ಬಿಜೆಪಿಯ ಹಿಂದೂ ಓಲೈಕೆ ರಾಜಕಾರಣಕ್ಕೆ ತಿರುಗುಬಾಣ ಆಗಲಿದೆಯೇ ಬಂಗಾಳಿ ಅಸ್ಮಿತೆ?

ಮಮತಾ ಪ್ರತಿಪಾದಿಸುತ್ತಿರುವ ‘ಬಂಗಾಳಿ ಅಸ್ಮಿತೆ’ ಹಾಗೂ ಬಿಜೆಪಿಯ ‘ಹಿಂದೂ ಓಲೈಕೆ’ಯ ರಾಜಕಾರಣ ಪ್ರಮುಖ ರಾಜಕೀಯ ಚರ್ಚೆಗಳಾಗಿ ಮಾರ್ಪಟ್ಟಿವೆ ಎಂಬುದಂತೂ ಸತ್ಯ. ಈ ಎರಡು ವಿಚಾರಗಳಲ್ಲಿ ಪಶ್ಚಿಮ ಬಂಗಾಳದ ಜನ ಯಾವುದನ್ನು ಅಪ್ಪಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಚಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದ್ದೇಕೆ ಎಂಬ ಪ್ರಶ್ನೆಯೊಂದು ಮುನ್ನೆಲೆಗೆ ಬಂದಿದೆ. ಎನ್‌ಆರ್‌ಸಿ ಸಂಘರ್ಷವನ್ನು ಪಶ್ಚಿಮ ಬಂಗಾಳ ಮಾತ್ರವಲ್ಲದೆ, ರಾಷ್ಟ್ರ ರಾಜಧಾನಿ ನವದೆಹಲಿಗೂ ಸ್ಥಳಾಂತರಿಸುವ ಮೂಲಕ ಮಮತಾ ಅವರು ಪ್ರಚಲಿತ ರಾಜಕೀಯ ವಿದ್ಯಮಾನಗಳ ಕೇಂದ್ರಬಿಂದುವಾಗಿದ್ದಾರೆ. ಕಾಂಗ್ರೆ‌ಸ್‌ ನಾಯಕಿ‌ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್‌‌ ಗಾಂಧಿ, ಮುಖಂಡರಾದ ಗುಲಾಂ ನಬಿ ಆಜಾದ್‌, ಅಹ್ಮದ್‌ ಪಟೇಲ್,‌ ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ, ಬಿಜೆಪಿ ಹಿರಿಯ ನಾಯಕ ಎಲ್‌ ಕೆ ಆಡ್ವಾಣಿ ಸೇರಿದಂತೆ ಆರ್‌ಜೆಡಿ, ಎಸ್‌ಪಿ, ಟಿಡಿಪಿ ಹಾಗೂ ಎಐಎಡಿಎಂಕೆ ನಾಯಕರನ್ನು ನವದೆಹಲಿಯಲ್ಲಿ ಬುಧವಾರ ಭೇಟಿ ಮಾಡಿರುವ ಮಮತಾ, ಎನ್‌ಆರ್‌ಸಿ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಎನ್‌ಆರ್‌ಸಿ ವಿಚಾರ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲಕಲ್ಲೊಲ ಸೃಷ್ಟಿಸಿದ ಸಂದರ್ಭದಲ್ಲೇ, ಗುರುವಾರ ಟಿಎಂಸಿಯ ಆರು ಮಂದಿ ಸಂಸತ್‌ ಸದಸ್ಯರು ಹಾಗೂ ಇಬ್ಬರು ಶಾಸಕರನ್ನು ಅಸ್ಸಾಂನ ಸಿಲ್‌ಚಾರ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಹಲ್ಲೆ ಮಾಡಿದ ವರದಿಗಳಾಗಿವೆ. ಎನ್‌ಆರ್‌ಸಿ ಕರಡು ವಿರೋಧಿಸಿ ಅಸ್ಸಾಂನಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಹಾಜರಾಗಲು ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ. ಅಸ್ಸಾಂ ಸರ್ಕಾರದ ಕ್ರಮವನ್ನು ಖಂಡಿಸಿರುವ ಟಿಎಂಸಿ ನಾಯಕರು, ಘಟನೆಯನ್ನು ‘ಸೂಪರ್‌ ಎಮರ್ಜನ್ಸಿ’ಗೆ ಹೋಲಿಸಿದ್ದಾರೆ. ಇದೇ ವೇಳೆ, ಅಸ್ಸಾಂ ತೃಣಮೂಲ ಕಾಂಗ್ರೆಸ್‌ನ ಇಬ್ಬರು ಪ್ರಮುಖ ನಾಯಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆಂದು ತಿಳಿದುಬಂದಿದೆ. ಎನ್‌ಆರ್‌ಸಿ ಕರಡು ಬಿಡುಗಡೆಯಾದ ನಂತರ ಮಮತಾ ಅವರು, ಆಂತರಿಕ ಕಲಹದ ಬಗ್ಗೆ ನೀಡಿರುವ ಹೇಳಿಕೆ ತಮ್ಮ ರಾಜಿನಾಮೆಗೆ ಕಾರಣವೆಂದು ಅಸ್ಸಾಂ ಟಿಎಂಸಿ ನಾಯಕರು ತಿಳಿಸಿದ್ದಾರೆ.

ತಮ್ಮ ಸಂಘರ್ಷವನ್ನು ಬಂಗಾಳಿ ಭಾಷಾ ಅಸ್ಮಿತೆಯ ಭಾಗವಾಗಿ ನೋಡುತ್ತಿರುವ ಮಮತಾ, “ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳದವರ ಮಾತೃಭಾಷೆ ಒಂದೇ ಆಗಿದೆ,” ಎನ್ನುವ ಮೂಲಕ ಹೊಸದೊಂದು ವಾದವನ್ನು ಹುಟ್ಟುಹಾಕಿದ್ದಾರೆ. ಅಸ್ಸಾಂನಲ್ಲಿ ಅಕ್ರಮ ವಲಸಿಗರೆಂದು ಪರಿಗಣಿಸಲ್ಪಟ್ಟಿರುವ 40 ಲಕ್ಷ ಜನರು ಅಧಿಕವಾಗಿ ಬಂಗಾಳಿ ಭಾಷಿಗರಾಗಿದ್ದು, ಬಾಂಗ್ಲಾದೇಶ ಮೂಲದವರಾಗಿದ್ದಾರೆ. ಬಂಗಾಳಿ ಭಾಷೆ ಮಾತನಾಡುವವರೆಲ್ಲರೂ ತಮ್ಮವರೆಂಬ ಭಾವನೆ ಬಿತ್ತುವ ಪ್ರಯತ್ನವನ್ನು ಮಮತಾ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ವಲಸಿಗ ಬಂಗಾಳಿ ಭಾಷಿಗರ ಮೇಲೆ ತಾವು ಇಟ್ಟುಕೊಂಡಿರುವ ಕಾಳಜಿ ಪಶ್ಚಿಮ ಬಂಗಾಳದ ಬಹುಸಂಖ್ಯಾತ ಜನರಲ್ಲಿ ಅನುಕಂಪ ಸೃಷ್ಟಿಸಲಿದೆ ಎಂಬ ಉದ್ದೇಶವೂ ಮಮತಾ ಅವರಿಗೆ ಇದ್ದಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

ಮತ್ತೊಂದೆಡೆ, ವಲಸಿಗರ ಮೇಲಿನ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು, ದೇಶದ ಭದ್ರತೆಯ ಬಗೆಗಿನ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ. ಪೌರತ್ವ ಹೊಂದಲು ಅರ್ಹರಲ್ಲದ 40 ಲಕ್ಷ ಜನರು ಬಹುತೇಕ ಅಲ್ಪಸಂಖ್ಯಾತರೆಂಬುದು ಇಲ್ಲಿ ಗಮನಿಸಬೇಕಾದ ಅಂಶ. 2019ರ ಲೋಕಸಭೆ ಚುನಾವಣೆ ವೇಳೆಗೆ, ಬಾಂಗ್ಲಾದೇಶದ ಅಕ್ರಮ ವಲಸಿಗರ ಬಗ್ಗೆ ಕಠಿಣ ನಿಲುವು ತೆಗೆದುಕೊಂಡಿದ್ದೇವೆ. ಆ ಮೂಲಕ, ರಾಷ್ಟ್ರದ ಆಂತರಿಕ ಭದ್ರತೆಯ ಬಗ್ಗೆ ಹೆಚ್ಚು ನಿಗಾ ವಹಿಸಿದ್ದೇವೆ ಎಂಬ ರಾಜಕೀಯ ನಿರೂಪಣೆಯೊಂದನ್ನು ಹುಟ್ಟುಹಾಕುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದನ್ನು ಹಿಂದೂಗಳ ಓಲೈಕೆ ರಾಜಕಾರಣದ ಪ್ರಮುಖ ಅಂಶವಾಗಿ ಬಿಜೆಪಿ ತೆಗೆದುಕೊಂಡಿದೆ ಎಂಬುದನ್ನು ಅಲ್ಲಗಳೆಯುಂತಿಲ್ಲ.

“ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಮತಾ ಅವರು, ಎನ್‌ಆರ್‌ಸಿ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿ ವಿರೋಧಿ ಪಡೆಯನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ,” ಎಂಬ ವಾದಗಳೂ ಹುಟ್ಟಿಕೊಂಡಿವೆ. ಪ್ರಧಾನಿ ಮೋದಿಯವರ ನಿಲುವುಗಳನ್ನು ಕಟುವಾಗಿ ವಿರೋಧಿಸುತ್ತಲೇ ಬಂದಿರುವ ಮಮತಾ, ನೋಟು ಅಪನಗದೀಕರಣ, ಜಿಎಸ್ಟಿಯಂತಹ ಘೋಷಣೆಗಳನ್ನು ಜನವಿರೋಧಿ ನಡೆಗಳೆಂದು ಆರೋಪಿಸಿ ಈ ಹಿಂದೆ ಪ್ರತಿಭಟಿಸಿದ್ದರು. ಆ ಸಂದರ್ಭದಲ್ಲೂ ಮಮತಾ ನಡೆಗಳ ಬಗ್ಗೆ ಇಂತಹುದೇ ಮಾತುಗಳು ಕೇಳಿಬಂದಿದ್ದವು. ಆದರೆ, ಅಸ್ಸಾಂನ ಎನ್‌ಆರ್‌ಸಿ ವಿಷಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ತೀವ್ರ ಸಂಘರ್ಷಕ್ಕೆ ಇಳಿಯುವ ಮೂಲಕ ಹೊಸ ರಾಜಕೀಯ ಕಂಪನಗಳನ್ನು ಮಮತಾ ಸೃಷ್ಟಿಸಿದ್ದಾರೆ.

ಮಮತಾ ಅವರ ರಾಜಕೀಯ ಅಭಿಲಾಷೆಗಳು ಏನೇ ಇದ್ದರೂ, ಎನ್‌ಆರ್‌ಸಿ ವಿಚಾರವಾಗಿ ಅವರು ತಳೆದ ನಿಲುವನ್ನು ಸಾಕಷ್ಟು ರಾಜಕೀಯ ನಾಯಕರು ಹಾಗೂ ವಿಶ್ಲೇಷಕರು ಸಮರ್ಥಿಸಿಕೊಂಡಿದ್ದಾರೆ. ಅಸ್ಸಾಂನ 40 ಲಕ್ಷಕ್ಕೂ ಅಧಿಕ ಜನರು ಪೌರತ್ವ ಹೊಂದಿಲ್ಲವೆಂದು ಎನ್‌ಆರ್‌ಸಿ ತಿಳಿಸಿದೆ. ಪೌರತ್ವ ಹೊಂದದವರಲ್ಲಿ ಹೆಚ್ಚಿನವರು ಬಾಂಗ್ಲಾ ದೇಶಿಗರಾಗಿದ್ದು, ಬಂಗಾಳಿ ಅವರ ಮಾತೃಭಾಷೆಯಾಗಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದಿಂದ ನುಸುಳಿ ಬಂದಿರುವವರ ಸಂಖ್ಯೆ ವ್ಯಾಪಕವಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಅಸ್ಸಾಂನಲ್ಲಿ ಭೀತಿಯ ವಾತಾವರಣ ಸೃಷ್ಟಿಸಿ ವಲಸಿಗರನ್ನು ಹೊರಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಗತವಾದರೆ, ನೆರೆಯ ರಾಜ್ಯ ಪಶ್ಚಿಮ ಬಂಗಾಳಕ್ಕೆ ಹೆಚ್ಚು ಹಾನಿ ಉಂಟಾಗಲಿದೆ ಎಂಬ ಅಂಶ ಮಮತಾ ಅವರನ್ನು ಬಾಧಿಸುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಬಂಗಾಳಿ ಬಾಷೆಯನ್ನು ತಮ್ಮ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಲಾಭ ಪಡೆಯುವ ಉದ್ದೇಶವನ್ನೂ ಮಮತಾ ಹೊಂದಿರಬಹುದು ಎಂಬ ಗುಮಾನಿಯೂ ಕೇಳಿಬಂದಿದೆ. ಬಾಂಗ್ಲಾದೇಶದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತರ ಮಾತೃಭಾಷೆಯು ಬಂಗಾಳಿ ಆಗಿರುವುದರಿಂದ ಬಂಗಾಳಿ ಅಸ್ಮಿತೆಯ ರಾಜಕಾರಣಕ್ಕೆ ಮಮತಾ ಮುಂದಾಗಿದ್ದಾರೆಂಬ ಚರ್ಚೆಗಳೂ ಹುಟ್ಟಿಕೊಂಡಿವೆ.

ಇದನ್ನೂ ಓದಿ : ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ರಾಷ್ಟ್ರೀಯ ಪೌರತ್ವ ನೋಂದಣಿ ಕರಡು

ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಕಾಲ ಅಧಿಕಾರದಲ್ಲಿದ್ದ ಸಿಪಿಎಂ ಪಕ್ಷವು ಬಾಂಗ್ಲಾದೇಶದ ವಲಸಿಗರಿಗೆ ಆಶ್ರಯ ಒದಗಿಸಿತ್ತು. ಇದರ ವಿರುದ್ಧ ಖುದ್ದು ಮಮತಾ ಬ್ಯಾನರ್ಜಿ ಅವರೇ ಹಿಂದೆ ಧ್ವನಿ ಎತ್ತಿದ್ದರು. ಈ ವಿಚಾರವಾಗಿ ಚರ್ಚೆ ನಡೆಸಲು ಅವಕಾಶ ಕಲ್ಪಿಸಬೇಕೆಂದು 2005ರಲ್ಲಿ ಮಮತಾ ಅವರು ಸಂಸತ್ತಿನಲ್ಲಿ ಪಟ್ಟು ಹಿಡಿದಿದ್ದರು. ಚರ್ಚೆಗೆ ಅವಕಾಶ ಸಿಗದಿದ್ದಾಗ ಸಂಸತ್‌ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ, ಮಮತಾ ಅವರ ಈಗಿನ ವಾದಕ್ಕೂ, ಹಳೆಯ ವಾದಕ್ಕೂ ವಿರೋಧಾಭಾಸ ಎದ್ದುಕಾಣುತ್ತಿದ್ದು, ಇದು ಬಿಜೆಪಿ ನಾಯಕರ ಬಾಯಿಗೆ ಆಹಾರವಾಗುತ್ತಿದೆ.

ಮಮತಾ ಪ್ರತಿಪಾದಿಸುತ್ತಿರುವ ಬಂಗಾಳಿ ಅಸ್ಮಿತೆ ಹಾಗೂ ಬಿಜೆಪಿಯ ಹಿಂದೂ ಓಲೈಕೆಯ ರಾಜಕಾರಣ ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕೀಯ ಚರ್ಚೆಗಳಾಗಿ ಮಾರ್ಪಟ್ಟಿವೆ ಎಂಬುದಂತೂ ಸತ್ಯ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಎರಡು ಸೈದ್ದಾಂತಿಕ ವಿಚಾರಗಳಲ್ಲಿ ಪಶ್ಚಿಮ ಬಂಗಾಳ ಜನರು ಯಾವುದನ್ನು ಅಪ್ಪಿಕೊಳ್ಳಲಿದ್ದಾರೆ ಎಂಬುದೀಗ ಕುತೂಹಲ ಕೆರಳಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More