ರಫೇಲ್‌ ಯುದ್ಧವಿಮಾನ ಹಗರಣದಲ್ಲಿ ಬಿಜೆಪಿ ಹಣಿಯಲು ಮೈಕೊಡವಿ ನಿಂತ ಕಾಂಗ್ರೆಸ್‌

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಕಾರಣದ ದಿಕ್ಕು-ದಿಸೆ ಬದಲಿಸಬಹುದಾದ ರಫೇಲ್‌ ಹಗರಣದಲ್ಲಿ ಬಿಜೆಪಿಯನ್ನು ಸಿಲುಕಿಸಲು ಕಾಂಗ್ರೆಸ್‌ ತಯಾರಿ ಆರಂಭಿಸಿದೆ. ಇದಕ್ಕಾಗಿ ಜೈಪಾಲ್ ರೆಡ್ಡಿ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ಕಾಂಗ್ರೆಸ್‌ ರಚಿಸಿದೆ

ಬಿಜೆಪಿಯ ಬೊಫೋರ್ಸ್‌ ಎಂದೇ ಬಣ್ಣಿಸಲಾಗುತ್ತಿರುವ ರಫೇಲ್‌ ಯುದ್ದವಿಮಾನ ಖರೀದಿ ಹಗರಣವನ್ನು ಬಯಲಿಗೆಳೆಯುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕಾರ್ಯತಂತ್ರ ರೂಪಿಸಿದ್ದಾರೆ. ಇದಕ್ಕಾಗಿ ಮಾಜಿ ಸಚಿವ ಜೈಪಾಲ್‌ ರೆಡ್ಡಿ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ರಾಹುಲ್ ರಚಿಸಿದ್ದು, ದೇಶಾದ್ಯಂತ ಜನಜಾಗೃತಿ ಮೂಡಿಸಲು ತಯಾರಿ ನಡೆಸಿದ್ದಾರೆ. ಸಮಿತಿಯಲ್ಲಿ ಅನುಭವಿ ಮತ್ತು ಯುವ ಮುಖಂಡರಿಗೆ ಅವಕಾಶ ಮಾಡಿಕೊಡಲಾಗಿದೆ. ಕಾಂಗ್ರೆಸ್‌ ಮಾಧ್ಯಮ ವಿಭಾಗದ ನೇತೃತ್ವ ವಹಿಸಿರುವ ರಣದೀಪ್‌ ಸುರ್ಜೆವಾಲಾ ಅವರು ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ. ಗುಜರಾತ್‌ ಮೂಲದ ಶಕ್ತಿಸಿಂಗ್‌ ಗೋಹಿಲ್‌, ಅರ್ಜುನ್‌ ಮೊದ್ವಾಡಿಯಾ, ಪವನ್‌ ಖೇರಾ, ಪ್ರಿಯಾಂಕಾ ಚತುರ್ವೇದಿ ಮತ್ತು ಜೈವೀರ್‌ ಶೆರ್ಗಿಲ್‌ ಸಮಿತಿಯ ಸದಸ್ಯರಾಗಿದ್ದಾರೆ. ಶನಿವಾರ ನಡೆದ ಪಕ್ಷದ ಸಭೆಯಲ್ಲಿ ರಾಹುಲ್‌ ಗಾಂಧಿ ಅವರು ರಫೇಲ್ ಹಗರಣದ ಪ್ರಾಮುಖ್ಯತೆ ವಿವರಿಸಿದ್ದು, ಜಂಟಿ ಸಂಸದೀಯ ಸಮಿತಿಯಿಂದ ಹಗರಣದ ತನಿಖೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ಪಕ್ಷದ ಮುಖಂಡರಿಗೆ ತಿಳಿಸಿದ್ದಾರೆ. ಸಮಿತಿಯ ಜೊತೆಗೆ ಕಾಂಗ್ರೆಸ್‌ನ ೫೦ ನಾಯಕರು ದೇಶದ ೧೦೦ ನಗರಗಳಲ್ಲಿ ರಫೇಲ್‌ ಹಗರಣ ಕುರಿತು ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಈಚೆಗೆ, ರಫೇಲ್‌ ಹಗರಣದ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ರಫೇಲ್‌ ಯುದ್ಧವಿಮಾನ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು; ಮಾಧ್ಯಮ ಮತ್ತು ವಿರೋಧ ಪಕ್ಷಗಳು ಹಗರಣವನ್ನು ಜನರಿಗೆ ತಿಳಿಸಲು ನಿರಂತರವಾಗಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ, ರಾಹುಲ್‌ ಗಾಂಧಿ ಅವರು ಸಮಿತಿ ರಚಿಸಿರುವುದು ಪ್ರಾಮುಖ್ಯತೆ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ಜಟಾಪಟಿ ನಡೆಯುವ ಸಾಧ್ಯತೆ ಇದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಮೇಲೆ ರಫೇಲ್‌ ಹಗರಣ ರಾಷ್ಟ್ರ ರಾಜಕಾರಣದ ದಿಕ್ಕು-ದಿಸೆ ಬದಲಿಸಿದರೆ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಯಿಂದಲೇ ರಾಹುಲ್‌ ಗಾಂಧಿ ಅವರು ರಫೇಲ್‌ ಹಗರಣವನ್ನು ವ್ಯಾಪಕವಾಗಿ ಪ್ರಸ್ತಾಪಿಸಿದ್ದು, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಷ್ಟ್ರದ ಹಿತಾಸಕ್ತಿಯ ಜೊತೆ ರಾಜಿ ಮಾಡಿಕೊಂಡಿದೆ. ೪೫ ಸಾವಿರ ಕೋಟಿ ರುಪಾಯಿ ಮೌಲ್ಯದ ಹಗರಣದಲ್ಲಿ ಮೋದಿ ಅವರು ತಮ್ಮ ಉದ್ಯಮಿ ಸ್ನೇಹಿತ ಅನಿಲ್‌ ಅಂಬಾನಿಗೆ ಅನುಕೂಲ ಮಾಡಿಕೊಡಲು ದೇಶದ ಹಿತಾಶಕ್ತಿ ಬಲಿಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. “ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸಲಾಗಿದೆ. ವಿಮಾನ ತಯಾರಿಕೆ ಗುತ್ತಿಗೆ ಒಪ್ಪಂದವನ್ನು ಸರ್ಕಾರಿ ಸಂಸ್ಥೆಯಾದ ಬೆಂಗಳೂರಿನ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ (ಎಚ್‌ಎಎಲ್‌) ಹಿಂಪಡೆದು, ಇನ್ನಷ್ಟೇ ಅವತರಿಸಬೇಕಾದ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್‌ಗೆ ನೀಡಲಾಗಿದೆ. ಈ ಮೂಲಕ ಕರ್ನಾಟಕದ ಯುವಕರಿಗೆ ದೊರೆಯಲಿದ್ದ ಉದ್ಯೋಗವನ್ನು ಮೋದಿ ಕಸಿದುಕೊಂಡಿದ್ದಾರೆ,” ಎಂದು ರಾಹುಲ್‌ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ : ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ; ಸಿಎಜಿ ತನಿಖೆಗೆ ಸಿನ್ಹಾ, ಶೌರಿ ಆಗ್ರಹ

ಈಚೆಗೆ ಮುಕ್ತಾಯವಾದ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮೋದಿ ಸರ್ಕಾರದ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ಮೇಲೆ ಮಾತನಾಡಿದ್ದ ರಾಹುಲ್‌, ಮೋದಿ ಸರ್ಕಾರದ ವಿರುದ್ಧ ರಫೇಲ್‌ ಹಗರಣದ ಅಸ್ತ್ರ ಪ್ರಯೋಗಿಸಿದ್ದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಷ್ಟ್ರಕ್ಕೆ ಸುಳ್ಳು ಹೇಳಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದರಿಂದ ಸದನದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಆನಂತರ ಫ್ರಾನ್ಸ್‌ ಮತ್ತು ಭಾರತ ಸರ್ಕಾರಗಳು ಸ್ಪಷ್ಟನೆ ನೀಡಿದ್ದವು. ಇದನ್ನು ಒಪ್ಪದ ಕಾಂಗ್ರೆಸ್, ಹಗರಣವನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿತ್ತು. ಇದರ ಬೆನ್ನಿಗೇ ಯಶವಂತ್‌ ಸಿನ್ದಾ, ಅರುಣ್‌ ಶೌರಿ ಹಾಗೂ ಪ್ರಶಾಂತ್‌ ಭೂಷಣ್‌ ಅವರು ಸುದ್ದಿಗೋಷ್ಠಿ ನಡೆಸಿದ್ದರಿಂದ ಪ್ರಕರಣದ ಗಂಭೀರತೆ ಮತ್ತಷ್ಟು ಹೆಚ್ಚಿತ್ತು.

ಬಿಜೆಪಿ ಹೈಕಮಾಂಡ್‌ ನಿಕಟವರ್ತಿ ಲೆಹರ್‌ ಸಿಂಗ್‌ರಿಂದ ಬಿಎಸ್‌ವೈಗೆ ಬುದ್ಧಿವಾದ
ಯಡಿಯೂರಪ್ಪನವರ ಇತ್ತೀಚಿನ ಸಾಹಸಗಳಿಗೆ ನಿಜವಾದ ಕಾರಣವೇನು?
ನಮ್ಮ ಶಾಸಕರ ಶ್ರೀಮಂತಿಕೆ ಬಿಂಬಿಸುತ್ತಿರುವ ಪ್ರತಿಷ್ಠೆ, ಅಹಂಕಾರ, ಆತಂಕಗಳೇನು?
Editor’s Pick More