ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಲೈನಾರ್‌ ಕರುಣಾನಿಧಿ ಇನ್ನಿಲ್ಲ

ದ್ರಾವಿಡ ರಾಜಕಾರಣದ ಪ್ರಮುಖ ಕೊಂಡಿಯಂತಿದ್ದ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಇನ್ನಿಲ್ಲ. ಹಲವು ದಿನಗಳಿಂದ ಚೆನೈ ಕಾವೇರಿ ಆಸ್ಪತ್ರೆಯಲ್ಲಿದ್ದ ಕರುಣಾನಿಧಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಫಲಿಸಿಲ್ಲ. ದೇಶದ ಶಕ್ತಿ ರಾಜಕಾರಣದಲ್ಲಿ ಛಾಪು ಮೂಡಿಸುವ ಮಟ್ಟಕ್ಕೆ ಬೆಳೆದದ್ದು ಅವರ ವಿಶೇಷ

ಡಿಎಂಕೆ ವರಿಷ್ಠ, ದ್ರಾವಿಡ ರಾಜಕಾರಣದ ದಿಗ್ಗಜ ಮುತ್ತುವೇಲು ಕರುಣಾನಿಧಿ ಇನ್ನಿಲ್ಲ. ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ತಮ್ಮ ೯೪ನೇ ವಯಸ್ಸಿನಲ್ಲಿ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಆ.7ರಂದು ಸಂಜೆ ೬.೧೦ರ ಸುಮಾರಿಗೆ ಕೊನೆಯುಸಿರೆಳೆದರು. ವರ್ಣರಂಜಿತ ವ್ಯಕ್ತಿತ್ವದ ಧೀಮಂತ ಜನನಾಯಕನನ್ನು ಕಳೆದುಕೊಂಡಿರುವ ತಮಿಳುನಾಡಿನ ಜನ ಶೋಕಸಾಗರದಲ್ಲಿ ಮುಳುಗಿದ್ದಾರೆ. ಕರುಣಾನಿಧಿ ಅವರ ನಿಧನ ಸುದ್ದಿ ಹರಡುತ್ತಿದ್ದಂತೆ ತಮಿಳುನಾಡಿನಲ್ಲಿ ಸ್ವಯಂ ಘೋಷಿತ ಬಂದ್‌ ವಾತಾವರಣ ಸೃಷ್ಟಿಯಾಗಿದೆ.

೨೦೧೬ರ ಅಕ್ಟೋಬರ್‌ನಿಂದಲೂ ಕರುಣಾನಿಧಿ ಅವರು ಆರೋಗ್ಯ ಕೈಕೊಡುತ್ತಲೇ ಇತ್ತು. ಜ್ವರ, ಮೂತ್ರನಾಳ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಕಳೆದ ಜುಲೈ ೨೭ರಂದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಉಳಿಸಿಕೊಳ್ಳಲು ವೈದ್ಯರು ಸಾಕಷ್ಟು ಶ್ರಮಿಸಿದರಾದರೂ ಅದು ಫಲಕಾರಿಯಾಗಲಿಲ್ಲ. ಸಹಸ್ರಾರು ಅಭಿಮಾನಿಗಳು, ಕಾರ್ಯಕರ್ತರ ಹರಕೆ, ಹಾರೈಕೆಗಳೂ ಫಲಿಸಲಿಲ್ಲ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ನೆರೆಯ ದೇಶಗಳ ಪ್ರತಿನಿಧಿಗಳು ಚೆನ್ನೈನ ಆಸ್ಪತ್ರೆಗೆ ಭೇಟಿ ನೀಡಿ, ಕರುಣಾನಿಧಿ ಆರೋಗ್ಯ ವಿಚಾರಿಸಿದ್ದರು. ಅಗ್ರ ನಾಯಕರ ನಿಧನದ ಸಂದರ್ಭಗಳಲ್ಲಿ ಜನ ಭಾವಾವೇಶಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುವುದು ಈ ಹಿಂದೆ ಅನೇಕ ಬಾರಿ ಆಗಿದ್ದರಿಂದ ಕರುಣಾನಿಧಿ ನಿಧನ ಘೋಷಣೆಗೆ ಮುನ್ನ ಸರ್ಕಾರ ಮತ್ತು ಪೊಲೀಸ್‌ ವ್ಯವಸ್ಥೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಅದಗ್ಯೂ ಕೆಲವು ಕಡೆ ಅವರ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾದ ಸುದ್ದಿಗಳು ವರದಿಯಾಗುತ್ತಿವೆ.

ತಮ್ಮ ನಾಯಕ ಆಸ್ಪತ್ರೆ ಸೇರಿದ್ದು ಮತ್ತು ಅವರ ಆರೋಗ್ಯಕ್ಕೆ ಸಂಬಂಧಿಸಿ ಹರಡಿದ ವದಂತಿಗಳಿಂದ ನೊಂದು ೨೦ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ. ಈಗ ಸಾವಿನ ಖಚಿತ ಸುದ್ದಿ ಹರಡುತ್ತಿದ್ದಂತೆ ಅಭಿಮಾನಿಗಳು, ಡಿಎಂಕೆ ಕಾರ್ಯಕರ್ತರ ದುಃಖ ಕಟ್ಟೆಯೊಡೆದಿದೆ. “ಯಾರೂ ಭಾವಾವೇಶಕ್ಕೆ ಒಳಗಾಗಬೇಡಿ. ನೀವು ದುಡುಕಿನ ನಿರ್ಧಾರ ಕೈಗೊಂಡರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ನಮಗಿಲ್ಲ,’’ ಎನ್ನುವ ಕರುಣಾನಿಧಿ ಪುತ್ರ ಸ್ಟಾಲಿನ್‌ ಅವರ ಮನವಿಯನ್ನೂ ಭಾವುಕ ಅಭಿಮಾನಿಗಳು ಕಿವಿ ಮೇಲೆ ಹಾಕಿಕೊಂಡಂತಿಲ್ಲ.

ನಿರಂತರ ೧೩ ಬಾರಿ ಶಾಸಕ, ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ, ಸುದೀರ್ಘ ೪೯ ವರ್ಷಕಾಲ ಡಿಎಂಕೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದ ಅವರು ಹಲವು ಬಾರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಈಚಿನ ವರ್ಷಗಳಲ್ಲಿ ಅನಾರೋಗ್ಯದ ಕಾರಣ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಿಲ್ಲ. ಪ್ರಮುಖ ವಿಚಾರಗಳಿದ್ದಾಗ ಮತ್ತು ತುರ್ತು ಸಂದರ್ಭಗಳಲ್ಲಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸುತ್ತಿದ್ದರು. ಇತ್ತೀಚಿನ ವಾರಗಳಲ್ಲಿ ಅವರ ದೇಹಸ್ಥಿತಿ ಕುರಿತು ಕಾವೇರಿ ಆಸ್ಪತ್ರೆ ಹೆಚ್ಚೂಕಡಿಮೆ ದಿನಕ್ಕೆರಡು ಬಾರಿ, “ಅವರ ಆರೋಗ್ಯ ಸುಧಾರಿಸುತ್ತಿದೆ, ದೇಹಸ್ಥಿತಿ ಕ್ಷೀಣಿಸುತ್ತಿದೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ,’’ ಎನ್ನುವಂಥ ಪ್ರಕಟಣೆ ಹೊರಡಿಸುತ್ತಿತ್ತು ಎಂಬುದು ಗಮನಾರ್ಹ.

ಕರುಣಾನಿಧಿ ಅವರು ಏಳೆಂಟು ದಶಕದ ದೀರ್ಘ ಹಾದಿಯಲ್ಲಿ ಅನೇಕಾನೇಕ ಹೆಜ್ಜೆ ಗುರುತುಗಳನ್ನು ಮೂಡಿಸಿದ ಧೀಮಂತ ವ್ಯಕ್ತಿತ್ವ. ಅವರ ನಿಧನರಾಗುವುದರೊಂದಿಗೆ ಭಾರತ ರಾಜಕಾರಣದ ಪ್ರಮುಖ ರಾಜಕಾರಣಿ ಇತಿಹಾಸದ ಪುಟ ಸೇರಿದಂತಾಗಿದೆ. ತಮಿಳುನಾಡು, ಅಷ್ಟೇ ಏಕೆ ಭಾರತ ರಾಜಕಾರಣದ ಮತ್ತೊಂದು ವರ್ಣರಂಜಿತ ಅಧ್ಯಾಯ ಕೊನೆಗೊಂಡಂತಾಗಿದೆ.

ಕರುಣಾನಿಧಿ ಬದುಕಿನ ಪ್ರಮುಖ ಘಟ್ಟಗಳು

 • ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲೈ ಗ್ರಾಮದಲ್ಲಿ ೧೯೨೪ರ ಜೂನ್‌ ೩ರಂದು ಜನನ. ಅಂಜು ಮತ್ತು ಮುತ್ತುವೇಲು ಪುತ್ರನಾಗಿ ಜನಿಸಿದ ಕರುಣಾನಿಧಿ ಅವರ ಹುಟ್ಟು ಹೆಸರು ದಕ್ಷಿಣ ಮೂರ್ತಿ.
 • ಸಣ್ಣ ವಯಸ್ಸಿನಲ್ಲೇ ಶಾಲೆ ತೊರೆದ ಕರುಣಾನಿಧಿ, ಚಿತ್ರಕತೆ ರಚನೆಯಿಂದ ಜನಪ್ರಿಯತೆ. ೧೪ನೇ ವಯಸ್ಸಿನಲ್ಲಿ ಜಸ್ಟೀಸ್‌ ಪಾರ್ಟಿಯ ಅಳಗಿರಿ ಸ್ವಾಮಿ ಅವರ ಭಾಷಣದಿಂದ ಪ್ರೇರಿತರಾಗಿ ರಾಜಕೀಯ ಪ್ರವೇಶ. ಹಿಂದಿ ವಿರೋಧಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿ.
 • ೧೯೪೯ರಲ್ಲಿ ಅಸ್ತಿತ್ವಕ್ಕೆ ಬಂದ ಡಿಎಂಕೆ ಪಕ್ಷದ ಸಂಸ್ಥಾಪಕ ಸದಸ್ಯ. ಮೊದಲ ಬಾರಿಗೆ ೧೯೫೭ರಲ್ಲಿ ತಮಿಳುನಾಡಿನ ಕುಳಿತಲೈ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆಗೆ ಆಯ್ಕೆ. ಒಟ್ಟಾರೆ ೧೩ ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶ.
 • ೧೯೬೧ರಲ್ಲಿ ಡಿಎಂಕೆ ಖಜಾಂಚಿ. ೧೯೬೨ರಲ್ಲಿ ವಿಧಾನಸಭೆಯಲ್ಲಿ ಉಪನಾಯಕನಾಗಿ ನೇಮಕ.
 • ೧೯೬೭ರಲ್ಲಿ ಅಧಿಕಾರಕ್ಕೆ ಬಂದ ಡಿಎಂಕೆ. ರಾಜ್ಯ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಅಧಿಕಾರ ಸ್ವೀಕಾರ.
 • ೧೯೬೯ರಲ್ಲಿ ಅಣ್ಣಾದೊರೈ ನಿಧನರಾದ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಕರುಣಾನಿಧಿ. ೧೯೭೧-೭೬ರವರೆಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪದಗ್ರಹಣ.
 • ೧೯೮೯-೯೧ರವರೆಗೆ ಮೂರನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಕರುಣಾನಿಧಿ ಸರ್ಕಾರವನ್ನು ಭ್ರಷ್ಟಾಚಾರ ಆರೋಪದಲ್ಲಿ ವಜಾಗೊಳಿಸಿದ ಕೇಂದ್ರ ಸರ್ಕಾರ.
 • ೧೯೯೬ರಲ್ಲಿ ಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ. ಆನಂತರ ೨೦೦೬ರಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
 • ೨೦೦೧ರಲ್ಲಿ ಚೆನ್ನೈನಲ್ಲಿ ಮೇಲುರಸ್ತೆ ನಿರ್ಮಾಣದಲ್ಲಿ ಭ್ರಷ್ಟಾಚಾರ ಆರೋಪ. ಕರುಣಾನಿಧಿ ಹಾಗೂ ಡಿಎಂಕೆ ನಾಯಕರ ಬಂಧನ.
 • ಸೇತುಸಮುದ್ರಂ ವಿವಾದದ ಸಂದರ್ಭದಲ್ಲಿ ರಾಮನ ಅಸ್ತಿತ್ವದ ಕುರಿತು ಪ್ರಶ್ನಿಸಿದ್ದ ಕರುಣಾನಿಧಿ ವಿವಾದದ ಕೇಂದ್ರಬಿಂದುವಾಗಿದ್ದರು.
 • ಎಲ್‌ಟಿಟಿಇ ಮುಖಂಡ ಪ್ರಭಾಕರನ್‌ ನನ್ನ ಅತ್ಯುತ್ತಮ ಸ್ನೇಹಿತ ಎಂದಿದ್ದ ಕರುಣಾನಿಧಿ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಹತ್ಯೆಗೈದ ಎಲ್‌ಟಿಟಿಇಯನ್ನು ಭಾರತ ಕ್ಷಮಿಸುವುದಿಲ್ಲ ಎಂದಿದ್ದರು.
 • ಐದು ಬಾರಿ ಮುಖ್ಯಮಂತ್ರಿಯಾದ ಅವರು, ನೂರಾರು ಕತೆ, ಕವನ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ.
 • ಪದ್ಮಾವತಿ ಅಮ್ಮಾಳ್‌, ದಯಾಳು ಅಮ್ಮಾಳ್‌, ರಜತಿ ಅಮ್ಮಾಳ್‌ ಪತ್ನಿಯರು. ಎಂ ಕೆ ಮುತ್ತು, ಎಂ ಕೆ ಅಳಗಿರಿ, ಎಂ ಕೆ ಸ್ಟಾಲಿನ್‌, ಎಂ ಕೆ ತಮಿಳರಸು ಪುತ್ರರು. ಸೆಲ್ವಿ ಹಾಗೂ ಕನಿಮೊಳಿ ಪುತ್ರಿಯರು.
 • ಕರುಣಾನಿಧಿ ಆಡಳಿತದ ಸಂದರ್ಭದಲ್ಲಿ ತತ್ವಜ್ಞಾನಿ, ಕವಿ ತಿರುವಳ್ಳವರ್‌ ಅವರ ಗೌರವಾರ್ಥ ಕನ್ಯಾಕುಮಾರಿಯಲ್ಲಿ ೧೩೩ ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆ.

ಕರುಣಾನಿಧಿ ಆರೋಗ್ಯದಲ್ಲಿನ ಏರಿಳಿತ

 • ೨೦೧೬ ಅಕ್ಟೋಬರ್‌: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು. ಚಿಕಿತ್ಸೆಯ ನಂತರ ಮನೆಗೆ ವಾಪಸ್‌.
 • ೨೦೧೬ರ ಡಿಸೆಂಬರ್ ೧೫: ಗಂಟಲು ಮತ್ತು ಶ್ವಾಸಕೋಶದ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಕುರುಣಾನಿಧಿ ಅವರಿಗೆ ೨೦೧೬ರ ಡಿಸೆಂಬರ್‌ ೧೬ರಂದು ಗಂಟಿಲಿನಲ್ಲಿ ರಂಧ್ರ ಮಾಡಿ ಉಸಿರಾಡಲು ಅನುಕೂಲವಾಗುವಂತೆ ಪೈಪ್ (ಪಿಇಜಿ ಟ್ಯೂಬ್‌)‌ ಅಳವಡಿಸಲಾಗಿತ್ತು.
 • ೨೦೧೭ ಆಗಸ್ಟ್‌: ಪಿಇಜಿ ಟ್ಯೂಬ್‌ ಬದಲಾವಣೆಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
 • 2018 ಜುಲೈ ೧೬: ಪಿಇಜಿ ಟ್ಯೂಬ್‌ ಬದಲಾವಣೆ
 • 2018 ಜುಲೈ ೨೫: ಕರುಣಾನಿಧಿ ಆರೋಗ್ಯದಲ್ಲಿ ವ್ಯತ್ಯಯ
 • ೨೦೧೮ ಜುಲೈ ೨೭: ಜ್ವರ, ಉಸಿರಾಟದ ತೊಂದರೆ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲು.
 • ೨೦೧೮ ಜುಲೈ ೩೧: ಆಸ್ಪತ್ರೆಯ ಬೆಡ್‌ನಲ್ಲಿ ನಿದ್ರಿಸುತ್ತಿದ್ದ ಕರುಣಾನಿಧಿ ಅವರ ಚಿತ್ರ ಬಿಡುಗಡೆ ಮಾಡಿದ ಕರುಣಾನಿಧಿ ಕುಟುಂಬ.
 • 2018, ಆಗಸ್ಟ್‌ ೭: ಚಿಕಿತ್ಸೆ ಫಲಕಾರಿಯಾಗದೆ ಸಂಜೆ ೬.೧೦ರ ಸುಮಾರಿಗೆ ಕರುಣಾನಿಧಿ ನಿಧನದ ಸುದ್ದಿ ಪ್ರಕಟಣೆ ಹೊರಡಿಸಿದ ಕಾವೇರಿ ಆಸ್ಪತ್ರೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More