕ್ಕಿಳಿಸಲು ಬಯಸಿದ್ದಾರೆ ಎಂದೆಲ್ಲಾ ‘ರಾಜಕೀಯ ವದಂತಿ’ಗಳೂ ಚಲಾವಣೆಗೆ ಬಂದಿವೆ.

ಈ ಎಲ್ಲ ವಿದ್ಯಮಾನಗಳಿಗೆ ಕಾಂಗ್ರೆಸ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. “ಯಾರು ಏನೇ ಹೇಳಲಿ ಮೈಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯೇ ಕಣಕ್ಕಿಳಿಯುತ್ತಾರೆ,’’ಎನ್ನುವ ಅಚಲ ನಂಬುಗೆಯನ್ನು ತೇಲಿ ಬಿಡುವುದರಲ್ಲಿ ಕೈಪಡೆ ಹಿಂದೆ ಬಿದ್ದಿಲ್ಲ. ಈ ಕ್ಷೇತ್ರವನ್ನು ಈ ಮೊದಲು ಎರಡು ಬಾರಿ ಬಿಜೆಪಿಯಿಂದ ಪ್ರತಿನಿಧಿಸಿದ್ದ ಮಾಜಿ ಸಚಿವ ಸಿ ಎಚ್‌ ವಿಜಯಶಂಕರ್‌ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದು, ಈ ಕ್ಷೇತ್ರದಿಂದ ಟಿಕೆಟ್ ಪಡೆಯುವ ಖಚಿತ ಭರವಸೆಯನ್ನು ಕಾಂಗ್ರೆಸ್ ನಾಯಕರಿಂದ ಪಡೆದಿದ್ದಾರೆ. ಕಳೆದ ಬಾರಿ ಪ್ರತಾಪ್‌ ಸಿಂಹ ಗೆ ಟಿಕೆಟ್ ನೀಡುವ ಬಿಜೆಪಿಯ ಕೊನೆ ಕ್ಷಣದ‌ ನಿರ್ಧಾರದಿಂದ ಬಲಿಪಶುವಾಗಿದ್ದು ಮತ್ತು ಪಕ್ಷದ ಆಣಿತಿಯಂತೆ ಹಾಸನಕ್ಕೆ ಹೋಗಿ, ದೇವೇಗೌಡರ ವಿರುದ್ಧ ಸ್ಪರ್ಧಿಸಿ ಭಾರೀ ಅಂತರದಲ್ಲಿ ಸೋತಿದ್ದರ ಅನುಕಂಪ ಅವರ ಪಾಲಿಗಿದೆ. ಜೆಡಿಎಸ್‌ ಪರೋಕ್ಷ ಬೆಂಬಲ ಪಡೆದು ಪ್ರತಾಪರನ್ನು ಗೆಲ್ಲಿಸಿಕೊಳುವುದು ಮತ್ತು ಅದಕ್ಕೆ ಕಾಂಗ್ರೆಸ್ ನ ಎ ಮಂಜು ಅವರಿಂದ ಹಾಸನದಲ್ಲಿ ಪ್ರಬಲ ಪೈಪೋಟಿ ಎದುರಿಸುತ್ತಿದ್ದ ದೇವೇಗೌಡರಿಗೆ ಪ್ರತ್ಯುಪಕಾರ ಮಾಡುವುದು ಈ ಎರಡು ಪಕ್ಷಗಳ ಒಳತಂತ್ರ ಆಗಿತ್ತೆನ್ನುವುದನ್ನು ತಿಳಿದು ಭ್ರಮನಿರಸನಗೊಂಡಿದ್ದ ವಿಜಯಶಂಕರ್, ಆ ಲೆಕ್ಕವನ್ನು ಚುಕ್ತಮಾಡುವ ಗುರಿ ಇಟ್ಟುಕೊಂಡೇ ಸಿದ್ದರಾಮಯ್ಯ ನೇತೃತ್ವದಲ್ಲಿ ಕೈಪಡೆ ಸೇರಿ, ಕ್ಷೇತ್ರವನ್ನು ಸುತ್ತುತ್ತಿದ್ದಾರೆ.

ಈ ಮಧ್ಯೆ, ಹಾಸನ, ಮಂಡ್ಯ ಕ್ಷೇತ್ರಗಳ ಜೊತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನೂ ಜೆಡಿಎಸ್‌ಗೆ ಬಿಟ್ಟು ಕೊಡಬೇಕೆಂದು ಬೇಡಿಕೆಯನ್ನು ತೇಲಿ ಬಿಡಲಾಗಿತ್ತು. ಕ್ಷೇತ್ರ ಪುನರ್ವಿಂಗಡಣೆ ಬಳಿಕ ಮೈಸೂರು ಕೊಡಗು ಲೋಕಸಭಾ ಕ್ಷೇತ್ರವು ಮೈಸೂರು ನಗರ-ಜಿಲ್ಲೆಯ ಕೃಷ್ಣರಾಜ, ನರಸಿಂಹರಾಜ, ಚಾಮರಾಜ, ಹುಣಸೂರು, ಚಾಮುಂಡೇಶ್ವರಿ, ಪಿರಿಯಾಪಟ್ಟಣ ಮತ್ತು ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಎಂಟು ಕ್ಷೇತ್ರಗಳ ಪೈಕಿ ನಾಲ್ಕರಲ್ಲೀಗ (ಕೃಷ್ಣರಾಜ,ಚಾಮರಾಜ, ಮಡಿಕೇರಿ, ವಿರಾಜಪೇಟೆ) ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಮೂರು ಕ್ಷೇತ್ರದಲ್ಲಿ (ಹುಣಸೂರು, ಚಾಮುಂಡೇಶ್ವರಿ ಮತ್ತು ಪಿರಿಯಾಪಟ್ಟಣ) ಜೆಡಿಎಸ್‌ ಗೆದ್ದಿದೆ. ಕಾಂಗ್ರೆಸ್ ಬಾಬ್ತಿನಲ್ಲಿರುವುದು ನರಸಿಂಹರಾಜ ಕ್ಷೇತ್ರ ಮಾತ್ರ. ಕಾಂಗ್ರೆಸ್ ಪಕ್ಷದ ಈ ಪರಿಯ ಹಿನ್ನಡೆಯನ್ನಾಧರಿಸಿಯೇ ಸ್ಥಳೀಯ ‘ದಳಪತಿ’ಗಳು ಮೈಸೂರು ಕ್ಷೇತ್ರ ಪಕ್ಷಕ್ಕೇ ಸಿಗಬೇಕೆಂದು ಹಕ್ಕು ಸ್ಥಾಪಿಸುತ್ತಿದ್ದಾರೆ.

ಆದರೆ, ಈ ಕ್ಷೇತ್ರದ ಇತಿಹಾಸದಲ್ಲಿ ಯಾವತ್ತೂ ಜನತಾ ಪರಿವಾರ ಗೆದ್ದದ್ದಿಲ್ಲ. ೧೯೯೬ರಲ್ಲಿ ಕಾಂಗ್ರೆಸ್ ನ ಶ್ರೀಕಂಠದತ್ತ ಒಡೆಯರ್ ಎದುರು ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಜಿ ಟಿ ದೇವೇಗೌಡ ಮತ್ತು ೨೦೦೪ರಲ್ಲಿ ಬಿಜೆಪಿಯ ವಿಜಯ ಶಂಕರ್‌ ಎದುರಾಳಿಯಾಗಿದ್ದ ಎ ಎಸ್‌ ಗುರುಸ್ವಾಮಿ ೨ನೇ ಸ್ಥಾನ ಪಡೆದದ್ದಷ್ಟೆ ಇಲ್ಲಿ ಪಕ್ಷದ ಈವರೆಗಿನ ಗರಿಷ್ಠ ಸಾಧನೆ. ೧೯೯೮, ೨೦೦೪ ಮತ್ತು ೨೦೧೪ರ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದರ ಹೊರತು ಉಳಿದೆಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷವೇ ಪ್ರಾಬಲ್ಯ ಸ್ಥಾಪಿಸಿತ್ತು. ಅಲ್ಲದೆ,ಕಳೆದ ವಿಧಾನಸಭಾ ಚುನಾವಣೆಯ ಸಂಖ್ಯಾಬಲದ ಆಚೆಗೆ, ಮತಗಳಿಕೆ ನೆಲೆಯಲ್ಲಿ ನೋಡಿದರೆ ಬಿಜೆಪಿ, ಜೆಡಿಎಸ್‌ ಎರಡೂ ಪಕ್ಷಕ್ಕಿಂತ ಕಾಂಗ್ರೆಸ್ ಗಣನೀಯ ಪ್ರಮಾಣದಲ್ಲಿ ಹೆಚ್ಚು ಮತ ಪಡೆದಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರು ಪಕ್ಷಗಳು ಗಳಿಸಿರುವ ಮತಪ್ರಮಾಣ ಈ ರೀತಿ ಇದೆ.

  • ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಚಲಾಯಿತ ಒಟ್ಟು ಮತ - ೧೩,೪೪,೭೮೪
  • ಈ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ ಪಡೆದ ಒಟ್ಟು ಮತ - ೦೩, ೪೫,೪೮೯
  • ಮೂರು ಕ್ಷೇತ್ರಗಳಲ್ಲಿ ಗೆದ್ದಿರುವ ಜೆಡಿಎಸ್ ನ ಮತಗಳಿಕೆ ಪ್ರಮಾಣ - ೦೪,೧೦, ೨೦೨
  • ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್ ಪಡೆದ ಒಟ್ಟು ಮತ - ೦೪,೯೨,೬೩೧

ಅಂದರೆ, ಸಂಖ್ಯಾಬಲದಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ೧,೪೭,೨೪೨ ಮತಗಳನ್ನು, ಜೆಡಿಎಸ್ ಪಕ್ಷಕ್ಕಿಂತ ೮೨,೪೨೯ ಮತಗಳನ್ನು ಹೆಚ್ಚು ಪಡೆದಿದೆ. ಅಲ್ಲದೆ, ಎಲ್ಲ ಎಂಟು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡಿರುವುದು ಪಡೆದ ಮತಗಳಲ್ಲಿ ವ್ಯಕ್ತವಾಗಿದೆ. ಮಾತ್ರವಲ್ಲ,“ಸಿದ್ದರಾಮಯ್ಯ ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಸಹಿತ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಅಪವಿತ್ರ ಹೊಂದಾಣಿಕೆ ಮಾಡಿಕೊಂಡಿದ್ದು ಕಾಂಗ್ರೆಸ್ ಗೆಲುವಿಗೆ ತೊಡಕಾಯಿತು,’’ ಎನ್ನುವ ಕಾಂಗ್ರೆಸ್ಸಿಗರ ಸಮರ್ಥನೆಗೆ ಈ ಎರಡು ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಪಡೆದ ಅತ್ಯಂತ ಕಡಿಮೆ ಮತಗಳೇ ನಿದರ್ಶನ. ಸಂಸತ್‌ ಚುನಾವಣೆ ವರೆಗೂ ಮೈತ್ರಿ ಮುಂದುವರಿದರೆ ಮೈಸೂರನ್ನು ತನಗೇ ಬಿಡಬೇಕೆಂಬ ಒತ್ತಾಯಕ್ಕೆ ಈ ಎಲ್ಲಾ ಅಂಶಗಳನ್ನು ಪೂರಕವನ್ನಾಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ.

ಅಲ್ಲದೆ, ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಿಗೆ ಹಠ ತೊಟ್ಟಿದ್ದ ಜಿ ಟಿ ದೇವೇಗೌಡ, ಎಚ್‌ ವಿಶ್ವನಾಥ್ ಮುಂತಾದವರು ಮೈತ್ರಿ ಸರ್ಕಾರ ರಚನೆಯ ನಂತರವೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಜೊತೆಗಿನ ಸಂಬಂಧ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಕಳೆದ ಚುನಾವಣೆಯ ರಣ-ತಂತ್ರಗಾರಿಕೆಯಲ್ಲಿ ಮೇಲುಗೈ ಪಡೆದಿರುವ ಇವರು ಸಂಸತ್‌ ಚುನಾವಣೆಯಲ್ಲೂ ಅದನ್ನೇ ಮುಂದುವರಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ,“ಮೈಸೂರನ್ನು ಜೆಡಿಎಸ್‌ಗೆ ಬಿಟ್ಟರೆ ಭವಿಷ್ಯದಲ್ಲಿ ಇಲ್ಲಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲದಂತಾಗುತ್ತೆ,’’ಎನ್ನುವುದು ಸ್ಥಳೀಯ ಕಾಂಗ್ರೆಸ್ ಮುಖಂಡರ ಆತಂಕ. “ಚುನಾವಣೆಯ ಹಿನ್ನಡೆ ತಾತ್ಕಾಲಿಕ. ಎಐಸಿಸಿ ಸದಸ್ಯರೂ ಆಗಿರುವ ಸಿದ್ದರಾಮಯ್ಯ ತವರು ಕ್ಷೇತ್ರದ ಮೇಲಿನ ಹಿಡಿತವನ್ನು ಬಿಟ್ಟುಕೊಡುವುದಿಲ್ಲ. ಮೈತ್ರಿ ಮುಂದುವರಿದಲ್ಲಿ ಮೈಸೂರು, ಚಾಮರಾಜನಗರ ಕ್ಷೇತ್ರಗಳನ್ನು ಉಳಿಸಿಕೊಳ್ಳುತ್ತಾರೆ. ಮಂಡ್ಯ,ಹಾಸನ, ಕನಕಪುರ ಸಹಿತ ಹಳೇ ಮೈಸೂರು ಭಾಗದ ಹಲವು ಕ್ಷೇತ್ರಗಳಲ್ಲಿ ಒಕ್ಕಲಿಗ ಅಭ್ಯರ್ಥಿಗಳೇ ಕಣಕ್ಕಿಳಿಯುತ್ತಾರೆ. ಮೈಸೂರಿನಲ್ಲಿ ಒಬಿಸಿ (ಕುರುಬ) ಅಭ್ಯರ್ಥಿಗಿರುವ ಅವಕಾಶವನ್ನು ಕೈಚೆಲ್ಲುವ ಸಂದರ್ಭ ಒದಗಿ ಬರಲಾರದು,’’ ಎನ್ನುವುದು ಕಾಂಗ್ರೆಸ್ಸಿಗರ ವಿಶ್ವಾಸ.

ಇದನ್ನೂ ಓದಿ : ರಂಗ ದಿಶಾ | ‘ಮೈಸೂರು ರಾಜ್ಯ’ ಮತ್ತು ‘ನೀಲಿ ಕುದುರೆ’ ಗೀತೆಗಳ ಪ್ರಸ್ತುತಿ

ಈ ಮಧ್ಯೆ, ಕಳೆದ ನಾಲ್ಕು ವರ್ಷಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ವಿವಾದಗಳ ಮೂಲಕವೇ ಸುದ್ದಿಯಾಗಿದ್ದ ಬಿಜೆಪಿಯ ಹಾಲಿ ಸಂಸದ ಪ್ರತಾಪ ಸಿಂಹ, ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ತಮ್ಮ ಮತ್ತು ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿ ಹಿಡಿದು ಕ್ಷೇತ್ರದ ಗಣ್ಯ-ಮಹನೀಯರ ಮನೆ ಬಾಗಿಲು ತಟ್ಟತೊಡಗಿದ್ದಾರೆ. ಕಳೆದ ಅವಧಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್‌ ವಿಶ್ವನಾಥ್ ಹೊಂದಿದ್ದ ‘ಒಕ್ಕಲಿಗ ವಿರೋಧಿ’ ಹಣೆ ಪಟ್ಟಿಯ ಗರಿಷ್ಠ ಲಾಭ ಪಡೆದಿದ್ದ ಪ್ರತಾಪ್, ಈ ಬಾರಿ ಸಿದ್ದರಾಮಯ್ಯ ಅವರ ಮೇಲೆ ವ್ಯಕ್ತವಾಗಿದ್ದ ಒಕ್ಕಲಿಗ ವಿರೋಧಿ ಎನ್ನುವ ಭಾವನೆಯನ್ನು ತಮಗೆ ಪೂರಕವಾಗಿಸಿಕೊಳ್ಳಲು ಹವಣಿಸಿದ್ದರು. ಹಾಗೆಂದೆ, ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಶ್ವನಾಥರ ಕಾಲಿಗೆರಗಿದ್ದರು. ಜಿ ಟಿ ದೇವೇಗೌಡ, ಸಾ ರಾ ಮಹೇಶ್‌ ಮುಂತಾದ ಒಕ್ಕಲಿಗರ ಮುಖಂಡರನ್ನು ಅಪ್ಪಿ,ಅಭಿನಂದಿಸಿದ್ದರು. ಆದರೆ,ಕೆಲವೇ ಹೊತ್ತಿನಲ್ಲಿ ಮೈತ್ರಿ ಚಿತ್ರಣ ಬದಲಾಗಿದ್ದು; ಒಕ್ಕಲಿಗ ವಿರೋಧಿ ಎನ್ನುವ ಅಪಖ್ಯಾತಿಗೆ ತುತ್ತಾಗಿದ್ದ ಸಿದ್ದರಾಮಯ್ಯ ಅವರು ಕುಮಾರ ಸ್ವಾಮಿ ಕೈಕುಲುಕಿದ್ದು ಪ್ರತಾಪ್ ‘ತಂತ್ರ’ ಮತ್ತು ಹವಣಿಕೆಗೆ ತಾತ್ಕಾಲಿಕ ಅಡ್ಡಗಾಲಾಗಿ ಪರಿಣಮಿಸಿತು.

ಆದಾಗ್ಯೂ, ಕಳೆದ ಚುನಾವಣೆಯಲ್ಲಿ ಬಿಜೆಪಿ ಜೊತೆ ನೇರ ಸಂಬಂಧ ಸಾಧಿಸಿದ್ದ ಜೆಡಿಎಸ್‌, ಸಂಸತ್‌ ಚುನಾವಣೆಯಲ್ಲಿ ಹೇಗೆ ವರ್ತಿಸುತ್ತದೆನ್ನುವುದನ್ನು ಈಗಲೇ ಹೇಳಲಾಗದು. “ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿದು ಮೈಸೂರು ಕ್ಷೇತ್ರವನ್ನು ಜೆಡಿಎಸ್‌ ಪಾಲಿಗೆ ಬಿಟ್ಟುಕೊಡದಿದ್ದರೆ, ಪಕ್ಷದಲ್ಲಿರುವ ‘ಸಿದ್ದರಾಮಯ್ಯ ವಿರೋಧಿ ಪಡೆ’ ಮತ್ತೆ ಸಕ್ರೀಯವಾಗಿ,‘ನಮ್ಮವನು; ಒಕ್ಕಲಿಗ’ಎನ್ನುವ ಅಭಿಮಾನದಿಂದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದೆಂದು ಆ ಪಕ್ಷದ ಮುಖಂಡರೇ ತಮ್ಮ ಆಪ್ತವಲಯಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇದು ಸ್ಥಾನ ಹೊಂದಾಣಿಕೆಗೆ ಕೂರುವ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರವೂ ಇರಬಹುದು. ಅಂತಿಮವಾಗಿ ಯಾರು ಪಡೆಯುತ್ತಾರೆ, ಯಾರು ಮಣಿಯುತ್ತಾರೆ, ಇದೆಲ್ಲ ಮೈತ್ರಿ ಬಾಂಧವ್ಯದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆನ್ನುವುದು ಸದ್ಯದ ಕುತೂಹಲ. ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇರುವಾಗಲೇ ಇಂಥೆಲ್ಲ ಲೆಕ್ಕಾಚಾರಗಳು ಹರಿದಾಡುತ್ತಿರುವುದನ್ನು ನೋಡಿದರೆ, ಮೈಸೂರು ಕ್ಷೇತ್ರ ಮತ್ತೊಮ್ಮೆ ‘ಕದನ ಕುತೂಹಲ’ಕ್ಕೆ ಕಾರಣವಾಗುವ ಸೂಚನೆ ಕಾಣುತ್ತಿದೆ. ಅದಕ್ಕೆ ಅಣಿಯಾಗುತ್ತಿರುವ ಈ‌ ಕ್ಷೇತ್ರದ ಸಂಕ್ಷಿಪ್ತ ಹಿನ್ನೋಟ ಹೀಗಿದೆ:

  • ಚಾಮರಾಜನಗರವನ್ನೂ ಒಳಗೊಂಡಿದ್ದ ಮೈಸೂರು 1951ರ ಮೊದಲ ಚುನಾವಣೆಯಲ್ಲಿ ದ್ವಿಸದಸ್ಯ ಕ್ಷೇತ್ರ. ಆಗ ಕಾಂಗ್ರೆಸ್‌ ಪಕ್ಷದ ಎನ್‌ ರಾಚಯ್ಯ,ಕಿಸಾನ್‌ ಮಜ್ದೂರ್‌ ಪಾರ್ಟಿಯ ಎಂ.ಎಸ್‌. ಗುರುಪಾದಸ್ವಾಮಿ ಗೆದ್ದಿದ್ದರು. 1957ರಲ್ಲಿ ದ್ವಿಸದಸ್ಯ ಸ್ಥಾನಗಳು ಕಾಂಗ್ರೆಸ್ (ಎಸ್‌.ಎಂ.ಸಿದ್ದಯ್ಯ, ಎಂ.ಶಂಕರಯ್ಯ) ಪಾಲಾದವು.
  • ೧೯೬೨ರಲ್ಲಿ ಮೈಸೂರು ಏಕ ಸದಸ್ಯ ಕ್ಷೇತ್ರವಾದ ಬಳಿಕ ೧೯೯೮ರ ವರೆಗೂ ಇಲ್ಲಿ ಕಾಂಗ್ರೆಸ್ ಪಕ್ಷದ್ದೇ ಹವಾ. ೧೯೬೨- ಎಂ.ಶಂಕರಯ್ಯ, ೧೯೬೭-೭೭ರ ಮಧ್ಯೆ ನಡೆದ ೩ ಚುನಾವಣೆಗಳಲ್ಲಿ ಸತತವಾಗಿ ತುಳಸೀದಾಸಪ್ಪ , ೧೯೮೦- ಎಂ.ರಾಜಶೇಖರ ಮೂರ್ತಿ, ೧೯೮೪/೧೯೮೯/೧೯೯೬ ಮತ್ತು ೧೯೯೯ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಯ್ಕೆ.
  • ಈ ಮಧ್ಯೆ,೧೯೯೧ರಲ್ಲಿ ಒಡೆಯರ್‌ ಬಿಜೆಪಿ ಅಭ್ಯರ್ಥಿ ಆಗಿದ್ದರಾದರೂ ಗೆಲ್ಲಲಿಲ್ಲ. ಆಗ ಕಾಂಗ್ರೆಸ್‌ ಪಕ್ಷದ ಚಂದ್ರಪ್ರಭಾ ಅರಸ್ ಸಂಸದರಾಗಿದ್ದರು. ೧೯೯೮ರಲ್ಲಿ ಸಿಎಚ್‌ ವಿಜಯಶಂಕರ್ ಮೂಲಕ‌ ಕೇಸರಿ ಪಕ್ಷ ಗೆದ್ದಿತಾದರೂ, ಅವಧಿ ಪೂರ್ಣಗೊಳ್ಳಲಿಲ್ಲ. ೨೦೦೪ರಲ್ಲಿ ವಿಜಯಶಂಕರ್ ಮತ್ತೆ‌ ಗೆದ್ದರು. ೨೦೦೯ರಲ್ಲಿ ವಿಜಯಶಂಕರ್‌ ಅವರನ್ನು ಮಣಿಸಿದ ಎಚ್‌.ವಿಶ್ವನಾಥ್‌ ಕಾಂಗ್ರೆಸ್ ಗೆ ಮತ್ತೆ ಕ್ಷೇತ್ರವನ್ನು ತಂದುಕೊಟ್ಟರು.
  • ೨೦೧೪ರಲ್ಲಿ ವಿಜಯಶಂಕರ್‌ ಮತ್ತು ವಿಶ್ವನಾಥ್‌ ಅವರೇ ಪರಸ್ಪರ ಸೆಣಸುವ ಸೂಚನೆ ಇತ್ತಾದರೂ ಕೊನೆಯ ಕ್ಷಣದಲ್ಲಿ ಬಿಜೆಪಿ ಪ್ರತಾಪ್‌ ಸಿಂಹ ಅವರನ್ನು ಅಖಾಡಕ್ಕಿಳಿಸಿತು. ಜೆಡಿಎಸ್‌ ಚಂದ್ರಶೇಖರಯ್ಯ ಎನ್ನುವ ನಿವೃತ್ತ ನ್ಯಾಯಾಧೀಶರನ್ನು ನೆಪಕ್ಕೆ ಕಣಕ್ಕಿಳಿಸಿ, ಬಿಜೆಪಿಗೆ ಪರೋಕ್ಷ ಬೆಂಬಲ ನೀಡಿತು. ಇದು ಮತ್ತು “ವಿಶ್ವನಾಥ್‌ ಒಕ್ಕಲಿಗ ವಿರೋಧಿ’’ ಎನ್ನುವ ಹಣೆಪಟ್ಟಿ ಬಳಸಿ ಎಲ್ಲ ಪಕ್ಷದ ಒಕ್ಕಲಿಗ ನಾಯಕರ ಬೆಂಬಲ ಪಡೆದು ಬಿಜೆಪಿ ಗೆದ್ದಿತ್ತು.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More