ಕಾಂಗ್ರೆಸ್ ವಲಯದಲ್ಲಿ ಗೊಂದಲ ಹುಟ್ಟಿಸಿದ ಕಾಗೋಡು ನಿವೃತ್ತಿ ಹೇಳಿಕೆ

ಜನಪರ ರಾಜಕಾರಣ ಮತ್ತು ಸಮಾಜವಾದಿ ನಿಷ್ಠುರತೆಯ ಕಾಗೋಡು ತಿಮ್ಮಪ್ಪ ಅವರ ರಾಜಕೀಯ ನಿವೃತ್ತಿಯ ಕುರಿತ ದಿಢೀರ್ ಘೋಷಣೆ ಕಾಂಗ್ರೆಸ್ ವಲಯದಲ್ಲಷ್ಟೇ ಅಲ್ಲದೆ, ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲೂ ಸಾಕಷ್ಟು ಗೊಂದಲ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ

ವಿಧಾನಸಭಾ ಮಾಜಿ ಸ್ಪೀಕರ್ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ ಘೋಷಣೆ ಕುರಿತ ಗೊಂದಲ ಸದ್ಯ ಶಿವಮೊಗ್ಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಸಮಾಜವಾದಿ ಹೋರಾಟದ ಮೂಲಕ ರಾಜಕೀಯ ಬದುಕು ಆರಂಭಿಸಿದ ಕಾಗೋಡು ತಿಮ್ಮಪ್ಪ ಅವರು, ಸುಧೀರ್ಘ ಆರು ದಶಕ ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡವರು. ದೇವರಾಜ ಅರಸು, ಗುಂಡೂರಾವ್, ವೀರೇಂದ್ರ ಪಾಟೀಲ್, ಎಸ್ ಬಂಗಾರಪ್ಪ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಸೇರಿ ಹಲವು ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಅರಣ್ಯ, ಸಮಾಜ ಕಲ್ಯಾಣ, ಕಂದಾಯ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಖಾತೆಗಳನ್ನು ನಿರ್ವಹಿಸಿರುವ ಅವರು, ಕಳೆದ ವಿಧಾನಸಭೆಯ ಮೊದಲ ಅವಧಿಯಲ್ಲಿ ಸಭಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

‘ಉಳುವವನೇ ಹೊಲದೊಡೆಯ’ ಘೋಷಣೆಯ ಭೂಸುಧಾರಣಾ ಕಾನೂನು, ವಾಸಿಸುವವನೇ ಮನೆಯೊಡೆಯ ಘೋಷಣೆಯ ಅಕ್ರಮ-ಸಕ್ರಮ ಕಾನೂನು, ಬಗರ್‌ಹುಕುಂ ಜಮೀನು ಮಂಜೂರಾತಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು, ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಹಲವು ರೈತಪರ ಮತ್ತು ಜನಸಾಮಾನ್ಯರ ಪರ ಕಾನೂನು, ಕಾಯ್ದೆಗಳ ರಚನೆ ಮತ್ತು ಜಾರಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ಅವರು, ಜನರ ನಾಯಕನಾಗಿ ಸದಾ ಗುರುತಿಸಿಕೊಂಡವರು. ಹಾಗೇ, ಸ್ಪೀಕರ್ ಆಗಿ ವಿಧಾನಸಭೆಯ ಕಲಾಪಗಳ ಘನತೆಯನ್ನು ಕಾಯ್ದವರು ಕೂಡ.

ಶಾಂತವೇರಿ ಗೋಪಾಲಗೌಡ ಮತ್ತು ರಾಮ ಮನೋಹರ ಲೋಹಿಯಾ ಅವರ ಪ್ರಭಾವ ಮತ್ತು ಪ್ರೇರಣೆಯ ಕಾರಣಕ್ಕೆ ತಮ್ಮದೇ ಆದ ರಾಜಕೀಯ ನಿಲುವು ಮತ್ತು ಸಿದ್ಧಾಂತವನ್ನು ಹೊಂದಿದ್ದ ಅವರು, ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನಸಾಮಾನ್ಯರ ಒಡನಾಟದಲ್ಲಿಯೇ ರಾಜಕಾರಣದ ಹೆಚ್ಚುಗಾರಿಕೆಯನ್ನು ಕಂಡವರು. ನಿಷ್ಠುರತೆ, ಸರಿಪಡಿಸಲಾಗದ ವ್ಯವಸ್ಥೆಯ ದೋಷಗಳ ಕುರಿತ ಹತಾಶೆ ಮತ್ತು ಆಕ್ರೋಶದ ಮಾತುಗಳು ಕೂಡ ಅವರನ್ನು ವಿಶಿಷ್ಟ ನಾಯಕನನ್ನಾಗಿ ಗುರುತಿಸುವಂತೆ ಮಾಡಿದ್ದವು. ರಾಜಕಾರಣದ ಜನಪ್ರಿಯ ವರಸೆಗಳನ್ನು ಮೀರಿಯೂ ಅವರು ಜನರನ್ನು ರಂಜಿಸದೆ, ಮೆಚ್ಚಿಸುವ ವರಸೆಗಳನ್ನು ಪ್ರದರ್ಶಿಸದೆಯೂ ಜನರ ವಿಶ್ವಾಸ ಗಳಿಸಿದ್ದವರು. ಹಾಗಾಗಿಯೇ ಸಾಗರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾದರು.

ಆದರೆ, ಇದೀಗ ಅವರ ರಾಜಕೀಯ ನಿವೃತ್ತಿಯ ಕುರಿತ ದಿಢೀರ್ ಘೋಷಣೆ ಕಾಂಗ್ರೆಸ್ ಪಕ್ಷದಲ್ಲಷ್ಟೇ ಅಲ್ಲದೆ, ಸಾಗರ ವಿಧಾನಸಭಾ ಕ್ಷೇತ್ರ ಮತ್ತು ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲೂ ಸಾಕಷ್ಟು ಗೊಂದಲ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೊದಲನೆಯದಾಗಿ, ಅವರ ನಿವೃತ್ತಿಯ ಹೇಳಿಕೆಯ ಬಗ್ಗೆಯೇ ವಿವಿಧ ಮಾಧ್ಯಮಗಳಲ್ಲಿ ಭಿನ್ನ ವರದಿಗಳಿವೆ. ಕೆಲವು ಸುದ್ದಿವಾಹಿನಿಗಳಲ್ಲಿ ‘ರಾಜಕೀಯ ನಿವೃತ್ತಿ’ ಎಂದು ವರದಿಯಾಗಿದ್ದರೆ, ಕೆಲವು ಮಾಧ್ಯಮಗಳಲ್ಲಿ ‘ಚುನಾವಣಾ ರಾಜಕಾರಣದಿಂದ ದೂರ ಸರಿಯುತ್ತೇನೆ’ ಎಂದಿರುವುದಾಗಿ ವರದಿಯಾಗಿದೆ. ಹಾಗಾಗಿ, ಬೆಂಗಳೂರಿನಲ್ಲಿ ಮಂಗಳವಾರ ಅವರು ಆಡಿರುವ ನಿಜವಾದ ಮಾತುಗಳೇನಾಗಿದ್ದವು ಮತ್ತು ಆ ಮಾತುಗಳ ಹಿಂದಿನ ಅರ್ಥವೇನಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಮತ್ತು ಸಾಗರ ಕ್ಷೇತ್ರ ಕಾಂಗ್ರೆಸ್ ನಾಯಕರ ನಡುವೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಈಗಾಗಲೇ ೮೬ ವರ್ಷ ವಯೋಮಾನದ ಅವರು, ಕಳೆದ ೨೦೧೩ರ ವಿಧಾನಸಭಾ ಚುನಾವಣೆಯಲ್ಲಿಯೇ, ಆ ಚುನಾವಣೆಯೇ ತಮ್ಮ ಕೊನೆಯ ಚುನಾವಣೆ ಎಂದೂ, ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದರು. ಅವರ ಆ ಹೇಳಿಕೆ ಮತ್ತು ವಯೋಮಾನದ ಹಿನ್ನೆಲೆಯಲ್ಲಿ ಅವರ ರಾಜಕೀಯ ನಿವೃತ್ತಿಯ ಹೇಳಿಕೆ ಅಚ್ಚರಿಯ ಬೆಳವಣಿಗೆ ಏನಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ವ್ಯಾಪಕ ಜನಪರ ಕಾರ್ಯಗಳ ಹೊರತಾಗಿಯೂ ಬಿಜೆಪಿಯ ಹರತಾಳು ಹಾಲಪ್ಪ ವಿರುದ್ಧ ಸೋಲು ಕಂಡ ಬಳಿಕ ಅವರು, ಎಲ್ಲರಂತೆ ಜನ ತಮ್ಮನ್ನು ತಿರಸ್ಕರಿಸಿದರು ಎಂದು ಮುನಿಸಿಕೊಂಡು ಮನೆಯಲ್ಲಿ ಕೂತವರಲ್ಲ. ಚುನಾವಣೆ ಫಲಿತಾಂಶ ಬಂದ ಒಂದೇ ವಾರದಲ್ಲಿ ಮತ್ತೆ ಎಂದಿನಂತೆ ಕ್ಷೇತ್ರದ ಪ್ರವಾಸ ಆರಂಭಿಸಿದ್ದರು. ಸರಣಿ ಸಭೆಗಳ ಮೂಲಕ ತಮ್ಮ ಎಂದಿನ ಕಾಳಜಿಯ ಭೂಮಿ ಹಕ್ಕು, ನಾಗರಿಕ ಸೌಲಭ್ಯ, ಮೂಲಸೌಕರ್ಯಗಳ ಕುರಿತ ಜನರ ಕುಂದುಕೊರತೆ ಆಲಿಸಲು ಆರಂಭಿಸಿದ್ದರು. ಕಳೆದ ಕೆಲವು ದಿನಗಳ ನಿರಂತರ ಮಳೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಹಾಲಿ ಶಾಸಕರಿಗಿಂತ ಮುಂಚೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈಗ ಜನರ ನಡುವೆಯೇ ತಮ್ಮ ನೆಮ್ಮದಿ ಕಾಣುತ್ತಿರುವ ನಾಯಕ ಹೀಗೆ ದಿಢೀರ್ ನಿವೃತ್ತಿಯ ಮಾತುಗಳನ್ನು ಆಡಿದ್ದು ಸಹಜವಾಗೇ ಹಲವರ ಹುಬ್ಬೇರಿಸಿದೆ. ಸ್ವತಃ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ ನಾ ಶ್ರೀನಿವಾಸ್ ಕೂಡ ಮಾಧ್ಯಮದವರೊಂದಿಗೆ ಮಾತನಾಡುತ್ತ, ಬುಧವಾರ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ನಾಯಕರ ಘೋಷಣೆ ಕುರಿತ ಈ ವರದಿಗಳು ತಮಗೂ ಆಘಾತ ತಂದಿವೆ ಎಂದು ಹೇಳಿರುವ ಅವರು, ಕಾಗೋಡು ಅವರು ಜನರಿಗೆ ಮಾತ್ರವಲ್ಲ, ರಾಜ್ಯ ಮತ್ತು ಜಿಲ್ಲೆಯಲ್ಲಿ ಪಕ್ಷಕ್ಕೂ ಅನಿವಾರ್ಯ ಎಂದಿದ್ದಾರೆ.

ಆದರೆ, ಒಂದು ವೇಳೆ ಅವರು ರಾಜಕೀಯ ನಿವೃತ್ತಿಯನ್ನೇ ಘೋಷಿಸಿದ್ದರೆ, ಅದೂ ಹೀಗೆ ದಿಢೀರ್ ಘೋಷ‍ಣೆ ಮಾಡಿದ್ದರೆ ಅದರಿಂದಾಗಿ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಪಕ್ಷದ ಮೇಲೆ ಬೀರುವ ಪರಿಣಾಮವೇನು? ಜಿಲ್ಲಾ ಮಟ್ಟದ ನಾಯಕರು ಮತ್ತು ಕಾರ್ಯಕರ್ತರ ಮೇಲಿನ ಪರಿಣಾಮವೇನು ಎಂಬ ಬಗ್ಗೆಗೂ ಚರ್ಚೆಗಳು ಆರಂಭವಾಗಿವೆ. ಅದರಲ್ಲೂ, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ನಿವೃತ್ತಿಯ ಬಳಿಕ ಪಕ್ಷವನ್ನು ಮುನ್ನಡೆಸುವವರಾರು, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸ್ಥಾನಮಾನ, ಹೊಣೆಗಾರಿಕೆಗಳೇನು, ತಮ್ಮ ನಂತರ ಪಕ್ಷದಲ್ಲಿ ತಮ್ಮ ಸ್ಥಾನ ತುಂಬುವವರಾರು ಎಂಬ ಬಗ್ಗೆ ಯಾವ ಚರ್ಚೆಯನ್ನೂ ನಡೆಸದೆ, ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರಿಗೆ ತಮ್ಮ ಈ ನಿಲುವನ್ನು ಮತ್ತು ಭವಿಷ್ಯದ ಪಕ್ಷ ಸಂಘಟನೆಯ ಹೊಣೆಗಾರಿಕೆಯನ್ನು ಗುರುತಿಸದೆ ನಿವೃತ್ತಿಯ ಘೋಷಣೆ ಮಾಡಿರುವುದು ಪಕ್ಷದವರ ಎದೆಗುಂದಿಸುವುದಿಲ್ಲವೆ? ಅಂತಿಮವಾಗಿ ಅದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ? ಎಂಬ ಪ್ರಶ್ನೆಗಳು ಈಗ ಕ್ಷೇತ್ರದಲ್ಲಿ ಗಟ್ಟಿಯಾಗಿ ಕೇಳಿಬರತೊಡಗಿವೆ.

ಇದನ್ನೂ ಓದಿ : ಹಗೇವು | ಕಾಗೋಡು ತಿಮ್ಮಪ್ಪನವರ ಸೋಲು ನಿಜವಾಗಿಯೂ ಅವರ ಸೋಲೇ?

ಜಿಲ್ಲಾ ಮಟ್ಟದಲ್ಲಿಯೂ ಸದ್ಯ ಕಾಂಗ್ರೆಸ್ಸಿನಲ್ಲಿ ಎಲ್ಲರ ವಿಶ್ವಾಸ ಗಳಿಸುವಂತಹ ಪ್ರಭಾವಿ ನಾಯಕತ್ವದ ಕೊರತೆ ಇದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕೂಡ ಚುನಾವಣಾ ಸೋಲಿನ ಬಳಿಕ ಮತ್ತೆ ವಕೀಲಿ ವೃತ್ತಿಗೆ ಮರಳಿದ್ದಾರೆ. ರಾಜಕಾರಣದಲ್ಲಿ ಸಕ್ರಿಯವಾಗಿದ್ದಾಗಲೂ ಅವರು, ಜಿಲ್ಲಾ ಮಟ್ಟದಲ್ಲಿ ಪಕ್ಷದ ಚಟುವಟಿಕೆಗಳಿಗಿಂತ ಹೆಚ್ಚಾಗಿ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿ ರಾಜಕಾರಣ ಮಾಡಿಕೊಂಡಿದ್ದೇ ಹೆಚ್ಚು. ಇನ್ನು, ಎರಡನೇ ಹಂತದ ನಾಯಕತ್ವದಲ್ಲೂ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಭಾವ ಹೊಂದಿರುವ ಮುಖಗಳು ಇಲ್ಲ. ಅದೇ ಕಾರಣಕ್ಕಾಗಿಯೇ ಮುಂದಿನ ಲೋಕಸಭಾ ಚುನಾವಣೆಗೆ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಕಣಕ್ಕಿಳಿದು ಜಯಿಸುತ್ತೇವೆ ಎಂದು ವಿಶ್ವಾಸದಿಂದ ಹೇಳಿಕೊಳ್ಳುವಂತಹ ಅಭ್ಯರ್ಥಿಗಳಿಗೇ ಕಾಂಗ್ರೆಸ್ ಪಾಳೆಯದಲ್ಲಿ ಬರ ಇದೆ.

ಈ ಹಿನ್ನೆಲೆಯಲ್ಲಿ, ಚುನಾವಣಾ ರಾಜಕಾರಣ, ಪಕ್ಷ ಸಂಘಟನೆಯ ವಿಷಯದಲ್ಲಿ ಕನಿಷ್ಠ ಲೋಕಸಭಾ ಚುನಾವಣೆವರೆಗಾದರೂ ಪಕ್ಷಕ್ಕೆ ಕಾಗೋಡು ಅವರ ಸಾರಥ್ಯದ ಅನಿವಾರ್ಯತೆ ಇದೆ. ಆದರೆ, ಅವರು ಹೀಗೆ ದಿಢೀರ್ ನಿವೃತ್ತಿ ಘೋಷಿಸಿರುವುದು ಆತಂಕ ತಂದಿದೆ ಎಂಬುದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮಾತಿನ ಮರ್ಮ. ಅದೇ ಆತಂಕ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲೂ ಇದೆ. ಹಾಗಾಗಿ, ಕಾಂಗ್ರೆಸ್ ಪಾಲಿಗಂತೂ ಕಾಗೋಡು ಅವರ ರಾಜಕೀಯ ನಿವೃತ್ತಿಯ ಈ ಘೋಷಣೆ ಸಾಕಷ್ಟು ಗಲಿಬಿಲಿಗೆ ಕಾರಣವಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More