ಪ್ರಧಾನಿ ಮೋದಿ ಆಡಿದ, ಕಡತದಿಂದ ತೆಗೆದುಹಾಕಲಾದ ಅಸಂಸದೀಯ ಪದ ಯಾವುದು?

ಹಲವು ಕಾರಣದಿಮದ ಬಹುಕಾಲ ನೆನಪಿನಲ್ಲಿ ಉಳಿಯಲಿರುವ ಈ ಬಾರಿಯ ಸಂಸತ್ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ತೆರೆಬಿದ್ದಿದೆ. ನಾಟಕೀಯ ಘಟನಾವಳಿಗಳ ವಾಕ್ಸಮರದ ನಡುವೆಯೂ ಅರ್ಥಪೂರ್ಣ ಚರ್ಚೆ ನಡೆದು, ಬಹುಕಾಲದ ನಂತರ ಸದನ ಉತ್ತಮವಾಗಿ ಕಾರ್ಯನಿರ್ವಹಿಸಿದೆ

ಹಲವು ನಾಟಕೀಯ ಬೆಳವಣಿಗಳು, ರಾಜಕೀಯ ವಾಕ್ಸಮರಕ್ಕೆ ಕಾರಣವಾದ ೧೮ ದಿನಗಳ ಸಂಸತ್‌ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ತೆರೆಬಿದ್ದಿದೆ. ಗೌಜು, ಗದ್ದಲ, ಸಭಾತ್ಯಾಗಗಳಿಂದಲೇ ಸುದ್ದಿಯಾಗುತ್ತಿದ್ದ ಹಿಂದಿನ ಅಧಿವೇಶನಗಳಿಗೆ ಹೋಲಿಕೆ ಮಾಡಿದರೆ ಈ ಅಧಿವೇಶನವು ಉತ್ತಮ ಚರ್ಚೆಗೆ ವೇದಿಕೆಯಾಗಿತ್ತು. ಜುಲೈ ೧೮-ಆಗಸ್ಟ್‌ ೧೦ರವರೆಗೆ ನಡೆದ ಅಧಿವೇಶನದಲ್ಲಿ ರಾಜಕೀಯ ದೃಷ್ಟಿಯಿಂದ ಗಮನಿಸಿದರೆ ಪ್ರಮುಖವಾಗಿ ಮೂರು ಬೆಳವಣಿಗೆಗಳು ಗಮನ ಸೆಳೆದವು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮೊದಲ ಬಾರಿಗೆ ವಿರೋಧ ಪಕ್ಷಗಳು ಒಟ್ಟಾಗಿ ಅವಿಶ್ವಾಸ ನಿಲುವಳಿ ಮಂಡಿಸಿದ್ದು, ರಾಜ್ಯಸಭಾ ಉಪಸಭಾಪತಿ ಚುನಾವಣೆ ಹಾಗೂ ಪ್ರಧಾನಿ ಮೋದಿ ಬಳಸಿದ ಅಸಂಸದೀಯ ಭಾಷೆ. ಮೊದಲೆರಡು ಬೆಳವಣಿಗೆಗಳಲ್ಲಿ ವಿಪಕ್ಷಗಳಿಗೆ ಸೋಲಾಗಿದೆ. ಮೂರನೇ ವಿಚಾರದಲ್ಲಿ ಭಾರತದ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೊದಲ ಬಾರಿಗೆ ಪ್ರಧಾನಿಯೊಬ್ಬರ ಹೇಳಿಕೆಯನ್ನು ಕಡತದಿಂದ ಅಸಂಸದೀಯ ಭಾಷಾ ಪ್ರಯೋಗದ ಕಾರಣದಿಂದ ತೆಗೆದುಹಾಕಲಾಗಿದ್ದು, ಆಡಳಿತರೂಢ ಬಿಜೆಪಿ ತೀವ್ರ ಮುಜುಗರಕ್ಕೀಡಾಗಿದೆ.

ಕೊನೆಯ ವಿಷಯವನ್ನು ಮೊದಲು ಗಮನಿಸುವುದಾದರೆ, ರಾಜ್ಯಸಭಾ ಉಪಸಭಾಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದ ಜೆಡಿಯುನ ಹರಿವಂಶ್‌ ನಾರಾಯಣ‌ ಸಿಂಗ್‌ ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಬಿ ಕೆ ಹರಿಪ್ರಸಾದ್‌ ಕಣಕ್ಕಿಳಿದಿದ್ದರು. ೧೨೫ ಮತ ಪಡೆದ ಹರಿವಂಶ್‌ ಅವರು, ೧೦೫ ಮತ ಪಡೆದ ಹರಿಪ್ರಸಾದ್‌ ಅವರನ್ನು ಮಣಿಸಿ ಉಪಸಭಾಪತಿ ಹುದ್ದೆ ಅಲಂಕರಿಸಿದ್ದರು. ಹರಿವಂಶ್‌ ಅಭಿನಂದನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಉಭಯ ಅಭ್ಯರ್ಥಿಗಳ ಹೆಸರಿನ ಮೊದಲ ಎರಡು ಅಕ್ಷರಗಳನ್ನು ಉಲ್ಲೇಖಿಸಿ “ಸ್ಪರ್ಧೆಯು ಇಬ್ಬರು ಹರಿಗಳ ನಡುವೆ ನಡೆದಿತ್ತು. ಒಬ್ಬರು ಬಿಕೆ (ಬಿಕರಿಯಾದವರು‌). ಆದರೆ, ಇನ್ನೊಬ್ಬರು ಅಲ್ಲ,” ಎಂದಿದ್ದರು. ಇದಕ್ಕೆ ವಿರೋಧಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕುವಂತೆ ಸಭಾಪತಿ ವೆಂಕಯ್ಯ ನಾಯ್ಡು ಆದೇಶಿಸಿದರು. ಮೋದಿ ಅವರ ಹೇಳಿಕೆಗೆ ವಿರೋಧಪಕ್ಷಗಳು ಅಸಮಾಧಾನ ಹೊರಹಾಕಿದ್ದು, “ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಹುದ್ದೆಯ ಘನತೆಯನ್ನು ಹಾಳುಗೆಡವಿದ್ದಾರೆ,” ಎಂದು ವಾಗ್ದಾಳಿ ನಡೆಸಿದವು. ಹಿಂದೆ, ಕಾಂಗ್ರೆಸ್‌ ರಾಜ್ಯಸಭಾ ಸದಸ್ಯೆ ರೇಣುಕಾ ಚೌಧರಿ ಅವರು ಮೋದಿ ಅವರ ಮಾತಿಗೆ ಸದನದಲ್ಲಿ ಗಹಗಹಿಸಿ ನಕ್ಕಿದ್ದಕ್ಕೆ ಅವರನ್ನು ಶೂರ್ಪನಖಿಗೆ ಹೋಲಿಸಿದ್ದ ಮೋದಿಯವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಇನ್ನು, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಹಣಿಯಲು ಅದರ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸುವಾಗ ತೋರಿದ ಒಗ್ಗಟ್ಟನ್ನು ರಾಜ್ಯಸಭಾ ಉಪಸಭಾಪತಿ ಆಯ್ಕೆಯಲ್ಲಿ ತೋರಲಿಲ್ಲ. ಇದರಿಂದಾಗಿ ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಿ ಕೆ ಹರಿಪ್ರಸಾದ್‌ ಅವರು ಸೋಲನುಭವಿಸುವಂತಾಯಿತು. ಇದು ಮುಂದಿನ ವರ್ಷ ನಡೆಯಲಿರುವ ನಿರ್ಣಾಯಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವುದಾಗಿ ಹೇಳುತ್ತಿರುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಇನ್ನಿತರ ಪ್ರಾದೇಶಿಕ ನಾಯಕರು ಗಂಭೀರವಾಗಿ ಚುನಾವಣೆ ತಯಾರಿ ನಡೆಸಬೇಕು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಅಧಿವೇಶನ ಆರಂಭವಾದ ಮೂರೇ ದಿನಕ್ಕೆ, “ಆಂಧ್ರಪ್ರದೇಶದ ಬಗ್‌ಗೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ,” ಎಂಬ ವಿಚಾರವನ್ನು ಮುಂದು ಮಾಡಿ ಚಂದ್ರಬಾಬು ನಾಯ್ದು ನೇತೃತ್ವದ ತೆಲುಗು ದೇಶಂ ಪಕ್ಷವು (ಟಿಡಿಪಿ) ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿತ್ತು. ಮುಂದಿನ ವರ್ಷದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿ ಎಂದೇ ಬಿಂಬಿತವಾಗಿದ್ದ ಈ ವಿದ್ಯಮಾನದ ಮೇಲೆ ಇಡೀ ರಾಷ್ಟ್ರ ದೃಷ್ಟಿ ನೆಟ್ಟಿತ್ತು. ಇದಕ್ಕೆ ಹಲವು ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದವು. ಆದರೆ, ನಿರೀಕ್ಷೆಯಂತೆ ನಿಲುವಳಿ ವಿರುದ್ಧವಾಗಿ ೩೨೫ ಹಾಗೂ ನಿಲುವಳಿ ಪರವಾಗಿ ೧೨೬ ಮತ ಚಲಾವಣೆಯಾಗಿ ಪ್ರತಿಪಕ್ಷಗಳಿಗೆ ಸೋಲಾಗಿತ್ತು. ಆದರೆ, ಅವಿಶ್ವಾಸ ನಿಲುವಳಿಯ ಮೇಲಿನ ಚರ್ಚೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ, ಸದನದಲ್ಲೇ ಪ್ರಧಾನಿ ಮೋದಿ ಅವರನ್ನು ಅಪ್ಪಿಕೊಳ್ಳುವ ಮೂಲಕ ದೇಶಾದ್ಯಂತ ಸುದ್ದಿಯ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದರು. ರಾಹುಲ್‌ ವಾಕ್ಪಟುತ್ವ ಹಾಗೂ ಆನಂತರ ಮೋದಿಯನ್ನು ಅಪ್ಪಿದ್ದು, ಕಣ್ಣು ಮಿಟುಕಿಸಿದ್ದರ ಬಗ್ಗೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆದವು. ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಪೊಳ್ಳು ಭರವಸೆ, ಆಸ್ವಾಸನೆ, ಉದ್ಯಮಿಗಳಿಂದ ಬ್ಯಾಂಕ್‌ ವಂಚನೆ, ಜಿಎಸ್‌ಟಿ, ನೋಟು ಅಮಾನ್ಯೀರಕಣ ನಿರ್ಧಾರ, ರಾಫೇಲ್‌ ವಿಮಾನ ಖರೀದಿ ಒಪ್ಪಂದ, ದೊಂಬಿಹತ್ಯೆ, ಮಹಿಳೆಯರು ಮತ್ತು ಬಾಲಕಿಯರ ಮೇಲಿನ ಅತ್ಯಾಚಾರ ಸೇರಿದಂತೆ ಹಲವಾರು ವಿಚಾರಗಳನ್ನು ಪ್ರಬಲವಾಗಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ರಾಫೇಲ್‌ ಯುದ್ದ ವಿಮಾನ ಖರೀದಿಯಲ್ಲಿ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶಕ್ಕೆ ಸುಳ್ಳು ಹೇಳಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದರು. ಇದನ್ನು ಸರ್ಕಾರ ಅಲ್ಲಗಳೆದಿತ್ತಲ್ಲದೆ, ಫ್ರಾನ್ಸ್‌ ಸರ್ಕಾರವೇ ಸ್ಪಷ್ಟೀಕರಣ ನೀಡುವ ಸ್ಥಿತಿ ನಿರ್ಮಾಣವಾಯಿತು. ಆದರೆ, ವಿಪಕ್ಷಗಳು ಇದರಿಂದ ಸಂತುಷ್ಟರಾಗಿಲ್ಲ. ಬದಲಿಗೆ, ರಾಫೇಲ್‌ ಹಗರಣವು ಬೊಫೋರ್ಸ್‌ಗಿಂತ ದೊಡ್ಡ ಗೋಲ್‌ಮಾಲ್‌ ಎಂದು ದಾಳಿ ಮೊನಚುಗೊಳಿಸಿವೆ.

ಪ್ರಧಾನಿ ಮೋದಿ ಅವರು ಅವಿಶ್ವಾಸ ನಿಲುವಳಿಯ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತ, ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳ ಮೇಲೆ ಎಂದಿನಂತೆ ಮಾತಿನ ಪ್ರಹಾರ ನಡೆಸಿದ್ದರು. ಈ ಮೂಲಕ ಗಮನವನ್ನು ಸ್ಪಷ್ಟವಾಗಿ ತಮ್ಮತ್ತ ತಿರುಗುವಂತೆ ಮಾಡಿದ್ದರು. ಸಾಕಷ್ಟು ಅಂಕಿ-ಅಂಶಗಳನ್ನು ಪ್ರಸ್ತಾಪಿಸಿ ಸರ್ಕಾರ ಬಡವರು, ದೀನ-ದಲಿತರು ಹಾಗೂ ಅಭಿವೃದ್ಧಿಯ ಪರವಾಗಿದೆ ಎಂದು ಸಮರ್ಥಿಸಿಕೊಂಡಿದ್ದರು. ರಾಜಕೀಯ ಚತುರತೆ ಮೆರೆದು, ವಿಪಕ್ಷಗಳನ್ನು ಅವುಗಳೇ ಹೆಣೆದ ಬಲೆಯಲ್ಲಿ ಸಿಲುಕುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು.

ಇದನ್ನೂ ಓದಿ : ಸಾಂವಿಧಾನಿಕ ಮಾನ್ಯತೆ ಪಡೆದ ಹಿಂದುಳಿದ ವರ್ಗಗಳ ಆಯೋಗ ಮುಂಬರುವ ಸವಾಲುಗಳನ್ನು ಎದುರಿಸಬಲ್ಲದೇ?  

ಇದೆಲ್ಲದರ ನಡುವೆ, ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಚಾರ, ಬಿಹಾರದ ಮುಜಾಫ್ಫರ್‌ಪುರದಲ್ಲಿನ ಬಾಲಕಿಯರ ಮೇಲಿನ ಅತ್ಯಾಚಾರ ವಿಚಾರಗಳು ರಾಜಕೀಯ ಕೆಸರೆರಚಾಟಕ್ಕೆ ನಾಂದಿ ಹಾಡಿದ್ದವು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ನಿಧನದಿಂದಾಗಿ ಕಲಾಪ ಮುಂದೂಡಲಾಗಿತ್ತು. ಇದಲ್ಲದೆ, ಒಮ್ಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯರ (ತ್ರಿವಳಿ ತಲಾಖ್‌) ಮಸೂದೆಯನ್ನು ಚರ್ಚೆಗೆ ಎತ್ತುಕೊಳ್ಳದಿರಲು ರಾಜ್ಯಸಭೆ ನಿರ್ಧರಿಸಿದ್ದು, ಚಳಿಗಾಲದ ಅಧಿವೇಶದಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

“ಲೋಕಸಭೆಯಲ್ಲಿ ೧೮ ದಿನಗಳ ಪೈಕಿ ೧೭ ದಿನ ಕಲಾಪ ನಡೆದಿದ್ದು, ಒಟ್ಟು ೧೧೨ ಗಂಟೆ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆದಿದೆ. ಈ ನಡುವೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ಎಸ್‌ಸಿ/ಎಸ್‌ಟಿ) ದೌರ್ಜನ್ಯ ತಡೆ, ದೇಶಭ್ರಷ್ಟ ಆರ್ಥಿಕ ಅಪರಾಧ ಮಸೂದೆ, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸುವುದು ಸೇರಿದಂತೆ ೨೧ ಮಸೂದೆಗಳಿಗೆ ಕೆಳಮನೆ ಅನುಮೋದನೆ ನೀಡಿದೆ. ಗದ್ದಲದಿಂದಾಗಿ ೮.೨೬ ತಾಸು ವ್ಯರ್ಥವಾಗಿದೆ. ಪ್ರಮುಖ ವಿಚಾರಗಳ ಮೇಲೆ ೨೧ ತಾಸುಗಳಿಗೂ ಹೆಚ್ಚು ಸಮಯ ವ್ಯಯಿಸಲಾಗಿದೆ. ಒಟ್ಟಾರೆ ಅಧಿವೇಶನ ಫಲಪ್ರದವಾಗಿದೆ,” ಎಂದು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಹರ್ಷ ವ್ಯಕ್ತಪಡಿಸಿದ್ದಾರೆ.

೨೦೦೦ದ ನಂತರ ಇದೇ ಮೊದಲ ಬಾರಿಗೆ ಸಂಸತ್‌ ಕಲಾಪ ಅತ್ಯುತ್ತಮವಾಗಿ ನಡೆದಿದೆ. ಅಧಿವೇಶನದಲ್ಲಿ ಒಟ್ಟು ೨೦ ಹೊಸ ಮಸೂದೆಗಳನ್ನು ಮಂಡಿಸಲಾಗಿದ್ದು, ೧೨ಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಪಿಆರ್‌ಎಸ್‌ ಸಂಸದೀಯ ಸಂಶೋಧನಾ ವಿಭಾಗ ಹೇಳಿದೆ. ನಿಗದಿತ ಅವಧಿಯ ಪೈಕಿ ಲೋಕಸಭೆಯು ಶೇ.೧೧೦ರಷ್ಟು ಹಾಗೂ ರಾಜ್ಯಸಭೆಯು ಶೇ.೬೬ರಷ್ಟು ಕೆಲಸ ನಿರ್ವಹಿಸಿವೆ. ಲೋಕಸಭೆ ಹಾಗೂ ರಾಜ್ಯಸಭೆಯು ಕ್ರಮವಾಗಿ ಶೇ.೫೦ ಮತ್ತು ಶೇ.೪೮ರಷ್ಟು ಸಭೆಯನ್ನು ಶಾಸನ ರಚನೆಗೆ ಮೀಸಲಿಟ್ಟಿವೆ. ೧೬ನೇ ಲೋಕಸಭೆಯಲ್ಲಿ ಇದು ಅತ್ಯುನ್ನತ ಸಾಧನೆಯಾಗಿದ್ದು, ೨೦೦೪ಕ್ಕೆ ಹೋಲಿಕೆ ಮಾಡಿದರೆ ಎರಡನೇ ಅತ್ಯುನ್ನತ ಸಾಧನೆ ಎಂದು ಪಿಆರ್‌ಎಸ್‌ ಹೇಳಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More