ಜಯಾ, ಕರುಣಾ ಯುಗಾಂತ್ಯ: ರಜನಿ, ಕಮಲ್ ಹೊಸ ಯುಗ ಪ್ರವರ್ತಕರಾಗಬಹುದೇ?

ಜಯಲಲಿತಾ, ಕರುಣಾನಿಧಿ ನಿರ್ಗಮನದ ಮೂಲಕ ತಮಿಳುನಾಡು ರಾಜಕೀಯದಲ್ಲಿ ಒಂದು ಯುಗಾಂತ್ಯವಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತ. ಅಸ್ಥಿರತೆ ಮೂಡಿರುವ ನೆಲದಲ್ಲಿ ರಜನಿ, ಕಮಲ್ ಹಾಸನ್ ಹೊಸ ಯುಗ ಪ್ರವರ್ತಕರಾಗಬಹುದೇ ಎನ್ನುವ ಕುತೂಹಲವೂ ಮೂಡಿದೆ.

ಐದಾರು ದಶಕದ ತಮಿಳುನಾಡು ರಾಜಕೀಯವನ್ನು ಹಿಂತಿರುಗಿ ನೋಡಿದರೆ ಅಲ್ಲಿ ಅಧಿಕಾರ ಸಂಘರ್ಷ, ದರ್ಪ, ಭ್ರಷ್ಟಾಚಾರದ ಆರೋಪ-ಪ್ರತ್ಯಾರೋಪ, ಅವರನ್ನು ಕೆಡವಿ ಇವರು ಅಬ್ಬರಿಸಿರುವುದು, ತಮ್ಮ ಸರದಿ ಬಂದಾಗ ಇವರು ಅವರನ್ನು ದಂಡನೆಗೆ ಗುರಿಪಡಿಸಿರುವುದು, ಎರಡನೆ ಹಂತದ ನಾಯಕರು ಅಗ್ರ ನಾಯಕರ ಮುಂದೆ ಕೈ ಕಟ್ಟಿ ನಿಂತು ಡೊಗ್ಗು ಸಲಾಮು ಹೊಡೆಯುವ ‘ಪ್ರಭುತ್ವ’ಗುಣ ಎದ್ದು ಕಾಣುವ ಅಂಶಗಳು. ಚೆನ್ನೈ ಮಹಾನಗರಕ್ಕೆ ಹೊಂದಿಕೊಂಡಿರುವ ಕಡಲಿನಲ್ಲಿ ಯಾವಾಗ ಹುಚ್ಚು ಅಲೆಗಳೇಳುತ್ತವೆ; ಯಾವ ಅಲೆ ಸುನಾಮಿ ಸ್ವರೂಪದಲ್ಲಿ ಅಪ್ಪಳಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತದೆ ಎನ್ನುವುದನ್ನು ಮುನ್ನವೇ ಊಹಿಸಬಹುದು. ಆದರೆ,ತಮಿಳು ನೆಲದ ರಾಜಕೀಯ ಉಬ್ಬರ-ಇಳಿತಗಳ ಚರ್ಯೆ ಯಾವ ರಾಜಕೀಯ ಪಂಡಿತರಿಗೂ ಸುಲಭಕ್ಕೆ ನಿಲುಕುವಂತದ್ದಾಗಿರಲಿಲ್ಲ. ದಶಕಗಳ ಕಾಲ ಹೀಗೆ ನಿರಂತರ ಅಬ್ಬರಿಸಿದ ರಾಜಕೀಯದ “ಮಹಾ ಅಲೆ’’ (ಕರುಣಾನಿಧಿ) ಚೆನ್ನೈ ಕಡಲತಡಿಯ ಮರೀನಾ ಬೀಚಿ‌ನಲ್ಲಿ ಅಂತದೇ ಮತ್ತೆರಡು ಮಹಾ ಅಲೆಗಳ (ಎಂಜಿಆರ್‌, ಜಯಾ) ಸಮೀಪದಲ್ಲೇ “ಚಿರಶಾಂತಿ’’ಗೆ ಜಾರಿದೆ. ಕಡಲಿನಷ್ಟೆ ಕುತೂಹಲ, ಅಚ್ಚರಿ, ನಿಗೂಢಗಳನ್ನು ಒಳಗೊಂಡಿರುವ ತಮಿಳುನಾಡು ರಾಜಕಾರಣ ಸದ್ಯಕ್ಕೆ ಶಾಂತ ಸಮುದ್ರದಂತೆ ಕಾಣುತ್ತಿದ್ದರೂ ಒಳ ಕುದಿತ ಇದ್ದೇ ಇದೆ. ಭವಿಷ್ಯದಲ್ಲದು ಹೇಗೆಲ್ಲ ವ್ಯಕ್ತವಾಗಬಹುದು; ಅಲ್ಲಿನ ರಾಜಕೀಯ ಗತಿ ಹೇಗಿರಬಹುದು; ಯಾರಿಗೆ ನಷ್ಟ,ಇನ್ಯಾರಿಗೆ ಲಾಭ ಎನ್ನವಂತ ಚರ್ಚೆಗಳು ಆರಂಭವಾಗಿವೆ. ಅಲ್ಲಿನ ಎಲ್ಲ ವಿದ್ಯಮಾನಗಳನ್ನು ಸನಿಹದಿಂದ ಕಂಡ ವಿಶ್ಲೇಷಕರ ಹಲವು “ಒಳ-ಹೊರ ನೋಟ’’ಗಳನ್ನು ಇಲ್ಲಿ ಸಂಕ್ಷಿಪ್ತಗೊಳಿಸಿ ನೀಡಲಾಗಿದೆ.

ಡಿಎಂಕೆ-ಎಐಎಡಿಎಂಕೆ ಸ್ಥಿತಿಗತಿ

 • ಜಯಾ ನಿರ್ಗಮನದಿಂದ ಅಸ್ಥಿರವಾಗಿದ್ದ ತಮಿಳುನಾಡು ರಾಜಕೀಯ ಡಿಎಂಕೆ ನಾಯಕನ ನಿಧನದ ಬಳಿಕ ಮತ್ತಷ್ಟು ಅಸ್ಥಿರಗೊಂಡಿದೆ. ಇಬ್ಬರು ವರ್ಚಸ್ವಿ ನಾಯಕರು ಭರಿಸಲಾಗದಂತ ಶೂನ್ಯವನ್ನು ಸೃಷ್ಟಿಸಿದ್ದಾರೆ. ಆಡಳಿತ ಹೇಗಿದೆ ಎನ್ನುವುದು ಬೇರೆ ಮಾತಾದರೂ ಎಐಎಡಿಎಂಕೆ ರಾಜ್ಯಾಡಳಿತ ನಡೆಸುತ್ತಿದೆ. ಈಗ, ಕರುಣಾ ನಿರ್ಗಮನದ ಬಳಿಕ ಡಿಎಂಕೆ ಮೊದಲಿನಷ್ಟು ಸಶಕ್ತವಾಗಿ ಉಳಿದೀತೆ ಎನ್ನುವ ಪ್ರಶ್ನೆಯ ಹೊರತಾಗಿಯೂ ಪ್ರತಿಪಕ್ಷವಾಗಿ ಮುಂದುವರಿಯುತ್ತದೆ.
 • ಕೆಲವು ವಿರೋಧಾಭಾಸಗಳಿದ್ದರೂ ಎರಡು ದ್ರಾವಿಡ ಪಕ್ಷಗಳ ರಾಜಕೀಯ ಪ್ರಾಬಲ್ಯ ಕೆಲವು ಕಾಲ ಮುಂದುವರಿಯುತ್ತದೆ. ದ್ರಾವಿಡ ಪರಂಪರೆ ಅರಿವು ಮತ್ತು ತಮಿಳು ಅಸ್ಮಿತೆಯನ್ನು ಹೊಂದದ ಯಾವುದೇ ಹೊಸ ರಾಜಕೀಯ ಪಕ್ಷ ಇಲ್ಲಿ ಹೊರ ಹೊಮ್ಮಲಾಗದು ಎನ್ನುವ ಸ್ಥಿತಿ ಸೃಷ್ಟಿಸಿರುವುದೇ ಇದಕ್ಕೆ ಕಾರಣ. ಏನೇ ರಾಜಕೀಯ ಬೆಳವಣಿಗೆ ಸಂಭವಿಸಿದರೂ ಮುಂದಿನ ಕೆಲವು ಕಾಲ ಈ ಎರಡು ಪಕ್ಷಗಳು ರಾಜ್ಯ ರಾಜಕೀಯ ಅಖಾಡದಲ್ಲಿ ಮುಖ್ಯ ಸ್ಪರ್ಧಿಗಳಾಗಿರುತ್ತವೆ.
 • ಜಯಾ ನಿರ್ಗಮನ ನಂತರದ ಉತ್ತರಾಧಿಕಾರಿ ಸಮಸ್ಯೆ, ರಾಜಕೀಯ ತಲ್ಲಣ ಮತ್ತು ಆಡಳಿತಾತ್ಮಕ ಅಸ್ಥಿರತೆಗಳ ಕಾರಣ ಎಐಎಡಿಎಂಕೆ ದುರ್ಬಲವಾಗಿದೆ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಜನ ಭ್ರಮನಿರಸನಗೊಂಡಿದ್ದು, ಆಡಳಿತ ವಿರೋಧಿ ಅಲೆ ವ್ಯಕ್ತವಾಗಿದೆ. ಈಗ ಡಿಎಂಕೆ ಅಧಿನಾಯಕನ ನಿರ್ಗಮನ ಆಗಿರುವುದರ ಅನುಕಂಪವೂ ಸೇರಿ ಡಿಎಂಕೆಯ ಬಲ ಮತ್ತು ಈ ಪಕ್ಷದತ್ತ ಜನರ ಒಲವು ಹೆಚ್ಚಬಹುದು ಎನ್ನುವುದು ಕೆಲವರ ವಿಶ್ಲೇಷಣೆ.
 • ಕರುಣಾನಿಧಿಯೇ ಪುತ್ರ ಎಂ.ಕೆ.ಸ್ಟಾಲಿನ್‌ ರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿಸುವ ಮೂಲಕ ಉತ್ತರಾಧಿಕಾರಿಯಂತೆ ಬಿಂಬಿಸಿದ್ದರು. ಆದರೆ, ಈ ಕುರಿತಂತೆ ಮತ್ತೊಬ್ಬ ಪುತ್ರ ಎಂ.ಕೆ.ಅಳಗಿರಿಗೆ ತೀವ್ರ ಆಕ್ಷೇಪವಿತ್ತು. ಅದು ಬಹಿರಂಗ ಸಮರಕ್ಕೂ ಕಾರಣವಾಗಿತ್ತು. ಮಗಳು ಕನಿಮೋಳಿ,ವಿಸ್ತರಿತ ಕುಟುಂಬದ ಹಲವು ಸದಸ್ಯರು ರಾಜಕೀಯವಾಗಿ ತಮ್ಮದೇ ಮಹತ್ವಾಕಾಂಕ್ಷೆ ಮತ್ತು ಹಿತಾಸಕ್ತಿಗಳನ್ನು ಹೊಂದಿದ್ದಾರೆ. ಆದ್ದರಿಂದ, ಉತ್ತರಾಧಿಕಾರದ ಸಂಘರ್ಷ ಸಾಧ್ಯತೆ ಇದ್ದೇ ಇದೆ.
 • ಕಾರ್ಯಾಧ್ಯಕ್ಷರಾಗಿರುವ ಕಿರಿಯ ಸಹೋದರ ಎಂ ಕೆ ಸ್ಟಾಲಿನ್‌ ಜೊತೆ ಎಂ ಕೆ ಅಳಗಿರಿ ಹೊಂದಿರುವ ಹಗೆತನ ತಂದೆ ನಿಧನದ ಬಳಿಕ ಯಾವ ಸ್ವರೂಪ ಪಡೆಯಬಹುದೆನ್ನುವ ಪ್ರಶ್ನೆ ಎದ್ದಿದೆ. ಅಶಿಸ್ತು ತೋರಿದ್ದು, ‘ಕೆಲಸ ಮಾಡದ ಕಾರ್ಯಾಧ್ಯಕ್ಷ’ ಎಂದು ಸೋದರನನ್ನು ಅಪಹಾಸ್ಯ ಮಾಡಿದ್ದು ಸಹಿತ ಹಲವು ಕಾರಣಕ್ಕೆ ಮೂರು ವರ್ಷದ ಹಿಂದೆಯೇ ಅಳಗಿರಿ ಪಕ್ಷದಿಂದ ಹೊರ ಹಾಕಲ್ಪಟ್ಟಿದ್ದರು.
 • ಈಗ ಅಳಗಿರಿ ಪಕ್ಷಕ್ಕೆ ಮರಳಿ ಸ್ಟಾಲಿನ್‌ ಗೆ ಸವಾಲಾಗಿ ಪರಿಣಮಿಸಬಹುದು. ಇಲ್ಲವೇ, ಕೆಲವು ಜಿಲ್ಲೆಗಳಲ್ಲಿ ಶಕ್ತಿ ಶಾಲಿಯಾಗಿರುವ ಅವರು ತಮ್ಮ ಕಾರ್ಯಕರ್ತರೊಂದಿಗೆ ಬೇರೆ ಹೋಗುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದು. ಕರುಣಾನಿಧಿ ನಿಧನದ ಬಳಿಕ ಪಕ್ಷದ ಮೊದಲ ಕುಟುಂಬದಲ್ಲಿನ ಅಧಿಕಾರ ಸಮತೋಲನ ಹೇಗಿರುತ್ತದೆ ಎನ್ನುವುದರ ಮೇಲೆ ಡಿಎಂಕೆಯ ಭವಿಷ್ಯ ನಿಂತಿದೆ.
 • ಅದೇನಿದ್ದರೂ, ಐವತ್ತು ವರ್ಷಗಳಷ್ಟು ದೀರ್ಘ ಕಾಲ ಪಕ್ಷವನ್ನು ಪೊರೆದ ಕರುಣಾನಿಧಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ನಿರ್ಗಮಿಸಿದ್ದು ಪಕ್ಷದ ಪಾಲಿಗೆ ದೊಡ್ಡ ಸವಾಲು. ೨೦೧೧ ಮತ್ತು ೨೦೧೬ರ ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಮತ್ತು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನೂ ಗೆಲ್ಲದ ಡಿಎಂಕೆ ೨೦೧೯ರಲ್ಲಿ ಹೆಚ್ಚು ಸ್ಥಾನ ಗೆದ್ದು ಮುಖವನ್ನು ಮತ್ತು ‘ಶಕ್ತಿ’ಯನ್ನು ಉಳಿಸಿಕೊಳ್ಳಲೇ ಬೇಕಾದ ಸ್ಥಿತಿಯಲ್ಲಿದೆ.

ಬಿಜೆಪಿ ಚಾಣಕ್ಷ-ತಂತ್ರಗಾರಿಕೆ ಏನು?

 • ಜಯಾ ನಿರ್ಗಮನದ ನಂತರ ತಮಿಳುನಾಡು ರಾಜಕಾರಣವನ್ನು ಅತಿಕ್ರಮಿಸುವ ಪ್ರಯತ್ನ ಮಾಡಿ ಹಿನ್ನಡೆ ಅನುಭವಿಸಿದ್ದ ಬಿಜೆಪಿಗೆ, ಈಗ ಮತ್ತೊಂದು “ಆಕ್ರಮಣ ಅವಕಾಶ’’ ದೊರಕಿದೆ. ಕಾಂಗ್ರೆಸ್‌ ಗೆ ಮಾತ್ರವಲ್ಲ, ತಮಿಳು ನೆಲೆದ ದ್ರಾವಿಡ ಪಕ್ಷಗಳಿಗೂ ‘ಪರ್ಯಾಯ’ವಾಗುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಲವು ರಾಜಕೀಯ ವಿಶ್ಲೇಷಕರು ಊಹಿಸಿದ್ದಾರೆ.
 • ತಮಿಳುನಾಡು ವಿಧಾನಸಭೆಯಲ್ಲಿ ಬಿಜೆಪಿಯ ಒಬ್ಬ ಸದಸ್ಯನೂ ಇಲ್ಲ. ಲೋಕಸಭೆಯಲ್ಲಿ ಒಬ್ಬರಿದ್ದಾರೆ. ಹಾಗಿದ್ದೂ ಮೋದಿ ಸರ್ಕಾರ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ರಾಜ್ಯಸರ್ಕಾರವನ್ನು ನಿಯಂತ್ರಿಸುತ್ತಿದೆ ಎನ್ನುವ ಆಕ್ಷೇಪವಿದೆ. ಎಐಎಡಿಎಂಕೆ ಯಲ್ಲಿ ಉದ್ಭವಿಸಿದ್ದ ನಾಯಕತ್ವ ಬಿಕ್ಕಟ್ಟುಗಳನ್ನು ನಿವಾರಿಸಿ, ಸರ್ಕಾರ ಸುಸೂತ್ರವಾಗಿ ನಡೆಯುವಂತೆ ಮಾಡುವಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡರ ಪರಿಶ್ರಮ ಇತ್ತೆನ್ನಲಾಗಿದೆ.
 • ತಿಂಗಳ ಹಿಂದೆ (ಜು.೯) ಚೆನ್ನೈಗೆ ಬಂದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, “ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಗಣನೀಯ ಶಕ್ತಿಯಾಗಿ ಬಿಜೆಪಿ ಹೊರ ಹೊಮ್ಮಲಿದೆ,’’ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಡಿಎಂಕೆ ವಿರುದ್ಧ ಪರೋಕ್ಷ ವಾಗ್ದಾಳಿಯನ್ನೂ ನಡೆಸಿದರು. ಮೋದಿ ಕೂಡ ಇಲ್ಲಿಗೆ ಬಂದು ಹೋದರು. ಇಂಥೆಲ್ಲ ಪ್ರಯತ್ನಗಳ ಹಿಂದೆ ಬಿಜೆಪಿ “ಆಪೋಶನ’’ ರಾಜಕೀಯ ತಂತ್ರವಿದೆ ಎಂದು ಊಹಿಸಿದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ, “ಗೋ ಬ್ಯಾಕ್‌ ಮೋದಿ,’’ “ಗೋ ಬ್ಯಾಕ್‌ ಅಮಿತ್‌ ಶಾ’’ ಎಂಬ ಘೋಷಣಗೆ ಮೊಳಗಿಸಿ ಪ್ರತಿಭಡಿಸಿದ್ದರು.
 • ಇದರ ಮಾರಕ ಪರಿಣಾಮವನ್ನರಿತ ಎಐಎಡಿಎಂಕೆ ಪಕ್ಷದ ಮುಖಂಡ ಮತ್ತು ರಾಜ್ಯಸಭಾ ಉಪಾಧ್ಯಕ್ಷ ತಂಬುದುರೈ ಮೂಲಕ, “ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ತಮಿಳುನಾಡಿನಲ್ಲಿ ಜಾಗ ಇಲ್ಲ,’’ಎನ್ನುವ ಹೇಳಿಕೆ ಕೊಡಿಸಿತು. ಅದೇನಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಸಾಧಿಸಿ ಹೆಚ್ಚು ಸ್ಥಾನ ಪಡೆಯುವುದು ಬಿಜೆಪಿ ಇರಾದೆ.
 • ಜೊತೆಗೆ,ಕರುಣಾನಿಧಿ ನಿಧನಾ ನಂತರದ ಡಿಎಂಕೆಯ ಆಂತರಿಕ ಸ್ಥಿತಿ-ಗತಿಗಳನ್ನು ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಎಲ್ಲ ಆಗುಹೋಗುಗಳನ್ನು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಸ್ಥಳೀಯ ರಾಜಕೀಯ ಶಕ್ತಿಗಳಲ್ಲಿ ಒಡಕು ಮೂಡಿಸಿ, ರಾಜ್ಯಪಾಲರ ಮೂಲಕ ಆ ಅವಕಾಶವನ್ನು ಬಳಸಿಕೊಳ್ಳುವ ವಿಷಯದಲ್ಲಿ ಬಿಜೆಪಿ ನಿಷ್ಣಾತ ಎನ್ನಿಸಿಕೊಂಡಿದೆ. ಏನೇ ಮಾಡಿದರೂ,“ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದನ್ನೇ ಮಾಡಿತ್ತು,’’ಎನ್ನುವ ಸಮಜಾಯಿಷಿ ಅದರ ರಕ್ಷಣೆಗಿದೆ. ತಮಿಳುನಾಡು ವಿಷಯದಲ್ಲಂತೂ ಸಮಜಾಯಿಷಿಗೆ ಹೇರಳ ನಿದರ್ಶನಗಳು ಇದ್ದೇ ಇವೆ.

ಕಾಂಗ್ರೆಸ್ ಮತ್ತಿತರರ ನಡೆ ಏನು?

 • ಮತ್ತೊಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನದ್ದು ಈಗಲೂ ಇಲ್ಲಿ ಹೀನಾಯ ಸ್ಥಿತಿ. ಐವತ್ತು ವರ್ಷದ ಹಿಂದೆ (೧೯೬೭)ಇಲ್ಲಿ ಅಧಿಕಾರ ಕಳೆದುಕೊಂಡ ಈ ಪಕ್ಷ ನಂತರದ ವರ್ಷಗಳಲ್ಲಿ ಡಿಎಂಕೆ ಜೊತೆ ಸಮೀಪ ಸಖ್ಯ ಹೊಂದಿತಾದರೂ ರಾಜ್ಯದಲ್ಲಿ ತನ್ನ ಶಕ್ತಿಯನ್ನು ಮರುಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಈ ಮಧ್ಯೆ, ಸ್ಟಾಲಿನ್‌ ನೇತೃತ್ವದ ಡಿಎಂಕೆ ನರೇಂದ್ರ ಮೋದಿ ವಿರೋಧಿ ಕೂಟದ ಪಾಲುದಾರ ಪಕ್ಷವಾಗುವ ಒಪ್ಪಂದಕ್ಕೆ ಬದ್ಧವಾಗಿದೆ. ಆದರೆ, ಡಿಎಂಕೆಯಲ್ಲೇ ಒಡಕು ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಮತ್ತು ಡಿಎಂಕೆ ಎರಡೂ ಪಕ್ಷಗಳಿಗೆ ಸವಾಲಾಗಿದೆ.
 • ಇಷ್ಟು ಮಾತ್ರವಲ್ಲ, ತಮಿಳುನಾಡಿನಲ್ಲಿ ಡಿಎಂಡಿಕೆ (ವಿಜಯಕಾಂತ್‌), ಎಂಡಿಎಂಕೆ (ವೈಕೋ), ಪಿಎಂಕೆ (ಅನ್ಬುಮಣಿ ರಾಮದಾಸ್) ಸಹಿತ ಅನೇಕ ರಾಜಕೀಯ ಪಕ್ಷಗಳಿವೆ. ಕರುಣಾನಿಧಿ,ಜಯಲಲಿತಾ ಅವರ ಆಡಳಿತಾತ್ಮಕ ಭ್ರಷ್ಟಾಚಾರ,ಅಧಿಕಾರ ದುರುಪಯೋಗ ಮುಂತಾದ ಸಂಗತಿಗಳನ್ನು ಮತ್ತು ಪ್ರಾದೇಶಿಕ ಸಮಸ್ಯೆ-ಸಂಗತಿಗಳನ್ನು ಮುಂದಿಟ್ಟುಕೊಂಡು ರಾಜಕೀಯಕ್ಕೆ ಧುಮುಕಿದ ಹಲವು ವ್ಯಕ್ತಿಗಳು ಮತ್ತು ಅವರು ಕಟ್ಟಿದ ಪಕ್ಷಗಳು ಸಣ್ಣ ಮಟ್ಟದ ಪರಿಣಾಮಗಳಿಗಷ್ಟೆ ಸೀಮಿತವಾದವು. ಯಾರದೇ ಪ್ರಯತ್ನಗಳ ನಂತರವೂ ಐದು ದಶಕ ಇಲ್ಲಿ ಪೂರ್ತಿ ಚಲಾವಣೆಯಲ್ಲಿದ್ದುದು ಡಿಎಂಕೆ, ಎಐಎಡಿಎಂಕೆ ಎರಡೇ. ಸ್ಥಳೀಯ ಮಟ್ಟದಲ್ಲಿ ಕೂಡ ಜನ ಬೇರೆ ಯಾವುದೇ ಪಕ್ಷದ ಅಸ್ತಿತ್ವವನ್ನು ಗುರುತಿಸಲು ಸಿದ್ಧರಿರಲಿಲ್ಲ ಎನ್ನುವುದು ಗಮನಾರ್ಹ.

ರಜನಿ -ಕಮಲ್‌ ಕಮಾಲ್‌ ನಡೆದೀತಾ?

 • ಈ ಮಧ್ಯೆ, ರಾಜಕೀಯವಾಗಿ ಒಂದಷ್ಟು ಗಮನ ಸೆಳೆದವರು ರಜನೀಕಾಂತ್‌ ಮತ್ತು ಕಮಲ್‌ ಹಾಸನ್‌. ತಮಿಳುನಾಡು ರಾಜಕೀಯಕ್ಕೆ ದ್ರಾವಿಡ ಚಳುವಳಿ, ಹಿಂದಿ ವಿರೋಧಿ ಚಳವಳಿಯ ಭದ್ರ ಬುನಾದಿ ಇದ್ದದ್ದೂ ಹೌದಾದರೂ ನಂತರ ಐದು ದಶಕಗಳ ಕಾಲ ಈ ರಾಜ್ಯವನ್ನು ಆಳಿದ್ದು ‘ತಾರಾ-ಬಲ’ ಎನ್ನುವುದೂ ಅಷ್ಟೇ ನಿಜ. ದ್ರಾವಿಡ ಜನರು ‘ವಿಗ್ರಹ’ಗಳನ್ನು ತಿರಸ್ಕರಿಸಿಯಾರು. ಆದರೆ, ‘ಸಿನಿ ವಿಗ್ರಹ’ (ಸಿನಿ ಐಡಲ್ಸ್)ಗಳನ್ನು ನಿರಾಕರಿಸದೆ, ತುಸು ಹೆಚ್ಚೇ ಆರಾಧಿಸುತ್ತಾರೆ.
 • ರಾಜಕೀಯ ನಾಯಕರಿಗೆ ಅವರ ಸಿನಿಮಾ ವರ್ಚಸ್ಸೇ ಮುಖ್ಯವಾದರೆ ಡಿಎಂಕೆ, ಎಐಎಡಿಎಂಕೆ ಗಳಲ್ಲಿ ಈಗಿರುವ ಮುಂಚೂಣಿ ನಾಯಕರು ಕ್ರಮೇಣ ಕಳೆಗುಂದುವುದು ನಿಶ್ಚಿತ. ಹಾಗಾದಲ್ಲಿ, ಈಗಾಗಲೇ ರಾಜಕೀಯ ಪ್ರವೇಶದ ನಿರ್ಧಾರ ತಳೆದಿರುವ‌ ನಟ ರಜನೀಕಾಂತ್,ಈಗಾಗಲೇ ಎಂಎನ್‌ಎಂ ಹೆಸರಿನ ಪಕ್ಷ ಸ್ಥಾಪಿಸಿರುವ ನಟ ಕಮಲ‌ ಹಾಸನ್‌ ತಮಿಳು ನೆಲದಲ್ಲಿ ತಾರಾ-ಬಲದ ರಾಜಕೀಯ ಪರಂಪರೆಯನ್ನು ಮುಂದುವರಿಸಬಲ್ಲರೇ ಎನ್ನುವ ಪ್ರಶ್ನೆ ಮೂಡಿದೆ.
 • ಆದರೆ,ಈ ಇಬ್ಬರು ತಾರೆಗಳ ರಾಜಕೀಯ ಪ್ರವೇಶದ ಸಮಯ ಸಂದರ್ಭಕ್ಕೂ,ಈ ಹಿಂದೆ ಕರುಣಾನಿಧಿ, ಎಂಜಿಆರ್‌ ಮತ್ತು ಜಯಾ ರಾಜಕೀಯ ಪ್ರವೇಶ ಮಾಡಿದ ಸಂದರ್ಭಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಟ್ಟಿಗೇ ರಾಜಕೀಯ ಜೀವನ ಆರಂಭಿಸಿದ ಕರುಣಾ,ಎಂಜಿಆರ್ ನಂತರ ಮುನಿಸಿನ ಕಾರಣಕ್ಕೆ ಬೇರೆಯಾದರು. ಹೊಸ ಪಕ್ಷ ಕಟ್ಟಿದ ಎಂಜಿಆರ್‌ ಕರುಣಾಗೆ ಸಡ್ಡು ಹೊಡೆದರು. ಬಳಿಕ, ಜನಪ್ರಿಯ ತಾರೆ ಜಯಾ ಎಂಜಿಆರ್‌ ಉತ್ತರಾಧಿಕಾರಿಯಾಗಿ ಮೆರೆದರು.
 • ಕರುಣಾನಿಧಿ-ಜಯಾ ಮಧ್ಯದ ರಾಜಕೀಯ ಸಮರ, ಭ್ರಷ್ಟಾಚಾರದ ಮೇಲಾಟ ಮಿತಿ ಮೀರಿದಾಗಲೆಲ್ಲ , ಬದಲಾವಣೆ ತರಲೆಂದು ರಾಜಕೀಯ ಪ್ರವೇಶ ಮಾಡುವ ಇಚ್ಛೆ ವ್ಯಕ್ತಪಡಿಸುತ್ತಿದ್ದ ರಜನಿ ಈ ವಿಷಯದಲ್ಲಿ ಗಟ್ಟಿ ನಿಲುವು ತಳೆದವರಲ್ಲ. ಆದರೆ, ಜಯಾ ನಿರ್ಗಮನದ ಬಳಿಕ ಹೆಚ್ಚು ಕ್ರಿಯಾಶೀಲವಾಗಿರುವ ಅವರ ಮುಂದಿನ ನಡೆ ಕತೂಹಲಕರ.
 • ಇಬ್ಬರೂ ಸ್ಟಾರ್‌ ನಟರು ರಾಜ್ಯಾದ್ಯಂತ ದೊಡ್ಡ ಮಟ್ಟದ ಅಭಿಮಾನಿ (ರಜನಿಯದು ‘ಮಾಸ್‌’, ಕಮಲ್‌ ಅವರದ್ದು ‘ಕ್ಲಾಸ್’ ) ಬಳಗವನ್ನು ಹೊಂದಿರುವವರು. ಅಭಿಮಾನಿ ಕ್ಲಬ್‌ ಸದಸ್ಯರನ್ನು ಪಕ್ಷದ ವಿಶ್ವಾಸಾರ್ಹ ಕಾರ್ಯಕರ್ತರನ್ನಾಗಿಸುವ ಸಾಧ್ಯತೆಯುಳ್ಳವರು. ರಾಜಕೀಯವಾಗಿ ಪರಿಪಕ್ವತೆ ಇಲ್ಲದವರು ಎನ್ನುವ ಆಕ್ಷೇಪಕ್ಕೂ ತುತ್ತಾದವರು.
 • ಕಮಲ್ ಹಾಸನ್ ಬೌದ್ಧಿಕರಾದೂ ಜನರನ್ನು ಮುಟ್ಟುವಂತಹ ಸಂಗತಿಗಳ ಬಗ್ಗೆ ಮಾತನಾಡಲಾರರು ಎನ್ನುವ ಅಭಿಪ್ರಾಯವಿದೆ. ಅಂತೆಯೇ, ಟ್ವೆಂಟಿ ಫೋರ್‌ ಇಂಟು ಸೆವೆನ್‌ ಮಾದರಿ ರಾಜಕೀಯ ರಜನಿಗೆ ಒಗ್ಗುವುದಿಲ್ಲ. ಅಲ್ಲದೆ, ಇವರಿಬ್ಬರು ಎಷ್ಟರ ಮಟ್ಟಿಗೆ ದ್ರಾವಿಡ ರಾಜಕಾರಣದ ತತ್ವಗಳನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆಯೂ ಇದೆ. ಕಮಲ್‌ ಗಿರುವ ರಾಜಕೀಯ ಸ್ಪಷ್ಟತೆ ರಜನಿಯಲ್ಲಿ ಕಾಣುವುದಿಲ್ಲ. ಇಂಥ ಕೆಲವು ಮಿತಿಗಳನ್ನು ಮೀರಿದಲ್ಲಿ ಹೊಸ ಶಕ್ತಿಯಾಗಿ ಹೊರ ಹೊಮ್ಮಬಲ್ಲರೇನೋ.
 • ನಂಬಿಕೆಯ ವಿಷಯಕ್ಕೆ ಬಂದರೆ ರಜನೀಕಾಂತ್‌ ಅಪಾರ ದೈವಭಕ್ತ, ಅಧ್ಯಾತ್ಮ ಜೀವಿ. ಕಮಲ್‌ ತಮ್ಮನ್ನು ತಾವು ನಾಸ್ತಿಕ ಎಂದು ಕರೆದುಕೊಳ್ಳುತ್ತಾರೆ. ಸಂಬಂಧಗಳ ವಿಷಯದಲ್ಲಿ ಇವರಿಬ್ಬರು ಜಯಾ,ಕರುಣಾ ಅವರಂತೆ “ದ್ವೇಷ ಸಾಧಕ’’ರಲ್ಲ. ಹಲವು ದಶಕಗಳಿಂದ ಇಬ್ಬರೂ ಉತ್ತಮ ಸ್ನೇಹಿತರು. ರಾಜಕೀಯ ಪ್ರವೇಶದ ಕುರಿತು ಪರಸ್ಪರ ಮಾತನಾಡಿದ್ದಾರೆ. ಸೈದ್ಧಾಂತಿಕವಾದ ಭಿನ್ನಾಭಿಪ್ರಾಯಗಳು ಸ್ನೇಹದ ಮೇಲೆ ಪರಿಣಾಮ ಬೀರದಂತೆ ಆಸ್ಥೆ ವಹಿಸಿದ್ದಾರೆ.
 • ದ್ವೇಷ, ಅಸೂಯೆಯ ರಾಜಕಾರಣದಲ್ಲೇ ನರಳಿದ ತಮಿಳುನಾಡಿನಲ್ಲಿ ಇನ್ನಾದರೂ “ಸ್ನೇಹ, ಸೌಹಾರ್ದ’’ದ ರಾಜಕಾರಣ ಅರಳಲಿ ಎಂದು ಅನೇಕರು ಬಯಸುತ್ತಿದ್ದಾರೆ. ಮಾತ್ರವಲ್ಲ, ಉತ್ತರದ ಪ್ರಾಬಲ್ಯ ಇರುವ ರಾಷ್ಟ್ರೀಯ ಪಕ್ಷಗಳಿಗೆ ‘ದ್ರಾವಿಡ ರಾಜ್ಯ’ದ ಹಿತಾಸಕ್ತಿಗಳನ್ನು ಬಲಿಕೊಡದಂತ ಗಟ್ಟಿ ನಿಲುವಿನ ‘ಸ್ಥಳೀಯ ನಾಯಕತ್ವ’ವನ್ನು ಇಲ್ಲಿನ ಜನ ಎದುರು ನೋಡುತ್ತಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಯ ಸವಾಲು

ರಾಷ್ಟ್ರೀಯ ಪಕ್ಷಗಳು ಒಡೆದು ಆಳುವ ತಂತ್ರ ಬಳಸಿ ಡಿಎಂಕೆ,ಎಐಎಡಿಎಂಕೆಗಳ ಬಲವನ್ನು ಕುಗ್ಗಿಸಬಹುದು. ರಾಷ್ಟ್ರೀಯ ಪಕ್ಷ ಮತ್ತು ಆ ಪಕ್ಷಗಳ ನಾಯಕರನ್ನು ಬಗ್ಗಿಸಿ, ಕೆಲಸ ಮಾಡಿಸುತ್ತಿದ್ದ ಕರುಣಾ, ಜಯಾ ವರಸೆಗಳು ಬದಲಾಗಿ, ಇಲ್ಲಿನ ನಾಯಕರೇ ‘ದೆಹಲಿ ದೊರೆ’ ಗಳೆದುರು ನಡು ಬಗ್ಗಿಸಿ ನಿಲ್ಲುವ ಸ್ಥಿತಿಯೂ ಬರಬಹುದು. ಆದರೆ, ಏನೇ ಚಿತಾವಣೆ ಮಾಡಿದರೂ ತಮಿಳುನಾಡು ಜನರ ‘ಸ್ಥಳೀಯ ಪಕ್ಷ’ ಮತ್ತು ‘ಸ್ಥಳೀಯ ನಾಯಕ’ ನಿಷ್ಠೆಯನ್ನು ಯಾರಿಂದಲೂ ಸುಲಭಕ್ಕೆ ಕದಲಿಸಲಾಗದು ಎನ್ನುವುದು ರಾಜಕೀಯ ವಿಶ್ಲೇಷಕರ ನಂಬಿಕೆ.

ಕರುಣಾನಿಧಿ, ಎಂಜಿಆರ್‌, ಜಯಾ ಅವರಂತದೇ ವರ್ಚಸ್ವಿ ನಾಯಕರು ನೇರ ಅಖಾಡಕ್ಕಿಳಿದರೆ ಮುಂದೊಂದು ದಿನ ಅದು ಪರಿಣಾಮಕಾರಿ ಫಲ ನೀಡಬಹುದು. ಸದ್ಯ, ಅಂಥ ‘ಸ್ಥಳೀಯತೆ’ ಮತ್ತು ‘ಸ್ಟಾರ್’ ವರ್ಚಸ್ಸಿರುವುದು ರಜನೀಕಾಂತ್, ಕಮಲ ಹಾಸನ್‌ ಇಬ್ಬರಿಗಷ್ಟೆ. ಎರಡು ಪ್ರಮುಖ ಪಕ್ಷಗಳು ಉತ್ತರಾಧಿಕಾರಿತ್ವ/ ನಾಯಕತ್ವದ ಸಮಸ್ಯೆ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಈ ಇಬ್ಬರು ನಟರು ಸೂಕ್ತ,ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದೇ ಆದರೆ ನಿರ್ಮಿತ ‘ಶೂನ್ಯ’ವನ್ನು ಭರ್ತಿಮಾಡಬಹುದು. ದ್ರಾವಿಡ ಚಳವಳಿಯ ಆಶಯ ಮತ್ತು ತಮಿಳು ನೆಲದ ಅಸ್ಮಿತೆಯನ್ನು ಯಾವತ್ತೂ ಪೊರೆದುಕೊಳ್ಳುವುದು ಸಾಧ್ಯ.

ಇದೇ ರಾಜಕೀಯ ವಿಶ್ಲೇಷಕರ ಪ್ರಕಾರ, ಜಯಾ, ಕರುಣಾ ನಿರ್ಗಮನದಿಂದ ರಾಜಕೀಯವಾಗಿ ‘ಒಂದು ಯುಗಾಂತ್ಯ’ವಾಗಿದೆ. ‘ಹೊಸ ಯುಗ’ ಪ್ರವರ್ತಕರು ಯಾರಾಗಬಹುದೆನ್ನುವ ಕುತೂಹಲವೂ ಮೂಡಿದೆ. ೨೦೧೯ರ ಸಂಸತ್ ಚುನಾವಣೆಗೆ ಮುನ್ನ ತಮಿಳುನಾಡಿನಲ್ಲಿ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ. ಯಾವ ಪಕ್ಷ ಪ್ರಬಲವಾಗಿದೆ, ದ್ರಾವಿಡ ನೆಲದ ರಾಜಕೀಯ ಭವಿಷ್ಯ ಹೇಗಿರಬಹುದು ಎನ್ನುವ ಕುರಿತಂತೆ ಈ ಚುನಾವಣೆಯಲ್ಲಿ ಒಂದಷ್ಟು ಹೊಳಹುಗಳು ಸಿಗಬಹುದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More