ಆಪ್ತರು ಕೈಕೊಟ್ಟಾಗ ಸೋನಿಯಾ ಬೆಂಬಲಕ್ಕೆ ನಿಂತಿದ್ದ ಕಾಂಗ್ರೆಸ್‌ ನಿಷ್ಠ ಧವನ್

ಕಾಂಗ್ರೆಸ್ ಹಿರಿಯ ಮುಖಂಡರೊಂದಿಗೆ ಸೋನಿಯಾ ಗಾಂಧಿ 10 ಜನಪಥದಲ್ಲಿ ಸಮಾಲೋಚನೆಯಲ್ಲಿ ತೊಡಗಿದ್ದರು. ಏಕಾಏಕಿ ಧವನ್ ರತ್ತ ನೋಡಿ, “ ನೀವೂ ಪುಸ್ತಕ ಬರೆಯುತ್ತಿದ್ದೀರಾ” ಎಂದು ಕೇಳಿಬಿಟ್ಟರು. ಧವನ್ ಬಾಯಿಂದ ಮಾತೇ ಹೊರಡಲಿಲ್ಲ. ಅವರು ಬರೆಯಬೇಕೆಂದುಕೊಂಡಿದ್ದ ಪುಸ್ತಕ ಅಲ್ಲಿಗೆ ನಿಂತಿತು

ಎಂ ಎಲ್ ಫೊತೆದಾರ್, ನಟವರ ಸಿಂಗ್, ಸಲ್ಮಾನ್ ಖುರ್ಷಿದ್, ಪ್ರಣಬ್ ಮುಖರ್ಜಿ, ಮಾರ್ಗರೇಟ್ ಆಳ್ವ ಮತ್ತಿತರ ಕಾಂಗ್ರೆಸ್ ಮುಖಂಡರು ಪುಸ್ತಕಗಳನ್ನು ಬರೆದು, ನೆನಪುಗಳನ್ನು ದಾಖಲಿಸಿ ಸೋನಿಯಾ ಹಾಗೂ ಪಕ್ಷಕ್ಕೆ ಮುಜುಗರ ತಂದಿಟ್ಟ ಸಮಯ ಅದಾಗಿತ್ತು. ತಾವು ಇವರೆಲ್ಲರಿಗಿಂತ ಭಿನ್ನವಾಗಿ ಪುಸ್ತಕ ಬರೆಯಬೇಕೆನ್ನುವ ಹುಕ್ಕಿಯಲ್ಲಿದ್ದರು ಆರ್ ಕೆ ಧವನ್. ಎರಡು ವರ್ಷಗಳ ಹಿಂದೆ ಅದೊಂದು ದಿನ, 10 ಜನಪಥದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರೊಂದಿಗೆ ಸೋನಿಯಾ ಗಾಂಧಿ ಸಮಾಲೋಚನೆಯಲ್ಲಿ ತೊಡಗಿದ್ದರು. ಏಕಾಏಕಿ ಧವನ್ ರತ್ತ ನೋಡಿದ ಅವರು “ಈಗ ನೀವೂ ಪುಸ್ತಕ ಬರೆಯುತ್ತಿದ್ದೀರಾ” ಎಂದು ಕೇಳಿಬಿಟ್ಟರು. ಧವನ್ ಬಾಯಿಂದ ಮಾತೇ ಹೊರಡಲಿಲ್ಲ. ಅಲ್ಲಿಗೆ ಅವರು ಬರೆಯಬೇಕೆಂದುಕೊಂಡಿದ್ದ ಪುಸ್ತಕ-ಆತ್ಮಚರಿತ್ರೆ ಮುಂದುವರಿಯಲಿಲ್ಲ.

ತಾವೊಂದು ಪುಸ್ತಕ ಬರೆಯುವ ‘ಒಲವು’ ಹೊಂದಿದ್ದು, ಈ ಕೃತಿಯು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಅವರ ಮಗ ರಾಜೀವ್ ಗಾಂಧಿ ಬಗ್ಗೆ “ಸಾಕಷ್ಟು ವಿಷಯಗಳನ್ನು” ಹೊರಹಾಕಲಿದೆ ಎಂದು 2014 ಅಕ್ಟೋಬರ್ ನಲ್ಲಿ ಧವನ್ ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. “ಏನನ್ನೂ ಹೇಳದ ನಟವರ್ ಸಿಂಗ್ ಕೃತಿಯ ರೀತಿಯಲ್ಲಿ ಈ ಪುಸ್ತಕ ಇರುವುದಿಲ್ಲ. ನಾನು ಸಾಕಷ್ಟು ವಿಷಯ ಬಹಿರಂಗಪಡಿಸುವೆ. ಯಾಕೆಂದರೆ ನಾಯಕನೊಬ್ಬ ಸಚಿವ ಸ್ಥಾನದಂತಹ ಹುದ್ದೆಗೆ ಸ್ನೇಹಿತರು ಅಥವಾ ಸಂಬಂಧಿಕರನ್ನು ನೇಮಕ ಮಾಡಬಾರದು ಎನ್ನುವುದು ನನ್ನ ಬಲವಾದ ಭಾವನೆ. ಅರುಣ್ ನೆಹರೂ, ಅರುಣ್ ಸಿಂಗ್ ಹಾಗೂ ಎಂ ಎಲ್ ಫೊತೆದಾರ್ ಅವರಂತಹ ವ್ಯಕ್ತಿಗಳ ಮಾತು ಕೇಳಿ ರಾಜೀವ್ ಗಾಂಧಿ ಮಾಡಿದ ತಪ್ಪು ಇದು. ಇವರೆಲ್ಲ ಸೇರಿಕೊಂಡು ರಾಜೀವ್ ರನ್ನು ನನ್ನ ವಿರುದ್ಧ ಎತ್ತಿಕಟ್ಟಿದ್ದರು” ಎಂದು ಧವನ್ ಹಿಂದೆ ಸುದ್ದಿಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಪಕ್ಷದೊಳಗೆ ಆರ್ ಕೆಡಿ ಎಂದೇ ಕರೆಸಿಕೊಳ್ಳುತ್ತಿದ್ದ ಧವನ್, ನೆಹರೂ-ಗಾಂಧಿ ಕುಟುಂಬಕ್ಕೆ ಅಪಾರ ನಿಷ್ಠರಾಗಿದ್ದರು, ಕಾವಲುಗಾರನಂತಿದ್ದರು, ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ತಮಗನಿಸಿದಂತೆಯೇ ಮುಖ್ಯಮಂತ್ರಿಗಳನ್ನು ನೇಮಕ ಮಾಡುತ್ತಿದ್ದರು ಮತ್ತು ತೆಗೆದುಹಾಕುತ್ತಿದ್ದರು. ಇಂದಿರಾರನ್ನು ಭೇಟಿಯಾಗ ಬಯಸುತ್ತಿದ್ದ ಅನೇಕ ಶ್ರೀಮಂತರು ಹಾಗೂ ಪ್ರಭಾವಿಗಳ ಪಾಲಿಗೆ ಅವರು ‘ಧವನ್ ಸಾಬ್’ ಆಗಿದ್ದರು.

ಆರಂಭಿಕ ವರ್ಷಗಳಲ್ಲಿ ಇಂದಿರಾ ಅವರ ಸ್ಟೆನೊ-ಟೈಪಿಸ್ಟ್ ಆಗಿದ್ದ ಇವರು ನಂತರ ಪ್ರಧಾನಿ ಸಂದೇಶವಾಹಕರಾಗಿ ಖ್ಯಾತಿಗೆ ಬಂದರು. 1970 ದಶಕದ ಆರಂಭದಲ್ಲಿ ಇಂದಿರಾ ತಮ್ಮ ಸಚಿವರುಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ನೇರ ಸೂಚನೆಗಳನ್ನು ಕೊಡುತ್ತಿರಲಿಲ್ಲ. ಅಹಿತಕರವಾದ ಮತ್ತು ಕೆಲವೊಮ್ಮೆ ವಿಚಿತ್ರವೆನಿಸುವ ನಿರ್ಧಾರಗಳೆಲ್ಲವೂ ಧವನ್ ಮೂಲಕ ರವಾನೆಯಾಗುತ್ತಿದ್ದವು. ಅದು ಹೇಗಿತ್ತೆಂದರೆ ಏನಾದರೂ ಎಡವಟ್ಟು ಆದರೆ ಅದಕ್ಕೆ ಧವನ್ ದೂಷಣೆಗೊಳಗಾಗಬೇಕಿತ್ತು. ಈ ಒಂದು ವ್ಯವಸ್ಥೆಯು ಇಂದಿರಾ ಅನುಯಾಯಿ ಧವನ್ ಅವರಿಗೆ ಹೆಚ್ಚಿನ ಅಧಿಕಾರ ನೀಡಿತ್ತು.

ಸಂಜಯ್ ಗಾಂಧಿಯವರಿಗಿದ್ದ ರಾಜಕೀಯ ಮಹತ್ವಾಕಾಂಕ್ಷೆಯನ್ನು ಗುರುತಿಸಿದ್ದ ಅಗ್ಗಳಿಕೆ ಧವನ್ ಅವರದ್ದು. ರೋಲ್ಸ್ -ರಾಯ್ಸ್ ಇಂಟರನ್ ಶಿಪ್ ಮುಗಿಸಿ ಸಂಜಯ್ ಬ್ರಿಟನ್ ನಿಂದ ಮರಳಿದ್ದರು. ಇಂದಿರಾರ ಆಪ್ತ ಸಹಾಯಕರಾಗಿದ್ದ (ಪಿಎ) ಧವನ್, ಕಾಂಗ್ರೆಸ್ಸಿನ ಘಟಾನುಘಟಿಗಳಿಗೆ ಸಂಜಯ್ ರನ್ನು ಪರಿಚಯಿಸತೊಡಗಿದ್ದರು. ಇಂದಿರಾ ಎದುರು ಸಂಜಯ್ ಬಗ್ಗೆ ಹೊಗಳಿಕೆಯ ಮಾತು ಹೇಳುವಂತೆ ಪಕ್ಷದ ಕೆಲವು ಮುಖಂಡರಿಗೆ ಸೂಚನೆ ನೀಡುತ್ತಿದ್ದರು. ಸಂಜಯ್ ಗಾಂಧಿಯವರ ರಾಜಕೀಯ ಚಾಣಾಕ್ಷತನ ತಿಂಗಳೊಪ್ಪತ್ತಿನಲ್ಲಿಯೇ ಇಂದಿರಾ ಅವರಿಗೆ ಸ್ಪಲ್ಟ ಮಟ್ಟಿಗೆ ಮನವರಿಕೆಯಾಗಿಬಿಟ್ಟಿತು. ತುರ್ತು ಪರಿಸ್ಥಿತಿ ಹೇರಿಕೆಯ ಹೊತ್ತಿಗಾಗಲೇ ಅಮ್ಮ-ಮಗ ಇಬ್ಬರದೂ ವಿಶ್ವಾಸ ಸಂಪಾದಿಸಿಕೊಂಡಿದ್ದರು ಧವನ್. ತುರ್ತು ಪರಿಸ್ಥಿತಿ ಹೇರುವುದಕ್ಕೆ ಮೂರು ದಿನಗಳ ಮೊದಲು, ಧವನ್-ಸಂಜಯ್ ಜೋಡಿ ಆಗಿನ ಕೇಂದ್ರದ ಗೃಹ ಕಾರ್ಯದರ್ಶಿ ಎನ್.ಕೆ.ಮುಖರ್ಜಿಯವರನ್ನು ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಯಿತು. ಈ ಜಾಗಕ್ಕೆ ರಾಜಸ್ಥಾನದ ಆಗಿನ ಮುಖ್ಯಕಾರ್ಯದರ್ಶಿ ಎಸ್.ಎಲ್.ಖುರಾನಾರನ್ನು ತಂದು ಕೂರಿಸಿದರು. 1975 ಜೂನ್ 25ರಂದು ರಾತ್ರಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಪತ್ರಿಕಾ ಕಾರ್ಯಾಲಯಗಳಿಗೆ ವಿದ್ಯುತ್ ಪೂರೈಕೆ ಸ್ಥಗಿಸಗೊಳಿಸುವುದಕ್ಕೆ ಕಿರಿಯ ಗೃಹ ಸಚಿವ ಓಂ ಮೆಹ್ತಾ ಹಾಗೂ ಬನ್ಸಿ ಲಾಲ್ ಅವರಿದ್ದ ಪ್ರಮುಖ ತಂಡವನ್ನು ನಿಯೋಜಿಸಲಾಗಿತ್ತು.

ಆದರೆ, ತುರ್ತು ಪರಿಸ್ಥಿತಿಯ ನಂತರದ ದಿನಗಳಲ್ಲಿ ಧವನ್ ಆ ಸಮಯದಲ್ಲಿ ಮಾಡಿದ್ದ ಅತಿರೇಕಗಳಿಂದ ದೂರವಿರಲು ಪ್ರಯತ್ನಿಸಿದ್ದರು. “ಇಡೀ ತುರ್ತು ಪರಿಸ್ಥಿತಿಯ ನಿಜವಾದ ಅಪರಾಧಿ ಎಸ್ಎಸ್ ರಾಯ್ ಆಗಿದ್ದರು. ನಂತರ ಅವರು (ರಾಯ್) ಇದಕ್ಕೆ ತಾವು ಹೊಣೆಯಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದರು ಮತ್ತು ಇಂದಿರಾ ಹಾಗೂ ಷಾ ಆಯೋಗದ ಮೇಲೆ ಗೂಬೆ ಕೂರಿಸಿದರು” ಎಂದು ಲೇಖಕಿ ಕೂಮಿ ಕಪೂರ್ ಬಳಿ ಧವನ್ ಹೇಳಿಕೊಂಡಿದ್ದರು. “ಷಾ ಆಯೋಗದ ವಿಚಾರಣೆಗಳು ನಡೆಯುತ್ತಿದ್ದಾಗ ರಾಯ್ ಒಮ್ಮೆ ಇಂದಿರಾ ಬಳಿ ಹೋಗಿ, ನೀವು ವಿಚಾರಣೆ ಎದುರಿಸಬೇಕಾದಂತೆ ಕಾಣುತ್ತಿದೆ ಎನ್ನುತ್ತಾರೆ. ಆಗ ಇಂದಿರಾ, ನಾನು ವಿಚಾರಣೆ ಎದುರಿಸುವುದಕ್ಕೆ ನೀವು ನಿಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡುತ್ತಿದ್ದೀರಿ ಎಂದು ತಣ್ಣಗೆ ನುಡಿಯುತ್ತಾರೆ. ನಂತರ ಮತ್ತೆಂದೂ ರಾಯ್ ಜತೆ ಇಂದಿರಾ ಮಾತನಾಡಿರಲಿಲ್ಲ” -ಧವನ್ ಹೇಳಿದ ಈ ಮಾತನ್ನು ಕೂಮಿ ಕಪೂರ್ ಬರೆದ “ದಿ ಎಮರ್ಜೆನ್ಸಿ: ಎ ಪರ್ಸನಲ್ ಹಿಸ್ಟರಿ” ಎನ್ನುವ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಇಂದಿರಾ ಹತ್ಯೆಯಲ್ಲಿ ಪಿತೂರಿ ಆಯಾಮದ ಬಗ್ಗೆ ತನಿಖೆ ನಡೆಸಲು ಸ್ಥಾಪನೆಯಾದ ಠಕ್ಕರ್ ಆಯೋಗವು ಧವನ್ ಪಾಲಿಗೆ ದೊಡ್ಡ ಹಿನ್ನಡೆಯಾಗಿತ್ತು. ದಿ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಸೋರಿಕೆಯಾದ ವರದಿಯ ಆಯ್ದ ಭಾಗವು ಧವನ್ ಅವರತ್ತ ಸಂಶಯದ ಬೆರಳು ತೋರಿಸಿತ್ತು. ಆಗ ಪ್ರಧಾನಿ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಜೀವ್ ತಡಮಾಡದೇ ಧವನ್ ಅವರನ್ನು ಎಲ್ಲ ಪ್ರಮುಖ ಸ್ಥಾನಮಾನಗಳಿಂದ ಹೊರಗಿಟ್ಟರು.

ಇದಾದ ಬಳಿಕ ದೇವರ ಮೊರೆಗಾಗಿ ವರ್ಷಗಳ ಕಾಲ ಧವನ್ ದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿರುವ ಹನುಮನ ಗುಡಿಗೆ ಭೇಟಿ ನೀಡುತ್ತಿದ್ದರು. 1988 ಹೊತ್ತಿಗೆ ಬೋಫೋರ್ಸ್ ಹಗರಣ ಹಾಗೂ ಅರುಣ್ ನೆಹರು ನಿರ್ಗಮನವು ರಾಜೀವ್ ಅವರನ್ನು ರಾಜಕೀಯವಾಗಿ ಹೈರಾಣಾಗಿಸಿದ್ದವು. ಆಗ ಇದೇ ಧವನ್ ಮತ್ತೆ ರಾಜೀವ್ ಪರವಾಗಿ ನಿಲ್ಲಬೇಕಾಯಿತು. ತಮ್ಮ ಕುಟುಂಬಕ್ಕಾಗಿ ಧವನ್ ಸಲ್ಲಿಸಿದ ಸೇವೆಯನ್ನು ಹತ್ತಿರದಿಂದ ನೋಡಿದ್ದ ಸೋನಿಯಾ, ಧವನ್ ಅವರಿಗೆ ಋಣಿಯಾಗಿರುವುದಕ್ಕೆ ಕಾರಣಗಳು ಇದ್ದವು. ಅದು, 1999 ಮೇ 15, ಇಂಗ್ಲೆಂಡಿನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ವೀಕ್ಷಣೆಯಲ್ಲಿ ಅಕ್ಷರಶಃ ಎಲ್ಲರೂ ನಿರತರಾಗಿದ್ದಾಗ ಕಾಂಗ್ರೆಸ್ ಕಾರ್ಯಕಾರಿ ಸಮತಿ ಸಭೆ ಕರೆಯಲಾಗಿತ್ತು. ಸಭೆ ಬೇಗ ಮುಗಿಯಬೇಕಿತ್ತು. ಯಾಕೆಂದರೆ ಎಲ್ಲರೂ ಗೋವಾ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ, ಟಿವಿಯಲ್ಲಿ ಪಂದ್ಯ ನೋಡುವ ಅವಸರದಲ್ಲಿದ್ದರು.

ಇತ್ತ ಸಭೆ ಶುರುವಾಗುತ್ತಿದ್ದಂತೆಯೇ ಶರದ್ ಪವಾರ್ ನಸು ನಗೆಯ ಮೂಲಕ ಸೂಚನೆಯೊಂದನ್ನು ಕೊಟ್ಟರು. ಕೂಡಲೇ ಪಿ ಎ ಸಂಗ್ಮಾ ಎದ್ದು ನಿಂತು ಮೊನಚು ಮಾತಿನ ಮೂಲಕ ಈ ಸೂಚನೆಯನ್ನು ಕಾರ್ಯಗತಗೊಳಿಸಲು ಅಣಿಯಾದರು. ಅಲ್ಲಿಗೆ ಕಾಂಗ್ರೆಸ್ ನಲ್ಲಿ ಬಂಡಾಯ ಶುರುವಾಗಿತ್ತು. ಈ ನಡೆಯಿಂದ ಸೋನಿಯಾ ಮತ್ತಿತರರು ದಿಗ್ಭ್ರಮೆಗೊಂಡರು. ಸಂಗ್ಮಾ ನಿಧಾನವಾಗಿ ಸೋನಿಯಾರ ವಿದೇಶಿ ಮೂಲವನ್ನು ಕೆದಕಿ ಬಿಜೆಪಿ ಮಾಡುತ್ತಿದ್ದ ಪ್ರಚಾರವನ್ನು ಉಲ್ಲೇಖಿಸಿದರು. ನಿಮ್ಮ ಬಗ್ಗೆ, ನಿಮ್ಮ ತಂದೆ ತಾಯಿ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದು ಹೇಳಿ ಸೋನಿಯಾರನ್ನು ಅವಮಾನಗೊಳಿಸಿದರು. “ಇಡೀ ದೇಶದಲ್ಲಿ ಒಬ್ಬರು ಅರ್ಹ ಪ್ರಧಾನಿ ಅಭ್ಯರ್ಥಿಯನ್ನು ಹುಡುಕುವುದಕ್ಕೆ ಕಾಂಗ್ರೆಸ್ ಯಾಕೆ ಸೋತಿದೆ ಎಂದು ಜನ ಕೇಳುವ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ. ಅಷ್ಟಕ್ಕೂ ಅವರು ಕೇಳುವುದು ಸರಿಯಾಗಿಯೇ ಇದೆ” ಎಂದು ಸಂಗ್ಮಾ ಹೇಳಿದಾಗ ಸೋನಿಯಾರಿಗೆ ಇನ್ನೊಂದು ಆಘಾತವಾಗಿತ್ತು ಎಂದು ಅಂದಿನ ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ನೆನಪಿಸಿಕೊಳ್ಳುತ್ತಾರೆ.

ಪ್ರಣಬ್‌ ಮುಖರ್ಜಿ, ಮನಮೋಹನ್ ಸಿಂಗ್, ಜಿತೇಂದ್ರ ಪ್ರಸಾದ್, ಮಾಧವ್ ರಾವ್ ಸಿಂಧಿಯಾ, ರಾಜೇಶ್ ಪೈಲಟ್, ಅಹ್ಮದ್ ಪಟೇಲ್, ಗುಲಾಂ ನಬಿ ಆಜಾದ್, ಅರ್ಜುನ್ ಸಿಂಗ್, ಅಂಬಿಕಾ ಸೋನಿ ಹಾಗೂ ಇನ್ನಿತರ “ನಿಷ್ಠಾವಂತರು” ಧವನ್ ಸಹನೆ ಕಳೆದುಕೊಳ್ಳುವ ತನಕವೂ ಸಂಗ್ಮಾ ಮಾತನ್ನು ಆಲಿಸುತ್ತಿದ್ದರು. ಸಂಗ್ಮಾ ವಾದವನ್ನು ತಳ್ಳಿಹಾಕಿದ ಧವನ್, “ಭಾಯ್, ನೀವು ಬಿಜೆಪಿ-ಆರ್ ಎಸ್ ಎಸ್ ಕಾರ್ಯಸೂಚಿಯನ್ನು ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತಿದೆ” ಎಂದು ಅವರ ಬಾಯಿಗೆ ಬೀಗ ಹಾಕಲು ಯತ್ನಿಸಿದ್ದರು. ಬಂಡಾಯದ ಸೂತ್ರಧಾರರಾಗಿದ್ದ ಪವಾರ್ ಪಕ್ಕವೇ ಕುಳಿತಿದ್ದ ಧವನ್, “ಮೇಡಂ, ಈ ಹೋರಾಟದಲ್ಲಿ ನೀವು ಏಕಾಂಗಿಯಲ್ಲ. ನಾವೆಲ್ಲ ನಿಮ್ಮ ಬೆಂಬಲಕ್ಕೆ ಇದ್ದೇವೆ” ಎಂದರು. ಕಾಂಗ್ರೆಸ್ ಒಳಗಿನವರು ಹೇಳುವ ಪ್ರಕಾರ, ಧವನ್ ಅವರ ಈ ಮಾತು ಸೋನಿಯಾರನ್ನು ಆಳವಾಗಿ ಕಾಡಿತ್ತು. ನಿಷ್ಠಾವಂತರೆಂದು ಗುರುತಿಸಿಕೊಂಡ ಉಳಿದವರು ಸಂಗ್ಮಾ ಮಾತಿಗೆ ಎದುರಾಡದೇ ಇದ್ದದ್ದು ಸೋನಿಯಾರಲ್ಲಿ ಅಚ್ಚರಿ ಮೂಡಿಸಿತ್ತು,

ಇದನ್ನೂ ಓದಿ : ಕರುಣಾನಿಧಿ ನಿರ್ಗಮನ: ಬದಲಾಗಲಿದೆಯೇ ದ್ರಾವಿಡ ಚಳವಳಿಯ ರಾಜಕೀಯ ವ್ಯಾಕರಣ?

ಹಾಗೆ ನೋಡಿದರೆ, ಖಾಸಗಿ ಬದುಕಿನಲ್ಲಿಯೂ ಧವನ್ ನಿಷ್ಠಾವಂತಿಕೆಗೆ ಹೆಸರಾಗಿದ್ದರು. 74 ಇಳಿ ವಯಸ್ಸಿನ ವರೆಗೂ ಅವಿವಾಹಿತರಾಗಿದ್ದ ಅವರು, 2011ರಲ್ಲಿ ತಮ್ಮ ಬಹು ಕಾಲದ ಗೆಳತಿ ಅಚಲಾರನ್ನು ಮದುವೆಯಾದರು. 70ರ ದಶಕದಿಂದಲೂ ಇವರಿಬ್ಬರು ಪರಿಚಿತರು. ಅಚಲ ಮೊದಲು ಪೈಲಟ್ ಒಬ್ಬರನ್ನು ಮದುವೆಯಾಗಿ ಕೆನಡಾಗೆ ಹೋಗಿದ್ದರು. 1990ರಲ್ಲಿ ವಿಚ್ಛೇದನ ಪಡೆದುಕೊಂಡರು. ತಾವು ಅಚಲಾರನ್ನು ಮದುವೆಯಾದದ್ದಕ್ಕೂ ಒಂದು ಕಾರಣವಿದೆ ಎಂದು ಧವನ್, ಪತ್ರಕರ್ತೆ ರಿತು ಸರಿನ್ ಬಳಿ ಹೇಳಿಕೊಂಡಿದ್ದರು. ವೈರಲ್ ಜ್ವರದಿಂದಾಗಿ ಒಮ್ಮೆ ಅವರು ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿತ್ತು. ಆಗ ಧವನ್ ರನ್ನು ಅಚಲಾರೇ ನೋಡಿಕೊಳ್ಳುತ್ತಿದ್ದರು. ಅಗತ್ಯ ಒಪ್ಪಿಗೆ ಫಾರಂಗೆ ರಕ್ತ ಸಂಬಂಧಿಗಳೇ ಸಹಿ ಹಾಕಬೇಕು ಎಂದು ಆಸ್ಪತ್ರೆ ಅಧಿಕಾರಿಗಳು ತಾಕೀತು ಮಾಡಿದ್ದರು. “ನನ್ನನ್ನು ಇಷ್ಟೊಂದು ಕಾಳಜಿಯಿಂದ ನೋಡಿಕೊಂಡ ಅಚಲಾರಿಗೆ ಸಹಿ ಹಾಕಲು ಸಾಧ್ಯವಾಗಲಿಲ್ಲ ಎಂದು ನನಗೆ ತುಂಬಾ ಬೇಜಾರಾಯಿತು” ಎಂದು ಧವನ್ ಆ ಸಂದರ್ಭವನ್ನು ನೆನಪಿಸಿಕೊಂಡಿದ್ದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More