ಬದಲಾಗದ ಬಿಜೆಪಿ ಚಹರೆ; ಪಕ್ಷದಲ್ಲಿ ಬ್ರಾಹ್ಮಣ-ಬನಿಯಾರದ್ದೇ ಕಾರುಬಾರು!

ಬಿಜೆಪಿ ಸಾಂಪ್ರದಾಯಿಕವಾಗಿ ಬ್ರಾಹ್ಮಣ ಮತ್ತು ಬನಿಯಾ (ವ್ಯಾಪಾರಿ) ಪಕ್ಷ ಎಂಬ ಆರೋಪ ಇತ್ತು. ಈಚೆಗೇನಾದರೂ ಪರಿಸ್ಥಿತಿ ಬದಲಾಗಿದೆಯೇ? ಇಲ್ಲ ಎನ್ನುತ್ತದೆ ‘ದಿ ಪ್ರಿಂಟ್‌’ನ ಸಮೀಕ್ಷಾ ವರದಿ. ಇಂದಿಗೂ ಪಕ್ಷದ ಬಹುತೇಕ ಪದಾಧಿಕಾರಿಗಳು ಮೇಲ್ವರ್ಗದವರೇ ಎಂಬುದು ಮತ್ತೆ ಸಾಬೀತಾಗಿದೆ

ದೇಶಾದ್ಯಂತ ಬಿಜೆಪಿಯ ಪ್ರಭುತ್ವ ಸ್ಥಾಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯಿಂದ ದೂರ ಉಳಿದಿರುವ ಕೆಳಜಾತಿಯ ಜನರನ್ನು ಸಾಮಾಜಿಕ ಎಂಜಿನಿಯರಿಂಗ್‌ ಮೂಲಕ ಪಕ್ಷದ ತೆಕ್ಕೆಗೆ ಸೆಳೆಯಲು ಬಿಜೆಪಿಯ ಈ ಜೋಡೆತ್ತು ಹರಸಾಹಸ ಮಾಡುತ್ತಿದೆ. ಆದರೆ, ೩೮ ವರ್ಷದ ಇತಿಹಾಸ ಹೊಂದಿರುವ ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಮೇಲ್ಜಾತಿಯವರೇ ಹೆಚ್ಚಿನ ಸ್ಥಾನಮಾನ ಹೊಂದಿದ್ದಾರೆ. ಹಿಂದುಳಿದ ವರ್ಗಗಳ ನಾಯಕರು, ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ಅತ್ಯಂತ ಕಡಿಮೆ ಸ್ಥಾನಮಾನ ಕಲ್ಪಿಸಲಾಗಿದೆ.

ಬಿಜೆಪಿ ಸಂಘಟನಾ ವ್ಯವಸ್ಥೆಯಲ್ಲಿ ಸ್ಥಾನಪಡೆದಿರುವ ನಾಯಕರ ಸಾಮಾಜಿಕ ಹಿನ್ನೆಲೆಯನ್ನು ‘ದಿ ಪ್ರಿಂಟ್’‌ ವಿಶ್ಲೇಷಿಸಿದ್ದು, ರಾಷ್ಟ್ರಮಟ್ಟದಲ್ಲಿ ಪಕ್ಷದ ೩/೪ ಭಾಗ ಪದಾಧಿಕಾರಿಗಳು ಮೇಲ್ಜಾತಿಗಳಿಗೆ ಸೇರಿದವರಾಗಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿಗೆ ಶೇ.೬೦ರಷ್ಟು ಮಂದಿಯನ್ನು ಸಾಮಾನ್ಯ ವರ್ಗಕ್ಕೆ ಸೇರಿದ ನಾಯಕರನ್ನು ಆಯ್ಕೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನವು ಶೇ.೬೫ರಷ್ಟು ಪಾಲು ಸಾಮಾನ್ಯ ಜಾತಿಗಳ ನಾಯಕರಿಗೆ ಮೀಸಲಾಗಿದೆ. ದೇಶಾದ್ಯಂತ ಜಿಲ್ಲಾ ಮಟ್ಟದಲ್ಲೂ ಇದೇ ಪರಿಸ್ಥಿತಿ ಇದ್ದು, ಶೇ.೬೫ರಷ್ಟು ಜಿಲ್ಲಾಧ್ಯಕ್ಷರು ಸಾಮಾನ್ಯ ವರ್ಗಗಳಿಗೆ ಸೇರಿದವರೇ ಇದ್ದಾರೆ.

ಕಳೆದ ಕೆಲವು ವರ್ಷಗಳಿಂದ ಬ್ರಾಹ್ಮಣ-ಬನಿಯಾಗಳ (ಮೇಲ್ವರ್ಗ ಮತ್ತು ವ್ಯಾಪಾರಿ ಸಮುದಾಯ) ಪಕ್ಷ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಯತ್ನಿಸುತ್ತಿರುವ ಬಿಜೆಪಿ, ದಲಿತರನ್ನು ಒಳಗೊಳ್ಳುವ ಪ್ರಯತ್ನ ನಡೆಸುತ್ತಿದೆ. ಆದರೆ, ಪಕ್ಷದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅದು ಪ್ರತಿಫಲನವಾಗುತ್ತಿಲ್ಲ. ದಲಿತರು, ಮುಸ್ಲಿಮರು ಮತ್ತು ಬುಡಕಟ್ಟು ಸಮುದಾಯವರಿಗೆ ಪಕ್ಷದಲ್ಲಿ ಕನಿಷ್ಠ ಪ್ರಾಮುಖ್ಯತೆ ನೀಡಲಾಗಿದೆ. ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಇಬ್ಬರು ದಲಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಒಬ್ಬೇ ಒಬ್ಬ ದಲಿತನಿಗೆ ರಾಜ್ಯಾಧ್ಯಕ್ಷ ಪಟ್ಟ ಕಲ್ಪಿಸಲಾಗಿಲ್ಲ.

ವಿಶ್ಲೇಷಣೆಯ ವಿಧಾನ ಏನು?

ಬಿಜೆಪಿಯ ೫೦ ರಾಷ್ಟ್ರೀಯ ಪದಾಧಿಕಾರಿಗಳು, ೯೭ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು, ೨೯ ರಾಜ್ಯಗಳ ೩೬ ರಾಜ್ಯಾಧ್ಯಕ್ಷರು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪಕ್ಷದ ಅಧ್ಯಕ್ಷರು ಹಾಗೂ ೨೪ ರಾಜ್ಯಗಳ ೭೫೨ ಜಿಲ್ಲಾಧ್ಯಕ್ಷರ ಜಾತಿ ಹಿನ್ನೆಲೆಯನ್ನು ವಿಶ್ಲೇಷಿಸಿ ವರದಿ ಸಿದ್ಧಪಡಿಸಲಾಗಿದೆ. ಅಸ್ಸಾಂ ಮತ್ತು ತ್ರಿಪುರ ಹೊರತುಪಡಿಸಿ, ಬುಡಕಟ್ಟು ಸಮುದಾಯಗಳೇ ಹೆಚ್ಚಿರುವ ಈಶಾನ್ಯ ರಾಜ್ಯಗಳನ್ನು ಈ ವಿಶ್ಲೇಷಣೆಯಿಂದ ಕೈಬಿಡಲಾಗಿದೆ. ಪ್ರತಿ ರಾಜ್ಯದಲ್ಲಿನ ಜಾತಿ ವ್ಯವಸ್ಥೆಯ ಆಧಾರದಲ್ಲೇ ವರ್ಗೀಕರಣ ಮಾಡಲಾಗಿದೆ.

ಮುಸ್ಲಿಮರು, ಬೌದ್ಧರು ಮತ್ತು ಕ್ರಿಶ್ಚಿಯನ್ನರನ್ನು ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಲಾಗಿದೆ. ಪಂಜಾಬ್‌ನಲ್ಲಿ ಸಿಖ್ಖರು ಅಲ್ಪಸಂಖ್ಯಾತ ಸಮುದಾಯವಲ್ಲವಾದ್ದರಿಂದ ಅವರನ್ನು ಈ ಪಟ್ಟಿಗೆ ಸೇರಿಸಲಾಗಿಲ್ಲ. ಪಂಜಾಬ್‌ ಬಿಜೆಪಿ ಘಟಕದಲ್ಲಿ ಬಹುತೇಕ ಮಂದಿ ಸಿಖ್‌ ಪದಾಧಿಕಾರಿಗಳೇ ಇದ್ದಾರೆ. ಪಂಜಾಬ್‌ ಹೊರತುಪಡಿಸಿ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ತಲಾ ಒಬ್ಬೊಬ್ಬ ಸಿಖ್‌ ಮುಖಂಡರು ಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶ ಮತ್ತು ಚತ್ತೀಸಗಢದ ಜಿಲ್ಲಾ ಮಟ್ಟದಲ್ಲಿ ತಲಾ ಒಬ್ಬರು ಸಿಖ್‌ ನಾಯಕನಿಗೆ ಸ್ಥಾನ ಕಲ್ಪಿಸಲಾಗಿದೆ. ಬಿಜೆಪಿಯ ವೆಬ್‌ಸೈಟ್‌ನಿಂದ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರ ಪಟ್ಟಿ ಪಡೆದು ವಿಶ್ಲೇಷಣೆ ನಡೆಸಲಾಗಿದೆ.

ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಂಟಿ ಪ್ರಧಾನ ಕಾರ್ಯದರ್ಶಿಗಳು, ರಾಷ್ಟ್ರೀಯ ಕಾರ್ಯದರ್ಶಿಗಳು, ರಾಷ್ಟ್ರೀಯ ವಕ್ತಾರರು ಮತ್ತು ಮೋರ್ಚಾಗಳ ಮುಖ್ಯಸ್ಥರು ಸೇರಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿಯು ಬಿಜೆಪಿ ರಾಜ್ಯ ಘಟಕದ ನಾಯಕರನ್ನು ಒಳಗೊಂಡಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಬಿಜೆಪಿ ರಾಜ್ಯ ಘಟಕಗಳ ವೆಬ್‌ಸೈಟ್‌ನಿಂದ ಜಿಲ್ಲಾಧ್ಯಕ್ಷರ ಪಟ್ಟಿ ಪಡೆಯಲಾಗಿದ್ದು, ಕೆಲವು ಕಡೆ ರಾಜ್ಯ ಘಟಕಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.

ಕೆಲವು ರಾಜ್ಯಗಳಲ್ಲಿ ಜಿಲ್ಲೆಗಳಿಗಿಂತ ಜಿಲ್ಲಾಧ್ಯಕ್ಷರ ಸಂಖ್ಯೆ ಹೆಚ್ಚಿದೆ. ಕೆಲವು ಜಿಲ್ಲೆಗಳು ದೊಡ್ಡದಾಗಿದ್ದು, ಅಲ್ಲಿ ಹಲವು ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದೆ. ಸಣ್ಣಪುಟ್ಟ ಲೋಪದೋಷಗಳ ಹೊರತಾಗಿ ಬಿಜೆಪಿ ಪದಾಧಿಕಾರಿ ಜಾತಿ ವಿಶ್ಲೇಷಣೆ ಬಹುತೇಕ ಸರಿಯಾಗಿದೆ ಎಂದು ‘ದಿ ಪ್ರಿಂಟ್’ ಹೇಳಿದೆ.

ಮೇಲ್ಜಾತಿ ಪಕ್ಷವಾಗಿಯೇ ಉಳಿದ ಬಿಜೆಪಿ

ಬಿಜೆಪಿಯ ೫೦ ರಾಷ್ಟ್ರೀಯ ಪದಾಧಿಕಾರಿಗಳ ಪೈಕಿ ೧೭ ಮಂದಿ ಬ್ರಾಹ್ಮಣರು. ೨೧ ಮಂದಿ ಮುಂದುವರಿದ ಜಾತಿಗೆ ಸೇರಿದ್ದು, ನಾಲ್ವರು ಇತರ ಹಿಂದುಳಿದ ವರ್ಗಕ್ಕೂ, ಮೂವರು ಪರಿಶಿಷ್ಟ ಜಾತಿ, ಇಬ್ಬರು ಪರಿಶಿಷ್ಟ ಪಂಗಡ, ಇಬ್ಬರು ಮುಸ್ಲಿಂ ಮತ್ತು ಒಬ್ಬರು ಸಿಖ್‌ ಸಮುದಾಯಕ್ಕೂ ಸೇರಿದ್ದಾರೆ. ಪಕ್ಷದ ಅತ್ಯುನ್ನತ ನೀತಿ ನಿರೂಪಣಾ ಸಮಿತಿಯಲ್ಲಿ ಅಲ್ಪಸಂಖ್ಯಾತರಿಗೆ ಅತ್ಯಂತ ಕಡಿಮೆ ಸ್ಥಾನ ಕಲ್ಪಿಸಲಾಗಿದೆ. ಮೂವರು ದಲಿತರ ಪೈಕಿ ಒಬ್ಬರು ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಇಬ್ಬರು ಮುಸ್ಲಿಮರ ಪೈಕಿ ಒಬ್ಬರು ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿದ್ದಾರೆ.

ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಒಬ್ಬರು ಎಸ್‌ಟಿ ಮೋರ್ಚಾದ ಅಧ್ಯಕ್ಷರಾಗಿದ್ದು, ಮತ್ತೊಬ್ಬರಾದ ಮಧ್ಯಪ್ರದೇಶದ ಜ್ಯೋತಿ ಧ್ರುವೆ ಅವರು ಜಾತಿ ವಿವಾದದಲ್ಲಿ ಸಿಲುಕಿದ್ದಾರೆ. ರಾಜ್ಯ ಸರ್ಕಾರವು ಆಕೆಯ ಎಸ್‌ಟಿ ಸರ್ಟಿಫಿಕೇಟ್‌ ಅನ್ನು ಕಸಿದುಕೊಂಡಿದ್ದು, ಪ್ರಕರಣ ಕೋರ್ಟ್‌ನಲ್ಲಿದೆ. ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಪೈಕಿ ಶೇ.೭೬ರಷ್ಟು ಮಂದಿ ಮೇಲ್ಜಾತಿಗೆ ಸೇರಿದ್ದು, ಶೇ.೮ರಷ್ಟು ಮಂದಿ ಒಬಿಸಿ ಹಾಗೂ ಶೇ.೬ರಷ್ಟು ಮಂದಿ ಎಸ್‌ಸಿ ಸಮುದಾಯಕ್ಕೆ ಸೇರಿದ್ದಾರೆ.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಹೆಚ್ಚೂಕಡಿಮೆ ಇದೇ ಸ್ಥಿತಿ ಇದೆ. ಇಲ್ಲಿರುವ ೯೭ ಸದಸ್ಯರ ಪೈಕಿ ೨೯ ಮಂದಿ ಬ್ರಾಹ್ಮಣರು, ೩೭ ಮಂದಿ ಮೇಲ್ಜಾತಿ, ೧೮ ಮಂದಿ ಒಬಿಸಿ, ೭ ಮಂದಿ ಎಸ್‌ಸಿ, ಮೂವರು ಅಲ್ಪಸಂಖ್ಯಾತ ಸಮುದಾಯ ಹಾಗೂ ತಲಾ ಒಬ್ಬೊಬ್ಬರು ಸಿಖ್‌ ಮತ್ತು ಎಸ್‌ಟಿ ಸಮುದಾಯದ ಸದಸ್ಯರು ಇದ್ದಾರೆ. ಕಳೆದ ತಿಂಗಳು ಚಂದನ್‌ ಮಿತ್ರಾ ಪಕ್ಷ ತೊರೆದಿದ್ದರಿಂದ ಒಂದು ಸ್ಥಾನ ಖಾಲಿ ಉಳಿದಿದೆ. ಒಟ್ಟಾರೆ ಶೇ.೬೯ರಷ್ಟು ಮಂದಿ ಮೇಲ್ಜಾತಿಗೆ ಸೇರಿದ್ದು, ಶೇ.೨೭ರಷ್ಟು ಸದಸ್ಯರು ಇತರ ಸಮುದಾಯಗಳಿಗೆ ಸೇರಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯ ಘಟಕಗಳ ೩೬ ಅಧ್ಯಕ್ಷರ ಪೈಕಿ ಒಬ್ಬೇ ಒಬ್ಬ ದಲಿತ ಅಧ್ಯಕ್ಷರಿಲ್ಲ. ಈ ಪೈಕಿ ೭ ಮಂದಿ ಬ್ರಾಹ್ಮಣರು, ೧೭ ಮಂದಿ ಮುಂದುವರಿದ ಜಾತಿಗೆ ಸೇರಿದ್ದು, ೬ ಮಂದಿ ಎಸ್‌ಟಿ, ಐವರು ಹಿಂದುಳಿದ ವರ್ಗಗಳಿಗೆ ಸೇರಿದ್ದು, ಏಕೈಕ ಮುಸ್ಲಿಂ ಅಧ್ಯಕ್ಷರಿದ್ದಾರೆ. ಈ ಪೈಕಿ, ಶೇ.೬೬ರಷ್ಟು ಪಾಲು ಮೇಲ್ಜಾತಿಗೆ ಮೀಸಲಾಗಿದೆ.

ಜಿಲ್ಲಾ ಮಟ್ಟದಲ್ಲೂ ಇದೇ ಸ್ಥಿತಿ ಮುಂದುವರಿದಿದ್ದು, ಶೇ.೬೫ರಷ್ಟು ಜಿಲ್ಲಾಧ್ಯಕ್ಷರು ಉನ್ನತ ವರ್ಗಕ್ಕೆ ಸೇರಿದ್ದು, ಈ ಪೈಕಿ, ನಾಲ್ಕನೇ ಒಂದು ಭಾಗಕ್ಕೂ ಹೆಚ್ಚು ಬ್ರಾಹ್ಮಣರಿದ್ದಾರೆ. ಬಿಜೆಪಿಯು ಅಂದಾಜು ೭೫೨ ಜಿಲ್ಲಾಧ್ಯಕ್ಷರನ್ನು ಹೊಂದಿದ್ದು, ೭೪೬ ಮಂದಿಯ ದತ್ತಾಂಶ ಮಾತ್ರ ದೊರೆತಿದೆ. ಮೂರು ಸ್ಥಾನಗಳು ಖಾಲಿ ಬಿದ್ದಿದ್ದು, ೩ ಜಿಲ್ಲಾಧ್ಯಕ್ಷರ ಜಾತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಇವರಲ್ಲಿ ೪೮೭ ಮಂದಿ ಮೇಲ್ಜಾತಿಯವರಾಗಿದ್ದು, ಶೇ.೨೫ರಷ್ಟು ಮಂದಿ ಒಬಿಸಿ, ಬಿಸಿ ಮತ್ತು ಎಂಬಿಸಿ ವಿಭಾಗಕ್ಕೆ ಸೇರಿದ್ದಾರೆ. ಶೇ.೪ಕ್ಕಿಂತಲೂ ಕಡಿಮೆ ಮಂದಿ ಎಸ್‌ಸಿಗಳಾಗಿದ್ದಾರೆ. ಅಲ್ಪಸಂಖ್ಯಾತರ ಪ್ರಮಾಣ ಶೇ.೨ರಷ್ಟೂ ಇಲ್ಲ.

೨೦೧೧ರ ಗಣತಿಯ ಪ್ರಕಾರ, ದೇಶದಲ್ಲಿ ಶೇ.೧೬.೬ರಷ್ಟು ದಲಿತರು, ಶೇ.೮.೬ರಷ್ಟು ಎಸ್‌ಟಿ, ಶೇ.೧೪ರಷ್ಟು ಮುಸ್ಲಿಮರಿದ್ದಾರೆ. ಉಳಿದ ಜಾತಿಗಳ ಬಗ್ಗೆ ಯಾವುದೇ ಅಧಿಕೃತ ದತ್ತಾಂಶ ಲಭ್ಯವಿಲ್ಲ. ೨೦೦೭ರ ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಒ) ಪ್ರಕಾರ, ಒಬಿಸಿ ಜನಸಂಖ್ಯೆಯು ಶೇ.೪೧ರಷ್ಟಿದೆ ಎನ್ನಲಾಗಿದೆ.

ಉತ್ತರ ಪ್ರದೇಶ, ಬಿಹಾರದಲ್ಲೂ ಸ್ಥಿತಿ ಬದಲಾಗಿಲ್ಲ

೨೦೧೭ರಲ್ಲಿ ಉತ್ತರ ಪ್ರದೇಶದಲ್ಲಿ ಜಾತಿ ಸಮೀಕರಣ ನಡೆಸಿ ಅದ್ಭುತ ಜಯ ಸಾಧಿಸಿದ ಬಿಜೆಪಿ, ಇಲ್ಲಿಯೂ ಸಾಮಾನ್ಯ ವರ್ಗಕ್ಕೆ ಸಿಂಹಪಾಲು ನೀಡಿದೆ. ಶೇ.೭೨ರಷ್ಟು ಜಿಲ್ಲಾಧ್ಯಕ್ಷರು ಮೇಲ್ಜಾತಿಗೆ ಸೇರಿದ್ದು, ಈ ಪೈಕಿ, ಶೇ.೩೦ರಷ್ಟು ಬ್ರಾಹ್ಮಣರಿದ್ದಾರೆ. ಶೇ.೧೫ರಷ್ಟು ವ್ಯಾಪಾರಿ ಸಮುದಾಯದವರು ಹಾಗೂ ಶೇ.೨೬ರಷ್ಟು ಸ್ಥಾನ ಮುಂದುವರಿದ ಜಾತಿಗಳಿಗೆ ದಕ್ಕಿದೆ. ಉತ್ತರ ಪ್ರದೇಶದಲ್ಲಿ ದಲಿತರು ಶೇ.೨೧ರಷ್ಟು ಪ್ರಾಬಲ್ಯ ಹೊಂದಿದ್ದರೂ ೨ ಜಿಲ್ಲೆಗಳಲ್ಲಿ ಮಾತ್ರ ಜಿಲ್ಲಾಧ್ಯಕ್ಷರಾಗಿದ್ದಾರೆ. ಒಬಿಸಿಯ ಶೇ.೨೬ರಷ್ಟು ಮಂದಿ ಜಿಲ್ಲಾಧ್ಯಕ್ಷರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ೭೧ ಜಿಲ್ಲೆಗಳಿವೆ. ಆಡಳಿತಾತ್ಮಕ ದೃಷ್ಟಿಯಿಂದ ಕೆಲವು ಜಿಲ್ಲೆಗಳನ್ನು ವಿಭಾಗಿಸಲಾಗಿದ್ದು, ಇಲ್ಲಿ ಒಟ್ಟು ೯೨ ಜಿಲ್ಲಾಧ್ಯಕ್ಷರಿದ್ದಾರೆ. ಬಿಜೆಪಿಯ ಅಧಿಕಾರದ ಆಸೆಯನ್ನು ಈಡೇರಿಸಲು ಬಿಹಾರದಲ್ಲಿ ಒಬ್ಬೇ ಒಬ್ಬ ದಲಿತ ಜಿಲ್ಲಾಧ್ಯಕ್ಷರಿಲ್ಲ.

ಚುನಾವಣೆಯ ಮೇಲೆ ಕಣ್ಣು

ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಚತ್ತೀಸಗಢ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ, ಇಲ್ಲಿಯು ಪ್ರಬಲ ಸಮುದಾಯಗಳನ್ನು ಅಪ್ಪಿಕೊಂಡಿದೆ. ಮಧ್ಯಪ್ರದೇಶದಲ್ಲಿ ಬ್ರಾಹ್ಮಣರು, ವ್ಯಾಪಾರಿ ಸಮುದಾಯದವರು ಮತ್ತು ಇತರ ಮೇಲ್ಜಾತಿಗಳ ಶೇ.೭೦ರಷ್ಟು ಮಂದಿ ಜಿಲ್ಲಾಧ್ಯಕ್ಷರಾಗಿದ್ದಾರೆ. ಶೇ.೨೫ರಷ್ಟು ಸ್ಥಾನ ಒಬಿಸಿಗೆ ಮೀಸಲಾಗಿದ್ದು, ೧೩ ವ್ಯಾಪಾರಿ ಸಮುದಾಯದವರು ಹಾಗೂ ೬ ಬ್ರಾಹ್ಮಣ, ಏಕೈಕ ಸಿಖ್‌ ವ್ಯಕ್ತಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ.

ರಾಜಸ್ಥಾನದಲ್ಲಿ ಶೇ.೭೧ರಷ್ಟು ಜಿಲ್ಲಾಧ್ಯಕ್ಷರು ಬ್ರಾಹ್ಮಣ, ವ್ಯಾಪಾರಿ, ಜೈನ್‌, ರಜಪೂತ ಮತ್ತು ಕಾಯಿಸ್ಥಾನ್‌ ಸಮುದಾಯಕ್ಕೆ ಸೇರಿದ್ದು, ಶೇ.೨೩ರಷ್ಟು ಸ್ಥಾನ ಒಬಿಸಿ ಹಾಗೂ ಇಬ್ಬರು ಪರಿಶಿಷ್ಟ ಜಾತಿಯ ಜಿಲ್ಲಾಧ್ಯಕ್ಷರಿದ್ದಾರೆ. ಚತ್ತೀಸಗಢದಲ್ಲಿ ಮಾತ್ರ ಶೇ.೪೫ರಷ್ಟು ಜಿಲ್ಲಾಧ್ಯಕ್ಷ ಸ್ಥಾನವನ್ನು ಒಬಿಸಿ ಸಮುದಾಯಕ್ಕೆ ನೀಡಲಾಗಿದ್ದು, ಶೇ.೪೧ರಷ್ಟು ಜಿಲ್ಲಾಧ್ಯಕ್ಷರು ಮೇಲ್ಜಾತಿಗೆ ಸೇರಿದ್ದಾರೆ. ಈ ಪೈಕಿ ಬ್ರಾಹ್ಮಣರಿಗೆ ಶೇ.೩, ವ್ಯಾಪಾರಿಗಳಿಗೆ ಶೇ. ೨೧ರಷ್ಟು ಸ್ಥಾನ ಬಿಟ್ಟುಕೊಡಲಾಗಿದೆ. ತಲಾ ಶೇ.೭ರಷ್ಟು ಸ್ಥಾನಗಳನ್ನು ಎಸ್‌ಸಿ, ಎಸ್‌ಟಿಗೆ ಮೀಸಲಿಡಲಾಗಿದೆ.

ಗುಜರಾತ್‌, ಮಹಾರಾಷ್ಟ್ರದಲ್ಲೂ ಮೇಲ್ಜಾತಿ ಪ್ರಾಬಲ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ೪೧ ಜಿಲ್ಲಾಧ್ಯಕ್ಷರ ಪೈಕಿ, ೨೧ ಮಂದಿ ಮೇಲ್ಜಾತಿ, ಮೂವರು ಬ್ರಾಹ್ಮಣ, ೬ ಬುಡಕಟ್ಟು, ೮ ಒಬಿಸಿ ಹಾಗೂ ೩ ಎಸ್‌ಸಿ ಸಮುದಾಯಕ್ಕೆ ಸೇರಿದವರಿದ್ದಾರೆ. ಮಹಾರಾಷ್ಟ್ರದ ೪೦ ಜಿಲ್ಲೆಗಳ ಪೈಕಿ, ೧೪ ಮಂದಿ ಮರಾಠ ನಾಯಕರು ಜಿಲ್ಲಾಧ್ಯಕ್ಷರಿದ್ದು, ೧೧ ಬ್ರಾಹ್ಮಣ, ೬ ಮಂದಿ ಇತರ ಮುಂದುವರಿದ ಸಮುದಾಯಗಳಿಗೆ ಸೇರಿದ್ದಾರೆ. ೪ ಒಬಿಸಿ, ೩ ಎಸ್‌ಟಿ, ತಲಾ ಒಬ್ಬ ಮುಸ್ಲಿಂ ಹಾಗೂ ಎಸ್‌ಸಿ ಸಮುದಾಯದ ನಾಯಕನಿಗೆ ಜಿಲ್ಲಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.

ಕರ್ನಾಟಕದಲ್ಲಿ ಲಿಂಗಾಯತರಿಗೆ ಸಿಂಹಪಾಲು

ಕರ್ನಾಟಕದಲ್ಲಿ ಬಿಜೆಪಿ ೩೬ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದು, ಈ ಪೈಕಿ ೨೮ ಮಂದಿ ಮೇಲ್ಜಾತಿಗೆ ಸೇರಿದ್ದಾರೆ. ೩೬ರಲ್ಲಿ ೧೯ ಮಂದಿ ಲಿಂಗಾಯತರೇ ಇದ್ದಾರೆ. ೭ ಒಕ್ಕಲಿಗರು, ೨ ಸಾಮಾನ್ಯ, ಐವರು ಒಬಿಸಿ ಹಾಗೂ ಮೂವರು ಎಸ್‌ಸಿ ಸಮುದಾಯಕ್ಕೆ ಸೇರಿದ ಜಿಲ್ಲಾಧ್ಯಕ್ಷರಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More