ಮೋದಿಯವರ ‘ಇಮೇಲ್‌ ಸಂದರ್ಶನ’ವು ಮಾಧ್ಯಮಗಳ ಬಗ್ಗೆ ಹೇಳುವುದೇನು?

ಮಾಧ್ಯಮಗಳು ತಮ್ಮೊಂದಿಗೆ ಸಂವಾದಿಸುವುದಕ್ಕಿಂತ ತಮ್ಮ ಪ್ರಭಾವಳಿಯ ಬಿಂಬದೊಂದಿಗೆ ಮಾತ್ರವೇ ವ್ಯವಹರಿಸುವಂತೆ ಪ್ರಧಾನಿ ಮೋದಿ ಯಾವತ್ತೂ ಎಚ್ಚರಿಕೆ ವಹಿಸಿದ್ದಾರೆ. ಮಾಧ್ಯಮಗಳು ಸಹ ಅತ್ತಲೇ ವಾಲಿವೆ. ಹಾಗಾಗಿಯೇ, ಸ್ವಲ್ಪವೂ ವಿಮರ್ಶೆ ಇಲ್ಲದ ‘ಇಮೇಲ್‌ ಸಂದರ್ಶನ’ ಕೂಡ ರಾರಾಜಿಸುತ್ತದೆ

ಪ್ರಧಾನಿ ನರೇಂದ್ರ ಮೋದಿಯವರು ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನ ಅದರ ವಸ್ತು-ವಿಷಯಕ್ಕಿಂತ ಹೆಚ್ಚಾಗಿ, ಮೋದಿಯವರು ಸಂದರ್ಶನಕ್ಕಾಗಿ ಆಯ್ದುಕೊಂಡ ‘ಮಾಧ್ಯಮ’ದ ಕಾರಣಕ್ಕೆ ಗಮನ ಸೆಳೆದಿದೆ. ಇಲ್ಲಿ ‘ಮಾಧ್ಯಮ’ ಎನ್ನುವುದು ಸುದ್ದಿಸಂಸ್ಥೆ ಅಥವಾ ಸುದ್ದಿ ಸಮೂಹಗಳನ್ನು ಉದ್ದೇಶಿಸಿ ಬಳಸಿರುವ ಮಾತಲ್ಲ. ಬದಲಿಗೆ, ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಬಳಸಿರುವ ‘ಸಾಧನ’ದ ಕುರಿತಾಗಿ ಹೇಳಿರುವಂಥದ್ದು. ಹಾಗಾಗಿಯೇ ಮೋದಿಯವರು ಸಂದರ್ಶನ ನೀಡಿದ್ದರು ಎನ್ನುವುದಕ್ಕಿಂತ ಅವರು ಸಂದರ್ಶನಕ್ಕಾಗಿ ‘ಇಮೇಲ್‌’ ಮಾಧ್ಯಮವನ್ನು ಆರಿಸಿಕೊಂಡಿದ್ದರು ಎನ್ನುವುದು ಹೆಚ್ಚು ಗಮನ ಸೆಳೆಯುತ್ತಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಹೇಳಿರುವ ವಿಷಯಗಳನ್ನೇ ಪ್ರಧಾನಿ ಮೋದಿಯವರು ಹೆಚ್ಚೂಕಡಿಮೆ ಮತ್ತೊಮ್ಮೆ ತಮ್ಮ ‘ಇಮೇಲ್‌ ಸಂದರ್ಶನ’ದ ಮೂಲಕ ಹಂಚಿಕೊಂಡಿದ್ದಾರೆ. ಸಂಸತ್ತಿನಲ್ಲಿ ಅವರು ಆಡಿರುವ ಮಾತುಗಳು ಈಗಾಗಲೇ ವ್ಯಾಪಕವಾಗಿ ವರದಿಯಾಗಿದ್ದು, ಸಂದರ್ಶನದ ಮೂಲಕ, ಇಷ್ಟು ಅಲ್ಪ ಅವಧಿಯಲ್ಲಿ ಮತ್ತೆ ಅವುಗಳನ್ನೇ ಪುನರುಚ್ಚರಿಸುವ ಅವಶ್ಯಕತೆ ಏನಿತ್ತು ಎನಿಸದೆ ಇರದು. ಆದರೆ, ಈ ವಸ್ತು-ವಿಷಯದಾಚೆಗೆ ಸಾಗಿ, ಮೋದಿಯವರ ಸಂದರ್ಶನ ನೀಡಲು ಆಯ್ಕೆ ಮಾಡಿಕೊಂಡಿರುವ ‘ಮಾಧ್ಯಮ’ ಯಾವುದು ಎನ್ನುವುದನ್ನು ಗಮನಿಸಿದರೆ, ಪ್ರಧಾನಿಯಾಗಿ ನಾಲ್ಕು ವರ್ಷದ ನಂತರ ಮುದ್ರಣ ಮಾಧ್ಯಮಗಳನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಮೋದಿಯವರು ನೀಡಿರುವ ‘ಇಮೇಲ್‌ ಸಂದರ್ಶನ’ ಬೇರೆಯದೇ ಆದ ಒಳನೋಟಗಳನ್ನು ನೀಡುತ್ತದೆ.

ಪರಿವರ್ತನಶೀಲ ಜಗತ್ತಿನಲ್ಲಿ ಮಾಧ್ಯಮಗಳ ಸ್ವರೂಪದ ಬಗ್ಗೆ ಗಹನವಾಗಿ ಚಿಂತಿಸಿದ್ದ ಮಾರ್ಷಲ್ ಮ್ಯಾಕ್ಲುಹಾನ್‌, ‘ದಿ ಮೀಡಿಯಂ ಈಸ್‌ ದ ಮೆಸೇಜ್‌’ ಎಂದಿದ್ದರು. ‘ಮಾಧ್ಯಮವೇ ಸಂದೇಶ’ ಎನ್ನುವ ಈ ಮಾತು ನಾವು ಯಾವ ಮಾಧ್ಯಮವನ್ನು ಸಂದೇಶವಾಹಕವಾಗಿ ಬಳಸುತ್ತೇವೆಯೋ ಅದು ಆ ಸಂದೇಶವನ್ನು ಹೇಗೆ ಗ್ರಹಿಸಬೇಕು, ವಿವರಿಸಿಕೊಳ್ಳಬೇಕು ಎನ್ನುವುದರ ಮೇಲೆ ಗುರುತರವಾದ ಪರಿಣಾಮ ಬೀರುತ್ತದೆ ಎನ್ನುವುದನ್ನು ಚರ್ಚಿಸುತ್ತದೆ. ಈ ಮಾತುಗಳನ್ನು ಗಮನಿಸುವುದಕ್ಕೂ ಮೊದಲು ಇತ್ತೀಚಿನ ದಿನಗಳ ವಿದ್ಯಮಾನಗಳತ್ತ ಒಮ್ಮೆ ದೃಷ್ಟಿ ಹರಿಸೋಣ. ಮಾಧ್ಯಮದ ಮೇಲೆ ಕಣ್ಗಾವಲನ್ನು ಹಾಕಲಾಗುತ್ತಿದೆ, ಇದಕ್ಕೆಂದೇ ವಾರ್ತಾ ಮತ್ತು ಪ್ರಸಾರ ಇಲಾಖೆಯಡಿ ಬೃಹತ್‌ ತಂಡವೇ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಸುದ್ದಿ ಈಚೆಗೆ ಚರ್ಚೆಯಾಗುತ್ತಿದೆ. ಪ್ರಧಾನಿ ಮೋದಿಯವರ ವರ್ಚಸ್ಸಿಗೆ ಕುಂದುಂಟಾಗುವ ಸುದ್ದಿಗಳನ್ನು ಪ್ರಸಾರ ಮಾಡುವ ಸುದ್ದಿಮಾಧ್ಯಮಗಳನ್ನು ‘ಸರಿದಾರಿಗೆ’ ತರುವ ಯತ್ನಗಳು ತೆರೆಮರೆಯಲ್ಲಿ ಚುರುಕಾಗಿ ನಡೆಯುತ್ತವೆ ಎನ್ನುವ ಮಾತುಗಳಿಗೆ ಅನೇಕ ಉದಾಹರಣೆಗಳೂ ಮಾಧ್ಯಮ ವಲಯದಲ್ಲಿ ಲಭ್ಯವಿವೆ.

ಇತ್ತೀಚೆಗಷ್ಟೇ ‘ಎಬಿಪಿ’ ಹಿಂದಿವಾಹಿನಿಯ ವ್ಯವಸ್ಥಾಪಕ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಿಬ್ಬರು ಇಂಥದ್ದೇ ಒತ್ತಡದ ಫಲವಾಗಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಹೊರನಡೆಯುವ ಮೂಲಕ ಸುದ್ದಿಯಾಗಿದ್ದರು. ಮತ್ತೊಂದೆಡೆ, ಇದೇ ವೇಳೆ ಸದನದೊಳಗೆ ಹಾಗೂ ಹೊರಗೆ ವಿಪಕ್ಷಗಳು ಅದರಲ್ಲಿಯೂ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌, ಆಳುವ ಸರ್ಕಾರದ ವಿರುದ್ಧ, ಅದರಲ್ಲಿಯೂ ನೇರವಾಗಿ ಮೋದಿಯವರ ಬಗ್ಗೆಯೇ ರಫೇಲ್‌ ಯುದ್ಧವಿಮಾನ ಖರೀದಿಯಲ್ಲಿ ಸಾವಿರಾರು ಕೋಟಿ ರು.ಗಳ ಅವ್ಯವಹಾರಕ್ಕೆ ಕಾರಣವಾಗಿರುವ ಬಗ್ಗೆ ದೊಡ್ಡ ಗಂಟಲಿನಲ್ಲಿ ದನಿ ಎತ್ತಿದೆ. ರಾಜಕೀಯ ವಿಶ್ಲೇಷಕರು ಇದು ಮೋದಿಯವರ ಪಾಲಿನ ಬೋಫೋರ್ಸ್‌ ಆಗಬಹುದೇ ಎನ್ನುವ ಪ್ರಶ್ನೆಗಳನ್ನು ಎತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಮೋದಿಯವರು ನೀಡಿರುವ ‘ಇಮೇಲ್‌ ಸಂದರ್ಶನ’ವೇನಿದೆ, ಅದರಲ್ಲಿ ಈ ಯಾವ ಪ್ರಶ್ನೆಗಳೂ ಇಲ್ಲ! ಬಹುಶಃ ಮುಖಾಮುಖಿ ರಾಜಕೀಯ ಸಂದರ್ಶನಗಳಲ್ಲಿ ಇಂತಹ ಪ್ರಸ್ತುತ ವಿಷಯಗಳನ್ನು ಬದಿಗೆ ಸರಿಸಿ ಸಂದರ್ಶನ ಮಾಡುವುದು ಕಷ್ಟ. ಒಂದು ವೇಳೆ ಹಾಗೆ ಮಾಡಿದರೂ ಅದು ತನ್ನ ಪ್ರಸ್ತುತತೆಯನ್ನೇ ಕಳೆದುಕೊಳ್ಳುತ್ತದೆ. ಅದೇ ವೇಳೆ, ಸಂದರ್ಶನಕ್ಕೆ ಒಳಗಾಗುವವರು ಇಂತಹ ಪ್ರಶ್ನೆಗಳನ್ನು ಕೇಳಬೇಡಿ ಎಂದು ಸಂದರ್ಶಕರಿಗೆ ಹೇಳುವುದೂ ಕಷ್ಟವಾಗುತ್ತದೆ. ಹಾಗೆ ಹೇಳಿದರೆ, ಹಿರಿಯ ಪತ್ರಕರ್ತ ಕರಣ್‌ ಥಾಪರ್‌ ತಮ್ಮ ಬಗ್ಗೆ ಬರೆದಂತೆಯೇ ಮುಂದೊಮ್ಮೆ ಮತ್ತೊಬ್ಬರೂ ಬರೆಯಬಹುದು ಎನ್ನುವ ಆಂತಕವೂ ಇರುತ್ತದೆ!

ಈ ಎಲ್ಲ ಸಮಸ್ಯೆಗಳನ್ನು ‘ಇಮೇಲ್‌’ ಮೂಲಕ ನಡೆಸುವ ಸಂದರ್ಶನದಲ್ಲಿ ಬುದ್ಧಿವಂತಿಕೆಯಿಂದ ಬದಿಗೆ ಸರಿಸಬಹುದು. ತಮಗೆ ಬೇಕಾದ ಪ್ರಶ್ನೆಗಳಿಗೆ ಮಾತ್ರವೇ ಉತ್ತರಿಸುವ, ತಮ್ಮ ಭಾವನೆಗಳನ್ನು ಅಡಗಿಸಿಟ್ಟುಕೊಂಡು ಸಮಚಿತ್ತವನ್ನು ಪ್ರದರ್ಶಿಸುವ, ನಿಪುಣತೆಯಿಂದ ಪದಗಳನ್ನು ಹೆಣೆಯುವ ಕೆಲಸವನ್ನು ಈ ಪತ್ರೋತ್ತರ ವ್ಯವಹಾರದಲ್ಲಿ ನಾಜೂಕಾಗಿ ನಿರ್ವಹಿಸಬಹುದು. ಬಹುಮುಖ್ಯವಾಗಿ, ಇದಾವುದಕ್ಕೂ ತಾವೇ ಖುದ್ದು ಮಾಡಬೇಕಾದ ಅವಶ್ಯಕತೆ ಇಲ್ಲ, ಎಲ್ಲವನ್ನೂ ಪ್ರಧಾನಿ ಕಚೇರಿಯೇ ನಿಭಾಯಿಸುತ್ತದೆ. ಹೆಚ್ಚೆಂದರೆ, ಸಿದ್ಧಪಡಿಸಿರುವ ಉತ್ತರಗಳನ್ನೊಮ್ಮೆ ಪರಿಶೀಲಿಸಿ ಕೆಲವೊಂದು ಬದಲಾವಣೆಗಳನ್ನು ಸೂಚಿಸಬಹುದು ಅಷ್ಟೇ. ಈ ಕಾರಣಕ್ಕೇ ಮೋದಿಯವರು ನೀಡಿರುವ ‘ಇಮೇಲ್‌’ ಸಂದರ್ಶನ ಅವರು ತಮ್ಮ ರಾಜಕೀಯ ಜೀವನದಲ್ಲಿ ಅನುಸರಿಸಿಕೊಂಡು ಬಂದಿರುವ ‘ಸ್ಟೇಜ್‌ ಮಾನೇಜ್ಡ್‌’ ಪ್ರಹಸನಗಳಿಗೆ ಮತ್ತೊಂದು ಸೇರ್ಪಡೆಯಂತೆ ಮಾತ್ರವೇ ಗೋಚರಿಸುತ್ತಿದೆ.

ಮೋದಿಯವರು ಮಾಧ್ಯಮದ ಮುಂದೆ ತಮ್ಮನ್ನು ಕಠಿಣ ಪ್ರಶ್ನೆಗಳಿಗೆ ಒಡ್ಡಿಕೊಂಡು ಉತ್ತರಗಳನ್ನು ನೀಡುವ ಸಾಹಸಕ್ಕೆ ಈವರೆಗೆ ಕೈಹಾಕಿಲ್ಲ. ಪೂರ್ವಯೋಜಿತ ಸಂದರ್ಶನಗಳಾಚೆಗೆ ಅವರು ಮಾಧ್ಯಮಕ್ಕೆ ಸಂದರ್ಶನ ನೀಡಿಲ್ಲ. ಪ್ರಧಾನಿಯಾದ ನಂತರ ದೇಶದೊಳಗೆ ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿಯನ್ನೂ ಎದುರಿಸಿಲ್ಲ ಎನ್ನುವುದನ್ನು ಗಮನಿಸಿದರೆ, ಇದರ ಮುಂದುವರಿದ ಭಾಗವಾಗಿಯಷ್ಟೇ ಮೋದಿಯವರ ‘ಇಮೇಲ್‌ ಸಂದರ್ಶನ’ ಕಾಣಿಸಲು ಸಾಧ್ಯ. ತಾವು ಹಾಗೂ ತಮ್ಮ ಕಚೇರಿ ಮಾಧ್ಯಮಗಳಿಗೆ ‘ಎಷ್ಟು ಮಾತ್ರ ಲಭ್ಯ’ ಎನ್ನುವುದನ್ನು ಮೋದಿಯವರ ‘ಇಮೇಲ್ ಸಂದರ್ಶನ’ ಸ್ಪಷ್ಟಪಡಿಸಿದೆ. ಮೋದಿಯವರ ಈವರೆಗಿನ ಎಲ್ಲ ಪ್ರಮುಖ ರಾಜಕೀಯ ಹೇಳಿಕೆಗಳನ್ನು ಗಮನಿಸಿದರೆ, ಅವರು ಅಂತಹ ಬಹುತೇಕ ಹೇಳಿಕೆಗಳನ್ನು ತಮಗೆ ಅನುಕೂಲಕರವಾಗಿರುವ ಸಭೆ, ಸಮಾವೇಶಗಳಲ್ಲಿ, ಗೋಷ್ಠಿಗಳಲ್ಲಿ ಮಾಡಿದ್ದಾರೆ ಎನ್ನುವುದನ್ನು ಗಮನಿಸಬಹುದು. ಅವರೆಂದೂ ತಮ್ಮ ಅಭಿಪ್ರಾಯಗಳಿಗೆ ವ್ಯತಿರಿಕ್ತ ಅಭಿಪ್ರಾಯಗಳನ್ನು ಹೊಂದಿರಬಹುದಾದ ಸಮೂಹ, ಗೋಷ್ಠಿಗಳನ್ನು ಎದುರಿಸಿದ್ದಿಲ್ಲ. ಕಠಿಣ ಪ್ರಶ್ನೆಗಳಿಗೆ ಮುಖಾಮುಖಿಯಾಗುವ, ಆರಾಧನೆ- ಅಭಿಮಾನದಿಂದ ಹೊರತಾದ ಸಹಜ ವಾತಾವರಣದಲ್ಲಿ ಪೇಚಿಗೆ ಸಿಲುಕಿಕೊಳ್ಳುವಂತಹ ಸನ್ನಿವೇಶಗಳಲ್ಲಿ ತಮ್ಮನ್ನು ಒಡ್ಡಿಕೊಳ್ಳುವ ಸಾಹಸ ಪ್ರದರ್ಶಿಸಿದವರಲ್ಲ.

ಇದನ್ನೂ ಓದಿ : ಎಲ್ಲರ ಮೇಲೂ ಕಣ್ಣಿಡುವ ಮಾಧ್ಯಮಗಳ ಮೇಲೆಯೇ ಮೋದಿ, ಅಮಿತ್ ಶಾ ಕಣ್ಣು!

ಹಾಗಾಗಿಯೇ ಸಮೂಹ ಮಾಧ್ಯಮಗಳೊಂದಿಗಿನ ಮೋದಿಯವರ ಒಡನಾಟ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಲು, ಅವುಗಳನ್ನು ತಮ್ಮ ಆಜ್ಞಾವರ್ತಿಗಳನ್ನಾಗಿಸಿಕೊಳ್ಳಲು ಪ್ರಯತ್ನಿಸುವ ಓರ್ವ ಸ್ವಕೇಂದ್ರಿತ ನಾಯಕನ ಒಡನಾಟದಂತೆ ಮಾತ್ರವೇ ಗೋಚರಿಸುತ್ತದೆಯೇ ಹೊರತು ಜನರ ಮುಂದೆ ತನ್ನ ನಡೆನುಡಿಗಳನ್ನು ಪ್ರಾಮಾಣಿಕವಾಗಿ ವಿಮರ್ಶಿಸಿಕೊಳ್ಳಬಲ್ಲ ಜನನಾಯಕನ ನಡೆಯಾಗಿ ಗೋಚರಿಸುವುದಿಲ್ಲ. ಹಾಗಾದರೆ, ಮೋದಿಯವರು ಮಾಧ್ಯಮಗಳ ಕೈಗೆ, ಪತ್ರಕರ್ತರ ಕೈಗೆ ಸಿಕ್ಕಿಯೇ ಇಲ್ಲವೇ? ಸಿಕ್ಕಿಲ್ಲವೆಂದೇನೂ ಅಲ್ಲ. ದೀಪಾವಳಿಯ ಸಂದರ್ಭದಲ್ಲಿ ಪಕ್ಷದ ಕಚೇರಿಯಯಲ್ಲಿ ಏರ್ಪಡಿಸಿದ್ದ ‘ದಿವಾಳಿ ಮಿಲನ್‌’ ಅಂತಹ ಕಾರ್ಯಕ್ರಮಗಳಲ್ಲಿ ಅವರು ಪತ್ರಕರ್ತರನ್ನು ಅನೌಪಚಾರಿಕವಾಗಿ ಭೇಟಿಯಾಗಿದ್ದಾರೆ, ಅವರೊಂದಿಗೆ ಸಮಯ ಕಳೆದಿದ್ದಾರೆ. ಈ ಸಂದರ್ಭದಲ್ಲಿ ಬಹುತೇಕ ಪತ್ರಕರ್ತರು ಮುಗಿಬಿದ್ದು ಸೆಲ್ಫಿಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ‘ವೃತ್ತಿಧರ್ಮ’ದ ಬಗ್ಗೆ ರಾಜಕಾರಣಿಗಳು ಚರ್ಚಿಸುವಂತಹ ಸನ್ನಿವೇಶ ಸೃಷ್ಟಿಸಿಕೊಂಡಿದ್ದೂ ಉಂಟು!

ಮೋದಿಯವರು ಮಾಧ್ಯಮಗಳು ತಮ್ಮೊಂದಿಗೆ ಸಂವಾದಿಸುವುದಕ್ಕಿಂತ ತಮ್ಮ ಪ್ರಭಾವಳಿಯ ಬಿಂಬದೊಂದಿಗೆ ಮಾತ್ರವೇ ವ್ಯವಹರಿಸುವಂತೆ ಯಾವತ್ತೂ ಎಚ್ಚರಿಕೆ ವಹಿಸಿದ್ದಾರೆ. ಆಘಾತಕಾರಿ ಸಂಗತಿ ಎಂದರೆ, ಮಾಧ್ಯಮಗಳು, ಪತ್ರಕರ್ತರು ಸಹ ಮೋದಿಯವರೊಂದಿಗೆ ನೇರವಾಗಿ ಸಂವಾದಿಸಲು ಬಯಸುವುದಕ್ಕಿಂತ ಅವರ ಪ್ರಭಾವಳಿಯೊಂದಿಗೆ ಒಡನಾಡಲು ತುಡಿಯುತ್ತಾರೆ. ಯಾವುದೇ ಕಠಿಣ ಪ್ರಶ್ನೆಗಳಿಲ್ಲದ, ಹೊಸತನ್ನು ಹೇಳದ, ವಿಮರ್ಶೆಗೆ ಒಳಪಡಿಸದ, ಇಮೇಲ್‌ ಮೂಲಕ ನಡೆಸಿದ ಸಂದರ್ಶನಗಳನ್ನೂ ಪುಟಗಟ್ಟಲೆ ಪ್ರಕಟಿಸುವ ಉತ್ಸಾಹವನ್ನು ನಮ್ಮ ಮಾಧ್ಯಮಗಳು ತೋರುತ್ತಿವೆ. ೨೦೧೫ರಲ್ಲಿ ಫ್ರೆಂಚ್‌ ಮಾಧ್ಯಮ ಸಂಸ್ಥೆ ‘ಲ ಮಾಂಡ’ಗೆ ಪ್ರಧಾನಿಯವರ ಕಚೇರಿ ಮೋದಿಯವರ ‘ಇಮೇಲ್‌ ಸಂದರ್ಶನ’ ಪ್ರಕಟಿಸಲು ಆಹ್ವಾನಿಸಿತ್ತಂತೆ, ಅದರೆ, ಮುಖಾಮುಖಿ ಸಂದರ್ಶನವಿಲ್ಲದ ‘ಇಮೇಲ್‌ ಸಂದರ್ಶನ’ವನ್ನು ಪ್ರಕಟಿಸುವುದಕ್ಕೆ ಆ ಸುದ್ದಿಸಂಸ್ಥೆ ಉತ್ಸಾಹ ತೋರಲಿಲ್ಲ ಎನ್ನುವುದನ್ನು ‘ಕ್ವಾರ್ಟ್ಜ್’ ಜಾಲತಾಣ ಈ ಸಂದರ್ಭದಲ್ಲಿ ನೆನೆದಿದೆ. ಫ್ರೆಂಚ್‌ ಸುದ್ದಿಸಂಸ್ಥೆಯ ವೃತ್ತಿಪರ ಸಹಜ ಪ್ರತಿಕ್ರಿಯೆ ಇಂದಿನ ನಮ್ಮ ಮಾದ್ಯಮ ಸನ್ನಿವೇಶದಲ್ಲಿ ಅಚ್ಚರಿ ಎನ್ನುವಂತೆ ಭಾಸವಾಗುತ್ತಿರುವುದು ವಿಪರ್ಯಾಸವೇ ಸರಿ. ‘ದಿ ಮೀಡಿಯಂ ಈಸ್‌ ದ ಮೆಸೇಜ್’ ಎನ್ನುವ ಹೇಳಿಕೆ ಪ್ರಸಕ್ತ ಸನ್ನಿವೇಶದಲ್ಲಿ ಮತ್ತೆ ಮತ್ತೆ ನೆನಪಾಗುತ್ತದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More