ಚರಿತ್ರೆಯ ಆಯ್ದ ವ್ಯಕ್ತಿಗಳ ಸ್ಮರಣೆ; ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊಸ ದಾಳ

ಪ.ಬಂಗಾಳದಲ್ಲಿ ನೆಲೆ ಭದ್ರಪಡಿಸಿಕೊಳ್ಳಲು ಮುಂದಾಗಿರುವ ಬಿಜೆಪಿ, ಗೋವಿನ ರಾಜಕೀಯದ ಬದಲು ಬೇರೊಂದು ದಾಳ ಉದುರಿಸಲು ಹೊರಟಿದೆ. ಆದರೆ, ಮುಕ್ತ ಚಿಂತನೆಯಲ್ಲಿ ನಂಬಿಕೆ ಇಟ್ಟಿರುವ ಈ ನೆಲದಲ್ಲಿ ಅದು ಈಡೇರೀತೇ? ‘ಹಿಂದುಸ್ತಾನ್ ಟೈಮ್ಸ್‌’ ವಿಶ್ಲೇಷಣೆಯ ಭಾವಾನುವಾದ ಇಲ್ಲಿದೆ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳುವ ದೂರಾಲೋಚನೆಯಿಂದ ಭಾರತೀಯ ಜನತಾ ಪಕ್ಷವು ಬಂಗಾಳಿಗರ ಮನೋಭೂಮಿಕೆಯನ್ನು ಕದಲಿಸುವ ಪ್ರಯತ್ನಕ್ಕೆ ಇಳಿದಿದೆ. “ಬಂಗಾಳದಲ್ಲಿ ಗೋ ರಾಜಕೀಯ ನಡೆಯದು,” ಎನ್ನುವ ಮಮತಾ ದೀದಿ ಗುಡುಗು ಕೊನೆಗೂ ಬಿಜೆಪಿಗೆ ಅರ್ಥವಾದಂತಿದೆ. ಇದೇ ಕಾರಣಕ್ಕೆ ಚರಿತ್ರೆಯ ನಿರ್ದಿಷ್ಟ ಹೆಸರುಗಳನ್ನು ಮುಂದಿಟ್ಟುಕೊಂಡು ಹೊಸ ದಾಳ ಉರುಳಿಸುವುದಕ್ಕೆ ಹೊರಟಿದೆ. ಬಂಗಾಳದ ಜನಮಾನಸದಿಂದ ಮರೆಯಾದ ರಾಜ್ ನಾರಾಯಣ ಬಸು, ಆಚಾರ್ಯ ಪ್ರಫುಲ್ಲ ಚಂದ್ರ ರಾಯ್, ರಜಾವುಲ್ ಕರೀಂ, ರಮಾನಂದ ಚಟರ್ಜಿ ಮುಂತಾದವರ ಸಾಧನೆಗಳನ್ನು ನೆನಪಿಸಿಕೊಡುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ.

19ನೇ ಶತಮಾನದಲ್ಲಿ ಬಂಗಾಳ ಪುನರುತ್ಥಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ ನಾರಾಯಣ ಬಸು 1867ರಲ್ಲಿ ನಡೆದ ಹಿಂದೂ ಮೇಳ ಕರ್ತರಲ್ಲಿ ಒಬ್ಬರಾಗಿದ್ದರು. ಭಾರತೀಯ ನಾಗರಿಕತೆಯ ಭವ್ಯ ಚರಿತೆಯ ಸಂಭ್ರಮಾಚರಣೆಯ ಉದ್ದೇಶ ಈ ಮೇಳದ ಹಿಂದೆ ಇತ್ತು. ಈ ಮೇಳವು ‘ರಾಷ್ಟ್ರೀಯ ಮೇಳ’ ಹಾಗೂ ‘ಸ್ವದೇಶಿ ಮೇಳ’ ಎಂದೇ ಜನಜನಿತವಾಯಿತು. ಮಾತ್ರವಲ್ಲ, ಇದನ್ನು ‘ಹಿಂದು ಪುನರುತ್ಥಾನ’ದ ಆರಂಭ ಎಂದೂ ಬಿಂಬಿಸಲಾಗಿತ್ತು.

ವಿಜ್ಞಾನಿ ಹಾಗೂ ಉದ್ಯಮಿ ಆಚಾರ್ಯ ಪ್ರಫುಲ್ಲ ಚಂದ್ರ ರಾಯ್ ಅವರ 'ಹಿಸ್ಟರಿ ಆಫ್ ಹಿಂದೂ ಕೆಮೆಸ್ಟ್ರಿ- ಪ್ರಾಚೀನ ಕಾಲದಿಂದ 16ನೇ ಶತಮಾನದ ಮಧ್ಯಮಾವಧಿ' ಕೃತಿಯು ವೇದಕಾಲದಿಂದ ಮೊದಲುಗೊಂಡು ಭಾರತದ ಸ್ವದೇಶಿ ರಾಸಾಯನಿಕ ಪದ್ಧತಿಗಳನ್ನು ದಾಖಲಿಸಿದೆ. 20ನೇ ಶತಮಾನದ ಪ್ರಮುಖ ಚಿಂತಕ ರಜಾವುಲ್ ಕರೀಂ ಉದಾರ ರಾಷ್ಟ್ರೀಯವಾದಿಯಾಗಿದ್ದರು ಮತ್ತು ಮುಸ್ಲಿಂ ಲೀಗ್‌ನ ‘ಎರಡು ದೇಶ ಸಿದ್ಧಾಂತ’ವನ್ನು ಕಟುವಾಗಿ ವಿರೋಧಿಸಿದ್ದರು. ಭಾರತದ ಹಿಂದೂಗಳು ಹಾಗೂ ಮುಸ್ಲಿಮರನ್ನು ಒಂದೇ ಸಂಸ್ಕೃತಿಯು ಒಗ್ಗೂಡಿಸಿದೆ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು.

‘ಪ್ರಬಾಸಿ’ ಎನ್ನುವ ಬಂಗಾಳಿ ಹಾಗೂ 'ಮಾಡರ್ನ್ ರಿವ್ಯೂ' ಎನ್ನುವ ಇಂಗ್ಲಿಷ್ ಮಾಸಪತ್ರಿಕೆಗಳ ಸಂಪಾದಕರಾಗಿದ್ದ ರಮಾನಂದ ಚಟರ್ಜಿಯವರು 1930ರ ದಶಕದ ಉತ್ತರಾರ್ಧ ಹಾಗೂ 1940ರ ದಶಕದ ಆರಂಭಿಕ ಘಟ್ಟದಲ್ಲಿ ನಡೆದ ಹಿಂದೂ ಕ್ರೋಡೀಕರಣ ಚಳವಳಿಯನ್ನು ಬೆಂಬಲಿಸಿದ್ದರು.

ಕವಿ ಬಂಕಿಮಚಂದ್ರ ಚಟರ್ಜಿ, ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರಲ್ಲದೆ ಬಸು, ರಾಯ್, ಕರೀಂ ಹಾಗೂ ರಮಾನಂದ ಚಟರ್ಜಿಯವರಂತಹ ವ್ಯಕ್ತಿಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಬಂಗಾಳದಲ್ಲಿ ಹೇಗಾದರೂ ಮಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿದೆ ಬಿಜೆಪಿ. ಇದರ ಹಿಂದೆ ಬಂಗಾಳದ ಅಸ್ಮಿತೆಯನ್ನು ಮರುವ್ಯಾಖ್ಯಾನಿಸುವ ಉದ್ದೇಶ ಕೂಡ ಸ್ಪಷ್ಟವಾಗಿ ಕಾಣುತ್ತಿದೆ.

ಬಿಜೆಪಿ ಹಾಗೂ ಅದರ ಹಿಂದೂ ರಾಷ್ಟ್ರೀಯವಾದವು ಗೋಪ್ರೀತಿ ಪ್ರದೇಶಗಳಿಗೆ ಸೇರಿದೆ. ಇದು ಬಂಗಾಳಿ ಸಮಾಜ ಹಾಗೂ ಸಂಸ್ಕೃತಿಗೆ ಅಪರಿಚಿತವಾದದ್ದು ಎನ್ನುವ ರಾಜಕೀಯ ಪ್ರತಿಪಾದನೆಗೆ ಎದುರೇಟು ನೀಡುವುದು ಈ ಕಾರ್ಯಕ್ರಮದ ಉದ್ದೇಶ. “ಭಾರತ್ ಮಾತಾ ಕಿ ಜೈ, ಜೈ ಶ್ರೀ ರಾಮ್ ಎನ್ನುವ ಘೋಷಣೆಗಳಿಗಿಂತ ಜೈ ಹಿಂದ್, ಜೈ ಮಾ ಕಾಳಿ ಎನ್ನುವ ಘೋಷಣೆಗಳು ಬಂಗಾಳದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ ಎಂದು ನಾನು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ,” ಎನ್ನುತ್ತಾರೆ ಬಂಗಾಳ ಬಿಜೆಪಿ ಉಪಾಧ್ಯಕ್ಷ ಹಾಗೂ ನೇತಾಜಿ ಸುಭಾಸ್ ಚಂದ್ರ ಬೋಸ್ ಸಂಬಂಧಿ ಚಂದ್ರ ಕುಮಾರ್ ಬೋಸ್.

ದೆಹಲಿಯ ಬಿಜೆಪಿ ಚಿಂತಕರ ಚಾವಡಿಯಾದ ಶ್ಯಾಂ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನವು (ಎಸ್‌ಪಿಎಂಆರ್‌ಎಫ್) ಮುಂಬರುವ ದಿನಗಳಲ್ಲಿ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಈ ಮೇಲೆ ಉಲ್ಲೇಖಿಸಿರುವ ವ್ಯಕ್ತಿಗಳನ್ನು ಕೇಂದ್ರವಾಗಿಟ್ಟುಕೊಂಡು ಸಣ್ಣ, ಮಧ್ಯಮ ಹಾಗೂ ಬೃಹತ್ ಮಟ್ಟದಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

“ಈ ಹಿಂದೆ ರಾಜ್ ನಾರಾಯಣ ಬಸು ಹಾಗೂ ಟ್ಯಾಗೋರ್ ಕುಟುಂಬದವರು ಇದಕ್ಕೆ ಹಿಂದೂ ಮೇಳ ಎಂದು ಹೆಸರಿಡುವುದನ್ನು ಬೆಂಬಲಿಸಿದಾಗ ಭಾರತೀಯ ಸಂಸ್ಕೃತಿಯನ್ನು ಉಲ್ಲೇಖಿಸಿದ್ದರು. ನಾವು ಹಿಂದೂ ಎಂದು ಹೇಳುವಾಗಲೂ ಇದೇ ಅರ್ಥ ಅನ್ವಯವಾಗುತ್ತದೆ,” ಎಂದು ಎಸ್‌ಪಿಎಂಆರ್‌ಎಫ್ ಮುಖ್ಯಸ್ಥ ಹಾಗೂ ಬಿಜೆಪಿಯ ಕೇಂದ್ರ ನೀತಿ ಸಂಶೋಧನಾ ವಿಭಾಗದ ಸದಸ್ಯರೂ ಆಗಿರುವ ಅನಿರ್ಬನ್ ಗಂಗೂಲಿ ನುಡಿಯುತ್ತಾರೆ. ಈ ನಡುವೆ, ಎಸ್‌ಪಿಎಂಆರ್‌ಎಫ್, ಈ ಕುರಿತಾಗಿ ರಾಜ್ಯ ಸಭಾ ಸದಸ್ಯ ಸ್ವಪನ್ ದಾಸ್ ಗುಪ್ತ ಹಾಗೂ ಬಂಗಾಳ ಬಿಜೆಪಿ ಉಸ್ತುವಾರಿ ಶಿವಪ್ರಕಾಶ್ ಅವರನ್ನು ಸಂಪರ್ಕಿಸುತ್ತಿದೆ.

“ಭಾರತದ ಪ್ರಾಚೀನ ಜ್ಞಾನ ಹಾಗೂ ಸಾಧನೆಗಳ ಬಗ್ಗೆ ಹೇಳಿದರೆ ಜನ ನಮ್ಮನ್ನು ಅಣಕಿಸುತ್ತಾರೆ. ಆದರೆ, ಇದನ್ನೆಲ್ಲ ರಾಯ್ ಅವರ ಕೃತಿಯಲ್ಲಿ ಓದುವಾಗ ಅವರ ಮನೋಭಾವ ಬದಲಾಗುತ್ತದೆ,” ಎನ್ನುತ್ತಾರೆ ಗಂಗೂಲಿ. ಈ ಕಾರ್ಯಕ್ರಮದ ಭಾಗವಾಗಿ ಮೊದಲ ಬೃಹತ್ ಸಮಾರಂಭ ಜೂನ್ 27ರಂದು ನಡೆಯಿತು. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಂಕಿಮಚಂದ್ರರ ಬಗ್ಗೆ ಮಾತನಾಡಿದ್ದರು. ಮುಂದಿನ ಕಾರ್ಯಕ್ರಮ ಈ ತಿಂಗಳು ಬರ್ ‍ದ್ವಾನ್ ಹಾಗೂ ಬಿರ್ ಭೂಮ್ ಜಿಲ್ಲೆಗಳಲ್ಲಿ ನಡೆಯಲಿವೆ. ಬಂಗಾಳ ಹಾಗೂ ದೇಶದ ವಿವಿಧ ಭಾಗಗಳ ವಿದ್ವಾಂಸರು ಬಂಗಾಳಿ ಕ್ರಾಂತಿಕಾರಿಗಳ ಬಗ್ಗೆ ಮಾತನಾಡಲಿದ್ದಾರೆ. ಇವರಲ್ಲಿ ದಾಸ್ ಗುಪ್ತ ಹಾಗೂ ಆರ್ಥಿಕ ತಜ್ಞ ವಿವೇಕ್ ಡೆಬ್ರಾಯ್ ಕೂಡ ಇದ್ದಾರೆ.

“ನಾವು ರಾಷ್ಟ್ರೀಯವಾದವನ್ನು ಪರಿಚಯಿಸುವ ಕೆಲಸ ಮಾಡುತ್ತಿಲ್ಲ. ದೇಶಾದ್ಯಂತ ರಾಷ್ಟ್ರೀಯವಾದದ ಪರಿಕಲ್ಪನೆಯನ್ನು ಬಿತ್ತಿದ ಸ್ಥಳಗಳಲ್ಲಿ ಬಂಗಾಳವೂ ಒಂದು ಎನ್ನುವುದನ್ನು ಜನರಿಗೆ ನೆನಪಿಸುವ ಕೆಲಸ ಮಾಡುತ್ತಿದ್ದೇವೆ,” ಎಂದು ಎಸ್‌ಪಿಎಂಆರ್‌ಎಫ್ ಸದಸ್ಯೆ, ಬರ್ ದ್ವಾನ್ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಮತ್ತು ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಸೈಯದ್ ತನ್ವೀರ್ ನಸ್ರೀನ್ ಹೇಳುತ್ತಾರೆ.

ಬಂಗಾಳದ ಇತಿಹಾಸವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವಂತೆ ಶಾ ಪಕ್ಷಕ್ಕೆ ತಾಕೀತು ಮಾಡಿದ್ದಾಗಿ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. “ನಾವು 2014-15ರಲ್ಲಿ ಗೋರಕ್ಷಣೆ ಆಂದೋಲನ ತೀವ್ರಗೊಳಿಸಿದ್ದೆವು. ಆದರೆ, ಬಂಗಾಳದಲ್ಲಿ 1950ರ ದಶಕದ ಆರಂಭದಲ್ಲಿ ನಡೆದ ಇಂಥದ್ದೇ ಆಂದೋಲನದಿಂದ ಏನೂ ಪ್ರಯೋಜನ ಆಗಿಲ್ಲ ಎನ್ನುವುದನ್ನು ಪಕ್ಷದ ನೀತಿ ನಿರೂಪಕರು ಕಂಡುಕೊಂಡಿದ್ದಾರೆ. ಆದ ಕಾರಣ ನಮ್ಮ ಗೋರಕ್ಷಣಾ ಘಟಕಕ್ಕೆ ಸುಮ್ಮನಿರುವಂತೆ ಸೂಚಿಸಲಾಗಿದೆ,” ಎಂದು ಹೆಸರು ಬಹಿರಂಗಪಡಿಸಲು ಇಷ್ಟಪಡದ ರಾಜ್ಯ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಬಂಗಾಳಿ ಸಂಸ್ಕೃತಿಯೊಂದಿಗೆ ಗುರುತಿಸಿಕೊಳ್ಳುವ ಪ್ರಯತ್ನವಾಗಿ ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ದುರ್ಗಾಪೂಜೆ ಹಾಗೂ ಕಾಳಿಪೂಜೆ ಆಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಹಾಗೆ ನೋಡಿದರೆ, ಈತನಕ ಬಂಗಾಳದಲ್ಲಿ ಸಂಘಪರಿವಾರದವರ ಮುಖ್ಯ ಧಾರ್ಮಿಕ ಕಾರ್ಯಕ್ರಮಗಳು ರಾಮನವಮಿ ಹಾಗೂ ಹನುಮ ಜಯಂತಿ ಆಗಿತ್ತು.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ರಾಜಕೀಯ ಪಕ್ಷಗಳ ಸಮರದ ಕಣವಾದ ಪಶ್ಚಿಮ ಬಂಗಾಳ

ರಾಜ್ಯದಲ್ಲಿ 42 ಲೋಕಸಭಾ ಸ್ಥಾನಗಳಲ್ಲಿ ಕನಿಷ್ಠ 22 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಪ್ರಮುಖ ಗುರಿಗಳಲ್ಲಿ ಒಂದು. 1952ರ ಲೋಕಸಭೆ ಚುನಾವಣೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಮುಖರ್ಜಿ ನೇತೃತ್ವದ ಭಾರತೀಯ ಜನಸಂಘವು (ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಘಟಕ) ಮೂರು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಪೈಕಿ, ಎರಡು ಬಂಗಾಳದ್ದಾಗಿದ್ದವು. ಪ್ರಸ್ತುತ ಈ ರಾಜ್ಯದಲ್ಲಿ ಬಿಜೆಪಿಯ ಇಬ್ಬರು ಸಂಸದರು ಇದ್ದಾರೆ. ಇನ್ನು, 294 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷದ ಮೂರು ಶಾಸಕರು ಇದ್ದಾರೆ. 1952ರಲ್ಲಿ ಜನ ಸಂಘ 9 ಸ್ಥಾನಗಳನ್ನು ಗೆದ್ದಿತ್ತು.

“1953ರಲ್ಲಿ ಮುಖರ್ಜಿಯವರ ಅಕಾಲಿಕ ಮರಣದಿಂದ ಜನಸಂಘವು ನಾಯಕನಿಲ್ಲದೆ ಅನಾಥವಾಯಿತು. ಎಡಪಕ್ಷ ಈ ಅವಕಾಶ ಬಳಸಿಕೊಂಡಿತು. ಕಾಲಕ್ರಮೇಣ ಎಡಪಂಥೀಯ ಪ್ರಭಾವವು ಬಂಗಾಳದ ಸಾಮೂಹಿಕ ಚಿಂತನೆಯನ್ನು ಆವರಿಸಿಕೊಂಡಿತು. ಈ ಪ್ರಭಾವ ಅಳಿಸುವುದು ಅಷ್ಟು ಸುಲಭವಲ್ಲ. ಇದಕ್ಕೆಲ್ಲ ಸಮಯ ಹಿಡಿಯುತ್ತದೆ,” ಎನ್ನುತ್ತಾರೆ ದಾಸ್ ಗುಪ್ತ.

ಇತ್ತ, ಎಡಪಕ್ಷ ಬೆಂಬಲಿಗರ ವಿರೋಧ ಕಟ್ಟಿಕೊಳ್ಳುವುದು ಕೂಡ ಕೇಸರಿ ಪಾಳಯಕ್ಕೆ ಬೇಕಾಗಿಲ್ಲ. “ಹಿಂದೆ ಎಡಪಂಥೀಯ ನಾಯಕರು ಮಾಡಿದ ತ್ಯಾಗ ಹಾಗೂ ನೀಡಿದ ಕೊಡುಗೆಯನ್ನು ಯಾರೂ ವಿರೋಧಿಸಲಾಗದು. ಆದರೆ, ನಾವು ಈಗಿನ ನಾಯಕರ ಅವನತಿಯ ಬಗ್ಗೆ ಹೇಳುತ್ತಿದ್ದೇವೆ. ನಾವು ಎಡಪಕ್ಷ ಬೆಂಬಲಿಗರು ಹಾಗೂ ಪ್ರತಿಪಾದಕರೊಂದಿಗೆ ಚರ್ಚೆ ಮಾಡಲು ಬಯಸುತ್ತೇವೆ,” ಎನ್ನುತ್ತಾರೆ ದಕ್ಷಿಣ ಬಂಗಾಳದ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಜಿಷ್ಣು ಬಸು.

“ಆರ್ಥಿಕ ವಿಚಾರ ಕುರಿತ ಪ್ರಶ್ನೆಗಳನ್ನು ಹಿನ್ನೆಲೆಗೆ ಸರಿಸುವುದಕ್ಕಾಗಿ ಬಿಜೆಪಿಯು ಸಾಮಾಜಿಕ-ಸಾಂಸ್ಕೃತಿಕ ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ,” ಎಂದು ರಾಜಕೀಯ ವಿಶ್ಲೇಷಕ ಹಾಗೂ ಚಂದ್ರನಗರ್ ಕಾಲೇಜಿನ ಪ್ರಾಂಶುಪಾಲ ದೇಬಶಿಶ್ ಸರ್ಕಾರ್ ವ್ಯಾಖ್ಯಾನಿಸುತ್ತಾರೆ. ಸಾಂಸ್ಕೃತಿಕ ಸಂಬಂಧದ ಕೊಂಡಿ ಹಿಡಿದುಕೊಂಡು ಅವರು ಮುಂದೆ ಬರುತ್ತಿದ್ದಾರೆ. ಆದರೆ, 2014ರಲ್ಲಿ ಪ್ರಧಾನಿ ಮೋದಿ ನೀಡಿದ ಆಶ್ವಾಸನೆಗಳ ಬಗ್ಗೆ ಯುವಜನತೆಯು ಕೇಳುವಾಗ ಅವರು ಏನು ಉತ್ತರ ಕೊಡುತ್ತಾರೆ? ವಿರೋಧ ಇಲ್ಲದಿದ್ದರೂ ಅವರನ್ನು ಆರ್ಥಿಕ ಪ್ರಶ್ನೆಗಳು ಕಾಡಲಿವೆ,” ಎನ್ನುತ್ತಾರೆ ಸರ್ಕಾರ್.

ಬಿಜೆಪಿ ಲೆಕ್ಕಾಚಾರ ಕೈಗೂಡುವುದಿಲ್ಲ ಎನ್ನುವುದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ, ಬೆಹ್ರಾಂಪುರ ಸಂಸದ ಆಧಿರ್ ಚೌಧರಿ ನುಡಿಯುವ ಭವಿಷ್ಯ. “ಇತಿಹಾಸದ ನಿರ್ದಿಷ್ಟ ಭಾಗದ ಬಗ್ಗೆ ಗಮನ ಸೆಳೆಯುವುದು ಅವರ ವಿಭಜನೆಯ ಕಾರ್ಯಸೂಚಿ. ಆದರೆ, ಬಂಗಾಳದ ಜನಸಾಮಾನ್ಯರು ಜಾತ್ಯತೀತ ಹಾಗೂ ಮುಕ್ತ ಚಿಂತನೆಗಳ ಮೇಲೆ ಹೊಂದಿರುವ ನಂಬಿಕೆಯನ್ನು ಯಾರೂ ಅಲುಗಾಡಿಸಲಾಗದು,” ಎಂದವರು ನುಡಿಯುತ್ತಾರೆ.

ಈ ಮಾತಿಗೆ ಎಡಪಕ್ಷ ಕೂಡ ದನಿಗೂಡಿಸುತ್ತದೆ. “ಬಿಜೆಪಿಯು ಚರಿತ್ರೆಯ ಒಂದು ಭಾಗದ ಅನಿಸಿಕೆಯನ್ನು ಮುಂದಿಡಲು ಹೊರಟರೆ ಅದರ ಬಣ್ಣ ಶೀಘ್ರವೇ ಜಗಜ್ಜಾಹೀರಾಗುತ್ತದೆ,” ಎಂದು ರಾಜ್ಯ ವಿಧಾನಸಭೆಯಲ್ಲಿ ಸಿಪಿಎಂ ಶಾಸಕಾಂಗ ಪಕ್ಷದ ನಾಯಕ ಸುಜನ್ ಚಕ್ರವರ್ತಿ ಹೇಳಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More