ತಮ್ಮದು ಸ್ವಾಯತ್ತ ಪಕ್ಷ ಎಂದ ಪಂಜಾಬ್ ಆಪ್ ಬಂಡಾಯ ಶಾಸಕರು; ಮುಂದುವರಿದ ಬಿಕ್ಕಟ್ಟು

ಪಂಜಾಬ್ ನ ಆಮ್ ಆದ್ಮಿ ಶಾಸಕ ಸುಖ್ಪಾಲ್ ಸಿಂಗ್ ಖೈರಾ ನೇತೃತ್ವದಲ್ಲಿ ಏಳು ಶಾಸಕರು ಬಂಡಾಯ ಸಾರುವ ಮೂಲಕ ರಾಜ್ಯ ಆಪ್ ಘಟಕವು ಸ್ವಾಯತ್ತ ಪಕ್ಷವಾಗಿದ್ದು, ದೆಹಲಿಯ ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ ಎಂದು ಘೋಷಿಸಿಸಿಕೊಂಡಿದ್ದಾರೆ. ಇದರಿಂದ ಆಪ್ ಸಂಕಷ್ಟಕ್ಕೆ ಒಳಗಾಗಿದೆ

ಪಂಜಾಬ್‌ನ ಆಮ್ ಆದ್ಮಿ ಶಾಸಕ ಸುಖ್ಪಾಲ್ ಸಿಂಗ್ ಖೈರಾ ನೇತೃತ್ವದಲ್ಲಿ ಏಳು ಶಾಸಕರು ಬಂಡಾಯ ಸಾರುವ ಮೂಲಕ ರಾಜ್ಯ ಆಪ್ ಘಟಕವು ಸ್ವಾಯತ್ತ ಪಕ್ಷವಾಗಿದ್ದು, ದೆಹಲಿಯ ಯಾವುದೇ ನಿಯಂತ್ರಣ ಹೊಂದಿರುವುದಿಲ್ಲ ಎಂದು ಘೋಷಿಸಿಸಿಕೊಂಡಿದ್ದಾರೆ. ಈ ಬೆಳವಣಿಗೆ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದ್ದು, ಆಪ್ ಒಳಗಿನ ಬಿರುಕು ಮತ್ತಷ್ಟು ಬಿಗಡಾಯಿಸಿದೆ.

ಚಂಡೀಗಢದ ಬಟಿಂಡಾದಲ್ಲಿ ಶಾಸಕ ಖೈರಾ ಅವರು, ಆಪ್ ಪಕ್ಷದ ಕಾರ್ಯಕರ್ತರ ಹಾಗೂ ಬೆಂಬಲಿಗರ ಸಭೆ ಆಯೋಜಿಸಿ ಮಾತನಾಡುತ್ತ, “ಪಂಜಾಬ್‌ನ ಆಪ್‌ ಘಟಕ ದೆಹಲಿ ಘಟಕವನ್ನು ವಿಸರ್ಜಿಸಿ ಹೊರಬಂದಿದೆ. ಹೊಸ ರಚನೆಯೊಂದಿಗೆ ರಾಜ್ಯದಲ್ಲಿ ಪಕ್ಷವನ್ನು ಕಟ್ಟಲಾಗುವುದು. ಆಪ್ ನ ಈ ನೂತನ ರಾಜ್ಯ ಘಟಕವು ಸಮಾನಮನಸ್ಕ ಪಕ್ಷಗಳನ್ನು ಒಳಗೊಂಡು ರಾಜ್ಯದ ರಾಜಕೀಯದಲ್ಲಿ ತೃತೀಯ ಶಕ್ತಿಯಾಗಿ ರೂಪುಗೊಳ್ಳಲಿದೆ,” ಎಂದಿದ್ದಾರೆ.

ಆಪ್ ಕೇಂದ್ರ ನಾಯಕತ್ವವು ಜು.೨೬ರಂದು ಸುಖ್ಪಾಲ್ ಸಿಂಗ್ ಖೈರಾ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆರವುಗೊಳಿಸಿ, ಆ ಸ್ಥಾನಕ್ಕೆ ಶಾಸಕ ಹರ್ಪಾಲ್ ಸಿಂಗ್ ಅವರನ್ನು ನೇಮಿಸಿತ್ತು. ಈ ನಡೆ ಸಹಜವಾಗಿಯೇ ಖೈರಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟಕ್ಕೇ ಸುಮ್ಮನಾಗದ ಖೈರಾ, ಆಪ್ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಆರೋಪಿಸಿ ತನ್ನ ಏಳು ಬೆಂಬಲಿಗ ಶಾಸಕರೊಂದಿಗೆ ಪ್ರತಿಭಟಿಸಿ ಪಕ್ಷದ ಕಾರ್ಯಕರ್ತರ ಹಾಗೂ ಬೆಂಬಲಿಗರ ಸಭೆ ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ನಲ್ಲಿ ಒಟ್ಟು ೧೧೭ ವಿಧಾನಸಭಾ ಕ್ಷೇತ್ರಗಳಿದ್ದು, ೭೭ ಕ್ಷೇತ್ರ ಗೆದ್ದಿರುವ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿದೆ. ಆಪ್ ೨೦ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷದ ಸ್ಥಾನದಲ್ಲಿದೆ. ಈಗ ಆಪ್ ಏಳು ಶಾಸಕರು ಬಂಡಾಯ ಸಾರಿದ್ದು, ಪಂಜಾಬ್‌ನಲ್ಲಿ ಆಪ್‌ ಒಡೆದ ಮನೆಯಂತಾಗಿದೆ. ಈ ಬಿಕ್ಕಟ್ಟು ಹೀಗೆ ಮುಂದುವರಿದರೆ ವಿರೋಧ ಪಕ್ಷದ ಸ್ಥಾನಮಾನವನ್ನೂ ಕೂಡ ಆಪ್ ಕಳೆದುಕೊಳ್ಳುವ ಆತಂಕದಲ್ಲಿದೆ.

ಈ ಬೆಳವಣಿಗೆ ಬೆನ್ನಲ್ಲೇ ಪಕ್ಷದ ಕೇಂದ್ರ ನಾಯಕತ್ವ ಖೈರಾ ಕರೆದ ಸಮಾವೇಶವನ್ನು ಪಕ್ಷವಿರೋಧಿ ಚಟುವಟಿಕೆ ಎಂದು ಆರೋಪಿಸಿದೆ. ಈ ಮಧ್ಯೆ, ಖೈರಾ ಅವರು ಕರೆದ ಸಭೆಗೆ ಸಾವಿರಾರು ಜನರು ಪಾಲ್ಗೊಂಡಿದ್ದಾರೆ. ವಿಪರ್ಯಾಸವೆಂದರೆ, ಈ ಸಭೆಗೆ ಖೈರಾ ಗುಂಪಿನೊಂದಿಗೆ ಗುರುತಿಸಿಕೊಂಡ ಜೈಕಿಶನ್ ರೋರಿ ಹಾಗೂ ರೂಪಿಂದರ್ ಕೌರ್ ರೂಬಿ ಶಾಸಕರು ಗೈರಾಗಿದ್ದಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಎಲ್‌ಜಿ- ಆಪ್ ಸರ್ಕಾರದ ಸಂಘರ್ಷಕ್ಕೆ ದೆಹಲಿ ಜನತೆ ಬಲಿ?

ಖೈರಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ನೂತನ ನಾಯಕತ್ವ ನೇಮಕವನ್ನು ವಿರೋಧಿಸಿದೆ. ಬರುವ ವಾರದೊಳಗೆ ಚಂಡೀಗಢದಲ್ಲಿ ಪಂಜಾಬ್ ಆಪ್ ಶಾಸಕರ ಸಭೆ ಕರೆದು ಹೊಸ ನಾಯಕತ್ವನ್ನು ಘೋಸಿಸುವ ಕುರಿತು ಈ ಸಭೆ ನಿರ್ಧರಿಸಿದೆ. ಹಾಗೆಯೇ, ಆ ಸಭೆಗೆ ಗೈರಾದ ಇಬ್ಬರು ಶಾಸಕರು ತಮ್ಮ ಕ್ಷೇತ್ರಗಳಿಗೆ ಪ್ರವೇಶಿಸದಂತೆ ತಡೆಯಿರಿ ಎಂದು ಕರೆ ನೀಡಲಾಗಿದ್ದು, ಆ.12ರಿಂದ ರಾಜ್ಯ ಹೊಸ ಘಟಕವು ಕಾರ್ಯಾರಂಭ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ, ಆಪ್ ಹೊಸ ಘಟಕವು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾಯತ್ತ ಪಕ್ಷವಾಗಿದ್ದು, ಇದಕ್ಕೆ ಅನುಗುಣವಾಗಿ ನೀತಿ-ನಿಯಮ ರೂಪಿಸುವ ಕುರಿತು ಚರ್ಚಿಸಲಾಗಿದೆ.

ಬಂಡಾಯದ ಬೆಳವಣಿಗೆ ಬಗ್ಗೆ ಆಪ್ ಪಕ್ಷದ ನಾಯಕ ಹಾಗೂ ಶಾಸಕ ಹರ್ಪಾಲ್ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ರಾಜ್ಯ ಹಾಗೂ ಕೇಂದ್ರ ನಾಯಕತ್ವವನ್ನು ಸಮಾಲೋಚಿಸದೆಯೇ ಆಪ್ ಪಕ್ಷದಡಿ ಸಭೆ ಕರೆದಿರುವುದು ಕಾನೂನುಬಾಹಿರ. ಭವಿಷ್ಯದಲ್ಲಿ ಇಂಥ ವಿರೋಧಾಭಾಸ ಚಟುವಟಿಕೆಗಳು ನಡೆಯದಂತೆ ನಾಯಕರು ನೋಡಿಕೊಳ್ಳಬೇಕು,” ಎಂದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More