ಕರುಣಾನಿಧಿ ನಿರ್ಗಮನ: ಬದಲಾಗಲಿದೆಯೇ ದ್ರಾವಿಡ ಚಳವಳಿಯ ರಾಜಕೀಯ ವ್ಯಾಕರಣ?

ಹಿಂದಿ ವಿರೋಧ ಸಹಿತ ಹಲವು ಆಶಯ ಹೊಂದಿ ದ್ರಾವಿಡ ಚಳವಳಿ ಅಲೆಯಲ್ಲಿ ಮೇಲೆದ್ದ ಡಿಎಂಕೆ, ೫೦ ವರ್ಷದ ಹಿಂದೆ ಕಾಂಗ್ರೆಸ್ ಮಣಿಸಿ ತಮಿಳುನಾಡಿನ ಅಧಿಕಾರ ಸೂತ್ರ ಹಿಡಿದ ಬಳಿಕ ಈವರೆಗೆ ಯಾವುದೇ ರಾಷ್ಟ್ರೀಯ ಪಕ್ಷ ಇಲ್ಲಿ ನೆಲೆ ಕಂಡಿಲ್ಲ. ಈಗ ರಾಜಕೀಯ ವ್ಯಾಕರಣ ಬದಲಾಗುವುದೇ?

ತಮಿಳುನಾಡಿನಲ್ಲಿ ಐವತ್ತು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ಬಳಿಕ ಈವರೆಗೆ ಯಾವುದೇ ರಾಷ್ಟ್ರೀಯ ಪಕ್ಷ ಅಲ್ಲಿ ತಲೆ ಎತ್ತುವುದು ಸಾಧ್ಯವಾಗದಿರುವುದಕ್ಕೆ ದ್ರಾವಿಡ ಚಳವಳಿಯ ಪ್ರಭೆಯೇ ಕಾರಣ. ೧೯೩೦-೫೦ರ ದಶಕದಲ್ಲಿ ತಮಿಳು ನೆಲವನ್ನು ಹಲವು ಬಗೆಯಲ್ಲಿ ಪ್ರಭಾವಿಸಿದ ಈ ಚಳವಳಿಯಲ್ಲಿ ಆರಂಭದಿಂದಲೂ ಸಕ್ರಿಯವಾಗಿದ್ದ ಮುತ್ತುವೇಲು ಕರುಣಾನಿಧಿ, ಈ ಮೂಲಕವೇ ಶಕ್ತಿ ರಾಜಕಾರಣವನ್ನು ಪ್ರವೇಶಿಸಿದವರು. ರಾಜಕೀಯ ಕಾರಣಕ್ಕೆ ರೂಪಾಂತರ ಹೊಂದಿದ್ದರಾದರೂ ವೈಚಾರಿಕವಾಗಿ, ತಾತ್ತ್ವಿಕವಾಗಿ ಗಟ್ಟಿ ನಿಲುವು ಹೊಂದಿದ್ದವರು ಮತ್ತು ತಮಿಳರ ಅಸ್ಮಿತೆಯನ್ನು ಕಾಯ್ದುಕೊಳ್ಳುವ ವಿಷಯದಲ್ಲಿ ರಾಜಿ ಇಲ್ಲದ ಹೋರಾಟ ನಡೆಸಿದವರು. ೧೩ ಚುನಾವಣೆಗಳಲ್ಲಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಕರುಣಾನಿಧಿ, ಅರ್ಧ ಶತಮಾನದಷ್ಟು ದೀರ್ಘ ಕಾಲ ಡಿಎಂಕೆ ನೇತೃತ್ವ ವಹಿಸಿದ ಗರಿಮೆಗೂ ಪಾತ್ರರಾಗಿದ್ದವರು.

ಅಧಿಕಾರ ರಾಜಕಾರಣದ ಮೇಲಾಟ, ದ್ವೇಷ ಪ್ರದರ್ಶನ, ಸ್ವಾರ್ಥ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತಿತರ ಕಾರಣಕ್ಕೆ ದ್ರಾವಿಡ ಚಳವಳಿಯ ಆಶಯ, ತತ್ತ್ವಾದರ್ಶಗಳು ಹುಟ್ಟಿದ ನೆಲೆಯಲ್ಲೇ ದಿಕ್ಕು ತಪ್ಪಿದ್ದರಲ್ಲಿ ಕರುಣಾನಿಧಿ ಅವರದ್ದೂ ಅಗ್ರ ಪಾಲಿದೆ. ಅದೇ ವೇಳೆ, “ರಾಜ್ಯಗಳು ಕೇಂದ್ರ ಸರ್ಕಾರದ ದಾಸರಂತೆ ಕೆಲಸ ಮಾಡಬಾರದು. ರಾಜ್ಯಗಳಿಗೆ ಅವುಗಳದ್ದೇ ಸ್ವಾಯತ್ತೆ ಇರಬೇಕು,’’ ಎಂದು ಗಟ್ಟಿಯಾಗಿ ಪ್ರತಿಪಾದಿಸಿ, ಅದನ್ನು ತಮಿಳುನಾಡಿನಲ್ಲಿ ಸಾಧ್ಯ ಮಾಡಿದ ಹಿರಿಮೆಯೂ ಅವರಿಗೆ ಸಲ್ಲಬೇಕು. ೯೪ ವರ್ಷದ ತುಂಬು ಜೀವನವನ್ನು ವರ್ಣರಂಜಿತವಾಗಿ ಬದುಕಿದ ಕರುಣಾನಿಧಿ ಅವರ ನಿರ್ಗಮನದ ಮೂಲಕ ಐತಿಹಾಸಿಕ ದ್ರಾವಿಡ ಚಳವಳಿಯ ಕೊನೆಯ ಮತ್ತು ಬಲಿಷ್ಠವಾಗಿದ್ದ ಕೊಂಡಿ ಕಳಚಿದೆ.

ಕರುಣಾನಿಧಿ ಚಳವಳಿಗೆ, ಆ ಮೂಲಕ ರಾಜಕಾರಣಕ್ಕೆ ಧುಮುಕಿದ್ದೇ ಹಿಂದಿ ಹೇರಿಕೆ ವಿರೋಧಿ ಚಳವಳಿಯ ಮೂಲಕ. ಅದು ೧೯೧೬-೧೭ರ ಸಂದರ್ಭ. ಉತ್ತರ ಭಾರತೀಯರು ಮತ್ತು ಬ್ರಾಹ್ಮಣ ಪ್ರಾಬಲ್ಯ ಹೆಚ್ಚಿದ್ದ ಕಾಲವದು. ದಕ್ಷಿಣ ಭಾರತಾದ್ಯಂತ ವೈದಿಕಶಾಹಿ ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಿ, ಶೋಷಿತರ ಹಕ್ಕುಗಳಿಗಾಗಿ ಹೋರಾಡಲು ಟಿ ಎಂ ನಾಯರ್‌ ಮತ್ತು ಪಿ ಥಾಗರಯಾ ಚೆಟ್ಟಿ ಅವರಿಂದ ಸ್ಥಾಪನೆಯಾಗಿದ್ದ ಜಸ್ಟೀಸ್‌ ಪಾರ್ಟಿಗೆ ಇಂದಿನ ತಮಿಳುನಾಡು, ಕರ್ನಾಟಕ, ಆಂಧ್ರ, ಕೇರಳ ಪ್ರಾಂತ್ಯಗಳನ್ನೊಳಗೊಂಡ ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ೧೯೩೭ರಲ್ಲಿ ಇದಕ್ಕೆ ಹೊಸ ರೂಪ ನೀಡಿದ ಪೆರಿಯಾರ್ ಇ ವಿ ರಾಮಸ್ವಾಮಿ ನಾಯ್ಕರ್, ದ್ರಾವಿಡನಾಡು ಸಮ್ಮೇಳನದ ಹೆಸರಿನಲ್ಲಿ ತಮಿಳು, ತೆಲುಗು, ಕನ್ನಡ, ಮಲಯಾಳಿ ಭಾಷಿಕರನ್ನು ಸಂಘಟಿಸಿ 'ಸ್ವಾಭಿಮಾನಿ ಚಳವಳಿ' ಆರಂಭಿಸಿದರು. ಬಳಿಕ, ಜಸ್ಟೀಸ್ ಪಾರ್ಟಿ 'ದ್ರಾವಿಡ ಕಳಗಂ' ಎಂದು ಬದಲಾಯಿತು.

ತಮಿಳು ಭಾಷೆ ಪ್ರಾಬಲ್ಯ, ಪುನರುಜ್ಜೀವನ, ದ್ರಾವಿಡ ಜನಾಂಗದ ವೈಶಿಷ್ಟ್ಯವನ್ನು ಎತ್ತಿಹಿಡಿಯುವುದು ಮತ್ತು ಪ್ರಾದೇಶಿಕ ರಾಷ್ಟ್ರೀಯತೆಯನ್ನು ಉತ್ತೇಜಿಸುವುದು, ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಮುರಿದು, ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ದೊರಕಿಸುವಂಥ ವ್ಯವಸ್ಥೆಯನ್ನು ಕಟ್ಟುವುದು, ಜಾತಿ ಪದ್ಧತಿ, ಅಸ್ಪೃಶ್ಯತೆ ನಿರ್ಮೂಲನೆ ಮಾಡುವುದು, ತರ್ಕಬದ್ಧ ಚರ್ಚೆಯ ಸಂಸ್ಕೃತಿಯನ್ನು ಉತ್ತೇಜಿಸುವುದು ಮತ್ತು ಆರ್ಯರ ಶೋಷಣೆಯಿಂದ ದ್ರಾವಿಡರನ್ನು ಮುಕ್ತಗೊಳಿಸುವುದು, ಇದರ ಮೂಲಕ ‘ದ್ರಾವಿಡ ರಾಷ್ಟ್ರ’ ನಿರ್ಮಾಣ ಮಾಡುವುದೇ ಮುಂತಾದ ಧ್ಯೇಯಗಳನ್ನು ಹೊಂದಿದ್ದ ಕಾರಣಕ್ಕೆ ಈ ಪಕ್ಷದತ್ತ ವಿದ್ಯಾರ್ಥಿಗಳು, ಯುವಜನರು ಸಹಿತ ಅಸಂಖ್ಯಾತ ಜನ ಆಕರ್ಷಿತರಾಗಿದ್ದರು. ಸಾಮಾಜಿಕ ಚಳವಳಿ ಬಿರುಸುಗೊಂಡಿತು. ದಲಿತರನ್ನು ದೇವಾಲಯ ಪ್ರವೇಶಿಸುವಂತೆ ಮಾಡಲಾಯಿತು. ಸಂಸ್ಕೃತ, ಹಿಂದಿ ವಿರೋಧಿ ಚಳವಳಿಗೆ ಪೂರಕವಾಗಿ ದೇಗುಲಗಳಲ್ಲಿ ತಮಿಳಿನಲ್ಲಿ ಶ್ಲೋಕ ಪಠಿಸುವಂತೆ ಪುರೋಹಿತರನ್ನು ಒತ್ತಾಯಿಸಲಾಯಿತು.

ಈ ಮಧ್ಯೆ, ೧೯೩೫ರ ಶಾಸನದ ಅನ್ವಯ ತಮಿಳುನಾಡಿನಲ್ಲಿ ೧ನೇ ತರಗತಿಯಿಂದಲೇ ಹಿಂದಿಯನ್ನು ಕಡ್ಡಾಯ ಮಾಡಿದ್ದನ್ನು ವಿರೋಧಿಸಿ ಪೆರಿಯಾರ್‌ ಹಿಂದಿ ವಿರೋಧಿ ಚಳವಳಿ ಆರಂಭಿಸಿದ್ದರು. “ಉತ್ತರದವರು ನಮ್ಮವರ ಮೂಲಕವೇ ದಕ್ಷಿಣ ಭಾರತದ ಮೇಲೆ ಹಿಂದಿಯನ್ನು ಹೇರುತ್ತಿದ್ದಾರೆ. ಇದು ತಮಿಳಿಗೆ ಕಂಟಕಪ್ರಾಯ,’’ ಎಂದು ಆತಂಕ ವ್ಯಕ್ತಪಡಿಸಿ ಪೆರಿಯಾರ್‌ ಬಳಗ ಎಲ್ಲ ಶಾಲೆಗಳ ಮುಂದೆ ಪಿಕೆಟಿಂಗ್‌ ನಡೆಸಿ, ಅಂದಿನ ಮುಖ್ಯಮಂತ್ರಿ ಸಿ ರಾಜಗೋಪಾಲಾಚಾರಿ ಅವರ ಮನೆಯ ಮುಂದೆ ನಿರಶನ ಕುಳಿತಿತು. ಈ ವೇಳೆ, ತಮ್ಮ ೧೪ನೇ ವಯಸ್ಸಿನಲ್ಲಿ ತಿರುವಾಯೂರಿನಲ್ಲಿ ಹಿಂದಿ ವಿರೋಧಿ ಚಳವಳಿಗೆ ಧುಮುಕಿದವರು ಕರುಣಾನಿಧಿ. ಚಳವಳಿ ತೀವ್ರ ಸ್ವರೂಪ ಪಡೆದು, ಸಾವಿರಾರು ಮಂದಿ ಜೈಲು ಸೇರಿದ್ದೂ ಆಯಿತು.

ಚಳವಳಿಗೆ ವ್ಯಕ್ತವಾದ ಜನಬೆಂಬಲ ಕಂಡು ಕೆಲವರು, ಅದನ್ನು ರಾಜಕೀಯನ್ನಾಗಿ ಪರಿವರ್ತಿಸಿಕೊಂಡು ವ್ಯವಸ್ಥೆಯನ್ನು ಸುಧಾರಿಸುವ ಹಂಬಲದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸ ಬಯಸಿದರು. ಆದರೆ, ಆ ವೇಳೆಗೆ ದ್ರಾವಿಡ ಕಳಗಂ ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿರಲಿಲ್ಲ. ಅಲ್ಲದೆ, “ರಾಜಕೀಯ ಪ್ರವೇಶ ಮಾಡಿದರೆ ಅದು ಚಳವಳಿಯ ಸಿದ್ಧಾಂತವನ್ನು ಹಿನ್ನೆಲೆಗೆ ತಳ್ಳುತ್ತದೆ,’’ ಎನ್ನುವ ಕಾರಣಕ್ಕೆ ಪೆರಿಯಾರ್ ಈ ಪ್ರಸ್ತಾಪವನ್ನು ಒಪ್ಪದಿದ್ದುದು ಕೆಲವರ ಅಸಮಾಧಾನಕ್ಕೆ ಕಾರಣವಾಯಿತು. ಈ ಮಧ್ಯೆ, ಪೆರಿಯಾರ್ ತಮ್ಮ ಕಿರಿಯ ಪತ್ನಿಯನ್ನು ಉತ್ತರಾಧಿಕಾರಿಯಂತೆ ಬಿಂಬಿಸಿದ್ದು ಸಂಘಟನೆಯಲ್ಲಿ ಭಿನ್ನ ಧ್ವನಿಯನ್ನು ಹೆಚ್ಚಿಸಿತು. ಚಳವಳಿಯ ಧಾರೆಯಲ್ಲಿ ಮುಂಚೂಣಿಯಲ್ಲಿದ್ದ ಸಿ ಎನ್ ಅಣ್ಣಾದುರೈ ಮುಂತಾದವರು 1949ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಎನ್ನುವ ಹೊಸ ಪಕ್ಷ ಸ್ಥಾಪಿಸಿದರು. ಸಮಾಜದಲ್ಲಿದ್ದ ಮೌಢ್ಯ, ಅಜ್ಞಾನ, ಅನಕ್ಷರತೆ ವಿರುದ್ಧ ಅಕ್ಷರ ಮತ್ತು ಅರಿವಿನ ಸಮರ ಸಾರಿದರು. ದ್ರಾವಿಡ ಚಳವಳಿಯ ಭಾಗವಾಗಿ ಜಾತ್ಯತೀತ ಸಮಾಜದ ಕನಸು ಕಂಡರು. ಮೇಲ್ಜಾತಿಗಳ ತೆಕ್ಕೆಯಲ್ಲಿದ್ದ ದೆಹಲಿ ಕೇಂದ್ರಿತ ಸಂಕುಚಿತ ರಾಜಕೀಯ ಮತ್ತು ಹಿಂದಿ ಹೇರಿಕೆಯ ಷಡ್ಯಂತ್ರಗಳ ವಿರುದ್ಧ ಡಿಎಂಕೆ ಪ್ರಬಲವಾಗಿ ಧ್ವನಿ ಎತ್ತಿತು. ಅದಾಗಲೇ ಹೋರಾಟ, ಸಿನಿಮಾ ಸಾಹಿತ್ಯದ ಮೂಲಕ ಹೆಸರಾಗಿದ್ದ ಕರುಣಾನಿಧಿ, ನಟನಾಗಿ ಜನಪ್ರಿಯರಾಗಿದ್ದ ಎಂ ಜಿ ರಾಮಚಂದ್ರನ್ (ಎಂಜಿಆರ್‌) ಅಭಿಯಾನದ ಆಕರ್ಷಣೆಗಳೆನಿಸಿದರು.

೧೯೫೭ರಲ್ಲಿ ಹಿಂದಿಯೇತರ ಪ್ರಾಂತ್ಯದಲ್ಲಿ ಹಿಂದಿ ಭಾಷೆಯನ್ನು ಜನಪ್ರಿಯಗೊಳಿಸಲು ಕೇಂದ್ರ ಸರ್ಕಾರ ಮುಂದಾದಾಗ ಡಿಎಂಕೆ ವ್ಯಾಪಕ ಪ್ರತಿಭಟನೆ ನಡೆಸಿತು. ಅದು ಪಕ್ಷದ ಶಕ್ತಿವೃದ್ಧಿಗೂ ಕಾರಣವಾಗಿ, ಕುಳಿತಲೈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕರುಣಾನಿಧಿ ಸಹಿತ ೧೫ ಮಂದಿ ಡಿಎಂಕೆಯಿಂದ ಶಾಸಕರಾದರು. ಶಾಂತಿಯುತವಾಗಿ ನಡೆದ ಹಿಂದಿ ವಿರೋಧಿ ಚಳವಳಿ ಕೇಂದ್ರಕ್ಕೆ ಬಿಸಿ ಮುಟ್ಟಿಸಿದ್ದರಿಂದ ೧೯೫೯ರಲ್ಲಿ ಪ್ರಧಾನಿ ನೆಹರು ಮೌನ ಮುರಿದು, “ದಕ್ಷಿಣದ ರಾಜ್ಯಗಳು ಸ್ವಇಚ್ಛೆಯಿಂದ ಒಪ್ಪಿಕೊಳ್ಳುವವರೆಗೆ ಹಿಂದಿಯನ್ನು ಹೇರುವುದಿಲ್ಲ,’’ ಎಂದು ಆಶ್ವಾಸನೆ ನೀಡಿದರು.

ಆದರೆ, ಆ ಬಳಿಕವೂ ಹೇರಿಕೆ ಪ್ರಯತ್ನ ನಿಲ್ಲಲಿಲ್ಲ. ೧೯೬೩ರಲ್ಲಿ ಹೈದರಾಬಾದಿನಲ್ಲಿ ಹಿಂದಿ ಪ್ರಚಾರ ಸಭಾ ಉದ್ಘಾಟಿಸಿದ ಲಾಲ್‌ ಬಹದ್ದೂರ್‌ ಶಾಸ್ತ್ರಿ, “ಹಿಂದಿ ವಿರೋಧಿ ನೀತಿಯನ್ನು ಡಿಎಂಕೆ ಕೈಬಿಡಬೇಕು. ಕ್ರಮೇಣ ಇಂಗ್ಲಿಷ್ ಸ್ಥಾನವನ್ನು ಹಿಂದಿ ಆಕ್ರಮಿಸುತ್ತದೆ,’’ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಣ್ಣಾದೊರೈ, “ಆಡಳಿತ ಪಕ್ಷ ಭಾಷೆಯ ವಿಚಾರದಲ್ಲಿ ರಕ್ತಪಾತವನ್ನು ಬಯಸುತ್ತಿದೆ. ಅದಕ್ಕೆಲ್ಲ ಡಿಎಂಕೆ ಹೆದರುವುದಿಲ್ಲ. ನಾವು ಯಾವುದೇ ತ್ಯಾಗ, ಬಲಿದಾನಕ್ಕೆ ಸಿದ್ಧ,’’ ಎಂದು ಎಚ್ಚರಿಸಿದರು. ಬೆನ್ನಿಗೇ ಮದ್ರಾಸಿನಲ್ಲಿ, ಹಿಂದಿ ವಿರೋಧಿ ಸಮ್ಮೇಳನ ಸಂಘಟಿಸಿದರು. ರಾಷ್ಟ್ರಭಾಷೆಯ ಕುರಿತ ವಿಧಿಯನ್ನು ಸುಟ್ಟು ಪ್ರತಿಭಟಿಸಿದ ಕರುಣಾನಿಧಿ ಮತ್ತಿತರರನ್ನು ಬಂಧಿಸಲಾಯಿತು. ಕೇಂದ್ರ ಸರ್ಕಾರ ಮತ್ತು ರಾಜ್ಯದ ಭಕ್ತವತ್ಸಲಂ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸ್ಫೋಟಿಸಿದ ಆಕ್ರೋಶ ವ್ಯಾಪಕ ಹಿಂಸೆಗೆ ತಿರುಗಿ, ೩೫ಕ್ಕೂ ಹೆಚ್ಚು ಮಂದಿ ಗುಂಡೇಟಿಗೆ ಬಲಿಯಾದರು.

“ನಾವೀಗ ಚಳವಳಿಯ ಸಸಿಯನ್ನು ನೆಟ್ಟಿದ್ದೇವೆ. ಮುಂದೆ ಅದರ ಫಲ ದೊರೆಯುತ್ತದೆ,’’ ಎಂದು ಆಗ ಕರುಣಾನಿಧಿ ಘೋಷಿಸಿದ್ದರು. ದ್ರಾವಿಡ ರಾಜಕಾರಣ ಮತ್ತು ದ್ರಾವಿಡ ರಾಷ್ಟ್ರಕಲ್ಪನೆಯನ್ನು ಮುರಿಯಲಿಕ್ಕೆಂದೇ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ತಮಿಳರು ಭಾವಿಸಿದ್ದು ಡಿಎಂಕೆಯ ಬೇರುಗಳು ಗಟ್ಟಿಯಾಗಲು ಕಾರಣವಾಯಿತು. ಈ ಮಧ್ಯೆ ೧೯೬೨ರಲ್ಲಿ, ಭಾರತ-ಚೀನಾ ಯುದ್ಧ ಸಂದರ್ಭ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿದ ಡಿಎಂಕೆಯ ಅಣ್ಣಾದೊರೈ, ಕರುಣಾನಿಧಿ ಮತ್ತು ನೆಡುಂಚೆಳಿಯನ್‌ ಅವರನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿತ್ತು. ಮಾತ್ರವಲ್ಲ, ೧೯೫೩-೧೯೬೫ರ ಮಧ್ಯೆ ಕರುಣಾನಿಧಿ ಮತ್ತಿತರನ್ನು ೭ ಬಾರಿ ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು.

ಇಂಥ ಸರಣಿ ಬೆಳವಣಿಗೆಗಳು ಪಕ್ಷಕ್ಕೆ ನೈತಿಕ ವಿಜಯ ತಂದುಕೊಟ್ಟವು. ಮಾತ್ರವಲ್ಲ, ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದ ಸಿ ರಾಜಗೋಪಾಲಾಚಾರಿ ಅವರು ನೀಡಿದ ಪರೋಕ್ಷ ಬೆಂಬಲದಿಂದ ೧೯೬೨ರಲ್ಲಿ ೫೦ ಶಾಸಕ ಸ್ಥಾನ ಪಡೆದಿದ್ದ ಡಿಎಂಕೆ ೧೯೬೭ರ ಸಾರ್ವತ್ರಿಕ ಚುನಾವಣೆಯಲ್ಲಿ ಕೆ ಕಾಮರಾಜ್‌ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಹುಡಿಗಟ್ಟಿ,೧೫೦ ಸ್ಥಾನಗಳೊಂದಿಗೆ ಜಯಭೇರಿ ಭಾರಿಸಿತು. ಸಹಜವಾಗಿಯೇ ಅಣ್ಣಾದುರೈ ಅಧಿಕಾರದ ಚುಕ್ಕಾಣಿ ಹಿಡಿದರು. ದ್ರಾವಿಡ ಜನಾಂದೋಲನ ಕಟ್ಟಿ ರಾಜಕೀಯವಾಗಿಯೂ ಗೆದ್ದ ಅಣ್ಣಾದುರೈ ಅನಾರೋಗ್ಯಕ್ಕೆ ತುತ್ತಾಗಿ, ಎರಡು ವರ್ಷದಲ್ಲೇ ಮೃತಪಟ್ಟರು. ಈ ಮಧ್ಯೆ ಭಾಷಾವಾರು ಪ್ರಾಂತ್ಯ ರಚನೆಯ ಕಾರಣ ಮದರಾಸ್‌ ರಾಜ್ಯ 'ತಮಿಳುನಾಡು’ ಎಂದಾಗಿತ್ತು. ಅಣ್ಣಾ ನಿರ್ಗಮನದ ಬಳಿಕ ನೆಡುಂಚೆಳಿಯನ್‌ ಸಿಎಂ ಆದರಾದರೂ, ಅದು ೭ ದಿನಕ್ಕೆ ಸೀಮಿತವಾಯಿತು. ರಾಜಕೀಯ ವಿದ್ಯಮಾನಗಳ ಲಾಭ ಪಡೆದು ಕರುಣಾನಿಧಿ ಮುಖ್ಯಮಂತ್ರಿ ಗದ್ದುಗೆ ಏರಿದರು. ಪಕ್ಷದ ಆಶಯಗಳಿಗೆ ಬದ್ಧವಾಗಿ ಬಡವರಿಗೆ ೧ ರುಪಾಯಿಗೆ ಮೂರು ಅಳತೆ ಅಕ್ಕಿ ವಿತರಣೆ, ಬಡವರು, ಕೊಳಗೇರಿ ವಾಸಿಗಳಿಗೆ ಮನೆ ನಿರ್ಮಾಣ, ೭ ಸಾವಿರ ಭೂರಹಿತರಿಗೆ ೬೭ ಸಾವಿರ ಎಕರೆ ಭೂಮಿ ಹಂಚಿಕೆ, ರಾಷ್ಟ್ರೀಕೃತ ಸಾರಿಗೆ ವ್ಯವಸ್ಥೆಯಂತ ನಿರ್ಧಾರ ಕೈಗೊಂಡರು.

ಆದರೆ, ಈ ಸರ್ಕಾರದಲ್ಲಿ ಎಂಜಿಆರ್ ಬಯಕೆಗಳು ಈಡೇರಲಿಲ್ಲ. ಮಂತ್ರಿಯಾಗಬೇಕೆಂದಿದ್ದ ಅವರಿಗೆ, “ಸಂಪುಟ ಸೇರಬೇಕೆಂದರೆ ಸಿನಿಮಾದಲ್ಲಿ ಅಭಿನಯಿಸುವುದನ್ನು ತೊರೆಯಬೇಕು,’’ ಎಂದು ನಿಬಂಧನೆ ವಿಧಿಸಿದ್ದು ಕೋಪ ತರಿಸಿತು. ‘ಕರುಣಾ ಸರ್ವಾಧಿಕಾರಿ ಧೋರಣೆ’ ವಿರುದ್ಧ ಅಸಮಾಧಾನಗೊಂಡ ಎಂಜಿಆರ್, ಹಳೆಯ ಗೆಳೆಯನ ವಿರುದ್ಧ‌ ಭ್ರಷ್ಟಾಚಾರ ಆರೋಪ ಹೊರಿಸಿದರು. ಮಾತ್ರವಲ್ಲ, “ಕಾರ್ಮಿಕ ಸಂಘಟನೆಗಳನ್ನು ಡಿಎಂಕೆ ರಾಜಕೀಯ ಉದ್ದೇಶಕ್ಕೆ, ತಮಿಳ್ ಪಡೈಯನ್ನು ಶಾಂತಿ ಭಂಗಕ್ಕೆ ಬಳಸಿಕೊಳ್ಳುತ್ತಿದೆ, ಬರ ಪರಿಹಾರಕ್ಕೆಂದು ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಕರುಣಾನಿಧಿ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ. ಆದ್ದರಿಂದ ಈ ಸರ್ಕಾರವನ್ನು ವಜಾ ಮಾಡಿ,’’ ಎಂದು ಆಗ್ರಹಿಸಿ ರಾಷ್ಟ್ರಪತಿಗೆ ದೂರು ಸಲ್ಲಿಸಿದರು. ಇಬ್ಬರ‌ ಮಧ್ಯೆ ಬಿರುಕು ಹೆಚ್ಚಿತು. ಪಕ್ಷದಿಂದ ಹೊರದಬ್ಬಲ್ಪಟ್ಟ ಎಂಜಿಆರ್, ೧೯೭೨ರಲ್ಲಿ ‘ಅಣ್ಣಾ ಡಿಎಂಕೆ’ ಪಕ್ಷ ಸ್ಥಾಪಿಸಿದರು. ಇಲ್ಲಿಂದ ದ್ರಾವಿಡ ಚಳವಳಿ ಮಗ್ಗುಲು ಬದಲಿಸಿತು. ಸ್ವಾರ್ಥ ರಾಜಕಾರಣದ ಮೇಲಾಟ, ಪರಸ್ಪರರನ್ನು ರಾಜಕೀಯವಾಗಿ ಬಗ್ಗುಬಡಿಯುವ ಬಡಿದಾಟ ಆರಂಭವಾಯಿತು.

ಈ ಮಧ್ಯೆ, ೧೯೭೧ರ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಸಾಧಿಸಿದ್ದ ಕರುಣಾನಿಧಿ, ಅದಾದ ವರ್ಷದ ಬಳಿಕ ಸಂಬಂಧ ಮುರಿದುಕೊಂಡು, ಇಂದಿರಾ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಕದನಕ್ಕೆ ನಿಂತಿದ್ದರು. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ, “ರಾಜ್ಯಗಳು ಕೇಂದ್ರದ ಅಂಚೆಪೆಟ್ಟಿಗೆಗಳಲ್ಲ. ರಾಜ್ಯದ ಅಭಿವೃದ್ಧಿಗಾಗಿ ದೆಹಲಿಗೆ ಬಂದು ಭಿಕ್ಷೆ ಬೇಡಬೇಕಾದ್ದೂ ಇಲ್ಲ. ರಾಜ್ಯಗಳ ಅವಶ್ಯಕತೆಗಳನ್ನು ಗಮನಿಸಿ ಕೇಂದ್ರ ಸರ್ಕಾರ ಸಂಪನ್ಮೂಲ ಹಂಚಿಕೆ ಮಾಡಬೇಕು. ರಾಜ್ಯಗಳಿಗೆ ಅವುಗಳದ್ದೇ ಸ್ವಾಯತ್ತೆ ಇರಬೇಕು,’’ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದು ಮತ್ತು ತುರ್ತುಪರಿಸ್ಥಿತಿಯ ಆದೇಶವನ್ನು ಉಲ್ಲಂಘಿಸಿದ್ದರಿಂದ ಇಂದಿರಾ ನೇತೃತ್ವದ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. “ಸ್ವಾಯತ್ತೆಯ ಬೇಡಿಕೆ ಇಡುವವರು ದೇಶ ವಿಭಜಕರು,’’ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಇದಕ್ಕೆಲ್ಲ ಕರುಣಾ ಹಿಂಜರಿಯಲಿಲ್ಲ. “ನಾನು ದೇಶ ವಿಭಜನೆಯ ಪರ ಇಲ್ಲ. ಸ್ವಾಯತ್ತೆ ವಿರೋಧಿಸುವವರೇ ದೇಶ ವಿಭಜಕರು. ರಾಜ್ಯ ತನ್ನ ಅಗತ್ಯವನ್ನು ಮನಗಂಡು ಕಾರ್ಯೋನ್ಮುಖವಾಗಬೇಕು. ಕೇಂದ್ರ ಅದಕ್ಕೆ ಸಹಕಾರ ನೀಡಬೇಕೇ ಹೊರತು ಸಂಕೋಲೆಯಂತೆ ಆಗಬಾರದು,’’ ಎಂದು ಹಠಕ್ಕೆ ಬಿದ್ದವರಂತೆ ಪ್ರತಿಪಾದಿಸಿದರು.

ಇದರಿಂದ ಸಿಟ್ಟಿಗೆದ್ದಿದ್ದ ಇಂದಿರಾ ಸರ್ಕಾರ, ಕರುಣಾ ಮೇಲಿನ ಭ್ರಷ್ಟಾಚಾರ ಆರೋಪವನ್ನು ಅಸ್ತ್ರ ಮಾಡಿಕೊಂಡು ೧೯೭೬ರ ಜ.೩೧ರಂದು ತಮಿಳುನಾಡು ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಿತು. ಆ ಹೊತ್ತಿಗಾಗಲೇ ನಟ ಮತ್ತು ರಾಜಕಾರಣಿಯಾಗಿ ಪ್ರಕಾಶಿಸುತ್ತಿದ್ದ ಎಂಜಿಆರ್‌, ಒಂದೂವರೆ ವರ್ಷದ (೧೯೭೭ ಜೂ.೩೦) ರಾಷ್ಟ್ರಪತಿ ಆಳ್ವಿಕೆಯ ಅವಕಾಶ ಬಳಿಸಿಕೊಂಡು, ೧೯೭೭ರ ಚುನಾವಣೆಯಲ್ಲಿ ಡಿಎಂಕೆಯನ್ನು ಮಣಿಸಿ ಆಡಳಿತ ಸೂತ್ರ ಹಿಡಿದರು. ನ್ಯಾ.ಸರ್ಕಾರಿಯಾ ಆಯೋಗ ನಡೆಸಿದ ತನಿಖೆಯಲ್ಲಿ ಭ್ರಷ್ಟಾಚಾರ ಆರೋಪ ಸಾಭೀತಾಗಿ ಕರುಣಾನಿಧಿ ಶಿಕ್ಷೆಗೂ ಗುರಿಯಾದರು. ಆದರೆ, ರಾಜಕೀಯ ಮೇಲಾಟಗಳ ಕಾರಣ ೧೯೮೦ರಲ್ಲಿ ಮತ್ತೆ ರಾಷ್ಟ್ರಪತಿ ಆಡಳಿತ ಜಾರಿಯಾಯಿತು. ೧೧೩ ದಿನದ ಬಳಿಕ ಮತ್ತೆ ಎಂಜಿಆರ್‌ ಪಕ್ಷವೇ ಮರುಆಯ್ಕೆಯಾಯಿತು ಕೂಡ.

೧೯೮೭ರಲ್ಲಿ ಎಂಜಿಆರ್‌ ನಿಧನದ ಬಳಿಕ ನಾಯಕತ್ವದ ವಿಷಯದಲ್ಲಿ ಎಂಜಿಆರ್‌ ಪತ್ನಿ ಜಾನಕಿ ರಾಮಚಂದ್ರನ್‌ ಮತ್ತು ಆಪ್ತೆ,ನಟಿ ಜಯಲಲಿತಾ ಮಧ್ಯೆ ಮೇಲಾಟ ನಡೆಯಿತು. ಈ ಮಧ್ಯೆ ನೆಡುಂಚೆಳಿಯನ್‌ ೮ ದಿನ, ಜಾನಕಿ ೨೩ ದಿನ ಅಧಿಕಾರ ನಡೆಸಿದರಾದರೂ ರಾಜಕೀಯ ಅಸ್ಥಿರತೆಯ ಕಾರಣಕ್ಕೆ ಮತ್ತೆ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಲಾಯಿತು. ೩೬೩ ದಿನದ ಬಳಿಕ ಕರುಣಾನಿಧಿ ಪಕ್ಷ (೧೯೮೯) ಅಧಿಕಾರಕ್ಕೆ ಬಂದದ್ದು, ಎರಡೂ ಪಕ್ಷಗಳ ಮಧ್ಯೆ ‘ದಾಯಾದಿ ಕಲಹ’ ತಾರಕಕ್ಕೇರಿದ್ದು, ಆಡಳಿತ ಪಕ್ಷದ ಸದಸ್ಯರಿಂದ ಸದನದಲ್ಲಿ ಅವಮಾನಿತರಾದ ಜಯಲಲಿತಾ, "ಮುಖ್ಯಮಂತ್ರಿಯಾಗಿಯೆ ಸದನಕ್ಕೆ ಬರುವೆ,” ಎಂದು ಹಠ ತೊಟ್ಟು ಹೊರ ನಡೆದದ್ದು, ಅವರ ಶಪಥಕ್ಕೆ ಪೂರಕವಾಗಿ ೧೯೯೧ರಲ್ಲಿ ಮತ್ತೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದು, ಬಳಿಕ ನಡೆದ ಚುನಾವಣೆಯಲ್ಲಿ ಜಯಾ ಭರ್ಜರಿ ಗೆಲುವು ದಕ್ಕಿಸಿಕೊಂಡು, ಸಿಎಂ ಆಗಿಯೇ ಶಾಸನಸಭೆ ಪ್ರವೇಶಿಸಿದ್ದು ಎಲ್ಲವೂ ಸಿನಿಮೀಯ ರೀತಿಯಲ್ಲಿ ನಡೆದುಹೋದವು.

ಆದರೆ, ಆಗಿನ್ನೂ ಚಿಕ್ಕ ಪ್ರಾಯದ ಜಯಾ ಮುಖ್ಯಮಂತ್ರಿಯಾಗಿ ಹಲವು ಎಡವಟ್ಟುಗಳನ್ನು ಎಸಗಿ ಭ್ರಷ್ಟಾಚಾರದ ಕುಣಿಕೆಗೆ ಸಿಲುಕಿದರು. ದತ್ತುಪುತ್ರನ ವೈಭವ ವಿವಾಹದ ಮೂಲಕ ಸಾರ್ವಜನಿಕವಾಗಿ ಪ್ರದರ್ಶಿಸಿದ ಸಂಪತ್ತಿನ ಪ್ರದರ್ಶನ ಜನರ ಕಣ್ಣು ಕುಕ್ಕುವಂತೆ ಮಾಡಿತು. ಮೊದಲ ಐದು ವರ್ಷ ಪೂರೈಸುವುದರೊಳಗೆ ನಡೆಸಿದ ಹಲವು ಹಗರಣಗಳು ನಿರಂತರ ಬೆನ್ನಿಗೆ ಬಿದ್ದವು. ಇದೆಲ್ಲ ಮತ್ತೊಮ್ಮೆ ತಮಿಳುನಾಡಿನ ಜನರ ಡಿಎಂಕೆಯತ್ತ ಹೊರಳಲು ಕಾರಣವಾಯಿತು. ೧೯೯೬ರಲ್ಲಿ ಅಧಿಕಾರಕ್ಕೆ ಮರಳಿದ ಕರುಣಾನಿಧಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಜಯಾ ಮೇಲೆ ಮೊಕದ್ದಮೆ ಹೂಡಿ ಜೈಲಿಗೆ ಅಟ್ಟಿದರು. ಮತ್ತೊಂದು ಚುನಾವಣೆಯಲ್ಲಿ ಗೆದ್ದ ಜಯಾ ಕರುಣಾನಿಧಿ ಮೇಲೆ ಪ್ರತಿಕಾರ ಕೈಗೊಂಡರು.

ಇದರಿಂದಾಗಿ ಹಲವು ನೆಲೆಯ ಚಳವಳಿ ಮತ್ತು ಅವುಗಳ ಘನ ಆಶಯಗಳ ಜಾಗದಲ್ಲಿ ಅಧಿಕಾರದ ಮೇಲಾಟ, ವೈರ ಸಾಧನೆ, ಅಕ್ರಮ ಸಂಪತ್ತಿನ ಪ್ರದರ್ಶನ, ಸ್ವಜನ ಪಕ್ಷಪಾತ, ಡೊಗ್ಗು ಸಲಾಮು ಹೊಡೆಯುವ ೨ನೇ ಹಂತದ ನಾಯಕರ ದಯನೀಯ ಸ್ಥಿತಿಗಳು ವಿಜೃಂಭಿಸತೊಡಗಿದವು, ತಮಿಳುನಾಡು ರಾಜಕಾರಣ ದೇಶದ ಮುಂದೆ ‘ದಿವಾಳಿ’ ಮತ್ತು ಅಸ್ಥಿರ ಸ್ಥಿತಿಯಲ್ಲಿ ಅನಾವರಣಗೊಳ್ಳುವುದು ಹೆಚ್ಚಿತು. ಕರುಣಾನಿಧಿ-ಜಯಲಲಿತಾ ಮಧ್ಯದ ಹಾವು-ಮುಂಗುಸಿಯಂಥ ಸೆಣಸಾಟ ಎರಡು ಪಕ್ಷಗಳಲ್ಲಿ ಗಂಭೀರ ಗಾಯಗಳನ್ನು ಮೂಡಿಸಿದ್ದಷ್ಟೆ ಅಲ್ಲ, ರಾಜ್ಯದ ಹಿತವನ್ನು ಹಿಂದಕ್ಕೆ ತಳ್ಳಿದ್ದೂ ಹೌದು.

ಪರಿಣಾಮ, ಚಳವಳಿಯ ಬಲದಲ್ಲಿ ಜನಮಾನಸವನ್ನು ಗೆದ್ದು, ಅಧಿಕಾರ ಹಿಡಿದ ಪಕ್ಷಗಳು ಅದೇ ಜನಕ್ಕೆ ಉದಾರ ಯೋಜನೆ, ಉಡುಗೊರೆ ನೀಡಿ ಮತಬ್ಯಾಂಕ್‌ ಕಾಯ್ದಿಟ್ಟು ಕೊಳ್ಳುವ ಸ್ಥಿತಿಗೆ ಜಾರಿದವು. ವೈಚಾರಿಕ, ಸೈದ್ಧಾಂತಿಕ ನೆಲೆಯ ರಾಜಕಾರಣವು ಕ್ರಮೇಣ ಸಿನಿತಾರೆಯರನ್ನು ದೈವದಂತೆ ಆರಾಧಿಸುವ ಹುಚ್ಚಿಗೆ, ಭಾವುಕ ಪ್ರವೃತ್ತಿಗೆ ಒಡ್ಡಿಕೊಂಡಿತು. ಹಿಂದಿ ಭಾಷಾ ಚಳವಳಿ ಕಾರಣಕ್ಕೆ ೩೦ಕ್ಕೂ ಹೆಚ್ಚು ಮಂದಿ ಪೊಲೀಸರ ಗುಂಡಿಗೆ ಬಲಿಯಾದ ಕೆಚ್ಚಿನ ನೆಲದಲ್ಲಿ, ಎಂಜಿಆರ್‌ ನಿಧನಾ ನಂತರ ೨೯ ಜನ ಪ್ರಾಣ ತೆತ್ತದ್ದು, ೨೦೧೬ರ ಡಿಸೆಂಬರ್‌ನಲ್ಲಿ ಜಯಾ ನಿಧನರಾದ ಬಳಿಕ ಜನ ಸರಣಿ ಆತ್ಮಹತ್ಯೆಯಂಥ ಭಾವುಕ ಅತಿಗೆ ಒಡ್ಡಿಕೊಂಡಿದ್ದು, ಈಗ, ಕರುಣಾನಿಧಿ ನಿರ್ಗಮನಕ್ಕೆ ಮೊದಲು ಮತ್ತು ನಂತರ ಸಾವಿನ ಸರಣಿಯ ತಳಮಳ ಹೆಚ್ಚಿದ್ದು ಈ ಮಾತಿಗೆ ಕಟು ನಿದರ್ಶನ.

ಇದನ್ನೆಲ್ಲ ನೋಡಿದರೆ, ದ್ರಾವಿಡ ಚಳವಳಿಗೆ ಶಕ್ತಿ ತುಂಬಿದ್ದ ಪೆರಿಯಾರ್‌ ಶುರುವಿನಲ್ಲೇ ನೀಡಿದ್ದ, “ರಾಜಕೀಯಕ್ಕೆ ಇಳಿದರೆ ಸೈದ್ಧಾಂತಿಕ ನಿಲುವುಗಳಿಗೆ ಹಿನ್ನಡೆಯಾಗುತ್ತದೆ,’’ ಎನ್ನುವ ಎಚ್ಚರಿಕೆಯ ಮಾತು ಹೆಚ್ಚೇ ನಿಜವಾದಂತೆ ತೋರುತ್ತದೆ. ಅದೇನಿದ್ದರೂ, ರಾಜ್ಯದ ಹಿತಾಸಕ್ತಿ ಕಾಯ್ದುಕೊಳ್ಳುವ ವಿಷಯದಲ್ಲಿ ಡಿಎಂಕೆ, ಅಣ್ಣಾ ಡಿಎಂಕೆ ಪಕ್ಷದ ನಾಯಕರು ಯಾವತ್ತೂ ಹಿಂಜರಿದವರಲ್ಲ. ಅಂಧಾಭಿಮಾನ ಎನ್ನಿಸಿದರೂ ಮಾತೃಭಾಷೆ ವಿಷಯದಲ್ಲಿ ತಮಿಳರು ತೋರಿಸುವ ಬದ್ಧತೆಗೆ ಅವರೇ ಸಾಟಿ. ಇದೆಲ್ಲಕ್ಕೂ ದ್ರಾವಿಡ ಚಳವಳಿ ಕಡೆದು ನಿಲ್ಲಿಸಿದ ಜಾಗೃತ ಹೋರಾಟವೇ ಪ್ರೇರಣೆ. ಬದಲಾದ ರಾಜಕೀಯ ಸಂದರ್ಭದಲ್ಲಿ ಕಾಲಕ್ಕೆ ತಕ್ಕಂತೆ ಎರಡೂ ಪಕ್ಷಗಳು ಯುಪಿಎ, ಎನ್‌ಡಿಎ ಮೈತ್ರಿಕೂಟದ ಪಾಲುದಾರರಾದರೂ ರಾಜ್ಯ ಹಿತದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಕೆಲವು ನಿರ್ಣಾಯಕ ಸಂದರ್ಭಗಳಲ್ಲಿ ಮೈತ್ರಿನಿಷ್ಠೆ ಬದಲಿಸಿ, ರಾಷ್ಟ್ರೀಯ ಪಕ್ಷಗಳೇ ಮಂಡಿಯೂರುವಂತೆ ಮಾಡಿದ ಮತ್ತು ಕೇಂದ್ರ ಸರ್ಕಾರವನ್ನು ಜಗ್ಗಿ, ಬಗ್ಗಿಸಿ ರಾಜ್ಯದ ಕೆಲಸ ಮಾಡಿಸಿಕೊಂಡ ಉದಾಹರಣೆಗಳೂ ಇವೆ. ಈ ಕಾರಣಕ್ಕಾಗಿಯೇ, ‘ರಾಷ್ಟ್ರಪತಿ ಆಡಳಿತ ಹೇರಿಕೆ’ಯ ಅವಕಾಶ ಅಥವಾ ಅಡ್ಡಮಾರ್ಗದ ಹೊರತು ಕಳೆದ ಐದು ದಶಕಗಳಿಂದ ರಾಷ್ಟ್ರೀಯ ಪಕ್ಷಗಳು ಇಲ್ಲಿ ಸೊಲ್ಲೆತ್ತುವುದು, ನೆಲೆ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ.

ಇದನ್ನೂ ಓದಿ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಲೈನಾರ್‌ ಕರುಣಾನಿಧಿ ಇನ್ನಿಲ್ಲ

ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಸ್ಥಿತಿ ಬದಲಾಗುವ ಸೂಚನೆ ಗೋಚರಿಸುತ್ತಿದೆ. ಒಂದೂವರೆ ವರ್ಷದ ಹಿಂದೆ ಅಣ್ಣಾ ಡಿಎಂಕೆ ಅಗ್ರನಾಯಕಿ ಜಯಾ ನಿಧನರಾದಾಗ ಆ ಪಕ್ಷದಲ್ಲಿ ಉದ್ಭವಿಸಿದ್ದ ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ರಾಷ್ಟ್ರೀಯ ಪಕ್ಷ ಬಿಜೆಪಿ ಹವಣಿಸಿದ್ದು, ಏನೆಲ್ಲ ತಂತ್ರ ಹೂಡಿದ್ದು ಎದ್ದುಕಂಡಿತ್ತು. ದ್ರಾವಿಡ ಚಳವಳಿ ರಾಜಕಾರಣದ ಕೊನೆಯ ಕೊಂಡಿಯಾಗಿದ್ದ ಕರುಣಾನಿಧಿ ನಿರ್ಗಮನದ ಬಳಿಕ ಡಿಎಂಕೆಯಲ್ಲೂ ಈಗ ಅಂಥದೇ ಅಸ್ಥಿರತೆ ಕಾಣತೊಡಗಿದೆ. ಕರುಣಾನಿಧಿ ದೀರ್ಘಕಾಲದಿಂದ ಗಾಲಿ ಕುರ್ಚಿಗೆ ಸೀಮಿತರಾಗಿದ್ದರೂ, ಕುಟುಂಬ ಕೇಂದ್ರಿತ ಪಕ್ಷ ಮತ್ತು ಮನೆಯೊಂದು-ಹಲವು ಬಾಗಿಲು ಎನ್ನುವ ಸ್ಥಿತಿಯಲ್ಲಿರುವ ಕುಟುಂಬದ ಪಾಲಿಗೆ ಬೆಸುಗೆಯಂತಿದ್ದರು. ಅವರ ಇರುವಿಕೆ ಇನ್ನಿಲ್ಲ ಎನ್ನುವುದು ಪಕ್ಷ, ಕುಟುಂಬಕ್ಕಷ್ಟೆ ಅಲ್ಲ, ದ್ರಾವಿಡ ರಾಜಕಾರಣದ ಅಳಿದುಳಿದ ಭವಿಷ್ಯದ ದೃಷ್ಟಿಯಲ್ಲೂ ಭರಿಸಲಾಗದ ನಿರ್ವಾತ ಸ್ಥಿತಿಯನ್ನು ಮೂಡಿಸಿದೆ.

ಎರಡು ರಾಷ್ಟ್ರೀಯ ಪಕ್ಷಗಳು ತಮಿಳುನಾಡು ರಾಜಕೀಯ ಬೆಳವಣಿಗೆಗಳನ್ನು ಹದ್ದುಗಣ್ಣು ನೆಟ್ಟು ನೋಡುತ್ತಿವೆ. ಎಲ್ಲಿಯೇ ಬಿರುಕು ಮೂಡಿದರೂ, ಆ ಸಂದಿಯಲ್ಲಿ ತೂರಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆನ್ನುವುದು ಅವುಗಳ ಹಂಬಲ. ಈ ಮಧ್ಯೆ, ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಕೇಂದ್ರದ ಪ್ರಯತ್ನ ಮತ್ತೊಮ್ಮೆ ಆರಂಭವಾಗಿದೆ. ರಜನೀಕಾಂತ್‌, ವಿಜಯಕಾಂತ್‌, ಕಮಲ್ ಹಾಸನ್‌ ಮುಂತಾದ ಸಿನಿತಾರೆಯರು ರಾಜ್ಯದ ರಾಜಕೀಯ ಭವಿಷ್ಯ ಕಟ್ಟಲು ತಮ್ಮದೇ ನೆಲೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಈ ಯಾರದಾದರು ಮೂಲಕ ದ್ರಾವಿಡ ಚಳವಳಿಯ ಆಶಯ ತಮಿಳುನಾಡಿನಲ್ಲಿ ತುಸುವಾದರೂ ಮುಂದುವರಿಯಬಹುದೇ ಅಥವಾ ರಾಷ್ಟ್ರೀಯ ಪಕ್ಷಗಳು ಈ ಎಲ್ಲರನ್ನೂ ಮತ್ತು ಎಲ್ಲವನ್ನೂ ಆಪೋಶನಗೈದು, ಅಲ್ಲಿನ ೫ ದಶಕದ ರಾಜಕೀಯ ವ್ಯಾಕರಣವನ್ನೇ ಬದಲಿಸಿಬಿಡುತ್ತವೆಯೇ ಎನ್ನುವ ಪ್ರಶ್ನೆ ಮೂಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More