ರಾಜಕೀಯ ಗುರು ಅಣ್ಣದೊರೈ ಪಕ್ಕದಲ್ಲಿ ಚಿರನಿದ್ರೆಗೆ ಜಾರಿದ ಕಲೈನಾರ್‌ ಕರುಣಾನಿಧಿ

ಭಾರತ ರಾಜಕಾರಣದ ವರ್ಣರಂಜಿತ ರಾಜಕಾರಣಿ ಎಂ ಕರುಣಾನಿಧಿ ಅವರ ಅಂತ್ಯಕ್ರಿಯೆ ಹಲವು ನಾಟಕೀಯ ಬೆಳವಣಿಗೆಗಳ ನಡುವೆ ಚೆನ್ನೈನ ಮರೀನಾ ಬೀಚ್‌ನ ಅಣ್ಣಾ ದೊರೈ ಸ್ಮಾರಕದ ಪಕ್ಕದಲ್ಲಿ ಬುಧವಾರ ನೆರವೇರಿತು. ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ನಾಯಕನಿಗೆ ನಮನ ಸಲ್ಲಿಸಿದರು

ಸಾಹಿತ್ಯ, ಸಿನಿಮಾ ಹಾಗೂ ರಾಜಕಾರಣದಲ್ಲಿ ವಿಶಿಷ್ಟ ಛಾಪು ಮಾಡಿಸಿದ್ದ ಭಾರತೀಯ ರಾಜಕಾರಣದ ಕಟ್ಟಾಳು, ದ್ರಾವಿಡ ಮುನ್ನೇತ್ರ ಕಳಗಂನ (ಡಿಎಂಕೆ) ವರಿಷ್ಠ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಮುತ್ತುವೇಲು ಕರುಣಾನಿಧಿ ಅವರ ಅಂತ್ಯಸಂಸ್ಕಾರ ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನೈನ ಪ್ರಸಿದ್ಧ ಮರೀನಾ ಬೀಚ್‌ನಲ್ಲಿ ದ್ರಾವಿಡ ಸಂಪ್ರದಾಯದಂತೆ ನೆರವೇರಿತು.

ಕರುಣಾನಿಧಿ ಕುಟುಂಬದವರು, ಅಭಿಮಾನಿಗಳು ಹಾಗೂ ರಾಜಕೀಯ ಮುಖಂಡರು ಅಗಲಿದ ನಾಯಕನಿಗೆ ಕಣ್ಣೀರ ವಿದಾಯ ಸಲ್ಲಿಸಿದರು. ಕಲೈನಾರ್‌ ಬಯಕೆಯಂತೆ “ಬದುಕಿನುದ್ದಕ್ಕೂ ದಣಿವರಿಯದಂತೆ ಕೆಲಸ ಮಾಡಿದ ವ್ಯಕ್ತಿ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ” ಎಂಬ ಒಕ್ಕಣೆಯುಳ್ಳ ಮರದ ಪೆಟ್ಟಿಗೆಯಲ್ಲಿ ಕರುಣಾನಿಧಿ ಅವರ ಶವ ಇಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು. ೯೪ ವರ್ಷದ ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ ಶೋಕಾಚರಣೆಗೆ ಕೇಂದ್ರ ಸರ್ಕಾರ ಆದೇಶಿಸಿದ್ದರಿಂದ ಸೇನಾ ಗೌರವ ಸಲ್ಲಿಸಲಾಯಿತು. ಮೂರು ಸೇನಾ ಪಡೆಗಳ ಸಿಬ್ಬಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಗಲಿದ ನಾಯಕನಿಗೆ ಕುಶಾಲು ತೋಪು ಸಿಡಿಸಿ ನಮನ ಸಲ್ಲಿಸಿದರು.

ಇದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ರಾಜಕೀಯ ಪಕ್ಷಗಳ ಮುಖ್ಯಸ್ಥರು ಚೆನ್ನೈನ ರಾಜಾಜಿ ಸಭಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದ್ದ ಕರುಣಾನಿಧಿ ಅವರ ಪಾರ್ಥಿವ ಶರೀರದ ದರ್ಶನ ಪಡೆದರು. ಕರುಣಾನಿಧಿ ಅವರ ಪಾರ್ಥಿವ ಶರೀರದ ದರ್ಶನ ಪಡೆಯುವ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳುಗಳನ್ನು ರಾಜೀವ್‌ ಗಾಂಧಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಅವಘಡ ಹೊರತುಪಡಿಸಿ ಕರುಣಾನಿಧಿ ಅವರ ಅಂತ್ಯಕ್ರಿಯೆ ಬಹುತೇಕ ಶಾಂತಿಯುತವಾಗಿ ನೆರವೇರಿತು.

ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ, ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದ ಕರುಣಾನಿಧಿ ಅವರ ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ತಮಿಳುನಾಡು ರಾಜ್ಯಪಾಲ ಭನ್ವರಿಲಾಲ್‌ ಪುರೋಹಿತ್‌, ಕಾಂಗ್ರೆಸ್‌ ರಾಷ್ಟ್ರೀಯ ರಾಹುಲ್‌ ಗಾಂಧಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪುದುಚೆರಿ ಸಿಎಂ ನಾರಾಯಣಸ್ವಾಮಿ ಸೇರಿದಂತೆ ವಿವಿಧ ರಾಜ್ಯಗಳ ಧುರೀಣರು, ಸಿನಿಮಾ ತಾರೆಯರು ಪಾಲ್ಗೊಂಡಿದ್ದರು. ಬಹುತೇಕ ನಾಯಕರು ಬೆಳಿಗ್ಗೆಯೇ ಚೆನ್ನೈಗೆ ಧಾವಿಸಿದ್ದು, ಕರುಣಾನಿಧಿ ಅವರ ಅಂತ್ಯಕ್ರಿಯೆಯ ನಂತರ ತಮ್ಮ ಸ್ಥಳಗಳಿಗೆ ಮರಳಿದರು.

ಸಂಜೆ ನಾಲ್ಕು ಗಂಟೆ ಸುಮಾರಿಗೆ ರಾಜಾಜಿ ಸಭಾಂಗಣದಿಂದ ಹೊರಟ ಕರುಣಾನಿಧಿ ಅವರ ಶವಯಾತ್ರೆ ಮೂರು ಕಿ ಮೀ ಕ್ರಮಿಸಿ ೬ ಗಂಟೆ ವೇಳೆಗೆ ಮರೀನಾ ಬೀಚ್‌ ತಲುಪಿತ್ತು. ಶವಯಾತ್ರೆಯಲ್ಲಿ ಲಕ್ಷಾಂತರ ಅಭಿಮಾನಿಗಳು, ಡಿಎಂಕೆ ಕಾರ್ಯಕರ್ತರು ಪಾಲ್ಗೊಂಡಿದ್ದರು. ರಸ್ತೆಯ ಇಕ್ಕೆಲದಲ್ಲಿ ನೆರೆದಿದ್ದ ಜನರು, ಮನೆ, ಮರವೇರಿ ತಮ್ಮ ನೆಚ್ಚಿನ ನಾಯಕನ ದರ್ಶನ ಪಡೆದರು.

ಈ ನಡುವೆ, ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಸಿ ಎನ್ ಅಣ್ಣದೊರೈ, ಎಂ ಜಿ ರಾಮಚಂದ್ರನ್‌ ಹಾಗೂ ಜೆ ಜಯಲಲಿತಾ ಅವರ ಸ್ಮಾರಕಗಳಿರುವ ಮರೀನಾ ಬೀಚ್‌ನಲ್ಲಿ ನಡೆಸಲು ಸ್ಥಳ ನಿಗದಿ ಮಾಡುವಂತೆ ಎಐಎಡಿಎಂಕೆ ನೇತೃತ್ವದ ಸರ್ಕಾರಕ್ಕೆ ಡಿಎಂಕೆ ಮನವಿ ಮಾಡಿತ್ತು. ಆದರೆ, ಕರುಣಾನಿಧಿಯವರು ಮಾಜಿ ಮುಖ್ಯಮಂತ್ರಿಯಾಗಿದ್ದು, ಕಾನೂನು ತೊಡಕುಗಳಿರುವುದರಿಂದ ಅಂತ್ಯಕ್ರಿಯೆಗೆ ಮರೀನಾ ಬೀಚ್‌ನಲ್ಲಿ ಅವಕಾಶ ನೀಡಲಾಗದು ಎಂದು ಡಿಎಂಕೆ ಮನವಿಯನ್ನು ಸರ್ಕಾರ ತಿರಸ್ಕರಿಸಿತ್ತು. ಬದಲಿಗೆ ಸರ್ದಾರ್‌ ರಸ್ತೆಯಲ್ಲಿರುವ ಮಾಜಿ ಮುಖ್ಯಮಂತ್ರಿಗಳಾದ ರಾಜಾಜಿ ಹಾಗೂ ಕೆ ಕಾಮರಾಜ್ ಸ್ಮಾರಕಗಳಿರುವ ಗಾಂಧಿ ಮಂಟಪದಲ್ಲಿ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡಲು ಮುಂದಾಗಿತ್ತು.

ಇದನ್ನೂ ಓದಿ : ಕರುಣಾನಿಧಿ ಅಂತ್ಯ ಸಂಸ್ಕಾರದಲ್ಲಿ ರಾಜಕಾರಣಕ್ಕೆ ಅವಕಾಶ ನೀಡದ ಹೈಕೋರ್ಟ್

ಆದರೆ, ಇದಕ್ಕೆ ಒಪ್ಪದ ಡಿಎಂಕೆ, ಮಂಗಳವಾರ ತಡರಾತ್ರಿಯೇ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. ಸರ್ಕಾರ ಹಾಗೂ ಡಿಎಂಕೆ ವಾದಗಳನ್ನು ಆಲಿಸಿ ದ್ವಿಸದಸ್ಯ ಪೀಠವು ಬುಧವಾರಕ್ಕೆ ವಿಚಾರಣೆ ಮುಂದೂಡಿತ್ತು. ಇದರಿಂದ ಕರುಣಾನಿಧಿ ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಅನಿಶ್ಚಿತತೆ ತಲೆದೋರಿತ್ತಲ್ಲದೆ, ಡಿಎಂಕೆ ಪಾಳೆಯಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಬುಧವಾರ ಬೆಳಗ್ಗೆ ಎಐಎಡಿಎಂಕೆ ವಾದಿಸಿದ್ದ ಕಾನೂನು ತೊಡಕುಗಳ ಭಾಗವಾದ ಜಯಲಲಿತಾ ಅವರ ಸ್ಮಾರಕ ನಿರ್ಮಾಣ ವಿರೋಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾಗೊಳಿಸಿ, ಕರುಣಾನಿಧಿ ಅವರ ಅಂತ್ಯಕ್ರಿಯೆಗೆ ಮರೀನಾ ಬೀಚ್‌ನಲ್ಲಿ ಸ್ಥಳ ನಿಗದಿ ಮಾಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿತ್ತು.

ಕೋರ್ಟ್‌ ನಿರ್ದೇಶನದಿಂದ ಡಿಎಂಕೆ ನಾಯಕರು ನಿಟ್ಟುಸಿರು ಬಿಟ್ಟರು. ಕರುಣಾನಿಧಿ ಅವರ ಉತ್ತರಾಧಿಕಾರಿ ಎಂ ಕೆ ಸ್ಟಾಲಿನ್ ಈ ವೇಳೆ ಭಾವುಕರಾದರು. ಹೈಕೋರ್ಟ್ ನಿರ್ಧಾರ ನೋವಿನ ನಡುವೆಯೂ ಎಐಎಡಿಎಂಕೆ ವಿರುದ್ಧ ಕರುಣಾನಿಧಿಯವರಿಗೆ ಸಂದ ಮತ್ತೊಂದು ಜಯ ಎನ್ನುವ ವ್ಯಾಖ್ಯಾನಗಳಿಗೆ ಕಾರಣವಾಯಿತು. ಕರುಣಾನಿಧಿ ನಿಧನದ ಹಿನ್ನೆಲೆಯಲ್ಲಿ ಸಂಸತ್‌ನ ಉಭಯ ಸದನಗಳಲ್ಲಿ ಗೌರವ ಸಲ್ಲಿಸಿ, ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು. ಹಲವು ರಾಜ್ಯಗಳಲ್ಲಿ ಒಂದು ದಿನದ ಶೋಕಾಚರಣೆ ಆಚರಣೆಗೆ ಆದೇಶಿಸಲಾಗಿತ್ತು. ಮಂಗಳವಾರ ಸಂಜೆ ಕರುಣಾನಿಧಿ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ತಮಿಳುನಾಡು ಸಂಪೂರ್ಣ ಸ್ಥಬ್ಧವಾಗಿತ್ತು. ತಮಿಳುನಾಡು ಸರ್ಕಾರವು ಏಳು ದಿನಗಳ ಶೋಕಾಚರಣೆಗೆ ಆದೇಶಿಸಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More