ನೋಟು ಅಮಾನ್ಯ ಗುಮ್ಮ ಪ್ರಧಾನಿ ನರೇಂದ್ರ ಮೋದಿಗೆ ಕಂಟಕವಾಗಲಿದೆಯೇ?

ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯದ ಸಾಧಕ-ಬಾಧಕ ಪರಿಶೀಲನೆಗೆ ಆಗಸ್ಟ್‌ ಎರಡನೇ ವಾರದಲ್ಲಿ ಸಭೆ ನಡೆಸುತ್ತದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ಕುರಿತಾದ ಚರ್ಚೆ ಮುನ್ನೆಲೆಗೆ ಬರುವ ಸಾಧ್ಯತೆ ಇದೆ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೋಟು ರದ್ದತಿ ಕ್ರಮದ ದೋಷಗಳನ್ನು ದಾಖಲಿಸಲಾಗಿದೆ ಎನ್ನಲಾದ ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಕರಡು ವರದಿಗೆ ಮರುಜೀವ ದೊರೆಯಲಿದ್ದು, ಮತ್ತೊಂದು ಸುತ್ತಿನ ಬಿಸಿಬಿಸಿ ಚರ್ವೆಗೆ ರಾಷ್ಟ್ರ ರಾಜಕಾರಣ ವೇದಿಕೆಯಾಗುವ ಸಾಧ್ಯತೆ ಇದೆ.

ಭಯೋತ್ಪಾದನೆ ಹಾಗೂ ಕಾಳಧನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ೨೦೧೬ರ ನವೆಂಬರ್‌ ೮ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ೫೦೦ ಹಾಗೂ ೧,೦೦೦ ರುಪಾಯಿ ಮುಖಬೆಲೆಯ ನೋಟು ರದ್ದತಿ ನಿರ್ಧಾರ ಕೈಗೊಂಡಿತ್ತು. ಈಗ ಮೋದಿ ಅವರ ನೋಟು ಅಮಾನ್ಯ ನಿರ್ಧಾರಕ್ಕೆ ಸಂಬಂಧಿಸಿದಂತೆ ಹಣಕಾಸು ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಅದರ ಸಾಧಕ-ಬಾಧಕಗಳ ಕರಡು ವರದಿಯನ್ನು ಮರುಪರಿಶೀಲಿಸಲು ನಿರ್ಧರಿಸಿದೆ ಎನ್ನಲಾಗಿದೆ. ಕಾಂಗ್ರೆಸ್‌ ಸಂಸದ ಎಂ ವೀರಪ್ಪ ಮೊಯ್ಲಿ ಅವರು ಸಮಿತಿ ಅಧ್ಯಕ್ಷರಾಗಿದ್ದು, ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಸಮಿತಿಯ ವರದಿಯು ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯ ಕೇಂದ್ರಬಿಂದುವಾಗುವ ಸಾಧ್ಯತೆ ಇದೆ.

ಮುಂಗಾರು ಅಧಿವೇಶಕ್ಕೆ ತೆರೆ ಬೀಳುತ್ತಿದ್ದಂತೆ ಕರಡು ವರದಿಯ ಪರಿಶೀಲನೆಗಾಗಿ ಮೊಯ್ಲಿ ಅವರು ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ‘ದಿ ಪ್ರಿಂಟ್‌’ ವರದಿ ಮಾಡಿದೆ. “ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಊರ್ಜಿತ್‌ ಪಟೇಲ್‌, ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ಇದಕ್ಕೆ ಸಂಬಂಧಿಸಿದವರು ಮೋದಿ ಅವರು ಪ್ರತಿಪಾದನೆಗೆ ಪೂರಕವಾಗಿ ಪುರಾವೆ ಒದಗಿಸಲು ವಿಫಲರಾಗಿದ್ದಾರೆ. ಅಧಿಕಾರಿಗಳು ಹಾಗೂ ಸಂಬಂಧಪಟ್ಟವರು ಸಮಿತಿಯ ಮುಂದೆ ನೀಡಿದ ಹೇಳಿಕೆ ಹಾಗೂ ದಾಖಲೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ” ಎಂದು ಸಮಿತಿಯ ಸದಸ್ಯರಲ್ಲೊಬ್ಬರಾದ ಕಾಂಗ್ರೆಸ್‌ ಸಂಸದ ತಿಳಿಸಿದ್ದಾರೆ.

ಇನ್ನೊಂದು ಕಡೆ ಸಂದೀಯ ವ್ಯವಹಾರಗಳ ಸಮಿತಿಯ ವರದಿಯನ್ನು ವಿರೋಧಿಸಿ ಸಮಿತಿಯಲ್ಲಿರುವ ಬಿಜೆಪಿ ಸಂಸದರು ಮೊಯ್ಲಿ ಅವರಿಗೆ ಪತ್ರ ಬರೆದಿದ್ದು, ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಸಂಸತ್‌ನಲ್ಲಿ ಮಂಡಿಸಲಾಗುವ ವರದಿಯನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ. ಸಮಿತಿಯಲ್ಲಿ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ನಮ್ಮದು ಭಿನ್ನ ನಿಲುವಾಗಿ ಪ್ರಸ್ತುತವಾಗಬಾರದು. ವರದಿಯಲ್ಲಿ ಬಹುಮತದ ದೃಷ್ಟಿಕೋನ ಪ್ರತಿಫಲವಾಗಬೇಕು. ತದ್ವಿರುದ್ಧ ನಿಲುವು ಹೊಂದಿರುವವರು ಭಿನ್ನ ಹೇಳಿಕೆ ದಾಖಲಿಸಬಹುದು” ಎಂದು ಸಮಿತಿಯಲ್ಲಿರುವ ಬಿಜೆಪಿ ಸಂದರೊಬ್ಬರು ವಾದಿಸಿದ್ದಾರೆ.

ಕಳೆದ ಜೂನ್‌ನಲ್ಲಿ ನೋಟು ಅಮಾನ್ಯೀಕರಣಕ್ಕೆ ಸಂಬಂಧಿಸಿದಂತೆ ಸಮಿತಿಯ ಮುಂದೆ ಹೇಳಿಕೆ ದಾಖಲಿಸಲು ಹಾಜರಾಗಿದದ್ದ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರನ್ನು ಕೇಂದ್ರ ಸರ್ಕಾರದ ನಿರ್ಧಾರದ ನಂತರ ಎಷ್ಟು ಮೌಲ್ಯದ ಕರೆನ್ಸಿ ಬ್ಯಾಂಕ್‌ಗೆ ವಾಪಸಾಗಿದೆ ಎಂದು ಸಮಿತಿ ಸದಸ್ಯರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಊರ್ಜಿತ್ ಅವರು, “ನೆರೆಯ ನೇಪಾಳ ಮತ್ತು ಭೂತಾನ್‌ನಲ್ಲಿ ಚಲಾವಣೆಯಲ್ಲಿರುವ ಅಮಾನ್ಯಗೊಂಡ ನೋಟುಗಳು ಎಣಿಕೆ ಚಾಲ್ತಿಯಲ್ಲಿದೆ. ಪ್ರಕ್ರಿಯೆ ಅಪೂರ್ಣವಾಗಿದೆ,” ಎಂದು ಹೇಳಿದ್ದರು.

ಇದರ ಮಧ್ಯೆ, ನೋಟು ಅಮಾನ್ಯೀಕರಣ ವಿಚಾರವನ್ನು ಬಡವರು ಮತ್ತು ಶ್ರೀಮಂತರ ನಡುವಿನ ಹೋರಾಟ ಎಂದು ಬಿಂಬಿಸಿ ಬಿಜೆಪಿಯು ಹಲವು ಚುನಾವಣೆಗಳಲ್ಲಿ ಗೆಲುವು ಸಾಧಿಸಿತ್ತು. “ನೋಟು ಅಮಾನ್ಯೀಕರಣ ಏಕಪಕ್ಷೀಯ ನಿರ್ಧಾರವಾಗಿದ್ದು, ದೇಶದ ಅರ್ಥವ್ಯವಸ್ಥೆಯ ಅರಿವಿಲ್ಲದ ವ್ಯಕ್ತಿ ಮಾತ್ರ ಹೀಗೆ ಮಾಡಲು ಸಾಧ್ಯ” ಎಂದು ವಿರೋಧ ಪಕ್ಷಗಳು ಸಂಸತ್‌ನ ಹೊರಗೆ ಹಾಗೂ ಒಳಗೆ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು. ನೋಟು ಅಮಾನ್ಯೀಕರಣಕ್ಕೆ ಒಂದು ವರ್ಷವಾದ ಸಂದರ್ಭದಲ್ಲಿ ೨೦೧೭ರ ನವೆಂಬರ್ ೮ರಂದು ದೇಶಾದ್ಯಂತ ವಿರೋಧ ಪಕ್ಷಗಳು ಕರಾಳ ದಿನ ಆಚರಿಸಿದ್ದನ್ನು ಇಲ್ಲಿ ನೆನೆಯಬಹುದು.

ರಾಜ್ಯಸಭೆಯಲ್ಲಿ ನೋಟು ಅಮಾನ್ಯೀಕರಣ ನಿರ್ಣಯದ ಮೇಲೆ ಮಾತನಾಡಿದ್ದ ಮಾಜಿ ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್‌ ಅವರು, “ನೋಟು ರದ್ದತಿಯು ಸಂಘಟಿತ ಲೂಟಿ ಹಾಗೂ ಕಾನೂನಾತ್ಮಕ ಸುಲಿಗೆ,” ಎಂದು ವಾಗ್ದಾಳಿ ನಡೆಸಿದ್ದರು. “ನೋಟು ರದ್ದತಿಯಿಂದ ಅಲ್ಪಾವಧಿ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿ,” ಎಂಬ ಸರ್ಕಾರದ ಸಮರ್ಥನೆಗೆ ಖ್ಯಾತ ಅರ್ಥಶಾಸ್ತ್ರಜ್ಞ ಜಾನ್‌ ಮೆನಾರ್ಡ್‌ ಅವರ “ದೀರ್ಘಾವಧಿಯಲ್ಲಿ ನಾವೆಲ್ಲ ಸತ್ತುಹೋಗಿರುತ್ತೇವೆ,” ಎಂಬ ಹೇಳಿಕೆ ಉಲ್ಲೇಖಿಸಿ ಟೀಕಾಪ್ರಹಾರ ನಡೆಸಿದ್ದರು.

ನೋಟು ಅಮಾನ್ಯ ಸಂದರ್ಭದಲ್ಲಿ ಮೋದಿ ಅವರು ದೇಶದಲ್ಲಿ ಚಲಾವಣೆಯಲ್ಲಿದ್ದ ೧೫.೪ ಲಕ್ಷ ಕೋಟಿ ಮೌಲ್ಯದ ೫೦೦ ಹಾಗೂ ೧ ಸಾವಿರ ರುಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ, ೪ ಲಕ್ಷ ಕೋಟಿ ರುಪಾಯಿ ಮೌಲ್ಯದ ಕಾಳಧನವನ್ನು ದೇಶದ ಆರ್ಥಿಕತೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಘೋಷಿಸಿದ್ದರು. ಆದರೆ, ಕಾಳಧನ ಮುಟ್ಟುಗೋಲು ಹಾಕಿಕೊಂಡಿದ್ದು ೧೬ ಸಾವಿರ ಕೋಟಿ ರುಪಾಯಿ ಮಾತ್ರ. ಈ ಪ್ರಕ್ರಿಯೆಯಲ್ಲಿ ಶೇ.೧೧೦ರಷ್ಟು ನೋಟು ಬದಲಾಯಿಸಲ್ಪಟ್ಟಿವೆ. ಇದರರ್ಥ ಅಪಾರ ಪ್ರಮಾಣದ ಕಾಳಧನ ಬಿಳಿಯಾಗಿ ಬದಲಾಗಿದೆ. ನೋಟು ಅಮಾನ್ಯೀಕರಣದ ನಂತರ ಹೊಸ ನೋಟುಗಳ ಮುದ್ರಣಕ್ಕೆ ೮,೫೮೦ ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಎಟಿಎಂಗಳ ಮರು ವಿನ್ಯಾಸಕ್ಕಾಗಿ ೯೫೦ ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. ನೋಟು ಬದಲಾವಣೆಗಾಗಿ ಬ್ಯಾಂಕ್‌ ನೌಕರರು ೫೦ ದಿನ ಹೆಚ್ಚುವರಿಯಾಗಿ ಕೆಲಸ ಮಾಡಿದ್ದಕ್ಕಾಗಿ ೧೫ ಸಾವಿರ ಕೋಟಿ ರುಪಾಯಿ ವೆಚ್ಚವಾಗಿದ್ದು, ಒಟ್ಟಾರೆ ನೋಟು ರದ್ದತಿಯಿಂದಾಗಿ ಸರ್ಕಾರಕ್ಕೆ ೩೨ ಸಾವಿರ ಕೋಟಿ ರುಪಾಯಿ ಹೊರೆ ಬಿದ್ದಿದೆ. ೧೬ ಸಾವಿರ ಕೋಟಿ ರುಪಾಯಿ ಸಂಗ್ರಹಿಸಲು ೩೨ ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ನೋಟು ರದ್ದತಿಯಿಂದ ದೇಶದ ಜೆಡಿಪಿಯಲ್ಲಿ ಸರಾಸರಿ ಶೇ.೪ರಷ್ಟು ಕುಂಠಿತವಾಗಿದೆ ಎಂದು ಹಲವು ಅರ್ಥಶಾಸ್ತ್ರಜ್ಞರು ಹಾಗೂ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. .

ಇದನ್ನೂ ಓದಿ : ನೋಟು ಅಪಮೌಲ್ಯ ಸಮರ್ಥಿಸಿದವರು ಯಾರು? ವಿರೋಧಿಸಿದ್ದು ಯಾರು?

ಇದರಾಚೆಗೆ ನೋಟು ರದ್ದತಿಯಿಂದಾಗಿ ನೆರೆಯ ರಾಷ್ಟ್ರದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಹರಿದು ಬರಲಿರುವ ಖೋಟಾ ನೋಟುಗಳಿಗೆ ತಡೆ ಬೀಳಲಿದೆ. ಇದರಿಂದ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ತಹಬಂದಿಗೆ ಬರಲಿವೆ ಎಂದು ಮೋದಿ ಅವರು ಪಾಕಿಸ್ತಾನದ ಹೆಸರು ಪ್ರಸ್ತಾಪಿಸಿದೆ ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಆದರೆ, ಮೋದಿ ಅವರು ಹೇಳಿದಂತೆ ಯಾವುದೇ ಬೆಳವಣಿಗೆಗಳು ಆಗಲಿಲ್ಲ. ಬದಲಿಗೆ ಭಯೋತ್ಪಾದನಾ ಕೃತ್ಯಗಳು ಹೆಚ್ಚಿದವು. ಕಾಶ್ಮೀರ ಹಿಂದೆಂದಿಗಿಂತಲೂ ಹೆಚ್ಚು ಪ್ರಕ್ಷುಬ್ಧವಾಯಿತು. ಅಂತಿಮವಾಗಿ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿರುವುದನ್ನು ಅರಿತು ಮೆಹಬೂಬ ಮುಫ್ತಿ ನೇತೃತ್ವದ ಪಿಡಿಪಿಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಸ್‌ ಪಡೆದಿತ್ತು. ಇದರಿಂದ ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಾಷ್ಟ್ರಪತಿ ಆಡಳಿತ ಹೇರುವಂತಾಗಿದೆ. ಈಗ ಈ ಎಲ್ಲಾ ವಿಚಾರಗಳು ಹಣಕಾಸು ವ್ಯವಹಾರಗಳ ಸಂಸದೀಯ ಸಮಿತಿ ವರದಿ ಸಾರ್ವಜನಿಕಗೊಳ್ಳುವುದರೊಂದಿಗೆ ಮತ್ತೊಮ್ಮೆ ರಾಷ್ಟ್ರ ರಾಜಕಾರಣದಲ್ಲಿ ಚಾಲ್ತಿಗೆ ಬರಲಿದ್ದು, ಮೋದಿ ಸರ್ಕಾರಕ್ಕೆ ಕಂಟಕವಾಗುವ ಸಾಧ್ಯತೆ ಇದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More