ಗೌಡರ ತಂತ್ರಕ್ಕೆ ಮಣಿದು ದಳಪತಿಯಾದ ವಿಶ್ವನಾಥ್‌ ಮುಂದಿರುವ ಸವಾಲುಗಳೇನು? 

ಸ್ಥಳೀಯ ಸಂಸ್ಥೆ ಮತ್ತು ಸಂಸತ್ ಚುನಾವಣೆಗಳು ಹೊಸ್ತಿಲಲ್ಲಿರುವಾಗ ಜೆಡಿಎಸ್ ವರಿಷ್ಠರು ರಾಜ್ಯಾಧ್ಯಕ್ಷ ಹುದ್ದೆಗೆ ಎಚ್‌ ವಿಶ್ವನಾಥರನ್ನು ನೇಮಿಸಿದ್ದಾರೆ. ಗೌಡರ ಕುಟುಂಬದ ಹಲವು ಶಕ್ತಿಕೇಂದ್ರಗಳನ್ನು ನಿಭಾಯಿಸುವುದು, ಮೈತ್ರಿ ಬಾಂಧವ್ಯ ಕಾಯ್ದುಕೊಳ್ಳುವುದು ಸಹಿತ ಹಲವು ಸವಾಲುಗಳು ಅವರ ಮುಂದಿವೆ

ಮಾಜಿ ಸಚಿವ, ಹಿರಿಯ ರಾಜಕಾರಣಿ ಅಡಗೂರು ಎಚ್‌ ವಿಶ್ವನಾಥ್‌ ಅವರ ಕುರಿತು ಎರಡು ಜನಜನಿತ ಮಾತುಗಳಿವೆ. ಒಂದು: ನೇರ, ನಿಷ್ಠೂರವಾದಿ, ಯಾರ ಮುಲಾಜನ್ನೂ ನೋಡದೆ ತಮಗನಿಸಿದ್ದನ್ನು ಮಾಡಲು ಮುಂದಾಗುತ್ತಾರೆ. ಎರಡು: ವಿಶ್ವನಾಥರಿಗೆ ಅವರ ನಾಲಗೆಯೇ ಶತ್ರು. ಪರಿಣಾಮಗಳ ಅರಿವಿದ್ದರೂ ಅನಿಸಿದ್ದನ್ನು ಆಡಿ, ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.

ನಾಲ್ಕೈದು ವರ್ಷದ ಹಿಂದಿನವರೆಗೆ ವಿಶ್ವನಾಥ್‌ ಇದ್ದದ್ದು ಹೀಗೆಯೇ. ಹೀಗಿದ್ದ ಕಾರಣಕ್ಕೇ ರಾಜಕೀಯವಾಗಿ ದುಬಾರಿ ಬೆಲೆಯನ್ನು ತೆತ್ತಿದ್ದಾರೆ. ಅವರು ಶಾಸಕರಾಗಿ ಹಲವು ವರ್ಷ ಪ್ರತಿನಿಧಿಸಿದ ಕೃಷ್ಣರಾಜನಗರ ಕ್ಷೇತ್ರದಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಕಂಡವರು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಮ್ಮೆ ಗೆದ್ದು, ಮತ್ತೊಮ್ಮೆ ಸೋತವರು.ಆದರೆ, ಈ ಎರಡನೇ ಸೋಲು ಅವರ ಪಾಲಿಗೆ ದೊಡ್ಡ ಹಿನ್ನಡೆಯಾಯಿತು. ಅಂಥ ಸೋಲಿಗೆ ಕಾರಣವಾದ ಸಂಗತಿಗಳು, ಕಾರ್ಯಕಾರಣ ಸಂಬಂಧಗಳೇ ಅವರ ರಾಜಕೀಯ ‘ಮರುಜನ್ಮ’ಕ್ಕೂ ಕಾರಣವಾದವೆನ್ನುವುದು ವಿಶೇಷ.

ಈಗ, ಕರ್ನಾಟಕದ ಪ್ರಬಲ ಪ್ರಾದೇಶಿಕ ಪಕ್ಷ ಜೆಡಿಎಸ್‌ನ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಅವರಲ್ಲಿ ಮೇಲ್ಕಾಣಿಸಿದ ಗುಣ-ಸ್ವಭಾವಗಳು ಹೀಗೆಯೇ ಇವೆ ಎನ್ನಲಾಗದು. ವಯಸ್ಸು, ಅನುಭವ, ದೇಹಪ್ರಕೃತಿ ಅವರನ್ನು 'ಮಾಗಿದ ರಾಜಕಾರಣಿ’'ಯನ್ನಾಗಿ ರೂಪಿಸಿದ್ದು ಹೌದಾದರೂ, ಅದರಲ್ಲಿ ಅವರು ಕಲಿತ ರಾಜಕೀಯ ಪಾಠ, ಅನುಭವಿಸಿದ ಯಾತನೆಗಳ ಪಾಲೂ ದೊಡ್ಡದಿದೆ. ಈ ಕಾರಣಕ್ಕೆ ಕೆಲವು ವರ್ಷಗಳ ಹಿಂದೆ ಅವರಲ್ಲಿದ್ದ ನೇರ, ನಿಷ್ಠೂರ ಗುಣ, ಅನಿಸಿದ್ದನ್ನು ಆಡಿ ವಿವಾದ ಎಬ್ಬಿಸುವ ಸ್ವಭಾವಗಳು ತುಸು ತೆರೆಯಮರೆಗೆ ಸರಿದಂತಿವೆ. 'ವಿವಾದನಾಥ'ರ ಜಾಗದಲ್ಲಿ 'ಸಾಧುನಾಥ' ಕಾಣಿಸುತ್ತಿರುವ ಈ ಹೊತ್ತಿನಲ್ಲಿ ಪಕ್ಷವೊಂದನ್ನು ಮುನ್ನಡೆಸುವ ಮಹತ್ವದ ಹೊಣೆಗಾರಿಕೆ ಅವರ ಹೆಗಲೇರಿದೆ.

ಒಂದೂವರೆ ದಶಕದ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ವಿಶ್ವನಾಥ್‌ ಅವರು ಕೈಗೊಂಡ ಕೆಲ ನಿರ್ಧಾರಗಳು ಶಿಕ್ಷಣೋದ್ಯಮಿ ಮಠಾಧಿಪತಿಗಳು, ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ತೀವ್ರ ಆಕ್ಷೇಪ ವ್ಯಕ್ತವಾದಾಗಲೂ ಹಿಂಜರಿಯದೆ ತಮಗನಿಸಿದ್ದನ್ನು ಸಾಧಿಸಲು ಹೊರಟಿದ್ದು ಎಲ್ಲರೂ ಬಲ್ಲ ಸಂಗತಿ. ಅಂತೆಯೇ, ದೇವರಾಜ ಅರಸು ಗರಡಿಯಲ್ಲಿ ಪಳಗಿ, ಇತ್ತೀಚಿನವರೆಗೆ ಕಾಂಗ್ರೆಸ್ ಕಟ್ಟಾಳು ಆಗಿದ್ದ ವಿಶ್ವನಾಥರಿಂದ ಅತಿ ಹೆಚ್ಚು ಟೀಕೆಗೆ ತುತ್ತಾದವರು ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಮಕ್ಕಳು. ಕಾಂಗ್ರೆಸ್ಸಿನಲ್ಲಿದ್ದೇ ಕೆಲವು ವಿದ್ಯಮಾನಗಳ ಕುರಿತು ಹರಿಹಾಯ್ದು ಮಡಿಲ ಕೆಂಡದಂತೆಯೂ ಆಗಿದ್ದರು. ಎಸ್‌ ಎಂ ಕೃಷ್ಣ ಕುರಿತು ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ ಸಂಗತಿಗಳು, ಡಿ ಕೆ ಶಿವಕುಮಾರರ ರಾಜಕೀಯ ಮತ್ತು ವ್ಯವಹಾರಗಳ ಕುರಿತು ನೀಡಿದ ಹೇಳಿಕೆಗಳು ಸದ್ದು ಸುದ್ದಿ ಮಾಡಿದ್ದವು. ಜೊತೆಗೆ, ಮೈಸೂರಿನಲ್ಲಿ ಆದಿಚುಂಚನಗಿರಿ ಮಠ ಕಟ್ಟಿದ ಆಸ್ಪತ್ರೆಯ ಜಾಗದ ಒತ್ತುವರಿ ವಿಷಯದಲ್ಲಿ ಧ್ವನಿ ಎತ್ತಿದ್ದು ವಿಶ್ವನಾಥರಿಗೆ‌ ‘ಒಕ್ಕಲಿಗ ವಿರೋಧಿ' ಎನ್ನುವ ಹಣೆಪಟ್ಟಿ ಬೀಳಲು ಕಾರಣವಾದವು. ಇಂಥ ಕಾರಣಗಳಿಂದಲೇ ಒಕ್ಕಲಿಗ ಮುಖಂಡರೆಲ್ಲ ಪಕ್ಷಾತೀತವಾಗಿ ಕೆಲಸ ಮಾಡಿ, ಮೈಸೂರು-ಕೊಡಗು ಸಂಸತ್ ಕ್ಷೇತ್ರದ (೨೦೧೪) ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದರು.

ಇಷ್ಟೇ ಆಗಿದ್ದರೆ ಅದೆಲ್ಲ ಮತ್ತೊಂದು ಸೋಲಿನ ಬಾಬ್ತಿಗೆ ಸೀಮಿತವಾಗುತ್ತಿತ್ತು. ಆದರೆ, ತಾವೇ ಕಾಂಗ್ರೆಸ್‌ಗೆ ಕರೆತಂದ (ಅವರ ಪ್ರಕಾರ) ಸಿದ್ದರಾಮಯ್ಯ ವಿಷಯದಲ್ಲೂ ನಾಲಿಗೆ ಹರಿಬಿಟ್ಟರೆನ್ನುವುದು ಮತ್ತೊಂದು ಪ್ರಬಲ ಹಿನ್ನಡೆಗೆ ಮುನ್ನುಡಿ ಬರೆಯಿತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಕೈಯಲ್ಲಿ ವಿರಾಜಿಸಿದ ದುಬಾರಿ ಕೈಗಡಿಯಾರದ‌ ವಿಷಯ ಮಾಧ್ಯಮಗಳಿಗೆ ಗೊತ್ತಾಗಲು, ಅದು ದೊಡ್ಡ ವಿವಾದವಾಗಿ ಬೆಳೆಯಲು ವಿಶ್ವನಾಥರೇ ಕಾರಣ ಎನ್ನುವುದು ಸಿದ್ದರಾಮಯ್ಯ ಆಪ್ತ ಬಳಗದ ನೇರ ಆಕ್ಷೇಪವಾಗಿತ್ತು. ವಿವಾದ ವೈರದ ಸ್ವರೂಪ ಪಡೆದು ವಿಶ್ವನಾಥ್ ಕಾಂಗ್ರೆಸ್ ತೊರೆಯುವಂತಾಯಿತು ಕೂಡ. ಬಳಿಕ ಅವರ ಟೀಕಾಸ್ತ್ರದ ಗುರಿ ಸಿದ್ದರಾಮಯ್ಯ ಅವರಾಗಿದ್ದು, ಈ ಅಸ್ತ್ರವನ್ನು ತಮ್ಮ ಅನುಕೂಲಕ್ಕೆ ಸಮರ್ಥವಾಗಿ ಬಳಸಿಕೊಳ್ಳಲೆನ್ನುವಂತೆ ದೇವೇಗೌಡರು ವಿಶ್ವನಾಥರನ್ನು ಜೆಡಿಎಸ್ ಪಕ್ಷಕ್ಕೆ ಆಹ್ವಾನಿಸಿದ್ದು, ಹಳೆಯ ಕಹಿಗಳನ್ನು, ಫಿರಂಗಿ ಸ್ವರೂಪದ ವಾಗ್ದಾಳಿಗಳನ್ನು ಮರೆತ ಅವರು 'ಹೊಸ ಶತ್ರು’ (ಸಿದ್ದರಾಮಯ್ಯ) ವಿರುದ್ಧ ಸೆಣಸಲು ಗೌಡರ ಪಡೆ ಸೇರಿದ್ದು, ಹುಣಸೂರಿನಲ್ಲಿ ಜೆಡಿಎಸ್‌ ಟಿಕೆಟ್‌ ಪಡೆದು ಗೆದ್ದು ರಾಜಕೀಯವಾಗಿ ‘ಮರುಜನ್ಮ’ ಪಡೆದದ್ದು ಎಲ್ಲವೂ ಕಣ್ಣ ಮುಂದಿನ ಸತ್ಯ.

ಈ ಕೆಲವು ಬೆಳವಣಿಗೆಗಳು ವಿಶ್ವನಾಥರ ರಾಜಕೀಯ ‘ಮರುಜನ್ಮ’ವನ್ನಷ್ಟೆ ಅಲ್ಲ, ಹಿಂದೊಂದು ಕಾಲದಲ್ಲಿ ಹಿಗ್ಗಾಮುಗ್ಗ ವಾಗ್ದಾಳಿ ನಡೆಸುತ್ತಿದ್ದ ಗೌಡರ ಕುಟುಂಬಕ್ಕೆ ತಾವೇ ಅಸ್ತ್ರವಾಗಿ ಪರಿಣಮಿಸಿದ ರಾಜಕೀಯ ವಿಪರ್ಯಾಸವನ್ನೂ ಸಾರುತ್ತವೆ. ವಿಸ್ತಾರವಾದ ಓದು, ಬರೆಹ,ಆರೋಗ್ಯಕರ ರಾಜಕೀಯ ಚಿಂತನೆ ಮತ್ತು ಚಳವಳಿಗಳ ಸಾಂಗತ್ಯದ ಕಾರಣಕ್ಕೆ ವಿಚಾರಶೀಲ ರಾಜಕಾರಣ ಎನ್ನಿಸಿಕೊಂಡ ವಿಶ್ವನಾಥ್, ಕೆಲವು ಇತಿ ಮಿತಿಗಳನ್ನು ಮೀರಿದ್ದರೆ ರಾಜಕೀಯ ತಜ್ಞ; ಮುತ್ಸದ್ಧಿಯ ಮಟ್ಟಕ್ಕೆ ಏರಬಲ್ಲಷ್ಟ ಕಸುವು ಹೊಂದಿದ್ದವರು. “ಆದರೆ, ಮೇಲ್ಕಾಣಿಸಿದ ಮಿತಿಗಳಿಂದಾಗಿ ಯಾವುದೋ ಕಾರಣಕ್ಕೆ ಯಾರದೋ ಹೆಗಲ ಮೇಲೆ, ಇನ್ಯಾರದೋ ಕಡೆ ಗುರಿ ಮಾಡಿ ಇಟ್ಟ ತುಪಾಕಿಯಂತೆ ಬಳಕೆಯಾಗುವ ಹಂತ ತಲುಪಿದ್ದಾರೆ,’’ ಎನ್ನುವುದು ಅವರ ಕೆಲವು ಆಪ್ತರ ಆಕ್ಷೇಪ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಹೀಗೆ ಬದಲಾಗುವುದು ಅನಿವಾರ್ಯವಾಗಿತ್ತು ಎನ್ನುತ್ತಾರೆ ಇನ್ನು ಕೆಲವರು.

ದಶಕಗಳ ಹಿಂದೆ ಹಳೇ ಮೈಸೂರು ಭಾಗದಲ್ಲಿ ಜನತಾ ಪರಿವಾರ ಶಕ್ತಿಶಾಲಿಯಾಗಿತ್ತು. ದೇವೇಗೌಡರು- ಸಿದ್ದರಾಮಯ್ಯ (ಒಕ್ಕಲಿಗ- ಕುರುಬ ಸಮುದಾಯ ಸಹಿತ ಹಿಂದುಳಿದ ವರ್ಗ) ರಾಜಕೀಯವಾಗಿ ಒಂದೇ ವೇದಿಕೆಯಲ್ಲಿದ್ದುದು ಅದಕ್ಕೆ ಕಾರಣ. ಆದರೆ, ಸಿದ್ದರಾಮಯ್ಯ ಪಕ್ಷದಿಂದ ಹೊರ ಬಿದ್ದು, ಕಾಂಗ್ರೆಸ್ ಕೈ ವಶವಾದ ಬಳಿಕ ಜೆಡಿಎಸ್‌ ಈ ಭಾಗದಲ್ಲಿ ದುರ್ಬಲಗೊಂಡಿತು. ತನ್ನ ಶಕ್ತಿಯನ್ನು ಮರುಸ್ಥಾಪಿಸಲು ಹವಣಿಸುತ್ತಿದ್ದ ‘ದಳಪತಿ’ಗಳಿಗೆ ಕಳೆದ ಚುನಾವಣೆಯ ವೇಳೆ ಅನೇಕ ರಾಜಕೀಯ ಅಸ್ತ್ರಗಳು ದೊರಕಿದವು. ‘ವಿಶ್ವನಾಥ್’ ಎನ್ನುವ ಪ್ರಬಲ ಅಸ್ತ್ರವೂ ಅದರಲ್ಲೊಂದು. ಅವುಗಳನ್ನು ಬಳಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದ ಗೌಡರ ಪಡೆ, ತನ್ನ ಗುರಿ ಸಾಧಿಸಿ ಹಳೇ ಮೈಸೂರು ಭಾಗದಲ್ಲಿ ತನ್ನ ಶಕ್ತಿ ಮರು ಸ್ಥಾಪಿಸುವಲ್ಲಿ ಯಶಸ್ವಿಯಾಯಿತು.

ಈ ಯಶಸ್ಸಿನ ಬಳುವಳಿಯ ರೂಪದಲ್ಲೋ ಅಥವಾ ಮುಂದುವರಿದ ತಂತ್ರಗಾರಿಕೆಯ ಕಾರಣಕ್ಕೋ ‘ಗೌಡರ ಕುಟುಂಬ ಈಗ’ ವಿಶ್ವನಾಥರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಧಾರೆಎರೆದಿದೆ. ಅನಾರೋಗ್ಯ ಮತ್ತಿತರ ಕಾರಣಕ್ಕೆ ಮೊದಮೊದಲು ಈ ಹೊಣೆ ವಹಿಸಿಕೊಳ್ಳಲು ಹಿಂದೇಟು ಹಾಕಿದ ವಿಶ್ವನಾಥ್ ಕೊನೆಗೂ ಗೌಡರ ಅಪ್ಪಣೆಗೆ ತಲೆ ಬಾಗಿದ್ದಾರೆ. “ರಾಜಕೀಯವಾಗಿ ನನ್ನನ್ನು ಮುಗಿಸಿ ಬಿಟ್ಟರೆನ್ನುವ ಸಂದರ್ಭ ದೇವೇಗೌಡರು, ಕುಮಾರಸ್ವಾಮಿ ನನ್ನ ಕೈಹಿಡಿದು ಶಾಸಕನನ್ನಾಗಿ ಮಾಡಿದರು. ಈಗ ನನ್ನ ಮೇಲೆ ನಂಬಿಕೆ,ವಿಶ್ವಾಸವಿಟ್ಟು ರಾಜ್ಯಾಧ್ಯಕ್ಷ ಸ್ಥಾನ ನಿಡಿದ್ದಾರೆ. ಮಾಜಿ ಪ್ರಧಾನಿ,ಮಾಜಿ ಮುಖ್ಯಮಂತ್ರಿ ಕುಳಿತು ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತಂದಂತ ಕುರ್ಚಿಯಲ್ಲಿ ನನ್ನನ್ನು ಕೂರಿಸಿದ್ದಾರೆ. ಹುದ್ದೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವೆ. ಹರಿದುಹಂಚಿ ಹೋಗಿರುವ ಜನತಾ ಪರಿವಾರದ ಮುಖಂಡರನ್ನು ಒಗ್ಗೂಡಿಸಿ,ಪಕ್ಷ ಬಲಪಡಿಸುವೆ.ಉತ್ತರ ಕರ್ನಾಟಕದಿಂದ ಪಕ್ಷ ಸಂಘಟನೆ ಪ್ರವಾಸ ಆರಂಭಿಸುತ್ತೇನೆ,’’ ಎಂದು ಅವರು ಘೋಷಿಸಿದ್ದಾರೆ. ಐದಾರು ವರ್ಷದ ಹಿಂದಿನ ವಿಶ್ವನಾಥರೇ ಆಗಿದ್ದರೆ ಅವರಲ್ಲಿ ಖಂಡಿತಾ ಇಂಥ ‘ವಿದೇಯತೆ’ಯನ್ನು ನಿರೀಕ್ಷಿಸುವಂತಿರಲಿಲ್ಲ.

ಅದೇನಿದ್ದರೂ, ವರ್ತಮಾನದ ರಾಜಕೀಯ ವಾತಾವರಣ, ಗೌಡರ ಕುಟುಂಬದ ಸ್ವತ್ತಿನ ಸ್ವರೂಪದಲ್ಲಿರುವ ಪಕ್ಷದ ಹವಾಗುಣ, ಈ ಕುಟುಂಬ ಅಪರಿಮಿತವಾಗಿ ನಂಬುವ ಗ್ರಹ -ತಾರೆ-ವಾಸ್ತು-ಜ್ಯೋತಿಷ್ಯ ಇತ್ಯಾದಿಗಳ ‘ಬಲಾಬಲ’ ಮತ್ತು ೬೯ ತುಂಬಿದ ಅವರ ದೇಹಾರೋಗ್ಯ ಎಲ್ಲವೂ ಸಹಕರಿಸಿದ ಪಕ್ಷದಲ್ಲಿ ಪಕ್ಷ ಸಂಘಟನೆಯಲ್ಲಿ ವಿಶ್ವನಾಥ್‌ ಒಂದಷ್ಟು ಪ್ರಯತ್ನ ಮಾಡಿಯಾರು. ಅವರು ಸಾಗಬೇಕಿರುವ ಈ ದಾರಿಯಲ್ಲಿ ಕೆಲವು ಸವಾಲುಗಳು ಇದ್ದೇ ಇವೆ:

  • ಜೆಡಿಎಸ್‌ ಯಾವತ್ತೂ ದೇವೇಗೌಡರು ಮತ್ತವರ ಕುಟುಂಬದ ನಿಯಂತ್ರಣದಲ್ಲಿರುವ ಪಕ್ಷ. ಕುಟುಂಬದಲ್ಲಿಯೂ ಹಲವು ‘ಶಕ್ತಿ’ಕೇಂದ್ರಗಳು ಸೃಷ್ಟಿಯಾಗಿವೆ. ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಬೀಗರು-ಬಿಜ್ಜರು ತಮ್ಮದೇ ರಾಜಕೀಯ ಹಿತಾಸಕ್ತಿಯನ್ನು ಹೊಂದಿದ್ದಾರೆ. ಈ ಕುರಿತಂತೆ ಹಿಂದೆಲ್ಲ ಕಟು ಟೀಕೆಗಳನ್ನು ಮಾಡಿದ್ದ ವಿಶ್ವನಾಥ್ ಈಗ ಈ ಎಲ್ಲವನ್ನೂ ಹೇಗೆ ಸಂಭಾಳಿಸುತ್ತಾರೆನ್ನುವುದು ಕುತೂಹಲ. ಹಿಂದಿದ್ದ ಕೆಲವು ಅಧ್ಯಕ್ಷರುಗಳಂತೆ ರಬ್ಬರ್ ಸ್ಟ್ಯಾಂಪ್‌ ಆಗದೆ ತಮ್ಮ ತನವನ್ನು ಕಾಯ್ದುಕೊಳ್ಳುವುದು ಅವರ ಮುಂದಿರುವ ದೊಡ್ಡ ಸವಾಲು.
  • ಹೇಳಿಕೇಳಿ ಜೆಡಿಎಸ್‌ ಒಕ್ಕಲಿಗ ಪ್ರಾಬಲ್ಯವಿರುವ ಪಕ್ಷ. ದಲಿತರು, ಮುಸ್ಲಿಮರು, ಇತರೆ ಹಿಂದುಳಿದ ವರ್ಗಗಳನ್ನು (ಅಹಿಂದ) ಸೆಳೆಯುವ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಬಿಎಸ್ಪಿ ಜೊತೆ ಮಾಡಿಕೊಂಡ ಮೈತ್ರಿ ಅಂಥ ಪರಿಣಾಮ ಬೀರಲಿಲ್ಲ. ಮುಂಬರುವ ಸಂಸತ್ ಚುನಾವಣೆಯ ದೃಷ್ಟಿಯಲ್ಲಿ ಈ ವರ್ಗಗಳನ್ನು ಮತ್ತು ಮುಖ್ಯವಾಗಿ ಸಿದ್ದರಾಮಯ್ಯ ಪ್ರಾಬಲ್ಯ ಇರುವ ಕುರುಬ ಸಮುದಾಯವನ್ನು ಪಕ್ಷದೆಡೆಗೆ ಸೆಳೆಯುವುದು ದೇವೇಗೌಡರ ತಂತ್ರಗಾರಿಕೆ. ಕುರುಬ ಸಮುದಾಯದ ‘ಸಿದ್ದರಾಮಯ್ಯ ನಿಷ್ಠೆ’ಯನ್ನು ಕದಲಿಸಿ ತಮ್ಮತ್ತ ಸೆಳೆಯುವುದು ವಿಶ್ವನಾಥ್ ಮುಂದಿರುವ ಮತ್ತೊಂದು ಸವಾಲು.
  • ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರವಿದೆ. ಸಿದ್ದರಾಮಯ್ಯ ಮೇಲಿನ ಮುನಿಸಿನ ಕಾರಣಕ್ಕೆ ದಶಕಗಳ ಕಾಲದ ಕಾಂಗ್ರೆಸ್ ಸಂಬಂಧ ಕಡಿದುಕೊಂಡು ಜೆಡಿಎಸ್ ಸೇರಿದ ವಿಶ್ವನಾಥ್, ಈಗ ಮಿತ್ರಪಕ್ಷದ ಅಧ್ಯಕ್ಷರಾಗಿ ಮೈತ್ರಿ ಬಾಂಧವ್ಯವನ್ನು ಕಾಯ್ದುಕೊಳ್ಳಬೇಕಿದೆ. ಆಡಳಿತ ಪಕ್ಷದ ಅಧ್ಯಕ್ಷ ವಿಶ್ವನಾಥ್ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪರಸ್ಪರ ಮುಖ ಕೊಟ್ಟು ಮಾತನಾಡದ ಸ್ಥಿತಿಯಲ್ಲಿದ್ದಾರೆ. ಮುಂದೆ ಹೇಗೆ ‘ನಡೆದು’ಕೊಳ್ಳುತ್ತಾರೆನ್ನುವುದು ಕುತೂಹಲ.
  • ಕಳೆದ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ಕಾದಾಡಿವೆ. ಮೇಲ್ಮಟ್ಟದ ನಾಯಕರು ‘ಕೈ’ಜೋಡಿಸಿದ್ದರೂ ಸ್ಥಳೀಯ ಮುಖಂಡರು, ಬೇರು ಮಟ್ಟದ ಕಾರ್ಯಕರ್ತರಲ್ಲಿ ಆಗಿರುವ “ಗಾಯ’’ಗಳು ಇನ್ನೂ ಮಾಸಿಲ್ಲ. ಇಂಥ ಸಂದರ್ಭದಲ್ಲೇ ಸ್ಥಳೀಯ ಸಂಸ್ಥೆ ಚುನಾವಣೆಗಳು ಬಂದಿವೆ. ಸಂಸತ್‌ ಚುನಾವಣೆ ಮುಂದಿದೆ. ಮೈತ್ರಿ ಬಂಧ ಉಳಿಸಿಕೊಂಡೇ ಪಕ್ಷವನ್ನು ಸದೃಢಗೊಳಿಸಬೇಕಿದೆ.
  • ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ರಾಜಕೀಯ ಜಾಣ್ಮೆ ಪ್ರಯೋಗಿಸುವಲ್ಲಿ ದೇವೇಗೌಡರು ಯಾವತ್ತೂ ನಿಸ್ಸೀಮರು. ಸಮ್ಮಿಶ್ರ ಸರ್ಕಾರಕ್ಕೆ ಆಗಾಗ ಪತ್ರ 'ಶಾಕ್‌’ ನೀಡುತ್ತಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯಗೆ ಅವರದೇ ಸಮುದಾಯದ ಪ್ರತಿನಾಯಕನನ್ನು ಬಳಸಿ ‘ಮೂಗುದಾರ’ ಹಾಕಲೆಂದೇ ಗೌಡರು ವಿಶ್ವನಾಥ್‌ ಅಸ್ತ್ರ ಪ್ರಯೋಗಿಸಿದ್ದಾರೆನ್ನುವ ಚರ್ಚೆ ನಡೆದಿದೆ. ಅದು ಹೌದಾದರೆ, ಸಂಭವನೀಯ ‘ಮೈತ್ರಿ ಬಿಕ್ಕಟ್ಟು’ಗಳಿಗೆ ವಿಶ್ವನಾಥ್ ಹೆಗಲು ಕೊಡಬೇಕಾಗುತ್ತದೆ.
  • ಯಾವುದೇ ‘ಅವಘಡ’ ಸಂಭವಿಸದೆ ಎಲ್ಲವೂ ಸುಸೂತ್ರ ನಡೆದರೆ ಅದು ಗೌಡ-ಕುಮಾರರ ಸಹನೆಯ ಫಲದ ಬಾಬ್ತಿಗೆ ಜಮೆಯಾಗುತ್ತದೆ. ಮೈತ್ರಿ ಹಳಿ ತಪ್ಪಿದರೆ ಅದು ಸಿದ್ದರಾಮಯ್ಯ-ವಿಶ್ವನಾಥ್ ಎನ್ನುವ ಕುಲಬಾಂಧವರ ಕುತ್ತಿಗೆಗೆ ಬೀಳಬಹುದು. ಪಕ್ಷದ ನೆಲೆಯಲ್ಲಿ ಅಪಖ್ಯಾತಿ ‘ಹೊಣೆ’ ಹೊರಲು ವಿಶ್ವನಾಥ್ ಸಿದ್ದರಿರಬೇಕು.
ಇದನ್ನೂ ಓದಿ : ೨೦೧೯ರ ಸಂಸತ್ ಚುನಾವಣೆಗೆ ಹೊಸ ದಿಕ್ಕು ತೋರಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ

ಜೆಡಿಎಸ್ ವರಿಷ್ಠರು ಕೊಟ್ಟ ಮಾತಿನಂತೆ ವಿಶ್ವನಾಥ್‌ಗೆ ಉನ್ನತ ಜವಾಬ್ದಾರಿ ನೀಡಿದ್ದಾರೆ. ಆ ನಂಬಿಗೆಯನ್ನು ಉಳಿಸಿಕೊಳ್ಳಬೇಕೆಂದರೆ ತಮ್ಮ ನಾಯಕತ್ವ ಶಕ್ತಿಯನ್ನವರು ಒರೆಗೆ ಹಚ್ಚಿ,ಸಾಬೀತುಪಡಿಸಬೇಕು. ಅದಕ್ಕಾಗಿ ದೈಹಿಕ- ಆರೋಗ್ಯ ಸಮಸ್ಯೆಗಳನ್ನು ಬದಿಗಿಟ್ಟು ರಾಜ್ಯ ಸುತ್ತಬೇಕು. ಸಾಕಷ್ಟು ಶ್ರಮ, ಬೆವರನ್ನು ಬಸಿಯಬೇಕು. ಅದಕ್ಕೆ ಪಕ್ಷದೊಳಗಿನ ಉಳಿದೆಲ್ಲ ‘ಗ್ರಹ-ತಾರಾ ಬಲ’ಗಳು ಪೂರಕವಾಗಿರಬೇಕು. ಎಂಥದೇ ಸಂದರ್ಭದಲ್ಲಿ ಪಕ್ಷವನ್ನು ಬಲವಾಗಿ ಸಮರ್ಥಿಸಿಕೊಳ್ಳಬೇಕು. “ಕುಟುಂಬದ ಹಿಡಿತ/ ಹಳೇ ಮೈಸೂರಿಗೆ ಸೀಮಿತ/ ಒಕ್ಕಲಿಗರ ಪ್ರಾಬಲ್ಯ,’’ ಎಂಬಿತ್ಯಾದಿ ಹಳೆಯ ಆಕ್ಷೇಪಗಳನ್ನು ‘ಸುಳ್ಳು’ ಎನ್ನುವಂತೆ ನಿರೂಪಿಸಬೇಕು. ದಳಪತಿ ಕುಟುಂಬದ ಮಕ್ಕಳು, ಮೊಮ್ಮಕ್ಕಳು, ಬೀಗರು, ಅವರ ಸಂಬಂಧಿಗಳು ನಡೆಸುವ ಕಾರುಬಾರುಗಳನ್ನು ಕಂಡೂ ಕಾಣದಂತೆ ಸುಮ್ಮನೆ ಇದ್ದುಬಿಡಬೇಕು. ದಶಕದ ಹಿಂದಾಗಿದ್ದರೆ “ಕಂಡರೂ ಕಾಣದಂತೆ ಸುಮ್ಮನಿರಬೇಕು’’ ಎನ್ನುವುದೇ ವಿಶ್ವನಾಥ್ ವ್ಯಕ್ತಿತ್ವಕ್ಕೆ‌ ಪ್ರಬಲ ಸವಾಲಾಗಿರುತ್ತಿತ್ತು. ಈಗ ಹೇಗೋ ಕಾಯ್ದುನೋಡಬೇಕು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More