ನವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದ ಕಾಂಗ್ರೆಸ್‌

ನವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದ್ದು, ಜಯರಾಂ ರಮೇಶ್‌ ಹಾಗೂ ತಂತ್ರಜ್ಞ ದೀಪಕ್‌ ಅಮಿನ್‌ ನೇತೃತ್ವದಲ್ಲಿ ತಂಡವೊಂದು ರಚನೆಯಾಗಿದೆ. ಪ್ರಿಯಾಂಕಾ ಗಾಂಧಿ ಈ ತಂಡದ ಮೇಲ್ವಿಚಾರಣೆ ವಹಿಸಲಿದ್ದಾರೆ ಎಂದು ‘ದಿ ಪ್ರಿಂಟ್‌’ ವರದಿ ಮಾಡಿದೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ನವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷವು ಕಾರ್ಯತಂತ್ರ ರೂಪಿಸಿದ್ದು, ಹಿರಿಯ ನಾಯಕ ಜಯರಾಂ ರಮೇಶ್‌ ಹಾಗೂ ತಂತ್ರಜ್ಞ ದೀಪಕ್‌ ಅಮಿನ್‌ ಅವರ ನೇತೃತ್ವದಲ್ಲಿ ತಂಡವೊಂದು ರಚನೆಯಾಗಿದೆ. ಪ್ರಿಯಾಂಕಾ ಗಾಂಧಿ ಈ ತಂಡದ ಮೇಲ್ವಿಚಾರಣೆ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ನವ ಮತದಾರರನ್ನು ಸೆಳೆಯುವಲ್ಲಿ ಸಫಲವಾಗಿತ್ತು. ಮೋದಿಯವರ ಯಶಸ್ಸಿನಲ್ಲಿ ಯುವಪಡೆಯು ಪ್ರಮುಖ ಪಾತ್ರ ವಹಿಸಿದ್ದು ಮೇಲ್ನೋಟಕ್ಕೆ ಕಂಡುಬಂದಿತ್ತು.

2019ರಲ್ಲಿ ನಡೆಯಲಿರುವ ಸಂಸತ್‌ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ಕಾತರವಾಗಿರುವ ನವ ಪೀಳಿಗೆ ಮಹತ್ವದ ಪಾತ್ರ ವಹಿಸಲಿದೆ ಎಂಬುದನ್ನು ಕಾಂಗ್ರೆಸ್‌ ಅರಿತಂತಿದೆ. ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ಪಕ್ಷವು ಯುವ ಮತದಾರರನ್ನು ಕೇಂದ್ರಿಕೃತವಾಗಿಸಿ ಪ್ರಚಾರ ನಡೆಸಲು ಮುಂದಾಗಲಿದೆ ಎಂದು ತಿಳಿದುಬಂದಿದೆ. 15 ಕೋಟಿ ನವ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಆಂತರಿಕ ವರದಿಯಲ್ಲಿ ಅಂದಾಜಿಸಲಾಗಿದೆ ಎನ್ನಲಾಗಿದೆ. ಈ ಯುವ ಮತದಾರರು 18ರಿಂದ 23 ವರ್ಷದೊಳಗಿನವರಾಗಿದ್ದು, 2014ರ ಚುನಾವಣೆಯ ನಂತರ ಮತದಾನದ ಹಕ್ಕು ಪಡೆದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಮತದಾರರು ನಿರ್ಣಾಯಕ ಪಾತ್ರ ವಹಿಸಬಹುದೆಂದು ನಿರೀಕ್ಷಿಸಲಾಗಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 2014ರಲ್ಲಿ, ಅಂದಾಜು 11.72 ಕೋಟಿ ನವ ಮತದಾರರು ಮೊದಲ ಬಾರಿಗೆ ಮತದಾನದ ಅರ್ಹತೆ ಹೊಂದಿದ್ದರು. ಇವರಲ್ಲಿ ಬಿಜೆಪಿಗೆ ಎಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲವಾದರೂ, ಬಿಜೆಪಿಗೆ ಅಧಿಕ ಮಂದಿ ಮತ ಚಲಾಯಿಸಿದ್ದರು ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಈ ನವ ಮತದಾರರ ಸಹಾಯದಿಂದಲೇ ಬಿಜೆಪಿಯು ಕೇಂದ್ರದಲ್ಲಿ ನಿರಾಯಾಸವಾಗಿ ಅಧಿಕಾರ ಗಿಟ್ಟಿಸಿಕೊಳ್ಳಲು ಸಾಧ್ಯವಾಯಿತೆಂದು ನಂಬಲಾಗಿತ್ತು.

ಹೊಸದಾಗಿ ಮತ ಚಲಾಯಿಸಲು ಅರ್ಹರಾಗಿರುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷವು ಪ್ರತಿ ರಾಜ್ಯದಲ್ಲಿ 50 ಯುವಕರನ್ನು ಗುರುತಿಸಿ, ಅವರ ನಿರೀಕ್ಷೆಗಳು ಹಾಗೂ ಪಕ್ಷದ ಬಗ್ಗೆ ಅವರಿಗಿರುವ ಅನಿಸಿಕೆಗಳನ್ನು ಕ್ರೋಢೀಕರಿಸಲು ಮುಂದಾಗಿದೆ. ಆ ಮೂಲಕ, ನವ ಮತದಾರರ ಆಶೋತ್ತರಗಳನ್ನು ಅರಿಯುವ ನಿಟ್ಟಿನಲ್ಲಿ ಹೆಜ್ಜೆ ಇಡಲಿದೆ ಎಂಬುದು ತಿಳಿದುಬಂದಿದೆ.

ನವ ಮತದಾರರನ್ನು ಸೆಳೆಯಲು ಸಾಮಾಜಿಕ ಜಾಲತಾಣ ಹಾಗೂ ತಂತ್ರಜ್ಞಾನದ ಮೊರೆಹೋಗಿರುವ ಕಾಂಗ್ರೆಸ್‌ ಪಕ್ಷವು ದೀಪಕ್‌ ಅಮಿನ್‌ ಅವರ ಮಾರ್ಗದರ್ಶನದಲ್ಲಿ ಕಾರ್ಯತಂತ್ರ ರೂಪಿಸಲಿದೆ ಎಂದು ತಿಳಿದುಬಂದಿದೆ. ದೀಪಕ್‌ ಅಮಿನ್‌ ಅವರು ಈ ಹಿಂದೆ ಭಾರತೀಯ ಸ್ಟೇಟ್‌ ಬ್ಯಾಂಕಿನ‌ ಅಪಾಯ ನಿರ್ವಹಣಾ ಸಮಿತಿ ಮತ್ತು ಐಟಿ ಸ್ಟ್ರಾಟಜಿ ಸಮಿತಿಯ ಮೇಲ್ವಿಚಾರಣೆ ವಹಿಸಿಕೊಂಡಿದ್ದರು.

ನವ ಮತದಾರರನ್ನು ಸೆಳೆಯವ ನಿಟ್ಟಿನಲ್ಲಿ ರೂಪಿಸಲಾಗಿರುವ ಯೋಜನೆಯ ಸಿದ್ಧತೆಗೆ 100 ದಿನಗಳ ಕಾಲಾವಧಿಯನ್ನು ಮೀಸಲಿರಿಸಿದ್ದು, ಇದರ ಶಕ್ತಿಯನ್ನು ಮುಂದಿನ ಚುನಾವಣೆ ವೇಳೆ ಬಳಸಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ. 300 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ‌ ಪಕ್ಷವು, ಈ ಕ್ಷೇತ್ರಗಳಲ್ಲಿ ಜಯ ಸಾಧಿಸಲು ನವ ಮತದಾರರನ್ನು ಸೆಳೆಯುವುದು ಹಾಗೂ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.

ಮೂಲಗಳ ಪ್ರಕಾರ, ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಯೋಜನೆ ರೂಪಿಸಲು ವಿವಿಧ ವಿಭಾಗಗಳ ಮೇಲ್ವಿಚಾರಣೆಯನ್ನು ಪ್ರಿಯಾಂಕಾ ಗಾಂಧಿ ವಹಿಸಿಕೊಂಡಿದ್ದಾರೆ. ಈ ವಿಚಾರವಾಗಿ ಕೆಲ ವಾರಗಳ ಹಿಂದೆ ಪಕ್ಷದ ಹಿರಿಯ ನಾಯಕರು, ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ತಂತ್ರಜ್ಞರೊಂದಿಗೆ ಹಲವು ಸುತ್ತಿನ ಮಾತುಕತೆಯನ್ನು ಪ್ರಿಯಾಂಕಾ ಗಾಂಧಿ ಅವರು ನಡೆಸಿದ್ದಾರೆಂದು ತಿಳಿದುಬಂದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ 300 ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಪಕ್ಷವು ತನ್ನ ಗಮನ ಕೇಂದ್ರೀಕರಿಸಬೇಕೆಂದು ಕಳೆದ ವಾರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಾಂಗ್ರೆಸ್‌ ಪ್ರಾಬಲ್ಯ ಹೊಂದಿರದ ಪ್ರದೇಶಗಳಲ್ಲಿ ಸ್ಥಳೀಯ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಮೈತ್ರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಲಾಗಿದೆ.

ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಕಾಂಗ್ರೆಸ್‌ ಎದುರಿಸಬೇಕಾಗಿರುವ ಸೈದ್ಧಾಂತಿಕ ಸವಾಲುಗಳೇನು?

ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಪಕ್ಷ ‌ ಘೋಷಣೆ ಮಾಡದಿದ್ದರೂ, ಎಐಸಿಸಿ ಅಧ್ಯಕ್ಷರೇ ಪ್ರಚಾರದ ಕೇಂದ್ರಬಿಂದು ಆಗಲಿದ್ದಾರೆ. ಈ ಮೂಲಕ, ಪ್ರಧಾನಿ ಮೋದಿ ಅವರಿಗೆ ರಾಹುಲ್‌ ಗಾಂಧಿ ಅವರು ನೇರ ಸ್ಪರ್ಧಿ ಎಂಬುದನ್ನು ಕಾಂಗ್ರೆಸ್‌ ಪಕ್ಷವು ಬಿಂಬಿಸಲಿದೆ ಎನ್ನಲಾಗುತ್ತಿದೆ.

ಸಾರ್ವತ್ರಿಕ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌ ಪಕ್ಷವು, ನವ ಮತದಾರರನ್ನು ಸೆಳೆಯವ ಹಾಗೂ ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ಮೂಲಕ ನರೇಂದ್ರ ಮೋದಿ ಅವರ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕುವ ಪ್ರಯತ್ನದಲ್ಲಿ ತೊಡಗಿದೆ. ಕಾಂಗ್ರೆಸ್‌ ಪಕ್ಷದ ಈ ಪ್ರಯತ್ನಗಳಿಗೆ ಮತದಾರರು ಯಾವ ರೀತಿಯಲ್ಲಿ ಪ್ರತಿಕ್ರಿಸಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More