ನಿತೀಶ್‌ಗೆ ರಾಜಕೀಯ ಹಿನ್ನಡೆ ತರಲಿದೆಯೇ ಮುಜಫರ್‌ಪುರ ಲೈಂಗಿಕ ದೌರ್ಜನ್ಯ ಪ್ರಕರಣ?

ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿರುವ ಮುಜಫರ್‌ಪುರ ಪ್ರಕರಣ, ನಿತೀಶ್‌ ಕುಮಾರ್‌ ಅವರಿಗೆ ಹಿನ್ನೆಡೆ ತರಲಿದೆ ಎಂಬ ಮಾತುಗಳು ಕೇಳಿಬಂದಿವೆ. ದೇಶವನ್ನು ತಲ್ಲಣಕ್ಕೆ ದೂಡಿರುವ ಈ ಗಂಭೀರ ಪ್ರಕರಣವನ್ನು ನಿತೀಶ್‌ ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ

ಬಿಹಾರದ ಮುಜಫರ್‌ಪುರ ಅನಾಥ ಬಾಲಕಿಯರ ಆಶ್ರಯ ಗೃಹದಲ್ಲಿ ನಡೆದ ಲೈಂಗಿಕ ಹಗರಣವನ್ನು ನೋವು ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಕರೆದಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಇನ್ನು ಮುಂದೆ ರಾಜ್ಯದಲ್ಲಿರುವ ಬಾಲಕಿಯರ ಆಶ್ರಯ ಗೃಹಗಳನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಮುಜಫರ್‌ಪುರ ಬಾಲಕಿಯರ ಗೃಹದಲ್ಲಿ ಆಶ್ರಯ ಪಡೆದಿದ್ದ 34 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಈ ಹಿಂದೆ ಬೆಳಕಿಗೆ ಬಂದು, ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತ್ತು. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, 34 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಖಚಿತವಾಗಿದೆ. ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಬಂಧಿಸಲಾಗಿದೆ. ಆಶ್ರಯ ಗೃಹದಲ್ಲಿರುವ ಅಧಿಕಾರರೂಢರಿಗೆ ಹತ್ತಿರವಿರುವವರು ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಪ್ರಕರಣವನ್ನು ಮೊದಲು ಬಯಲಿಗೆಳೆದದ್ದು ಮುಂಬೈ ಮೂಲದ ಟಾಟಾ ಇನ್ಸ್‌ಟಿಟ್ಯೂಟ್ ಆಫ್‌ ಸೋಶಿಯಲ್‌ ಸೈನ್ಸ್‌‌ ಸಂಸ್ಥೆ.

ಈ ಸ್ಫೋಟಕ ವಿಚಾರವೀಗ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಿದ್ದು, ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಬಿಹಾರ ಮುಖ್ಯಮಂತ್ರಿ ಅಪರಾಧಿಗಳ ರಕ್ಷಣೆಗೆ ನಿಂತಿದ್ದಾರೆ ಆರೋಪಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ನಿತೀಶ್‌‌ ರಾಜಿನಾಮೆಗೆ ಪಟ್ಟು ಹಿಡಿದಿದ್ದಾರೆ. ದೆಹಲಿಯ ಜಂಥರ್‌ ಮಂಥರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಆರ್‌ಜೆಡಿ ಮುಖಂಡರಿಗೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ನಿತೀಶ್‌ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್‌ ಗಾಂಧಿ, “ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರಿಗೆ ಇದು ತಲೆತಗ್ಗಿಸುವ ವಿಷಯವೆಂದು ಅನ್ನಿಸಿದರೆ, ತಪ್ಪಿತಸ್ಥರ ಮೇಲೆ ಶೀಘ್ರ ಕ್ರಮ ಕೈಗೊಳ್ಳಲಿ,” ಎಂದು ಹೇಳಿದ್ದಾರೆ.

ತೇಜಸ್ವಿ ಯಾದವ್‌ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌, “ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರ ವಿಚಾರಣೆಯು ಮೂರು ತಿಂಗಳ ಒಳಗಾಗಿ ನಡೆದು, ಅಪರಾಧಿಗಳನ್ನು ಗಲ್ಲಿಗೆ ಏರಿಸುವಂತಹ ಕಾರ್ಯ ನಡೆಯಬೇಕು. ಈ ಅಮಾನವೀಯ ಕೃತ್ಯದಲ್ಲಿ ಭಾಗಿಯಾದವರು ಎಷ್ಟೇ ಬಲಾಡ್ಯ ವ್ಯಕ್ತಿಗಳಾಗಿರಲಿ, ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವರಾಗಿರಲಿ, ಅಂಥವರಿಗೆ ಕಠಿಣ ಶಿಕ್ಷೆ ಆಗಲೇಬೇಕು,” ಎಂದು ಒತ್ತಾಯಿಸಿದ್ದಾರೆ.

ರಾಜಕೀಯ ನಾಯಕರ ಕಟುಟೀಕೆ, ಬಿಹಾರದಲ್ಲಿ ನಡೆಯುತ್ತಿರುವ ಪ್ರತಿಭಟನೆ, ತಮ್ಮದೇ ಸರ್ಕಾರದ ಸಚಿವೆಯೊಬ್ಬರ ಪತಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವುದು ಹೌದು. ಹಾಗಾಗಿಯೇ ಈ ಬಗ್ಗೆ ಗಂಭೀರವಾಗಿ ಮಾತನಾಡಿರುವ ನಿತೀಶ್‌ ಕುಮಾರ್‌, “ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಆದಷ್ಟು ಬೇಗ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ತನಿಖಾ ವಿಧಾನಗಳ ಮೇಲೆ ಪಟನಾ ಹೈಕೋರ್ಟ್‌ ನಿಗಾ ಇರಿಸಲಿದೆ. ಇನ್ನು ಮುಂದೆ, ಬಿಹಾರದಲ್ಲಿರುವ ಬಾಲಕಿಯರ ಆಶ್ರಯ ಗೃಹಗಳನ್ನು ಸರ್ಕಾರವೇ ನೋಡಿಕೊಳ್ಳಲಿದೆ. ಬಾಲಕಿಯರ ಗೃಹಗಳ ಮೇಲೆ ಯಾವುದೇ ಎನ್‌ಜಿಒ ಅಧಿಕಾರ ಹೊಂದಿರುವುದಿಲ್ಲ,” ಎಂದು ತಿಳಿಸಿದ್ದಾರೆ.

ಸಚಿವೆ ಮಂಜು ವರ್ಮಾ ಅವರ ಪತಿ, ಮಾಜಿ ಎಮ್‌ಎಲ್‌ಸಿ ಚಂದ್ರೇಶ್ವರ ವರ್ಮಾ ಅವರ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ನಿತೀಶ್‌ ಕುಮಾರ್‌, “ಸಚಿವೆ ಮಂಜು ವರ್ಮಾ ಅವರು ಈ ಪ್ರಕರಣದಲ್ಲಿ ತಮ್ಮ ಪತಿ ಭಾಗಿಯಾಗಿಲ್ಲವೆಂದು ಹೇಳುತ್ತಿದ್ದಾರೆ. ಒಂದು ವೇಳೆ, ಅವರ ಮೇಲಿನ ಆರೋಪ ನಿಜವಾದರೆ, ಸಚಿವ ಸ್ಥಾನದಿಂದ ಅವರು ನಿರ್ಗಮಿಸಲೇಬೇಕಾಗುತ್ತದೆ,” ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಜು ವರ್ಮಾ, ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ತಮ್ಮ ಪತಿಯನ್ನು ಗುರಿಯಾಗಿಸಲಾಗಿದೆ ಎಂದಿದ್ದಾರೆ. “ಒಂದು ವೇಳೆ, ಈ ಪ್ರಕರಣದಲ್ಲಿ ತಮ್ಮ ಪತಿ ಭಾಗಿಯಾಗಿರುವುದು ಸಾಬೀತಾದರೆ, ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬಹುದು,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಿಹಾರದಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯರು ನೀಡಿದ ಮನಕಲಕುವ ವಿವರಗಳು

ಸಚಿವೆ ಮಂಜು ವರ್ಮಾ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಬಿಹಾರ ಉಪ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಸುಶೀಲ್‌ ಕುಮಾರ್ ಮೋದಿ, “ವಿರೋಧ ಪಕ್ಷಗಳ ನಾಯಕರು ಮಂಜು ವರ್ಮಾ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಅವರ ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ. ಮಂಜು ವರ್ಮಾ ಅವರು ಯಾವುದೇ ಕಾರಣಕ್ಕೂ ರಾಜಿನಾಮೆ ನೀಡಲು ನಾವು ಬಿಡುವುದಿಲ್ಲ,” ಎಂದಿದ್ದಾರೆ.

ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿರುವ ಮುಜಫರ್‌ಪುರ ಪ್ರಕರಣ, ನಿತೀಶ್‌ ಕುಮಾರ್‌ ಅವರಿಗೆ ರಾಜಕೀಯ ಹಿನ್ನೆಡೆ ತರಲಿದೆ ಎಂಬ ಮಾತುಗಳು ಕೇಳಿಬಂದಿವೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ ಈ ಪ್ರಕರಣವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಪ್ರಕರಣ ಸಂಬಂಧ ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿಕೂಟ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದೇಶವನ್ನು ತಲ್ಲಣಕ್ಕೆ ದೂಡಿರುವ ಈ ಪ್ರಕರಣವನ್ನು ನಿತೀಶ್‌ ಸರ್ಕಾರ ಮುಂದಿನ ದಿನಗಳಲ್ಲಿ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More