ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿವೆ ದ.ಕನ್ನಡ, ಉಡುಪಿ ಜಿಲ್ಲೆಯ ಲೋಕಸಭಾ ಕಣಗಳು

ದ.ಕನ್ನಡ-ಉಡುಪಿ ಜಿಲ್ಲೆಯ ಲೋಕಸಭಾ ಚುನಾವಣೆ ಉಸ್ತುವಾರಿ ಚಿತ್ರಣ ಸ್ಪಷ್ಟವಾಗುತ್ತಿದ್ದಂತೆ ಅಭ್ಯರ್ಥಿ ಆಯ್ಕೆ ಕುರಿತೂ ಚರ್ಚೆ ಬಿರುಸಾಗಿದೆ. ಇದು ಪರೋಕ್ಷವಾಗಿ ಬಿಜೆಪಿ ಮೇಲೆ ಒತ್ತಡ ಹೇರಿದೆ. ಪಕ್ಷಗಳಲ್ಲಿ ಹರಿದಾಡುತ್ತಿರುವ ಹೆಸರುಗಳ ಹಿನ್ನೆಲೆಯಲ್ಲಿ ಚುನಾವಣಾ ಸೋಲು-ಗೆಲುವಿನ ಲೆಕ್ಕಾಚಾರ ಇಲ್ಲಿದೆ

ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗಬೇಕೆಂಬ ಬಗ್ಗೆ ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ. ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರೆಂಬ ಗುಟ್ಟು ಇನ್ನೂ ಬಯಲಾಗಿಲ್ಲ. ಆದರೂ, ದಕ್ಷಿಣ ಕನ್ನಡದಲ್ಲಿ ಈ ಹಿಂದಿನಿಂದಲೂ ತೇಲಿಬರುತ್ತಿದ್ದ ಹೆಸರು ರಮಾನಾಥ ರೈ ಅವರದ್ದು. ಪಕ್ಷದ ಸಭೆಯಲ್ಲಿ ಸಹ ಅವರ ಹೆಸರು ಪ್ರಧಾನವಾಗಿ ಹರಿದಾಡಿದೆ. ಇತ್ತ, ಉಡುಪಿ-ಚಿಕ್ಕಮಗಳೂರು ಕಣಕ್ಕೆ ವಿನಯಕುಮಾರ್ ಸೊರಕೆ ಹಾಗೂ ಬಿ ಕೆ ಹರಿಪ್ರಸಾದ್ ಅವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಸೊರಕೆ ಮತ್ತು ಹರಿಪ್ರಸಾದ್ ಇಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳುವ ಸಾಧ್ಯತೆಗಳಿವೆ. ಇದಲ್ಲದೆ, ಅನಿರೀಕ್ಷಿತ ಅಭ್ಯರ್ಥಿಗಳು ಕೂಡ ಕಡೆ ಗಳಿಗೆಯಲ್ಲಿ ಟಿಕೆಟ್ ಪಡೆಯಬಹುದು ಎನ್ನಲಾಗುತ್ತಿದೆ.

ಒಂದು ವೇಳೆ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ರಮಾನಾಥ ರೈ ಅವರ ಹೆಸರೇ ಅಂತಿಮಗೊಂಡರೆ ಅದರ ಸಾಧಕ-ಬಾಧಕಗಳೇನು ಎಂಬುದರ ಸುತ್ತ ಚರ್ಚೆ ನಡೆಯುತ್ತಿದೆ. ರೈ ಅವರು ಸಿದ್ದರಾಮಯ್ಯ ಸರ್ಕಾರದ ಆಡಳಿತಾವಧಿಯಲ್ಲಿ ಸಚಿವರಾಗಿದ್ದವರು, ಅನುಭವಿ ರಾಜಕಾರಣಿ. ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ, ದಕ್ಷಿಣ ಕನ್ನಡದ ಎಲ್ಲ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಇರುವ ನೇರ ಸಂಪರ್ಕ, ಜಿಲ್ಲೆಯ ಇತರ ನಾಯಕರಿಗಿಂತ ಅತಿ ಹೆಚ್ಚು ವರ್ಚಸ್ಸು ಹೊಂದಿರುವುದು, ಬಂಟ ಸಮುದಾಯಕ್ಕೆ ಸೇರಿದವರಾದರೂ ಬಿಲ್ಲವರು ಸೇರಿದಂತೆ ವಿವಿಧ ಸಮುದಾಯಗಳ ಬೆಂಬಲ ಹಾಗೂ ಗುರುತರ ಭ್ರಷ್ಟಾಚಾರ ಆರೋಪಗಳು ಇಲ್ಲದಿರುವುದು ಅವರ ಧನಾತ್ಮಕ ಅಂಶಗಳು ಎನ್ನಲಾಗುತ್ತಿದೆ.

ಆದರೆ, ಅಲ್ಪಸಂಖ್ಯಾತರ ಓಲೈಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಅನಿರೀಕ್ಷಿತ ತಿರುಗೇಟು ನೀಡಿತು. “ಅಲ್ಲಾನ ಕೃಪೆಯಿಂದ ಗೆದ್ದಿದ್ದೇನೆ,” ಎಂದು ಅಲ್ಪಸಂಖ್ಯಾತರ ಸಮಾರಂಭವೊಂದರಲ್ಲಿ ಹೇಳಿದ್ದನ್ನೇ ಬಿಜೆಪಿ ತನ್ನ ಅನುಕೂಲಕ್ಕೆ ಬಳಸಿಕೊಂಡಿತು. ಜೊತೆಗೆ, ಕಲ್ಲಡ್ಕ ಶಾಲೆಯ ಬಿಸಿಯೂಟ ವಿವಾದವೂ ಸುತ್ತಿಕೊಂಡಿತು. ಈ ವಿವಾದಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಕಾಂಗ್ರೆಸ್ ಒಗ್ಗಟ್ಟಾಗಿ ಶ್ರಮಿಸದಿದ್ದುದು ರೈ ಅವರಿಗೆ ಮಾತ್ರವಲ್ಲ, ಜಿಲ್ಲಿಯಲ್ಲಿ ಇಡೀ ಪಕ್ಷಕ್ಕೆ ಮುಳುವಾಯಿತು. ಬಿಲ್ಲವ ಸಮುದಾಯದೊಂದಿಗೆ ರೈ ಬಾಂಧವ್ಯ ಹೊಂದಿದ್ದರೂ ಪಕ್ಷ ಬಿಲ್ಲವರಿಗೆ ಸಾಕಷ್ಟು ಮನ್ನಣೆ ನೀಡಿಲ್ಲ ಎಂಬ ಭಾವನೆ ಈಗಲೂ ಇದೆ. ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರ ಇತ್ತೀಚಿನ ಮಾತುಗಳಲ್ಲಿ ಇದು ವ್ಯಕ್ತವಾಗಿದೆ. ಕರಾವಳಿ-ಮಲೆನಾಡಿನಲ್ಲಿ ಬಿಜೆಪಿಗೆ ಇರುವಂತಹ ಸಂಘಪರಿವಾರದ ಬೆಂಬಲ ಕಾಂಗ್ರೆಸ್ಸಿಗೆ ಇಲ್ಲ. ಈ ನಕಾರಾತ್ಮಕ ಅಂಶಗಳ ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಅವರ ಶಕ್ತಿಯನ್ನು ಪ್ರಶ್ನಿಸುವಂತೆ ಮಾಡಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಹೆಸರುಗಳು ವಿನಯ್ ಕುಮಾರ್ ಸೊರಕೆ ಹಾಗೂ ಬಿ ಕೆ ಹರಿಪ್ರಸಾದ್. ಒಬ್ಬರು ರಾಜ್ಯಮಟ್ಟದಲ್ಲಿ ನಾಯಕರಾಗಿ ಮಿಂಚಿದವರಾದರೆ, ಮತ್ತೊಬ್ಬರು ಹೈಕಮಾಂಡ್ ರಾಜಕೀಯದಲ್ಲಿ ಪಳಗಿದವರು. ಸೊರಕೆ ಅವರ ಈ ಹಿಂದಿನ ಸೋಲಿನ ಬಗೆಗೆ ಇರುವ ಅನುಕಂಪ, ಉಡುಪಿಯ ಜನ ಹತ್ತಿರದಿಂದ ಬಲ್ಲವರು ಎಂಬ ಆತ್ಮೀಯತೆ, ರಾಜಕೀಯದಲ್ಲಿರುವ ಅನುಭವ ಮತ್ತಿತರ ಕಾರಣಗಳಿಗೆ ಅವರಿಗೆ ಪಕ್ಷದ ಒಂದು ವರ್ಗ ಬೆಂಬಲ ನೀಡುತ್ತಿದೆ. ಆದರೆ, ಹರಿಪ್ರಸಾದ್ ಅವರಿಗೆ ಪಕ್ಷವನ್ನು ಮುನ್ನಡೆಸಬಲ್ಲ ತಾಂತ್ರಿಕ ಶಕ್ತಿ ಇದೆ, ಅವರು ಕಾಂಗ್ರೆಸ್ ಸಿದ್ಧಾಂತಗಳನ್ನು ಆಳವಾಗಿ ತಿಳಿದುಕೊಂಡವರು, ಬಿಜೆಪಿಗೆ ವ್ಯತಿರಿಕ್ತವಾಗಿ ರಾಜಕೀಯ ದಾಳ ಉರುಳಿಸಬಲ್ಲವರು, ಉಳಿದ ನಾಯಕರಿಗೆ ಹೋಲಿಸಿದರೆ ಮಾಧ್ಯಮಗಳ ಪ್ರಚಾರವನ್ನೂ ಒಂದು ಶಕ್ತಿ ಎಂಬಂತೆ ಪರಿಗಣಿಸಿರುವುದರಿಂದ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ಮಾತುಗಳಿವೆ. ಇಷ್ಟಾದರೂ, ಕ್ಷೇತ್ರದ ಬಹುತೇಕ ಮತದಾರರಿಗೆ ಹರಿಪ್ರಸಾದ್ ಅಪರಿಚಿತರಾಗಿಯೇ ಉಳಿದಿದ್ದಾರೆ. ಬಿಲ್ಲವ ಸಮುದಾಯದಿಂದ ಬಂದವರಾದರೂ ಎಷ್ಟು ಮಂದಿ ಬಿಲ್ಲವರಿಗೆ ಅವರ ಬಗ್ಗೆ ತಿಳಿದಿದೆ ಎಂಬ ಪ್ರಶ್ನೆಗಳಿವೆ. ಒಮ್ಮೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡವರು. ಗುಜರಾತ್ ಚುನಾವಣೆ ಮೇಲುಸ್ತುವಾರಿ ನೀಡಲಾಗಿದ್ದರೂ ಅವರು ಅಲ್ಲಿ ಪಕ್ಷವನ್ನು ಮುನ್ನಡೆಸಲಿಲ್ಲ. ಅಲ್ಲದೆ, ಅವರ ಹೈಕಮಾಂಡ್ ಮಟ್ಟದ ರಾಜಕಾರಣ ಸಾಮಾನ್ಯ ಮತದಾರರಿಗೆ ರುಚಿಸಬಲ್ಲದೇ ಎಂಬುದು ದೊಡ್ಡ ಸವಾಲು.

ಸೊರಕೆ ಅಥವಾ ಹರಿಪ್ರಸಾದ್ ಜಾತಿಬಲದಿಂದ ಉಡುಪಿಯಲ್ಲಿ ಬಲ ಗಳಿಸಬಹುದಾದರೂ ಅವರಿಗೆ ಚಿಕ್ಕಮಗಳೂರು ಸವಾಲೆಸೆಯುವುದು ಖಚಿತ. ಅಲ್ಲದೆ, ಹರಿಪ್ರಸಾದ್ ದಕ್ಷಿಣ ಕನ್ನಡದಿಂದ ಸ್ಪರ್ಧಿಸುವ ಇಂಗಿತ ಹೊಂದಿದ್ದರೂ ಉಡುಪಿಯಲ್ಲಿ ಸ್ಪರ್ಧಿಸುವಂತೆ ಕೆಲವರು ಸೂಚಿಸುತ್ತಿದ್ದಾರೆ. ಇದಕ್ಕೆ ಅವರು ಒಪ್ಪುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ನಾನೇಕೆ ಸೋತೆ? | ರಮಾನಾಥ ರೈ | ಸೋಲಿಗೆ ಇವಿಎಂ ಕೂಡ ಕಾರಣವಾಗಿರಬಹುದು

ಲೋಕಸಭೆ ಚುನಾವಣೆ ಉಸ್ತುವಾರಿ ವಿಚಾರವಾಗಿಯೂ ಪ್ರಶ್ನೆಗಳೆದ್ದಿವೆ. ರೈ ಮತ್ತು ಸೊರಕೆ ಚುನಾವಣಾ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದಾರಾದರೂ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಗೆಲ್ಲಲಾರದ ಇಬ್ಬರಿಗೂ ಪಕ್ಷ ಉಸ್ತುವಾರಿ ವಹಿಸಿದ್ದೇಕೆ? ರೈ ಒಂದು ವೇಳೆ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲರಾದರೂ ಸೊರಕೆ ಅವರಿಗೆ ಆ ಶಕ್ತಿ ಇದೆಯೇ? ಅವರ ಬದಲಿಗೆ ಪ್ರಮೋದ್ ಮಧ್ವರಾಜ್ ಅವರಂತಹ ನಾಯಕರಿಗೆ ಈ ಜವಾಬ್ದಾರಿ ನೀಡಬೇಕಿತ್ತು. ಅಲ್ಲದೆ, ಹಳೆಯ ಮುಖಗಳಿಗೇ ಒತ್ತು ನೀಡಿ ವಿಧಾನಸಭೆಯಲ್ಲಿ ಎಡವಿದಂತೆ ಮತ್ತೆ ಪಕ್ಷ ಎಡವಲಿದೆಯೇ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಬೇರೆಯವರನ್ನು ಕಣಕ್ಕಿಳಿಸುವ ಸಾಧ್ಯತೆಗಳೂ ಇಲ್ಲದೇ ಇಲ್ಲ. ಚುನಾವಣೆಗೆ ಸಾಕಷ್ಟು ಸಮಯ ಇರುವುದರಿಂದ ಅಭ್ಯರ್ಥಿಗಳು ಬದಲಾದರೂ ಅಚ್ಚರಿಪಡಬೇಕಿಲ್ಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More