ಪಶ್ಚಿಮ ಬಂಗಾಳದಲ್ಲಿ ಮಮತಾ ವಿರುದ್ಧ ಸಮರ ಸಾರಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ

ಪಶ್ಚಿಮ ಬಂಗಾಳದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ. ಆ ಮೂಲಕ, ಬಂಗಾಳಿ ಭಾಷೆ ಮಾತನಾಡುವ ಹಿಂದೂಗಳ ಜೊತೆ ಬಿಜೆಪಿ ಇದೆ ಎಂಬ ಸೂಚನೆ ನೀಡಿದ್ದಾರೆ

ಬಾಂಗ್ಲಾದೇಶದ ಅಕ್ರಮ ವಲಸಿಗರ ಪರ ನಿಂತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವೋಟ್‌ಬ್ಯಾಂಕ್‌ ರಾಜಕಾರಣದಲ್ಲಿ ತೊಡಗಿದ್ದಾರೆಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಗಂಭೀರ ಆರೋಪ ಮಾಡಿದ್ದಾರೆ. ಶನಿವಾರ ಕೊಲ್ಕತ್ತಾದಲ್ಲಿ ಭಾರತೀಯ ಯುವ ಮೋರ್ಚಾ ಆಯೋಜಿಸಿದ್ದ ಯುವ ಸ್ವಾಭಿಮಾನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ತಮ್ಮ ಭಾಷಣದುದ್ದಕ್ಕೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ಆ ಮೂಲಕ, ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ ಕರಡು ಬಿಡುಗಡೆಯಾದ ನಂತರ ಮಮತಾ ಹಾಗೂ ಬಿಜೆಪಿ ನಡುವೆ ಏರ್ಪಟ್ಟಿದ್ದ ಸಂಘರ್ಷವನ್ನು ಅಮಿತ್‌ ಶಾ ಮತ್ತಷ್ಟು ತೀವ್ರವಾಗಿಸಿದ್ದಾರೆ.

ಪಶ್ಚಿಮ ಬಂಗಾಳದ ಪ್ರತಿ ಜಿಲ್ಲೆಯಲ್ಲೂ ಬಿಜೆಪಿಯು ಸಮಾರಂಭ ಹಮ್ಮಿಕೊಳ್ಳುವ ಮೂಲಕ ಮಮತಾ ಸರ್ಕಾರವನ್ನು ಬೇರು ಸಹಿತ ಕಿತ್ತೊಗೆಯುವ ಪ್ರಯತ್ನ ಮಾಡಲಿದೆ ಎಂದು ಹೇಳಿರುವ ಅಮಿತ್ ಶಾ, “ತೃಣಮೂಲ ಕಾಂಗ್ರೆಸ್‌ ಸರ್ಕಾರ ಬಾಂಗ್ಲಾ ನುಸುಳುಕೋರರ ಬೆಂಬಲಕ್ಕೆ ನಿಂತಿದೆ. ಮಮತಾ ಅವರಿಗೆ ದೇಶದ ಭದ್ರತೆಗಿಂತ ವೋಟ್‌ಬ್ಯಾಂಕ್‌ ಮುಖ್ಯವಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಹ ರಾಷ್ಟ್ರೀಯ ಪೌರತ್ವ ನೋಂದಣಿ ಕರಡಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ಹೊಂದಿಲ್ಲ. ಕಾಂಗ್ರೆಸ್‌ ಹಾಗೂ ತೃಣಮೂಲ ಕಾಂಗ್ರೆಸ್‌ ಪಕ್ಷಗಳು ವೋಟ್‌ಬ್ಯಾಂಕ್‌ ರಾಜಕಾರಣ ಮಾಡುತ್ತಿವೆ,” ಎಂದು ಹೇಳಿದ್ದಾರೆ.

“ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್‌‌, ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್‌ ಪಕ್ಷಗಳಿಂದ ಯಾವುದೇ ಅಭಿವೃದ್ಧಿ ನಡೆದಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರಷ್ಟೇ ಪಶ್ಚಿಮ ಬಂಗಾಳ ಪರಿವರ್ತನೆ ಹೊಂದಲು ಸಾಧ್ಯ. ಬಿಜೆಪಿಯು ಬಂಗಾಳಿಗಳ ವಿರುದ್ಧವಿದೆ ಎಂದು ಮಮತಾ ಹೇಳುತ್ತಾರೆ. ಆದರೆ, ಬಿಜೆಪಿ ಸಂಸ್ಥಾಪಕ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಪಶ್ಚಿಮ ಬಂಗಾಳದವರು. ಹೀಗಿರುವಾಗ, ಬಿಜೆಪಿಯು ಬಂಗಾಳಿಗರ ವಿರೋಧಿಯಾಗಲು ಸಾಧ್ಯವೇ ಇಲ್ಲ,” ಎಂದು ಹೇಳುವ ಮೂಲಕ, ಪಶ್ಚಿಮ ಬಂಗಾಳದೊಂದಿಗಿನ ಬಿಜೆಪಿಯ ಹಳೆಯ ಸಂಬಂಧವನ್ನು ನೆನಪಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ, “ಈ ಮೊದಲು ಪಶ್ಚಿಮ ಬಂಗಾಳದಲ್ಲಿ ರವೀಂದ್ರನಾಥ ಟಾಗೋರರ ಗೀತೆಗಳು ಕೇಳಿಬರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸ್ಫೋಟದ ಶಬ್ದ ಕೇಳಿಬರುತ್ತಿದೆ. ಮಮತಾ ಅವರ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಗಳಾಗುತ್ತಿವೆ. ಆದರೆ, ಹಿಂಸೆಯ ಮೂಲಕ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ,” ಎಂದು ತಿಳಿಸಿದ್ದಾರೆ.

“ಕಾಂಗ್ರೆಸ್‌, ಕಮ್ಯುನಿಸ್ಟ್‌‌ ಹಾಗೂ ತೃಣಮೂಲ ಕಾಂಗ್ರೆಸ್‌ಗೆ‌ ಅಧಿಕಾರ ಕೊಟ್ಟಿರುವ ನೀವು (ಬಂಗಾಳಿಗರು) ಬಿಜೆಪಿಗೊಮ್ಮೆ ಅಧಿಕಾರ ಕೊಡಿ. ನಾವು ನಿಮಗೆ ಪಾರದರ್ಶಕ ಆಡಳಿತ ಕೊಡುತ್ತೇವೆ,” ಎಂದೂ ಶಾ ಮನವಿ ಮಾಡಿದ್ದಾರೆ. ಇದೇ ವೇಳೆ ಕೊಲ್ಕತ್ತಾದಲ್ಲಿ ನಡೆದ ಬಿಜೆಪಿ ಅಧ್ಯಕ್ಷರ ಸಮಾರಂಭಕ್ಕೆ ವಿರೋಧ ವ್ಯಕ್ತಪಡಿಸಿ ತೃಣಮೂಲ ಕಾಂಗ್ರೆಸ್‌ ಯುವ ಕಾರ್ಯಕರ್ತರು ‘ಬಂಗಾಳಿ ವಿರೋಧಿ ಅಮಿತ್‌ ಶಾ’ ಎಂದು ಘೋಷಣೆ ಕೂಗಿ, ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ : ಎನ್‌ಆರ್‌ಸಿ ಕರಡು | ಬಿಜೆಪಿ ವಿರುದ್ಧ ನೇರ ಸಂಘರ್ಷಕ್ಕಿಳಿದ ಮಮತಾ ಬ್ಯಾನರ್ಜಿ

ರಾಷ್ಟ್ರೀಯ ಪೌರತ್ವ ನೋಂದಣಿ ಕರಡು ಬಿಡುಗಡೆಯಾದ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ದೊಡ್ಡ ಸಮರವನ್ನೇ ಸಾರಿದ್ದರು. ಈ ಸಂಬಂಧ ನವದೆಹಲಿಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ರಾಹುಲ್‌ ಗಾಂಧಿ, ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ, ಶಿವಸೇನೆ, ಟಿಡಿಪಿ ಹಾಗೂ ಸಮಾಜವಾದಿ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಬಿಜೆಪಿಯ ವಿರುದ್ಧ ತಾವು ಮಾಡುತ್ತಿರುವ ಪ್ರತಿಭಟನೆಗೆ ಬೆಂಬಲ ಕೋರಿದ್ದರು. “ಬಿಜೆಪಿಯು ಬಂಗಾಳಿಗಳ ವಿರೋಧಿಯಾಗಿದ್ದು, ಬಂಗಾಳಿ ಭಾಷಿಗರನ್ನು ಗುರಿಯಾಗಿಸಿ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಕೈಗೊಂಡಿದೆ,” ಎಂದು ಹರಿಹಾಯ್ದಿದ್ದರು. ಆ ಮೂಲಕ, ಬಿಜೆಪಿಯ ಹಿಂದುತ್ವ ರಾಜಕಾರಣದ ವಿರುದ್ಧ ಬಂಗಾಳಿ ಅಸ್ಮಿತೆಯ ದಾಳ ಉರುಳಿಸಿದ್ದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಅಮಿತ್‌ ಶಾ, ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮಮತಾ ಅವರನ್ನು ಗುರಿಯಾಗಿಸಿ ಕನಿಷ್ಠ ಮೂವತ್ತು ನಿಮಿಷಗಳ ಕಾಲ ವಾಗ್ದಾಳಿ ನಡೆಸಿದ್ದಾರೆ. ಬಂಗಾಳಿ ಭಾಷೆ ಮಾತನಾಡುವ ಹಿಂದೂಗಳ ಜೊತೆ ಬಿಜೆಪಿ ಇದೆ ಎಂಬ ಸೂಚನೆಯನ್ನು ತಮ್ಮ ಭಾಷಣದ ಮೂಲಕ ಕೊಟ್ಟಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More