ಕರುಣಾನಿಧಿ ಸಾವಿನ ನಂತರ ಚಾಲ್ತಿಗೆ ಬಂದಿದ್ದ ಚರ್ಚೆಗಳಿಗೆ ತೆರೆ ಎಳೆದ ಡಿಎಂಕೆ

ಮುಂದಿನ ದಿನಗಳಲ್ಲಿ ಎಂ ಕೆ ಸ್ಟಾಲಿನ್‌ ಅವರೇ ಪಕ್ಷವನ್ನು ಮುನ್ನೆಡೆಸಲಿದ್ದಾರೆ ಎಂಬ ಸಂದೇಶವನ್ನು ಡಿಎಂಕೆ ಮುಖಂಡರು ರವಾನಿಸಿದ್ದಾರೆ. ಆ ಮೂಲಕ, ಕರುಣಾನಿಧಿ ಅವರ ಸಾವಿನ ನಂತರ ತಮಿಳುನಾಡಿನ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದ ಹಲವು ಉಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ

ಮರಿನಾ ಬೀಚಿನ‌ ಸಮೀಪ ನನ್ನ ತಂದೆಯ ಅಂತ್ಯಸಂಸ್ಕಾರ ಆಗಿರದಿದ್ದರೆ, ನಾನು ಸಹ ನನ್ನ ತಂದೆಯೊಂದಿಗೆ ಮಣ್ಣಾಗಿರುತ್ತಿದ್ದೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್‌ ಹೇಳಿದ್ದಾರೆ. ಮಂಗಳವಾರ ನಡೆದ ಡಿಎಂಕೆ ಪಕ್ಷದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಮ್ಮ ತಂದೆ ಕರುಣಾನಿಧಿ ಅವರ ಒಡನಾಟದ ಬಗ್ಗೆ ನೆನಸಿಕೊಂಡು ಅವರು ಭಾವುಕರಾದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್‌, “ನೀವು (ಡಿಎಂಕೆ ಮುಖಂಡರು, ಕಾರ್ಯಕರ್ತರು) ನಿಮ್ಮ ನಾಯಕನನ್ನಷ್ಟೇ ಕಳೆದುಕೊಂಡಿದ್ದೀರಿ. ನಾನು ನನ್ನ ನಾಯಕನ ಜೊತೆ ಒಬ್ಬ ಒಳ್ಳೆಯ ತಂದೆಯನ್ನೂ ಕಳೆದುಕೊಂಡಿದ್ದೇನೆ,” ಎಂದಿದ್ದಾರೆ.

ಸ್ಟಾಲಿನ್‌ ಅವರನ್ನು ಥಲಪತಿ (ದಳಪತಿ) ಎಂದು ಸಂಭೋದಿಸುವ ಮೂಲಕ ಡಿಎಂಕೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತು ಆರಂಭಿಸಿದ ಪಕ್ಷದ ಹಿರಿಯ ನಾಯಕ ದೊರೈ ಮುರುಗನ್‌‌ ಅವರು, ಪಕ್ಷವನ್ನು ಮುನ್ನೆಡೆಸುವ ಎಲ್ಲ ಸಾಮರ್ಥ್ಯಗಳೂ ಸ್ಟಾಲಿನ್‌ ಅವರಲ್ಲಿವೆ ಎಂದು ಹೇಳಿದ್ದಾರೆ. ದೊರೈ ಮುರುಗನ್‌ ಹೇಳಿಕೆಗೆ ಸುದೀರ್ಘವಾಗಿ ಚಪ್ಪಾಳೆ ತಟ್ಟುವ ಮೂಲಕ ಡಿಎಂಕೆ ಕಾರ್ಯಕಾರಿ ಸಮಿತಿ ಸದಸ್ಯರು ಸಮ್ಮತಿ ಸೂಚಿಸಿದ್ದಾರೆ. ಮುಂದುವರಿದು ಮಾತನಾಡಿದ ಮುರುಗನ್‌, “ಸ್ಟಾಲಿನ್‌ ಅವರು ತಮ್ಮ ಸಾಮರ್ಥ್ಯ, ಕೌಶಲ್ಯ ಹಾಗೂ ಸತತ ಪರಿಶ್ರಮಗಳಿಂದ ಮುಂದೆ ಬಂದಿದ್ದಾರೆ. ಡಿಎಂಕೆ ಸ್ಥಾಪಕ ಅಣ್ಣಾ ದೊರೈ ಹಾಗೂ ಮಾಜಿ ಸಿಎಂ ಕರುಣಾನಿಧಿ ಅವರಲ್ಲಿದ್ದ ಎಲ್ಲ ಶಕ್ತಿಗಳೂ ಸ್ಟಾಲಿನ್‌ ಅವರಲ್ಲಿ ಕಾಣಿಸುತ್ತವೆ. ಕೋಟ್ಯಂತರ ಜನರ ಬೆಂಬಲ ಸ್ಟಾಲಿನ್ ಅವರಿಗೆ ಇದೆ,” ಎಂದು‌ ತಿಳಿಸಿದ್ದಾರೆ.

ಕರುಣಾನಿಧಿ ಅವರ ಸಾವಿನ ನಂತರ ಮಾಜಿ ಕೇಂದ್ರ ಸಚಿವ ಅಳಗಿರಿ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ತಮ್ಮೊಂದಿಗಿದ್ದಾರೆ ಎಂದು ಹೇಳುವ ಮೂಲಕ ಹಲವು ಉಹಾಪೋಹಗಳನ್ನು ಹುಟ್ಟುಹಾಕಿದ್ದರು. ಡಿಎಂಕೆಯಲ್ಲಿ ಆಂತರಿಕ ಕಲಹಗಳು ಭುಗಿಲೇಳುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರವಾಗಿ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಮಂಗಳವಾರ ನಡೆದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಳಗಿರಿ ಅವರ ಬಗ್ಗೆ ಪ್ರಸ್ತಾಪ ಆಗಲಿಲ್ಲ. ಮುಂದಿನ ದಿನಗಳಲ್ಲಿ ಸ್ಟಾಲಿನ್‌ ಅವರೇ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂಬ ಸಂದೇಶವನ್ನು ಡಿಎಂಕೆ ಮುಖಂಡರು ರವಾನಿಸಿದ್ದಾರೆ. ಆ ಮೂಲಕ, ರಾಜಕೀಯ ವಲಯದಲ್ಲಿ ಎದ್ದಿದ್ದ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.

ಇದೇ ವೇಳೆ, ಕರುಣಾನಿಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ ಸ್ಟಾಲಿನ್‌‌ ತಮ್ಮ ತಂದೆಯ ಜೊತೆಗಿನ ಒಡನಾಟ, ಮುಖ್ಯಮಂತ್ರಿಯಾಗಿ ಕರುಣಾನಿಧಿ ಅವರು ತಮಿಳುನಾಡಿಗೆ ನೀಡಿದ್ದ ಕೊಡುಗೆ, ಸಮಸಮಾಜದ ಕನಸುಗಳು ಹಾಗೂ ದ್ರಾವಿಡ ಅಸ್ಮಿತೆಗೆ ಅವರು ನಡೆಸಿದ ಹೋರಾಟದ ಬಗ್ಗೆ‌ ಸ್ಮರಿಸಿಕೊಂಡಿದ್ದಾರೆ. ಮುಂದುವರಿದ ಅವರು, “ತಮ್ಮ ತಂದೆಯ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಎಲ್ಲರೂ ಸೇರಿ ದುಡಿಯಬೇಕಿದೆ. ಡಿಎಂಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡ್ಯೊಯ್ಯಬೇಕಿದೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕರುಣಾನಿಧಿ ಸಾವಿನ ಬೆನ್ನಲ್ಲೇ ಸೋದರರ ನಡುವಿನ ಸಂಘರ್ಷ ಸ್ಫೋಟಿಸುವ ಸಾಧ್ಯತೆ

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಳಗಿರಿಯವರ ಮುಂದಿನ ನಡೆ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ. 2014ರಲ್ಲಿ ಡಿಎಂಕೆ ಪಕ್ಷದಿಂದ ಉಚ್ಚಾಟನೆಯಾದ ನಂತರ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಅಳಗಿರಿಯವರು ಮತ್ತೆ ಕಾರ್ಯಪ್ರವೃತ್ತರಾಗಿದ್ದಾರೆ. ಅಳಗಿರಿ ಅವರನ್ನು ಡಿಎಂಕೆಗೆ ಸೇರಿಸಿಕೊಳ್ಳುವ ಸಾಧ್ಯತೆಗಳನ್ನು ಪಕ್ಷದ ಮೂಲಗಳು ತಳ್ಳಿಹಾಕಿವೆ. ನಟ ರಜನೀಕಾಂತ್‌ ಅವರು ಈ ಹಿಂದೆ ರಾಜಕೀಯಕ್ಕೆ ಬರುವುದಾಗಿ ಘೋಷಿಸಿಕೊಂಡಾಗ ಅಳಗಿರಿಯವರು ರಜನೀಕಾಂತರನ್ನು ಭೇಟಿ ಮಾಡಿದ್ದ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ದಕ್ಷಿಣ ತಮಿಳುನಾಡಿನಲ್ಲಿ ಪ್ರಾಬಲ್ಯ ಹೊಂದಿರುವ ಅಳಗಿರಿಯವರು ರಜನೀಕಾಂತರ ಅವರ ನೂತನ ಪಕ್ಷಕ್ಕೆ ಸೇರುತ್ತಾರೆ ಎಂಬ ಮಾತುಗಳು ಸಹ ಮುನ್ನೆಲೆಗೆ ಬಂದಿವೆ. ಒಟ್ಟಿನಲ್ಲಿ ಕರುಣಾನಿಧಿ ಹಾಗೂ ಜಯಲಲಿತಾ ಸಾವಿನ ನಂತರ ತಮಿಳುನಾಡಿನ ಎರಡು ದೊಡ್ಡ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಅಸ್ಥಿರತೆ ಕಂಡುಬಂದಿದ್ದು, ಅದರ ಲಾಭ ಯಾರಿಗೆ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More