ಸಂಸತ್‌ ಸಮ್ಮತಿಸಿದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಉದ್ದೇಶವೇನು?

ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ರಚನೆಗೆ (ಎನ್‌ಸಿಬಿಸಿ) ಸಂಸತ್‌ನ ಉಭಯ ಸದನಗಳು ಅವಿರೋಧ ಒಪ್ಪಿಗೆ ಸೂಚಿಸಿವೆ. ದಶಕಗಳ ಬೇಡಿಕೆಯಾಗಿದ್ದ ಎನ್‌ಸಿಬಿಸಿ ಕಾರ್ಯ, ಉದ್ದೇಶಗಳೇನು? ಇಲ್ಲಿದೆ ವಿವರ

ಕೇಂದ್ರದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಾಕಷ್ಟು ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ) ಸಾಂವಿಧಾನಿಕ ಮಾನ್ಯತೆ ಕಲ್ಪಿಸುವ ಮಸೂದೆಗೆ ಸಂಸತ್‌ನ ಉಭಯ ಸದನಗಳಲ್ಲಿ ಅವಿರೋಧವಾಗಿ ಒಪ್ಪಿಗೆ ದೊರೆತಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ, ಈ ಸಮುದಾಯಗಳ ಸಮಸ್ಯೆಗಳನ್ನು ಆಲಿಸುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಬಿಸಿ) ಸಾಂವಿಧಾನಿಕ ಸ್ಥಾನ ನೀಡುವ ಸಂವಿಧಾನ (೧೨೩ನೇ ತಿದ್ದುಪಡಿ) ೨೦೧೭ರ ಮಸೂದೆಗೆ ಸೋಮವಾರ ರಾಜ್ಯಸಭೆ ಒಪ್ಪಿಗೆ ನೀಡಿದೆ. ಮೇಲ್ಮನೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿರುವುದರಿಂದ ಸರ್ಕಾರ ತಕ್ಷಣವೇ ಎನ್‌ಸಿಬಿಸಿ ರಚಿಸಲಿದೆ.

೨೦೧೭ರ ಜುಲೈ ೩೧ರಂದು ಲೋಕಸಭೆಯಲ್ಲಿ ಒಪ್ಪಿಗೆ ಪಡೆದು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ರವಾನೆಯಾಗಿದ್ದ ಮಸೂದೆಗೆ ಕೆಲವು ತಿದ್ದುಪಡಿ ಮಾಡಿ ಒಪ್ಪಿಗೆ ಸೂಚಸಿಲಾಗಿತ್ತು. ಆದರೆ, ಮಸೂದೆಗೆ ಮಾಡಲಾಗಿದ್ದ ತಿದ್ದುಪಡಿಗಳನ್ನು ವಜಾಗೊಳಿಸಿದ್ದ ಕೇಂದ್ರ ಸರ್ಕಾರವು ಮತ್ತೊಮ್ಮೆ ಲೋಕಸಭೆಯಲ್ಲಿ ಮಸೂದೆ ಮಂಡಿಸಿ ಆಗಸ್ಟ್‌ ೨ರಂದು ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮಸೂದೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಸಲಹೆಯನ್ನು ಪರಿಗಣಿಸಲಾಗುವುದು ಎಂದಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರ್‌ಚಂದ್‌ ಗೆಹ್ಲೋಟ್‌, “ಕೇಂದ್ರದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೂ ರಾಜ್ಯ ಆಯೋಗಕ್ಕೂ ಯಾವುದೇ ತೆರನಾದ ಸಂಬಂಧ ಇರುವುದಿಲ್ಲ. ಎನ್‌ಸಿಬಿಸಿ ಕೇಂದ್ರಕ್ಕೆ ಸೀಮಿತವಾಗಿರಲಿದ್ದು, ರಾಜ್ಯದ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ವಿರೋಧ ಪಕ್ಷಗಳ ವಾದದಲ್ಲಿ ಉರುಳಿಲ್ಲ” ಎಂದು ಹೇಳಿದ್ದಾರೆ.

“ಪ್ರತಿ ರಾಜ್ಯವೂ ತನ್ನದೇ ಆದ ಹಿಂದುಳಿದ ವರ್ಗಗಳ ಆಯೋಗವನ್ನು ಹೊಂದಬಹುದಾಗಿದೆ. ಪ್ರತಿಪಕ್ಷಗಳ ಸಲಹೆಯಂತೆ ಆಯೋಗಕ್ಕೆ ಮಹಿಳಾ ಪ್ರತಿನಿಧಿಯನ್ನು ನೇಮಕ ಮಾಡಲಾಗುವುದು. ಅಲ್ಪಸಂಖ್ಯಾತ ಸಮುದಾಯಕ್ಕೆ ಮಹಿಳೆಯನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕೆಂಬ ವಾದ ಸರಿಯಲ್ಲ” ಎಂದು ಅವರು ಹೇಳಿದ್ದಾರೆ. ನಾಲ್ಕು ದಶಕಗಳ ಹೋರಾಟದ ನಂತರ ಅಸ್ತಿತ್ವಕ್ಕೆ ಬರಲಿರುವ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ರಚನೆಯ ಉದ್ದೇಶಗಳು ಇಂತಿವೆ.

ಇದನ್ನೂ ಓದಿ : ಹಿಂದುಳಿದ ಕೆಲ ನಿರ್ಲಕ್ಷಿತ ಜಾತಿಗಳು ರಾಜಕೀಯ ಪ್ರಾತಿನಿಧ್ಯವನ್ನೂ ಪಡೆದಿಲ್ಲ!
  • ಹಿಂದುಳಿದ ಸಮುದಾಯಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಅಲ್ಲಿಂದ ತೆಗೆದು ಹಾಕಲು ಸೀಮಿತವಾಗಿದ್ದ ಎನ್‌‌ಸಿಬಿಸಿಯು, ಇನ್ನು ಮುಂದೆ ಸಾಂವಿಧಾನಿಕವಾಗಿ ಮತ್ತು ಇತರ ಕಾನೂನುಗಳ ಪರಿಧಿಯಲ್ಲಿ ಹಿಂದುಳಿದ ವರ್ಗದ ಏಳ್ಗೆಗೆ ಶ್ರಮಿಸಲಿದೆ. ಒಬಿಸಿಗೆ ಅನ್ಯಾಯವಾದರೆ ತನಿಖೆ ನಡೆಸಿ ಹಾಗೂ ತೀವ್ರ ನಿಗಾ ಇಡುವ ಮೂಲಕ ಸಮುದಾಯದ ನೊಂದವರಿಗೆ ನ್ಯಾಯ ಒದಗಿಸಲು ಶ್ರಮಿಸಲಿದೆ.
  • ಎನ್‌ಸಿಬಿಸಿಗೆ ಸಿವಿಲ್‌ ಕೋರ್ಟ್‌ ಅಧಿಕಾರ ದೊರೆಯಲಿದ್ದು, ಹಿಂದುಳಿದ ವರ್ಗಗಳ ಜನರ ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಅನುಕೂಲವಾಗಲಿದೆ
  • ಹಿಂದುಳಿದ ವರ್ಗಕ್ಕೆ ಸೇರಿದವರ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ನಿರ್ದಿಷ್ಟ ದೂರುಗಳ ತನಿಖೆ ನಡೆಸಲಿದೆ. ಈ ಹಿಂದೆ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ದೂರುಗಳ ವಿಚಾರಣೆಯನ್ನು ಪರಿಶಿಷ್ಟ ಜಾತಿ ರಾಷ್ಟ್ರೀಯ ಆಯೋಗ ನಡೆಸುತ್ತಿತ್ತು.
  • ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಿಲಿದ್ದು, ಅಗತ್ಯಬಿದ್ದಾಗ ಸಲಹೆ ನೀಡಲಿದೆ.
  • ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಪ್ರಮುಖ ನೀತಿ ನಿರೂಪಣೆ ರೂಪಿಸುವುದಕ್ಕೂ ಮುನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎನ್‌ಸಿಬಿಸಿ ಸಂಪರ್ಕಿಸುವುದು ಅತ್ಯಗತ್ಯ.
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
Editor’s Pick More