ಕರುಣಾನಿಧಿ ಅಂತ್ಯ ಸಂಸ್ಕಾರದಲ್ಲಿ ರಾಜಕಾರಣಕ್ಕೆ ಅವಕಾಶ ನೀಡದ ಹೈಕೋರ್ಟ್

ಚೆನ್ನೈನ ಸುಪ್ರಿಸಿದ್ಧ ಮರೀನಾ ಬೀಚ್‌ನ ಕರುಣಾನಿಧಿ ಅಂತ್ಯ ಸಂಸ್ಕಾರ ನಡೆಸಲು ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದೆ. ಮರೀನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರ ಮಾಡುವ ನಿರ್ಧಾರವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಕೋರ್ಟ್‌ ವಜಾಮಾಡಿದೆ. ಇದರಿಂದ ಡಿಎಂಕೆ ಹಾಗೂ ಎಐಡಿಎಂಕೆ ರಾಜಕೀಯ ಸಂಘರ್ಷಕ್ಕೆ ತೆರೆಬಿದ್ದಿದೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಅಂತ್ಯಸಂಸ್ಕಾರವನ್ನು ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆಸಲು ಅವಕಾಶ ನಿರಾಕರಿಸಿದ ಎಐಎಡಿಎಂಕೆ ನೇತೃತ್ವದ ರಾಜ್ಯ ಸರ್ಕಾರದ ನಿರ್ಧಾರವನ್ನು ಮದ್ರಾಸ್‌ ಹೈಕೋರ್ಟ್‌ ಬುಧವಾರ ಬದಿಗೆ ಸರಿಸಿದ್ದು, ಡಿಎಂಕೆ ಮೇರು ನಾಯಕನ ಅಂತ್ಯಸಂಸ್ಕಾರಕ್ಕೆ ಮರೀನಾ ಬೀಚ್‌ನಲ್ಲಿ ಸ್ಥಳ ನಿಗದಿ ಮಾಡುವಂತೆ ಸರ್ಕಾರಕ್ಕೆ ಆದೇಶಿಸಿದೆ. ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್‌ನಲ್ಲಿ ನಡೆಸಿದ್ದನ್ನು ಪ್ರಶ್ನಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ. ಈ ಮೂಲಕ ಅಂತ್ಯಸಂಸ್ಕಾರದ ಸಮಯವನ್ನು ರಾಜಕೀಯ ಮೇಲಾಟಕ್ಕೆ ಬಳಸಿಕೊಳ್ಳುವ ಅವಕಾಶವನ್ನೂ ಕೋರ್ಟ್‌ ಭಗ್ನಗೊಳಿಸಿದೆ. ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಡಿಎಂಕೆ ಮುಖಂಡ ಹಾಗೂ ಕರುಣಾನಿಧಿ ಅವರ ಪುತ್ರ ಎಂ ಕೆ ಸ್ಟಾಲಿನ್‌ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಸರ್ದಾರ್‌ ರಸ್ತೆಯಲ್ಲಿರುವ ಗಾಂಧಿ ಮಂಟಪದಲ್ಲಿ ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ಮಾಡಲು ಸ್ಥಳ ನೀಡುವ ರಾಜ್ಯ ಸರ್ಕಾರದ ಸಲಹೆ ಒಪ್ಪದ ಡಿಎಂಕೆ ನಾಯಕರು ರಾತ್ರೋರಾತ್ರಿ ಮದ್ರಾಸ್‌ ಹೈಕೋರ್ಟ್‌ ಕದ ಬಡಿದಿದ್ದರು. ಡಿಎಂಕೆ ವಕೀಲರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಲು ಒಪ್ಪಿದ ಮದ್ರಾಸ್‌ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ ರಮೇಶ್ ಅವರು ತಮ್ಮ ನಿವಾಸದಲ್ಲೇ ತಡರಾತ್ರಿ ನ್ಯಾಯಮೂರ್ತಿ ಎಸ್‌ ಎಸ್‌ ಸುಂದರ್‌ ಅವರ ಜೊತೆ ಅರ್ಜಿ ವಿಚಾರಣೆ ನಡೆಸಿದ್ದರು. ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಹಾಗೂ ಡಿಎಂಕೆ ಪರ ವೀರ ಕತಿರ್ವನ್‌ ಮತ್ತು ಆರ್ ವಿದುತಲೈ ವಾದ ಮಂಡಿಸಿದ್ದರು. ಎರಡೂ ಕಡೆಗಳ ವಾದ ಆಲಿಸಿದ ಕೋರ್ಟ್‌ ಮರೀನಾ ಬೀಚ್‌ನಲ್ಲಿ ಸ್ಥಳಾವಕಾಶ ನೀಡಲಾಗುವುದಿಲ್ಲ ಎಂಬುದಕ್ಕೆ ಕಾರಣ ನೀಡುವಂತೆ ಸರ್ಕಾರಕ್ಕೆ ಏಳು ತಾಸು ಸಮಯ ನಿಗದಿ ಮಾಡಿತ್ತು. ಈ ಸಮಯದಲ್ಲಿ ಸರ್ಕಾರವು ಸೂಕ್ತ ಕಾರಣಗಳನ್ನು ನೀಡಲು ವಿಫಲವಾಗಿತ್ತು. ಅಲ್ಲದೇ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಅವರ ಶವಸಂಸ್ಕಾರವನ್ನು ಮರೀನಾ ಬೀಚ್‌ನಲ್ಲಿ ನಡೆಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಐದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕೋರ್ಟ್‌ ವಜಾಗೊಳಿಸಿತು. ಇದರ ಜೊತೆಗೆ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಮರೀನಾ ಬೀಚ್‌ನಲ್ಲಿ ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲು ಸ್ಥಳ ನಿಗದಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಆದೇಶಿಸಿತು.

ಇದನ್ನೂ ಓದಿ : ಕರುಣಾನಿಧಿ ನಿರ್ಗಮನ: ಬದಲಾಗಲಿದೆಯೇ ದ್ರಾವಿಡ ಚಳವಳಿಯ ರಾಜಕೀಯ ವ್ಯಾಕರಣ?

ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರ ಶವಸಂಸ್ಕಾರವನ್ನು ಮರೀನಾ ಬೀಚ್‌ ದಡದಲ್ಲಿರುವ‌ ಡಿಎಂಕೆ ಸ್ಥಾಪಕರಲ್ಲೊಬ್ಬರಾದ ಸಿ ಎನ್‌ ಅಣ್ಣಾದೊರೈ ಅವರ ಸ್ಮಾರಕದ ಪಕ್ಕದಲ್ಲಿ ನಡೆಸಲು ಡಿಎಂಕೆ ನಾಯಕರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪದ ಎಐಎಡಿಎಂಕೆ ನೇತೃತ್ವದ ಸರ್ಕಾರವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಿವಶರಾದವರಿಗೆ ಮಾತ್ರ ಮರೀನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರ ಅವಕಾಶ ಮಾಡಲಾಗಿದೆ. ಅಲ್ಲದೇ ಮರೀನಾ ಬೀಚ್ ಪರಿಸರ ಸೂಕ್ಷ್ಮ ವಲಯವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರಕರಣಗಳು ಕೋರ್ಟ್‌ನಲ್ಲಿ‌ ವಿಚಾರಣೆಗೆ ಬಾಕಿ ಇವೆ. ಆದ್ದರಿಂದ ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಲಾಗದು. ಬದಲಿಗೆ ಗಾಂಧಿ ಮಂಟಪದಲ್ಲಿ ಎರಡು ಎಕರೆ ಭೂಮಿ ನೀಡುವುದಾಗಿ ಹೇಳಿತ್ತು.

ಇದಕ್ಕೂ ಮುನ್ನ ಮಂಗಳವಾರ ಕರುಣಾನಿಧಿ ಅವರ ಆರೋಗ್ಯ ಸ್ಥಿತಿಯ ಕುರಿತಾಗಿ ಸ್ಟಾಲಿನ್‌ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನುಭೇಟಿ ಮಾಡಿ ಸುಮಾರು ೨೦ ನಿಮಿಷ ಮಾತುಕತೆ ನಡೆಸಿತ್ತು. ಇದೇ ವೇಳೆ ಸ್ಟಾಲಿನ್ ಅವರು ಮರೀನಾ ಬೀಚ್‌ನಲ್ಲಿ ಸ್ಥಳ ನಿಗದಿ ಮಾಡುವ ವಿಚಾರ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಆದರೆ, ಸರ್ಕಾರವು ಚೆನ್ನೈನ ಸರ್ದಾರ್‌ ಪಟೇಲ್‌ ರಸ್ತೆಯಲ್ಲಿರುವ ಗಾಂಧಿ ಮಂಟಪದಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಜಾಗ ನಿಗದಿ ಮಾಡಿತ್ತು. ಇಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕೆ ಕಾಮರಾಜ್‌, ರಾಜಗೋಪಾಲಾಚಾರಿ (ರಾಜಾಜಿ) ಅವರ ಅಂತ್ಯಸಂಸ್ಕಾರ ನಡೆಸಲಾಗಿತ್ತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More