ಮೋದಿ ಸರ್ಕಾರಕ್ಕೆ ಕಹಿಗುಳಿಗೆ ಆಗಿರುವ ಸಮೀಕ್ಷೆ ಹೇಳುತ್ತಿರುವ ಕಟುಸತ್ಯಗಳೇನು?

‘ಅಚ್ಛೇ ದಿನ್‌’ ಬಂದಿಲ್ಲ ಎಂದು ಜನತೆ ಹೇಳುತ್ತಿರುವ ಹೊತ್ತಿನಲ್ಲೇ, ಕೇಂದ್ರ ಸರ್ಕಾರದ ನಾಲ್ಕು ವರ್ಷ ಹೇಳಿಕೊಳ್ಳುತ್ತಿರುವಷ್ಟು ಸುಂದರವಾಗಿಲ್ಲ ಎನ್ನುತ್ತಿದೆ ‘ಇಂಡಿಯಾ ಟುಡೇ-ಕಾರ್ವಿ ಮೂಡ್‌ ಆಫ್‌ ದಿ ನೇಷನ್’ ಸಮೀಕ್ಷೆ. ಬಹುಶಃ ಮೋದಿ ಸರ್ಕಾರಕ್ಕೆ ಈಗ ಮೈತ್ರಿ ಪಕ್ಷಗಳು ನೆನಪಾಗುತ್ತಿರಬಹುದು

“ಮೋದಿಯವರದು ಮಾತು ಜಾಸ್ತಿ, ಕೆಲಸ ಕಡಿಮೆ,” ಎನ್ನುತ್ತಿದ್ದಾರೆ ದೇಶದ ಜನತೆ. ಇದರ ಫಲವೆನ್ನುವಂತೆ ಅವರ ಜನಪ್ರಿಯತೆಯಲ್ಲಿಯೂ ಗಮನಾರ್ಹ ಕುಸಿತವಾಗಿರುವುದನ್ನು ದಾಖಲಿಸಿದೆ ‘ಇಂಡಿಯಾ ಟುಡೇ - ಕಾರ್ವಿ ಮೂಡ್‌ ಆಫ್‌ ದಿ ನೇಷನ್‌’ ಸಮೀಕ್ಷೆ. ಜುಲೈನಲ್ಲಿ ನಡೆಸಲಾಗಿರುವ ಸಮೀಕ್ಷೆ ಹೊರಬಿದ್ದಿದ್ದು ಸಮೀಕ್ಷೆಗೊಳಪಟ್ಟವರಲ್ಲಿ ಶೇ.೪೩ ಮಂದಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ‘ಅಚ್ಛೇ ದಿನಗಳ’ ಭರವಸೆಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ಶೇ.೨೭ ಮಂದಿ ಮೋದಿಯವರದು ‘ಮಾತು ಜಾಸ್ತಿ, ಕೆಲಸ ಕಡಿಮೆ’ ಎಂದು ಬೇಸರಿಸಿದ್ದಾರೆ. ಇದೆಲ್ಲದರ ಪರಿಣಾಮ ಎನ್ನುವಂತೆ ಒಂದೂವರೆ ವರ್ಷದ ಅವಧಿಯಲ್ಲಿ ಮೋದಿಯವರ ಜನಪ್ರಿಯತೆ ಶೇ.೧೬ರಷ್ಟು ಕುಸಿದಿದೆ.

ದೇಶದುದ್ದಗಲಕ್ಕೂ ೧೯ ರಾಜ್ಯಗಳ, ೯೭ ಲೋಕಸಭಾ ಕ್ಷೇತ್ರಗಳಲ್ಲಿ ೧೨,೧೦೦ ಮಂದಿಯನ್ನು ಸಂದರ್ಶಿಸಿ ಸಿದ್ಧಪಡಿಸಿರುವ ಸಮೀಕ್ಷೆ ಅನೇಕ ಕುತೂಹಲಕಾರಿ ಅಂಶಗಳನ್ನು ಹೊರಹಾಕಿದೆ. ಸರ್ಕಾರದ ಸಾಧನೆಯ ಬಗ್ಗೆ ಜನರಲ್ಲಿ ಅಸಮಾಧಾನ ಹೆಚ್ಚುತ್ತಿರುವುದನ್ನು ಸಮೀಕ್ಷೆ ಗುರುತಿಸಿದ್ದು ಒಂದೂವರೆ ವರ್ಷದ ಹಿಂದೆ, ೨೦೧೭ರ ಜನವರಿಯಲ್ಲಿ ಶೇ.೭೧ ಮಂದಿ ಸರ್ಕಾರದ ಸಾಧನೆಯ ಬಗ್‌ಗೆ ಮೆಚ್ಚುಗೆ ಸೂಚಿಸಿದ್ದರೆ ಈಗ ಆ ಪ್ರಮಾಣ ಶೇ.೫೬ಕ್ಕೆ ಕುಸಿದಿದೆ. ಅದೇ ರೀತಿ, ಇದೇ ಅವಧಿಯಲ್ಲಿ ಶೇ.೬೫ರಷ್ಟಿದ್ದ ಮೋದಿಯವರ ಜನಪ್ರಿಯತೆ ಪ್ರಮಾಣ ಶೇ.೧೬ರಷ್ಟು ಕುಸಿದು ಶೇ.೪೯ಕ್ಕೆ ಇಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರ ಜನಪ್ರಿಯತೆ ಇದೇ ಅವಧಿಯಲ್ಲಿ ಶೇ.೧೦ರಿಂದ ಶೇ.೨೭ಕ್ಕೆ ಜಿಗಿದಿದೆ.

ಇದೆಲ್ಲದರ ಪರಿಣಾಮ, ೨೦೧೯ರ ಲೋಕಸಭಾ ಚುನಾವಣೆಯ ಮೇಲೆ ಬೀರಲಿದ್ದು ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆಯೇನಾದರೂ ನಡೆದರೆ ಬಿಜೆಪಿ ಸದ್ಯ ಇರುವ ೨೭೩ ಸ್ಥಾನಗಳಿಂದ ೨೪೫ಕ್ಕೆ ಕುಸಿಯಲಿದ್ದು, ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದಿಂದಲೇ ಸರ್ಕಾರವನ್ನು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಸಮೀಕ್ಷೆಯ ಪ್ರಕಾರ, ಎನ್‌ಡಿಎ ಮೈತ್ರಿಕೂಟ ೨೮೧ ಸ್ಥಾನಗಳನ್ನು ಗಳಿಸಿ ಅಧಿಕಾರದಲ್ಲಿ ಉಳಿಯುವ ಸಾಧ್ಯತೆ ಇದೆ.

ಸಮೀಕ್ಷೆಯಲ್ಲಿನ ಅಂಕಿ-ಅಂಶಗಳನ್ನು ಗಮನಿಸಿದರೆ ಸರ್ಕಾರದ ಸಾಧನೆಗಿಂತ ಹೆಚ್ಚಾಗಿ ಅದರ ವೈಫಲ್ಯತೆಗಳನ್ನು ಜನ ಹೆಚ್ಚು ಗುರುತಿಸಿರುವುದು ಗೋಚರಿಸುತ್ತದೆ. ಪ್ರಸಕ್ತ ಸರ್ಕಾರದ ಅತಿ ದೊಡ್ಡ ಸಾಧನೆ ಏನು ಎನ್ನುವ ಪ್ರಶ್ನೆಗೆ ಶೇ.೧೬ಮಂದಿ ಕಪ್ಪುಹಣದ ವಿರುದ್ಧದ ಹೋರಾಟ ಎಂದರೆ, ಶೇ.೧೫ ಮಂದಿ ಇದೊಂದು ಭಷ್ಟಾಚಾರ ರಹಿತ ಸರ್ಕಾರ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಇದರ ಹೋಲಿಕೆಯಲ್ಲಿ, ಈ ಸರ್ಕಾರದ ಅತಿ ದೊಡ್ಡ ವೈಫಲ್ಯ ಯಾವುದು ಎನ್ನುವ ಪ್ರಶ್ನೆಗೆ ಶೇ.೨೯ ಮಂದಿ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿರುವುದರ ಬಗ್ಗೆ ಬೆರಳು ಮಾಡಿದರೆ ಶೇ.೨೪ ಮಂದಿ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಸಾಧನೆಗಿಂತ ಅದರ ವೈಫಲ್ಯವನ್ನು ಜನ ಹೆಚ್ಚು ಗುರತಿಸಿರುವುದು ಇದರಿಂದ ಸ್ಪಷ್ಟವಾಗಿದೆ.

ವಿಪರ್ಯಾಸವೆಂದರೆ, ಕಪ್ಪುಹಣಕ್ಕೆ ಕಡಿವಾಣ ಹಾಕುವುದು, ಭ್ರಷ್ಟಾಚಾರ ನಿಯಂತ್ರಣದಂತಹ ವಿಷಯಗಳನ್ನು ಹೊರತುಪಡಿಸಿ ಆಡಳಿತವನ್ನು ಒರೆಗೆ ಹಚ್ಚುವಂಥ ಯೋಜನೆಗಳ ದೃಷ್ಟಿಯಿಂದ ಗಮನಿಸಿದರೆ ಸರ್ಕಾರ ಹಿನ್ನೆಡೆ ಅನುಭವಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಬೃಹತ್‌ ಪ್ರಚಾರವನ್ನು ಬೆನ್ನಿಗಿಟ್ಟುಕೊಂಡಿರುವ ಮೋದಿ ಸರ್ಕಾರದ ಸ್ವಚ್ಛ ಭಾರತ ಅಭಿಯಾನವನ್ನು ಶೇ.೧೨ ಮಂದಿ ದೊಡ್ಡ ಸಾಧನೆ ಎಂದು ಪರಿಗಣಿಸಿದ್ದರೆ, ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾದಂತಹ ದೊಡ್ಡಮಟ್ಟದಲ್ಲಿ ಪ್ರಚಾರ ಪಡೆದ ಯೋಜನೆಗಳನ್ನು ಶೇ.೨ಮಂದಿ ಮಾತ್ರವೇ ಸಾಧನೆ ಎಂದು ಕರೆದಿದ್ದಾರೆ. ಇದು ಸರ್ಕಾರ ಆಡಳಿತಾತ್ಮಕವಾಗಿ ಗಮನಾರ್ಹ ಸಾಧನೆ ಮಾಡಿಲ್ಲ ಎನ್ನುವುದನ್ನು ಪುಷ್ಟೀಕರಿಸಿದೆ. ಇನ್ನು ನೋಟು ಅಮಾನ್ಯೀಕರಣದ ಕ್ರಮದ ಬಗ್ಗೆ ಮೋದಿ ಸರ್ಕಾರ ಬಿಂಬಿಸುತ್ತಿರುವಂತೆ ಜನತೆಯೇನೂ ಸಂಪೂರ್ಣ ಅದನ್ನು ಒಪ್ಪಿಲ್ಲ. ಶೇ.೧೩ಮಂದಿ ನೋಟು ರದ್ಧತಿಯನ್ನು ಸರ್ಕಾರದ ಸಾಧನೆ ಎಂದು ಪರಿಗಣಿಸಿದ್ದರೆ ಅಷ್ಟೇ ಪ್ರಮಾಣದ ಮಂದಿ ಇದನ್ನು ಸರ್ಕಾರದ ದೊಡ್ಡ ವೈಫಲ್ಯ ಎಂದಿದ್ದಾರೆ.

ಪ್ರಧಾನಿಯಾಗಿ ಮೋದಿಯವರ ಸಾಧನೆಯನ್ನು ಶೇ.೧೭ರಷ್ಟು ಮಂದಿ ಅದ್ವಿತೀಯ ಎಂದು ಹಾಡಿಹೊಗಳಿದರೆ, ಅದಕ್ಕಿಂತ ಒಂದು ಪ್ರತಿಶತ ಹೆಚ್ಚು - ಶೇ.೧೮ ಮಂದಿ ಕಳಪೆ ಎಂದು ಬೆರಳು ಮಾಡಿದ್ದಾರೆ. ಶೇ.೩೮ ಮಂದಿ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದರೆ, ಶೇ.೨೫ ಮಂದಿ ಸಾಧಾರಣ ಎಂದಿದ್ದಾರೆ.

ಲೋಕಸಭಾ ಚುನಾವಣೆಯ ವಿಚಾರಕ್ಕೆ ಬರುವುದಾದರೆ, ಈ ಮೊದಲು ಹೇಳಿದ ಸನ್ನಿವೇಶವಲ್ಲದೆ ಇನ್ನೂ ಎರಡು ಸನ್ನಿವೇಶಗಳನ್ನು ಸಮೀಕ್ಷೆ ಮುಂದಿಟ್ಟಿದೆ. ಒಂದೊಮ್ಮೆ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಒಗ್ಗೂಡಿ ‘ಯುಪಿಎ ಪ್ಲಸ್‌’ ಮೈತ್ರಿಕೂಟ ಏರ್ಪಟ್ಟರೆ ಆಗ ಇವುಗಳು ೨೨೪ ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಆಗ ಎನ್‌ಡಿಎ ೨೨೮ ಸ್ಥಾನಗಳಿಗೆ ಕುಸಿಯಲಿದ್ದು ‘ಯುಪಿಎ ಪ್ಲಸ್‌’ ಗಿಂತ ಕೇವಲ ನಾಲ್ಕು ಸ್ಥಾನಗಳನ್ನಷ್ಟೇ ಹೆಚ್ಚು ಗಳಿಸಲಿದೆ. ಈ ಸನ್ನಿವೇಶದಲ್ಲಿ ಬಿಜೆಪಿ ೧೯೪ ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್‌ ೯೬ ಸ್ಥಾನಗಳನ್ನು ಗಳಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ : ಎನ್‌ಡಿಎ ಬೇರಿಗೆ ಕೊಡಲಿ ಹಾಕುತ್ತಿವೆಯೇ ಬಿಜೆಪಿ ನಾಯಕರ ಮಹತ್ವಾಕಾಂಕ್ಷೆಗಳು?

ಮತ್ತೊಂದು ಸನ್ನಿವೇಶದಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ, ವೈಎಸ್‌ಆರ್ ಕಾಂಗ್ರೆಸ್‌, ಎಐಎಡಿಎಂಕೆಗಳಂತಹ ಪಕ್ಷಗಳೊಂದಿಗೆ ಯಶಸ್ವಿ ಮೈತ್ರಿ ಮಾಡಿಕೊಂಡರೆ ಆಗ ಎನ್‌ಡಿಎ ಪ್ಲಸ್‌ ೨೫೫ ಸ್ಥಾನಗಳನ್ನೂ ಯಪಿಎ ಪ್ಲಸ್‌ ೨೪೨ ಸ್ಥಾನಗಳನ್ನೂ ಗಳಿಸಲಿವೆ ಎನ್ನಲಾಗಿದೆ. ಈ ಎರಡೂ ಸನ್ನಿವೇಶಗಳಲ್ಲಿ ಮೈತ್ರಿಕೂಟ ಮಾತ್ರವೇ ಅಲ್ಲದೆ ಅದರ ಹೊರಗಿನ ಪಕ್ಷಗಳ ಬೆಂಬಲವೂ ಸರ್ಕಾರದ ರಚನೆಗೆ ಅತ್ಯವಶ್ಯಕವಾಗಲಿದೆ. ಇದೆಲ್ಲವೂ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಹೆಚ್ಚು ನಿರ್ಣಾಯಕವಾಗಲಿರುವುದೆರಡೆಗೆ ಹಾಗೂ ಯಾವುದೇ ಒಂದು ರಾಷ್ಟ್ರೀಯ ಪಕ್ಷ ತನ್ನ ಸ್ವಂತ ಬಲದ ಮೇಲೆ ಅಧಿಕಾರವನ್ನು ಗಳಿಸುವುದು ಕಷ್ಟ ಎನ್ನುವುದೆರಡೆಗೆ ಬೆರಳು ಮಾಡಿದೆ. ಪ್ರಸಕ್ತ ಅವಧಿಯಲ್ಲಿ ಬಿಜೆಪಿಯ ಪಾಲಿಗೆ ಎಲ್ಲೋ ಅಗೊಮ್ಮೆ, ಈಗೊಮ್ಮೆ ನೆನಪಾಗುತ್ತಿರುವ ಎನ್ಡಿಎಯಲ್ಲಿರುವ ಮಿತ್ರಪಕ್ಷಗಳು ಮುಂದಿನ ದಿನಗಳಲ್ಲಿ ಸರ್ಕಾರ ರಚಿಸಬೇಕೆಂದರೆ ಅನಿವಾರ್ಯವಾಗಲಿವೆ. ಅಷ್ಟೇ ಅಲ್ಲದೆ ಎನ್‌ಡಿಎ ಮೈತ್ರಿಕೂಟದ ಹೊರಗಿರುವ ಪಕ್ಷಗಳತ್ತಲೂ ಗಮನಹರಿಸಿ ಅವುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಅದಕ್ಕೆ ಎದುರಾಗಲಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More