ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಸಿದ್ಧಗೊಂಡ ಅಖಾಡ

ಎನ್‌ಡಿಎ ಮೈತ್ರಿಕೂಡಕ್ಕೆ ಒರಿಸ್ಸಾ ಸಿಎಂ ನವೀನ್‌ ಪಟ್ನಾಯಕ್‌ ಅವರ ಬಿಜು ಜನತಾದಳ‌ ಹಾಗೂ ತೆಲಂಗಾಣ ಸಿಎಂ ಚಂದ್ರಶೇಖರ ರಾವ್‌ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿಯ ಬೆಂಬಲ ದೊರೆತರೆ, ಎನ್‌ಡಿಎ ಅಭ್ಯರ್ಥಿ ರಾಜ್ಯಸಭಾ ಉಪಸಭಾಪತಿಯಾಗಿ ಆಯ್ಕೆ ಆಗಬಹುದು

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ನೇತೃತ್ವದ ಜೆಡಿಯುನ ಹರಿವಂಶ ನಾರಾಯಣ ಸಿಂಗ್‌ ಅವರು ಗುರುವಾರ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೇರಲು 123 ಸದಸ್ಯರ ಸಂಖ್ಯಾಬಲ ಬೇಕಿದ್ದು, ಹಿಂದಿನಿಂದಲೂ ಈ ಸ್ಥಾನವನ್ನು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳೇ ಅಲಂಕರಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಡಕ್ಕೆ ಒರಿಸ್ಸಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಬಿಜು ಜನತಾದಳ‌ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್‌ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿಯ ಬೆಂಬಲ ದೊರೆತರೆ, ಎನ್‌ಡಿಎ ಅಭ್ಯರ್ಥಿಯು ರಾಜ್ಯಸಭಾ ಉಪಸಭಾಪತಿಯಾಗಿ ಆಯ್ಕೆ ಆಗಬಹುದು ಎನ್ನಲಾಗಿದೆ.

ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲು ಸೋಮವಾರ ಸಂಜೆ ಸಭೆ ಸೇರಲಿವೆ ಎಂದು ತಿಳಿದುಬಂದಿದೆ. ತೃಣಮೂಲ ಕಾಂಗ್ರೆಸ್‌ ಮುಖಂಡ ಸುಖೇಂದು ಶೇಖರ್‌ ರಾಯ್‌ ಅವರನ್ನು ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸಲಿವೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರದ ಅಭ್ಯರ್ಥಿಯಾಗಿರುವ ಜೆಡಿಯುನ ಹರಿವಂಶ ನಾರಾಯಣ ಸಿಂಗ್‌ ಅವರು ಹಿರಿಯ ಪತ್ರಕರ್ತರಾಗಿದ್ದು, ಮೊದಲ ಬಾರಿಗೆ ಸಂಸದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರವಾಗಿ ಜೆಡಿಯು ಹಾಗೂ ಬಿಜೆಪಿ ನಡುವೆ ಬಿನ್ನಾಭಿಪ್ರಾಯಗಳು ಸ್ಫೋಟಗೊಂಡಿದ್ದರ ಬಗ್ಗೆ ವರದಿಯಾದ ಬೆನ್ನಲೇ ಕೇಂದ್ರ ಸರ್ಕಾರ ಈ ನಿರ್ಧಾರ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : ರಾಜ್ಯಸಭೆ ಚುನಾವಣೆ | ನಮ್ಮ ರಾಜ್ಯದಿಂದ ಇವರಲ್ಲೇ ನಾಲ್ವರು ಆಯ್ಕೆ ಆಗಬಾರದೇಕೆ?

ಕಾಂಗ್ರೆಸ್ ಮುಖಂಡ ಪಿ ಜೆ ಕುರಿಯನ್‌ ಅವರು 2012 ರಿಂದ ರಾಜ್ಯಸಭಾ ಉಪಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಅಧಿಕಾರಾವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 245 ಸದಸ್ಯರನ್ನೊಳಗೊಂಡ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು 51 ಸ್ಥಾನ ಹೊಂದಿದ್ದು, ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಕೋರುವುದು ಕಾಂಗ್ರೆಸ್ಸಿನ ಹಕ್ಕಾಗಿದೆ. ಆದರೆ, ಬಿಜು ಜನತಾದಳ ಹಾಗೂ ಟಿಆರ್‌ಎಸ್‌ ಪಕ್ಷಗಳು ಎನ್‌ಡಿಎ ಆಯ್ಕೆ ಮಾಡಿರುವ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ತಿಳಿಸಿದ್ದು, ಕಾಂಗ್ರೆಸಿಗೆ ಹಿನ್ನೆಡೆಯಾಗುವ ಸಾಧ್ಯತೆಗಳು ಅಧಿಕವಾಗಿವೆ.

ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ 1992 ರಲ್ಲಿ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ನಜ್ಮಾ ಹೆಪ್ತುಲ್ಲಾ‌ ಅವರು ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದರು, ರೇಣುಕಾ ಚೌದರಿ ಅವರು ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದರು. ನಜ್ಮಾ ಹೆಪ್ತುಲ್ಲಾ ಅವರು 128 ಮತಗಳನ್ನು ಗಳಿಸಿ ಉಪಸಭಾಪತಿಯಾಗಿ ಆಯ್ಕೆಯಾದರೆ, ರೇಣುಕಾ ಚೌಧರಿ ಅವರು 95 ಮತಗಳನ್ನು ಗಳಿಸುವಲ್ಲಿ ಸಫಲರಾಗಿದ್ದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More