ಚಾಣಕ್ಯಪುರಿ | ದೇವೇಗೌಡರು ಮನೆಗೆ ಬರುತ್ತೇನೆ ಎಂದಿದ್ದಕ್ಕೇ ಬೆಚ್ಚಿದ ಬಿಜೆಪಿ ಸಂಸದ!

ದೇವೇಗೌಡರು, “ಟೀ‌ ಕುಡಿಯಲು ನಿಮ್ಮ‌ ಮನೆಗೆ ಬರುತ್ತೇನೆ,” ಎಂದು ಬಿಜೆಪಿ ಸಂಸದರೊಬ್ಬರಿಗೆ ಹೇಳಿದ್ದೇ ತಡ, ಆ ಸಂಸದರು ಬೆಚ್ಚಿಬಿದ್ದರಂತೆ. ದೇವೇಗೌಡರು ಮಾತು ಮುಗಿಸುವ ಮೊದಲೇ, “ಏನು ಕೆಲಸ ಹೇಳಿ ಸಾರ್? ನೀವ್ಯಾಕೆ ಬರುತ್ತೀರಿ; ನಾನೇ ನಿಮ್ಮ‌ ಕೆಲಸ ಮಾಡಿಸಿಕೊಡುತ್ತೇನೆ,” ಎಂದರಂತೆ!

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುರಿತು ರಾಜ್ಯದ ಎಲ್ಲ ರಾಜಕಾರಣಿಗಳಿಗೂ ಒಂದಲ್ಲ ಒಂದು ರೀತಿಯ ಭಯ ಇದ್ದಿದ್ದೇ. ರಾಜಕೀಯವೆಂಬ ನೀರಿನಲ್ಲಿ ದೇವೇಗೌಡರೆಂಬ ಮೀನಿನ‌ ಹೆಜ್ಜೆ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗಿಲ್ಲ. ಅದೇ ಕಾರಣಕ್ಕೆ ಭಯ. ಆ ಭಯ ಎಷ್ಟರ ಮಟ್ಟಿಗಿದೆ ಎಂದರೆ, ದೇವೇಗೌಡರು, “ಟೀ‌ ಕುಡಿಯಲು ನಿಮ್ಮ‌ ಮನೆಗೆ ಬರುತ್ತೇನೆ,” ಎಂದು ಉತ್ತರ ಕರ್ನಾಟಕದ ಬಿಜೆಪಿ ಸಂಸದರೊಬ್ಬರಿಗೆ ಹೇಳಿದ್ದೇ ತಡ, ಆ ಸಂಸದರು ಬೆಚ್ಚಿಬಿದ್ದರಂತೆ. ದೇವೇಗೌಡರು ಮಾತು ಮುಗಿಸುವ ಮೊದಲೇ, “ಏನು ಕೆಲಸ ಹೇಳಿ ಸಾರ್? ನೀವ್ಯಾಕೆ ಬರಬೇಕು; ನಾನೇ ನಿಮ್ಮ‌ ಕೆಲಸ ಮಾಡಿಸಿಕೊಡುತ್ತೇನೆ,” ಎಂದರಂತೆ! ದೇವೇಗೌಡರು, “ಇಲ್ಲ ಪರವಾಗಿಲ್ಲ, ನಾನೇ ಬರ್ತೇನೆ, ಟೀ ಕುಡಿಯೋಕೋಸ್ಕರ ಬರ್ತೇನೆ,” ಎಂದರಂತೆ. ಮತ್ತೆ ಬೇಸ್ತುಬಿದ್ದ ಆ ಬಿಜೆಪಿ ಸಂಸದರು, “ಪರವಾಗಿಲ್ಲ ಸಾರ್, ನಾನೇ ನಿಮ್ಮನೆಗೆ ಬರ್ತೇನೆ. ಹೇಳಿ ಸಾರ್ ಯಾವಾಗ ಬರಲಿ ಅಥವಾ ಏನು‌ ಕೆಲಸ ಹೇಳಿ,” ಎಂದರಂತೆ. ಕಡೆಗೆ ದೇವೇಗೌಡರು, “ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಬಳಿ ಇದೊಂದು ಕೆಲಸ ಮಾಡಿಸಿಕೊಡಿ,” ಅಂತ ಹೇಳಿ ಫೈಲನ್ನು ಕೈಗಿಟ್ಟು ಕಾಲು ಕಿತ್ತರಂತೆ. ಆ ಬಿಜೆಪಿ ಸಂಸದರು ನಿಟ್ಟುಸಿರು ಬಿಟ್ಟರಂತೆ.

ಸಿಎಂ ಕುಮಾರಸ್ವಾಮಿಗೆ ದೆಹಲಿಯಲ್ಲೊಂದು ಕಬಡ್ಡಿ ತಂಡ!

ಮುಖ್ಯಮಂತ್ರಿ ಆದವರಿಗೆ ದೆಹಲಿಯಲ್ಲೂ ಒಬ್ಬ ಆಪ್ತ ಸಹಾಯಕನನ್ನು ನೇಮಿಸಿಕೊಳ್ಳವ ಅಧಿಕಾರ ಇದೆ. ಎಲ್ಲರೂ ಅವರವರ ನಿಷ್ಠರನ್ನು ನೇಮಿಸಿಕೊಂಡಿದ್ದಾರೆ. ಅವರಿರುವರೆಗೂ ಆ ಆಪ್ತ ಸಹಾಯಕರು ಕಾರುಬಾರು ನಡೆಸಿದ್ದೂ ಇದೆ. ಇದೇ ರೀತಿ, ಈಗಿನ‌ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡ ಒಬ್ಬರನ್ನು ನೇಮಿಸಿಕೊಂಡಿದ್ದಾರೆ. ಅಧಿಕೃತವಾಗಿ ಒಬ್ಬರನ್ನೇ ನೇಮಿಸಿಕೊಂಡಿದ್ದರೂ ಅನಧಿಕೃತವಾಗಿ ಅನೇಕರು. ಈ ಅನೇಕರ ಬಗ್ಗೆ ಕರ್ನಾಟಕದ ಸಿಬ್ಬಂದಿ 'ಕಬಡ್ಡಿ ಟೀಮ್' ಎಂದೇ ವ್ಯಾಖ್ಯಾನಿಸುತ್ತಾರೆ.

ಪುತ್ರ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು ಮತ್ತು ದೇವೇಗೌಡರು ದೆಹಲಿಯ ಮನೆ ರಿಪೇರಿ ಕೆಲಸ ಶುರು ಮಾಡಿಸಿದ್ದು ಎರಡೂ ಒಂದೇ ಸಮಯದಲ್ಲಿ. ಹಾಗಾಗಿ, ದೇವೇಗೌಡರು ಈಗ ಕರ್ನಾಟಕ ಭವನದಲ್ಲಿ ಠಿಕಾಣಿ ಹೂಡಿದ್ದಾರೆ. ಕರ್ನಾಟಕ ಭವನದ ನಾಲ್ಕನೇ ಮಹಡಿಯಲ್ಲಿ ಮುಖ್ಯಮಂತ್ರಿ ಮತ್ತು ಅವರ ಅಧಿಕಾರಿಗಳಿಗೆ ಮಾತ್ರ ವಾಸ್ತವ್ಯದ ವ್ಯವಸ್ಥೆ ಇರುತ್ತದೆ. ಜೊತೆಗೆ, ಮುಖ್ಯಮಂತ್ರಿಯ ಕೆಲಸಕ್ಕಾಗಿ ಮಾತ್ರ ಕಚೇರಿ ಆಗಿರುತ್ತದೆ. ಆದರೀಗ ದೇವೇಗೌಡರು ನಾಲ್ಕನೇ ಮಹಡಿಯಲ್ಲೇ ಬಿಡಾರ ಹೂಡಿದ್ದಾರೆ. ಮುಖ್ಯಮಂತ್ರಿ ಕಚೇರಿಯೇ ದೇವೇಗೌಡರ ಕಚೇರಿಯೂ ಆಗಿದೆ!

ಮೂರೇ ಸಲಕ್ಕೆ ಮುಖ್ಯಮಂತ್ರಿ ಕಾರು ಚಾಲಕ ಬದಲು!

ಶಿಷ್ಟಾಚಾರದ ಪ್ರಕಾರ, ಮುಖ್ಯಮಂತ್ರಿ ಆದವರಿಗೆ ದೆಹಲಿಯಲ್ಲಿ ಪ್ರತ್ಯೇಕ ಕಾರು ಚಾಲಕರಿರುತ್ತಾರೆ. ವಿವಿಐಪಿ ಡ್ಯೂಟಿ ಆದುದರಿಂದ ಡ್ರೆಸ್‌ಕೋಡ್ ಕೂಡ ಇರುತ್ತದೆ. ಯಡವಟ್ಟಾಗಿದ್ದೇ ಇಲ್ಲಿ. ದೆಹಲಿಗೆ ಬಂದಿದ್ದ ಎಚ್ ಡಿ ಕುಮಾರಸ್ವಾಮಿ ತುಂಬಾ ಸರಳವಾಗಿ ಡ್ರೆಸ್ ಮಾಡಿರುತ್ತಿದ್ದರು. ಅವರ ಕಾರು ಚಾಲಕ ಥೇಟು ಯಡಿಯೂರಪ್ಪ ಅವರಂತೆ ಬಿಳಿ ಸಫಾರಿ ತೊಡುತ್ತಿದ್ದರು. ಗೊತ್ತಿಲ್ಲದ ಉತ್ತರ ಭಾರತದ ಯಾರೋ ಒಂದಿಬ್ಬರು ಸಿಎಂ ಕುಮಾರಸ್ವಾಮಿ ಅವರ ಬದಲು, ಕಾರು ಚಾಲಕನಿಗೆ ನಮಸ್ಕಾರ ಮಾಡಿಬಿಡುವುದೇ?

ಹೀಗಾಗಿದ್ದೇ ತಡ, ಕುಮಾರಸ್ವಾಮಿ ಅವರ ಮೂರೇ ಮೂರು ದೆಹಲಿ ಭೇಟಿಗೆ ಕಾರು ಚಾಲಕ ಬದಲಾಗಿಬಿಟ್ಟಿದ್ದಾನೆ. ಅಂದಹಾಗೆ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಡಿ ವಿ ಸದಾನಂದಗೌಡ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಇದ್ದದ್ದು ಕೂಡ ಇದೇ ಕಾರು ಚಾಲಕ. ಆ ಡ್ರೈವರ್ ಮೈಸೂರು ಮೂಲದವರು ಮತ್ತು ಸಿದ್ದರಾಮಯ್ಯ ಆಪ್ತರು.

ಆತ್ಮಕತೆ ಬಗ್ಗೆ ಸಿದ್ದರಾಮಯ್ಯ ಹೇಳೋದೇನು?

ಇದು ಯಾರೋ ಗುರೂಜಿ ಹೇಳಿದ ಜ್ಯೋತಿಷ್ಯ ಅಲ್ಲ.‌ ಬದಲಿಗೆ ಸ್ವತಃ ಸಿದ್ದರಾಮಯ್ಯ ಅವರೇ ಘೋಷಿಸಿದ ಭವಿಷ್ಯ. ಕ್ರಿಕೆಟ್ ನೋಡುತ್ತ ಲೋಕಾಭಿರಾಮವಾಗಿ ಮಾತನಾಡುತ್ತ ಕುಳಿತಿದ್ದ ಸಿದ್ದರಾಮಯ್ಯ ಅವರಿಗೆ, ದೆಹಲಿ ಪತ್ರಕರ್ತರು ಪುಸ್ತಕ ಬರೆಯುವಂತೆ ಸಲಹೆ ನೀಡಿದಾಗ, “ಏನು ಆತ್ಮಕತೆ ಬರೀಬೇಕಾ? ನಾನಿನ್ನೂ ಇಪ್ಪತ್ತು ವರ್ಷ ಬದುಕಿರುತ್ತೇನೆ. ಈಗಲೇ ಪುಸ್ತಕ ಬರೆದುಬಿಟ್ರೆ ಮುಂದಿನದೆಲ್ಲ ಮಿಸ್ ಆಗುಬಿಡುತ್ತದಲ್ಲ!” ಅಂತ ಹೇಳಿ ನಕ್ಕರು. "ಇಲ್ಲಿವರೆಗಿನ ಅನುಭವ ದಾಖಲಿಸಿ,” ಎಂದರೆ “ಮುಂದೆ ಮತ್ತೊಂದು ಆತ್ಮಕತೆ ಬರೀಲಾ? ಆತ್ಮಕತೆ ಯಾವತ್ತೂ ಇನ್‌ಕಂಪ್ಲೀಟ್ ಆಗಿರಬಾರದು. ನೋಡೋಣ, ಮುಂದೆ ಬರೆಯೋಣ.‌ ಹೇಗೂ ಇನ್ನೂ ಇಪ್ಪತ್ತು ವರ್ಷ ಬದುಕಿರುತ್ತೇನಲ್ಲ?” ಅಂತ ಹೇಳಿ ಪುನಃ ನಕ್ಕರು.

ಆಮೇಲೆ ಮಾತು, ಭವಿಷ್ಯ ಬಿಟ್ಟು ಬರವಣಿಗೆ ಕಡೆ ಮಗ್ಗಲು ಬದಲಿಸಿತು. “ಸೀರಿಯಸ್ ಆಗಿ ತಗೋಳಿ ಸಾರ್, ನಿಮ್ಮಂಥ ರಾಜಕಾರಣಿಗಳು ಬರೀಬೇಕು. ನಿಮ್ಮಂಥವರು ಅನುಭವಗಳನ್ನು ದಾಖಲಿಸದೆ ಇದ್ದರೆ ಮುಂದಿನ ತಲೆಮಾರಿನ‌ ಪತ್ರಕರ್ತರು ಏನನ್ನು ಅಧ್ಯಯನ ಮಾಡಬೇಕು?” ಎಂದು ಪತ್ರಕರ್ತರು ಸಲಹೆ ಸ್ವರೂಪದ ಪ್ರಶ್ನೆ ಮುಂದಿಟ್ಟರು. ಪರಿಶೀಲಿಸಲಾಗುವುದು ಎನ್ನುವ ಧಾಟಿಯಲ್ಲಿ, “ಓಕೆ ನೋಡೋಣ,” ಎಂದರು. ಇತ್ತೀಚೆಗೆ ಕಡತಗಳ ಮೇಲೆ ಹಾಗೇ ಬರೆದು ಅಭ್ಯಾಸವಂತೆ. ಸಿಎಂ ಆದಮೇಲೆ, “ಕಡತವನ್ನು ಪರಿಶೀಲಿಸತಕ್ಕದ್ದು, ಪರಿಶೀಲಿಸಿ ಕ್ರಮ‌ ಕೈಗೊಳ್ಳಲಾಗುವುದು, ಕ್ರಮ ಕೈಗೊಳ್ಳಲಾಗುವುದು,” ಎಂಬಿತ್ಯಾದಿ ಚುಟುಕು ಟಿಪ್ಪಣಿ ಬರೆಯುತ್ತಿದ್ದರಂತೆ. ಹಿಂದೆ ಬೇರೆ-ಬೇರೆ ಖಾತೆಯ ಮಂತ್ರಿಯಾಗಿದ್ದಾಗ ಯಾವುದೇ ಕಡತ ಇದ್ದರೂ ಪೂರ್ತಿ ಓದುತ್ತಿದ್ದರಂತೆ ಮತ್ತು ದೀರ್ಘ ಟಿಪ್ಪಣಿ ಬರೆಯುತ್ತಿದ್ದರಂತೆ.

ಇದನ್ನೂ ಓದಿ : ಚಾಣಕ್ಯಪುರಿ | ಬಣ ರಾಜಕೀಯ ಬಿರುಸು, ಸಿದ್ದು ಸ್ಥಾನ ತಪ್ಪಿಸಲು ನಡೆದಿದೆ ಸಂಚು!

ಟೈಂ ಪಾಸ್‌ಗೆ ಖಾನ್ ಮಾರ್ಕೆಟ್‌ಗೆ ಹೋಗಿದ್ದರು ಸಿದ್ದರಾಮಯ್ಯ

ಕಾಂಗ್ರೆಸ್ ಕಾರ್ಯಕಾರಿ ಸಭೆಗಾಗಿ ದೆಹಲಿಗೆ ಬಂದಿದ್ದ ಸಿದ್ದರಾಮಯ್ಯ, ಸಭೆ ಮುಗಿದ ಬಳಿಕ ಟೈಮ್ ಪಾಸಿಗಾಗಿ ಖಾನ್ ಮಾರ್ಕೆಟ್‌ಗೆ ಹೋಗಿದ್ದರು. ಅಲ್ಲಿಗೆ ಹೋಗಿದ್ದರು ಎಂದರೆ ಭರ್ಜರಿ ಶಾಪಿಂಗ್ ಮಾಡಿರುತ್ತಾರೆ ಅಂತ ತಿಳಿಯುವ ಅಗತ್ಯ ಇಲ್ಲ. ಸುಮ್ಮನೆ ಮಾರ್ಕೆಟ್‌ನಲ್ಲಿ‌ ಜನಸಾಮಾನ್ಯರಂತೆ ಓಡಾಡಿಕೊಂಡು ಬರುವುದಕ್ಕೆ ಹೋಗಿದ್ದರು ಅಷ್ಟೇ. ದೆಹಲಿಗೆ ಬಂದಾಗ ಆಗೊಮ್ಮೆ ಈಗೊಮ್ಮೆ ನೆಚ್ಚಿನ ಶೂ ಶೋರೂಂಗೆ ಹೋಗುವುದು ಅವರಿಗೆ ಅಭ್ಯಾಸ. ಈಗ ಹೋಗುವುದಿಲ್ಲವಂತೆ. ಈಗಾಗಲೇ ಸಿಕ್ಕಾಪಟ್ಟೆ ಶೂ ಇವೆ. ಅವನ್ನೇ ಬಳಸೋಣ, ಸುಮ್ಮನೆ ಏಕೆ ವೇಸ್ಟ್ ಮಾಡೋದು ಅಂತ ಈ ನಿರ್ಧಾರ‌ವಂತೆ.

ಖಾನ್ ಮಾರ್ಕೆಟ್ ಗೆ ತೆರಳುವ ಮುನ್ನ ಸಿದ್ದರಾಮಯ್ಯ ಆರಾಮಾಗಿ ದೆಹಲಿ ಪತ್ರಕರ್ತರ ಜೊತೆ ಹರಟೆ ಹೊಡೆದರು. ಆಮೇಲೆ, “ಟೈಮ್ ಪಾಸ್‌ಗಾಗಿ ಹೋಗ್ತಿದೀನಿ,” ಅಂತಾನೂ ಹೇಳಿದರು. ಸಾಮಾನ್ಯವಾಗಿ ದೆಹಲಿಗೆ ಬರುವ ರಾಜಕಾರಣಿಗಳು ಬಹಳ ಬ್ಯುಸಿ ಎಂದು ಫೋಸು ಕೊಡುತ್ತಾರೆ. ಹೊರಗಡೆ ಸುಮ್ಮನೆ ಓಡಾಡಿಕೊಂಡು ಬಂದು, “ಒಂದು ಇಂಪಾರ್ಟೆಂಟ್ ಮೀಟಿಂಗ್ ಇತ್ತು, ಹೋಗಿದ್ದೆ,” ಅಂತ ಹಸಿ‌ಹಸಿ ಸುಳ್ಳು ಹೇಳುತ್ತಾರೆ. ತಾನು ಪ್ರಭಾವಿ, ಬಹಳ ಸಂಪರ್ಕ‌ ಇರುವ ವ್ಯಕ್ತಿ ಎಂದು ಬಿಂಬಿಸಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಆದರೆ, ಸಿದ್ದರಾಮಯ್ಯ ನೇರವಾಗಿ ಟೈಮ್ ಪಾಸ್ ಗುಟ್ಟು ಬಿಟ್ಟುಕೊಟ್ಟರು.

‘ನ್ಯಾಷನಲ್ ಹೆರಾಲ್ಡ್’ ಯಡವಟ್ಟು, ಕಾಂಗ್ರೆಸ್‌ಗೆ ಬಿಕ್ಕಟ್ಟು

ಕಾಂಗ್ರೆಸ್ ಮುಖವಾಣಿ ಬ್ಯಾಕ್ ಟು ಬ್ಯಾಕ್ ಎರಡು ಯಡವಟ್ಟು ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ‌, “ಹೇಗಾದರೂ ಮಾಡಿ ರಫೇಲ್ ಡೀಲ್‌ನಲ್ಲಿ‌ ಪ್ರಧಾನಿ ಮೋದಿ ಅವರನ್ನು ಸಿಲುಕಿಸಬೇಕು. ರಫೇಲ್ ಯುದ್ಧವಿಮಾನ ಖರೀದಿ ಹಗರಣವನ್ನು ಮುಂಬರುವ ಲೋಕಸಭಾ ಚುನಾವಣಾ ವಿಷಯವನ್ನಾಗಿಸಬೇಕು,” ಅಂತ ಪರಿ‌ಪರಿಯಾಗಿ ಪ್ರಯತ್ನ ಮಾಡುತ್ತಿದ್ದರೆ, ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ, “ರಫೇಲ್ ಡೀಲ್ ಒಪ್ಪಂದ ಯುಪಿಎ ಅವಧಿಯಲ್ಲೇ ಆಗಿತ್ತು,” ಅಂತ ಬರೆದು ರಾಹುಲ್ ಗಾಂಧಿ ಅವರನ್ನು ಫಜೀತಿಗೆ ಸಿಲುಕಿಸಿತ್ತು. ಇದಾದ ಬಳಿಕ ಈಗ, “ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲ್ಲಲಿದೆ,” ಎನ್ನುವ ಭವಿಷ್ಯ ನುಡಿದಿದೆ.

“ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯನ್ನು ಗೆಲ್ಲಬಹುದು. ರಾಜಸ್ಥಾನದಲ್ಲೂ ಗೆಲುವು ಗ್ಯಾರಂಟಿ. ಈ ಎರಡು ಗೆಲುವುಗಳು ಟ್ರೆಂಡ್ ಸೆಟ್ ಆಗಲಿವೆ. ಮುಂಬರುವ ಲೋಕಸಭಾ ಚುನಾವಣೆ ಗೆಲುವಿಗೆ ಮುನ್ನುಡಿ ಬರೆಯುತ್ತವೆ,” ಅಂತ ಕಾಂಗ್ರೆಸ್ ಹೈಕಮಾಂಡ್ ಬಹಳ ಆಶಾವಾದ ಹೊಂದಿದೆ. ಆದರೆ, ಪಕ್ಷದ ಮುಖವಾಣಿ ವ್ಯತಿರಿಕ್ತ ಅಭಿಪ್ರಾಯ ಪ್ರಕಟಿಸಿದೆ!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More