ಮಹಾ ಚುನಾವಣೆಗೂ ಮುನ್ನ ಉ.ಪ್ರದೇಶದ ಬಣ್ಣ ಬದಲು; ಗಾಂಧಿಗೂ ಕೇಸರಿ ಲೇಪ!

ಅಭಿವೃದ್ಧಿ ಕಾರ್ಯಗಳಿಗೆ ತೋರಬೇಕಾದ ಆಸಕ್ತಿಯನ್ನು ಯೋಗಿ ಆದಿತ್ಯನಾಥ್ ಅವರು ರಾಜ್ಯವನ್ನು ಕೇಸರಿ ಬಣ್ಣಕ್ಕೆ ತಿರುಗಿಸುವತ್ತ ತೋರುತ್ತಿದ್ದಾರೆ ಎಂಬ ಟೀಕೆಗಳು ದಿನನಿತ್ಯ ಕೇಳಿಬರುತ್ತಿದ್ದವು. ಇದೀಗ ಮಹಾತ್ಮ ಗಾಂಧಿ ಅವರ ಪ್ರತಿಮೆ ಕೇಸರಿ ಬಣ್ಣಕ್ಕೆ ತಿರುಗಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ

ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಾಜ್ಯದಲ್ಲಿ ಕೇಸರೀಕರಣ ವ್ಯಾಪಕವಾಗಿದೆ ಎನ್ನುವ ಕಟುಟೀಕೆಗಳು ವ್ಯಕ್ತವಾಗುತ್ತಲೇ ಇವೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೋರಬೇಕಾದ ಆಸಕ್ತಿಯನ್ನು ಯೋಗಿ ಅವರು, ಸರ್ಕಾರಿ ಕಟ್ಟಡ, ಶಾಲಾ ಕಾಲೇಜು ಸೇರಿದಂತೆ ರಾಜ್ಯವನ್ನು ಕೇಸರಿ ಬಣ್ಣಕ್ಕೆ ತಿರುಗಿಸುವತ್ತ ತೋರಿರುವುದನ್ನು ವಿಪಕ್ಷಗಳು ಗಂಭೀರವಾಗಿ ಟೀಕಿಸಿವೆ.

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಆಡಳಿತ ಕಚೇರಿ, ಸಚಿವಾಲಯ, ಹಜ್‌ ಭವನ, ಟೋಲ್‌ ಪ್ಲಾಜಾ, ರೈಲು ನಿಲ್ದಾಣ, ಶಾಲಾ ಕಟ್ಟಡ, ಸರ್ಕಾರಿ ಶಾಲೆಯಲ್ಲಿ ನೀಡಲಾಗುವ ಬ್ಯಾಗ್, ಸರ್ಕಾರಿ ಬಸ್... ಹೀಗೆ ಸರ್ಕಾರಿ ಕಟ್ಟಡಗಳೆಲ್ಲವೂ ಕೇಸರಿ ಬಣ್ಣಕ್ಕೆ ತಿರುಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳ ಮುಖಪುಟವನ್ನೂ ಕೇಸರಿ ಬಣ್ಣದಲ್ಲಿ ಮುದ್ರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.

ಇತ್ತೀಚೆಗೆ ಅಂಬೇಡ್ಕರ್‌ ಪ್ರತಿಮೆಗೆ ಈ ಹಿಂದೆ ಕೇಸರಿ ಬಣ್ಣ ಬಳಿದಿದ್ದ ಕೇಸರಿಪ್ರಿಯರು, ಇದೀಗ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಕೇಸರಿಮಯಗೊಳಿಸಿದ್ದಾರೆ. ಆಗಸ್ಟ್ 15ರ ಸ್ವಾತಂತ್ರ್ಯೋತ್ಸವಕ್ಕೆ ದೇಶಾದ್ಯಂತ ಸಿದ್ಧತೆ ನಡೆಯುತ್ತಿದ್ದರೆ, ಉತ್ತರ ಪ್ರದೇಶದ ಷಹಜಾಹಾನ್ಪುರದಲ್ಲಿ ಮಾತ್ರ ಬಿಳಿ ಬಣ್ಣದಲ್ಲಿದ್ದ ಗಾಂಧಿ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲಾಗಿದ್ದು, ಸ್ಥಳೀಯರಿಂದ ಪ್ರತಿಭಟನೆ ವ್ಯಕ್ತವಾಗಿದೆ.

ಗಾಂಧೀಜಿ ಪ್ರತಿಮೆಯನ್ನು ಕೇಸರಿಮಯಗೊಳಿಸಿರುವ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೌಶಲ್ ಮಿಶ್ರಾ ನೇತೃತ್ವದ ನಿಯೋಗ, ಶನಿವಾರ ಜಿಲ್ಲಾಧಿಕಾರಿ ಅಮೃತ್ ತ್ರಿಪಾಠಿ ಅವರನ್ನು ಭೇಟಿ ಮಾಡಿ, ಅಪರಾಧಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಮತ್ತೊಂದೆಡೆ, ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಹಜ್ ಭವನಕ್ಕೆ ಕೇಸರಿ ಬಣ್ಣ ಬಳಿದ ರಾಜ್ಯ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಬಿಳಿ ಬಣ್ಣ ಬಳಿಯಲಾಗಿದೆ.

ಇನ್ನೊಂದೆಡೆ, ಉತ್ತರ ಪ್ರದೇಶದ ಮುಘಲ್‌ ಸರಾಯ್‌ ರೈಲು ನಿಲ್ದಾಣ ನಾಳೆಯಿಂದ ಇತಿಹಾಸದ ಪುಟ ಸೇರಲಿದ್ದು, 150 ವರ್ಷಗಳ ಹಳೆಯ ಮುಘಲ್ ಸರಾಯ್ ರೈಲು ನಿಲ್ದಾಣ, ನಾಳೆಯಿಂದ ಅಧಿಕೃತವಾಗಿ ದೀನ್ ದಯಾಳ್ ಉಪಾಧ್ಯಾಯ ನಗರ ರೈಲು ನಿಲ್ದಾಣ ಎಂದು ನಾಮನಿರ್ದೇಶನಗೊಳ್ಳಲಿದೆ.

ರೈಲು ನಿಲ್ದಾಣದ ಹೊಸ ಹೆಸರಿನ ನಾಮಫಲಕಗಳನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆಗಸ್ಟ್‌ 5ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ದೀನ್‌ದಯಾಳ್‌ ಉಪಾಧ್ಯಾಯ ಇದೇ ರೈಲು ನಿಲ್ದಾಣದ ಸಮೀಪ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು ಎನ್ನಲಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More