ಶ್ರೀರಾಮುಲು ಸೀಕ್ರೆಟ್ ಡೈರಿ | ಪ್ರತ್ಯೇಕ ರಾಜ್ಯ ಕಟ್ಟಿ ಆಳೋಣ ಅಂದ್ಕಂಡಿದ್ದೆ!

ಯಡಿಯೂರಪ್ಪನವರ ಜೊತೆ ಇದ್ರೆ ನನ್ನ ಆಸೆಗಳು ಇಡೇರೋದಿಲ್ಲ ಅನ್ನೋದು ಪಕ್ಕಾ ಆಗಿದೆ. ಅಂದ್ರಗಿನ ಬಿಜೆಪಿಯವರು ನಮ್ಮನ್ನ ನೀರಲ್ಲಿ ಬೀಸೋ ಬಲೆ ಮಾಡ್ಕೊಂಡ್ ಬಿಟ್ಟಿದಾರೆ; ಇವತ್ತಿನ ದಿನ ಕೆರೆಯಲ್ಲಿ ಮೀನು ಹಿಡಿವಾಗ ಮಾತ್ರ ಉಪಯೋಗ ಮಾಡ್ಕೋಳ್ತಾರೆ, ನಂತ್ರ ಕಾಲಕಸ ಮಾಡಿಬಿಡ್ತಾರೆ!

ಅಂದ್ರಗಿನ, ಇವತ್ತಿನ ದಿನ ಈ ನಮ್ಮ ಉತ್ತರ ಕರ್ನಾಟಕ ರಾಜ್ಯದ ಪ್ಲಾನ್ ಏನಿದೆ ಇದ್ರಲ್ಲಿ ಒಟ್ಟು ೦೬ ಹೊಸ ಜಿಲ್ಲೆಗಳು, ೧೬ ಹೊಸ ತಾಲೂಕುಗಳು, ೨ ಹೊಸ ವಿಶ್ವವಿದ್ಯಾಲಯಗಳು ಇರಲಿವೆ, ಹಂಗೆ ೨೦ ಹೊಸ ಮೈನಿಂಗ್‌ ಲೈಸೆನ್ಸ್‌ ಕೊಡಿಸ್ತೀವಿ. ಇದ್ರಲ್ಲಿ ಐದು ಚಿತ್ರದುರ್ಗಕ್ಕೆ ಉಳಿದ ಹದಿನೈದು ನಮ್ಗೆ, ಅಂದ್ರೆ ಬಳ್ಳಾರಿಗೆ ಇನ್ನ ೨೦೦೦ ಬಾರ್‌ ಲೈಸೆನ್ಸ್‌ ಕೊಡ್ತೀವಿ, ಇದರಲ್ಲಿ ಬಳ್ಳಾರಿಗೆ ೫೦೦ ಇರಲಿ. ಕಾರವಾರ ಮತ್ತು ವಿಜಯಪುರದಲ್ಲಿ ಒಂದೊಂದು ಗೋಶಾಲೆ ಮಾಡ್ತೀವಿ. ನಾವು ಹಿಂದೂಗಳು ಅಂತ ತೋರಸ್ಕೊಳ್ಳಗೆ ಇವೆಲ್ಲ ಬೇಕಾಗ್ತಾವೆ. ಹುಬ್ಬಳ್ಳಿಯನ್ನ ಬೆಂಗಳೂರು ಮಾಡ್ತೀನಿ. ಧಾರವಾಡವನ್ನ ಶಿವಮೊಗ್ಗ ಮಾಡ್ತೀನಿ. ಬೆಳಗಾವಿ ಎರಡನೇ ರಾಜಧಾನಿ ಮಾಡ್ತೀನಿ. ಬಳ್ಳಾರಿನ ಮೊದಲನೇ ರಾಜಧಾನಿ ಮಾಡ್ತೀನಿ. ಅಂದ್ರಗಿನ ಇದು ಪ್ರತ್ಯೇಕ ಉತ್ತರ ಕರ್ನಾಟಕದ ಹೊಸ ರೂಪ.

ಇವತ್ತಿನ ದಿವಸ ಏನಿದೆಯಂದ್ರೆ, ಯಡಿಯೂರಪ್ಪನವರ ಜೊತೆ ಇದ್ರೆ ನನ್ನ ಆಸೆಗಳು ಇವತ್ತಿನ ದಿನ ಇಡೇರೋದಿಲ್ಲ ಅನ್ನೋದು ಪಕ್ಕಾ ಆಗಿದೆ. ಅಂದ್ರಗಿನ, ಬಿಜೆಪಿಯವರು ನಮ್ಮನ್ನ ನೀರಲ್ಲಿ ಬೀಸೋ ಬಲೆ ಮಾಡ್ಕೊಂಡ್ ಬಿಟ್ಟಿದಾರೆ. ಇವತ್ತಿನ ದಿನ ಕೆರೆಯಲ್ಲಿ ಮೀನು ಹಿಡಿವಾಗ ಮಾತ್ರ ನಮ್ಮನ್ನ ಉಪಯೋಗ ಮಾಡ್ಕೋಳ್ತಾರೆ. ನಂತ್ರ ಕಾಲಕಸ ಮಾಡಿಬಿಡ್ತಾರೆ. ನಾವು ಎಷ್ಟು ದಿನ ಇವರ ಕೈನಲ್ಲಿ ಬಲೆಯಾಗಿರೋದು? ಅದಕ್ಕಾಗಿ ನನ್ನದೇ ಒಂದು ಹಡಗಿನ ಸಾಮ್ರಾಜ್ಯ ರೆಡಿ ಮಾಡ್ತಾ ಇದೀನಿ. ಆ ಹಡಗಿಗೆ ನಾನಿಟ್ಟಿರುವ ಹೆಸರು ‘ಪ್ರತ್ಯೇಕ ಉತ್ತರ ಕರ್ನಾಟಕ ಬಾಹುಬಲಿ ಸಾಮ್ರಾಜ್ಯ’ ಅಂತ.

ನಮ್ ಹಡಗಿನಲ್ಲಿ ನಾನೇ ರಾಜ (ಮುಖ್ಯಮಂತ್ರಿ), ನಮ್‌ ಬಾಸೇ‌ ರಾಜಾಧಿರಾಜ. ರಾಜ್ಯದಲ್ಲಿ ಒಂದು ಮಣ್ಣಿನ ಹೆಂಡಿ ಕೂಡ ಮಾತ್ನಾಡ್ಬೇಕಂದ್ರೆ ನಮ್ ಬಾಸ್ ಪರ್ಮಿಷನ್ ತಗೋಬೇಕು. ಈ ಪ್ರತ್ಯೇಕ ಸಾಮ್ರಾಜ್ಯಕ್ಕೆ ನಾನು ಸುಪ್ರೀಮು, ನಮ್‌ ಬಾಸು ಸೂಪರ್ ಸುಪ್ರೀಮು. ಇನ್ನ ಮಿಕ್ಕಿದ್ದು ನಮ್ಮ ಅಮ್ಮ ಸುಷ್ಮಾ ಸ್ವರಾಜ್‌ ಅವರು ರಾಜ್ಯಕ್ಕೆ ರಾಜ್ಯಪಾಲರಾಗಿ ಬಂದ್‌ ಬಿಡ್ಲಿ. ಅಮ್ಮನ್ನ ನಾವು ಚನ್ನಾಗಿ ನೋಡ್ಕೊಂಡು ಇರ್ತೇವೆ.

ಇಷ್ಟೆಲ್ಲ ನಾ ಅಂದ್ಕೊಂಡಂಗೆ ಆಗ್ಲೇಬೇಕೆಂದ್ರೆ ಹೇಗಾದ್ರು ಮಾಡಿ ಉತ್ತರ ಕರ್ನಾಟಕವನ್ನ ಪ್ರತ್ಯೇಕ ಮಾಡ್ಲೇಬೇಕು. ಹೀಗಂತ ಅಂದ್ಕೊಂಡು ಕುಮಾರಸ್ವಾಮಿ ಹೇಳಿದ ಒಂದೇ ಒಂದು ಮಾತನ್ನ ಗಟ್ಟಿಯಾಗಿ ಹಿಡ್ಕೊಂಡು ಮೈಕೊಡವಿ ಎದ್ದುನಿಂತಿದ್ದೆ. ನಾನು ಪ್ರತ್ಯೇಕ ಉತ್ತರ ಕರ್ನಾಟಕ ಬಗ್ಗೆ ಮಾತ್ನಾಡಿದಾಗ ನಮ್ಮವರೆಲ್ಲ ಸುಮ್ಕೆ ಇದ್ರು. ಆದ್ರೆ ಈ ಶೋಭಕ್ಕ ಸುಮ್ಮನಿರ್ಲಿಲ್ಲ. ಇವತ್ತಿನ ದಿನ ನಮ್ಮ ಬಿಜೆಪಿ ಪಕ್ಷದಲ್ಲಿ ಏನಾಗಿದೆ ಅಂದ್ರೆ, ಈ ಶೋಭಕ್ಕ ಬಿಸಿತುಪ್ಪ ಇದ್ದಂಗೆ ಆಗಿದೆ. ಇವತ್ತಿನ ದಿನ ಆ ತುಪ್ಪವನ್ನು ನುಂಗಕ್ಕು ಕಷ್ಟ, ಉಗಳಕ್ಕು ಇಷ್ಟವಿಲ್ಲ ಅನ್ನೋಹಂಗೆ. ಹೀಗಾಗಿ, ಇವತ್ತಿನ ದಿನ ನಾವೆಲ್ಲ ಅವರನ್ನ ಸಹಿಸಿಕೊಂಡು ಇದೀವಿ. ಶೋಭಕ್ಕ ಮಾತ್ನಾಡಿದ್ಮೇಲೆ ನಮ್ಮ ಅಪ್ಪನವರು ಸುಮ್ನೇ ಕೂರ್ತಾರಾ? ಅವರೂ ಶುರುಹಚ್ಕೊಂಡ್‌ಬಿಟ್ರು. ಅವರ ಹಿಂದೆ ಕುರಿ ಬ್ಯಾ ಅಂದಂಗೆ ಇನ್ನೊಂದಿಷ್ಟು ಜನ ಬ್ಯಾ ಬ್ಯಾ ಅಂದ್ರು. ಅವಾಗ್ ನಾನು ಬಾಯಿ ಮುಚ್ಕೊಂಡ್ ಅಂದ್ರಗಿನ ಸುಮ್ಕಾಬೇಕಾತು.

ನನ್ನ ಪ್ಲಾನ್ ನನಗೇ ಉಲ್ಟಾ ಆಯ್ತು. ನನ್ನ ಪಕ್ಷದವರು ನನ್ನನ್ನ ಮದುಮಗನ ಮೆರವಣಿಗೆಯಲ್ಲಿ ಸಾರೋಟ ಮಾಡಿಬಿಟ್ರು. ಈ ವಿಚಾರ ತಗೊಂಡು ಎಲ್ರು ನನ್ನ ಮಾತಲ್ಲೇ ತುಳಿದುಬಿಟ್ರು. ಮೊನ್ನೆ ಬಂದ್‌ ಮಾಡುವಾಗ್ಲು ಹೇಗಾದ್ರು ಮಾಡಿ ಕಾಣಿಸ್ಕೊಳ್ಳೋಣ ಅಂದ್ರೆ, ಯಡಿಯೂರಪ್ಪನವರು ನಂಗೆ ಲಕ್ಷ್ಮಣರೇಖೆ ಹಾಕಿ ಈ ಗೆರೆ ದಾಟ್ಬೇಡ ಅಂತ ಹೇಳಿಬಿಟ್ರು.

ಅಂದ್ರಗಿನ, ಹಂಗಿದ್ರೆ ನಾನು ಮುಖ್ಯಮಂತ್ರಿ ಆಗೋದು ಯಾವಾಗ? ನಮ್ಮ ಬಾಸ್‌ ರಾಜಾಧಿರಾಜ ಆಗೋದು ಯಾವಾಗ? ನನ್ನ ಕನಸಿನ ಸಾಮ್ರಾಜ್ಯವನ್ನ ನಾನು ಕಟ್ಟೋದು ಯಾವಾಗ? ಇದ್ದಿರೋ ಇದೊಂದು ಪ್ಲಾನು ಫ್ಲಾಪ್‌ ಆದಂಗಾಯ್ತು. ಮುಂದೇನ್ ಮಾಡೋದು. ನಮ್ ಬಾಸ್‌ ಕೇಳೋಣ ಅಂದ್ರೆ ಅವ್ರು ಮಾತೆತ್ತಿದ್ರೆ ಲಿಂಗ ಪೂಜೆ ಮಾಡ್ತೀದಿನಿ ಅಂತಿದಾರೆ. ಅದೇನೂ ಗೊತ್ತಿಲ್ಲ ನಮ್ ಅಮಿತ್ ಶಾ ಸಾಹೇಬ್ರು ಕಾಲ್‌ ಮಾಡಿದ್ರೆ ಪಿಕ್ ಮಾಡ್ತಾನೇ ಇಲ್ಲ. `ಶಾಜೀ ಪ್ಲೀಸ್‌ ಮೇರೆ ಕಾಲ್‌ ಪಿಕ್‌ ಕರೋ’ ಅಂತ ಮೇಸೆಜ್ ಹಾಕಿದ್ರೆ, `ಬೆಟಾ ಪಿಎಂ ಸಾಬ್‌ ಕೇ ಸಾಥ್ ಬಹುತ್ ಟೆನ್‌ಷನ್‌ ಮೇ ಹೂಂ, ಹಮ್ ಬಾದ್‌ ಮೇ ಬಾತ್ ಕರೂಗಾ’ ಅಂತ ರಿಪ್ಲೈ ಮಾಡ್ತಾರೆ.

ಇದೆಲ್ಲ ನೋಡಿ ತಲೆ ಕೆಟ್ಟು ರಾಹುಲ್ ಗಾಂಧಿಗೇನೇ ಕಾಲ್ ಮಾಡಿ ಬಿಡ್ಲಾ ಅಂತ ಅನಸುತ್ತೆ. ಆದ್ರೆ ಏನ್ ಮಾಡೋದು ನನ್ ಹತ್ರ ಅವರ ನಂಬರ್ ಇಲ್ಲ. ಯಾರನ್ನಾದ್ರು ಕೇಳಿ ನಂಬರ್ ಇಸ್ಕೊಳ್ಳೋಣ ಅಂದ್ರೆ ಕಾಲ್ ರೆಕಾರ್ಡಿಂಗ್‌ದೊಂದು ಭಯ. ನಾನು ನಂಬರ್‌ ಕೇಳಿದ್ದನ್ ರೆಕಾರ್ಡ್‌ ಮಾಡಿ ನ್ಯೂಸ್‌‌ ಚಾನಲ್‌ನವರಿಗೆ ಕೊಟ್ರೆ ಅಷ್ಟೆ ಕಥೆ. ನಾನು ನಂಬರ್ ತಗೊಂಡು ಅವರೊಟ್ಟಿಗೆ ಏನ್‌ ಮಾತ್ನಾಡ್ತಿದ್ದೆ ಅನ್ನೋದನ್ನ ಪ್ರೆಡಿಕ್ಟ್ ಮಾಡೀನೇ ಸುದ್ದಿ ಕೊಟ್‌ ಬಿಡ್ತಾರೆ.

ಒಟ್ನಲ್ಲಿ ಏನಂದ್ರೆ ಇವತ್ತಿನ ದಿವಸ ಕರ್ನಾಟಕ ಅಖಂಡವಾಗಿರೋವರೆಗೂ ಮತ್ತು ನಮ್ಮ ಯಡಿಯೂರಪ್ಪನವರು ಪಕ್ಷದ ಮುಂದಾಳತ್ವ ವಹಿಸಿರೋವರೆಗೂ ನನ್ನ ಯಾವ ದೊಡ್ಡ ಕನಸೂ ಇಡೇರೋದಿಲ್ಲ. ಹಂಗಂತ ಸುಮ್ನೆ ಕೂರೋದಿಲ್ಲ ನಾನು ನಿರಂತರ ಪ್ರಯತ್ನ ಮಡ್ತಾನೇ ಇರ್ತೇನೆ. ಇವಾಗ್ ಲಕ್ಷ್ಮೇಶ್ವರಕ್ಕೆ ಹೋಗಿ, ಬಾಲೆಹೋಸುರು ದಿಂಗಾಲೇಶ್ವರ ಸ್ವಾಮಿಗಳ ಕಾಲಿಗೆ ಬಿದ್ದು ಆಶೀರ್ವಾದ ತಗೊಂಡು ಬರ್ತೇನೆ. ಯಾಕಂದ್ರೆ ನನ್ನ ಆಸೆ ಅಭಿಲಾಸೆಗೆ ಗಟ್ಟಿಯಾಗಿ ಬೆಂಬಲಕ್ಕೆ ನಿಂತದ್ದು ಅವರೊಬ್ಬರೆ!!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More