ಎಲ್ಲರ ಮೇಲೂ ಕಣ್ಣಿಡುವ ಮಾಧ್ಯಮಗಳ ಮೇಲೆಯೇ ಮೋದಿ, ಅಮಿತ್ ಶಾ ಕಣ್ಣು!

ಯಾವುದೇ ಸರ್ಕಾರವಾಗಲಿ ಅದರ ಕಾರ್ಯಚಟುವಟಿಕೆ ಮೇಲೆ ವಿಶೇಷ ಕಣ್ಣಿಡುವುದು ಮಾಧ್ಯಮಗಳ ಜವಾಬ್ದಾರಿ. ವಿಪರ್ಯಾಸ ಎಂದರೆ, ಮಾಧ್ಯಮಗಳ ಮೇಲೆಯೇ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದೆ! ದೇಶದ ದೃಶ್ಯ ಮಾಧ್ಯಮಗಳನ್ನು ನಿಯಂತ್ರಿಸುವುದಕ್ಕಾಗಿಯೇ ೨೦೦ ಸದಸ್ಯರ ವಿಶೇಷ ತಂಡವೊಂದು ರಚನೆಯಾಗಿದೆ. ಈ ಕುರಿತ ‘ದಿ ವೈರ್’ ವರದಿಯ ಭಾವಾನುವಾದ ಇಲ್ಲಿದೆ

ಯಾವುದೇ ಸರ್ಕಾರವಾಗಲಿ, ಅದರ ಕಾರ್ಯಚಟುವಟಿಕೆ ಮೇಲೆ ವಿಶೇಷ ಕಣ್ಣಿಡುವುದು ಮಾಧ್ಯಮಗಳ ಜವಾಬ್ದಾರಿ. ವಿಪರ್ಯಾಸ ಎಂದರೆ, ಮಾಧ್ಯಮಗಳ ಮೇಲೆಯೇ ಕೇಂದ್ರ ಸರ್ಕಾರವು ಹದ್ದಿನ ಕಣ್ಣಿಟ್ಟಿದೆ. ದೇಶದ ದೃಶ್ಯ ಮಾಧ್ಯಮಗಳನ್ನು ನಿಯಂತ್ರಿಸುವುದಕ್ಕಾಗಿಯೇ ೨೦೦ ಸದಸ್ಯರ ವಿಶೇಷ ತಂಡವೊಂದು ರಚನೆಯಾಗಿದ್ದು, ದೆಹಲಿಯ ಸಿಬಿಐ (ಕೇಂದ್ರೀಯ ತನಿಖಾ ದಳ) ಪ್ರಧಾನ ಕಚೇರಿ ಹತ್ತಿರ ಇರುವ ‘ಸೂಚನಾ ಭವನ’ ಕಟ್ಟಡದಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಿದೆ. ದೇಶಾದ್ಯಂತ ಇರುವ 24 ‍X 7 ಸುದ್ದಿವಾಹಿನಿಗಳು ಪ್ರತಿದಿನ ಕೇಂದ್ರ ಸರ್ಕಾರದ ಕುರಿತು ಯಾವ ರೀತಿ ಸುದ್ದಿ ಪ್ರಸಾರ ಮಾಡುತ್ತಿವೆ ಎಂಬ ಮಾಹಿತಿಯನ್ನು ಕಲೆಹಾಕುವುದು ಈ ತಂಡದ ಕೆಲಸ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ರಚನೆಯಾಗಿರುವ ಈ ಮಾಧ್ಯಮ ಕಣ್ಗಾವಲು ತಂಡ ಕಾರ್ಯನಿರ್ವಹಿಸುವ ಕಚೇರಿಯಲ್ಲಿ (ವಾರ್ ‌ರೂಮ್‌) ಹೊಸ ಬೆಳವಣಿಗೆಯೊಂದು ನಡೆದಿದೆ. ಅದು, ಆ ತಂಡದ ಸದಸ್ಯರು ವಾರ್‌ ರೂಮ್‌ ಪ್ರವೇಶಿಸುವ ಮೊದಲು ಅವರ ಮೊಬೈಲ್‌ ಗಳನ್ನು ವಾರ್ ‌ರೂಮ್‌ ಮೇಲ್ವಿಚಾರಕರು ವಶಕ್ಕೆ ಪಡೆಯುತ್ತಿರುವುದು. ಈ ನಿರ್ಧಾರಕ್ಕೆ ಕಾರಣವಾದ ಸಂಗತಿ ಎಂದರೆ, ಎಬಿಪಿ ನ್ಯೂಸ್ ಚಾನಲ್‌ನಲ್ಲಿ ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೈ ಅವರು ನಿರೂಪಿಸುತ್ತಿದ್ದ ‘ಮಾಸ್ಟರ್ ಸ್ಟ್ರೋಕ್’‌ ಕಾರ್ಯಕ್ರಮದ ಮಾಹಿತಿ ಸೋರಿಕೆಯಾಗಿದ್ದು. ಇದು ಪುನರಾವರ್ತನೆ ಆಗದಂತೆ ತಡೆಯಲು ಕೇಂದ್ರ ಸರ್ಕಾರದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕರು ವಾರ್ ‌ರೂಮ್‌ ಸದಸ್ಯರಿಗೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ಕೂಡ ನೀಡಿದ್ದಾರೆ ಎನ್ನಲಾಗಿದೆ.

ಆ ಮಾಧ್ಯಮ ನಿಗಾ ತಂಡದ ಸದಸ್ಯರನ್ನು ಆರು ತಿಂಗಳ ಒಪ್ಪಂದದ ಮೇರೆಗೆ ಕೆಲಸಕ್ಕೆ ತಗೆದುಕೊಳ್ಳಲಾಗಿದ್ದರೂ, ಅವರನ್ನು ಹಲವಾರು ವರ್ಷಗಳಿಂದ ಕೆಲಸದಲ್ಲಿ ಮುಂದುವರಿಸಲಾಗಿದೆ. ಹೀಗಾಗಿ, ಆ ತಂಡದ ಕೆಲ ಸದಸ್ಯರು ಕಾಯಂ ಉದ್ಯೋಗ ಹಾಗೂ ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದು, ಆ ಪೈಕಿ ೧೫ ಜನ ಕೆಲಸಗಾರರನ್ನು ತಗೆದುಹಾಕಲಾಗಿದೆ. ಆದರೆ, ಈ ಸಮಸ್ಯೆಗಳನ್ನು ಹೊರತುಪಡಿಸಿದರೆ ಅವರು ಕಾರ್ಯ ನಿರ್ವಹಿಸುವ ವಿಚಾರದಲ್ಲಿ ಯಾವುದೇ ಗೊಂದಲಗಳು ಇಲ್ಲ.

ವಾರ್‌ ರೂಮ್‌ನ ಸೂಚನೆಗಳು ಸ್ಪಷ್ಟವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಕುರಿತು ಪ್ರತಿನಿತ್ಯ ಸುದ್ದಿ ಮಾಧ್ಯಮಗಳು ಯಾವ ರೀತಿ ಸುದ್ದಿ ಮಾಡುತ್ತವೆ? ಹೇಗೆಲ್ಲ ಅವರನ್ನು ಬಿಂಬಿಸಲಾಗುತ್ತದೆ? ಯಾವ ಸಮಯದಲ್ಲಿ ಅವರಿಬ್ಬರನ್ನು ಹೆಚ್ಚು ತೋರಿಸಲಾಗುತ್ತದೆ? ಎಂಬ ಮಾಹಿತಿ ಕುರಿತು ದಿನದ ವರದಿ ಸಿದ್ಧಪಡಿಸುವುದು ಈ ತಂಡದ ಕೆಲಸ. ಇದರ ಜೊತೆಗೆ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ರಾಜ್ಯವರ್ಧನ ರಾಥೋಡ್ ಕೂಡ ತಮ್ಮ ಕುರಿತು ಮಾಧ್ಯಮಗಳು ಹೇಗೆ ವರದಿ ಮಾಡುತ್ತಿವೆ ಎಂಬುದರ ಬಗ್ಗೆಯೂ ಪ್ರತ್ಯೇಕ ವರದಿ ಸಿದ್ಧಪಡಿಸಲು ಆ ಸದಸ್ಯರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮುಖ್ಯವಾಗಿ, ಆ ವಾರ್‌ ರೂಮ್‌ ನ ಉದ್ದೇಶ ಸುದ್ದಿ ಮಾಧ್ಯಮಗಳ ಮೇಲೆ ನಿಗಾ ಇಡುವುದು. ಆ ತಂಡ ಮಾಧ್ಯಮಗಳು ತೋರಿಸುವ ವಿಷಯ, ವಿಷಯದ ನಿಲುವು, ಚರ್ಚೆಗೆ ವಿಷಯದ ಆಯ್ಕೆ, ಆ ಚರ್ಚೆಯಲ್ಲಿ ಪಾಲ್ಗೊಳ್ಳುವವರು ಹಾಗೂ ಅವರ ಹೇಳಿಕೆಗಳಿಂದ ಹಿಡಿದು ಕೇಂದ್ರ ಸರ್ಕಾರ ಕೇಂದ್ರಿತವಾಗಿ ಪ್ರಸಾರವಾಗುವ ಎಲ್ಲ ಮಾಹಿತಿಯನ್ನು ವೀಕ್ಷಿಸಿ ಮೇಲ್ವಿಚಾರಕರ ಗಮನಕ್ಕೆ ತರುತ್ತದೆ. ಗಮನಾರ್ಹ ಸಂಗತಿ ಎಂದರೆ, ಪ್ರೈಮ್ ಟೈಮ್ ನಲ್ಲಿ ಎಂಥ ಸುದ್ದಿಗಳು ಪ್ರಸಾರವಾಗಬೇಕು ಎಂಬ ಸೂಚನೆಗಳು ಕೂಡ ಆ ತಂಡದಿಂದ ಮಾಧ್ಯಮಗಳಿಗೆ ಹೋಗುತ್ತವೆ. ಮಾಧ್ಯಮಗಳು ಪ್ರೈಮ್‌ ಟೈಮ್‌ ನಲ್ಲಿ ವಾರ್‌ ರೂಮ್‌ ಸೂಚನೆಗಳನ್ನು ಪಾಲಿಸದಿದ್ದಲ್ಲಿ ಅಂಥ ಮಾಧ್ಯಮಗಳನ್ನು ಗುರುತಿಸಿ ಅವುಗಳ ಕುರಿತು ವರದಿ ಸಿದ್ಧಪಡಿಸಲಾಗುತ್ತದೆ.

ಅಲ್ಲದೆ, ಮಾಧ್ಯಮಗಳಿಗೆ ಶ್ರೇಣಿ ನೀಡಲಾಗುತ್ತಿದ್ದು, ಮೋದಿ ಹಾಗೂ ಅಮಿತ್ ಶಾ ಅವರನ್ನು ಹೆಚ್ಚಾಗಿ ತೋರಿಸುವ ಮಾಧ್ಯಮಗಳಿಗೆ ಪ್ರಥಮ ಶ್ರೇಣಿ ನೀಡಲಾಗುತ್ತದೆ. ಹಾಗೆಯೇ, ಅವರನ್ನು ಕಡಿಮೆ ತೋರಿಸುವ ಮಾಧ್ಯಮಗಳಿಗೆ ಮಧ್ಯಮ ಶ್ರೇಣಿ ನೀಡಲಾಗುತ್ತದೆ. ತೀರಾ ಕಡಿಮೆ ತೋರಿಸುವ ಮಾಧ್ಯಮಗಳಿದ್ದರೆ ವಾರ್‌ ರೂಮ್ ತಂಡದ ಸದಸ್ಯರೊಬ್ಬರು ಅಂಥ ಸುದ್ದಿ ಮಾಧ್ಯಮಗಳಿಗೆ ಕರೆ ಮಾಡಿ, ಪ್ರಧಾನಿ ಮೋದಿ ಅವರನ್ನು ಪರದೆ ಮೇಲೆ ಹೆಚ್ಚು ತೋರಿಸಬೇಕು ಎಂದು ಸೂಚಿಸುತ್ತಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ದೃಶ್ಯಮಾಧ್ಯಮವೊಂದರ ನೋಯ್ಡಾ ಮೂಲದ ಸಂಪಾದಕರಿಗೆ ವಾರ್ ರೂಮ್ ಸದಸ್ಯರೊಬ್ಬರು ಕರೆ ಮಾಡಿ ಮಾತನಾಡಿದ್ದಾರೆ. ವಾರ್‌ ರೂಮ್‌ ತಂಡದ ಸದಸ್ಯರ ಹಾಗೂ ದೃಶ್ಯ ಮಾಧ್ಯಮವೊಂದರ ಸಂಪಾದಕರ ಸಂಭಾಷಣೆ ಕುತೂಹಲಕಾರಿಯಾಗಿದ್ದು, ಅದನ್ನು ‘ದಿ ವೈರ್’ ಉಲ್ಲೇಖಿಸಿದೆ.

ವಾರ್ ರೂಮ್ ತಂಡದ ಸದಸ್ಯ: “ನಿಮ್ಮ ಚಾನಲ್ ಹೆಚ್ಚಾಗಿ ಅವರನ್ನು ಪರದೆ ಮೇಲೆ ತೋರಿಸುವುದಿಲ್ಲ...”

ಸಂಪಾದಕ: "ಯಾರನ್ನು ಹೆಚ್ಚಾಗಿ ತೋರಿಸುವುದಿಲ್ಲ?”

ವಾರ್ ರೂಮ್ ತಂಡದ ಸದಸ್ಯ: "ಹಲೋ! ನಮ್ಮ ಪ್ರಧಾನ ಮಂತ್ರಿಯವರನ್ನು!"

ಸಂಪಾದಕ: "ನೀವು ಏನು ಹೇಳುತ್ತಿದ್ದೀರಾ? ನಾವು ಅವರನ್ನು ಪರದೆಯ ಮೇಲೆ ಹೆಚ್ಚು ತೋರಿಸುತ್ತೇವೆ..."

ವಾರ್ ರೂಮ್ ತಂಡದ ಸದಸ್ಯ: "ಇದು ನಿಮಗಷ್ಟೇ ಹೆಚ್ಚಾಗಿ ಕಾಣುತ್ತದೆ. ನಮ್ಮನ್ನು ಕೇಳಿ, ನಾವು ಚಾನಲ್ಗಳ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಿಮ್ಮ ವರದಿಗಳನ್ನು ನಾವು ಗಮನಿಸಿದ್ದೇವೆ. ಈ ವಿಚಾರದಲ್ಲಿ ನಿಮ್ಮ ಚಾನಲ್ ಮಧ್ಯದಲ್ಲಿ ಎಲ್ಲಿಯಾದರೂ ಬರುತ್ತದೆ ಅಷ್ಟೇ."

ಸಂಪಾದಕ: "ಈಗ ನೀವು ಹೇಳಿದ್ದೀರಲ್ಲಾ, ಇನ್ನು ನಾವು ಅವರನ್ನು ಮತ್ತಷ್ಟು ಹೆಚ್ಚು ತೋರಿಸುತ್ತೇವೆ."

ವಾರ್ ರೂಮ್ ತಂಡದ ಸದಸ್ಯ: "ನಿಮಗೆ ಹೇಗೆ ಅನಿಸುತ್ತದೆಯೋ ಹಾಗೇ ಮಾಡಿ,"

ಸಂಪಾದಕ: "ಇದು ಸಲಹೆಯೋ ಅಥವಾ ಎಚ್ಚರಿಕೆಯೋ?”

ಪ್ರಧಾನಿ ಮೋದಿ ಅವರನ್ನು ಕಡಿಮೆ ತೋರಿಸುವ ಮಾಧ್ಯಮಗಳನ್ನು ಆಯ್ದು ಅಂಥ ಮಾಧ್ಯಮಗಳ ಸಂಪಾದಕರಿಗೆ ಕರೆ ಮಾಡಿ ಚರ್ಚಿಸುವ ಮಟ್ಟಿಗೆ ಈ ವ್ಯವಸ್ಥೆ ಬೆಳೆದಿರುವುದನ್ನು ನಿಜಕ್ಕೂ ಊಹಿಸಲು ಅಸಾಧ್ಯ.

ಇದನ್ನೂ ಓದಿ : ‘ಎಬಿಪಿ ನ್ಯೂಸ್‌’ ಮಾಜಿ ಸುದ್ದಿವಾಚಕ ಬಾಜ್‌ಪೈ ಬಿಚ್ಚಿಟ್ಟ ರಹಸ್ಯಗಳು | ಭಾಗ 2

ಕೇಂದ್ರ ಸರ್ಕಾರದ ವಿರುದ್ಧದ ಲೈವ್ ಕಾರ್ಯಕ್ರಮಗಳನ್ನು ಹೇಗೆ ಕತ್ತರಿಸುವುದು, ಮಾಧ್ಯಮಗಳು ಯಾವ ಚರ್ಚೆಯನ್ನು ಎತ್ತಿಕೊಳ್ಳಬೇಕು ಎಂಬಿತ್ಯಾದಿ ವಿಷಯಗಳನ್ನು ಬಿಜೆಪಿ ಕಚೇರಿ, ಮಾಹಿತಿ ಹಾಗೂ ಪ್ರಸಾರ ಇಲಾಖೆಯಿಂದಲೇ ನಿರ್ಧರಿಸಿ ವಾರ್ ರೂಮ್ ಗೆ ಸೂಚಿಸಲಾಗುತ್ತದೆ. ಅಲ್ಲದೆ, ಸೂಚನೆಗಳನ್ನು ತಿರಸ್ಕರಿಸುವ ಸಂಪಾದಕರಿಗೆ ಮತ್ತೆ ಕರೆ ಮಾಡಿ ಸೌಹಾರ್ದಯುತವಾಗಿ ಎಚ್ಚರಿಸುತ್ತಲೇ, “ಸಮಸ್ಯೆಯ ಗಾಂಭೀರ್ಯವನ್ನು ಅರ್ಥ ಮಾಡಿಕೊಳ್ಳಿ. ನೀವು ಸಂಪಾದಕರು, ನಿರ್ಧಾರದ ಆಯ್ಕೆ ನಿಮಗೆ ಬಿಟ್ಟಿದ್ದು. ಆದರೆ, ದೇಶಕ್ಕೆ ಏನು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ,” ಎಂದು ತಿಳಿಹೇಳಲಾಗುತ್ತದೆ!

ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಮಾಧ್ಯಮಗಳ ಸ್ಥಿತಿ ಬಹುತೇಕ ಬದಲಾಗಿದೆ. ಮೋದಿ ಭಜನೆ ಮಾಡುವ ಉದ್ದೇಶವೇ ಪ್ರಧಾನವಾಗಿರಬೇಕು ಎಂಬ ಸೂಚನೆ ಎಲ್ಲ ಕಡೆ ರವಾನೆಯಾದಂತಿದೆ. ಕೆಲವು ವೃತ್ತಿಪರ ಸಂಪಾದಕರು ಕೂಡ ಮಾಲೀಕರ ಒತ್ತಾಯದಿಂದ ಟ್ರೈನಿ ಸಂಪಾದಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮೀರಿ, ಮಾತು ಕೇಳದ ಪತ್ರಕರ್ತರನ್ನು ಮಾಧ್ಯಮ ಸಂಸ್ಥೆಯಿಂದಲೇ ತಗೆದುಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ತಾಜಾ ಉದಾಹರಣೆ, ಎಬಿಪಿ ನ್ಯೂಸ್‌ ಚಾನಲ್‌ನಲ್ಲಿ ‘ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮ ನಿರೂಪಕ ಬಾಜಪೈ ಸೇರಿದಂತೆ ಇಬ್ಬರು ಹಿರಿಯ ಪತ್ರಕರ್ತರು ರಾಜಿನಾಮೆ ನೀಡಿದ್ದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More