ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಯಲ್ಲಿ ಭಿನ್ನಮತದ ಹೊಗೆ?

ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರಕ್ಕೆ ಮುಖಭಂಗ ಮಾಡಲು ಪ್ರವಾಸ ಆರಂಭಿಸಿರುವ ಬಿಜೆಪಿಯಲ್ಲಿ ಭಿನ್ನಮತ ಕಾಣಿಸಿಕೊಂಡಿದೆ. ಪ್ರವಾಸಕ್ಕೆ ಶ್ರೀರಾಮುಲು ಕಡಗಣನೆ, ಈಶ್ವರಪ್ಪಗೆ ಪಕ್ಷ ಬಲಿಷ್ಠವಿಲ್ಲದ ಹಳೇ ಮೈಸೂರು ಭಾಗದ ನೇತೃತ್ವದ ನೀಡಿರುವುದು ಅತೃಪ್ತಿಗೆ ಕಾರಣ ಎನ್ನಲಾಗಿದೆ

ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆ ಅಂತರದಲ್ಲಿ ಕೈತಪ್ಪಿದ ಅಧಿಕಾರವನ್ನು ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ಮರಳಿ ಪಡೆದುಕೊಳ್ಳಲು ಬಿಜೆಪಿಯ ನಾಯಕರು ಮೂರು ತಂಡಗಳಾಗಿ ರಾಜ್ಯ ಸುತ್ತಲು ಗುರುವಾರ ಆರಂಭಿಸಿದ್ದಾರೆ. ಆದರೆ, ರಾಜ್ಯ ಪ್ರವಾಸ ಕೈಗೊಂಡಿರುವ ತಂಡಗಳಲ್ಲಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಆಪ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪಕ್ಷ ಬಲವರ್ಧನೆಗೆ ಶ್ರಮಿಸಿದವರಿಗೆ ಪ್ರಾಧಾನ್ಯತೆ ನೀಡಲಾಗುತ್ತಿಲ್ಲ, ಔಪಚಾರಿಕತೆಗೆ ನೇತೃತ್ವ ವಹಿಸಲಾಗಿದೆ ಎಂದು ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದರಿಂದ, ಬಿಜೆಪಿಯಲ್ಲಿ ಮತ್ತೊಮ್ಮೆ ಬಣ ರಾಜಕೀಯ ಬಿರುಸು ಪಡೆಯುವ ಸಾಧ್ಯತೆ ಇದೆ. ಬಹಿರಂಗವಾಗಿ ಪಕ್ಷಕ್ಕೆ ಹಾನಿಯಾಗುವಂಥ ಹೇಳಿಕೆಗಳನ್ನು ನೀಡಬಾರದು ಎಂದು ಕೇಂದ್ರ ನಾಯಕರು ಕಟ್ಟಪ್ಪಣೆ ವಿಧಿಸಿರುವುದರಿಂದ ಅವರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಮೊಳಕಾಲ್ಮೂರು ಶಾಸಕ ಹಾಗೂ ಬಿಜೆಪಿ ಉಪಾಧ್ಯಕ್ಷ ಬಿ ಶ್ರೀರಾಮುಲು ಅವರು ಪ್ರವಾಸದಲ್ಲಿ ತಮಗೆ ಅವಕಾಶ ಕಲ್ಪಿಸದೆ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರಿಗೆ, ಪಕ್ಷ ಬಲಿಷ್ಠವಿಲ್ಲದ ಹಳೆಯ ಮೈಸೂರು ಭಾಗದ ಜಿಲ್ಲೆಗಳ ಪ್ರವಾಸ ಕೈಗೊಳ್ಳುವ ಇರಾದೆ ಇರಲಿಲ್ಲ ಎನ್ನಲಾಗಿದೆ. “ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗೆದ್ದಿಲ್ಲ. ಕೊಡಗು ಹೊರತುಪಡಿಸಿ ಕಾಂಗ್ರೆಸ್‌-ಜೆಡಿಎಸ್‌ ತೆಕ್ಕೆಯಲ್ಲಿರುವ ಹಳೆಯ ಮೈಸೂರು ಭಾಗದ ಜಿಲ್ಲೆಗಳನ್ನು ಬಿಜೆಪಿ ವರಿಷ್ಠರೇ ಪ್ರಮುಖವಾಗಿ ಪರಿಗಣಿಸಿಲ್ಲ. ಇಂಥ ಸಂದರ್ಭದಲ್ಲಿ ಆ ಭಾಗದಲ್ಲಿ ನನಗೆ ನೇತೃತ್ವ ವಹಿಸಿರುವುದು ನಾಮ್‌ಕೆವಾಸ್ತೆ ಅಷ್ಟೆ. ಇದರ ಹಿಂದೆ ಕೆಲವರು ವ್ಯವಸ್ಥಿತವಾಗಿ ಪಿತೂರಿ ನಡೆಸಿದ್ದಾರೆ,” ಎಂದು ಈಶ್ವರಪ್ಪ ಆಕ್ರೋಶಗೊಂಡಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ವಿರುದ್ಧ ಜನಜಾಗೃತಿ ಮೂಡಿಸಲು ಹಾಗೂ ಕಾರ್ಯಕರ್ತರನ್ನು ಚುನಾವಣೆಗೆ ಅಣಿಗೊಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಹಾಗೂ ಕೆ ಎಸ್‌ ಈಶ್ವರಪ್ಪ ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ಆರಂಭಿಸಿವೆ. ಇದರ ಭಾಗವಾಗಿ ಯಡಿಯೂರಪ್ಪ ನೇತೃತ್ವದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮುಧೋಳ ಶಾಸಕ ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪನಾಯಕರಾಗಿರುವ ಗೋವಿಂದ ಕಾರಜೋಳ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌ ರವಿಕುಮಾರ್ ಅವರು ಹೈದರಾಬಾದ್‌-ಕರ್ನಾಟಕ ಭಾಗದ ಆರು ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ಒಟ್ಟು ೧೩ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ‌ಜಗದೀಶ್‌ ಶೆಟ್ಟರ್‌ ನೇತೃತ್ವದಲ್ಲಿ ಶಾಸಕರಾದ ಆರ್‌ ಅಶೋಕ್‌ ಹಾಗೂ ಅರವಿಂದ ಲಿಂಬಾವಳಿ ಅವರು ದಕ್ಷಿಣ ಹಾಗೂ ಕರಾವಳಿ ಕರ್ನಾಟಕದ ೮ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಈಶ್ವರಪ್ಪ ನೇತೃತ್ವದಲ್ಲಿ ಶಾಸಕ ಸಿ ಟಿ ರವಿ ಹಾಗೂ ಮಾಜಿ ಶಾಸಕ ಲಕ್ಷ್ಮಣ ಸವದಿ ಅವರು ಹಳೆಯ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಪ್ರಯತ್ನ ಆರಂಭಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಕೇವಲ ೧,೭೦೦ಗಳಿಗೂ ಕಡಿಮೆ ಮತಗಳ ಅಂತರದಿಂದ ಸೋಲನ್ನಪ್ಪಿದ ಶ್ರೀರಾಮುಲು ಅವರಿಗೆ ಬಿಜೆಪಿಯಲ್ಲಿ ಭಾರಿ ಮನ್ನಣೆ ನೀಡಲಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರು ಉಪಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಚರ್ಚೆ ಬಿರುಸಾಗಿತ್ತು. ಆದರೆ, ಈಗ ನಿರ್ಣಾಯಕ ಹೋರಾಟಕ್ಕೆ ಅಣಿಯಾಗುತ್ತಿರುವ ಬಿಜೆಪಿಯು ಶ್ರೀರಾಮುಲು ಅವರನ್ನು ತಂಡದಿಂದ ಕೈಬಿಟ್ಟಿರುವುದು ಭಿನ್ನ ಬಗೆಯ ಚರ್ಚೆಗಳಿಗೆ ನಾಂದಿ ಹಾಡಿದೆ. ಮೂರೂ ತಂಡಗಳಲ್ಲಿ ಶೋಭಾ ಕರಂದ್ಲಾಜೆ ಹೊರತುಪಡಿಸಿ ಯಾವುದೇ ಸಂಸದರಿಗೆ ಅವಕಾಶವಿಲ್ಲ. ಪರಾಭವಗೊಂಡ ಅಭ್ಯರ್ಥಿಗಳ ಪೈಕಿ ಲಕ್ಷ್ಮಣ ಸವದಿಗೆ ಮಾತ್ರ ಸ್ಥಾನ ಕಲ್ಪಿಸಲಾಗಿದೆ.

ಶೋಭಾ ಅವರಿಗೆ ತಂಡದಲ್ಲಿ ಅವಕಾಶ ಕಲ್ಪಿಸುವ ಅಗತ್ಯವೇನಿತ್ತು? ಶೋಭಾ ಬದಲಿಗೆ ಶ್ರೀರಾಮುಲು ಅವರಿಗೆ ಅವಕಾಶ ನೀಡಬೇಕಿತ್ತು. ಇನ್ನು, ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡ ಲಕ್ಷ್ಮಣ ಸವದಿ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಿರುವುದರ ಹಿಂದಿನ ಉದ್ದೇಶವೇನು? ಇದರರ್ಥ, ಯಡಿಯೂರಪ್ಪ ಅವರಿಗೆ ಈಶ್ವರಪ್ಪ ಮೇಲೆ ನಂಬಿಕೆ ಇಲ್ಲ ಎನ್ನುವ ಅರ್ಥ ಹೊರಡಿಸುವುದಿಲ್ಲವೇ? ಹೈದರಾಬಾದ್‌-ಕರ್ನಾಟಕ ಜಿಲ್ಲೆಗಳಲ್ಲಿ ಯಡಿಯೂರಪ್ಪ ಅವರ ತಂಡ ಪ್ರವಾಸ ಮಾಡುತ್ತಿದೆ. ಈ ಭಾಗದಲ್ಲಾದರೂ ಶ್ರೀರಾಮುಲು ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಬೇಕಿತ್ತು ಎಂಬ ಸಲಹೆ ರೂಪದ ಒತ್ತಾಯ ಪಕ್ಷದ ವಲಯಗಳಿಂದಲೇ ಕೇಳಿಬಂದಿದೆ.

ಆದರೆ, ಶ್ರೀರಾಮುಲು ಅವರನ್ನು ಕೈಬಿಡುವುದಕ್ಕೆ ಪಕ್ಷದ ನಾಯಕರು ನೀಡುವ ಹೇಳಿಕೆಗಳೇ ಬೇರೆಯಾಗಿವೆ. ನಾಯಕ ಸಮಾಜದ ಪ್ರಬಲ ನಾಯಕರಾಗಿ ಹೊರಹೊಮ್ಮಲು ಯತ್ನಿಸುತ್ತಿರುವ ಶ್ರೀರಾಮುಲು ಅವರು ಈಚೆಗೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಸಹಮತ ನೀಡುವ ಹೇಳಿಕೆ ನೀಡಿದ್ದರು. ಇದು ಬಿಜೆಪಿಯನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿತ್ತು. ಶ್ರೀರಾಮುಲು ಹೇಳಿಕೆಗೆ ಸ್ಪಷ್ಟನೆ ನೀಡಿ, ವಿವಾದವನ್ನು ತಣಿಸುವಲ್ಲಿ ಯಶಸ್ವಿಯಾದ ಪಕ್ಷವು ಶ್ರೀರಾಮುಲು ಅವರನ್ನು ಯಾವುದೇ ತಂಡದಲ್ಲಿ ಸೇರಿಸಿದರೂ ಪ್ರವಾಸದ ಉದ್ದೇಶ ವಿಫಲವಾಗುವ ಸಾಧ್ಯತೆ ಇದೆ. ಎಲ್ಲೆಂದರಲ್ಲಿ ಮಾಧ್ಯಮಗಳು ಪ್ರತ್ಯೇಕ ರಾಜ್ಯ ಬೇಡಿಕೆಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಪ್ರವಾಸ ಉದ್ದೇಶವನ್ನೇ ಮಣ್ಣುಪಾಲು ಮಾಡುವ ಸಾಧ್ಯತೆ ಇರುವುದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಬಾದಾಮಿ ಕಣದಲ್ಲಿ ಶ್ರೀರಾಮುಲು; ಬಿಜೆಪಿಯಲ್ಲಿ ರೆಡ್ಡಿ ಬಣ ಮತ್ತೆ ಮುನ್ನೆಲೆಗೆ!

ಆದರೆ, ವರಿಷ್ಠರ ತರ್ಕವನ್ನು ಶ್ರೀರಾಮುಲು ಬೆಂಬಲಿಗರು ಒಪ್ಪಲು ಸಿದ್ಧರಿಲ್ಲ. “ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಶ್ರೀರಾಮುಲು ಮಾತನಾಡಿದ್ದಾರೆಯೇ ವಿನಾ ಪ್ರತ್ಯೇಕ ರಾಜ್ಯದ ಬಗ್ಗೆಯಲ್ಲ. ಶೋಭಾ ಕರಂದ್ಲಾಜೆ ಅವರು ಶೀಘ್ರದಲ್ಲೇ ವಿಧಾನ ಪರಿಷತ್‌ ಸದಸ್ಯೆಯಾಗಿ ರಾಜ್ಯ ರಾಜಕಾರಣಕ್ಕೆ ಮರಳಬಹುದು. ಶ್ರೀರಾಮುಲು ಅಥವಾ ಈಶ್ವರಪ್ಪ ಅವರು ಶೋಭಾ ಅವರಿಗೆ ಪ್ರತಿಸ್ಪರ್ಧಿಗಳಾಗಬಹುದು. ಇದಕ್ಕಾಗಿ ಉದ್ದೇಶಪೂರ್ವಕವಾಗಿ ಅವರನ್ನು ತಂಡದಿಂದ ದೂರವಿಡಲಾಗಿದೆ. ಈಶ್ವರಪ್ಪ ಅವರನ್ನು ಪಕ್ಷ ಬಲಿಷ್ಠವಲ್ಲದ ಭಾಗಕ್ಕೆ ನಿಯೋಜನೆಗೊಳಿಸಲಾಗಿದೆ. ಈಶ್ವರಪ್ಪ ತಂಡದಲ್ಲಿ ಲಕ್ಷ್ಮಣ ಸವದಿ ಅವರನ್ನು ಸೇರಿಸಿರುವ ಉದ್ದೇಶದ ಹಿಂದೆ ಬೇರೆಯದೇ ಲೆಕ್ಕಾಚಾರವಿದೆ. ಈಶ್ವರಪ್ಪ ಅವರು ಮರೆಮಾಚುವ ವಿಚಾರಗಳನ್ನು ಸವದಿ ಅವರಿಂದ ಪಡೆಯುವ ಉದ್ದೇಶ ಇದರ ಹಿಂದಿದೆ. ಪಕ್ಷದ ಮೇಲೆ ಬಿಗಿಹಿಡಿತ ಸಾಧಿಸುವುದು ಇದರ ಹಿಂದಿನ ಉದ್ದೇಶ,” ಎನ್ನುತ್ತಾರೆ ಹೆಸರು ಹೇಳಲಿಚ್ಛಿಸಿದ ಬಿಜೆಪಿ ಮುಖಂಡರೊಬ್ಬರು.

ರಾಜ್ಯ ಪ್ರವಾಸ ಕೈಗೊಂಡಿರುವ ತಂಡದಲ್ಲಿ ಸ್ಥಾನ ಕಲ್ಪಿಸದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ, “ಶ್ರೀರಾಮುಲು ಅವರು ದೆಹಲಿಗೆ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ಬಳ್ಳಾರಿಗೆ ವಾಪಸಾಗಲಿದ್ದಾರೆ. ಯಡಿಯೂರಪ್ಪ ನೇತೃತ್ವದ ತಂಡವೂ ಶುಕ್ರವಾರ ಬಳ್ಳಾರಿಯಲ್ಲಿ ಉಳಿದುಕೊಳ್ಳಲಿದೆ. ಶನಿವಾರ ಬಿಎಸ್‌ವೈ ತಂಡದ ಜೊತೆ ಶ್ರೀರಾಮುಲು ಕೊಪ್ಪಳದಲ್ಲಿ ಪ್ರವಾಸ ಮಾಡಲಿದ್ದಾರೆ. ಶ್ರೀರಾಮುಲು ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಬೇಕು ಎಂಬುದು ಒಪ್ಪಿತವೇ,” ಎಂದಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More