ರಾಷ್ಟ್ರ ರಾಜಕಾರಣದಲ್ಲಿ ಕ್ಷೀಣಿಸಲಿದೆಯೇ ಡಿಎಂಕೆ, ಎಐಎಡಿಎಂಕೆ ಪ್ರಾಬಲ್ಯ?

ತಮಿಳುನಾಡಿನ ಜನಪ್ರಿಯ ನಾಯಕರಾಗಿದ್ದ ಎಂ ಕರುಣಾನಿಧಿ ಹಾಗೂ ಜೆ ಜಯಲಲಿತಾ ಅವರ ಸಾವಿನಿಂದಾಗಿ ಡಿಎಂಕೆ, ಎಐಎಡಿಎಂಕೆ ಪಕ್ಷಗಳ ಪ್ರಭಾವ ಕಡಿಮೆಯಾಗಲಿದ್ದು, ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ

ಪ್ರಭಾವಿ ನಾಯಕರಾದ ಎಂ ಕರುಣಾನಿಧಿ ಹಾಗೂ ಜಯಲಲಿತಾ ಸಾವಿನ ನಂತರ ತಮಿಳುನಾಡಿನ ಎರಡು ಪ್ರಮುಖ ರಾಜಕೀಯ ಪಕ್ಷಗಳು ರಾಷ್ಟ್ರ ರಾಜಕಾರಣದಲ್ಲಿ ಹೊಂದಿದ್ದ ಪ್ರಾಬಲ್ಯವನ್ನು ಕ್ರಮೇಣ ಕಳೆದುಕೊಳ್ಳಲಿವೆಯೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಎರಡು ವರ್ಷಗಳ ಅವಧಿಯಲ್ಲಿ ಡಿಎಂಕೆ ನಾಯಕ ಕರುಣಾನಿಧಿ ಹಾಗೂ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಮರಣ ಇಂತಹ ಅಭಿಪ್ರಾಯಗಳನ್ನು ಹುಟ್ಟುಹಾಕಿವೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಕೇಂದ್ರದಲ್ಲಿ ತೃತೀಯ ರಂಗ, ಎನ್‌ಡಿಎ ಹಾಗೂ ಯುಪಿಎ ಸರ್ಕಾರ ರಚನೆ ವೇಳೆ ಪ್ರಮುಖ ಪಾತ್ರ ವಹಿಸಿದ್ದವು.

ಕರುಣಾನಿಧಿ ಹಾಗೂ ಜಯಲಲಿತಾ ಅವರು ರಾಷ್ಟ್ರ ರಾಜಕಾರಣ ಹಾಗೂ ರಾಷ್ಟ್ರೀಯ ಪಕ್ಷಗಳ ಮೇಲೆ ತಮ್ಮದೇ ಆದ ಚಾಣಾಕ್ಷ ಹಿಡಿತ ಹೊಂದಿದ್ದರು. ರಾಜ್ಯದ ಹಿತಾಸಕ್ತಿಯ ವಿಚಾರವನ್ನು ಕೇಂದ್ರತವಾಗಿರಿಸಿಕೊಂಡು ದೆಹಲಿ ರಾಜಕಾರಣದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದರು. ಅಂದಿನ ತೃತೀಯ ರಂಗಕ್ಕೆ ಬೆಂಬಲ ಸೂಚಿಸಿದ್ದ ಕರುಣಾನಿಧಿಯವರು ಕರ್ನಾಟಕದ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮುಂದೆ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದವರು ಕರುಣಾನಿಧಿ. ವಾಜಪೇಯಿ ಸರ್ಕಾರ ಪತನಗೊಳ್ಳುತ್ತಿದ್ದಂತೆ, ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿತು. ಆ ಸಮಯದಲ್ಲಿ ಯುಪಿಎ ಸರ್ಕಾರಕ್ಕೆ ಡಿಎಂಕೆ ಬೆಂಬಲ ವ್ಯಕ್ತಪಡಿಸಿತು. ಸತತವಾಗಿ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಯುಪಿಎ ಸಚಿವ ಸಂಪುಟದಲ್ಲಿ ತಮ್ಮ ಪಕ್ಷದ ಸದಸ್ಯರಿಗೆ ಮಹತ್ವದ ಖಾತೆಗಳನ್ನು ದೊರಕಿಸಿಕೊಡುವಲ್ಲಿ ಕರುಣಾನಿಧಿ ಸಫಲರಾಗಿದ್ದರು.

ಇದೇ ರೀತಿ ಎಐಎಡಿಎಂಕೆ ಪಕ್ಷದ ನಾಯಕಿ ಜಯಲಲಿತಾ ಅವರು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದರು. 1991 ರಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜಯಲಲಿತಾ ಅವರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷದ ಮೇಲೆ ಒತ್ತಡ ಹೇರಿ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಹಾಯಪಡೆದುಕೊಂಡರು. ಆ ಮುಂದೆ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ಸೂಚಿಸಿದ ಜಯಲಲಿತಾ ಅವರು ವಾಜಪೇಯಿ ಸರ್ಕಾರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದರು. ಆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ತಮಿಳುನಾಡಿನ ರಾಜಕಾರಣದ ಪ್ರಭಾವ ಮುಂದುವರೆಯುತ್ತಲೇ ಬಂದಿತು.

ಕರುಣಾನಿಧಿ ಹಾಗೂ ಜಯಲಲಿತಾ ಸಾವಿನಿಂದಾಗಿ ರಾಷ್ಟ್ರೀಯ ಪಕ್ಷಗಳ ಮೇಲೆ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಹೊಂದಿದ್ದ ಪ್ರಭಾವ ಕಾಲಕ್ರಮೇಣ ಕರಗಲಿದೆ ಎಂಬ ಮಾತುಗಳು ಕೇಳಿಬಂದಿವೆ. ಜಯಲಲಿತಾ ಸಾವಿನ ನಂತರ ಎಐಎಡಿಎಂಕೆಯಲ್ಲಿ ಆರಂಭವಾದ ಆಂತರಿಕ ಬಿಕ್ಕಟ್ಟು. ಮುಖಂಡರ ನಡುವಿನ ಭಿನ್ನಾಭಿಪ್ರಾಯ, ಸಿಎಂ ಪಳನಿಸ್ವಾಮಿ ಹಾಗೂ ಮಾಜಿ ಸಿಎಂ ಪನ್ನಿರ್‌ ಸೆಲ್ವಂ ಮಧ್ಯೆ ನಡೆದ ಅಧಿಕಾರಕ್ಕಾಗಿನ ಗುದ್ದಾಟ, ಎಐಎಡಿಎಂಕೆಯ ಪ್ರಭಾವಿ ನಾಯಕ ಟಿಟಿವಿ ದಿನಕರನ್‌ ಹುಟ್ಟುಹಾಕಿದ ನೂತನ ರಾಜಕೀಯ ಪಕ್ಷ, ಜಯಲಲಿತಾ ಆಪ್ತೆ ಶಶಿಕಲಾ ಬಂಧನದಿಂದ ಪಕ್ಷದ ಜನಪ್ರಿಯತೆಯಲ್ಲಿ ಉಂಟಾದ ಕುಸಿತ, ಪಕ್ಷವನ್ನು ದುರ್ಬಲಗೊಳಿಸಿದೆ. ಎಐಎಡಿಎಂಕೆಯು ರಾಷ್ಟ್ರೀಯ ಪಕ್ಷಗಳ ಮೇಲೆ ಪ್ರಭಾವ ಬೀರುವಷ್ಟು ಶಕ್ತಿಶಾಲಿಯಾಗಿ ಉಳಿದಿಲ್ಲವೆಂಬುದು ಮೇಲ್ನೋಟಕ್ಕೆ ಕಾಣಿಸಿದೆ. ಈಗಿನ ಮುಖ್ಯಮಂತ್ರಿ ಪಳನಿಸ್ವಾಮಿಯಾಗಲಿ, ಮಾಜಿ ಸಿಎಂ ಪನ್ನಿರ್‌ ಸೇಲ್ವಂ ಆಗಲಿ ಜಯಲಲಿತಾರ ರಾಜಕೀಯ ಪ್ರಭುದ್ಧತೆ ಹಾಗೂ ಚಾಣಾಕ್ಷತೆ ಹೊಂದಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ. ಈಗಾಗಲೇ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಎಐಎಡಿಎಂಕೆ ನಾಯಕರನ್ನು ಸೆಳೆಯುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ವರದಿಗಳಿವೆ. ತಮಿಳುನಾಡಿನಲ್ಲಿ ಅಸ್ತಿತ್ವವೇ ಇಲ್ಲದ ಬಿಜೆಪಿ ಎಐಎಡಿಎಂಕೆ ಮೂಲಕ ರಾಜ್ಯದಲ್ಲಿ ಒಳಹಾದಿಯಿಂದ ನುಸುಳುವ ತಂತ್ರಗಾರಿಕೆ ನಡೆಸಲಿದೆ ಎನ್ನಲಾಗುತ್ತಿದೆ.

ಕರುಣಾನಿಧಿ ಅವರ ಸಾವಿನ ನಂತರ ರಾಷ್ಟ್ರೀಯ ಪಕ್ಷಗಳ ಮೇಲೆ ಪ್ರಭಾವ ಬೀರುವಲ್ಲಿ ಡಿಎಂಕೆ ಪಕ್ಷ ಯಶಸ್ವಿಯಾಗುವುದು ಕಷ್ಟಸಾಧ್ಯವೆಂದು ಹೇಳಲಾಗುತ್ತಿದೆ. ಹಿಂದಿನ ಯುಪಿಎ ಸರ್ಕಾರದಲ್ಲಿ ಡಿಎಂಕೆ ಪಕ್ಷವು ಪ್ರಮುಖ ಪಾತ್ರವಹಿಸಿತ್ತು. ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ನೇತೃತ್ವದ ಸಚಿವ ಸಂಪುಟದಲ್ಲಿ‌ ಕರುಣಾನಿಧಿ ಅವರ ಮಗ ಎಂ ಕೆ ಅಳಗಿರಿ, ಅಳಿಯಂದಿರಾದ ಮರುಸೋಳಿ ಮಾರನ್, ದಯಾನಿಧಿ ಮಾರನ್‌, ಪಕ್ಷದ ಮುಖಂಡರಾದ ಎ ರಾಜಾ, ಎಸ್‌ ಎಸ್ ಪಳನಿಮನಿಕಂ, ಎಸ್‌ ಗಾಂಧಿಸೆಲ್ವಂ, ಡಿ ನೆಪೋಲಿಯನ್‌ ಅವರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಡುವಲ್ಲಿ ಕರುಣಾನಿಧಿ ಸಫಲಾರಾಗಿದ್ದರು. ಯುಪಿಎ ಅಧಿಕಾರ ಕಳೆದುಕೊಂಡ ನಂತರ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಸಾಧನೆ ಅಷ್ಟಕ್ಕಷ್ಟೇ ಎನ್ನುವಂತಿದೆ. ಕರುಣಾನಿಧಿ ಅವರ ಸಾವಿನಿಂದ ಡಿಎಂಕೆ ಪಕ್ಷಕ್ಕೆ ಮತ್ತಷ್ಟು ಹಾನಿಯುಂಟಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.

ಮುಂದಿನ ದಿನಗಳಲ್ಲಿ ಡಿಎಂಕೆ ಪಕ್ಷದಲ್ಲಿ ಆಂತರಿಕ ಕಲಹಗಳು ಸ್ಫೋಟಗೊಳ್ಳುವುದರ ಬಗ್ಗೆಯೂ ಸಂಶಯಗಳು ವ್ಯಕ್ತವಾಗುತ್ತಿವೆ. ಈ ಹಿಂದೆ ಡಿಎಂಕೆ ಪಕ್ಷದಿಂದ ಹೊರಹಾಕಲ್ಪಟ್ಟಿದ್ದ ಎಂ ಕೆ ಅಳಗಿರಿ ಅವರು ತಮ್ಮದೇ ಆದ ಪ್ರಭಾವ ವಲಯವನ್ನು ತಮಿಳು ರಾಜಕಾರಣದಲ್ಲಿ ಹೊಂದಿದ್ದಾರೆ. ಡಿಎಂಕೆ ಕಾರ್ಯಕಾರಿ ಅಧ್ಯಕ್ಷರಾಗಿರುವ ಎಂ ಕೆ ಸ್ಟಾಲಿನ್‌ ಹಾಗೂ ಅವರ ಸಹೋದರ ಎಂ ಕೆ ಅಳಗಿರಿ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ಪಕ್ಷದ ಮೇಲೆ ಸ್ಟಾಲಿನ್‌ ಅವರು ಹಿಡಿತ ಸಾಧಿಸಿದ್ದರೂ, ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಅಳಗಿರಿ ಅವರ ಪ್ರಭಾವವಿರುವುದನ್ನ ಅಲ್ಲಗಳೆಯುಂತಿಲ್ಲ. ಎಂ ಕೆ ಸ್ಟಾಲಿನ್ ಅವರು ಕಾಂಗ್ರೆಸ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ, ಮುಂದಿನ ದಿನಗಳಲ್ಲಿ ನಡೆಯುವ ರಾಜಕೀಯ ಮೇಲಾಟದಲ್ಲಿ ಯಾವುದೇ ರೀತಿಯ ಬದಲಾವಣೆಗಳೂ ಘಟಿಸಬಹುದು ಎನ್ನುವ ಅಭಿಪ್ರಾಯ ರಾಜಕೀಯ ವಿಶ್ಲೇಷಕರಲ್ಲಿದೆ.

ಇದನ್ನೂ ಓದಿ : ಏಳುಬೀಳುಗಳ ನಡುವೆಯೂ ಸತತ 13 ಗೆಲುವು ಕಂಡ ಕರುಣಾನಿಧಿ ಜೀವನಗಾಥೆ

ಮಾಜಿ ನಟ ವಿಜಯಕಾಂತ್ ನೇತೃತ್ವದ ಡಿಎಂಡಿಕೆ, ವೈಕೋ ಅವರ ಎಂಡಿಎಂಕೆ ಹಾಗೂ ಅಂಬುಮನಿ ರಾಮದಾಸ್‌ ಅವರ ಪಿಎಂಕೆ ಪಕ್ಷಗಳು ತಮಿಳುನಾಡಿನ ಕೆಲ ಪ್ರದೇಶಗಳಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿವೆ. ಕರುಣಾನಿಧಿ ಹಾಗೂ ಜಯಲಲಿತಾ ಸಾವಿನ ನಂತರ ಈ ಪಕ್ಷಗಳು ಅಧಿಕಾರ ಗದ್ದುಗೆ ಏರಲು ಮತ್ತಷ್ಟು ಸಕ್ರಿಯವಾಗಲಿವೆ ಎಂಬುದನ್ನು ಅಲ್ಲಗಳೆಯುಂತಿಲ್ಲ. ಈ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗೆ ಹತ್ತಿರವಾಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ. ಜಯಲಲಿತಾ ಸಾವಿನ ನಂತರ ಉದಯವಾಗಿರುವ ರಜನಿಕಾಂತ್‌, ಕಮಲ್‌ ಹಾಸನ್‌ ಹಾಗೂ ಪ್ರಭಾವಿ ಮುಖಂಡ ಟಿಟಿವಿ ದಿನಕರನ್‌ ನೇತೃತ್ವದ ಪಕ್ಷಗಳು ಎಐಎಡಿಎಂಕೆ ಹಾಗೂ ಡಿಎಂಕೆಗಳಿಗೆ ಅಡ್ಡಿಯಾಗಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆ ಮೂಲಕ ಕರುಣಾನಿಧಿ ಹಾಗೂ ಜಯಲಲಿತಾ ಸಾವಿನಿಂದಾಗಿ ಎರಡು ಪಕ್ಷಗಳ ಪ್ರಭಾವ ಕಡಿಮೆಯಾಗಲಿದ್ದು, ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಪ್ರಾಬಲ್ಯವನ್ನು ಕಳೆದುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More