ಕೇಂದ್ರದ ವಿರುದ್ಧ ಚಳವಳಿ ರೂಪಿಸಲು ಮುಂದಾದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ

ನವದೆಹಲಿಯಲ್ಲಿ ಶನಿವಾರ (ಆ.4) ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಕೇಂದ್ರ ಸರ್ಕಾರದ ನೀತಿಗಳು, ಪ್ರಸ್ತುತ ತಲೆದೋರಿರುವ ಕೃಷಿ ಸಮಸ್ಯೆ, ನಿರುದ್ಯೋಗ, ದಲಿತರು ಹಾಗೂ ಬುಡಕಟ್ಟು ಜನಾಂಗದವರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಿತು

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿ ವಿರುದ್ಧ ಧ್ವನಿ ಎತ್ತಲು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ರಾಷ್ಟ್ರೀಯ ಪೌರತ್ವ ನೋಂದಣಿ, ಭ್ರಷ್ಟಾಚಾರ, ರಫೇಲ್‌ ಒಪ್ಪಂದ ಹಾಗೂ ನಿರುದ್ಯೋಗದಂತಹ ವಿಚಾರಗಳ ಬಗ್ಗೆ ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಭೆಯ ಅಧ್ಯಕ್ಷತೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ವಹಿಸಿದ್ದರು.

ರಾಹುಲ್‌ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ನಂತರ ನಡೆದ ಎರಡನೇ ಕಾರ್ಯಕಾರಿ ಸಮಿತಿ ಸಭೆ ಇದಾಗಿದ್ದು, ಕೇಂದ್ರ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ದೇಶದ ಜನರಲ್ಲಿ ಅರಿವು ಮೂಡಿಸುವ ಬಗ್ಗೆಯೂ ಗಂಭೀರ ಚರ್ಚೆಗಳಾಗಿವೆ. “ಇಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದೇಶದ ಪ್ರಸ್ತುತ ರಾಜಕೀಯ ಸನ್ನಿವೇಶ, ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ, ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಸಲಾಯಿತು,” ಎಂದು ರಾಹುಲ್‌ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.

ಕಾರ್ಯಕಾರಿ ಸಭೆಯ ನಂತರ ಮಾತನಾಡಿದ ಕಾಂಗ್ರೆಸ್‌ ಮುಖಂಡ ಅಶೋಕ್‌ ಗೆಹ್ಲೋಟ್‌, “ರಾಷ್ಟ್ರೀಯ ಪೌರತ್ವ ನೋಂದಣಿಯಂತಹ ಪ್ರಮುಖ ಸಮಸ್ಯೆಯ ಜೊತೆಗೆ ಕರಡು ಮಸೂದೆ, ಭ್ರಷ್ಟಾಚಾರ, ಬ್ಯಾಂಕ್‌ ವಂಚನೆ ಪ್ರಕರಣಗಳು ಹಾಗೂ ರಫೇಲ್‌ ಒಪ್ಪಂದದ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಈ ಪ್ರಮುಖ ವಿಚಾರಗಳನ್ನು ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಜನರ ಮುಂದೆ ಕೊಂಡೊಯ್ಯಲಾಗುವುದು,” ಎಂದು ಹೇಳಿದ್ದಾರೆ.

ಸಭೆಯ ನಂತರ ಮಾತನಾಡಿದ ಕಾಂಗ್ರೆಸ್‌ ಪಕ್ಷದ ಮುಖ್ಯ ವಕ್ತಾರ ರಣದೀಪ್‌ ಸುರ್ಜೆವಾಲಾ, “ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕ ಪ್ರಚಾರ ಅಥವಾ ಜನಾಂದೋಲನವನ್ನು ಕಾಂಗ್ರೆಸ್‌ ಪಕ್ಷ ಹಮ್ಮಿಕೊಳ್ಳಲಿದೆ. ಮುಂದಿನ ಕೆಲ ವಾರಗಳಲ್ಲಿ ಪಕ್ಷದ ರಾಜ್ಯ ಮುಖಂಡರು, ಸ್ಥಳೀಯ ವಿಭಾಗಗಳ ನಾಯಕರೊಂದಿಗೆ ಆಂದೋಲನದ ರೂಪುರೇಷೆಗಳ ಬಗ್ಗೆ ಚರ್ಚೆ ಮಾಡಲಾಗುವುದು,” ಎಂದು ಹೇಳಿದರು.

ದೇಶದಲ್ಲಿ ದೊಡ್ಡದೊಂದು ವಿವಾದ ಹುಟ್ಟುಹಾಕಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆ ಬಗ್ಗೆ ಮಾತನಾಡಿದ ಸುರ್ಜೆವಾಲಾ, “ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದ್ದರು. ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯು ಕಾಂಗ್ರೆಸ್‌ ಪಕ್ಷದ ಕೂಸಾಗಿದ್ದು, ಇದರಲ್ಲಿ ಯಾವುದೇ ಭಾರತೀಯ ಪ್ರಜೆಗೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳುವ ಉದ್ದೇಶವಿತ್ತು,” ಎಂದು ಸುರ್ಜೇವಾಲ್‌ ತಿಳಿಸಿದ್ದಾರೆ.

ಜು.22ರಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ತಂತ್ರಗಾರಿಗೆ ಬಗ್ಗೆ ಚರ್ಚೆ ನಡೆದಿತ್ತು. ಈ ಬಾರಿಯ ಸಭೆಯಲ್ಲಿ ತಂತ್ರಗಾರಿಕೆಯೊಂದಿಗೆ ಕೃಷಿ ಸಮಸ್ಯೆ, ನಿರುದ್ಯೋಗ, ಆರ್ಥಿಕ ನೀತಿ, ದಲಿತರು ಹಾಗೂ ಬುಡಕಟ್ಟು ಜನಾಂಗದವರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳು, ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ, ಕೇಂದ್ರದ ವಿದೇಶ ನೀತಿ ಮತ್ತು ಹದಗೆಡುತ್ತಿರುವ ಆಂತರಿಕ ಭದ್ರತೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಚಳವಳಿ ರೂಪಿಸುವುದರ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಕುಟಕಿರುವ ಸುರ್ಜೇವಾಲಾ, “ಅಮಿತ್‌ ಶಾ ಅವರು ಸುಳ್ಳುಗಳನ್ನು ಹೇಳುವುದು ನಿಲ್ಲಿಸಲಿ. 2005ರಿಂದ 2013ರವರೆಗಿನ ಯುಪಿಎ ಅವಧಿಯಲ್ಲಿ ಬಾಂಗ್ಲಾದೇಶದ 82,728 ಅಕ್ರಮ ವಲಸಿಗರನ್ನು ಹೊರಕಳಿಸಲಾಗಿತ್ತು. ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಕೇವಲ 1,822 ಅಕ್ರಮ ವಲಸಿಗರನ್ನು ಹೊರಹಾಕಿದೆ. ಆದರೆ, ಬಿಜೆಪಿ ಅಧ್ಯಕ್ಷ ಈ ವಿಚಾರವಾಗಿ ಸುಳ್ಳುಗಳನ್ನು ಹೇಳುತ್ತಿದ್ದಾರೆ,” ಎಂದು ಟ್ವೀಟ್ ಮಾಡಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More