ವೈಫಲ್ಯ ಬಯಲಾದೀತೆಂದು ಜಿಡಿಪಿ ವರದಿ ಮುಚ್ಚಿಹಾಕಲು ಮುಂದಾಯಿತೇ ಮೋದಿ ಸರ್ಕಾರ?

ಜಿಡಿಪಿ ವಿಚಾರದಲ್ಲಿ ಯುಪಿಎ ಸರ್ಕಾರಕ್ಕಿಂತಲೂ ಮೋದಿ ನೇತೃತ್ವದ ಎನ್‌ಡಿಎ ಕಳಪೆ ಸಾಧನೆ ಮಾಡಿದೆ ಎಂದು ಸಿಎಸ್ಒ ವರದಿ ಹೇಳಿದೆ. ಇದರಿಂದ ತೀವ್ರ ಹಿನ್ನಡೆ ಅನುಭವಿಸಿರುವ ಕೇಂದ್ರ ಸರ್ಕಾರವು ವರದಿಯನ್ನು ಕರಡಷ್ಟೇ ಎಂದಿದ್ದು, ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದಿದೆ  

“ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ದೇಶದ ಒಟ್ಟು ದೇಶಿಯ ಉತ್ಪನ್ನಕ್ಕೆ (ಜಿಡಿಪಿ) ಹಿನ್ನಡೆಯಾಗಿದೆ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಿಡಿಪಿ ಹೆಚ್ಚಳವಾಗಿತ್ತು,” ಎಂಬ ವರದಿ ಬಹಿರಂಗವಾಗುತ್ತಿದ್ದಂತೆ ಮೋದಿ ಸರ್ಕಾರವು ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿದೆ. ಇದರಿಂದ ಭಾರಿ ಮುಜುಗರಕ್ಕೊಳಗಾಗಿರುವ ಕೇಂದ್ರ ಸರ್ಕಾರವು, ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯು (ಸಿಎಸ್‌ಒ) ಸುದೀಪ್ತೋ ಮಂಡಲ್ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಸಲ್ಲಿಸಿರುವುದು ಕರಡು ವರದಿ ಮಾತ್ರ ಎಂದು ಹೇಳುವ ಮೂಲಕ ಟೀಕೆಯಿಂದ ಪಾರಾಗಲು ಯತ್ನಿಸಿದೆ. ಅಲ್ಲದೇ, ವರದಿಯನ್ನು ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ವೆಬ್‌ಸೈಟ್‌ನ ವರದಿ ವಿಭಾಗದಿಂದ ತೆಗೆದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ (ಸಿಎಸ್‌ಒ) ವೆಬ್‌ಸೈಟ್‌ನ ಕರಡು ವರದಿ ವಿಭಾಗಕ್ಕೆ ಹಾಕಿರುವುದು ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ನಾಂದಿಯಾಡಿದೆ. ಈ ವರದಿಯ ಅಂಕಿಅಂಶಗಳನ್ನು ಉದ್ಧರಿಸಬಾರದು ಎಂದು ಅಡಿ ಟಿಪ್ಪಣಿ ಕೊಡಲಾಗಿದೆ. ಇದರಿಂದ ಕೇಂದ್ರ ಸರ್ಕಾರದ ನಡೆಗಳ ಬಗ್ಗೆ ಗುಮಾನಿ ಎದ್ದಿದ್ದು, ಸಿಎಸ್‌ಒ ವಿಶ್ವಾಸಾರ್ಹತೆಯ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಕೇಂದ್ರ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿರುವ ವಿರೋಧ ಪಕ್ಷಗಳು, “ವಸ್ತುಸ್ಥಿತಿ ವರದಿಗಳು ಮೋದಿಯವರ ಸರ್ಕಾರಕ್ಕೆ ರುಚಿಸುವುದಿಲ್ಲ. ಪ್ರಧಾನಿ ಮೋದಿಯವರ ಮಾತು ಹಾಗೂ ಕೃತಿಗೆ ಸಾಕಷ್ಟು ವ್ಯತ್ಯಾಸವಿದ್ದು, ಅಂಕಿಅಂಶಗಳನ್ನು ತಿರುಚುವ ಮೂಲಕ ಜನರನ್ನು ವಂಚಿಸಲಾಗುತ್ತಿದೆ,” ಎಂದು ವಾಗ್ದಾಳಿ ನಡೆಸಿವೆ. ಈ ಬೆಳವಣಿಗೆಗಳ ನಡುವೆ, ಕೇಂದ್ರ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ವಿ ಸದಾನಂದಗೌಡ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. “ಸುದೀಪ್ತೋ ಮಂಡಲ್‌ ನೇತೃತ್ವ ಸಮಿತಿ ಸಲ್ಲಿಸಿರುವುದು ಕರಡು ವರದಿ ಮಾತ್ರ. ಕರಡಿನಲ್ಲಿನ ಅಂಕಿ ಅಂಶ ಅಂತಿಮವಲ್ಲ. ಆದ್ದರಿಂದ ಈ ವರದಿಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ,” ಎಂದು ಕೇಂದ್ರ ಸರ್ಕಾರ ಹೇಳಿದ್ದು, ಟೀಕಾಕಾರ ಬಾಯಿ ಮುಚ್ಚಿಸುವ ಸಾಹಸಕ್ಕೆ ಮುಂದಾಗಿದೆ.

ಅಂದಹಾಗೆ, ಮೋದಿ ಸರ್ಕಾರವು ತನ್ನ ರಾಜಕೀಯ ಕಾರ್ಯಸೂಚಿಗೆ ವ್ಯತಿರಿಕ್ತವಾದ ವಿಚಾರ ಅಥವಾ ವರದಿ ಸಾರ್ವಜನಿಕಗೊಂಡಾಗ ಅದನ್ನು ಅಲ್ಲಗಳೆಯುವ, ವಿರೋಧಿಸುವ ಅಥವಾ ವರದಿಯ ವಿಶ್ವಾಸಾರ್ಹತೆ ಪ್ರಶ್ನಿಸುವ ಕೆಲಸಕ್ಕೆ ಮುಂದಾಗುತ್ತಿರುವುದು ಇದು ಮೊದಲೇನಲ್ಲ. ಹಿಂದೆ, ನೋಟು ಅಮಾನ್ಯೀಕರಣದ ನಂತರ ದೇಶದ ಆರ್ಥಿಕತೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂಬ ಭಾವನೆ ಬರುವಂತೆ ಜಿಡಿಪಿ ಅಂಕಿ-ಅಂಶಗಳನ್ನು ಪ್ರಕಟಿಸುವಂತೆ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಮೇಲೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒತ್ತಡ ಹೇರಿತ್ತು ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಇದನ್ನು ಸ್ವತಃ ಬಿಜೆಪಿ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್‌ ಸ್ವಾಮಿ ಅವರು ಬಹಿರಂಗಪಡಿಸಿದ್ದರು. “ನೋಟು ಅಮಾನ್ಯೀಕರಣಕ್ಕೆ ಸಂಬಂಧಸಿದಂತೆ ದಯವಿಟ್ಟು ತ್ರೈಮಾಸಿಕ ಅಂಕಿ-ಅಂಶಗಳನ್ನು ನಂಬಬೇಡಿ, ಅದೆಲ್ಲವೂ ಬೋಗಸ್. ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯನ್ನು ಸ್ಥಾಪಿಸಿದ್ದೇ ನಮ್ಮ ತಂದೆ. ಇತ್ತೀಚೆಗೆ ಕೇಂದ್ರ ಸಚಿವ ಸದಾನಂದಗೌಡ ಅವರೊಂದಿಗೆ ಸಿಎಸ್ಒಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಅಪನಗದೀಕರಣದಿಂದ ಆರ್ಥಿಕತೆಗೆ ಹಿನ್ನಡೆಯಾಗಿಲ್ಲವೆಂಬಂತೆ ಅಂಕಿ-ಅಂಶ ನೀಡಲು ಒತ್ತಡ ಹೇರಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದರು. ಅದರಂತೆ ಕೇಂದ್ರ ಸರ್ಕಾರಕ್ಕೆ ಪೂರಕವಾದ ಅಂಕಿ-ಅಂಶಗಳನ್ನು ಸಿಎಸ್ಒ ಪ್ರಕಟಿಸಿದೆ,” ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದನ್ನು ಇಲ್ಲಿ ನೆನೆಯಬಹುದು.

ಇದನ್ನೂ ಓದಿ : ಯುಪಿಎ ಅವಧಿಯಲ್ಲಿ ಜಿಡಿಪಿ ಹೆಚ್ಚಳ; ಮೋದಿ ಸರ್ಕಾರ ತಕರಾರು ಎತ್ತುತ್ತಿರುವುದೇಕೆ?

“2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ತೀರ್ಮಾನ ಕೈಗೊಂಡಿತ್ತು. ಸಿಎಸ್‌ಒ ಆರ್ಥಿಕ ಸಮೀಕ್ಷೆಯ ಮುದ್ರಿತ ವರದಿಯನ್ನು 2017ರ ಫೆ.1ರಂದು ನೀಡಿತ್ತು. ಅದರರ್ಥ, ಮೂರು ವಾರ ಮುಂಚಿತವಾಗಿಯೇ ವರದಿ ಮುದ್ರಣಕ್ಕೆ ಹೋಗಿರುತ್ತದೆ. 2017ರ ಜನವರಿ ಮೊದಲ ವಾರವೇ ವರದಿ ಸಲ್ಲಿಸಿ, ಜಿಡಿಪಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲವೆಂದು ಹೇಳಲಾಗಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದೆ. ಆಗ ಸಿಎಸ್‌ಒ ಅಧಿಕಾರಿ, ‘ಕಳೆದ ವರ್ಷದ ಸಂಘಟಿತ ವಲಯದ ಸಾಧನೆಯ ಅಂಕಿ-ಅಂಶಗಳನ್ನು ಅಸಂಘಟಿತ ವಲಯದ ಕಳೆದ ಅಂಕಿ-ಅಂಶಗಳೆಂದು ತೋರಿಸಲಾಯಿತು’ ಎಂಬುದಾಗಿ ಉತ್ತರಿಸಿದ್ದರು,” ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದರು. “ಎರಡರ ಅಂಕಿ-ಅಂಶಗಳ ಸಂಬಂಧ ಬದಲಾಯಿತಲ್ಲ ಎಂದು ಪ್ರಶ್ನಿಸಿದ್ದಕ್ಕೆ, 'ನಾನು ಏನು ಮಾಡಲಿ, ಪೂರಕ ಅಂಕಿ-ಅಂಶ ಕೊಡುವಂತೆ ನನ್ನ ಮೇಲೆ ಒತ್ತಡ ಇತ್ತು, ಹಾಗಾಗಿ ನಾನು ಕೊಟ್ಟೆ ಅಷ್ಟೆ' ಎಂದು ಹೇಳಿದ್ದರು,” ಎಂಬುದಾಗಿಯೂ ಸ್ವಾಮಿ ಅವರು ಅಧಿಕಾರಿಯೊಂದಿಗಿನ ಸಂಭಾಷಣೆಯನ್ನು ಹಂಚಿಕೊಂಡಿದ್ದರು.

ಸಿಎಸ್‌ಒ ಸೂಚನೆಯಂತೆ ಸುದೀಪ್ತೋ ಮಂಡಲ್‌ ನೇತೃತ್ವದ ಸಮಿತಿಯು ಕಳೆದ ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಜಿಡಿಪಿ ದರವು ೨೦೧೪-೧೮ರ ಅವಧಿಯಲ್ಲಿ ಶೇ. ೭.೩೫ರಷ್ಟಿದೆ. ಇದಕ್ಕೆ ಹೋಲಿಕೆ ಮಾಡಿದರೆ ಹಿಂದಿನ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಜಿಡಿಪಿ ದರವು ೨೦೦೪-೦೯ರ ಮೊದಲ ಅವಧಿಯಲ್ಲಿ ಶೇ. ೮.೮೯ ಮತ್ತು ೨೦೦೯-೧೪ರ ಎರಡನೇ ಅವಧಿಯಲ್ಲಿ ಶೇ. ೭.೩೯ರಷ್ಟಿತ್ತು ಎಂದು ಹೇಳಿದೆ. ೨೦೧೧-೧೨ನೇ ಅವಧಿಯನ್ನು ಮೂಲವರ್ಷವನ್ನಾಗಿಟ್ಟುಕೊಂಡಿದ್ದರಿಂದ ಮೋದಿ ಸರ್ಕಾರದ ಅವಧಿಯಲ್ಲಿ ಜಿಡಿಪಿ ಹೆಚ್ಚಾಗಿದೆ. ೨೦೦೪-೦೫ನೇ ಸಾಲನ್ನು ಮೂಲ ವರ್ಷವಾಗಿ ಪರಿಗಣಿಸಿದ್ದರೆ ದೇಶದ ಜಿಡಿಪಿ ಇನ್ನಷ್ಟು ಕುಸಿಯುತ್ತಿತ್ತು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸದಾನಂಗೌಡರ ಪ್ರತಿಕ್ರಿಯೆ ಪಡೆಯಲು 'ದಿ ಸ್ಟೇಟ್‌' ಪ್ರಯತ್ನಿಸಿದ್ದು, ಅವರು ಸ್ಪಂದಿಸಲಿಲ್ಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More