ಸ್ಥಳೀಯ ಹೋರಾಟದಲ್ಲಿ ಮೂರೂ ಪಕ್ಷಗಳು ಬೀಗುವಂತಿಲ್ಲ, ಬಾಗುವಂತಿಲ್ಲ!

೨೦೫ ನಗರ ಸ್ಥಳೀಯ ಸಂಸ್ಥೆಗಳ ಪೈಕಿ ೨೨ ಜಿಲ್ಲೆಗಳ ೧೦೫ ಕಡೆ ಆ.೨೯ರಂದು ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಯಲ್ಲಿ ಮೈತ್ರಿ ಸಂಬಂಧ ಕಾಂಗ್ರೆಸ್‌-ಜೆಡಿಎಸ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಇನ್ನು, ನಗರ ಪ್ರದೇಶಗಳಲ್ಲಿ ತನ್ನೆಡೆಗೆ ಒಲವಿದೆ ಎಂಬುದನ್ನು ನಿರೂಪಿಸಬೇಕಾದ ಒತ್ತಡ ಬಿಜೆಪಿಗಿದೆ 

ಲೋಕಸಭಾ ಚುನಾವಣೆಗೂ ಮುನ್ನ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಿಗದಿಯಾಗಿರುವುದು ರಾಜ್ಯ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ಗೆ ಹಗ್ಗದ ಮೇಲಿನ ನಡಿಗೆಯಾಗಿ ಪರಿಣಮಿಸಿದೆ. ರಾಜ್ಯ ಮಟ್ಟದಲ್ಲಿ ಹೊಂದಾಣಿಕೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧೆ ಮಾಡುವುದಾಗಿ ಕಾಂಗ್ರೆಸ್‌-ಜೆಡಿಎಸ್‌ ಹೇಳುತ್ತಿವೆ. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದು ಉಭಯ ಪಕ್ಷಗಳಿಗೂ ಸಂಘಟನೆಯ ದೃಷ್ಟಿಯಿಂದ ಉತ್ತಮ ನಡೆಯಲ್ಲ. ಅಲ್ಲದೆ, ಇದಕ್ಕೆ ಬೇರುಮಟ್ಟದ ಕಾರ್ಯಕರ್ತರಲ್ಲಿ ಒಲವೂ ಇಲ್ಲ. ಮೈತ್ರಿಪಕ್ಷಗಳ ಸಂಕಟವನ್ನು ನೋಡಿ ಬಹಿರಂಗವಾಗಿ ಬಿಜೆಪಿ ಗಹಗಹಿಸಿ ನಕ್ಕರೂ ಅಂತರಂಗದಲ್ಲಿ ಅದಕ್ಕೆ ತನ್ನದೇ ಆದ ಅಳುಕು, ಆತಂಕವಿದೆ. ಮೂರೂ ಪಕ್ಷಗಳು ಒಂದಲ್ಲ ಒಂದು ರೀತಿಯ ಸಂಕಟ, ಸಂದಿಗ್ಧ ಎದುರಿಸುತ್ತಿವೆ.

ರಾಜ್ಯದಲ್ಲಿ ಒಟ್ಟಾರೆ ೨೦೫ ಸ್ಥಳೀಯ ಸಂಸ್ಥೆಗಳಿವೆ. ಮೈಸೂರು, ಶಿವಮೊಗ್ಗ ಮತ್ತು ತುಮಕೂರಿನ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ವಿವಾದ ಕೋರ್ಟ್‌ನಲ್ಲಿ ಇರುವುದರಿಂದ ಸದ್ಯ ಅಲ್ಲಿ ಚುನಾವಣೆ ನಡೆಯುವುದಿಲ್ಲ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ. ಆದ್ದರಿಂದ ಮೊದಲ ಹಂತದಲ್ಲಿ ೨೨ ಜಿಲ್ಲೆಗಳ ೨೯ ನಗರಸಭೆಯ ೯೨೭ ವಾರ್ಡ್‌, ೫೩ ಪುರಸಭೆಯ ೧,೨೪೭ ವಾರ್ಡ್‌ ಹಾಗೂ ೨೩ ಪಟ್ಟಣ ಪಂಚಾಯಿತಿಯ ೪೦೦ ವಾರ್ಡ್‌ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಒಟ್ಟಾರೆ ೧೦೫ ಸ್ಥಳೀಯ ಸಂಸ್ಥೆಗಳ ೨,೭೫೪ ವಾರ್ಡ್‌ಗಳಿಗೆ ಆಗಸ್ಟ್‌ ೨೯ರಂದು ಚುನಾವಣೆ ನಡೆಯಲಿದ್ದು, ಸೆಪ್ಟೆಂಬರ್‌ ೧ರಂದು ಫಲಿತಾಂಶ ಪ್ರಕಟವಾಗಲಿದೆ. ೩೬ ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ೧೦೫ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವುದರಿಂದ ಅಂದಾಜು ಅರ್ಧ ವಿಧಾನಸಭಾ ಕ್ಷೇತ್ರಗಳ ಮತದಾರರ ಒಲವನ್ನು ಅರಿಯಬಹುದಾಗಿದೆ.

ಮಾಜಿ ಪ್ರಧಾನಿ ನೇತೃತ್ವದ ಎಚ್‌ ಡಿ ದೇವೇಗೌಡರ ಜೆಡಿಎಸ್, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಅಲ್ಲಿ ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಇಡಲು ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಅತ್ಯವಶ್ಯ. ಆಗ ಪಕ್ಷದ ಸಾಧನೆ, ಸಂಘಟನೆಯನ್ನು ಮುಂದು ಮಾಡಿ ಕಾಂಗ್ರೆಸ್‌ ಎದುರು ಹಕ್ಕು ಮಂಡಿಸುವ ನೈತಿಕ ಸ್ಥೈರ್ಯ ಜೆಡಿಎಸ್‌ಗೆ ದೊರೆಯಲಿದೆ. ಇಲ್ಲವಾದಲ್ಲಿ ಹೆಚ್ಚು ಸ್ಥಾನ ಪಡೆಯಬೇಕೆಂಬ ಜೆಡಿಎಸ್‌ ವಾದಕ್ಕೆ ಅರ್ಥವಿಲ್ಲದಂತಾಗುತ್ತದೆ. ರಾಜ್ಯದೆಲ್ಲೆಡೆ ಜೆಡಿಎಸ್ ಹಾಗೂ ಬಿಜೆಪಿಗೆ ಪ್ರಬಲ ಪ್ರತಿಸ್ಪರ್ಧಿಯಾದ ಕಾಂಗ್ರೆಸ್‌ಗೆ ತನ್ನ ಬಲ ಪ್ರದರ್ಶಿಸಲು ಸ್ಥಳೀಯ ಸಂಸ್ಥೆ ಚುನಾವಣೆಯು ಸೂಕ್ತ ವೇದಿಕೆಯಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಪಕ್ಷದ ಮೇಲೆ ನಗರಭಾಗದ ಜನರ ಒಲವು ಅರಿಯಲು ಇಲ್ಲಿನ ಫಲಿತಾಂಶ ನಿರ್ಣಾಯಕವಾಗುವ ಸಾಧ್ಯತೆ ಇದೆ. ಇನ್ನು, ಕೇಡರ್‌ ಬೇಸ್ ಹಾಗೂ ನಗರ ಭಾಗದ 'ಸಾಮ್ರಾಟ' ಎಂದು ಬೀಗುವ ಬಿಜೆಪಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲುವುದು ಅಗತ್ಯ ಮತ್ತು ಅನಿವಾರ್ಯ.

ದೇಶದೆಲ್ಲೆಡೆ ನಡೆಯುವ ಚುನಾವಣೆಗಳಲ್ಲಿ ಬಿಜೆಪಿಯು ನಗರ ಭಾಗದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡುತ್ತ ಬಂದಿದೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಬೆಂಗಳೂರಿನಲ್ಲಿ ಕಾಂಗ್ರೆಸ್‌ ನಂತರದ ಸ್ಥಾನಕ್ಕೆ ಕುಸಿದಿದೆ. ಇದು ಪಕ್ಷವನ್ನು ಚಿಂತೆಗೆ ಈಡುಮಾಡಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿಯ ಸಾಂಪ್ರದಾಯಿಕ ಮತಬ್ಯಾಂಕ್ ಛಿದ್ರವಾದರೆ ದೀರ್ಘಾವಧಿಯಲ್ಲಿ ಪಕ್ಷಕ್ಕೆ ಹೊಡೆತ ಬೀಳಲಿದೆ. ಆದ್ದರಿಂದ, ಇದಕ್ಕೆ ಕುಂದಾಗದಂತೆ ನೋಡಿಕೊಳ್ಳಲು ಹಾಗೂ ಕಾಂಗ್ರೆಸ್-ಜೆಡಿಎಸ್‌ ಮೈತ್ರಿಯನ್ನು ‘ಅಪವಿತ್ರ ಮೈತ್ರಿ’ ಎನ್ನುತ್ತಿರುವ ಬಿಜೆಪಿಯ ಮಾತನ್ನು ನಗರದ ಭಾಗದ ಜನರು ಹೇಗೆ ಅರ್ಥೈಸಿಕೊಂಡಿದ್ದಾರೆ ಎಂಬುದನ್ನು ಅರಿಯಲು ಇಲ್ಲಿನ ಫಲಿತಾಂಶ ಉತ್ತರ ನೀಡಲಿದೆ. ಒಟ್ಟಾರೆಯಾಗಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ನಾಯಕರಿಗೆ ಲೋಕಸಭಾ ಚುನಾವಣೆಗೂ ಮುನ್ನ ಹೊಸ ಕಾರ್ಯತಂತ್ರ ಹೊಸೆಯಲು ತಕ್ಕಮಟ್ಟಿಗೆ ಇಲ್ಲಿನ ಫಲಿತಾಂಶ ಸಹಕಾರಿ ಆಗಲಿದೆ.

ಇದನ್ನೂ ಓದಿ : ಬದಲಾಗದ ಬಿಜೆಪಿ ಚಹರೆ; ಪಕ್ಷದಲ್ಲಿ ಬ್ರಾಹ್ಮಣ-ಬನಿಯಾರದ್ದೇ ಕಾರುಬಾರು!

ಇದರಾಚೆಗೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪವಾಗುವ ವಿಚಾರಗಳ ಮೇಲೆ ನಡೆಯುವುದಿಲ್ಲ. ಕುಡಿಯುವ ನೀರು, ರಸ್ತೆ, ಆಟದ ಮೈದಾನ, ಆಸ್ತಿ ತೆರಿಗೆಯಂಥ ಸ್ಥಳೀಯ ವಿಚಾರಗಳು ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪಕ್ಷಕ್ಕಿಂತಲೂ ಅಭ್ಯರ್ಥಿಯ ವರ್ಚಸ್ಸು ನಿರ್ಣಾಯಕ ಪಾತ್ರ ವಹಿಸುವುದರಿಂದ ರಾಜ್ಯ ನಾಯಕರಿಗೆ ಸ್ಥಳೀಯ ಪ್ರಭಾವಿಗಳನ್ನು ಹೆಕ್ಕಿ ತೆಗೆಯುವ ಸವಾಲು ಎದುರಾಗಲಿದೆ. ಒಂದು ವೇಳೆ, ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಾಗಿ ಸ್ಥಾನ ಹಂಚಿಕೆಗೆ ಮುಂದಾದರೆ ಅದು ಬಿಜೆಪಿಗೆ ವರದಾನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತಳಮಟ್ಟದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವಿನ ವೈಮನಸ್ಸು ಒಬ್ಬರನ್ನೊಬ್ಬರು ನೋಡದ ಮಟ್ಟಿಗೆ ಇರುತ್ತದೆ. ಇಂಥ ಸಂದರ್ಭದಲ್ಲಿ ರಾಜ್ಯ ನಾಯಕರ ಆಣತಿಯಂತೆ ಮೈತ್ರಿಗೆ ಮುಂದಾಗಿ ಮತ್ತೊಬ್ಬನಿಗೆ ಸೀಟು ಬಿಟ್ಟುಕೊಡುವ ಅನಿವಾರ್ಯತೆ ಸೃಷ್ಟಿಯಾದರೆ, ನಿರ್ದಿಷ್ಟ ವಾರ್ಡ್‌ನ ಆಕಾಂಕ್ಷಿ ಪಕ್ಷ ತೊರೆಯಬಹುದು. ಬಹುದಿನಗಳಿಂದ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಂಡ ಬಂದ ಕಾರ್ಯಕರ್ತ ಪ್ರತಿಷ್ಠೆ, ದ್ವೇಷಗಳನ್ನು ಬಿಟ್ಟು ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನು ಬೆಂಬಲಿಸುತ್ತಾನೆ ಎಂಬುದು ಅವಾಸ್ತವ ಕಲ್ಪನೆಯಾಗುತ್ತದೆ.

ಕಾಂಗ್ರೆಸ್‌-ಜೆಡಿಎಸ್‌ ಸೈದ್ಧಾಂತಿಕವಾಗಿ ಬಿಜೆಪಿ ವಿರುದ್ಧ ಹೋರಾಡುತ್ತಲೇ, ತಮ್ಮ-ತಮ್ಮ ಮತಬುಟ್ಟಿಯನ್ನು ಉಳಿಸಿಕೊಳ್ಳುವ, ವಿಸ್ತರಿಸುವ ತಂತ್ರಗಾರಿಕೆಗೂ ಮುಂದಾಗಬೇಕಿದೆ. ಬಿಜೆಪಿಯನ್ನು ಸೋಲಿಸುವುದರ ಜೊತೆಗೆ ತಮ್ಮ ಬೇರುಗಳನ್ನು ಭದ್ರಗೊಳಿಸಿಕೊಳ್ಳಬೇಕಾದ; ಅದೇ ವೇಳೆ, ಮೈತ್ರಿ ಸರ್ಕಾರದ ಸಾಮರಸ್ಯಕ್ಕೆ ಧಕ್ಕೆಯಾಗದಂತೆ ನಾಜೂಕಾದ ಪಟ್ಟುಗಳನ್ನು ಹಾಕಬೇಕಾದ ಸವಾಲಿದೆ. ಉಭಯ ಪಕ್ಷಗಳಲ್ಲೂ ತಂತ್ರಗಾರಿಕೆಯಲ್ಲಿ ನುರಿತ ನಾಯಕರು ಇರುವುದರಿಂದ ಇದೆಲ್ಲವೂ ಒಂದು ರೀತಿಯಲ್ಲಿ 'ಸೌಹಾರ್ದ ಪಂದ್ಯ'ದಂತೆಯೂ ಭಾಸವಾಗಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More