ಲೆಕ್ಕಪತ್ರ ಸಮಿತಿಗೆ ಅಶೋಕ್‌, ಎಂ ಬಿ ಪಾಟೀಲ್‌ಗೆ ಸಾರ್ವಜನಿಕ ಉದ್ದಿಮೆ ಸಮಿತಿ ನೇತೃತ್ವ

ವಿಧಾನ ಮಂಡಲದ ಸದನ ಸಮಿತಿಗಳನ್ನು ರಚಿಸಲಾಗಿದ್ದು, ಜಂಟಿ ಸದನ ಸಮಿತಿಗಳ ಪೈಕಿ ೫ ಕಾಂಗ್ರೆಸ್‌ ಪಾಲಾಗಿವೆ. ವಿಧಾನಸಭಾ ೫ ಸಮಿತಿಗಳ ಅಧ್ಯಕ್ಷ ಸ್ಥಾನವು ಜೆಡಿಎಸ್‌ಗೆ ಒಲಿದಿವೆ. ಉಪಸಭಾಪಪತಿ ಹಾಗೂ ಜೆಡಿಎಸ್‌ ಚಿಂತಾಮಣಿ ಶಾಸಕ ಜೆ ಕೃಷ್ಣಾರೆಡ್ಡಿ ಮೂರು ಸಮಿತಿಗಳ ಮುಖ್ಯಸ್ಥರಾಗಿದ್ದಾರೆ

ಕಾಂಗ್ರೆಸ್‌-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡು ತಿಂಗಳ ನಂತರ ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳನ್ನು ಸೋಮವಾರ ರಚಿಸಲಾಗಿದೆ. ಒಂಬತ್ತು ಜಂಟಿ ಸದನ ಸಮಿತಿಗಳು ಹಾಗೂ ೬ ವಿಧಾನಸಭಾ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಒಟ್ಟು ೯ ಜಂಟಿ ಸದನ ಸಮಿತಿಗಳ ಪೈಕಿ ೫ ಕಾಂಗ್ರೆಸ್‌ ಪಾಲಾಗಿದ್ದು, ವಿರೋಧ ಪಕ್ಷವಾದ ಬಿಜೆಪಿ ೨ ಹಾಗೂ ಜೆಡಿಎಸ್‌ ಪಾಲಿಗೆ ಒಂದು ಸಮಿತಿಯ ಅಧ್ಯಕ್ಷ ಸ್ಥಾನ ದೊರೆತಿದೆ, ಮತ್ತೊಂದು ಸಮಿತಿಗೆ ವಿಧಾನ ಪರಿಷತ್‌ ಸಭಾಪತಿ ಅಧ್ಯಕ್ಷರಾಗಿರಲಿದ್ದಾರೆ. ಇನ್ನು ವಿಧಾನಸಭೆಯ ೬ ಸಮಿತಿಗಳ ಪೈಕಿ ೫ ಅಧ್ಯಕ್ಷ ಸ್ಥಾನಗಳು ಜೆಡಿಎಸ್‌ ಶಾಸಕರಿಗೆ ಸೇರಿದ್ದು, ೩ ಸಮಿತಿಗಳಿಗೆ ಜೆಡಿಎಸ್‌ನ ಚಿಂತಾಮಣಿ ಶಾಸಕ ಹಾಗೂ ವಿಧಾನಸಭಾ ಉಪಸಭಾಪತಿ ಜೆ ಕೃಷ್ಣಾರೆಡ್ಡಿ ಅವರನ್ನು ನೇಮಿಸಲಾಗಿದೆ.

ಜಂಟಿ ಸದನ ಸಮಿತಿಗಳ ಪೈಕಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ಬಿಜೆಪಿಯ ಆರ್‌ ಅಶೋಕ್‌ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯಲ್ಲಿ ಅಶೋಕ್‌ ಸೇರಿದಂತೆ ೮ ಮಂದಿ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್‌ನ ೫ ಹಾಗೂ ಜೆಡಿಎಸ್‌ನ ಇಬ್ಬರು ಶಾಸಕರು ಸ್ಥಾನ ಪಡೆದಿದ್ದಾರೆ. ವಿವಿಧ ಪಕ್ಷಗಳ ವಿಧಾನ ಪರಿಷತ್‌ನ ಐವರು ಸದಸ್ಯರು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

ಸಾರ್ವಜನಿಕ ಉದ್ದಿಮೆಗಳ ಸಮಿತಿಯ ನೇತೃತ್ವವನ್ನು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಎಂ ಬಿ ಪಾಟೀಲ್‌ ವಹಿಸಲಿದ್ದಾರೆ. ಸಮಿತಿಯಲ್ಲಿ ವಿಧಾನ ಪರಿಷತ್‌ನ ೫ ಸದಸ್ಯರು ಸೇರಿದಂತೆ ಒಟ್ಟು ೨೦ ಮಂದಿ ಸಮಿತಿಯ ಸದಸ್ಯರಾಗಿದ್ದಾರೆ. ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳ ಸಮಿತಿಯ ನೇತೃತ್ವವು ಜೆಡಿಎಸ್‌ ಶಾಸಕ ಎಚ್‌ ಕೆ ಕುಮಾರಸ್ವಾಮಿ ಅವರ ಹೆಗಲೇರಿದೆ. ಇಲ್ಲಿ ವಿಧಾನಸಭೆಯ ೧೫ ಸದಸ್ಯರು ಹಾಗೂ ಕಾಂಗ್ರೆಸ್‌ನ ನಾಲ್ವರು ಸೇರಿದಂತೆ ೧೯ ಮಂದಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌-ಜೆಡಿಎಸ್‌ ಮೇಲಾಟಕ್ಕೆ ದಾಳ ಆಗಲಿದ್ದಾರೆಯೇ ಬಸವರಾಜ ಹೊರಟ್ಟಿ?

ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗೆ ಕಾಂಗ್ರೆಸ್‌ ಶಾಸಕ ಎನ್‌ ಎ ಹ್ಯಾರಿಸ್‌ ಅಧ್ಯಕ್ಷರಾಗಿದ್ದು, ೨೦ ಸದಸ್ಯರ ತಂಡವನ್ನು ಅವರು ಮುನ್ನಡೆಸಲಿದ್ದಾರೆ. ಅಧೀನ ಶಾಸನ ರಚನಾ ಸಮಿತಿಗೆ ಮಾಜಿ ಸಚಿವ ವಿ ಮುನಿಯಪ್ಪ ನೇತೃತ್ವ ವಹಿಸಲಿದ್ದಾರೆ. ಈ ಸಮಿತಿಯಲ್ಲಿ ಉಭಯ ಸದನಗಳ ೧೯ ಶಾಸಕರು ಇರಲಿದ್ದಾರೆ. ಕಾಗದ ಪತ್ರಗಳ ಸಮಿತಿಗೆ ಬಿಜೆಪಿಯ ಶಾಸಕ ಕೆ ಜಿ ಬೋಪಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಕಾಂಗ್ರೆಸ್‌ ಎಸ್‌ ಟಿ ಸೋಮಶೇಖರ್‌, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಗೆ ಕಾಂಗ್ರೆಸ್‌ನ ಬಿ ಕೆ ಸಂಗಮೇಶ್ವರ್‌ ಅಧ್ಯಕರಾಗಿ ನೇಮಕಗೊಂಡಿದ್ದಾರೆ. ಗ್ರಂಥಾಲಯ ಸಮಿತಿಗೆ ವಿಧಾನ ಪರಿಷತ್‌ ಸಭಾಪತಿ ಮುಖ್ಯಸ್ಥರಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಏಳು ಮಂದಿ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿಧಾನಸಭೆಯ ಅಂದಾಜು ಸಮಿತಿಗೆ ಜೆಡಿಎಸ್‌ನ ಕೆ ಶ್ರೀನಿವಾಸಗೌಡ ಅಧ್ಯಕ್ಷರಾಗಿದ್ದು, ಇತರ ೧೭ ಮಂದಿ ಶಾಸಕರು ಸದಸ್ಯರಾಗಿರಲಿದ್ದಾರೆ. ಸರ್ಕಾರಿ ಭರವಸೆಗಳ ಸಮಿತಿಗೆ ಜೆಡಿಎಸ್‌ ಶಾಸಕ ಎ ಟಿ ರಾಮಸ್ವಾಮಿ, ಹಕ್ಕುಬಾದ್ಯತೆಗಳ ಸಮಿತಿಗೆ ಕಾಂಗ್ರೆಸ್‌ನ ಈಶ್ವರ ಖಂಡ್ರೆ, ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳು, ಅರ್ಜಿಗಳು ಹಾಗೂ ವಸತಿ ಸೌಕರ್ಯ ಸಮಿತಿಗೆ ಉಪ ಸಭಾಧ್ಯಕ್ಷ ಹಾಗೂ ಜೆಡಿಎಸ್‌ನ ಎಂ ಕೃಷ್ಣಾರೆಡ್ಡಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More